
ಬಿಜೆಪಿ ಒಂದು ಕಡೆ ಸಾರ್ವಜನಿಕ ಆಕ್ರೋಶವನ್ನು ಎದುರಿಸುತ್ತಿದೆ. ಈ ನಡುವೆ ಆರ್‌ಎಸ್‌ಎಸ್-ಮನುಸ್ಮೃತಿ ನಂಟಿನ ಬಗ್ಗೆ ರಾಹುಲ್ ವಾಗ್ದಾಳಿ ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.
ಮಾಜಿ ಅಧಿಕಾರಿ, ಅಂಕಣಕಾರ ವಿವೇಕ್ ಕಾಟ್ಜು ಅವರು ಆಗಸ್ಟ್ 23ರಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ಪತ್ರಿಕೆಯನ್ನು ಒಂದು ಲೇಖನವನ್ನು ಬರೆದಿದ್ದರು. ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ನಮ್ಮ ರಾಷ್ಟ್ರಗೀತೆ ʼವಂದೇ ಮಾತರಂʼನ ಎಲ್ಲಾ ಐದು ಚರಣಗಳ ಬದಲಿಗೆ ಕೇವಲ ಮೊದಲ ಎರಡು ಚರಳಗಳನ್ನು ಮಾತ್ರ ಹಾಡಲು ಕೈಗೊಂಡ ತೀರ್ಮಾನವನ್ನು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ ಅವರು, ಇದು ಆ ಪಕ್ಷದ ಪಾಲಿಗೆ ಇನ್ನೊಂದು ʼಶಾ ಬಾನೋʼ ಪ್ರಕರಣವಾಗಿ ಬದಲಾಗುವ ಸಾಮರ್ಥ್ಯ ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಮಹಿಳೆ ಶಾ ಬಾನೋಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲಿನ ನಾಗರಿಕ ಕಾಯ್ದೆಯ ಸರ್ವೋಚ್ಚತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜೀವ್ ಗಾಂಧಿ ಸರ್ಕಾರ ರದ್ದುಗೊಳಿಸಿದಾಗ ಹಿಂದೂಗಳ ದೊಡ್ಡ ಸಮುದಾಯ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ಅದೇ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಈ ನಿರ್ಧಾರವು ಹಿಂದುಗಳ ದೊಡ್ಡ ವರ್ಗವನ್ನು ಕೆರಳಿಸುವ ಸಾಧ್ಯತೆಯಿದೆ ಎಂಬ ಸಂದೇಹವನ್ನು ಕಾಟ್ಜು ಅವರು ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದರು.
ಎರಡು ಭಿನ್ನ ದೃಷ್ಟಿಕೋನಗಳು
ಶಾ ಬಾನೋ ಮತ್ತು ವಂದೇ ಮಾತರಂ ಪ್ರಕರಣಗಳನ್ನು ಅವುಗಳಲ್ಲಿ ಅಡಕವಾಗಿರುವ ಸಾಂವಿಧಾನಿಕ ಮತ್ತು ನೈತಿಕ ನೆಲೆಗಟ್ಟುಗಳ ದೃಷ್ಟಿಯಿಂದ ಹೇಗೆ ಹೋಲಿಕೆ ಮಾಡಬಹುದು ಮತ್ತು ಕಾಂಗ್ರೆಸ್ ತೆಗೆದುಕೊಂಡಿರುವ ವಂದೇ ಮಾತರಂ ನಿಲುವಿಗೆ ಶಾ ಬಾನೋ ಪ್ರಕರಣದಷ್ಟೇ ರಾಜಕೀಯವಾಗಿ ಪಕ್ಷಕ್ಕೆ ಹಾನಿ ಮಾಡುವ ಸಾಮರ್ಥ್ಯವಿದೆಯೇ ಎಂಬ ಎರಡು ದೃಷ್ಟಿಕೋನಗಳ ಆಧಾರದಲ್ಲಿ ಕಾಟ್ಜು ಅವರು ವ್ಯಕ್ತಪಡಿಸಿದ ಸಂದೇಹಕ್ಕೆ ಉತ್ತರ ಕಂಡುಕೊಳ್ಳುವುದು ಉತ್ತಮವಾಗಿದೆ.
