ಮಠಗಳ ರಾಜಕಾರಣವೂ, ರಾಜಕಾರಣದ ಮಠಗಳೂ ಮತ್ತು ಮೂಢಾತ್ಮರೆಂಬ ನಾವುಗಳೂ!
x
ಸಾಂದರ್ಭಿಕ ಚಿತ್ರ

ಮಠಗಳ ರಾಜಕಾರಣವೂ, ರಾಜಕಾರಣದ ಮಠಗಳೂ ಮತ್ತು ಮೂಢಾತ್ಮರೆಂಬ ನಾವುಗಳೂ!

ಈಗ ನಾವಿರುವ ಕಾಲದಲ್ಲಿ ಅವರ ಪಾತ್ರ ಅದಕ್ಕಿಂತಲೂ ಭಿನ್ನವಾಗಿರಬೇಕಿತ್ತು, ಆಡಳಿತ ಕೇಂದ್ರಗಳಿಂದ ದೂರವಿದ್ದುಕೊಂಡೇ ಅಧಿಕಾರಸ್ಥರನ್ನು ಸದಾ ಒಂದು ಎಚ್ಚರಿಕೆಯಲ್ಲಿಟ್ಟಿರುವ ಪ್ರಜ್ಞೆಯ ಹಾಗಿರಬೇಕಿತ್ತು. ಆದರೆ, ಹಾಗಾಗಿಲ್ಲ. ರಾಜಕಾರಣಿಗಳು ಮಠಗಳ ಮರ್ಜಿಗೆ ಬೀಳುವುದು ಹೆಚ್ಚಾದಂತೆಲ್ಲಾ ಅಧಿಕಾರಸ್ಥರ ಮೂಗುದಾರ ಹೆಚ್ಚುಹೆಚ್ಚಾಗಿ ಮಠಗಳ ಕೈಗಳೊಳಗೆ ಗಟ್ಟಿಯಾಗುತ್ತಲೇ ಹೋಗಿದೆ.


‘ಮೂಢಾ’ತ್ಮರು ನಾವು!

ಮೂಡಾದ ಹೊಂಡಕ್ಕೆ ಖುದ್ದು ಮುಖ್ಯಮಂತ್ರಿಯೇ ಬಿದ್ದದ್ದು, ಬಿದ್ದದ್ದು ಬಯಲಾದ ಮೇಲೂ, “ಏನೀಗ? ಏನ್ತಪ್ಪು?” ಅಂದದ್ದು, ನಮಗೆ ಕೊಡಬೇಕಾದ ಅರವತ್ತೆರಡು ಕೋಟಿ ಕೊಟ್ಟುಬಿಡಬೇಕು ಅಷ್ಟೇ ಅಂತ ಗುಟುರು ಹಾಕಿದ್ದು, ನಮ್ಮ ಮೀಡಿಯಾಗಳನ್ನಾಗಲೀ ಬುದ್ಧಿಜೀವಿಗಳನ್ನಾಗಲೀ ತಲ್ಲಣಗೊಳಿಸುವುದಿಲ್ಲ.

ನಮ್ಮ ಸಂಸ್ಕೃತಿ-ಕಾಯಕಗಳ ಸಾಕ್ಷೀಪ್ರಜ್ಞೆಗಳ ಹಾಗಿರಬೇಕಿದ್ದ ಸಾಮಾಜಿಕ-ಸಾಂಸ್ಕೃತಿಕ ನಾಯಕರುಗಳನ್ನು ಒಂದು ರಾಜಕೀಯ ಪಕ್ಷದ ಅಧ್ಯಕ್ಷರು ತಮ್ಮ ಪಕ್ಷದ ಕಚೇರಿಗೇ ಕರೆಸಿಕೊಂಡು, ಅವರನ್ನು ಶಾಲಾ ಮಕ್ಕಳ ಹಾಗೆ ಕೆಳಗಡೆ ಕೂರಿಸಿ-ನಿಲ್ಲಿಸಿಕೊಂಡು, ತಾವು ಮಾತ್ರ ತಮ್ಮ ಹಿಂಬಾಲಕರುಗಳ ಜೊತೆ ವೇದಿಕೆಯಲ್ಲಿ ವಿರಾಜಮಾನರಾಗಿದ್ದನ್ನು ಕಂಡಾಗ, ನಮ್ಮ ನೆಲದ ಚಿಂತಕ ಶಿಖಾಮಣಿಗಳು ಕನಲುವುದಿಲ್ಲ.

