P John J Kennedy

ಪಕ್ಷ ಸಂಘಟನೆಗಿಂತ ವರ್ಚಸ್ಸಿಗೇ ಕಿಮ್ಮತ್ತು: ಜಾರುವ ಮಂಜಿನ ಮೇಲೆ ವಿಜಯ್ ಮಿತ್ರಕೂಟ


ಪಕ್ಷ ಸಂಘಟನೆಗಿಂತ ವರ್ಚಸ್ಸಿಗೇ ಕಿಮ್ಮತ್ತು: ಜಾರುವ ಮಂಜಿನ ಮೇಲೆ ವಿಜಯ್ ಮಿತ್ರಕೂಟ
x
ಚೆನ್ನೈನ ಜವಾಹರ್ಲಾಲ್ ನೆಹರೂ ಕ್ರೀಡಾಂಗಣದಲ್ಲಿ 2026ರ ಮೇ ಹತ್ತರಂದು ನಡೆದ ಕಾರ್ಯಕ್ರಮದಲ್ಲಿ ತಮಿಳು ನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ (ಟಿವಿಸಿ) ಮುಖ್ಯಸ್ಥ ಸಿ.ಜೋಸೆಫ್ ವಿಜಯ್.

ವಿಜಯ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದಕ್ಕಿರುವುದು ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಮಿತ್ರರನ್ನು ನಿಭಾಯಿಸುವ ಸಂಘಟನೆಯ ಕೊರತೆ. ಈ ಮಿತ್ರರು ಕೇವಲ ಸಹ ಪ್ರಯಾಣಿಕರು. ಶಾಶ್ವತ ಬೆಂಬಲಿಗರಲ್ಲ.

ರಾಜಕೀಯ ವಿಜ್ಞಾನದಲ್ಲಿ ಅಧಿಕಾರವನ್ನು ದಕ್ಕಿಸಿಕೊಳ್ಳುವ ಸರ್ಕಾರಗಳು ಮತ್ತು ಅಧಿಕಾರವನ್ನು ಚಲಾಯಿಸಬಲ್ಲ ಸರ್ಕಾರಗಳ ನಡುವೆ ಒಂದು ಉಪಯುಕ್ತವಾದ ವ್ಯತ್ಯಾಸವನ್ನು ಕಾಣಬಹುದು.

ಅನೇಕ ದಿನಗಳ ಕಾಲ ನಡೆದ ತೆರೆಮರೆಯ ಮಾತುಕತೆಗಳು ಮತ್ತು ಬಲಾಬಲದ ಆತಂಕದ ಬಳಿಕ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಮುಂದಾಳತ್ವದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ ತಮಿಳು ನಾಡಿನ ಹೊಸ ಆಡಳಿತವು ಮೊದಲನೆಯದನ್ನು (ಅಧಿಕಾರ ದಕ್ಕಿಸಿಕೊಳ್ಳುವುದು) ಸಾಧಿಸಿದಂತೆ ಕಾಣುತ್ತದೆ. ಆದರೆ ಎರಡನೇ ಸಂಗತಿ (ಅಧಿಕಾರ ಚಲಾಯಿಸುವುದು)ಯ ಬಗ್ಗೆ ಅತೀವವಾದ ಅನಿಶ್ಚಿತತೆಯನ್ನು ಉಳಿಸಿಕೊಂಡಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭವು ಎಲ್ಲ ಆತಂಕಗಳಿಗೆ ತೆರೆ ಎಳೆದಂತೆ ಭಾಸವಾಯಿತು. ಆದರೆ ಅದು ಆಡಳಿತದ ಒಳಗಿರುವ ರಚನಾತ್ಮಕ ದೌರ್ಬಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಈಗ ಅಧಿಕಾರ ಹಿಡಿದಿರುವ ಮೈತ್ರಿಕೂಟಕ್ಕೆ ಸೈದ್ಧಾಂತಿಕ ಬದ್ಧತೆಗಿಂತ ಬದಲಾಗಿ ವ್ಯೂಹಾತ್ಮಕ ಅನಿವಾರ್ಯತೆ ಇರುವುದು ಸ್ಪಷ್ಟ. ರಾಜಕೀಯದ ಆಖಾಡದಲ್ಲಿ ಇನ್ನೂ ನವಜಾತ ನಾಯಕನಾದವನು ಸ್ಥಾಪಿತ ಏಕಸ್ವಾಮ್ಯದ ನಾಯಕನಂತೆ ಆಡಳಿತ ನಡೆಸಲು ಪ್ರಯತ್ನ ಮಾಡಿದಂತೆ ಕಾಣಿಸುತ್ತಿದೆ.

