
ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ
ಅಗರ್ಕರ್ ಅವರ ಪ್ರಸ್ತುತ ಒಪ್ಪಂದವು 2026ರ ಸೆಪ್ಟೆಂಬರ್‌ಗೆ ಮುಕ್ತಾಯಗೊಳ್ಳಬೇಕಿತ್ತು. ಅವರು ತಮ್ಮ ಅಧಿಕಾರಾವಧಿಯನ್ನು 2027ರ ಏಕದಿನ ವಿಶ್ವಕಪ್‌ವರೆಗೆ ವಿಸ್ತರಿಸಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಟೀಮ್ ಇಂಡಿಯಾದ ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಅಜಿತ್ ಅಗರ್ಕರ್ ಅವರ ಒಪ್ಪಂದವನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿದೆ. ಇದರಿಂದಾಗಿ 2027ರ ಏಕದಿನ ವಿಶ್ವಕಪ್‌ವರೆಗೂ ಅಗರ್ಕರ್ ಅವರು ಮುಖ್ಯ ಆಯ್ಕೆಗಾರರಾಗಿ ಮುಂದುವರಿಯುವುದು ಬಹುತೇಕ ಖಚಿತವಾದಂತಾಗಿದೆ.
ಅಗರ್ಕರ್ ಅವರ ಪ್ರಸ್ತುತ ಒಪ್ಪಂದವು 2026ರ ಸೆಪ್ಟೆಂಬರ್‌ಗೆ ಮುಕ್ತಾಯಗೊಳ್ಳಬೇಕಿತ್ತು. ಅವರು ತಮ್ಮ ಅಧಿಕಾರಾವಧಿಯನ್ನು 2027ರ ಏಕದಿನ ವಿಶ್ವಕಪ್‌ವರೆಗೆ ವಿಸ್ತರಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ, ಬಿಸಿಸಿಐ ಮೂಲಗಳ ಪ್ರಕಾರ ಹಿರಿಯ ಆಯ್ಕೆಗಾರರೊಬ್ಬರು ಸಂವಿಧಾನದ ಪ್ರಕಾರ ಗರಿಷ್ಠ ನಾಲ್ಕು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿಯಬಹುದು. ಅಗರ್ಕರ್ 2023ರಲ್ಲಿ ಅಧಿಕಾರ ವಹಿಸಿಕೊಂಡಿದ್ದರಿಂದ, ಅವರಿಗೆ ಅಧಿಕೃತವಾಗಿ ಗುತ್ತಿಗೆ ವಿಸ್ತರಣೆಯನ್ನು ಕೋರುವ ಅಗತ್ಯವಿಲ್ಲ, ಅವರ ಒಪ್ಪಂದವನ್ನು ನೇರವಾಗಿ ವಿಸ್ತರಿಸಲು ಬಿಸಿಸಿಐ ಕಾರ್ಯದರ್ಶಿಗೆ ಅಧಿಕಾರವಿರುತ್ತದೆ. ಹೀಗಾಗಿ ಬಿಸಿಸಿಐ ಈಗ ಅವರ ಅವಧಿಯನ್ನು ಮುಂದಿನ ವರ್ಷದವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಅಗರ್ಕರ್ ಅವಧಿಯ ಕಠಿಣ ನಿರ್ಧಾರಗಳು ಮತ್ತು ಸಾಧನೆಗಳು
ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಗಮನಾರ್ಹ ಯಶಸ್ಸು ಕಂಡಿದೆ. ಅವರ ನೇತೃತ್ವದ ಆಯ್ಕೆ ಸಮಿತಿಯ ಅವಧಿಯಲ್ಲಿ ಭಾರತವು 2024ರ ಟಿ-20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ ೨೦೨೬ರ ಟಿ೨೦ ವಿಶ್ವ ಕಪ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ತಮ್ಮ ಕಾರ್ಯಾವಧಿಯಲ್ಲಿ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೆಲವು ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರರ ಟೆಸ್ಟ್ ನಿವೃತ್ತಿಯ ನಿರ್ಧಾರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಕ್ರಮೇಣವಾಗಿ ಕೈಬಿಡುವ ಪ್ರಕ್ರಿಯೆಯನ್ನು ನಿರ್ವಹಿಸಿದ್ದು, ಪರ ಹಾಗೂ ವಿರೋಧಕ್ಕೆ ಕಾರಣವಾಗಿದೆ. ನಾಯಕತ್ವದ ಬದಲಾವಣೆಗಳು ಮತ್ತು ತಂಡದಲ್ಲಿನ ಯುವ ಪ್ರತಿಭೆಗಳಿಗೆ ಅವಕಾಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೂಡ ಗಮನಾರ್ಹ.
ಮಾಜಿ ವೇಗಿ ಅಜಿತ್ ಅಗರ್ಕರ್ 2023ರ ಜುಲೈನಲ್ಲಿ ಚೇತನ್ ಶರ್ಮಾ ಅವರ ರಾಜೀನಾಮೆಯ ನಂತರ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿ ಬಿಸಿಸಿಐ ಅವರ ಅಧಿಕಾರಾವಧಿಯನ್ನು ವಿಸ್ತರಿಸಿದೆ.