ಮೊದಲ ಪ್ರಶ್ನೆಗೆ ಉತ್ತರವೆಂದರೆ ಈ ಎರಡೂ ಸಂಗತಿಗಳು ತಮ್ಮ ಸಾಂವಿಧಾನಿಕ ಮತ್ತು ನೈತಿಕ ನೆಲೆಗಟ್ಟುಗಳಲ್ಲಿ ಭಿನ್ನವಾಗಿವೆ. ಕಾಂಗ್ರೆಸ್ನ ಶಾ ಬಾನೋ ನಡೆ ಕೇವಲ ಮುಸ್ಲಿಂ ತುಷ್ಟೀಕರಣದ ಸ್ಪಷ್ಟ ಉದಾಹರಣೆ ಮಾತ್ರ ಆಗಿರಲಿಲ್ಲ. ಬದಲಾಗಿ ಸಂವಿಧಾನ ನಿರ್ಮಾತೃಗಳು ಅನುಸರಿಸಲು ಬಯಸಿದ ಭಾರತದ ಸಾಂವಿಧಾನಿಕ ಆದರ್ಶಗಳಾದ ಜಾತ್ಯತೀತೆ, ಲಿಂಗ ಸಮಾನತೆ ಮತ್ತು ರಾಜ್ಯ ನಿರ್ದೇಶಕ ತತ್ವಗಳಿಗೆ ಅದು ಮೂಲಭೂತವಾಗಿ ವಿರುದ್ಧವಾಗಿತ್ತು.
ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ದಮನ ಮಾಡಿದ್ದ ಮುಸ್ಲಿಂ ಪುರೋಹಿತಶಾಹಿ ಧೋರಣೆಗೆ ಇದು ಮಣೆಹಾಕುವಂತಿತ್ತು.
ಹಾಗಂತ ವಂದೇ ಮಾತರಂ ಕುರಿತ ಕಾಂಗ್ರೆಸ್ ನಿಲುವಿನ ವಿಚಾರದಲ್ಲಿ ಇದು ಹೆಚ್ಚು ಅನ್ವಯವಾಗದು. ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ಅದರ ತೀರ್ಮಾನವು ಜಾತ್ಯತೀತತೆ ಮತ್ತು ನ್ಯಾಯದ ಸಾಂವಿಧಾನಿಕ ಆದರ್ಶಗಳಿಗೆ ಅನುಗುಣವಾಗಿದೆ. ಮಾತ್ರವಲ್ಲದೆ ಮಹಾತ್ಮಾ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ಜವಾಹರ್‌ಲಾಲ್ ನೆಹರೂ ಅವರಂತಹ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರ ಸ್ವಪ್ರಜ್ಞೆಯ ನಿರ್ಧಾರವನ್ನು ಕೂಡ ಅದು ಅನುಸರಿಸುತ್ತದೆ.
ಆ ಗೀತೆಯು ನಿಜಕ್ಕೂ ಒಂದು ಸಮಗ್ರ ಸ್ವರೂಪವಾಗಿದ್ದು ಅದರ ಮೊದಲ ಎರಡು ಚರಣಗಳನ್ನು ಮಾತ್ರ ಆಯ್ದುಕೊಳ್ಳುವ ಬದಲು ಅದರ ಸಂಪೂರ್ಣ ಅರ್ಥವನ್ನು ಗ್ರಹಿಸಿ ಮೌಲ್ಯಮಾಪನ ಮಾಡಬೇಕಿತ್ತು ಎಂಬ ಆಧಾರದ ಮೇಲೆ ಆ ದಿಗ್ಗಜರ ನಿರ್ಧಾರ ಪ್ರಶ್ನಾರ್ಹವಾಗಿದೆ. ಈ ಗೀತೆಯು ಹಿಂದುಗಳ ಪರವಾಗಿ ಸಂಪೂರ್ಣ ಧಾರ್ಮಿಕ ಒಲವನ್ನು ಹೊಂದಿತ್ತು, ಹಾಗಾಗಿಯೇ ಅದನ್ನು ಸಂಪೂರ್ಣ ಕೈಬಿಡಬೇಕಾಗಿತ್ತು ಎಂಬ ವಾದವನ್ನು ಕೂಡ ಮಂಡಿಸಬಹುದು.
