ಒಳ ಮೀಸಲು ತೀರ್ಪು: ಇಂಡಿಯಾ ಒಕ್ಕೂಟದಲ್ಲಿ ಭಿನ್ನ ಅಭಿಪ್ರಾಯ
x
ನವದೆಹಲಿಯಲ್ಲಿ ನಡೆದ ಇಂಡಿಯ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಡಿಎಂಕೆ ನಾಯಕ ಟಿಆರ್ ಬಾಲು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಮತ್ತು ಇತರರು

ಒಳ ಮೀಸಲು ತೀರ್ಪು: ಇಂಡಿಯಾ ಒಕ್ಕೂಟದಲ್ಲಿ ಭಿನ್ನ ಅಭಿಪ್ರಾಯ

ಒಳ ಮೀಸಲು ಕುರಿತ ಸುಪ್ರೀ ಕೋರ್ಟ್‌ ತೀರ್ಪಿನ ಬಳಿಕ ಇಂಡಿಯ ಒಕ್ಕೂಟದ ಪಕ್ಷಗಳು ಉಪ ವರ್ಗೀಕರಣದ ಪೂರ್ವಭಾವಿ ಷರತ್ತನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಅಗತ್ಯದ ಅನುಮೋದನೆ ಎಂದು ಪರಿಗಣಿ ಸುತ್ತಿವೆ. ಆದರೆ, ಉಪ ವರ್ಗೀಕರಣವು ರಾಜಕೀಯ ಮತ್ತು ಸಾಮಾಜಿಕವಾಗಿ ವಿವೇಕಯುತವೇ ಎಂಬ ಬಗ್ಗೆ ಒಕ್ಕೂಟದಲ್ಲಿ ಭಿನ್ನಮತ ಇದೆ.


ರಾಷ್ಟ್ರಪತಿಗಳ ಪಟ್ಟಿಯಲ್ಲಿ ಸೂಚಿಸಿದ ಪರಿಶಿಷ್ಟ ಜಾತಿ(ಎಸ್‌ಸಿ)ಗಳನ್ನು ಉಪ-ವರ್ಗೀಕರಿಸುವ ರಾಜ್ಯಗಳ ಹಕ್ಕನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ನ ಆಗಸ್ಟ್ 1 ರ ತೀರ್ಪು , ಪ್ರತಿಪಕ್ಷವಾದ ಇಂಡಿಯ ಒಕ್ಕೂಟದಲ್ಲಿ ಬಿರುಕು ಮೂಡಿ ಸುವ ಸಾಧ್ಯತೆ ಇದೆ.

'ಪ್ರಾಯೋಗಿಕ ದತ್ತಾಂಶದ' ವ್ಯಾಖ್ಯಾನ: ಸಾಮಾಜಿಕ-ಆರ್ಥಿಕ ಜಾತಿ ಗಣತಿಯನ್ನು ನಡೆಸುವ ತಮ್ಮ ಬೇಡಿಕೆಯನ್ನು ತೀರ್ಪು ʻನಿಸ್ಸಂದಿಗ್ಧ ವಾಗಿ ಸಮರ್ಥಿಸುತ್ತದೆʼ ಎಂದು ಇಂಡಿಯ ಒಕ್ಕೂಟದ ಪಕ್ಷಗಳು ಸರ್ವಾನುಮತದಿಂದ ಹೇಳಿವೆ. ʻರಾಜ್ಯದ ಸೇವೆಗಳಲ್ಲಿ ಪ್ರಾತಿನಿಧ್ಯದ ಅಸಮರ್ಪಕತೆʼಯನ್ನು ಸಾಬೀತುಪಡಿಸಲು ಉಪ-ವರ್ಗೀಕರಣವನ್ನು ಮತ್ತು ಆನಂತರದ ʻಹೆಚ್ಚುವರಿ ಪ್ರಯೋಜನ ನೀಡಿಕೆʼಗಳನ್ನು ʻಪ್ರಾಯೋಗಿಕ ದತ್ತಾಂಶʼ ಆಧಾರದ ಮೇಲೆ ಮಾಡಬೇಕು ಎಂಬುದು ಏಳು ನ್ಯಾಯಾಧೀಶರ ಸಂವಿಧಾನ ಪೀಠದ ಬಹುಮತದ ಅಭಿಪ್ರಾಯವಾಗಿತ್ತು.