ಒಬ್ಬ ಮಾಜಿ ಮುಖ್ಯಮಂತ್ರಿಯ ಮೇಲೆ ಪೋಕ್ಸೊದಂತಹ ಒಂದು ಗಂಭೀರ ಪ್ರಕರಣದ ಆರೋಪ ಬಂದಾಗ, ಎಫ್ಐಆರ್’ಗಳು-ಛಾರ್ಜ್’ಶೀಟ್’ಗಳು ದಾಖಲಾದಾಗ, ಅವರದೇ ಪಕ್ಷದ ನೈತಿಕ ಪೊಲೀಸರು ಒಂದಿಷ್ಟಾದರೂ ಕಸಿವಿಸಿಗೊಳ್ಳುವುದಿಲ್ಲ.

ಎಂಪಿ ಆಗಿದ್ದವನೊಬ್ಬನ ದಾರುಣ ರಸಿಕತೆಗಳು ಬೆತ್ತಲಾಗುವುದು, ಹಾಗೆ ಬೆತ್ತಲಾಗುವ ಕ್ರಿಯೆಯಲ್ಲಿ ಅದೆಷ್ಟೊಂದು ಹೆಣ್ಣುಮಕ್ಕಳ ಬದುಕು ಬೀದಿಗೆ ಬೀಳುವುದು, ಇನ್ನೊಬ್ಬ ಜನನಾಯಕನ ಸಲಿಂಗ ಶೋಷಣೆ ಹೆಡ್ಲೈನುಗಳಾಗುವುದು, ಒಬ್ಬ ಸೂಪರ್ ಸ್ಟಾರ್’ನ ಸೂಪರ್ ದಾದಾಗಿರಿಗೆ ಒಂದು ಜೀವ ಅಮಾನುಷವಾಗಿ ಬಲಿಯಾಗುವುದು… ಈ ಯಾವುವೂ ನಮ್ಮ ಯಾರ ಅಂತಃಸತ್ವವನ್ನೂ ಬಹುಕಾಲ ಕಲಕುವುದಿಲ್ಲ.

ಎಲ್ಲವೂ ಆಯಾ ಕ್ಷಣದ ರೋಚಕ ಪ್ರಸಂಗಗಳು, ಆಯಾ ಕ್ಷಣದಲ್ಲಿ ಚಪ್ಪರಿಸಿ-ಅಬ್ಬರಿಸಿ-ಪ್ರತಿಭಟಿಸಿ ಸುದ್ದಿ ಮಾಡುವಂಥವು, ಅಷ್ಟೇ. ಎಲ್ಲ ಹೋರಾಟಗಳೂ-ಪ್ರತಿಭಟನೆಗಳೂ ಬ್ಯಾನರುಗಳ-ಕೆಮರಾಗಳ-ಘೋಷಣೆಗಳ ತೋರುಗಾಣಿಕೆಗಾಗೇ ಹುಟ್ಟಿ ತೋರುಗಾಣಿಕೆಯಲ್ಲೇ ಅಸು ನೀಗುವಂಥವು.

