Subir Bhaumik

ದೋಸ್ತಿಯ ಬಿಗಿ ಅಪ್ಪುಗೆಯಲ್ಲಿ ಚಡಪಡಿಕೆ: ಅಮೆರಿಕದ ಸ್ನೇಹಕ್ಕೆ ಬೆಲೆ ತೆರುತ್ತಿರುವ ಭಾರತ


ದೋಸ್ತಿಯ ಬಿಗಿ ಅಪ್ಪುಗೆಯಲ್ಲಿ ಚಡಪಡಿಕೆ: ಅಮೆರಿಕದ ಸ್ನೇಹಕ್ಕೆ ಬೆಲೆ ತೆರುತ್ತಿರುವ ಭಾರತ
x
ಈ ಶತಮಾನದಲ್ಲಿ ಅಮೆರಿಕದ ಜೊತೆಗೆ ನಿಕಟ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿರುವ ಭಾರತವು ಅಮೆರಿಕದ ಶೀತಲ, ಏಕಪಕ್ಷೀಯ ಮತ್ತು ವ್ಯಾವಹಾರಿಕ ರಾಜಕಾರಣದ ಬಲಿಪಶುವಾಗುತ್ತಿರುವುದು ನಿನ್ನೆ-ಮೊನ್ನೆಯದಲ್ಲ. ಫೈಲ್ ಫೊಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡುತ್ತಿದ್ದಾರೆ.
Click the Play button to hear this message in audio format

ನಮ್ಮ ತೈಲ ಮಾತ್ರ ಖರೀದಿಸಿ, ರಷ್ಯಾದ್ದು ಕೈಬಿಡಿ, ಮಾರುಕಟ್ಟೆ ಮುಕ್ತಗೊಳಿಸಿ... ಇದು ಅಮೆರಿಕದ ಬಲಪ್ರಯೋಗದ ಅಸ್ತ್ರ. ಆದರೆ ಚೀನಾಕ್ಕೆ ಮುಕ್ತ ಅವಕಾಶ ಸಿಕ್ಕಿರುವುದರಿಂದ ಭಾರತಕ್ಕೆ ಒತ್ತಡವಾಗಿದೆ.

ಅಮೆರಿಕದ ಪರವಾಗಿ ವಿದೇಶಾಂಗ ಕಾರ್ಯದರ್ಶಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಹೆನ್ರಿ ಕಿಸ್ಸಿಂಜರ್ ಅವರ ಈ ಭವಿಷ್ಯವಾಣಿಯನ್ನು ಒಮ್ಮೆ ಸ್ಮರಿಸಿಕೊಳ್ಳಿ; “ಅಮೆರಿಕದ ಶತ್ರುವಾಗಿರುವುದು ಅಪಾಯಕಾರಿ ಆಗಿರಬಹುದು. ಆದರೆ ಅಮೆರಿಕದ ಸ್ನೇಹಿತನಾಗಿರುವುದು ಅತ್ಯಂತ ಮಾರಕ,”

ಈ ಶತಮಾನದಲ್ಲಿ ಅಮೆರಿಕದ ಜೊತೆಗೆ ನಿಕಟವಾದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿರುವ ಭಾರತವು ಹೇಗೆ ಆ ದೇಶದ ಶೀತಲ, ಏಕಪಕ್ಷೀಯ ಮತ್ತು ವ್ಯಾವಹಾರಿಕ ರಾಜಕಾರಣದ ಬಲಿಪಶುವಾಗುತ್ತಿದೆ ಎಂಬುದನ್ನು ನಿರಂತರವಾಗಿ ಕಾಣುತ್ತಿದ್ದೇವೆ.