ಉಪ ವರ್ಗೀಕರಣದ ಈ ಪೂರ್ವಭಾವಿ ಷರತ್ತನ್ನು ಇಂಡಿಯ ಒಕ್ಕೂಟದ ಪಕ್ಷಗಳು ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಅಗತ್ಯದ ಅನುಮೋದನೆ ಎಂದು ಪರಿಗಣಿಸುತ್ತಿವೆ. ಆದರೆ, ಉಪ ವರ್ಗೀಕರಣವು ರಾಜಕೀಯ ಮತ್ತು ಸಾಮಾಜಿಕವಾಗಿ ವಿವೇಕಯುತವೇ ಎಂಬ ಬಗ್ಗೆ ಒಕ್ಕೂಟದಲ್ಲಿ ಭಿನ್ನಮತ ಇದೆ.

ನ್ಯಾಯಾಲಯದ 6-1 ತೀರ್ಪು ಕುರಿತು ಒಕ್ಕೂಟದ ʻಸಾಮೂಹಿಕ ನಿಲುವು ಮುಂದಿಡುವ ಮೊದಲು ʻಹೆಚ್ಚು ಸೂಕ್ಷ್ಮವಾದ ಓದುʼ ಅಗತ್ಯವಿದೆ ಎಂದು ಇಂಡಿಯಾ ಒಕ್ಕೂಟದ ಮೂಲಗಳು ದ ಫೆಡರಲ್‌ಗೆ ತಿಳಿಸಿವೆ.

ವ್ಯತಿರಿಕ್ತ ಪ್ರತಿಕ್ರಿಯೆ: ಇಂಡಿಯ ಒಕ್ಕೂಟದ ಪಾಲುದಾರರಲ್ಲಿ ತೀರ್ಪು ಕುರಿತ ಅಭಿಪ್ರಾಯಭೇದವಿದೆ. ಸಿಪಿಐ(ಎಂ) ತೀರ್ಪನ್ನು ಸ್ವಾಗತಿಸಿದೆ ಮತ್ತು ʻಎಸ್‌ಸಿಗಳಲ್ಲಿ ಹಿಂದುಳಿದ ವರ್ಗಗಳ ಪರಿಸ್ಥಿತಿಗಳನ್ನು ಸುಧಾರಿಸಲು ಸೌಲಭ್ಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಇದಕ್ಕೆ ತದ್ವಿರುದ್ಧವಾಗಿ ಆರ್‌ಜೆಡಿ ವಕ್ತಾರ ಮತ್ತು ರಾಜ್ಯ ಸಭೆ ಸದಸ್ಯ ಮನೋಜ್ ಕುಮಾರ್ ಝಾ, ʻಜಾತಿ ಜನಗಣತಿಯನ್ನು ನಿರಾಕರಿಸುವ ಯಾವುದೇ ಅವಕಾಶ ನೀಡುವುದಿಲ್ಲ. ಆದರೆ, ತಮ್ಮ ಪಕ್ಷ ಎಸ್‌ಸಿ ಅಥವಾ ಎಸ್‌ಟಿಗಳಿಗೆ ಉಪ ವರ್ಗೀಕರಣವನ್ನು ಒಪ್ಪಿಕೊಳ್ಳುವುದಿಲ್ಲ,ʼ ಎಂದು ದ ಫೆಡರಲ್‌ ಗೆ ಹೇಳಿದರು.

ʻತೀರ್ಪು ಸಬಲೀಕರಣ ಕ್ರಿಯೆಗಳ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ದುರದೃಷ್ಟಕರ. ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲು ನೀಡಬೇಕೆಂಬ ಸಂವಿಧಾನ ಸಭೆಯ ನಿಲುವಿಗೆ ವಿರುದ್ಧವಾಗಿದೆ. ಪರಿಶಿಷ್ಟ ಜಾತಿಗಳ ಉಪ ಜಾತಿಯೊಂದರ ಆರ್ಥಿಕ ಪರಿಸ್ಥಿತಿಯು ಮೀಸಲಿನಿಂದ ಸುಧಾರಿಸಿದ ಮಾತ್ರಕ್ಕೆ ಸಮುದಾಯದ ಪ್ರತಿಯೊಬ್ಬರ ಪರಿಸ್ಥಿತಿ ಸುಧಾರಿಸಿದೆ ಎಂದರ್ಥವಲ್ಲʼಎಂದು ಹೇಳಿದರು.