ಧ್ರುವೀಕೃತ ಬಹುತ್ವ

ಜಿಯೋವಾನಿ ಸರ್ಟೋರಿ ಅವರು ಮಂಡಿಸಿದ ʼಧ್ರವೀಕೃತ ಬಹುತ್ವʼ ಎಂದು ಕರೆದ ಮೈತ್ರಿಕೂಟದ ಪಾಲುದಾರರ ನಡುವಿನ ಸೈದ್ಧಾಂತಿಕ ಅಂತರವು ವಿಕೇಂದ್ರಿಕೃತ ಒತ್ತಡಗಳನ್ನು ಉಂಟುಮಾಡುವ ಪರಿಕಲ್ಪನೆಗೂ ನೈಜ ಕಾರ್ಯಕ್ರಮಗಳ ಸಮಾನತೆಯ ಮೇಲೆ ನಿರ್ಮಿಸಲಾದ ಹೆಚ್ಚು ಕಾರ್ಯಸಾಧುವಾದ ಮೈತ್ರಿಗಳಿಗೂ ನಡುವಿನ ವ್ಯತ್ಯಾಸವನ್ನು ರಾಜಕೀಯ ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಗುರುತಿಸಿಕೊಂಡು ಬಂದಿದ್ದಾರೆ. ಈಗ ತಮಿಳು ನಾಡಿನ ಹೊಸ ವ್ಯವಸ್ಥೆಯು ಈ ಧ್ರುವೀಕೃತ ಮಾದರಿಗೆ ಹೆಚ್ಚು ನಿಕಟವಾಗಿದೆ.

ಎಡಪಕ್ಷಗಳು ಮತ್ತು ವಿಸಿಕೆ ತಮ್ಮದೇ ಆದ ಸಂಘಟಿತ ಹಾಗೂ ಸೈದ್ಧಾಂತಿಕ ಅರಿವುಳ್ಳ ನೆಲೆಗಳನ್ನು ಹೊಂದಿವೆ. ಈ ಪಕ್ಷಗಳು ಆಡಳಿತದಿಂದ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತವೆ. ಹೊಸ ಸರ್ಕಾರಕ್ಕೆ ಅವು ನೀಡುತ್ತಿರುವ ಬೆಂಬಲವು, ಸ್ವತಃ ಅವುಗಳೇ ಒಪ್ಪಿಕೊಂಡಿರುವಂತೆ ಕೇವಲ 'ತಂತ್ರಗಾರಿಕೆ'ಯಾಗಿದೆ. ಅವು ಸಿದ್ಧಾಂತ ಬದಲಿಸಿದ ಪಕ್ಷಗಳಲ್ಲ; ಬದಲಾಗಿ ತಾತ್ಕಾಲಿಕ ಸಹಪ್ರಯಾಣಿಕರು ಮಾತ್ರ. ಮೈತ್ರಿಕೂಟದ ಸಿದ್ಧಾಂತಗಳು ಸತತವಾಗಿ ತೋರಿಸಿಕೊಡುವಂತೆ, ಇಂತಹ ತಾತ್ಕಾಲಿಕ ಸಹಪ್ರಯಾಣಿಕರು ಆಡಳಿತವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾದಾಗ ಅತ್ಯಂತ ಅಸ್ಥಿರ ಆಂತರಿಕ ಶಕ್ತಿಗಳಾಗಿ ಹೊರಹೊಮ್ಮುತ್ತಾರೆ.

