Kancha Ilaiah Shepherd

ಕಾಂಗ್ರೆಸ್‌ನಲ್ಲಿ ತಳಮಳ ಹುಟ್ಟಿಸಿದ ರೇವಂತ್‌ ರೆಡ್ಡಿ ಹಿಟ್ಲರ್‌ ಹೇಳಿಕೆ


ಕಾಂಗ್ರೆಸ್‌ನಲ್ಲಿ ತಳಮಳ ಹುಟ್ಟಿಸಿದ ರೇವಂತ್‌ ರೆಡ್ಡಿ ಹಿಟ್ಲರ್‌ ಹೇಳಿಕೆ
x
ಇತ್ತೀಚಿನ ದಿನಗಳಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಸೈದ್ಧಾಂತಿಕ ನಿಲುವಿನಲ್ಲಿ ಸ್ಥಿರತೆ ಕಾಣುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಜೊತೆಗಿನ ಸಂಬಂಧದಲ್ಲಿ ಗಣನೀಯ ಬದಲಾವಣೆ ಕಂಡುಬರುತ್ತಿದೆ.
Click the Play button to hear this message in audio format

ರೇವಂತ್‌ ರೆಡ್ಡಿ ಅವರ ಹೈಡ್ರಾ (HYDRAA) ಹಿಟ್ಲರ್‌ ಹೇಳಿಕೆ ಸದ್ದು ಮಾಡುತ್ತಿದೆ. ಇದು ಅವರ ಸೈದ್ಧಾಂತಿಕ ಬೇರುಗಳು, ಕಾಂಗ್ರೆಸ್‌ ಮೇಲೆ ಆಗುವ ಪರಿಣಾಮಗಳ ಚರ್ಚೆಯನ್ನು ಮುನ್ನಲೆಗೆ ತಂದಿದೆ.)

ತೆಲಂಗಾಣ ಮುಖ್ಯಮಂತ್ರಿ ಅನಮೂಲ ರೇವಂತ್‌ ರೆಡ್ಡಿ ಅವರು ಅಡಾಲ್ಫ್‌ ಹಿಟ್ಲರ್‌ ಬಗ್ಗೆ ಆಡಿರುವ ಮೆಚ್ಚುಗೆ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಂತಹ ಮತ್ತೊಂದು ವಿರೋಧಪಕ್ಷವನ್ನು ಬಿಜೆಪಿ ಒಡೆದು ಹೋಳು ಹೋಳಾಗಿ ಮಾಡಿರುವ ಮತ್ತು ವಿವಾದಾತ್ಮಕ ನಿರ್ಧಾರದಿಂದ ಕಾಂಗ್ರೆಸ್‌ ಪಕ್ಷದ ಮೀನಾಕ್ಷಿ ನಟರಾಜನ್‌ ಅವರು ತಮ್ಮ ರಾಜ್ಯಸಭಾ ನಾಮನಿರ್ದೇಶನವನ್ನು ಕಳೆದುಕೊಂಡಿರುವ ಈ ಹೊತ್ತಿನಲ್ಲಿ ರೇವಂತ್‌ ರೆಡ್ಡಿ ಆಡಿರುವ ಮಾತು ಅವರ ನಿಷ್ಠೆ ಇರುವುದಾದರೂ ಯಾವುದರ ಮೇಲೆ ಎಂಬುದರ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ʼದಿ ಹಿಂದೂʼ ಪತ್ರಿಕೆಯ ಎನ್.ರಾಮ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ರೇವಂತ್‌ ಅವರು ಈ ಹೇಳಿಕೆ ನೀಡಿದ್ದು ಅನೇಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ತೆಲಂಗಾಣ ಕಾಂಗ್ರೆಸ್ ಮುಖ್ಯಮಂತ್ರಿ ತಮ್ಮ ಸರ್ಕಾರದ ಆಡಳಿತಾತ್ಮಕ ವಿಭಾಗದ ಹೈಡ್ರಾ (ಹೈದರಾಬಾದ್‌ ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ಆಂಡ್ ಅಸೆಟ್‌ ಮ್ಯಾನೇಜ್ಮೆಂಟ್‌ ಏಜೆನ್ಸಿ HYDRAA) ಕುರಿತು ಮಾತನಾಡುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಶ್ರೀಮಂತರು ಮತ್ತು ಬಡವರ ಕಟ್ಟಡಗಳನ್ನು ನೆಲಸಮ ಮಾಡುವ ಮೂಲಕ ಈ ಸಂಸ್ಥೆ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ.