ಜಾತಿ ಗಣತಿಗೆ ಕಾಂಗ್ರೆಸ್‌ ಒತ್ತಾಯ: ಇಂಡಿಯ ಒಕ್ಕೂಟದ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್, ತೀರ್ಪಿನ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಭಾರದಿಂದ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ರಾಹುಲ್ ತಮ್ಮ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಯನಾಡಿಗೆ ಭೇಟಿ ನೀಡಿದ್ದರು.

ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ದ ಫೆಡರಲ್‌ಗೆ ತಿಳಿಸಿದರು; ʼಸಾಮಾಜಿಕ-ಆರ್ಥಿಕ ಜಾತಿ ಗಣತಿ ಅಗತ್ಯ ಎಂಬ ಪಕ್ಷದ ನಿಲುವನ್ನು ತೀರ್ಪು ಸಮರ್ಥಿಸುತ್ತದೆ. ಏಕೆಂದರೆ, ಜಾತಿ ಗಣತಿ ಇಲ್ಲದೆ ಮೀಸಲು ಪ್ರಯೋಜನಗಳ ವರ್ಗೀಕರಣ ಮತ್ತು ಪುನರ್ವಿತರಣೆಗೆ ನ್ಯಾಯಾಲಯ ಅಗತ್ಯವೆಂದು ಪರಿಗಣಿಸಿದ ಪ್ರಾಯೋಗಿಕ ದತ್ತಾಂಶವನ್ನು ಹೊಂದಲು ಸಾಧ್ಯವಿಲ್ಲʼ ಎಂದು ಹೇಳಿದರು.

ಹಿರಿಯ ವಕೀಲರಾದ ಪಿ. ಚಿದಂಬರಂ, ಅಭಿಷೇಕ್ ಮನು ಸಿಂಘ್ವಿ ಮತ್ತು ಸಲ್ಮಾನ್ ಖುರ್ಷಿದ್ ಅವರಿಂದ ತೀರ್ಪು ಕುರಿತು ಹೈಕಮಾಂಡ್ ವಿಸ್ತೃತ ವಿವರ ಕೇಳಿದೆ. ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಮೂರು ಕಾಂಗ್ರೆಸ್ ಮುಖ್ಯಮಂತ್ರಿಗಳಲ್ಲಿ ಇಬ್ಬರು, ತೆಲಂಗಾಣದ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಸಿದ್ದರಾಮಯ್ಯ ಅವರು ತೀರ್ಪನ್ನು ಐತಿಹಾಸಿಕ ಎಂದು ಶ್ಲಾಘಿಸಿದ್ದಾರೆ. ತಮ್ಮ ಸರ್ಕಾರ ʻಉಪ ವರ್ಗೀಕರಣವನ್ನು ಜಾರಿಗೊಳಿಸುವ ಮೊದಲ ರಾಜ್ಯʼ ಎಂದು ರೇವಂತ್‌ ರೆಡ್ಡಿ ಘೋಷಿಸಿದ್ದಾರೆ.