ಕಾಂಗ್ರೆಸ್ ಪಕ್ಷವು ಇಂತಹ ಘರ್ಷಣೆಗೆ ಮೂಲವಾಗುವ ಸಾಧ್ಯತೆ ಕಡಿಮೆ. ಅದರ ಆರಂಭಿಕ ಮತ್ತು ಉತ್ಸಾಹಭರಿತ ಬೆಂಬಲ ಹಾಗೂ ಸಚಿವ ಸ್ಥಾನಗಳ ಮೇಲಿನ ಆಸಕ್ತಿಯು, ಈ ಮೈತ್ರಿಯಲ್ಲಿ ಅದಕ್ಕೆ ಸೈದ್ಧಾಂತಿಕ ಬದ್ಧತೆಗಿಂತ ಹೆಚ್ಚಾಗಿ ವ್ಯವಹಾರಿಕ ಹಿತಾಸಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ಅಂತಿಮವಾಗಿ ಆಡಳಿತಕ್ಕೆ ಹೆಚ್ಚಿನ ಸವಾಲೊಡ್ಡುವುದು ವ್ಯವಹಾರಿಕ ಪಾಲುದಾರರಲ್ಲ, ಬದಲಾಗಿ ಸೈದ್ಧಾಂತಿಕ ಪಾಲುದಾರರೇ ಆಗಿರುತ್ತಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು

ಈ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಲ್ಪವೆಂದು ಭಾವಿಸಬೇಕಾಗಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಕಾರ್ಮಿಕ ಹಕ್ಕುಗಳು, ಒಕ್ಕೂಟ ವ್ಯವಸ್ಥೆ ಮತ್ತು ಕಾರ್ಪೊರೇಟ್ ಪ್ರೇರಿತ ಆರ್ಥಿಕ ನೀತಿಗಳ ವಿರುದ್ಧದ ರಾಜಿರಹಿತ ನಿಲುವುಗಳಿಂದಲೇ ತಮ್ಮ ರಾಜಕೀಯ ಮಾನ್ಯತೆಯನ್ನು ಪಡೆದುಕೊಳ್ಳುತ್ತವೆ. ವಿಸಿಕೆಯ ಸಂಪೂರ್ಣ ರಾಜಕೀಯ ಅಸ್ತಿತ್ವವು ದಲಿತರ ಹಕ್ಕುಗಳ ಪ್ರತಿಪಾದನೆ, ಜಾತಿ ವಿರೋಧಿ ಸಂಘಟನೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ನಿಂತಿದೆ. ರಾಜಕೀಯವಾಗಿ ಹಾನಿಯಾಗದಂತೆ ಮೈತ್ರಿಕೂಟದ ನಿರ್ವಹಣೆಗಾಗಿ ಈ ವಿಷಯಗಳನ್ನು ಗೌಣವಾಗಿಸಲು ಸಾಧ್ಯವಿಲ್ಲ.

ಇದು ಮೈತ್ರಿಕೂಟದ ಒಂದು ಪ್ರಮುಖ ವಿರೋಧಾಭಾಸವನ್ನು ಸೃಷ್ಟಿಸುತ್ತದೆ: ಬೆಂಬಲ ನೀಡುವ ಪಕ್ಷಗಳು ಸರ್ಕಾರವನ್ನು ಉಳಿಸಿಕೊಳ್ಳಬೇಕು ಮತ್ತು ಅದೇ ಸಮಯದಲ್ಲಿ ಸರ್ಕಾರದಿಂದ ತಮ್ಮ ಪ್ರತ್ಯೇಕತೆಯನ್ನು ಗುರುತಿಸಿಕೊಳ್ಳಬೇಕು. ಅವರು ಸಂಪೂರ್ಣವಾಗಿ ಸರ್ಕಾರದಲ್ಲಿ ವಿಲೀನಗೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅವರ ಮತದಾರರ ವಲಯವು ಅವರಿಂದ ಪ್ರತಿರೋಧವನ್ನು ನಿರೀಕ್ಷಿಸುತ್ತದೆ.

