
ಏಷ್ಯನ್ ಗೇಮ್ಸ್ 2026: ಮಹಿಳಾ ಕಬಡ್ಡಿಯಲ್ಲಿ ಇರಾನ್ ಮಣಿಸಿದ ಭಾರತಕ್ಕೆ ಚಿನ್ನ
ಕೊನೆಯ ಹಂತದಲ್ಲಿ ಸಂಜು ಅವರ ನಿರ್ಣಾಯಕ ರೈಡ್ಗಳು ಹಾಗೂ ಪುಷ್ಪಾ ಅವರ ಯಶಸ್ವಿ ಟ್ಯಾಕಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಕೊನೆಯ ಕ್ಷಣದವರೆಗೂ ದಿಟ್ಟ ಹೋರಾಟ ನೀಡಿದ ಇರಾನ್ ತಂಡವನ್ನು ಮಣಿಸಿದ ಭಾರತ, ಏಷ್ಯನ್ ಗೇಮ್ಸ್ನಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದಿದೆ.
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತನ್ನ ಚಿನ್ನದ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಮಹಿಳೆಯರ ಕಬಡ್ಡಿ ವಿಭಾಗದ ಫೈನಲ್ನಲ್ಲಿ ಭಾರತ ತಂಡ ಇರಾನ್ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿದೆ. ನಗೋಯಾದಲ್ಲಿ ನಡೆದ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಭಾರತ 37-34 ಅಂಕಗಳ ಅಂತರದಿಂದ ಇರಾನ್ ವಿರುದ್ಧ ಗೆಲುವು ಸಾಧಿಸಿತು. ಆರಂಭದಿಂದಲೂ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದರಿಂದ ಪಂದ್ಯ ಕೊನೆಯ ಹಂತದವರೆಗೂ ಕುತೂಹಲ ಮೂಡಿಸಿತ್ತು.
ಕೊನೆಯ ಹಂತದಲ್ಲಿ ರೋಚಕ ತಿರುವು
ಭಾರತದ ಮತ್ತು ಇರಾನ್ ಆಟಗಾರ್ತಿಯರ ನಡುವೆ ನೆಕ್ಟು ನೆಕ್ ಫೈಟ್ ನೀಡಿದರು. ಪಂದ್ಯದ ಒಂದು ಹಂತದಲ್ಲಿ ಇರಾನ್ ಗೆಲುವಿನತ್ತ ಸಾಗುವ ಸಾಧ್ಯತೆಯೂ ಕಂಡುಬಂದಿತ್ತು. ಕೊನೆಯ ಹಂತದಲ್ಲಿ ಇರಾನ್ ಭಾರತವನ್ನು ಆಲ್ಔಟ್ ಮಾಡುವ ಮೂಲಕ ಅಂಕಗಳ ಅಂತರವನ್ನು ಕಡಿಮೆ ಮಾಡಿತು.
ಬಳಿಕ ಇರಾನ್ನ ಮದದಿ ಮತ್ತೆರಡು ಅಂಕಗಳನ್ನು ಗಳಿಸಿ ಭಾರತದ ಮುನ್ನಡೆಯನ್ನು ಮತ್ತಷ್ಟು ಕುಗ್ಗಿಸಿದರು. ಹೀಗಾಗಿ ಫೈನಲ್ ಪಂದ್ಯ ಇನ್ನಷ್ಟು ರೋಚಕವಾಯಿತು. ಈ ಸಂದರ್ಭದಲ್ಲಿ ಭಾರತದ ಸಂಜು ನಿರ್ಣಾಯಕ ಪಾತ್ರ ವಹಿಸಿದರು. ಅವರು ಸತತ ಎರಡು ಅತ್ಯುತ್ತಮ ರೈಡ್ಗಳನ್ನು ನಡೆಸಿದರು. ಎರಡನೇ ರೈಡ್ನಲ್ಲಿ ಬಹು ಅಂಕಗಳನ್ನು ಗಳಿಸುವ ಮೂಲಕ ಭಾರತಕ್ಕೆ ನಿರ್ಣಾಯಕ ಮುನ್ನಡೆ ತಂದುಕೊಟ್ಟರು.
ನಂತರ ಪುಷ್ಪಾ ಯಶಸ್ವಿ ಟ್ಯಾಕಲ್ ನಡೆಸಿ ಭಾರತದ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ಅಂತಿಮವಾಗಿ ಭಾರತ 37-34 ಅಂತರದಿಂದ ಇರಾನ್ ತಂಡವನ್ನು ಮಣಿಸಿ ಮಹಿಳೆಯರ ಕಬಡ್ಡಿಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಭಾರತೀಯರ ಸಂಭ್ರಮ
ಭಾರತದ ಗೆಲುವಿನ ಬಳಿಕ ಕ್ರೀಡಾಪಟುಗಳು ಹಾಗೂ ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿತು. ಭಾರತ ವಿರುದ್ಧ ಕೊನೆಯ ಕ್ಷಣದವರೆಗೂ ಹೋರಾಡಿದ ಇರಾನ್ ಆಟಗಾರ್ತಿಯರು ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟರು. ಜಪಾನ್ ಪ್ರೇಕ್ಷಕರ ಮುಂದೆಯೇ ನಡೆದ ಈ ರೋಚಕ ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಕಬಡ್ಡಿ ಆಟಗಾರ್ತಿಯರು ಚಿನ್ನದ ಪದಕ ಗೆದ್ದ ಸಂಭ್ರಮವನ್ನು ಹಂಚಿಕೊಂಡರು. ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆಗೆ ಮಹಿಳಾ ಕಬಡ್ಡಿ ತಂಡದ ಈ ಚಿನ್ನ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.