ಆರ್‌ಎಸ್‌ಎಸ್ ಮುಂದಿಡುವ ವಾದ
ಯಾವುದನ್ನು ಸ್ವೀಕರಿಸಬೇಕಾಗಿದೆಯೋ ಅದನ್ನು ಸ್ವೀಕರಿಸಿ, ಸ್ವೀಕರಿಸಲು ಅರ್ಹವಾಗದೇ ಇದ್ದುದನ್ನು ಬಿಟ್ಟುಬಿಡುವ ಧೋರಣೆಯು ತಾರ್ಕಿಕವಾಗಿ ಸೂಕ್ತವಾದುದಲ್ಲ. ಯಾಕೆಂದರೆ ಮನುಸ್ಮೃತಿಯಂತಹ ಪ್ರಾಚೀನ ಗ್ರಂಥಗಳಿಗೆ ಅನ್ವಯಿಸುವ ಸಂದರ್ಭದಲ್ಲಿ ʼಮನುಸ್ಮೃತಿಯಲ್ಲಿಯೂ ಹಲವಾರು ಉತ್ತಮ ಅಂಶಗಳಿವೆ, ಹಾಗಿದ್ದ ಮೇಲೆ ಅದನ್ನು ಸಂಪೂರ್ಣವಾಗಿ ಯಾಕೆ ತಿರಸ್ಕರಿಸಬೇಕು?ʼ ಎಂಬ ವಾದವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಿಡುತ್ತದೆ.
ಆದರೆ ಮನುಸ್ಮೃತಿಯ ಬಹುಮುಖ್ಯ ಧೋರಣೆಯೇ ತಾರತಮ್ಯದಿಂದ ಕೂಡಿದ್ದಾಗಿದೆ ಮತ್ತು ಅಮಾನವೀಯ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳನ್ನು ಒಳಗೊಂಡಿದೆ. ವಂದೇ ಮಾತರಂ ಹಾಗಲ್ಲ. ಅದು ಮೂಲಭೂತವಾಗಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಮನೋಭಾವವನ್ನು ಪ್ರತಿಪಾದಿಸುತ್ತದೆ ಮತ್ತು ಅದರಲ್ಲಿರುವ ಧಾರ್ಮಿಕ ಉಲ್ಲೇಖಗಳು ಯಾವುದೇ ಮೇಲುಗೈ ಸಾಧಿಸುವ ತಾರತಮ್ಯದ ಸಂದೇಶವನ್ನು ನೀಡುವುದಿಲ್ಲ. ಈ ಕಾರಣದಿಂದಲೇ ಆರ್‌ಎಸ್‌ಎಸ್ ಮುಂದಿಡುತ್ತಿರುವ ವಾದವು ದೋಷಪೂರಿತವಾಗಿದೆ.
ಕಾಂಗ್ರೆಸ್ ವಿರುದ್ಧ ಆರ್‌ಎಸ್‌ಎಸ್-ಬಿಜೆಪಿ ಮಾಡುತ್ತಿರುವ ಶಾ ಬಾನೋ ವಾದದಲ್ಲಿರುವ ಮತ್ತೊಂದು ಗಂಭೀರ ಸಮಸ್ಯೆಯೆಂದರೆ, ಕಾಂಗ್ರೆಸ್ನ ಶಾ ಬಾನೋ ತಪ್ಪಿತಸ್ಥ ನಡವಳಿಕೆಯು ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗಿತ್ತು. ಜೊತೆಗೆ ಮೂಲಭೂತವಾದಿ ಮುಸ್ಲಿಮರ ಮುಂದೆ ಮಂಡಿಯೂರಿತ್ತು ಎಂಬುದು ನಿಜವಾಗಿದ್ದರೂ, ಅದರಿಂದ ಹಿಂದೂಗಳಿಗೆ ಯಾವುದೇ ಅನ್ಯಾಯ ಆಗಿರಲಿಲ್ಲ. ಇದು ಯಾವುದೇ ರೀತಿಯಲ್ಲಿ ಹಿಂದೂಗಳನ್ನಾಗಲಿ ಅಥವಾ ಅವರ ಹಕ್ಕುಗಳನ್ನಾಗಲಿ ಬಾಧಿಸಿರಲಿಲ್ಲ. ಹಾಗಾದರೆ, ಆರ್ಎಸ್ಎಸ್-ಬಿಜೆಪಿಯ ಅಳಲು ಏನಿತ್ತು? ಮನುಸ್ಮೃತಿಯಲ್ಲಿ ಹೇಳಿರುವಂತೆಯೇ ತಾವೂ ಸಹ ಹಿಂದೂ ಮಹಿಳೆಯರನ್ನು ಅದೇ ರೀತಿಯಲ್ಲಿ ನಡೆಸಲು ಅವಕಾಶ ನೀಡಬೇಕು ಎಂದು ಅವರು ಹೇಳಲು ಬಯಸಿದ್ದರೇ?
