
ಯಾರು ಈ ಮಹಿಕಾ ಶರ್ಮಾ?
ಹಾರ್ದಿಕ್ ಪಾಂಡ್ಯ ಹೊಸ ಇನ್ನಿಂಗ್ಸ್: ಯಾರು ಈ ಸುಂದರಿ ಮಹಿಕಾ ಶರ್ಮಾ?
ಯಾರು ಈ ಮಹಿಕಾ ಶರ್ಮಾ? ಹಾರ್ದಿಕ್ ಪಾಂಡ್ಯ ಅವರ ಹೊಸ ಗೆಳತಿ ಎನ್ನಲಾದ ಮಾಡೆಲ್ ಮಹಿಕಾ ಅವರ ವೃತ್ತಿ, ಶಿಕ್ಷಣ ಮತ್ತು ಈ ಜೋಡಿಯ ನಡುವಿನ ಸಂಬಂಧದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಸದ್ಯದ ಕ್ರಿಕೆಟ್ ಲೋಕದಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೆಸರು ಹೊಸ ಸಂಚಲನ ಮೂಡಿಸಿದೆ. 2026ರ ಟಿ20 ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಯಶಸ್ಸಿನ ಹಿಂದೆ ಇರುವ ಶಕ್ತಿಯ ಬಗ್ಗೆ ಮಾತನಾಡುತ್ತಾ, ತಮ್ಮ ಗೆಳತಿ ಮಾಹಿಕಾ ಅವರ ಹೆಸರನ್ನು ಪ್ರಸ್ತಾಪಿಸಿದರು. ಮಾಹಿಕಾ ತಮ್ಮ ಜೀವನಕ್ಕೆ ಬಂದ ಮೇಲೆ ಅದೃಷ್ಟ ಬದಲಾಗಿದೆ ಮತ್ತು ಸತತವಾಗಿ ಗೆಲುವುಗಳು ಒಲಿಯುತ್ತಿವೆ ಎಂದು ಅವರು ತಿಳಿಸಿದ್ದರು. ಪಂದ್ಯದ ನಂತರ ಗೆಳತಿಯನ್ನು ಅಪ್ಪಿ, ಮುದ್ದಾಡಿರುವ ವಿಡಿಯೋ ಇದೀಗ ಇಂಟರ್‌ನಟ್‌ನಲ್ಲಿ ಸಂಚಲನ ಮೂಡಿಸಿದೆ.
ಹಾರ್ದಿಕ್ ಪಾಂಡ್ಯ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನವು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಮಾಡೆಲ್ ಮತ್ತು ನಟಿ ಮಾಹಿಕಾ ಶರ್ಮಾ ಅವರೊಂದಿಗಿನ ಅವರ ಸಂಬಂಧವು ದೃಢಪಟ್ಟಿದ್ದು, ಇದು ಅಭಿಮಾನಿಗಳಲ್ಲಿ ಅವರ ಬಗ್ಗೆ ಹೆಚ್ಚಿನ ಕುತೂಹಲವನ್ನು ಹುಟ್ಟುಹಾಕಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಸಂದರ್ಭದಲ್ಲಿ ಮಾಹಿಕಾ ಅವರು ಗ್ಯಾಲರಿಯಿಂದ ಹಾರ್ದಿಕ್ ಅವರಿಗಾಗಿ ಚಿಯರ್ ಮಾಡುತ್ತಿರುವುದು ಕಂಡುಬಂದಿತ್ತು ಮತ್ತು ಫೈನಲ್ ಪಂದ್ಯದಲ್ಲೂ ಅವರು ಉಪಸ್ಥಿತರಿದ್ದು ಈ ಜೋಡಿಯ ಬಗ್ಗೆ ಇರುವ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಎಲ್ಲರ ಗಮನ ಅವರ ಮೇಲೆ ಇರುವುದರಿಂದ ಮಾಹಿಕಾ ಶರ್ಮಾ ಯಾರು ಎಂಬುವುದು ಅನೇಕರ ಪ್ರಶ್ನೆಯಾಗಿದೆ.
ಯಾರಿದು ಪಾಂಡ್ಯ ನ್ಯೂ ಗರ್ಲ್‌ಫ್ರೆಂಡ್ ಮಾಹಿಕಾ?
ಮಾಹಿಕಾ ಶರ್ಮಾ ಅವರು ಭಾರತೀಯ ಫ್ಯಾಷನ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿಕೊಂಡಿದ್ದಾರೆ. ಅವರು ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದಾಗಲೇ ಮಾಡೆಲಿಂಗ್ ಮತ್ತು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಿದ್ದರು. ತಮ್ಮ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10ಕ್ಕೆ 10 ಸಿಜಿಪಿಎ ಅಂಕಗಳನ್ನು ಗಳಿಸಿದ್ದರು. ನಂತರ ಅವರು ಮಾಡೆಲಿಂಗ್ ಕಡೆಗೆ ತಮ್ಮ ಗಮನವನ್ನು ಹರಿಸಿದರು ಮತ್ತು ಅಲ್ಲಿ ಶೀಘ್ರದಲ್ಲೇ ಜನಪ್ರಿಯತೆ ಗಳಿಸಿದರು.
