25-foot-tall bronze statue of Virat Kohli gifted by Channapatna fan
x

ಸಾಂದರ್ಭಿಕ ಚಿತ್ರ (ಎಐ ಆಧಾರಿತ)

ವಿರಾಟ್ ಕೊಹ್ಲಿಗೆ ಚನ್ನಪಟ್ಟಣದ ಅಭಿಮಾನಿಯಿಂದ 25 ಅಡಿ ಎತ್ತರದ ಕಂಚಿನ ಪ್ರತಿಮೆ

ಕೇವಲ ಪ್ರತಿಮೆಯಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಯ ಕ್ರಿಕೆಟ್ ಯಾತ್ರೆ ಮತ್ತು ಜೀವನ ಗಾಥೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಸಣ್ಣ ಮ್ಯೂಸಿಯಂ ಸಹ ಇದರ ಜೊತೆಗೇ ನಿರ್ಮಿಸುವ ಚಿಂತನೆ ಇದೆ ಎಂದು ಅಭಿಮಾನಿ ಗೌತಮ್‌ ವರ್ಮಾ ತಿಳಿಸಿದ್ದಾರೆ.


Click the Play button to hear this message in audio format

ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಆಟ, ವ್ಯಕ್ತಿತ್ವ ಮತ್ತು ಅಸಾಧಾರಣ ಸಾಧನೆಗಳು ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿವೆ. ಕೆಲವು ಅಭಿಮಾನಿಗಳು ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡರೆ, ಮತ್ತೆ ಕೆಲವರು ಇನ್ನೂ ವಿಭಿನ್ನ ರೀತಿಯಲ್ಲಿ ಪ್ರೀತಿ ತೋರುತ್ತಾರೆ. ಇದೀಗ ಕರ್ನಾಟಕದ ಚನ್ನಪಟ್ಟಣದ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬರು ಕೊಹ್ಲಿಗೆ ಅಮರ ಗೌರವ ಸಲ್ಲಿಸಲು ಬರೋಬ್ಬರಿ 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ.


ವಿರಾಟ್ ಕೊಹ್ಲಿಯ ಈ ಬೃಹತ್ ಪ್ರತಿಮೆ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದವರ ಹೆಸರು ಗೌತಮ್ ವರ್ಮಾ. ಚನ್ನಪಟ್ಟಣದ ನಿವಾಸಿಯಾಗಿರುವ ಇವರು, ತಮ್ಮ ಸಾಹಸಮಯ ಪ್ರದರ್ಶನಗಳ ಮೂಲಕ ಈಗಾಗಲೇ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಹಲ್ಲಿನಿಂದ ತೆಂಗಿನಕಾಯಿ ಸುಲಿಯುವಂತಹ ವಿಶೇಷ ಸಾಹಸಗಳ ಮೂಲಕ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿರುವ ಇವರು, ಇದೀಗ ಅದೇ ಛಲ ಮತ್ತು ಉತ್ಸಾಹದೊಂದಿಗೆ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಶಾಶ್ವತ ಸ್ಮರಣೆ ನೀಡುವ ಕನಸು ಕಟ್ಟಿದ್ದಾರೆ.

ಎಲ್ಲಿ ನಿರ್ಮಾಣವಾಗಲಿದೆ ಪ್ರತಿಮೆ?

ಪ್ರತಿಮೆ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಯ ಮಾಜಿ ಅಧ್ಯಕ್ಷ ಹಾಗೂ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಗೌತಮ್ ಈಗಾಗಲೇ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಉಳ್ಳಾಲು ಸಮೀಪ ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸುವ ಯೋಜನೆ ರೂಪುಗೊಂಡಿದ್ದು, ಆ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರೂ ಜಾಗ ಒದಗಿಸಲು ಸಮ್ಮತಿ ಸೂಚಿಸಿದ್ದಾರೆ ಎಂದು ಗೌತಮ್ ವರ್ಮಾ ತಿಳಿಸಿದ್ದಾರೆ.

ಮ್ಯೂಸಿಯಂ ನಿರ್ಮಾಣದ ಚಿಂತನೆ

ಕೇವಲ ಪ್ರತಿಮೆಯಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಯ ಕ್ರಿಕೆಟ್ ಯಾತ್ರೆ ಮತ್ತು ಜೀವನ ಗಾಥೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಸಣ್ಣ ಮ್ಯೂಸಿಯಂ ಸಹ ಇದರ ಜೊತೆಗೇ ನಿರ್ಮಿಸುವ ಚಿಂತನೆ ಇದೆ. ಒಟ್ಟಾರೆ ಈ ಪ್ರತಿಮೆ ಮತ್ತು ಮ್ಯೂಸಿಯಂ ಯೋಜನೆಗೆ ಅಂದಾಜು 4 ಕೋಟಿ ರೂಪಾಯಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ.

ಮುಂದಿನ ವಾರ ವಿರಾಟ್ ಕೊಹ್ಲಿ ಭೇಟಿ

ಈ ಯೋಜನೆಯ ಸಂಪೂರ್ಣ ವಿವರವನ್ನು ನೀಡಲು ಗೌತಮ್ ವರ್ಮಾ ಮುಂದಿನ ವಾರ ಸ್ವತಃ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ. ವಿಶ್ವದ ನಾನಾ ಭಾಗಗಳಲ್ಲಿ (ಉದಾಹರಣೆಗೆ ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮತ್ತು ಜೈಪುರದ ವ್ಯಾಕ್ಸ್ ಮ್ಯೂಸಿಯಂಗಳಲ್ಲಿ) ಕೊಹ್ಲಿಯ ಮೇಣದ ಪ್ರತಿಮೆಗಳಿದ್ದರೂ, 25 ಅಡಿ ಎತ್ತರದ ಈ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣವಾದರೆ, ಅದು ಒಬ್ಬ ನಿಷ್ಠಾವಂತ ಅಭಿಮಾನಿಯೊಬ್ಬರು ತನ್ನ ಆರಾಧ್ಯ ದೈವಕ್ಕೆ ನಿರ್ಮಿಸಿದ ಅನನ್ಯ ಸ್ಮಾರಕವಾಗಿ ಬೆಂಗಳೂರಿನಲ್ಲಿ ತಲೆ ಎತ್ತಲಿದೆ.

Read More
Next Story