ಅದೇ ಹೊತ್ತಿನಲ್ಲಿ ಅವರು ಬಹಿರಂಗವಾಗಿ ಮೈತ್ರಿ ಮುರಿದುಕೊಳ್ಳುವ ಸಾಹಸವನ್ನೂ ಮಾಡಲಾರರು, ಕನಿಷ್ಠ ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು. ಇದರ ಫಲಿತಾಂಶವೇ ಒಂದು ರೀತಿಯ ನಿರಂತರ ಸಮತೋಲನದ ಆಟ. ಇದು ದಿಢೀರ್ ಕುಸಿತವನ್ನೇನೂ ತರುವುದಿಲ್ಲ, ಆದರೆ ಆಡಳಿತದಲ್ಲಿ ದೀರ್ಘಕಾಲದ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ನಿಧಾನಗತಿಯ ಅಸ್ಥಿರತೆಗೆ ಕಾರಣವಾಗುತ್ತದೆ. ಇದರ ಲಕ್ಷಣಗಳು ಮೊದಲ ದಿನವೇ ಗೋಚರಿಸಿದ್ದವು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಾಡಗೀತೆಯಾದ 'ತಮಿಳು ತಾಯಿ ವಾಳ್ತು' ಅನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಾಗ, ಎಡಪಕ್ಷಗಳು ತಕ್ಷಣವೇ ಅಸಮಾಧಾನ ವ್ಯಕ್ತಪಡಿಸಿದವು. ಮೇಲ್ನೋಟಕ್ಕೆ ಇದು ಕೇವಲ ಸಾಂಕೇತಿಕ ವಿವಾದದಂತೆ ಕಂಡರೂ, ರಾಜಕೀಯವಾಗಿ ಇದು ಅತ್ಯಂತ ಗಂಭೀರವಾದುದಾಗಿತ್ತು.

ಪ್ರತಿಯೊಂದು ಪ್ರಮುಖ ನೀತಿ ನಿರ್ಧಾರವೂ ಇಲ್ಲಿ ಸಂಘರ್ಷದ ಕೇಂದ್ರವಾಗುತ್ತದೆ. ಪ್ರತಿಯೊಂದು ರಾಜಿಯೂ 'ನಂಬಿಕೆ ದ್ರೋಹ'ದ ಪುರಾವೆಯಾಗಿ ಕಾಣಿಸುತ್ತದೆ. ಪ್ರತಿಯೊಂದು ಆಡಳಿತಾತ್ಮಕ ವಿಳಂಬವೂ ಮೈತ್ರಿಯಿಂದ ಅಂತರ ಕಾಯ್ದುಕೊಳ್ಳುವ ಮುನ್ಸೂಚನೆಯಾಗುತ್ತದೆ. ಕಾಲಾನಂತರದಲ್ಲಿ ಇಂತಹ ಸಣ್ಣಪುಟ್ಟ ಘರ್ಷಣೆಗಳು ದೊಡ್ಡ ಸಮಸ್ಯೆಯಾಗಿ ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ.

ನಾಯಕತ್ವದ ಶೈಲಿ

ಈ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುವುದು ನಾಯಕತ್ವದ ಶೈಲಿ, ಮತ್ತು ಇಲ್ಲಿ ನಾವು ನೇರ ಮತ್ತು ನಿಷ್ಠುರವಾಗಿ ಇರಬೇಕಾಗುತ್ತದೆ. ತಮಿಳುನಾಡಿನ ಹೊಸ ಮುಖ್ಯಮಂತ್ರಿಗಳು ಬೆಳೆದು ಬಂದ ರಾಜಕೀಯ ಮಾದರಿಯು ಸಾಮೂಹಿಕ ಪ್ರಚಾರ, ವ್ಯಕ್ತಿತ್ವದ ಪ್ರದರ್ಶನ ಮತ್ತು ಮಾಧ್ಯಮ ಯುಗದ ಸಾರ್ವಜನಿಕರ ಭಾವನಾತ್ಮಕ ನಿಷ್ಠೆಯ ಮೇಲೆ ನಿಂತಿದೆ.