ಆದರೆ, ವಂದೇ ಮಾತರಂ ಅನ್ನು ಅದರ ಸಂಪೂರ್ಣ ರೂಪದಲ್ಲಿ ಹಾಡಲೇಬೇಕೆಂಬ ಒತ್ತಡವು ಮುಸ್ಲಿಮರನ್ನು ಬಾಧಿಸುತ್ತದೆ. ಏಕೆಂದರೆ ಇದು ಅವರ ಮೂಲಭೂತ ಧಾರ್ಮಿಕ ನಂಬಿಕೆಗಳ ವಿರುದ್ಧ ಧ್ವನಿ ಎತ್ತುವಂತಿದೆ.
ಆದ್ದರಿಂದ, ವಂದೇ ಮಾತರಂ ಅನ್ನು ಭಾಗಶಃ ಸ್ವೀಕರಿಸುವುದು ಸರಿಯಾಗಿದ್ದರೂ, ಮನುಸ್ಮೃತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿದೆ ಮತ್ತು ಹಾಗೆ ಮಾಡುವುದರಿಂದ ಭಾರತದ ಸಾಂಸ್ಕೃತಿಕ ಘನತೆಗೆ ಯಾವುದೇ ನಷ್ಟವಾಗುವುದಿಲ್ಲ. ವಾಸ್ತವವಾಗಿ, ಇದು ಅದಕ್ಕೆ ತದ್ವಿರುದ್ಧವಾಗಿದೆ ಮತ್ತು ಒಂದು ಸಾಂಸ್ಕೃತಿಕ ತಪ್ಪನ್ನು ಸರಿಪಡಿಸುತ್ತದೆ.
ಹೀಗಾಗಿ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ನೋಡಿದರೆ, ವಂದೇ ಮಾತರಂನ ಕೇವಲ ಎರಡು ಚರಣಗಳನ್ನು ಹಾಡುವುದು ಅಂದೂ ಮತ್ತು ಇಂದೂ ಕೂಡ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಅತ್ಯಂತ ಪರಿಪಕ್ವವಾದ ಧೋರಣೆಯಾಗಿದೆ. ರಾಜಕೀಯವಾಗಿ ತೊಡಕುಗಳನ್ನುಂಟು ಮಾಡಿದ್ದ ಸುಪ್ರೀಂ ಕೋರ್ಟ್ನ ಶಾ ಬಾನೋ ತೀರ್ಪಿನ ಮರುಪರಿಶೀಲನೆಯ ನಿರ್ಧಾರದೊಂದಿಗೆ ಇದನ್ನು ಹೋಲಿಸುವುದು ಮೂಲಭೂತವಾಗಿ ತಪ್ಪು ಎಂದೇ ಹೇಳಬೇಕಾಗುತ್ತದೆ.
