Vivek Katju

ಅಡ್ಡಿ-ಆತಂಕಗಳು ನೂರಾರು: ಇರಾನ್-ಅಮೆರಿಕ ಒಡಂಬಡಿಕೆಗಾಗಿ ಕಾತರದಿಂದ ಕಾದಿದೆ ಜಗತ್ತು


ಅಡ್ಡಿ-ಆತಂಕಗಳು ನೂರಾರು: ಇರಾನ್-ಅಮೆರಿಕ ಒಡಂಬಡಿಕೆಗಾಗಿ ಕಾತರದಿಂದ ಕಾದಿದೆ ಜಗತ್ತು
x
ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸಹಜ ಸ್ಥಿತಿ ಮರಳಲು ಇಡೀ ಜಗತ್ತು ಹೇಗೆ ಒಂದು ಒಡಂಬಡಿಕೆಗಾಗಿ ಬಯಸುತ್ತಿದೆಯೋ, ಅದೇ ರೀತಿ ಅಮೆರಿಕ ಮತ್ತು ಇರಾನ್ನ ಕೆಲವು ವರ್ಗಗಳೂ ಕೂಡ ಎಂಓಯು ಏರ್ಪಡಬೇಕು ಎಂದು ಉತ್ಕಟವಾಗಿ ಬಯಸುತ್ತಿವೆ.
Click the Play button to hear this message in audio format

ಇರಾನ್ ಮತ್ತು ಅಮೆರಿಕ ಹೊರ್ಮುಜ್ ಜಲಸಂಧಿಗೆ ಮರು ಚಾಲನೆ ನೀಡಲು ಮತ್ತು ಇರಾನ್ ಪರಮಾಣು ಕಾರ್ಯಕ್ರಮ ಹಾಗೂ ನಿರ್ಬಂಧಗಳ ಸಡಿಲಿಕೆ‌ ಮಾತುಕತೆಗಳಿಗೆ ದಾರಿ ಮಾಡಿಕೊಡುವ ಒಪ್ಪಂದಕ್ಕೆ ಹತ್ತಿರವಾಗಿವೆ.

ಇರಾನ್ ಮತ್ತು ಅಮೆರಿಕಗಳು ಶೀಘ್ರದಲ್ಲೇ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ದಟ್ಟವಾಗಿದೆ ಎಂಬ ವರದಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಇದರಿಂದ ಇರಾನ್ನ ಪರಮಾಣು ಕಾರ್ಯಕ್ರಮ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿ ಹೆಚ್ಚಿನ ಮಾತುಕತೆ ನಡೆಸಲು ಅನುಕೂಲವಾಗುವಂತೆ ಕದನ ವಿರಾಮವನ್ನು 60 ದಿನಗಳ ಅವಧಿಗೆ ವಿಸ್ತರಿಸಲಿದೆ.

ಏತನ್ಮಧ್ಯೆ, ಎಂಓಯುಗೆ ಸಂಬಂಧಿಸಿದ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ, ಇದು ಹೊರ್ಮುಜ್ ಜಲಸಂಧಿಯನ್ನು ತೆರೆಯುವ ನಿಬಂಧನೆಯನ್ನು ಒಳಗೊಂಡಿರುತ್ತದೆ ಎಂದು ನಂಬಲಾಗಿದೆ. ಜಾಗತಿಕ ಸಮುದಾಯವು ಇದನ್ನೇ ಕಣ್ಣು ಬಿಟ್ಟು ಕಾಯುತ್ತಿದೆ.