ಹೈಡ್ರಾ ಸಂಸ್ಥೆಯು ಅತ್ಯಂತ ಕಠೋರವಾಗಿ ವರ್ತಿಸುತ್ತಿದೆ. ಹೈದ್ರಾಬಾದಿನ ಕೆಳಮಧ್ಯಮ ವರ್ಗದ ಜನರ ಕಟ್ಟಡಗಳನ್ನು ಧ್ವಂಸಗೊಳಿಸುವುದಕ್ಕೂ ಮುನ್ನ ಅವರಿಗೆ ನೋಟಿಸ್‌ ಕೂಡ ನೀಡುತ್ತಿಲ್ಲ ಎಂಬ ಆರೋಪಕ್ಕೆ ಈ ಸಂಸ್ಥೆ ಗುರಿಯಾಗಿದೆ. ಸಹಜವಾಗಿಯೇ ಇದು ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಕೆರೆಗಳು ಮತ್ತು ಇತರ ಜಲಮೂಲಗವಳಂತಹ ಸರ್ಕಾರಿ ಆಸ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂಬ ಮೆಚ್ಚುಗೆ ಮಾತಿಗೂ ಪಾತ್ರವಾಗಿದೆ. ಆದರೆ ಅದೇ ಹೊತ್ತಿನಲ್ಲಿ ಇದು ಮಧ್ಯಮ ವರ್ಗದ ಹೈದರಾಬಾದ್‌ ನಿವಾಸಿಗಳಲ್ಲಿ ನಡುಕವನ್ನೂ ಹುಟ್ಟುಹಾಕಿರುವುದು ನಿಶ್ಚಿತ.

ಇದು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ʼಬುಲ್ಡೋಜರ್‌ ನ್ಯಾಯʼದ ನೆನಪನ್ನು ಮರುಕಳಿಸುವಂತೆ ಮಾಡುವುದಿಲ್ಲವೇ? ಎಂಬ ಪ್ರಶ್ನೆಯನ್ನು ಕೂಡ ಮುನ್ನೆಲೆಗೆ ತಂದಿರುವುದು ಸ್ಪಷ್ಟ.

ಎಬಿವಿಪಿ ಶಿಕ್ಷಣದ ಪ್ರಭಾವವೇ ಇದು?

ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನಿಂದ ಪ್ರೇರಿತರಾಗಿ ಈ ವಿಭಾಗಕ್ಕೆ ʼಹೈಡ್ರಾʼ ಎಂದು ನಾಮಕರಣ ಮಾಡಿದ್ದಾಗಿ ರೇವಂತ್‌ ರೆಡ್ಡಿ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದು ಪರಿಸ್ಥಿತಿ ಇನ್ನಷ್ಟು ಗಂಭೀರಗೊಳಿಸುವಂತೆ ಮಾಡಿದೆ. ಒಬ್ಬ ಫ್ಯಾಸಿಸ್ಟ್ ನಾಯಕನಿಂದ ತಾನು ಪ್ರೇರಿತನಾಗಿದ್ದೇನೆ ಎಂದು ರೇವಂತ್ ಬಹಿರಂಗವಾಗಿ ಘೋಷಿಸಿದರೂ, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ತನಗೆ ಹಿಟ್ಲರ್ ಸ್ಫೂರ್ತಿ ಎಂದು ಹೇಗೆ ಮತ್ತು ಏಕೆ ಹೇಳಲು ಸಾಧ್ಯ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

ಇದು ಮತ್ತೊಂದು ಘಟನೆಯನ್ನು ಕೂಡ ಈ ಸಂದರ್ಭದಲ್ಲಿ ನೆನಪಿಸುತ್ತದೆ. ರೇವಂತ್ ಒಮ್ಮೆ ತಮಾಷೆಯಾಗಿ ಹೀಗೆ ಹೇಳಿದ್ದರು: "ನಾನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ (ಎಬಿವಿಪಿ, ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗ) ಶಿಕ್ಷಣ ಪಡೆದಿದ್ದೇನೆ, ತೆಲುಗು ದೇಶಂ ಕಾಲೇಜಿನಲ್ಲಿ (ಟಿಡಿಪಿ ತರಬೇತಿ) ಓದಿದ್ದೇನೆ ಮತ್ತು ಈಗ ರಾಹುಲ್ ಗಾಂಧಿಯವರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ."