ಯಾಕೆಂದರೆ, undoubtedly, ನಮ್ಮ ಸಾಮಾಜಿಕ ನೈತಿಕತೆ ಹಡಾಲೆದ್ದುಹೋಗಿದೆ. ವೈಯಕ್ತಿಕವಾಗಿ ನಮ್ಮೆಲ್ಲರಲ್ಲೂ ಒಂದಷ್ಟು ಸಣ್ಣಮಟ್ಟದ ನೈತಿಕ ಸಂಕೋಚಗಳು ಇರಬಹುದಾದರೂ, ಒಟ್ಟಾರೆಯಾಗಿ ನಾವು ನಮ್ಮ ಕಲೆಕ್ಟೀವ್ ಮೊರಾಲಿಟಿಯನ್ನು ಕಳೆದುಕೊಂಡಿರುವುದು ಸುಳ್ಳಲ್ಲ. ಹಾಗಿಲ್ಲದಿದ್ದರೆ ನಾವು ನಿರಂತರವಾಗಿ ಭ್ರಷ್ಟರನ್ನೇ-ದುಷ್ಟರನ್ನೇ-ಲಂಪಟರನ್ನೇ ನಮ್ಮನ್ನಾಳುವ ನಾಯಕರುಗಳನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಯಾವ ಸೀಡಿಗಳೂ-ಪೆನ್’ಡ್ರೈವ್’ಗಳೂ-ಛಾರ್ಜ್’ಶೀಟ್‌ʼಗಳೂ ಮೇಲೆ ಪ್ರಭಾವ ಬೀರದ ಹಾಗೆ ಮುಗುಮ್ಮಾಗಿರಲು ನಮಗೆ ಸಾಧ್ಯವಾಗುತ್ತಿರಲಿಲ್ಲ.

ಇದಕ್ಕೆ ಕಾರಣ, ನಮ್ಮ ವೈಯಕ್ತಿಕ ಸಂದರ್ಭ-ಸನ್ನಿವೇಶಗಳಲ್ಲಿ ಬಹುತೇಕ ಧರ್ಮಭೀರುಗಳೂ-ನೈತಿಕ ಸಂಪನ್ನರೂ ಆಗಿರುವ ನಾವು, ಲಾಭ-ನಷ್ಟಗಳ ಲೆಕ್ಕಾಚಾರ ಬಂದಾಗ ಮಾತ್ರ ಯಾವ ರಾಜಿಗೆ ಬೇಕಿದ್ದರೂ ಸಿದ್ಧರಾಗಿಬಿಡುತ್ತೇವಲ್ಲಾ ಅನ್ನುವುದು. ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯಿರುವುದು, ನಮ್ಮ ಧಾರ್ಮಿಕ ಮುಖಂಡರುಗಳಿಗೆ, ಸಾಧುಗಳಿಗೆ, ಸನ್ಯಾಸಿಗಳಿಗೆ, ಮೌಲ್ವಿಗಳಿಗೆ, ಪಾದ್ರಿಗಳಿಗೆ. ಅವರೆಲ್ಲರೂ ತಂತಮ್ಮ ಧರ್ಮವನ್ನು ಪಾಲಿಸಿಬಿಟ್ಟಿದ್ದಿದ್ದರೆ ಇವತ್ತು ಅವರೂ ಅಧಿಕಾರಕ್ಕಾಗಿ ಹಪಹಪಿಸಬೇಕಾದ ಸ್ಥಿತಿ ಇರುತ್ತಿರಲಿಲ್ಲ, ನಾವು ಮೂಢಾತ್ಮರುಗಳಾಗಿ ಇರಬೇಕಿರಲಿಲ್ಲ!