ಪಾಕಿಸ್ತಾನಿ ಮಿಲಿಟರಿ ಸರ್ವಾಧಿಕಾರಿಗಳನ್ನು ಬೆಂಬಲಿಸಿದ ಅಮೆರಿಕವನ್ನು ಏಕಾಂಗಿ ಶಕ್ತಿ ಅಂತಲೂ, ಭಾರತೀಯ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ರಷ್ಯಾವನ್ನು ಹಳೆಯ ವಿಶ್ವಾಸಾರ್ಹ ಸ್ನೇಹಿತ ಎಂದೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಣ್ಣಿಸಿದ್ದಾರೆ. ಇದು ಅಮೆರಿಕದ ಜೊತೆ ಸ್ನೇಹ ಬೆಳೆಸುವ ತಂತ್ರ ಫಲಿಸಿಲ್ಲ ಎಂಬುದನ್ನು ಭಾರತ ಒಪ್ಪಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ನಮ್ಮಿಂದಲೇ ಖರೀದಿಸಿ ತೈಲ: ಅಮೆರಿಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವತ್ತು ವೆನೆಜುವೆಲಾದ ವಿಶಾಲ ತೈಲ ನಿಕ್ಷೇಪಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರೋ ಅಂದಿನಿಂದ ಅಮೆರಿಕ ಮೂಲಗಳಿಂದಲೇ ಹೆಚ್ಚಿನ ಇಂಧನ ಖರೀದಿಸಬೇಕು ಮತ್ತು ರಷ್ಯಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕು ಎಂದು ಭಾರತದ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ.

ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದು ಅಮೆರಿಕದ ಜೈಲಿನಲ್ಲೇ ಇರಿಸಿದ ಬಳಿಕ ಅಮೆರಿಕದ ತೀವ್ರ ಒತ್ತಡಕ್ಕೆ ಮಣಿದು ಭಾರತವು ವೆನೆಜುವೆಲಾದ ತೈಲಕ್ಕೆ ಅತಿದೊಡ್ಡ ರಫ್ತು ಗಮ್ಯಸ್ಥಾನವಾಗಿ ಮಾರ್ಪಟ್ಟಿದೆ. ನವವಸಾಹತುಶಾಹಿ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವ ಈ ಸ್ಪಷ್ಟ ಉದಾಹರಣೆಯನ್ನು ಅನೇಕರು ʼಟ್ರಂಪ್ ಮಹಾನ್ ತೈಲ ದರೋಡೆʼ ಎಂದು ಬಣ್ಣಿಸಿದ್ದಾರೆ.

ವೆನೆಜುವೆಲಾದ ಕಚ್ಚಾ ತೈಲವನ್ನು ಭಾರತದಂತಹ ದೇಶಗಳಿಗೆ ರಫ್ತು ಮಾಡುವುದರಿಂದ ಅಮೆರಿಕವೇ ಪ್ರಾಥಮಿಕ ಆರ್ಥಿಕ ಲಾಭ ಪಡೆದುಕೊಳ್ಳುತ್ತಿದೆ. ಅಮೆರಿಕದ ನಿರ್ಬಂಧಗಳು ಮತ್ತು ಪರವಾನಗಿ ವ್ಯವಸ್ಥೆಯ ಅಡಿಯಲ್ಲಿ ವೆನೆಜುವೆಲಾದ ತೈಲ ರಫ್ತಿನಿಂದ ಬರುವ ಎಲ್ಲ ಆದಾಯ, ರಾಯಧನ, ಒಕ್ಕೂಟ ತೆರಿಗೆಗಳು ಮತ್ತು ಪ್ರತಿ ಬ್ಯಾರಲ್ಗೆ ನಿಗದಿಯಾದ ಉತ್ಪಾದನಾ ಶುಲ್ಕಗಳು (ಭಾರತೀಯ ತೈಲ ಶುದ್ಧೀಕರಣ ಘಟಕಗಳಿಗೆ ಮಾರಾಟ ಮಾಡುವ ಸಂಸ್ಥೆಗಳ ಮಾರಾಟವೂ ಸೇರಿ) ಅಮೆರಿಕದ ಖಜಾನೆ ಇಲಾಖೆಯು ನಿರ್ವಹಿಸುವ ಖಾತೆಗಳಿಗೆ ಜಮೆಯಾಗುತ್ತವೆ. ಆದಾಯದ ಪಾಲನ್ನು ವೆನೆಜುವೆಲಾಗೆ ಹೇಗೆ ಮತ್ತು ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಕೂಡ ಅಮೆರಿಕವೇ ಆಗಿದೆ.