ಆಕರ್ಷಣೆ ಕಳೆದುಕೊಳ್ಳುತ್ತಿರುವ ಬಿಜೆಪಿ ವಾದ
ಆದರೆ ಕಾಟ್ಜು ಅವರು ಮಂಡಿಸಿರುವ ಇನ್ನೊಂದು ವಾದವು ಸರಿಯಾಗಿಯೇ ಇದೆ. ರಾಜಕೀಯವೆಂದರೆ ಸರಿಯೋ ತಪ್ಪೋ, ಅದು ಗ್ರಹಿಕೆಗಳ ಆಟವಾಗಿದೆ. ವಂದೇ ಮಾತರಂ ವಿಷಯವನ್ನು ಬಳಸಿ ಆರ್‌ಎಸ್‌ಎಸ್-ಬಿಜೆಪಿಯು ಕಾಂಗ್ರೆಸನ್ನು ಮೂಲೆಗುಂಪು ಮಾಡಲು ಯಶಸ್ವಿಯಾದರೆ, ಅದು ಪಕ್ಷದ ಭವಿಷ್ಯಕ್ಕೆ ಸಂಭಾವ್ಯ ಹಾನಿಯ ಉಂಟುಮಾಡಬಹುದು ಎಂಬುದು ಅವರ ಅನಿಸಿಕೆ.
ಆದರೆ ರಾಜಕೀಯ ಪರಿಸ್ಥಿತಿ ಮತ್ತು ಸಾಧ್ಯತೆಗಳ ದೃಷ್ಟಿಯಿಂದ 2026 ಮತ್ತು 1986 ರ ನಡುವೆ ಭಾರೀ ವ್ಯತ್ಯಾಸ ಕಂಡುಬರುತ್ತಿದೆ.
ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ಲೋಕಸಭೆಯಲ್ಲಿ ದಾಖಲೆಯ 414 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ 1984 ರಲ್ಲಿ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಆದರೆ 1989 ರಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ, ಶಾ ಬಾನೋ ಪ್ರಕರಣವೊಂದೇ ಅದಕ್ಕೆ ಕಾರಣವಾಗಿರಲಿಲ್ಲ. ಇದು ಉದಾರವಾದಿ ಮತ್ತು ಹಿಂದುತ್ವ ಶಕ್ತಿಗಳೆರಡನ್ನೂ ದೂರವಿರಿಸಿತು ನಿಜ, ಆದರೆ ಬಾಬ್ರಿ ಮಸೀದಿಯ ಬಾಗಿಲುಗಳನ್ನು ಹಿಂದೂಗಳ ಪೂಜೆಗೆ ತೆರೆಯುವ ಮೂಲಕ ಹಿಂದೂಗಳನ್ನು ಸಮಾಧಾನಪಡಿಸುವ ಪ್ರಯತ್ನವನ್ನೂ ಮಾಡಲಾಯಿತು. ಇದು ಜಾತ್ಯತೀತ ಮತದಾರರನ್ನು ಮತ್ತಷ್ಟು ದೂರವಿಟ್ಟಿತೇ ಹೊರತು, ಪಕ್ಷದ ಶಾ ಬಾನೋ ತಪ್ಪಿನಿಂದಾಗಿ ಈಗಾಗಲೇ ಬಿಜೆಪಿಯ ಕಡೆಗೆ ಗಣನೀಯವಾಗಿ ವಾಲಿದ್ದ ಹಿಂದೂ ಮತಗಳನ್ನು ಆಕರ್ಷಿಸಲು ಸಹಾಯ ಮಾಡಲಿಲ್ಲ. ಇದರ ಪರಿಣಾಮವಾಗಿ, ಬಿಜೆಪಿ ತನ್ನ ಬಲವನ್ನು 1984ರ ಕೇವಲ 2 ಸ್ಥಾನಗಳಿಂದ 1989 ರಲ್ಲಿ 85 ಕ್ಕೆ ಹೆಚ್ಚಿಸಿಕೊಂಡಿತು.
