
ಭಾರತ ಟಿ20 ಕ್ರಿಕೆಟ್ ತಂಡದ ನೂತನ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ಅಲಂಕರಿಸಲು ಸಜ್ಜಾಗಿರುವ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್.
ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಹೊಸ ನಾಯಕ? ಸೂರ್ಯಕುಮಾರ್‌ಗೆ ಕೊಕ್ ಸಾಧ್ಯತೆ
ಸೂರ್ಯಕುಮಾರ್ ಯಾದವ್ ಅವರ ನಿರಂತರ ಫಾರ್ಮ್ ಕೊರತೆಯಿಂದಾಗಿ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿ20 ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಸತತ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲು ಬಿಸಿಸಿಐ ಆಯ್ಕೆಗಾರರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಜೂನ್ 6ರ ಶನಿವಾರದಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಲಿದ್ದು, ಮುಂಬರುವ ಯುನೈಟೆಡ್ ಕಿಂಗ್‌ಡಮ್ (ಯುಕೆ) ಪ್ರವಾಸ ಹಾಗೂ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡವನ್ನು ಅಂತಿಮಗೊಳಿಸಲಿದೆ. ಈ ಸಭೆಯಲ್ಲೇ ನಾಯಕತ್ವದ ಬದಲಾವಣೆಯ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಹೀಗೆ ಮೂರು ಬೇರೆ ಬೇರೆ ಫ್ರಾಂಚೈಸಿಗಳನ್ನು ಮುನ್ನಡೆಸಿ ಫೈನಲ್‌ಗೆ ತಲುಪಿಸಿದ ಮತ್ತು ಪ್ರಶಸ್ತಿ ಗೆದ್ದುಕೊಟ್ಟ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಗುಣಗಳನ್ನು ಬಿಸಿಸಿಐ ನಂಬಿದೆ. ಇತ್ತೀಚಿನ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ನಾಯಕತ್ವದ ಜವಾಬ್ದಾರಿಯೊಂದಿಗೆ ಅವರು ತಂಡದ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯ್ಯರ್ ಅವರೊಂದಿಗೆ ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಅವರ ಹೆಸರುಗಳು ನಾಯಕತ್ವದ ರೇಸ್‌ನಲ್ಲಿದ್ದವು. ಆದರೆ ಅಂತಿಮವಾಗಿ ಆಯ್ಕೆಗಾರರು ಅಯ್ಯರ್ ಅವರ ಅನುಭವಕ್ಕೆ ಮಣೆ ಹಾಕಿದ್ದಾರೆ.
ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ತಿಲಕ್ ವರ್ಮಾ ಅವರಿಗೆ ಉಪನಾಯಕನ ಪಟ್ಟ ಸಿಗುವ ಸಾಧ್ಯತೆಯಿದ್ದು, 15 ವರ್ಷದ ಅದ್ಭುತ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಬಾರಿಗೆ ಹಿರಿಯರ ರಾಷ್ಟ್ರೀಯ ತಂಡದಿಂದ ಕರೆ ಬರುವ ನಿರೀಕ್ಷೆಯಿದೆ. ಜೂನ್ ಕೊನೆಯಲ್ಲಿ ಆರಂಭವಾಗಲಿರುವ ಯುಕೆ ಪ್ರವಾಸದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದರ ಜೊತೆಗೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಈಗಲೇ ತಂಡವನ್ನು ಪ್ರಕಟಿಸಲಾಗುತ್ತಿದೆ.