ಆದರೂ ಸಮಾಧಾನವಿಲ್ಲ ಅಮೆರಿಕಕ್ಕೆ

ಹಾಗಿದ್ದೂ ಅಮೆರಿಕ ತೃಪ್ತನಾದಂತೆ ಕಾಣುತ್ತಿಲ್ಲ. ಅಮೆರಿಕ ಮೂಲದ ಮತ್ತು ಅಮೆರಿಕದ ನಿಯಂತ್ರಣದಲ್ಲಿ ಇರುವ ಇಂಧನ ಸರಬರಾಜುಗಳ ಮೇಲೆ ಭಾರತದ ಹೆಚ್ಚುತ್ತಿರುವ ಅವಲಂಬನೆ ಅದಕ್ಕೆ ಸಮಾಧಾನ ತಂದಿಲ್ಲ. ಭಾರತವು ರಷ್ಯಾದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಬಹುತೇಕ ಪೂರ್ತಿಯಾಗಿ ಅಮೆರಿಕ ನಿಯಂತ್ರಿತ ಇಂಧನಕ್ಕೆ ಬದಲಾವಣೆ ಹೊಂದುವಂತೆ ಭಾರತವನ್ನು ಒತ್ತಾಯಿಸಲು ಅಮೆರಿಕವು ಹೊಸದಾಗಿ ʼಲಿಂಡ್ಸೆ ಒ ಗ್ರಹಮ್ ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧ ಕಾಯ್ದೆʼಯನ್ನು ಬಳಸುವ ಇರಾದೆ ಹೊಂದಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾದ ತೈಲ ಆಮದಿನ ವಿಚಾರವನ್ನು ಮುಂದಿಟ್ಟುಕೊಂಡು ಭಾರತದ ಮೇಲೆ ಒತ್ತಡ ಹೇರಲು ವ್ಯಾಪಕ ನಿರ್ಬಂಧಗಳ ಬೆದರಿಕೆ ಒಡ್ಡುವ ಮೂಲಕ ಭಾರತ-ರಷ್ಯಾ ಕಾರ್ಯತಂತ್ರದ ಸಂಬಂಧವನ್ನು ದುರ್ಬಲಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿರುವಂತೆ ತೋರುತ್ತದೆ. ಇದು ಭಾರತವು ರಷ್ಯಾದ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆಯನ್ನು ಕ್ರಮೇಣ ಕೊನೆಗೊಳಿಸುವುದನ್ನು ಮತ್ತು ಅಮೆರಿಕದ ಮಿಲಿಟರಿ ಹಾರ್ಡ್ವೇರ್ ಮೇಲಿನ ಭಾರತದ ಅವಲಂಬನೆಯು ಬೆಳೆಯಬೇಕು ಎಂಬ ಇರಾದೆ ಹೊಂದಿದಂತೆ ಕಾಣುತ್ತಿದೆ.