ಧರ್ಮಗುರುಗಳ ಏಕೈಕ ಕೆಲಸವೇ, ತಮ್ಮನ್ನು ನಂಬಿದವರು ದಾರಿ ತಪ್ಪದಂತೆ ನೋಡಿಕೊಳ್ಳುವುದು; ತಮ್ಮ ತಮ್ಮ ಜಾತಿ-ಸಮುದಾಯಗಳವರ ಆಚರಣೆಗಳು-ಆಚಾರಗಳು-ವಿಚಾರಗಳನ್ನು ಆಗಾಗ ಒರೆಗೆ ಹಚ್ಚುತ್ತಾ, ಅವುಗಳ ಪ್ರಸ್ತುತತೆಗಳನ್ನು ಪ್ರಶ್ನಿಸುತ್ತಾ, ಅವುಗಳನ್ನು ಕಾಲಕಾಲಕ್ಕೆ ತಮ್ಮ ಜನರ ಒಳಿತಿಗೆ ತಕ್ಕ ಹಾಗೆ ಪರಿಷ್ಕರಿಸುತ್ತಾ, ಅವರನ್ನು ಮುಂದೆ ನಡೆಸುವುದು; ಜೊತೆಗೆ, ಸದಾ ಅವರ ನಂಬಿಕೆಗೆ ಒಪ್ಪುವ ಹಾಗೆ ಬದುಕುವುದು.

ಆ ದಾರಿಯಿಂದ ಅವರಲ್ಲನೇಕರು ವಿಮುಖರಾಗಿ ಯಾವುದೋ ಕಾಲವಾಗಿದೆ. ಆದರೂ ನಾವು ಮೂಢಾತ್ಮರು ಅವರ ಪಲ್ಲಕ್ಕಿಗಳಿಗೆ ತಲೆಯಾನಿಸಿ ನಮಸ್ಕರಿಸುತ್ತಿದ್ದೇವೆ. ಬಹುಶಃ ನಾವು ಮೂಢಾತ್ಮರಾಗಿರುವುದಕ್ಕೇ ಹಾಗೆ ಮಾಡುತ್ತಿದ್ದೇವೆ, ಮತ್ತು ನಾವು ಹಾಗೆ ಮಾಡಬೇಕೆಂದೇ ನಮ್ಮನ್ನು ಮೂಢಾತ್ಮರನ್ನಾಗಿ ಇರಿಸಲಾಗಿದೆ!

ಧರ್ಮಪೀಠಗಳು ಬಹಳ ಸಲೀಸಾಗಿ ರಾಜಕಾರಣದ ಪಡಸಾಲೆಗೆ ಬಂದು ಕುಳಿತಿವೆ.

ಹಾಗೆ ನೋಡಿದರೆ, ಧರ್ಮಗುರುಗಳು ರಾಜಕಾರಣದಿಂದ ಎಂದೂ ದೂರವಿದ್ದವರೇನಲ್ಲ. ಹಿಂದೆಲ್ಲಾ ಪ್ರತಿಯೊಬ್ಬ ರಾಜನಿಗೂ, ಮಹಾರಾಜನಿಗೂ, ಚಕ್ರವರ್ತಿಗೂ, ಪಾಳೇಗಾರನಿಗೂ ಕೂಡ ಒಬ್ಬೊಬ್ಬ ರಾಜಗುರು ಇರುತ್ತಿದ್ದರಲ್ಲಾ? ಚಾಣಕ್ಯನ ಕಾಲ ಬಿಡಿ; ರಾಮಾಯಣ-ಮಹಾಭಾರತಗಳಲ್ಲೂ ವಸಿಷ್ಠ-ವಿಶ್ವಾಮಿತ್ರರಂತಹ ರಾಜಗುರುಗಳ ಪ್ರಸ್ತಾಪಗಳಿವೆ. ತೀರಾ ಈಚಿನವರೆಗೂ ನಮ್ಮ ನೆಲದ ಅನೇಕ ಮಠಗಳು ಆ ಪಾತ್ರ ನಿರ್ವಹಿಸಿದ ದಾಖಲೆಗಳಿವೆ. ಆದರದು ರಾಜಾಡಳಿತದ ಕಾಲ. ಅಲ್ಲೂ ಕೂಡ, ಧರ್ಮಗುರುಗಳಿಗಿದ್ದದ್ದು ಕೇವಲ ರಾಜನಿಗೆ ಮಾರ್ಗದರ್ಶನ ಮಾಡುವ ಪಾತ್ರ ಮಾತ್ರ; ತಮ್ಮ ಹಿತಕ್ಕಾಗಿ ರಾಜನನ್ನೇ ಬಳಸಿಕೊಳ್ಳುವ ಅಥವಾ ಬೆದರಿಸುವ ಪಾತ್ರವಲ್ಲ.