ಬಹುಶಃ ಆ ಸಮಯದಲ್ಲಿ ಯಾರೂ ರೇವಂತ್ ಅವರ ಈ ವಿಕಸನೀಯ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಹಿಟ್ಲರ್‌ನಿಂದ ಪ್ರೇರಣೆ ಪಡೆದಿದ್ದೇನೆ ಎಂಬ ಅವರ ಒಪ್ಪಿಗೆಯು, ಅವರ ಎಬಿವಿಪಿ ಶಿಕ್ಷಣವು ಅವರ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆಯೇ ಎಂಬ ಅನುಮಾನವನ್ನು ವೀಕ್ಷಕರಲ್ಲಿ ಮೂಡಿಸುವಂತೆ ಮಾಡಿದೆ. ಎಲ್ಲಕ್ಕೂ ಮಿಗಿಲಾಗಿ, ಆರ್‌ಎಸ್‌ಎಸ್ ಐತಿಹಾಸಿಕವಾಗಿ ಹಿಟ್ಲರ್ ಬಗ್ಗೆ ಬಹಳ ಮೆಚ್ಚುಗೆಯ ದೃಷ್ಟಿಕೋನವನ್ನು ಹೊಂದಿದೆ.

ಆರ್‌ಎಸ್‌ಎಸ್‌ನ ಎರಡನೇ ಮುಖ್ಯಸ್ಥರಾದ ಎಂ.ಎಸ್. ಗೋಳ್ವಾಲ್ಕರ್ ಅವರು, ತಮ್ಮ 1939ರ 'ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್' (We or Our Nationhood Defined) ಎಂಬ ಕೃತಿಯಲ್ಲಿ ಹಿಟ್ಲರ್ ಮತ್ತು ನಾಜಿ ಜರ್ಮನಿಯ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಯಹೂದಿಗಳನ್ನು ದಮನಿಸುವ ಮೂಲಕ "ರಾಷ್ಟ್ರದ ಶುದ್ಧತೆಯನ್ನು" ಕಾಯ್ದುಕೊಳ್ಳಲು ಹಿಟ್ಲರ್ ಮಾಡಿದ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದರು ಮತ್ತು ಇದನ್ನು ಭಾರತವು ತನ್ನ ಅಲ್ಪಸಂಖ್ಯಾತರ ವಿಷಯದಲ್ಲಿ ಮಾದರಿಯಾಗಿ ಇಟ್ಟುಕೊಳ್ಳಬೇಕಾದ ಪಾಠ ಎಂದು ಪ್ರತಿಪಾದಿಸಿದ್ದರು.

ಕಾಂಗ್ರೆಸ್‌ನ ಸರ್ವಾಧಿಕಾರಿ ವಿರೋಧಿ ಹಿನ್ನೆಲೆ

ರೇವಂತ್ ರೆಡ್ಡಿ ಅವರು ಎನ್. ರಾಮ್ ಅವರಿಗೆ ನೀಡಿದ ಸಂದರ್ಶನದ ವೇಳೆ, ಗೋಳ್ವಾಲ್ಕರ್ ಅವರ ಕುರಿತಾದ ತಮ್ಮ "ಶಾಲಾ ದಿನಗಳ" ಪಾಠಗಳನ್ನು ನೆನಪಿಸಿಕೊಂಡಿರಬೇಕು. ಆದರೆ, ಒಬ್ಬ ಮುಖ್ಯಮಂತ್ರಿ ಇಂತಹ ಹೇಳಿಕೆಯನ್ನು ನೀಡುತ್ತಿರುವುದು ಕಾಂಗ್ರೆಸ್‌ಗೆ ಕಳವಳಕಾರಿಯಾಗದೇ ಇರಲು ಸಾಧ್ಯವೇ ಇಲ್ಲ. ರೇವಂತ್ ಅವರು ಕಾಂಗ್ರೆಸ್‌ನ ಸಿದ್ಧಾಂತಕ್ಕೆ, ಅದರಲ್ಲೂ ವಿಶೇಷವಾಗಿ ಪ್ರಸ್ತುತ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಪಕ್ಷವು ಅವರಿಗೆ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಹುದ್ದೆಯನ್ನು ಮತ್ತು ನಂತರ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡಿತು.