ಇದು ಸಮಕಾಲೀನ ಪ್ರಜಾಪ್ರಭುತ್ವಗಳಲ್ಲಿ ಕಂಡುಬರುವ ಒಂದು ವಿಶಿಷ್ಟ ವಿದ್ಯಮಾನ. ಇಲ್ಲಿ ನಾಯಕನ ಅಧಿಕಾರವು ಸಾಂಸ್ಥಿಕ ಸ್ಥಾನಮಾನದಿಂದ ಅಥವಾ ಪಕ್ಷದ ಸಂಘಟನೆಯಿಂದ ಬರುವುದಿಲ್ಲ, ಬದಲಾಗಿ ಸಾಮಾನ್ಯ ಜನರೊಂದಿಗಿನ ನೇರ ಭಾವನಾತ್ಮಕ ಸಂಬಂಧದಿಂದ ಬಂದುದಾಗಿರುತ್ತದೆ. ಇಂತಹ ನಾಯಕರು ಚುನಾವಣೆಗಳನ್ನು ಗೆಲ್ಲುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾಣಬಲ್ಲರು. ಆದರೆ, ಅವರು ಮೈತ್ರಿ ಸರ್ಕಾರವನ್ನು ಮುನ್ನಡೆಸುವ ವಿಚಾರದಲ್ಲಿ ಅಷ್ಟಾಗಿ ಹೊಂದಿಕೆಯಾಗರು. ಯಾಕೆಂದರೆ ಮೈತ್ರಿ ಆಡಳಿತಕ್ಕೆ ತಾಳ್ಮೆ, ಸಮಾಲೋಚನೆ, ಎದುರಾಳಿಗಳ ಅಹಂಕಾರವನ್ನು ತಣ್ಣಗಾಗಿಸುವುದು ಮತ್ತು ಸೈದ್ಧಾಂತಿಕ ಆತಂಕಗಳನ್ನು ಎಚ್ಚರಿಕೆಯಿಂದ ನಿಭಾಯಿಸುವಂತಹ ವಿಭಿನ್ನ ಗುಣಗಳು ಬೇಕಾಗುತ್ತವೆ.

ತಮಿಳುನಾಡಿನ ರಾಜಕೀಯ ಇತಿಹಾಸವು ಈ ಪರಿಸ್ಥಿತಿಗೆ ಮತ್ತೊಂದು ಸಂಕೀರ್ಣತೆಯನ್ನು ಸೇರಿಸುತ್ತದೆ. ಈ ರಾಜ್ಯವು ದಶಕಗಳ ಕಾಲ ಅಣ್ಣಾದೊರೈ, ಕರುಣಾನಿಧಿ, ಎಂ.ಜಿ.ಆರ್ ಮತ್ತು ಜಯಲಲಿತಾ ಅವರಂತಹ ನಾಯಕರಿಂದ ರೂಪಿಸಲ್ಪಟ್ಟಿದೆ. ಅವರ ವರ್ಚಸ್ಸು ಅತ್ಯಂತ ಬಲಿಷ್ಠವಾದ ಸಾಂಸ್ಥಿಕ ಅಡಿಪಾಯದೊಂದಿಗೆ ಬೆಸೆದುಕೊಂಡಿತ್ತು. ಅವರ ಅಧಿಕಾರವು ಶಿಸ್ತುಬದ್ಧ ಕಾರ್ಯಕರ್ತರು, ಸಾಂಸ್ಥಿಕ ಜಾಲ ಮತ್ತು ದಶಕಗಳ ಕಾಲ ಗಳಿಸಿದ ರಾಜಕೀಯ ಬಲದ ಮೇಲೆ ನಿಂತಿತ್ತು.