ಆದರೆ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ನೆಲಕಚ್ಚಲು ಅತ್ಯಂತ ನಿರ್ಣಾಯಕ ಕಾರಣವೆಂದರೆ, ಬೊಫೋರ್ಸ್ ಹಗರಣ ಮತ್ತು ರಾಜೀವ್ ಗಾಂಧಿ ಸಂಪುಟದಲ್ಲಿ ವಿ.ಪಿ. ಸಿಂಗ್ ಅವರ ಬಂಡಾಯ. ಇದರೊಂದಿಗೆ ಎಡ ಮತ್ತು ಬಲಪಂಥೀಯರು ಒಟ್ಟಾಗಿ ವಿ.ಪಿ. ಸಿಂಗ್ ಅವರನ್ನು ಬೆಂಬಲಿಸಿ ಸರ್ಕಾರ ರಚಿಸಲು ಮುಂದಾದ ಅಭೂತಪೂರ್ವ ವಿರೋಧ ಪಕ್ಷಗಳ ಒಗ್ಗಟ್ಟೂ ಕಾರಣವಾಗಿತ್ತು.
2026ರ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದು, ಅದರ ಗ್ರಾಫ್ ಮೇಲ್ಮುಖವಾಗಿದೆ. ಕೆಲವು ರಾಜ್ಯಗಳ ಚುನಾವಣಾ ಗೆಲುವುಗಳನ್ನು ಹೊರತುಪಡಿಸಿದರೆ, 2024ರಿಂದ ಬಿಜೆಪಿಯು ಇಳಿಕೆ ಹಾದಿಯಲ್ಲಿದೆ. Gen Z ಯುವಕರ ಜಂತರ್ ಮಂತರ್ ಪ್ರತಿಭಟನೆಗಳು, ಬಿಜೆಪಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕರ ಬೆಂಬಲ ಮತ್ತು ಜನಪ್ರಿಯತೆ ಸಾಕಷ್ಟು ಕುಸಿದಿದೆ ಎಂಬುದಕ್ಕೆ ಸ್ಪಷ್ಟ ಅಭಿವ್ಯಕ್ತಿಯಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಬಿಜೆಪಿಯ ಕೋಮುವಾದದಿಂದ ಜನರು ಬೇಸತ್ತಿದ್ದು, ತಮ್ಮ ಮೂಲಭೂತ ಬದುಕಿನ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುತ್ತಿದ್ದಾರೆ ಎಂಬುದು ಈಗ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಬಿಜೆಪಿಯ ಹಿಂದೂ ವರ್ಸಸ್ ಮುಸ್ಲಿಂ ರಾಜಕೀಯದ ಆಯುಷ್ಯ ತನ್ನ ವೇಗವನ್ನು ಕಳೆದುಕೊಳ್ಳುತ್ತಿದೆ.
ಕಾಂಗ್ರೆಸ್ ಅಸ್ತಿತ್ವದ ಸವಾಲು
ಉದಾರವಾದದ ಹೆಸರಿನಲ್ಲಿ ಮತ್ತು ಹಿಂದೂ ಮತಗಳನ್ನು ಕಳೆದುಕೊಳ್ಳುವ ಭೀತಿಯಿಂದ ಹಿಂದೆ ಆರ್‌ಎಸ್‌ಎಸ್ ಸಿದ್ಧಾಂತವನ್ನು ಎದುರಿಸಲು ಹಿಂಜರಿಯುತ್ತಿದ್ದ ಕಾಂಗ್ರೆಸ್, ಈಗ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅದರ ವಿರುದ್ಧ ಸೈದ್ಧಾಂತಿಕ ಸಮರ ಸಾರಿದೆ. ಇದು ಸ್ವಯಂಪ್ರೇರಿತ ಆಯ್ಕೆಗಿಂತ ಹೆಚ್ಚಾಗಿ ಕಾಂಗ್ರೆಸಸ ಎದುರಾಗಿರುವ ಅಸ್ತಿತ್ವದ ಸವಾಲು. ಬಿಜೆಪಿ-ಆರ ಸಿದ್ಧಾಂತದ ಸವಾಲನ್ನು ಎದುರಿಸದೇ ಹೋದರೆ ಕಾಂಗ್ರೆಸ್ ನಾಶವಾಗುತ್ತದೆ, ಏಕೆಂದರೆ ಬಿಜೆಪಿ-ಆರ್ಎಸ್ಎಸ್ ಒಕ್ಕೂಟವು ತಾನು ಮಾಡುವುದೆಲ್ಲವನ್ನೂ ಸಿದ್ಧಾಂತದ ಹೊದಿಕೆಯಲ್ಲಿ ಮಂಡಿಸುತ್ತಿದೆ. ಆದ್ದರಿಂದ, ಕಾಂಗ್ರೆಸ್ಗೆ ಸೈದ್ಧಾಂತಿಕವಾಗಿ ಅದನ್ನು ಎದುರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದರಲ್ಲಿ ಎರಡನೇ ಮಾತಿಲ್ಲ.