ಅತ್ಯಂತ ಹಳೆಯ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ಗೆ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ಬರಹಗಳ ಮೂಲಕ ಹಿಟ್ಲರ್‌ನ ಕುರಿತು ಅತ್ಯಂತ ಸ್ಪಷ್ಟವಾದ ತಿಳುವಳಿಕೆ ಇದೆ. ಗಾಂಧೀಜಿಯವರು ಹಿಟ್ಲರ್‌ನನ್ನು "ರಾಕ್ಷಸ" ಎಂದು ಕರೆದಿದ್ದರು ಮತ್ತು ಅವನ ಮಿಲಿಟರಿವಾದವನ್ನು "ಮಾನವೀಯತೆಯನ್ನು ಕೀಳರಿಮೆಗೆ ತಳ್ಳುವ ಕೃತ್ಯ" ಎಂದು ನಿಸ್ಸಂದಿಗ್ಧವಾಗಿ ಖಂಡಿಸಿದ್ದರು. ಗಾಂಧೀಜಿಯವರು ಹಿಟ್ಲರ್‌ಗೆ ಎರಡು ಪತ್ರಗಳನ್ನು (1939 ಮತ್ತು 1940ರಲ್ಲಿ) ಬರೆದು, ಯುದ್ಧವನ್ನು ತ್ಯಜಿಸಲು ಮತ್ತು ಹಿಂಸೆಯ ಹಾದಿಯನ್ನು ಕೈಬಿಡುವಂತೆ ಆ ಸರ್ವಾಧಿಕಾರಿಯನ್ನು ಒತ್ತಾಯಿಸಿದ್ದರು.

ನೆಹರೂ ಅವರು ಹಿಟ್ಲರ್ ಮತ್ತು ನಾಜಿಸಮ್‌ನ್ನು ಜಾಗತಿಕ ಪ್ರಜಾಪ್ರಭುತ್ವ ಮತ್ತು ಶಾಂತಿಗೆ ಅಪಾಯಕಾರಿಯಾದ ಕ್ರೂರ ಫ್ಯಾಸಿಸ್ಟ್ ಶಕ್ತಿ ಎಂದು ಪರಿಗಣಿಸಿದ್ದರು. ಅವರು ಹಿಟ್ಲರ್‌ನ ಯಹೂದಿ ವಿರೋಧಿ ನೀತಿ, ಎಡಪಂಥೀಯ ಚಳವಳಿಗಳ ದಮನ ಮತ್ತು ಹಿಂಸಾತ್ಮಕ ಸರ್ವಾಧಿಕಾರವನ್ನು ಬಹಿರಂಗವಾಗಿ ಖಂಡಿಸಿದ್ದರು. 1930ರ ದಶಕದಲ್ಲಿ ಯುರೋಪ್ ಪ್ರವಾಸದಲ್ಲಿದ್ದಾಗ, ಸರ್ವಾಧಿಕಾರಿಯನ್ನು ಭೇಟಿಯಾಗಲು ಬಂದ ವೈಯಕ್ತಿಕ ಆಹ್ವಾನಗಳನ್ನು ಅವರು ತಿರಸ್ಕರಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ನೆಹರೂ ಅವರು ನಾಜಿ ಆಡಳಿತದ ಕುರಿತಾದ ತಮ್ಮ ಮೌಲ್ಯಮಾಪನಗಳನ್ನು ಮತ್ತು ಐತಿಹಾಸಿಕ ದೃಷ್ಟಿಕೋನಗಳನ್ನು ತಮ್ಮ ಪ್ರಸಿದ್ಧ ಕೃತಿ 'ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ' (Glimpses of World History) ನಲ್ಲಿ ದಾಖಲಿಸಿದ್ದಾರೆ. ಇದು ಅವರು ಜೈಲಿನಲ್ಲಿದ್ದಾಗ ತಮ್ಮ ಮಗಳು ಇಂದಿರಾಗಾಂಧಿ ಅವರಿಗೆ ಬರೆದ ಪತ್ರಗಳ ಸಂಗ್ರಹ.