ಆದರೆ ಪ್ರಸ್ತುತ ಕ್ಷಣವು ನೀಡುತ್ತಿರುವುದು: ʼಸಂಘಟನೆಯೇ ಇಲ್ಲದ ವರ್ಚಸ್ಸು, ಪಕ್ಷದ ಆಳವಿಲ್ಲದ ಜನಪ್ರಿಯತೆ ಮತ್ತು ಒಗ್ಗಟ್ಟಿಲ್ಲದ ಮೈತ್ರಿ.ʼ ಇದು ಗುಣಾತ್ಮಕವಾಗಿ ವಿಭಿನ್ನವಾದ ಮತ್ತು ಅತ್ಯಂತ ಅನಿಶ್ಚಿತವಾದ ರಾಜಕೀಯ ಶಕ್ತಿಯ ರೂಪವಾಗಿದೆ.

ಮೈತ್ರಿಕೂಟದ ರಚನೆಯ ನಾಟಕೀಯ ಬೆಳವಣಿಗೆಗಳ ನಡುವೆ, ಆಡಳಿತಾತ್ಮಕ ಪ್ರಶ್ನೆಗಳು ಹೆಚ್ಚಾಗಿ ಗೌಣವಾಗುತ್ತವೆ. ಮೈತ್ರಿ ಸರ್ಕಾರವೊಂದರಲ್ಲಿ ಆಡಳಿತದ ದಕ್ಷತೆಯು ಕೇವಲ ರಾಜಕೀಯ ಉಳಿವನ್ನು ಮಾತ್ರವಲ್ಲದೆ, ಸ್ಥಿರ ಮತ್ತು ವಿಶ್ವಾಸಾರ್ಹವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಅವಲಂಬಿಸಿರುತ್ತದೆ. ಮೈತ್ರಿಕೂಟದ ಆಂತರಿಕ ಉದ್ವಿಗ್ನತೆಗಳು ಸ್ಪಷ್ಟ ನೀತಿ ನಿರೂಪಣೆಗೆ ಅಡ್ಡಿಯಾದಾಗ, ಕೈಗಾರಿಕಾ ನಿರ್ಧಾರಗಳು ಎಡಪಕ್ಷಗಳ ಕಾಳಜಿಗೆ ಅಡಿಯಾಳಾದಾಗ, ಕಾನೂನು ಮತ್ತು ಸುವ್ಯವಸ್ಥೆಯ ಕ್ರಮಗಳನ್ನು ಕಾರ್ಯಕರ್ತರ ನಿರೀಕ್ಷೆಗಳಿಗೆ ಅನುಗುಣವಾಗಿ ತೂಗಿ ಅಳೆದು ನೋಡಬೇಕಾದಾಗ ಮತ್ತು ಕಲ್ಯಾಣ ಯೋಜನೆಗಳ ಭರವಸೆಗಳು ವಿತ್ತೀಯ ಮಿತಿಗಳಿಗೆ ಅಡ್ಡಬಂದಾಗ, ಅಧಿಕಾರಿಶಾಹಿಗೆ ವಿರುದ್ಧವಾದ ಸಂಕೇತಗಳು ರವಾನೆಯಾಗುತ್ತವೆ. ಇದರ ಪರಿಣಾಮವಾಗಿ ಅಧಿಕಾರಿಶಾಹಿಯಲ್ಲಿ ಅನಿರ್ಧಾರಿತ ಸ್ಥಿತಿ ಉಂಟಾಗುತ್ತದೆ ಮತ್ತು ಸಾರ್ವಜನಿಕ ವಿಶ್ವಾಸ ಕುಸಿಯುತ್ತದೆ.

