
IPL ಫೈನಲ್ ಸೋಲಿನ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ಬಸ್‌ಗೆ ಬೆಂಕಿ
IPL 2026 Final ಪಂದ್ಯದಲ್ಲಿ RCB ವಿರುದ್ಧ ಸೋತ ಬೆನ್ನಲ್ಲೇ Gujarat Titans ತಂಡದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಆಟಗಾರರ ಸ್ಥಿತಿ ಹೇಗಿದೆ?
ಐಪಿಎಲ್ (IPL) 2026ರ ಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಬೆನ್ನಲ್ಲೇ, ಗುಜರಾತ್ ಟೈಟಾನ್ಸ್ (GT) ತಂಡದ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಆಟಗಾರರೆಲ್ಲರನ್ನು ತಕ್ಷಣವೇ ಸುರಕ್ಷಿತವಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಭಾನುವಾರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್‌ಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೆಂಕಿಯ ಕಾರಣದಿಂದಾಗಿ ಆಟಗಾರರು ಸುಮಾರು ಒಂದು ಗಂಟೆಯ ಕಾಲ ರಸ್ತೆಯಲ್ಲೇ ಉಳಿಯಬೇಕಾಯಿತು.
ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇತ್ತು, ಆದರೆ ಸದ್ಯ ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ನಡೆದ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 5 ವಿಕೆಟ್‌ಗಳ ಸೋಲು ಕಂಡಿದ್ದ ಗುಜರಾತ್ ತಂಡಕ್ಕೆ, ಈ ಘಟನೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಸುದೀರ್ಘ ಪ್ರಯಾಣದ ಆಯಾಸ
ಗುಜರಾತ್ ಟೈಟಾನ್ಸ್ ತಂಡಕ್ಕೆ ಕಳೆದ ಕೆಲವು ದಿನಗಳಿಂದ ಪ್ರಯಾಣದ ವೇಳಾಪಟ್ಟಿ ಅತ್ಯಂತ ಕಠಿಣವಾಗಿತ್ತು. ಮೇ 27 ರಂದು ಧರ್ಮಶಾಲಾದಿಂದ ಮುಲ್ಲನ್‌ಪುರಕ್ಕೆ ಪ್ರಯಾಣ ಬೆಳೆಸಿದ್ದ ಜಿಟಿ, ಮೇ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯವನ್ನು ಆಡಿತ್ತು.
ಅದಾದ ನಂತರ, ಮೇ 30 ರಂದು ಮುಲ್ಲನ್‌ಪುರದಿಂದ ಅಹಮದಾಬಾದ್‌ಗೆ ಹೊರಡಬೇಕಿದ್ದ ಅವರ ವಿಮಾನ ಪ್ರಯಾಣವು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ತೀವ್ರ ವಿಳಂಬವಾಗಿತ್ತು. ಕೊನೆಗೆ ಶನಿವಾರ ತಡರಾತ್ರಿ ವೇಳೆಗೆ ಜಿಟಿ ತಂಡ ಅಹಮದಾಬಾದ್ ತಲುಪಿತ್ತು.
ಸೋಲಿಗೆ ಸುಸ್ತು ಕಾರಣವೇ? ವಿಕ್ರಮ್ ಸೋಲಂಕಿ ಸ್ಪಷ್ಟನೆ
ಕಾರ್ಯಕ್ರಮದ ಒತ್ತಡ ಮತ್ತು ಆಯಾಸದಿಂದಾಗಿ ಟೈಟಾನ್ಸ್ ತಂಡ ಆರ್‌ಸಿಬಿ ಎದುರು ಶರಣಾಯಿತೇ? ಎಂಬ ಪ್ರಶ್ನೆಗೆ ಗುಜರಾತ್ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ್ದಾರೆ. "ನಾವು ಇಷ್ಟು ಕಡಿಮೆ ದಿನಗಳಲ್ಲಿ ಇಷ್ಟೊಂದು ಪಂದ್ಯಗಳನ್ನು ಆಡಿದ್ದೇವೆ, ನಮಗೆ ಆಯಾಸವಾಗಿತ್ತು ಎಂದು ಹೇಳುವ ಮೂಲಕ ಆರ್‌ಸಿಬಿ ಗೆಲುವಿನ ಕ್ರೆಡಿಟ್ ಅನ್ನು ನಾನು ಕಸಿದುಕೊಳ್ಳಲು ಬಯಸುವುದಿಲ್ಲ. ನಮ್ಮ ತಂಡದ ಮನಸ್ಥಿತಿ ಅದಲ್ಲ," ಎಂದು ಸೋಲಂಕಿ ಹೇಳಿದರು.
"ನಾವು ಕೇವಲ 155/8 ರನ್ ಗಳಿಸಿದ್ದು ನಿಜಕ್ಕೂ ಸಾಧಾರಣ ಮೊತ್ತವಾಗಿತ್ತು. ಆದರೂ ನಮ್ಮ ಬೌಲರ್‌ಗಳು ಅದನ್ನು ರಕ್ಷಿಸಲು ಉತ್ತಮ ಹೋರಾಟ ಪ್ರದರ್ಶಿಸಿದರು. ನಾವು ಎಲ್ಲಿ ತಪ್ಪು ಮಾಡಿದ್ದೇವೆ, ಏನು ವಿಭಿನ್ನವಾಗಿ ಮಾಡಬಹುದಿತ್ತು ಎಂಬುದನ್ನು ಖಂಡಿತವಾಗಿ ಪರಿಶೀಲಿಸುತ್ತೇವೆ. ಆದರೆ ಕೆಲವು ದಿನಗಳಲ್ಲಿ ಎದುರಾಳಿ ತಂಡ ಕೂಡ ಅದ್ಭುತವಾಗಿ ಆಡುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು," ಎಂದು ಅವರು ತಿಳಿಸಿದ್ದಾರೆ.