ಕಾಂಗ್ರೆಸ್‌ಗೇ ಸವಾಲ್?

ರೇವಂತ್ ರೆಡ್ಡಿ ಅವರು ಲೆಕ್ಕಾಚಾರದ ನಾಯಕರೋ ಅಥವಾ ಅಲ್ಲವೋ ಎಂಬುದು ಮುಖ್ಯವಲ್ಲ, ಆದರೆ ಹಿಟ್ಲರ್ ಯಾರು ಮತ್ತು ಏನು ಎಂಬುದು ಅವರಿಗೆ ತಿಳಿದಿದೆ. ಆದರೂ ಅವರು ಅಂತಹ ಹೇಳಿಕೆಯನ್ನು ನೀಡಿದ್ದಾದರೂ ಯಾಕೆ? ಯೌವನದಲ್ಲಿ ಅವರು ಆರ್‌ಎಸ್‌ಎಸ್ ರಾಜಕೀಯದ ಪಾಠ ಕಲಿತಿದ್ದರು ಎಂಬುದು ಅವರ ಮೇಲಿನ ಅನುಮಾನವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಅವರು ಹಿಮಂತ ಬಿಸ್ವಾ ಶರ್ಮಾ ಮತ್ತು ಸುವೇಂದು ಅಧಿಕಾರಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆಯೇ? ಅಂದರೆ, ಕಾಂಗ್ರೆಸ್ ಮತ್ತು ಅದರ ಸಿದ್ಧಾಂತದಿಂದ ದೂರ ಸರಿಯುತ್ತಿದ್ದಾರೆಯೇ? ಎಂಬ ಅನುಮಾನ ಮೂಡುವುದು ಸಹಜ.

ದೇಶದ ರಾಜಕೀಯ ವಾತಾವರಣವನ್ನು ಗಮನಿಸಿದಾಗ ಈ ಪ್ರಶ್ನೆಯು ಖಂಡಿತವಾಗಿಯೂ ಕಾಡುತ್ತದೆ. ರೇವಂತ್ ಅವರ ಸೈದ್ಧಾಂತಿಕ ಘೋಷಣೆಗಳಲ್ಲಿ ಸ್ಥಿರತೆ ಇಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಎನ್. ಚಂದ್ರಬಾಬು ನಾಯ್ಡು ಮತ್ತು ನರೇಂದ್ರ ಮೋದಿಯವರೊಂದಿಗಿನ ಅವರ ಸಂಬಂಧದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಮೋದಿಯವರ ಸಮ್ಮುಖದಲ್ಲಿ ಅವರ ವರ್ತನೆಯು ಆ ಬದಲಾವಣೆಗೆ ಸ್ಪಷ್ಟ ಸೂಚನೆಯನ್ನು ನೀಡುತ್ತದೆ.