ಅಸ್ತಿತ್ವ ಮತ್ತು ಆಡಳಿತ

ಸರ್ಕಾರವು ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು, ಆದರೆ ಅದು ಪರಿಣಾಮಕಾರಿಯಾಗಿ ಆಡಳಿತ ನಡೆಸುವುದನ್ನು ಮರೆತುಬಿಡಬೇಕಾಗುತ್ತದೆ.

ಆದ್ದರಿಂದ, ಇಲ್ಲಿನ ವ್ಯತ್ಯಾಸವು 'ಉಳಿವು' ಮತ್ತು 'ಆಡಳಿತ'ದ ನಡುವೆ ಇದೆ. ಬಹುಮತದ ಪರೀಕ್ಷೆಯು ಕೇವಲ ಸಂಖ್ಯಾಬಲವನ್ನು ಸಾಬೀತುಪಡಿಸಬಹುದು, ಆದರೆ ಅದು ಆಂತರಿಕ ವಿರೋಧಾಭಾಸಗಳನ್ನು ಬಗೆಹರಿಸಲಾರದು. ಸೈದ್ಧಾಂತಿಕ, ರಚನಾತ್ಮಕ ಮತ್ತು ಸ್ವಭಾವಗತವಾದ ಈ ವಿರೋಧಾಭಾಸಗಳೇ ಈ ಸರ್ಕಾರವು ಒಂದು ಪರಿವರ್ತನಾ ಆಡಳಿತವಾಗುತ್ತದೆಯೇ ಅಥವಾ ಸಾಂಸ್ಥಿಕ ಆಳವಿಲ್ಲದ ವರ್ಚಸ್ವಿ ರಾಜಕಾರಣದ ಮಿತಿಗಳನ್ನು ಎತ್ತಿ ತೋರಿಸುವ ಒಂದು ಎಚ್ಚರಿಕೆಯ ಉದಾಹರಣೆಯಾಗುತ್ತದೆಯೇ ಎಂಬುದನ್ನು ನಿರ್ಧರಿಸುತ್ತವೆ.

ತಮಿಳುನಾಡು ಬದಲಾವಣೆಗಾಗಿ ಮತ ನೀಡಿದೆ. ಆದರೆ ಅದಕ್ಕೆ ಸಿಗುತ್ತಿರುವುದು ಮಾತ್ರ ಅತ್ಯಂತ ಜಟಿಲವಾದ ಪರಿಸ್ಥಿತಿ. ಅಂದರೆ, ನಿರಂತರವಾಗಿ ತನ್ನೊಂದಿಗೆ ತಾನೇ ಸಂಧಾನ ಮಾಡಿಕೊಳ್ಳುತ್ತಿರುವ, ವ್ಯಕ್ತಿತ್ವ ಆಧಾರಿತ ರಾಜಕಾರಣ ಮತ್ತು ಮೈತ್ರಿಕೂಟದ ಸಂಖ್ಯಾಶಾಸ್ತ್ರದ ನಡುವೆ ಸಿಲುಕಿರುವ, ಹಾಗೂ ನಾಯಕತ್ವದ ಮಹತ್ವಾಕಾಂಕ್ಷೆ ಮತ್ತು ಮಿತ್ರಪಕ್ಷಗಳ ಆತಂಕಗಳ ನಡುವೆ ಸಿಲುಕಿರುವ ಸರ್ಕಾರ.

ಈಗಿರುವ ಪ್ರಶ್ನೆಯು ಸರ್ಕಾರವು ಬಹುಮತದ ಪರೀಕ್ಷೆಯಲ್ಲಿ ಗೆದ್ದಿದೆ ಎಂಬುದಲ್ಲ. ಆದರೆ ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಈ ಸರ್ಕಾರವು ರಾಜ್ಯವನ್ನು ಆಳುವ ಮೊದಲು ತನ್ನನ್ನು ತಾನು ಆಳಿಕೊಳ್ಳಲು ಸಾಧ್ಯವೇ ಎಂಬುದಾಗಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.


Next Story