ಎಚ್ಚರಿಕೆಯ ಆಶಾವಾದ

ಎರಡು ದೇಶಗಳ ನಡುವೆ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆಗಳು ಹೆಚ್ಚಿದ್ದರೂ, ಸಂಘರ್ಷಗಳನ್ನು ಕೊನೆಗೊಳಿಸುವ ಎಲ್ಲಾ ಮಾತುಕತೆಗಳಲ್ಲಿ ಅಂತಿಮ ಹಂತದಲ್ಲಿ ಅಡಚಣೆಗಳು ಉಂಟಾಗುವ ಸಾಧ್ಯತೆ ಸದಾ ಇದ್ದೇ ಇರುವ ಹಿನ್ನಲೆಯಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ. ಸಂಭಾವ್ಯ ತೊಡಕುಗಳನ್ನು ಪರಿಗಣಿಸುವ ಮೊದಲು, ಇರಾನ್ ಮತ್ತು ಅಮೆರಿಕದ ನಾಯಕರು, ಪ್ರತಿನಿಧಿಗಳು ಹಾಗೂ ಮಧ್ಯವರ್ತಿಗಳು ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತ. ತಿಳುವಳಿಕಾ ಒಡಂಬಡಿಕೆಗೆ ಪೂರಕವಾಗಿರುವ ಅಂಶಗಳು ಆಯಾ ದೇಶಗಳ ಒಳಗೂ ಮತ್ತು ಜಾಗತಿಕವಾಗಿಯೂ ಇವೆ.

ಈ ವಾರದ ಆರಂಭದಲ್ಲಿ, ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್ನ್ನು ಇರಾನ್ ಹೊಡೆದುರುಳಿಸಿದೆ. ಇದರಿಂದ ಕುಪಿತರಾದ ಟ್ರಂಪ್, ಇರಾನ್ನ ನಾನಾ ಪ್ರದೇಶಗಳಲ್ಲಿ ಹಲವು ಮಿಲಿಟರಿ ದಾಳಿಗಳನ್ನು ನಡೆಸಲು ನಿರ್ಧರಿಸಿದರು. ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ನ ಗುರಿಗಳ ಮೇಲೆ ಮತ್ತು ಅರಬ್ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿತು. ಏಪ್ರಿಲ್ 8ರಿಂದ ಜಾರಿಯಲ್ಲಿದ್ದ ಕದನ ವಿರಾಮವು ಅಪಾಯದಲ್ಲಿದೆ ಎಂದು ತೋರುತ್ತಿದ್ದಂತೆಯೇ, ಇರಾನ್ ಮೇಲೆ ಬೃಹತ್ ದಾಳಿ ನಡೆಸಲು ನಿರ್ಧರಿಸಿರುವುದಾಗಿ ಟ್ರಂಪ್ ಘೋಷಿಸಿದರು. ಆದರೆ, ಹಿಂದೆ ಕೂಡ ಅವರು ಇದೇ ರೀತಿಯ ಬೆದರಿಕೆಗಳನ್ನು ಒಡ್ಡಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಹಾಗಾಗಿ ಈ ಬಾರಿಯೂ ಅವರು ದಾಳಿ ನಡೆಸುತ್ತಾರೆಯೇ ಎಂಬ ಅನುಮಾನ ಮೂಡಿತ್ತು. ಈ ಬಾರಿಯೂ ಊಹಿಸಿದಂತೆಯೇ ಆಯಿತು.

