
ಆಯುಷ್ ಮ್ಹಾತ್ರೆ
IPL 2026: ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ; ಆಯುಷ್ ಮ್ಹಾತ್ರೆ ಟೂರ್ನಿಯಿಂದ ಔಟ್
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ 6 ಪಂದ್ಯಗಳನ್ನಾಡಿದ್ದ 18 ವರ್ಷದ ಮ್ಹಾತ್ರೆ, ಬರೋಬ್ಬರಿ 177.87ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಕಲೆಹಾಕಿ ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರವಾಗಿ ರೂಪುಗೊಂಡಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಎಡಗಾಲಿನ ಮಂಡಿರಜ್ಜು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಕುರಿತು ಪ್ರಕಟಣೆ ಹೊರಬಿದ್ದಿದ್ದು, ಮ್ಹಾತ್ರೆ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 6 ರಿಂದ 12 ವಾರಗಳ ಪುನರ್ವಸತಿ (Rehabilitation) ಅಗತ್ಯವಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಏಪ್ರಿಲ್ 18ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಯುಷ್ ಮ್ಹಾತ್ರೆ ಈ ಗಾಯಕ್ಕೆ ತುತ್ತಾಗಿದ್ದರು. ಆ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 30 ರನ್ ಚಚ್ಚಿ ಉತ್ತಮ ಲಯದಲ್ಲಿದ್ದ ಅವರು, ರನ್ ಓಡುವ ಭರದಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ ಒಳಗಾಗಿ ತಕ್ಷಣವೇ ಮೈದಾನ ತೊರೆದಿದ್ದರು. ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಕೂಡ ಅಂದೇ ಈ ಗಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದ ಆಯುಷ್ ಮ್ಹಾತ್ರೆ
ಸಿಎಸ್‌ಕೆಗೆ ದೊಡ್ಡ ಹಿನ್ನಡೆ
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ 6 ಪಂದ್ಯಗಳನ್ನಾಡಿದ್ದ 18 ವರ್ಷದ ಮ್ಹಾತ್ರೆ, ಬರೋಬ್ಬರಿ 177.87ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಕಲೆಹಾಕಿ ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರವಾಗಿ ರೂಪುಗೊಂಡಿದ್ದರು. ಇದೀಗ ಟೂರ್ನಿಯ ಮಧ್ಯಭಾಗದಲ್ಲೇ ಅವರು ಹೊರಬಿದ್ದಿರುವುದು ಚೆನ್ನೈ ಪಾಳೆಯಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ. "ಆಯುಷ್ ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ತಂಡದ ಪರವಾಗಿ ತಿಳಿಸಲಾಗಿದೆ.