ಕಾಂಗ್ರೆಸ್‌ಗೆ ಇನ್ನಷ್ಟು ತೊಂದರೆ ಉಂಟುಮಾಡುವಂತೆ, ಅವರು ಹೈದರಾಬಾದ್‌ನಲ್ಲಿ ಎನ್.ಟಿ. ರಾಮರಾವ್ ಅವರ ಪ್ರತಿಮೆಯನ್ನು ಉದ್ಘಾಟಿಸಿ, ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು. ಇದು ತೆಲಂಗಾಣದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ, ತೆಲಂಗಾಣದ ಜನ ಎನ್.ಟಿ. ರಾಮರಾವ್ ಅವರನ್ನು "ತೆಲಂಗಾಣ ವಿರೋಧಿ ಕಮ್ಮ ನಾಯಕ" ಎಂದು ಪರಿಗಣಿಸುತ್ತಾರೆ. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1983-1989 ಮತ್ತು 1994-1995), ಇಂದಿನ ಆಂಧ್ರಪ್ರದೇಶದ ಶ್ರೀಮಂತ ವಲಸಿಗರು, ನಂತರ ತೆಲಂಗಾಣ ರಾಜ್ಯವಾದ ಈ ಪ್ರದೇಶವನ್ನು ಮನಬಂದಂತೆ ಶೋಷಣೆ ಮಾಡಿದ್ದರು. ಇದು ಎರಡನೇ ಹಂತದ ತೆಲಂಗಾಣ ಚಳವಳಿಗೆ ಮತ್ತು 2014ರಲ್ಲಿ ಆಂಧ್ರಪ್ರದೇಶದ ವಿಭಜನೆಗೆ ಮುಖ್ಯ ಕಾರಣವಾಗಿತ್ತು.

ರೇವಂತ್ ಮನಸ್ಸಿನಲ್ಲಿ ಇರೋದಾದರೂ ಏನು

ಈ ಪರಿಸ್ಥಿತಿಯಲ್ಲಿ, ರೇವಂತ್ ರೆಡ್ಡಿ ಅವರ ನಡೆ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣದ ಬಿಆರ್‌ಎಸ್ ಪಕ್ಷಕ್ಕೆ ನೆರವಾಗಬಹುದು. ಅವರು ವಿಶೇಷವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಿರಿಕಿರಿ ಉಂಟುಮಾಡಲು ಇಂತಹ ಕೃತ್ಯಗಳನ್ನು ಮಾಡುತ್ತಿರುವಂತೆ ತೋರುತ್ತಿದೆ.

ರೇವಂತ್ ಅವರ ಇಂತಹ ಕೆಲವು ಕಾರ್ಯತಂತ್ರದ ನಡೆಗಳು ಅತ್ಯಂತ ರಾಜಕೀಯ ಅಶಾಂತಿಯ ವಾತಾವರಣದಲ್ಲಿ ನಡೆಯುತ್ತಿವೆ. ಸಂಸತ್ತಿನಲ್ಲಿ ಬಂಡಾಯ ಬಣದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವ ಮಾಸ್ಟರ್ ಪ್ಲಾನ್ ಮೂಲಕ ಬಿಜೆಪಿ ತೃಣಮೂಲ ಕಾಂಗ್ರೆಸ್ ಅನ್ನು ಒಡೆದಿದೆ. ಮತ್ತೊಂದೆಡೆ, ಮೀನಾಕ್ಷಿ ನಟರಾಜನ್ ಅವರು ತಮ್ಮ ವಿರುದ್ಧದ ನ್ಯಾಯಾಲಯದ ಪ್ರಕರಣವನ್ನು ಬಹಿರಂಗಪಡಿಸಿಲ್ಲ ಎಂಬ ಸುಳ್ಳು ಮಾಹಿತಿಯನ್ನು ತೆಲಂಗಾಣ ಕಾಂಗ್ರೆಸ್‌ನಿಂದಲೇ ವಂಚನಾತ್ಮಕವಾಗಿ ರವಾನಿಸಿದ ಪರಿಣಾಮ, ಅವರು ತಮ್ಮ ರಾಜ್ಯಸಭಾ ನಾಮನಿರ್ದೇಶನವನ್ನು ಕಳೆದುಕೊಂಡರು. ಇದನ್ನು ಮಾಡಿದ್ದು ಯಾರು, ಹೇಗೆ ಮತ್ತು ಏಕೆ?

ಇವೆಲ್ಲಕ್ಕೆ ರೇವಂತ್‌ ರೆಡ್ಡಿ ಅವರು ವಿವರವಾದ ಹೇಳಿಕೆಗಳನ್ನು ನೀಡಿದರೆ ಮಾತ್ರ ಪರಿಸ್ಥಿತಿ ತಿಳಿಯಾಗುವಂತೆ ಕಾಣುತ್ತದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story