ಜೂನ್ 11ರ ರಾತ್ರಿ (ಅಮೆರಿಕದ ಸಮಯ, ಇರಾನ್ ಸಮಯದ ಪ್ರಕಾರ ಜೂನ್ 12ರ ಬೆಳಿಗ್ಗೆ), ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದರು: "ಇರಾನ್ ಇಸ್ಲಾಮಿಕ್ ಗಣರಾಜ್ಯದ ಜೊತೆಗಿನ ಚರ್ಚೆಗಳು ಇರಾನ್ನ ಉನ್ನತ ನಾಯಕತ್ವದ ಮಟ್ಟಕ್ಕೆ ತಲುಪಿ ಮತ್ತು ಅನುಮೋದನೆ ಪಡೆದಿವೆ ಎಂಬ ಅಂಶವನ್ನು ಆಧರಿಸಿ, ಇಂದು ಸಂಜೆ ಇರಾನ್ ವಿರುದ್ಧ ಯೋಜಿಸಲಾಗಿದ್ದ ದಾಳಿಗಳು ಮತ್ತು ಬಾಂಬ್ ದಾಳಿಗಳನ್ನು ನಾನು ರದ್ದುಗೊಳಿಸಿದ್ದೇನೆ. ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕತಾರ್, ಟರ್ಕಿ, ಪಾಕಿಸ್ತಾನ, ಬಹ್ರೇನ್, ಕುವೈತ್, ಜೋರ್ಡಾನ್, ಈಜಿಪ್ಟ್ ಮತ್ತು ಇತರರು ಸೇರಿದಂತೆ ಎಲ್ಲಾ ಭಾಗಿದಾರ ಪಕ್ಷಗಳು ಈ ಸಮಾಲೋಚನೆ ಮತ್ತು ಅಂತಿಮ ಅಂಶಗಳಿಗೆ ಸಂಬಂಧಿಸಿದ ಪರಿಕಲ್ಪನೆ ಮತ್ತು ವಿವರಗಳೆರಡರಲ್ಲೂ ಅನುಮೋದನೆ ನೀಡಿವೆ. ಈ ವ್ಯವಹಾರವು ಅಂತಿಮಗೊಳ್ಳುವವರೆಗೆ ನೌಕಾ ದಿಗ್ಬಂಧನವು ಜಾರಿಯಲ್ಲಿರುತ್ತದೆ - ಸಹಿ ಹಾಕುವ ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ಘೋಷಿಸಲಾಗುವುದು."

ಇವೆಲ್ಲದರ ನಡುವೆಯೇ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಈ ಪ್ರಕ್ರಿಯೆಗಾಗಿ ಸ್ವಿಟ್ಜರ್ಲ್ಯಾಂಡ್ಗೆ ತೆರಳುವ ಸಾಧ್ಯತೆ ಕಾಣುತ್ತಿದೆ. ಟ್ರಂಪ್ ಅವರು ಪೋಸ್ಟ್ ಮಾಡಿದ ನಂತರ 30 ಗಂಟೆಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ ಮತ್ತು ಇರಾನ್ ಕಡೆಯಿಂದಲೂ ಎಂಓಯು ಅಂತಿಮಗೊಳ್ಳುವ ಬಗ್ಗೆ ಸಕಾರಾತ್ಮಕ ಸೂಚನೆಗಳು ಬಂದಿವೆ. ಆದರೆ, ಆ ದಾಖಲೆಯ ವಿವರಗಳಾಗಲಿ ಅಥವಾ ಸಹಿ ಹಾಕುವ ಸ್ಥಳ ಮತ್ತು ಸಮಯದ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.

ಸಕಾರಾತ್ಮಕ ಸಂಕೇತಗಳು

ಜೂನ್ 12ರಂದು, ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರರು ಮಾಧ್ಯಮಗಳ ಜೊತೆ ಮಾತನಾಡುತ್ತ "ಒಡಂಬಡಿಕೆಯ ಅಂತಿಮ ಕರಡನ್ನು ಇರಾನ್ನ ಸಂಬಂಧಿತ ಸಂಸ್ಥೆಗಳು ಪರಿಶೀಲಿಸುತ್ತಿವೆ" ಎಂದು ಹೇಳಿದರು. ಮಾತುಕತೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಅವರ ಮೇಲಧಿಕಾರಿ, ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರು ಇನ್ನಷ್ಟು ಆಶಾವಾದದ ಮಾತುಗಳನ್ನಾಡಿದರು. ಈ ಒಪ್ಪಂದವು "ಹಿಂದೆಂದಿಗಿಂತಲೂ ಸನಿಹದಲ್ಲಿದೆ" ಎಂದು ಅರಗ್ಚಿ 'ಎಕ್ಸ್' ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕ ಇರಾನಿಯನ್ನರ, ವಿಶೇಷವಾಗಿ ರೆವಲ್ಯೂಷನರಿ ಗಾರ್ಡ್ಸ್ನವರ ಭಾವನೆಗಳನ್ನು ಶಾಂತಗೊಳಿಸಲು, ಇರಾನ್ ಎಂದಿಗೂ ಹಿಜ್ಬುಲ್ಲಾವನ್ನು ಕೈಬಿಡುವುದಿಲ್ಲ ಎಂದು ಅರಗ್ಚಿ ಒತ್ತಿ ಹೇಳುವುದನ್ನು ಮರೆಯಲಿಲ್ಲ; ʼಹಿಜ್ಬುಲ್ಲಾ ಲೆಬನಾನ್ನಲ್ಲಿ ಇಸ್ರೇಲ್ ವಿರುದ್ಧ ಹೋರಾಟ ನಡೆಸುತ್ತಿದೆ.ʼ