ತೈಲಾಗಾರಗಳ ನಿರ್ವಹಣೆ, ತಗ್ಗಿದ ರಿಯಾಯಿತಿಗಳು ಮತ್ತು ಹೊಸ ಅಮೆರಿಕ ನಿರ್ಬಂಧಗಳಿಂದ ಉಂಟಾದ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಒತ್ತಡದಿಂದಾಗಿ 2026ರಲ್ಲಿ ಭಾರತದ ರಷ್ಯಾದ ತೈಲ ಖರೀದಿಗಳು ಕಾಲಕಾಲಕ್ಕೆ ಇಳಿಕೆ ಕಂಡಿವೆ ಮತ್ತು ಒಟ್ಟಾರೆಯಾಗಿ ಮಿತಗೊಂಡಿವೆ. ನಯಾರಾ ಎನರ್ಜಿಯ ವಡಿನಾರ್ ಘಟಕದಂತಹ ಪ್ರಮುಖ ತೈಲಾಗಾರಗಳಲ್ಲಿನ ಯೋಜಿತ ನಿರ್ವಹಣೆಯಿಂದಾಗಿ, 2026ರ ಜನವರಿಯಲ್ಲಿ ಆಮದು ಪ್ರಮಾಣ ಕುಸಿಯಿತು ಮತ್ತು 2025ರ ಏಪ್ರಿಲ್ನಲ್ಲಿ ಶೇ. 15 ಕ್ಕಿಂತ ಹೆಚ್ಚು ಕುಸಿದವು. ರಷ್ಯಾದ ಕಚ್ಚಾ ತೈಲದ ಖರೀರಿಯು ಜುಲೈನಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಚೇತರಿಸಿಕೊಂಡಿತು, ಆದರೆ ತೈಲಾಗಾರಗಳು ಎಚ್ಚರಿಕೆಯಿಂದ ಮೂಲಗಳನ್ನು ಇನ್ನಷ್ಟು ವಿಸ್ತರಿದ ಕಾರಣ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮತ್ತೆ ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದವು.

ತಲೆಯ ಮೇಲೆ ಡಾಮೊಕ್ಲಿಸನ ಕತ್ತಿ

ಬ್ರೆಂಟ್ ಕಚ್ಚಾ ತೈಲಕ್ಕೆ ಹೋಲಿಸಿದರೆ ರಷ್ಯಾದ ಯುರಲ್ಸ್ ತೈಲದ ಬೆಲೆಯಲ್ಲಿ ಅನುಕೂಲವು ಹಿಂದಿನ ಗರಿಷ್ಠ ಮಟ್ಟದಿಂದ ಗಮನಾರ್ಹವಾಗಿ ಕಡಿಮೆಯಾಗಲು ರಿಯಾಯಿತಿಯಲ್ಲಿನ ಇಳಿಕೆಯೂ ಒಂದು ಕಾರಣವಾಗಿದೆ. ಆದರೆ ಭಾರತವು ರಷ್ಯಾದ ಕಚ್ಚಾ ತೈಲದಿಂದ ದೂರ ಸರಿಯಲು ಮುಖ್ಯ ಕಾರಣವೆಂದರೆ ಅಮೆರಿಕದ ಭಾರೀ ಒತ್ತಡ ಎಂದು ತೈಲ ಉದ್ಯಮದ ಮೂಲಗಳು ಹೇಳುತ್ತವೆ. ವಿಶೇಷವಾಗಿ ಪ್ರಮುಖ ಪೆಟ್ರೋಲಿಯಂ ಖರೀದಿದಾರರನ್ನು, ಅದರಲ್ಲೂ ವಿಶೇಷವಾಗಿ ಭಾರತವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಸಹಿ ಹಾಕಲಾದ ಎಸ್ಆರ್ಐಎ (SRIA) ರೂಪದಲ್ಲಿ ದೆಹಲಿಯ ಮೇಲೆ 'ಡಾಮೋಕ್ಲಿಸ್ ಕತ್ತಿ' ತೂಗುತ್ತಿದೆ.

ಚೀನಾವೇ ರಷ್ಯಾದ ತೈಲದ ಅತಿ ದೊಡ್ಡ ಖರೀದಿದಾರನಾಗಿದ್ದರೂ, ಟ್ರಂಪ್ ಆಡಳಿತವು ಅದನ್ನು ಹೆಚ್ಚಾಗಿ ಕೈಬಿಟ್ಟಿದೆ. ಅಮೆರಿಕ ಮತ್ತು ಚೀನಾ ಈಗ ಬುಸಾನ್ ಒಪ್ಪಂದವನ್ನು ಜನವರಿ 2027 ರವರೆಗೆ ವಿಸ್ತರಿಸಿದ್ದು, ಇದು ರಾಷ್ಟ್ರೀಯ ಭದ್ರತೆಯ ವಿನಾಯಿತಿಗಳ ಮೂಲಕ ಬೀಜಿಂಗ್ಗೆ ರಕ್ಷಣೆ ನೀಡುತ್ತದೆ.