ಎಸ್ಪಿಯಿಂದ ಕಾನೂನು ಪರಿಣಾಮಗಳ ಅಧ್ಯಯನ: ಇಂಡಿಯ ಒಕ್ಕೂಟದ ಎರಡನೇ ಅತಿದೊಡ್ಡ ಪಕ್ಷವಾದ ಸಮಾಜವಾದಿ ಪಕ್ಷ (ಎಸ್‌ಪಿ) ಕೂಡ ತೀರ್ಪಿನ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಖಿಲೇಶ್ ಯಾದವ್‌ ಅವರು ಎಸ್ಪಿ ಬೆಂಬಲದಿಂದ ಉತ್ತರ ಪ್ರದೇಶದಿಂದ ಸ್ವತಂತ್ರವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಸೇರಿದಂತೆ ವಿವಿಧ ಕಾನೂನು ತಜ್ಞರಿಂದ ತೀರ್ಪಿನ ರಾಜಕೀಯ ಮತ್ತು ಕಾನೂನು ಪರಿಣಾಮಗಳ ಬಗ್ಗೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ʻಇವತ್ತಷ್ಟೇ ತೀರ್ಪು ಹೊರಬಿದ್ದಿದೆ. ತೀರ್ಪಿನ ಪ್ರಭಾವ ಬೃಹತ್ತಾಗಿರಬಹುದು. ಆದ್ದರಿಂದ, ಎಲ್ಲ ಕಾನೂನು ಅಂಶಗಳನ್ನು ಅರ್ಥಮಾಡಿ ಕೊಳ್ಳದೆ ಅದರ ಬಗ್ಗೆ ಹೇಳಿಕೆ ನೀಡುವುದು ಸೂಕ್ತವಲ್ಲ. ಆದರೆ, ಒಂದು ವಿಷಯವನ್ನು ಖಚಿತವಾಗಿ ಹೇಳಬಹುದು; ತೀರ್ಪು ಜಾತಿ ಗಣತಿಯ ಅಗತ್ಯವನ್ನು ಹಿಂದೆಂದಿಗಿಂತ ಹೆಚ್ಚು ಬಲಗೊಳಿಸಿದೆ,ʼ ಎಂದು ಎಸ್‌ಪಿಯ ಫೈಜಾಬಾದ್ ಸಂಸದ ಮತ್ತು ಹಿರಿಯ ದಲಿತ ನಾಯಕ ಅವಧೇಶ್ ಪ್ರಸಾದ್ ದ ಫೆಡರಲ್‌ಗೆ ತಿಳಿಸಿದರು.

ʻಜಾತಿ ಗಣತಿಗೆ ನಾವು ಬದ್ಧರು ಮತ್ತು ಸೀಮಿತ ಅರ್ಥದಲ್ಲಿ ಈ ತೀರ್ಪು ಒಂದು ಪ್ರಮುಖ ವಿಜಯ. ಏಕೆಂದರೆ, ರಾಜ್ಯಗಳು ಹಿಂದುಳಿದಿರುವಿಕೆ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಬೇಕಿದೆ ಮತ್ತು ಅದನ್ನು ಮಾಡಲು ಇರುವ ಏಕೈಕ ಮಾರ್ಗ- ಜಾತಿ ಗಣತಿ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ,ʼ ಎಂದು ಅಖಿಲೇಶ್‌ಗೆ ಆಪ್ತರಾಗಿರುವ ಹಿರಿಯ ಎಸ್‌ಪಿ ನಾಯಕರೊಬ್ಬರು ಹೇಳಿದರು.

ಉಪ ವರ್ಗೀಕರಣವನ್ನು ಅನುಮತಿಸಬೇಕೇ ಎಂಬ ಕುರಿತು ಪ್ರತಿಕ್ರಿಯಿಸಿ,ʼ ಅದು ಸಮಾಜಕ್ಕೆ ಒಳ್ಳೆಯದು ಎಂದು ಖಚಿತವಾಗಿಲ್ಲ; ಇದು ಎಸ್‌ ಸಿಗಳಲ್ಲಿ ವಿಭಜನೆ ಉಂಟುಮಾಡಬಹುದು. ಒಂದು ಉಪಜಾತಿ ತನ್ನ ಹಕ್ಕುಗಳನ್ನು ಮತ್ತೊಂದು ಕಿತ್ತುಕೊಳ್ಳುತ್ತಿದೆ ಎಂದು ಭಾವಿಸಬಹುದು. ಇದು ನಾಜೂಕಿನ ವಿಷಯ. ಎಸ್‌ಪಿ ಮಾತ್ರವಲ್ಲ; ಇಂಡಿಯ ಒಕ್ಕೂಟ ಈ ಕುರಿತು ಯೋಚಿಸುವ ಅಗತ್ಯವಿದೆ,ʼ ಎಂದು ತಿಳಿಸಿದರು.

ಅಸ್ಪಷ್ಟ ತೀರ್ಪು: ಆರ್‌ಜೆಡಿ- ʻತೀರ್ಪು ಅಸ್ಪಷ್ಟವಾಗಿದೆ,ʼ ಎಂದು ಝಾ ಹೇಳುತ್ತಾರೆ.ʻಜಾತಿ ಆಧಾರಿತ ಮೀಸಲನ್ನು ವಿರೋಧಿಸುವವರು ತೀರ್ಪನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದುʼ ಎಂದರು.