ಫ್ಯಾಷನ್ ಕ್ಷೇತ್ರದಲ್ಲಿ ಅವರು ಈಗಾಗಲೇ ಕೆಲವು ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡಿದ್ದಾರೆ. ಮನೀಶ್ ಮಲ್ಹೋತ್ರಾ, ಅನಿತಾ ಡೋಂಗ್ರೆ, ತರುಣ್ ತಹಿಲಿಯಾನಿ ಮತ್ತು ಅಮಿತ್ ಅಗರ್ವಾಲ್ ಅವರಂತಹ ಪ್ರಸಿದ್ಧ ವಿನ್ಯಾಸಕರಿಗಾಗಿ ಅವರು ರಾಂಪ್ ವಾಕ್ ಮಾಡಿದ್ದಾರೆ. ಅವರಿಗೆ 2024ರ ಇಂಡಿಯನ್ ಫ್ಯಾಷನ್ ಅವಾರ್ಡ್ಸ್‌ನಲ್ಲಿ ಅವರಿಗೆ 'ವರ್ಷದ ಮಾಡೆಲ್' ಪ್ರಶಸ್ತಿ ಕೂಡ ಲಭಿಸಿದೆ. ಇದಲ್ಲದೆ ಮಾಹಿಕಾ ಕೆಲವೊಂದು ಮ್ಯೂಸಿಕ್ ಅಲ್ಬಂಮ್, ಶಾರ್ಟ್ ಫಿಲ್ಮ್ಸ್, ಹಾಗೂ ಫೋಟೋಗ್ರಾಫಿ ಪ್ರಾಜೆಕ್ಟ್‌ಗಳಲ್ಲಿಯೂ ಭಾಗವಹಿಸಿದ್ದಾರೆ.
ಈ ಹಿಂದೆ ಮಾಹಿಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆಗ ಈ ಬಗ್ಗೆ ಗಾಸಿಪ್ ಉಂಟಾಗಿತ್ತು. ಹಾರ್ದಿಕ್ ಅವರು ಆ ಫೋಟೋದ ಹಿನ್ನೆಲೆಯಲ್ಲಿ ಕಾಣಿಸುತ್ತಿದ್ದಾರೆ ಎಂದು ತೀಕ್ಷ್ಣ ಕಣ್ಣಿನ ಅಭಿಮಾನಿಗಳು ಪ್ರತಿಪಾದಿಸಿದರು. ಅದರ ಬೆನ್ನಲ್ಲೇ ಅವರಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿರುವುದು ಪತ್ತೆಯಾಯಿತು ಮತ್ತು ಇದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತು.
ಇದಕ್ಕೆ ಪೂರಕವಾಗಿ ಮಾಹಿಕಾ ಅವರು ಹಾರ್ದಿಕ್ ಅವರ ಜರ್ಸಿ ಸಂಖ್ಯೆಯಾದ 33 ಅನ್ನು ತಮ್ಮ ಪೋಸ್ಟ್ ಒಂದರಲ್ಲಿ ಸೇರಿಸಿದ್ದನ್ನು ಕೆಲವು ಬಳಕೆದಾರರು ಗಮನಿಸಿದರು. ಈ ಸಣ್ಣ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದವು. ಆದರೆ ಇದೀಗ ಅವರ ಸಂಬಂಧವು ದೃಢಪಟ್ಟಿದೆ.
ಈ ಹಿಂದೆ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಅವರು ಈ ಹಿಂದೆ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ಮೇ 2020 ರಲ್ಲಿ ವಿವಾಹವಾಗಿದ್ದ ಈ ಜೋಡಿಯು, 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ವಿವಾಹವಾಗಿದ್ದರು. ಇವರಿಗೆ ಅಗಸ್ತ್ಯ ಎಂಬ ಮಗನಿದ್ದಾನೆ. ಆದರೆ ಜುಲೈ 2024 ರಲ್ಲಿ ಜಂಟಿ ಹೇಳಿಕೆಯ ಮೂಲಕ ಈ ದಂಪತಿ ತಮ್ಮ ಬೇರ್ಪಡಿಕೆಯನ್ನು ಘೋಷಿಸಿದರು. "ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದೆವು ಮತ್ತು ಎಲ್ಲವನ್ನೂ ನೀಡಿದೆವು, ಆದರೆ ಇದು ನಮ್ಮಿಬ್ಬರ ಹಿತದೃಷ್ಟಿಯಿಂದ ಒಳ್ಳೆಯದು ಎಂದು ನಾವು ನಂಬುತ್ತೇವೆ. ನಾವಿಬ್ಬರೂ ಒಟ್ಟಾಗಿ ಕಳೆದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟದ ದೃಷ್ಟಿಯಿಂದ ಇದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಅಗಸ್ತ್ಯನ ರೂಪದಲ್ಲಿ ನಮಗೆ ಆಶೀರ್ವಾದ ಸಿಕ್ಕಿದೆ ಮತ್ತು ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನ ಸಂತೋಷಕ್ಕಾಗಿ ನಾವು ಪೋಷಕರಾಗಿ ಒಟ್ಟಾಗಿ ಜವಾಬ್ದಾರಿ ನಿಭಾಯಿಸುವುದನ್ನು ಮುಂದುವರಿಸುತ್ತೇವೆ" ಎಂದು ಅವರು ತಿಳಿಸಿದ್ದರು. ಇನ್ನು ಅಗಸ್ತ್ಯನೊಂದಿಗೆ ಮಾಹಿಕಾ ಉತ್ತಮ ಬಾಂಧವ್ಯ ಹೊಂದಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಆಕೆ ಮಗುವಿನ ಆರೈಕೆ ಮಾಡುತ್ತಿರುವುದು ಕಂಡುಬಂದಿತ್ತು.