ಚೀನಾದಲ್ಲಿ ತನ್ನ ಎರಡನೇ ಅಧ್ಯಕ್ಷತೆಯ ಆರಂಭಿಕ ದಿನಗಳಲ್ಲಿ ತೋರಿಸಿದಂತೆ, ತನ್ನ ರೇರ್ ಅರ್ಥ್ ಪೂರೈಕೆ ಸರಪಳಿಯನ್ನು ಕಡಿತಗೊಳಿಸಬಹುದು ಎಂಬ ಭಯ ಟ್ರಂಪ್ ಅವರಿಗಿದೆ. ಇದು ಭಾರತವನ್ನು ಅಮೆರಿಕದ ಹೊಸ ಕಾನೂನಾದ ಎಸ್ಆರ್ಐಎನ ಮುಖ್ಯ ಬಲಿಪಶುವನ್ನಾಗಿ ಮಾಡುತ್ತದೆ. ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ, ಭಾರತ ಸೇರಿದಂತೆ, ಅಮೆರಿಕ ಶೇ. 100 ರಷ್ಟು ಸುಂಕವನ್ನು ವಿಧಿಸಬಹುದು ಎಂದು ಇಂಧನ ವಿಶ್ಲೇಷಕರು ಆತಂಕದಿಂದ ನುಡಿಯುತ್ತಾರೆ.

ಅಮೆರಿಕದ ವ್ಯಾಪಾರಿ ಲೆಕ್ಕಾಚಾರ

ಅಮೆರಿಕದ ಪ್ರಾಥಮಿಕ ಉದ್ದೇಶವು ಆದಾಯವನ್ನು ಗಳಿಸುವುದಾಗಲಿ ಅಥವಾ ಭಾರತೀಯ ಸರಕುಗಳಿಂದ ದೇಶೀಯ ಉದ್ಯಮವನ್ನು ರಕ್ಷಿಸುವುದಾಗಲಿ ಅಲ್ಲ. ವಾಸ್ತವವಾಗಿ ಇದು, ರಷ್ಯಾದ ತೈಲ ಆಮದನ್ನು ಕಡಿಮೆ ಮಾಡಲು ಮತ್ತು ತೀವ್ರ ಅಸಮವಾಗಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತವನ್ನು ಒತ್ತಾಯಿಸಲು ತೀವ್ರವಾದ ತೈಲ ಸುಂಕಗಳ ಬಲವನ್ನು ಬಳಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ.

ಅಮೆರಿಕದ ಕೃಷಿ ಉತ್ಪನ್ನಗಳ ರಫ್ತಿಗಾಗಿ ವಿಶಾಲವಾದ ಭಾರತೀಯ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಮತ್ತು ಅಮೆರಿಕ ಮೂಲದ ಮಿಲಿಟರಿ ಹಾರ್ಡ್ವೇರ್ನ್ನು ಖರೀದಿಸುವಂತೆ ಭಾರತವನ್ನು ಒತ್ತಾಯಿಸಲು, ಪ್ರಮುಖ ವ್ಯಾಪಾರ ರಿಯಾಯಿತಿಗಳನ್ನು ಪಡೆದುಕೊಳ್ಳಲು ಶೇ. 100 ರಷ್ಟು ಸುಂಕದ ಬೆದರಿಕೆ ಬಳಸಿಕೊಳ್ಳುವುದು ಅಮೆರಿಕದ ಉದ್ದೇಶವಾಗಿದೆ.