ʻನ್ಯಾಯಾಲಯವನ್ನು ಗೌರವಿಸುತ್ತಲೇ ಇದೊಂದು ವಿಭಜಿಸುವ ತೀರ್ಪು ಎಂದು ಹೇಳಲು ಬಯಸುತ್ತೇನೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳವರು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಿದ 6 ವರ್ಷಗಳ ನಂತರ ತೀರ್ಪು ಬಂದಿರುವುದು ವಿಚಿತ್ರ ಮತ್ತು ಕಾಕತಾಳೀಯ. ಈ ತೀರ್ಪಿನ ವಿರುದ್ಧ ಅಂತಹ ಇನ್ನೊಂದು ಆಂದೋಲನದ ಅಗತ್ಯವಿದೆ ಎಂದು ಭಾವಿಸುತ್ತೇನೆ. ಉಪ ವರ್ಗೀಕರಣವನ್ನು ಒಪ್ಪಿಕೊಳ್ಳದಂತೆ ಪ್ರತಿಯೊಬ್ಬರನ್ನು ಒತ್ತಾಯಿಸುತ್ತದೆ,ʼ ಎಂದು ಝಾ ಹೇಳಿದರು.

ಜಾತಿ ಗಣತಿ ಬೇಡಿಕೆ ದುರ್ಬಲಗೊಳಿಸಬಹುದು: ʻತೀರ್ಪನ್ನು ಸ್ವಾಗತಿಸಲು ಪಕ್ಷ ಆತುರಪಡಬಾರದು. ಇದು ತುಂಬಾ ಸಂಕೀರ್ಣ ಸಮಸ್ಯೆ. ಇದಕ್ಕೆ ಬೆಂಬಲವು ಸಮಸ್ಯೆಗಳ ಸರಮಾಲೆಯನ್ನೇ ತೆರೆಯಬಹುದು,ʼ ಎಂದು ಕಾಂಗ್ರೆಸ್ ನಾಯಕರ ಇನ್ನೊಂದು ಗುಂಪು ಹೇಳುತ್ತದೆ.

ʻಬುಡಕಟ್ಟು ಮತ್ತು ಒಬಿಸಿ ಉಪ ವರ್ಗೀಕರಣಕ್ಕೆ ಬೇಡಿಕೆ ಬರಬಹುದು. ಈ ತೀರ್ಪು ಜಾತಿ ಗಣತಿ ಬೇಡಿಕೆಯನ್ನು ಸಮರ್ಥಿಸುತ್ತದೆ ಎಂದು ಹೇಳಬಹುದು; ಆದರೆ, ಉಪ ವರ್ಗೀಕರಣವನ್ನುಸಮರ್ಥಿಸಿಕೊಳ್ಳುವುದು ಕಷ್ಟ. ಒಂದು ದಲಿತ ಉಪಜಾತಿಯನ್ನು ಇನ್ನೊಂದು ದಲಿತ ಉಪಜಾತಿಯ ವಿರುದ್ಧ ಅಥವಾ ಒಂದು ಬುಡಕಟ್ಟು ಗುಂಪನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವ ಸಾಧ್ಯತೆಯಿದೆ.ಇದು ಆತ್ಮಹತ್ಯಾತ್ಮಕ ಆಗಲಿದೆ,ʼ ಎಂದು ಹಿರಿಯ ಕಾಂಗ್ರೆಸ್ ಸಂಸದರು ದ ಫೆಡರಲ್‌ಗೆ ತಿಳಿಸಿದರು.

ʻಮಹಾರಾಷ್ಟ್ರದಲ್ಲಿ ಮರಾಠ ಮೀಸಲು ವಿವಾದ ಏನಾಗುತ್ತಿದೆ ಎಂದು ನೋಡಿ ಅಥವಾ ರಾಜಸ್ಥಾನದಲ್ಲಿ ಜಾಟ್‌ ಮೀಸಲು ಮತ್ತು ಗುಜರಾತಿನಲ್ಲಿ ಪಾಟಿದಾರ್ ಮೀಸಲು ಬೇಡಿಕೆಗಳಿಂದ ಏನಾಯಿತು ಎಂದು ನೋಡಿ. ಪ್ರತಿಯೊಂದು ರಾಜ್ಯದಲ್ಲಿ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಲ್ಲಿ ಏಕಕಾಲದಲ್ಲಿ ಇಂತಹ ಆಂದೋಲನ ಬೆಳೆಯುವುದನ್ನು ನಾವು ಬಯಸುತ್ತೇವೆಯೇ? ಅದು ಉಂಟು ಮಾಡುವ ಸಾಮಾಜಿಕ ಅಶಾಂತಿಯನ್ನು ಊಹಿಸಿಕೊಳ್ಳಿ,ʼ ಎಂದು ಇಂಡಿಯ ಒಕ್ಕೂಟದ ಹಿರಿಯ ನಾಯಕರೊಬ್ಬರು ಹೇಳಿದರು.

