
ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್
ಐಪಿಎಲ್‌ನಲ್ಲಿ ವೆಪಿಂಗ್ ವಿವಾದ: ಬಿಸಿಸಿಐನಿಂದ ಅರ್ಷದೀಪ್ ಸಿಂಗ್‌ಗೆ 'ವ್ಲಾಗಿಂಗ್' ಮಾಡದಂತೆ ಖಡಕ್ ಸೂಚನೆ!
ವಿವಾದ ಭುಗಿಲೇಳುತ್ತಿದ್ದಂತೆ ವಿಡಿಯೋದ ಆ ಭಾಗವನ್ನು ಎಡಿಟ್ ಮಾಡಿ ತೆಗೆದುಹಾಕಲಾಗಿದೆ ಎಂಬ ಆರೋಪಗಳೂ ಕೇಳಿಬಂದವು. ವಿಮಾನದೊಳಗೆ ಇ-ಸಿಗರೇಟ್ ಸೇದುವುದು ಕಾನೂನುಬಾಹಿರವಾಗಿದ್ದು, ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಐಪಿಎಲ್ 2026ರ ಟೂರ್ನಿಯಲ್ಲಿ ವಿವಾದಗಳು ಬೆನ್ನತ್ತಿ ಬರುತ್ತಿವೆ. ತಮ್ಮ ಸಹ ಆಟಗಾರ ಯಜುವೇಂದ್ರ ಚಾಹಲ್ ವಿಮಾನದಲ್ಲಿ 'ವ್ಯೆಪಿಂಗ್' (Vaping - ಇ-ಸಿಗರೇಟ್ ಸೇದುವುದು) ಮಾಡಿದ್ದಾರೆಂಬ ಆರೋಪದ ಬೆನ್ನಲ್ಲೇ, ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗ್ ಮಾಡದಂತೆ ಬಿಸಿಸಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಪಂಜಾಬ್ ಕಿಂಗ್ಸ್ ತಂಡವು ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅರ್ಷದೀಪ್ ಸಿಂಗ್ ಅವರು ವ್ಲಾಗ್ ಮಾಡಿದ್ದರು. ಈ ವಿಡಿಯೋದಲ್ಲಿ, ಯಜುವೇಂದ್ರ ಚಾಹಲ್ ಅವರು ಹಿಂಬದಿಯಲ್ಲಿ ಇ-ಸಿಗರೇಟ್ ಸೇದುತ್ತಿರುವ ದೃಶ್ಯವೊಂದು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ಕ್ಲಿಪ್ಪಿಂಗ್ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿವಾದ ಭುಗಿಲೇಳುತ್ತಿದ್ದಂತೆ ವಿಡಿಯೋದ ಆ ಭಾಗವನ್ನು ಎಡಿಟ್ ಮಾಡಿ ತೆಗೆದುಹಾಕಲಾಗಿದೆ ಎಂಬ ಆರೋಪಗಳೂ ಕೇಳಿಬಂದವು. ವಿಮಾನದೊಳಗೆ ಇ-ಸಿಗರೇಟ್ ಸೇದುವುದು ಕಾನೂನುಬಾಹಿರವಾಗಿದ್ದು, ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಯ ನಂತರ ಎಚ್ಚೆತ್ತುಕೊಂಡ ಬಿಸಿಸಿಐ, ಅರ್ಷದೀಪ್ ಸಿಂಗ್ ಅವರಿಗೆ ಟೂರ್ನಿ ಮುಗಿಯುವವರೆಗೆ ಯಾವುದೇ ವ್ಲಾಗ್ ಪೋಸ್ಟ್ ಮಾಡದಂತೆ ಸೂಚನೆ ನೀಡಿದೆ.
ಇ-ಸಿಗರೇಟ್ ವಿವಾದ: ಇದು ಮೊದಲಲ್ಲ!
ಐಪಿಎಲ್ 2026ರಲ್ಲಿ 'ವ್ಯೆಪಿಂಗ್' ವಿವಾದ ಭುಗಿಲೆದ್ದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ, ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ವ್ಯಾಪ್ ಬಳಸುತ್ತಿದ್ದಾಗ ಕ್ಯಾಮೆರಾಗೆ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿತ್ತು. ಭಾರತದಲ್ಲಿ ಇ-ಸಿಗರೇಟ್ ಬಳಕೆಯನ್ನು ನಿಷೇಧಿಸಲಾಗಿದೆ. ಇಂತಹ ಘಟನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಸಿಸಿಐ, ಟೂರ್ನಿಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