ಹೊರ್ಮುಜ್ ಜಲಸಂಧಿಯು ಇರಾನ್ ಮತ್ತು ಒಮಾನ್ನ ಸಾರ್ವಭೌಮತ್ವದ ಅಡಿಯಲ್ಲೇ ಇರುತ್ತದೆ ಎಂದೂ ಸಚಿವರು ತಿಳಿಸಿದರು. ಆದರೆ ವಿಷಯ ಅದಲ್ಲ; ಎಲ್ಲಾ ರಾಷ್ಟ್ರಗಳು ಮುಕ್ತವಾಗಿ ಸಂಚರಿಸುವ ಹಕ್ಕನ್ನು ಪಡೆಯಲಿವೆಯೇ ಮತ್ತು ಇರಾನ್ ಯಾವುದೇ ಶುಲ್ಕ ಅಥವಾ ಸುಂಕವನ್ನು ವಿಧಿಸುವುದಿಲ್ಲವೇ ಎಂಬುದು ಈಗ ಮುಖ್ಯವಾಗಿದೆ. ಇರಾನ್ನ ಪರಮಾಣು ವಿಷಯ, ನಿರ್ಬಂಧಗಳ ತೆರವು ಮತ್ತು ಆಸ್ತಿಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸಂಗತಿಗಳನ್ನು ಒಡಂಬಡಿಕೆಗೆ ಸಹಿ ಹಾಕಿದ ನಂತರದ ಹಂತದಲ್ಲಿ ಪರಿಹರಿಸಲಾಗುವುದು ಎಂದು ಅರಗ್ಚಿ ಹೇಳಿದ್ದಾರೆ.

ಸದ್ಯ ಬಂದಿರುವ ವರದಿಯ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ 10 ಶತಕೋಟಿ ಅಮೆರಿಕನ್ ಡಾಲರ್ಗಳನ್ನು ಬಿಡುಗಡೆ ಮಾಡಲು ಅಥವಾ ನೀಡಲು ಒಪ್ಪಿಕೊಂಡಿದೆ ಎಂಬುದು ಚರ್ಚೆಯಲ್ಲಿರುವ ಪ್ರಮುಖ ವಿಷಯ. ಇದು ನಿಜವಾಗಿದ್ದಲ್ಲಿ, ಇರಾನ್ನ ಸ್ಥಗಿತಗೊಂಡ ಆಸ್ತಿಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಎದುರಿಸುತ್ತಿರುವ ಜಟಿಲ ಸಮಸ್ಯೆಯನ್ನು ಇದು ತಿಳಿಗೊಳಿಸುವುದು ನಿಶ್ಚಿತ. ಅಮೆರಿಕದ ರಾಜಕೀಯ ವಿರೋಧಿಗಳು ಈ ಹಣದ ಬಿಡುಗಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು, ಟೀಕಿಸಬಹುದೆಂಬ ಆತಂಕ ಟ್ರಂಪ್ ಅವರಲ್ಲಿದೆ, ವಿಶೇಷವಾಗಿ ಹಿಂದಿನ 'ಜಂಟಿ ಸಮಗ್ರ ಕ್ರಿಯಾ ಯೋಜನೆ' ಒಪ್ಪಂದದ ಸಂದರ್ಭದಲ್ಲಿ ಇರಾನ್ಗೆ ಹಣ ನೀಡಿದ್ದಕ್ಕಾಗಿ ಅವರು ಒಬಾಮಾ ಅವರನ್ನು ಟೀಕಿಸಿದ್ದರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಹ ಒಪ್ಪಂದ ಅಂತಿಮಗೊಂಡಿದೆ ಮತ್ತು ಈಗ ಸಹಿಯಷ್ಟೇ ಬಾಕಿ ಇದೆ ಎಂದು ಹೇಳಿದ್ದಾರೆ. ಅವರು ತಮ್ಮ ಮಧ್ಯಸ್ಥಿಕೆಯ ಪ್ರಯತ್ನಗಳಿಗಾಗಿ ಜಾಗತಿಕವಾಗಿ ಮನ್ನಣೆ ಪಡೆಯಲು ಬಯಸುತ್ತಿದ್ದಾರೆ.