ಎರಡು ಮೂಲಭೂತ ನ್ಯೂನತೆ: ಇಂಡಿಯ ಒಕ್ಕೂಟದ ಬಹು ಅವಧಿ ಸಂಸದರೊಬ್ಬರು ದ ಫೆಡರಲ್‌ಗೆ ಹೇಳಿದರು, ʻಸಮಸ್ಯೆ ಕೇವಲ ಪ್ರಾತಿನಿಧ್ಯದ ಬಗ್ಗೆ ಇದ್ದರೆ, ತಮಿಳುನಾಡು ಮಾಡಿದಂತೆ ಮೀಸಲು ವಿಸ್ತರಿಸಲು ಮಾರ್ಗಗಳನ್ನು ಅನ್ವೇಷಿಸಬಹುದು. ಇದರಿಂದ ಕಡಿಮೆ ಪ್ರಾತಿನಿಧ್ಯದ ಜಾತಿಗಳಿಗೂ ಸಮರ್ಪಕವಾಗಿ ಅವಕಾಶ ನೀಡಬಹುದು; ಶೇ. 10 ಇಡಬ್ಲ್ಯುಎಸ್‌ ಕೋಟಾ ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಮೀಸಲು ಮೇಲಿನ ಶೇ.50 ಮಿತಿ ಇನ್ನು ಮುಂದೆ ಪವಿತ್ರವಲ್ಲ,ʼ.

ʻಇದಲ್ಲದೆ, ಸುಪ್ರೀಂ ಕೋರ್ಟ್ ತಾರ್ಕಿಕತೆಯಲ್ಲಿ ಎರಡು ಮೂಲಭೂತ ದೋಷಗಳಿವೆ; ಮೊದಲನೆಯದಾಗಿ, ಎಸ್‌ಸಿಗಳನ್ನು ರಾಜ್ಯಗಳು ಉಪವರ್ಗೀಕರಿಸಬಹುದು ಎಂದು ಕೋರ್ಟ್ ಹೇಳುತ್ತದೆ. ಆದರೆ, ಅದು ಸಂಸತ್ತಿನ ಅಧಿಕಾರ; ಅದನ್ನು ತಿದ್ದಬೇಕೆಂದರೆ, 341 ನೇ ವಿಧಿಗೆ ತಿದ್ದುಪಡಿ ಮಾಡಬೇಕಾಗುತ್ತದೆ,ʼ ಎಂದು ಅವರು ಹೇಳಿದರು.

ʻಎರಡನೆಯದಾಗಿ, ಕೆಲವು ದಲಿತ ಉಪಜಾತಿಗಳು ಹೆಚ್ಚು ಪ್ರಯೋಜನ ಪಡೆದಿವೆ; ಇದರಿಂದ ಮೀಸಲು ಸಮಾನವಾಗಿ ಹಂಚಿಕೆಯಾಗಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಸಾಮಾನ್ಯ ವರ್ಗಗಳ ಮೀಸಲು ಲಾಭಗಳು ಬ್ರಾಹ್ಮಣರು ಅಥವಾ ಠಾಕೂರರಿಗೆ ಮಾತ್ರವಲ್ಲದೆ ಇತರ ಮುಂದುವರಿದ ಜಾತಿಗಳಿಗೂ ಸಮಾನವಾಗಿ ಹಂಚಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇಂಥದ್ಧೇ ಪ್ರಯತ್ನಗಳು ಇರಬೇಕಲ್ಲವೇ?ʼ ಎಂದು ಅವರು ಪ್ರಶ್ನಿಸಿದರು.

Read More
Next Story