ಈಗ ನಾವಿರುವ ಕಾಲದಲ್ಲಿ ಅವರ ಪಾತ್ರ ಅದಕ್ಕಿಂತಲೂ ಭಿನ್ನವಾಗಿರಬೇಕಿತ್ತು, ಆಡಳಿತ ಕೇಂದ್ರಗಳಿಂದ ದೂರವಿದ್ದುಕೊಂಡೇ ಅಧಿಕಾರಸ್ಥರನ್ನು ಸದಾ ಒಂದು ಎಚ್ಚರಿಕೆಯಲ್ಲಿಟ್ಟಿರುವ ಪ್ರಜ್ಞೆಯ ಹಾಗಿರಬೇಕಿತ್ತು. ಆದರೆ, ಹಾಗಾಗಿಲ್ಲ. ರಾಜಕಾರಣಿಗಳು ಮಠಗಳ ಮರ್ಜಿಗೆ ಬೀಳುವುದು ಹೆಚ್ಚಾದಂತೆಲ್ಲಾ ಅಧಿಕಾರಸ್ಥರ ಮೂಗುದಾರ ಹೆಚ್ಚುಹೆಚ್ಚಾಗಿ ಮಠಗಳ ಕೈಗಳೊಳಗೆ ಗಟ್ಟಿಯಾಗುತ್ತಲೇ ಹೋಗಿದೆ.

ಹಾಗಾಗೇ, ಕುಮಾರಸ್ವಾಮಿಯವರ ಸರ್ಕಾರ ಉರುಳಬಹುದೇನೋ ಅನ್ನುವ ಸನ್ನಿವೇಶದಲ್ಲಿ ಅವರ ಸಮುದಾಯದ ಹಲವಾರು ಸ್ವಾಮೀಜಿಗಳು “ಉರುಳಿಸಿದರೆ ಹುಷಾರ್” ಅನ್ನುವಂಥ ಬಹಿರಂಗ ಎಚ್ಚರಿಕೆ ಕೊಡುವುದು ಸಾಧ್ಯವಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಕೂತಿದ್ದ ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಗುರು ವಚನಾನಂದ ಅವರು “ನಮ್ಮ ಸಮುದಾಯದ ಕನಿಷ್ಠ ಮೂವರನ್ನಾದರೂ ಮಿನಿಸ್ಟರ್ ಮಾಡದಿದ್ದರೆ ನಿಮಗೆ ನಮ್ಮ ಸಮುದಾಯದ ಬೆಂಬಲ ಇರುವುದಿಲ್ಲ” ಅನ್ನುವಂಥ ಬೆದರಿಕೆ ಹಾಕುವುದು ಸಾಧ್ಯವಾಗುತ್ತದೆ. ನಮ್ಮ ಮಾತು ಕೇಳದಿದ್ದರೆ ನಿಮ್ಮ ಸೋಲು ಶತಃಸಿದ್ದ ಅನ್ನುವ ರೀತಿಯಲ್ಲಿ ಜಯಮೃತ್ಯುಂಜಯ ಸ್ವಾಮಿಯಂಥವರು ಸವಾಲು ಹಾಕುವುದು ಸಾಧ್ಯವಾಗುತ್ತದೆ. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಕಣ್ಣೀರಿಟ್ಟಾಗ, ದಿಂಗಾಲೇಶ್ವರ ಸ್ವಾಮಿಯವರು “ಈ ಕಣ್ಣೀರೇ ಬಿಜೆಪಿಗೆ ಶಾಪವಾಗುತ್ತದೆ” ಅಂತ ಕೆಂಡ ಕಾರುವುದು ಸಾಧ್ಯವಾಗುತ್ತದೆ.