ಶಾಂತಿಗೆ ಅಡ್ಡಿಯಾಗಿರುವ ಸವಾಲುಗಳು

ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸಾಮಾನ್ಯ ಸ್ಥಿತಿ ಮರಳಲು ಇಡೀ ವಿಶ್ವವು ಒಡಂಬಡಿಕೆ ಅಂತಿಮಗೊಳ್ಳಬೇಕು ಎಂದು ಬಯಸುತ್ತಿರುವ ಹೊತ್ತಿನಲ್ಲಿಯೇ, ಅಮೆರಿಕ ಮತ್ತು ಇರಾನ್ನಲ್ಲಿ ಈ ಒಪ್ಪಂದವನ್ನು ಬಲವಾಗಿ ಬಯಸುವ ವಿಭಾಗಗಳೂ ಇವೆ. ರಿಪಬ್ಲಿಕನ್ ಪಕ್ಷದ ಪಾಲಿಗೆ, ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳು ಮುಖ್ಯ; ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ ಅವರು ಚುನಾವಣೆಗೆ ಹೋಗುವುದು ಸಾಧ್ಯವಿಲ್ಲ. ಇರಾನ್ನಲ್ಲಿರುವ ಪ್ರಾಯೋಗಿಕವಾದಿಗಳು ದೇಶದ ಪುನರ್ನಿರ್ಮಾಣದ ಬೃಹತ್ ಕಾರ್ಯವನ್ನು ಮುಂದುವರಿಸುವ ಬಯಕೆಯನ್ನು ಹೊಂದಿದ್ದಾರೆ ಮತ್ತು ಇದಕ್ಕೆ ತೈಲ ಆದಾಯದ ಅಗತ್ಯವಿದೆ. ಆದರೆ, ಪ್ರಸ್ತುತ ಅಮೆರಿಕದ ನೌಕಾ ದಿಗ್ಬಂಧನದಿಂದಾಗಿ ಈ ಆದಾಯಕ್ಕೆ ಅಡ್ಡಿ ಉಂಟಾಗಿದೆ. ಇರಾನ್ನಲ್ಲಿ ಹುತಾತ್ಮರಾಗುವ ಮನೋಭಾವದ ಜೊತೆಗೆ, ಬಹಳ ಪ್ರಾಯೋಗಿಕವಾದ ದೃಷ್ಟಿಕೋನ ಹೊಂದಿದವರೂ ಇದ್ದಾರೆ.