ಯುದ್ಧ ಡ್ರೋನ್ ಅಭಿವೃದ್ಧಿ

ಭಾರತದ ಯುದ್ಧ ಡ್ರೋನ್ ಮಾರುಕಟ್ಟೆಯಲ್ಲಿ ದೊಡ್ಡ ಉಪಸ್ಥಿತಿಯನ್ನು ಹೊಂದಿರುವ ಮತ್ತು ಈಗ ಪಾಕಿಸ್ತಾನಿ ಸೇನೆಯ ಯುದ್ಧದ ಡ್ರೋನ್ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ಕೈಜೋಡಿಸುತ್ತಿರುವ ಅಮೆರಿಕದ ರಕ್ಷಣಾ ಸಂಸ್ಥೆ 'ಪವರಸ್' ಕುರಿತ ಇತ್ತೀಚಿಗೆ ಬಹಿರಂಗವಾಗಿರುವ ಸಂಗತಿಗಳು ನಿಜಕ್ಕೂ ಕಳವಳಕಾರಿಯಾಗಿದೆ. ಸಮರ ಭೂಮಿಯ ಅಪಾರ ಅನುಭವ ಪಡೆದಿರುವ ಉಕ್ರೇನಿಯನ್ ಡ್ರೋನ್ ತಂತ್ರಜ್ಞರನ್ನು ಹೊಂದಿರುವ ಈ ಸಂಸ್ಥೆಯ ಹೂಡಿಕೆದಾರರ ಪಟ್ಟಿಯಲ್ಲಿ ಟ್ರಂಪ್ ಅವರ ಪುತ್ರರಾದ ಡೊನಾಲ್ಡ್ ಜೂನಿಯರ್ ಮತ್ತು ಎರಿಕ್ ಕೂಡ ಇದ್ದಾರೆ.

ಅಮೆರಿಕದ ಮಿಲಿಟರಿ ಹಾರ್ಡ್ವೇರ್ ಖರೀದಿಸಲು ಅಮೆರಿಕದ ಒತ್ತಡಕ್ಕೆ ಭಾರತವನ್ನು ದುರ್ಬಲಗೊಳಿಸುವ ಹಾಗೂ ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಟರ್ಕಿಶ್-ಪಾಕಿಸ್ತಾನಿ ಪ್ರಯತ್ನಗಳಿಗೆ ಅಮೆರಿಕದ 'ಡೀಪ್ ಸ್ಟೇಟ್' ನಿರಂತರ ಬೆಂಬಲ ನೀಡುತ್ತಿರುವುದನ್ನು ಇದು ಬಹಿರಂಗಪಡಿಸುತ್ತದೆ. ಚೀನಾವನ್ನು ಜಿ-2ನಲ್ಲಿ ಮಹಾಶಕ್ತಿಯ ಸಮಾನ ಜೋಡಿಯಾಗಿ ಟ್ರಂಪ್ ಪರಿಗಣಿಸುತ್ತಿರುವಾಗ, ಚೀನಾದೊಂದಿಗೆ ಮುಖಾಮುಖಿಯಾದ ಸಂದರ್ಭದಲ್ಲಿ ಭಾರತವು ಅಮೆರಿಕದಿಂದ ಯಾವುದೇ ನೈಜ ಬೆಂಬಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಚೀನಾದೊಂದಿಗೆ ಸಂಬಂಧವನ್ನು ಸಾಮಾನ್ಯಗೊಳಿಸಲು ಮೋದಿ ಸರ್ಕಾರವು ತರಾತುರಿಯಲ್ಲಿರುವುದು ಕೂಡ ಇದಕ್ಕೆ ಸಾಕ್ಷಿ ನೀಡುತ್ತದೆ.

ಆದರೆ ಅಮೆರಿಕದ ಮಾರಕ ಅಪ್ಪುಗೆಯನ್ನು ಭಾರತವು ಹೇಗೆ ಎದುರಿಸುತ್ತದೆ ಮತ್ತು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎಂಬುದು ಈ ದಶಕದಲ್ಲಿ ಮತ್ತು ಮುಂದಿನ ದಶಕದಲ್ಲಿ ಭಾರತೀಯ ವಿದೇಶಾಂಗ ನೀತಿಯ ಪ್ರಮುಖ ಸವಾಲಾಗಿ ಉಳಿಯುತ್ತದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story