ಇದೀಗ, ಮೊನ್ನೆಮೊನ್ನೆ ಒಕ್ಕಲಿಗ ಸಮಾಜದ ಚಂದ್ರಶೇಖರ ಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ — ನೇರವಾಗೇ, ಯಾವುದೇ ಭಿಡೆಯೂ ಇಲ್ಲದೆ — ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಒಕ್ಕಲಿಗ ಸಮಾಜದವರೊಬ್ಬರು ಮುಖ್ಯಮಂತ್ರಿಯಾಗುವುದಕ್ಕೆ ಅವಕಾಶ ಮಾಡಿಕೊಡಬೇಕು ಅಂತ ಕೇಳಿದರಲ್ಲಾ? ಅದರೊಂದಿಗೆ ರಾಜಕಾರಣದ ಆಟಗಳು ಯಾವುದೇ ಮುಲಾಜು-ಮುಖವಾಡಗಳೂ ಇಲ್ಲದಂತೆ ಪೂರ್ತಿಯಾಗಿ ಮಠ ಸೇರಿದ ಹಾಗಾಗಿದೆ. ಅವರು ಹಾಗೆ ಹೇಳಿದ ಬೆನ್ನಿಗೇ ಉಜ್ಜಯಿನಿ ಪೀಠಾಧ್ಯಕ್ಷರೂ ಸರ್ರನೆ ಮಧ್ಯಪ್ರವೇಶ ಮಾಡಿ, ಮುಖ್ಯಮಂತ್ರಿ ಬದಲಾಗುವುದಿದ್ದರೆ ಆ ಗದ್ದುಗೆ ತಮ್ಮ ಲಿಂಗಾಯತ ಸಮಾಜದವರೇ ಯಾರಾದರೊಬ್ಬರಿಗೆ ಸಿಗಲಿ ಅಂದರಲ್ಲಾ, ಅಲ್ಲಿಗೆ ಎಲ್ಲವೂ ಖುಲ್ಲಂಖುಲ್ಲಾ.

ಆಫ್’ಕೋರ್ಸ್, ಮಠಮಾನ್ಯಗಳಾಗಲೀ-ಧರ್ಮಾಧಿಕಾರಿಗಳಾಗಲೀ-ಸ್ವಾಮೀಜಿಗಳಾಗಲೀ-ಮೌಲ್ವಿಗಳಾಗಲೀ-ಪಾದ್ರಿಗಳಾಗಲೀ ತಮ್ಮದೇ ಸಮಾಜದವರೊಬ್ಬರು ಅಧಿಕಾರಕ್ಕೇರಲಿ ಅಂತ ಬಯಸುವುದು ತಪ್ಪಲ್ಲವೇನೋ. Especially, ಅವರ ಪಾತ್ರವೀಗ ಕೇವಲ ಧರ್ಮಾಚರಣೆಗಷ್ಟೇ ಸೀಮಿತವಾಗಿಲ್ಲದಿರುವುದರಿಂದ, ಬದಲಾದ ಕಾಲಮಾನದಲ್ಲಿ ಅದನ್ನು ನಾವು ಸಹಜ ಅಂದುಕೊಳ್ಳಬಹುದು. ಆದರೆ, ಅದಕ್ಕಾಗಿ ಒತ್ತಾಯಿಸುವುದು-ಬೆದರಿಸುವುದು-ಶಾಪ ಹಾಕುವುದು — ಇವೆಲ್ಲಾ ನಿಜಕ್ಕೂ ನಮ್ಮನ್ನು ಕಂಗಾಲು ಮಾಡಬೇಕಾದ ಬೆಳವಣಿಗೆಗಳು.