ಜೂನ್ 14ರಂದು ಲಭ್ಯವಿರುವ ಇತ್ತೀಚಿನ ಸುದ್ದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ನಡೆಯಲಿದ್ದು, ಒಪ್ಪಂದದ ನಂತರ ಹಾರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಒಪ್ಪಂದದ ಹಾದಿಯಲ್ಲಿ ಹಲವು ಅಡಚಣೆಗಳಿದ್ದು, ಅವು ಈ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಅಥವಾ ಹಳಿತಪ್ಪಿಸುವ ಸಾಮರ್ಥ್ಯವನ್ನು ಹೊಂದಿವೆ. ಆದಾಗ್ಯೂ, ಅಂತಹ ಸಾಧ್ಯತೆಗಳು ತೀರಾ ಕಡಿಮೆ. ಇಸ್ರೇಲ್ನಲ್ಲಿ ಅಮೆರಿಕದ ಮಾತನ್ನು ಕೇಳಲು ಇಚ್ಛಿಸದ ಮತ್ತು ಹಿಜ್ಬುಲ್ಲಾವನ್ನು ಮತ್ತಷ್ಟು ದುರ್ಬಲಗೊಳಿಸಲು ಬಯಸುವ ಕಠಿಣಪಂಥೀಯರಿದ್ದಾರೆ; ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಂತಹವರಲ್ಲಿ ಒಬ್ಬರು. ಈಗ ಇಸ್ರೇಲ್ನ್ನು ಹತೋಟಿಯಲ್ಲಿಡಲು ಟ್ರಂಪ್ ಅವರು ಅತ್ಯಂತ ದೃಢತೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ.

ಇರಾನ್ನಲ್ಲಿನ ಪರಿಸ್ಥಿತಿ ಇನ್ನಷ್ಟು ಗೊಂದಲಮಯವಾಗಿದೆ. ಮೊದಲನೆಯದಾಗಿ, ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ನಿಲುವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಭವಿಷ್ಯದಲ್ಲಿ ತಮ್ಮ ಮೇಲೆ ದಾಳಿಗಳು ನಡೆಯದಂತೆ ಭರವಸೆಗಳನ್ನು ಪಡೆಯಲು ಅವರು ಬಯಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಇರಾನ್ ಮತ್ತು ಅಮೆರಿಕದ ನಡುವೆ ಪರಸ್ಪರ ನಂಬಿಕೆಯ ಕೊರತೆ ಎಷ್ಟಿದೆಯೆಂದರೆ, ಇಂತಹ ನಂಬಿಕಾರ್ಹ ಭರವಸೆಗಳನ್ನು ನೀಡಲು ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ. ಇನ್ನೊಂದು ಪ್ರಮುಖ ವಿಷಯವೆಂದರೆ ಹೊರ್ಮುಜ್ ಜಲಸಂಧಿಯ ನಿಯಂತ್ರಣ. ಈ ವಿಚಾರದಲ್ಲಿ, ದೀರ್ಘಾವಧಿಯಲ್ಲಿ ಹಿಂದಿನ ಸ್ಥಿತಿಗೆ ಮರುಳುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಹಾರವನ್ನು ಯಾವುದೇ ದೇಶವು ಒಪ್ಪಿಕೊಳ್ಳುವುದು ಕಷ್ಟ.

ಮುಂದಿನ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸ್ಪಷ್ಟವಾಗಲಿದೆ. ಜಾಗತಿಕ ಸಮುದಾಯವು ಈ ಒಡಂಬಡಿಕೆ ಮತ್ತು ಗಲ್ಫ್ ಪ್ರದೇಶದಿಂದ ತಡೆಯಿಲ್ಲದ ಇಂಧನ ಪೂರೈಕೆಯ ಪುನರಾರಂಭಕ್ಕಾಗಿ ತೀವ್ರವಾಗಿ ಕಾಯುತ್ತಿದೆ. ಆದರೆ, ಅಂತಾರಾಷ್ಟ್ರೀಯ ಸಂಬಂಧಗಳು ಯಾವಾಗಲೂ ಕೇವಲ ಭರವಸೆಗಳ ಮೇಲೆ ನಡೆಯುವುದಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story