ಹಿಂದೊಮ್ಮೆ ನಮ್ಮ ರಾಜ್ಯದ ಪ್ರಪ್ರಥಮ ಲಿಂಗಾಯತ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರೊಂದಿಗೆ ಮುನಿಸಿಕೊಂಡಿದ್ದ ಸಿರಿಗೆರೆ ಮಠಾಧೀಶರು, ಅವರಿಗೆ ಸವಾಲು ಹಾಕಿ-ಜಿದ್ದಿಗೆ ಬಿದ್ದು ಅವರನ್ನು ತಮ್ಮ ಒಬ್ಬ ಅನಾಮಧೇಯ ಅಭ್ಯರ್ಥಿಯೆದುರು ಸೋಲಿಸಿದ್ದರಿಂದ ಶುರುವಾದ ಧರ್ಮಕಾರಣ, ಇವತ್ತು ಇಲ್ಲಿಗೆ ಬಂದು ಮುಟ್ಟಿದೆ. ಜಾತಿಗಣತಿ ವಿಚಾರ, ಮೀಸಲಾತಿ ವಿಚಾರ, ಎಜುಕೇಷನ್ ಪಾಲಿಸಿ ವಿಚಾರ, ಕ್ಯಾಬಿನೆಟ್ ಆಯ್ಕೆ ವಿಚಾರ, ಬಜೆಟ್ ಅನುದಾನಗಳ ವಿಚಾರ — ಹೀಗೆ ಎಲ್ಲದರಲ್ಲೂ ಇವತ್ತು ಮಠಗಳ ಹಾಗೂ ಮಠಾಧೀಶರುಗಳ ಪ್ರಭಾವ ಇದೆಯೆಂದರೆ ಅದು ಖಂಡಿತಾ ಅತಿಶಯೋಕ್ತಿಯಲ್ಲ. ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿಯವರನ್ನೂ ಎಸ್ಸೆಮ್ ಕೃಷ್ಣ ಅವರನ್ನೂ ಕೇಳಿದರೆ ರೋಚಕ ಕಥೆಗಳೇ ಸಿಕ್ಕಾವು!

ಈಗಿರುವ ಪ್ರಶ್ನೆ, ಹೀಗೇ ಆದರೆ ಮುಂದೇನು ಕಥೆ ಅನ್ನುವುದು.

ಮುಖ್ಯಮಂತ್ರಿ ಹುದ್ದೆ ಅನ್ನುವುದು ಸಾಂವಿಧಾನಿಕವಾದದ್ದು. ಅದು, ಎಲ್ಲ ಧರ್ಮಗಳನ್ನೂ-ಜಾತಿಗಳನ್ನೂ ಮೀರಿದ್ದು; ಯಾವುದೇ ಜಾತಿಯ ಅಥವಾ ಧರ್ಮದ ಅಂಕೆಯಲ್ಲಿ ಇರಬಾರದಂಥದ್ದು. ಅದೇ ಇವತ್ತು ಹೀಗೆ ಮಠಾಧೀಶರುಗಳ ಆಗ್ರಹಗಳಿಗೆ ಈಡಾಗುವ ಸ್ಥಿತಿ ಬಂದಿದೆಯೆಂದರೆ, ಅದಕ್ಕೆ ಬಹುಮುಖ್ಯ ಕಾರಣ, ನಮ್ಮ ರಾಜಕಾರಣದ ವೈಖರಿಯೇ.

ಮರ್ಜಿಯಲ್ಲಿದ್ದವರು ಭರ್ಜಿಗೆ ಬೆದರಲೇ ಬೇಕಲ್ಲಾ?

ನೈತಿಕ ಶಕ್ತಿ ಕಳೆದುಕೊಂಡವರು ನೈತಿಕ ಪ್ರಶ್ನೆ ಕೇಳಲಾರರು, ತಪ್ಪನ್ನು ತಪ್ಪೆಂದು ಹೇಳಲಾರರು.

ಇವತ್ತು ನಮ್ಮ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಚಿಕ್ಕ-ದೊಡ್ಡ ಮಠಾಧೀಶರುಗಳಿದ್ದಾರೆ! ಜೊತೆಗೆ ಬೇರೆಬೇರೆ ಧರ್ಮದ ನೂರಾರು ಧರ್ಮಾಧಿಕಾರಿಗಳು ಬೇರೆ. ಎಲ್ಲರೂ ಪಟ್ಟಾಗಿ ಕೂತು ಪಾಲು ಕೇಳತೊಡಗಿದರೆ ಗತಿಯೇನು? ಅಥವಾ, ಬೆದರಿಸುವ—ಆಗ್ರಹಿಸುವ ಶಕ್ತಿಯಿರುವುದು ಕೆಲವೇ ಸಮುದಾಯಗಳ ಮಠಾಧೀಶರುಗಳಿಗೆ ಮಾತ್ರವಾ? ಪಾಲೆಲ್ಲಾ ಅವರಿಗೇ ಹೋಗುವ ಹಾಗೆ ಆಗಿ, ಡೆಮಾಕ್ರಟಿಕ್ ಆಯ್ಕೆಯೆಂಬುದು ಅಣಕವಾಗಿ ಹೋಗುವ ಹಾಗಾದರೆ, ಉಳಿದವರ ಪಾಡೇನು? ಜಾತಿಜಾತಿಗಳ ಮಠಾಧೀಶರುಗಳೇ ಜಾತಿವಾರು ವಿಭಜನೆಯ ಸೇನಾಪತಿಗಳಾಗಿ ಹೋಗುವ ಕಲ್ಪನೆಯಿದೆಯಲ್ಲಾ, ಅದಕ್ಕಿಂತ ಅಪಾಯಕಾರಿ-ಆಘಾತಕಾರಿ ಸಾಧ್ಯತೆ ಇನ್ನೇನೂ ಇರಲಾರದು.

ಬಹುಶಃ, ಜಾತಿ ಲೆಕ್ಕಾಚಾರಗಳಲ್ಲೇ ಎಲೆಕ್ಷನ್ ಟಿಕೇಟುಗಳು-ಸಾಂವಿಧಾನಿಕ ಹುದ್ದೆಯ ಆಯ್ಕೆಗಳೂ ನಡೆಯುತ್ತಿರುವುದನ್ನು ನೋಡಿಯೂ ನಾವಿನ್ನೂ ಡೆಮಾಕ್ರಟಿಕ್ ಆಯ್ಕೆಗಳ ಬಗ್ಗೆ ಮಾತಾಡುವುದರಿಂದಲೇ ನಾವು ಮೂಢಾತ್ಮರೋ ಏನೋ! ಮುಡಾ ಹಗರಣದಿಂದಲೋ-ರೇಜಿಗೆಯಾಗುವಷ್ಟು ಆಸ್ತಿ ಮಾಡಿಕೊಂಡು ಸಿಬಿಐ ಕುಣಿಕೆಗೆ ಸಿಲುಕಿಕೊಂಡಿರುವುದರಿಂದಲೋ-ಕ್ರಿಮಿನಲ್ ಕೇಸುಗಳಿಂದಲೋ-ಅಸಹ್ಯಕರ ವಿಡಿಯೋಗಳಲ್ಲಿ ಬೆತ್ತಲಾಗಿದ್ದರಿಂದಲೋ ಯಾರಾದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಅಥವಾ ಸಾರ್ವಜನಿಕ ಜೀವನದಿಂದ ದೂರವಾಗುತ್ತಾರೆ ಅಂದುಕೊಳ್ಳುವುದಿದೆಯಲ್ಲಾ, ಅದೂ ಮೂಢಾತ್ಮರ ಲಕ್ಷಣವೇ ಏನೋ!

ಅರ್ಜೆಂಟಾಗಿ ನಮ್ಮಂಥ ಮೂಢಾತ್ಮರಿಗೆ ದಾರಿ ತೋರಿಸುವ ಮಠಗಳು ಬೇಕಿವೆ!


(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು.ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)


Read More
Next Story