ಸತ್ಯ, ಈ ಸೈದ್ಧಾಂತಿಕ ಮುನ್ನಡೆಯಲ್ಲೂ ಕೆಲವು ಅಪಾಯಗಳಿವೆ. ಯಾಕೆಂದರೆ ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವುದರಲ್ಲಿ ಎದುರಾಳಿಗಳು ಬಹಳ ನುರಿತವರು. ಆ ಅಪಾಯಗಳನ್ನು ಮುಂಚಿತವಾಗಿ ಅಂದಾಜು ಮಾಡಿ ಎದುರಿಸಬೇಕಾದುದು ಅನಿವಾರ್ಯ; ಕೆಲವೊಮ್ಮೆ ಯಶಸ್ಸು ಸಿಗಬಹುದು, ಕೆಲವೊಮ್ಮೆ ವ್ಯತಿರಿಕ್ತ ರಾಜಕೀಯ ಪರಿಣಾಮಗಳ ಅಪಾಯವೂ ಇರಬಹುದು. ಆದರೆ ಇನ್ನು ಮುಂದೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿಯೇ ಇದನ್ನು ನೇರವಾಗಿ ಯಾಕೆ ಎದುರಿಸಬಾರದು? ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ತಂತ್ರಗಾರರ ಮನಸ್ಸಿನಲ್ಲಿ ಬಹುಶಃ ಈ ಯೋಚನೆ ಇರಬಹುದು.
ಸಾರ್ವಜನಿಕರ ಆಕ್ರೋಶ- ಕಂಗೆಟ್ಟ ಬಿಜೆಪಿ
ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶದ ಅಲೆಯು ದಿಢೀರ್ ಭುಗಿಲೆದ್ದಿರುವುದರಿಂದ ಬಿಜೆಪಿ ಸ್ಪಷ್ಟವಾಗಿ ಕಂಗೆಟ್ಟಿದೆ. ರಾಮಮಂದಿರ ಕಳವು ಪ್ರಕರಣ, ನೀಟ್ ಹಗರಣ ಮತ್ತು ಜಂತರ್ ಮಂತರ್ ಪ್ರತಿಭಟನೆಗಳ ನಂತರ, ಪ್ರಧಾನಿ ಮೋದಿ ಅವರನ್ನೇ ನೇರವಾಗಿ ವ್ಯಂಗ್ಯಚಿತ್ರಗಳು, ಮೀಮ್ಗಳು, ಘೋಷಣೆಗಳು ಹಾಗೂ ಲೇಖನಗಳ ಮೂಲಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಭಯವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಯುಜಿಸಿ ನಿಯಮಗಳ ವಿಚಾರ ಮತ್ತು ಹೊಸದಾಗಿ ತಲೆ ಎತ್ತಿರುವ ಮೀಸಲಾತಿ ವಿರೋಧಿ ಹೋರಾಟದಿಂದಾಗಿ ಅದು ತನ್ನ ಪ್ರಮುಖ ಮತ ಬ್ಯಾಂಕ್ ಆಗಿರುವ ಮೇಲ್ಜಾತಿಗಳಿಂದಲೂ ತೀವ್ರ ವಿರೋಧವನ್ನು ಎದುರಿಸುತ್ತಿದೆ.
ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಅಂದಿನ ವಿರೋಧ ಪಕ್ಷಗಳು ಸೈದ್ಧಾಂತಿಕ ಅಂಶಗಳನ್ನು (ಶಾ ಬಾನೋ ಮತ್ತು ಬಾಬ್ರಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ) ಹಾಗೂ ಸರ್ಕಾರದ ವೈಫಲ್ಯಗಳನ್ನು (ಬೊಫೋರ್ಸ್) ಹೇಗೆ ಒಟ್ಟಾಗಿ ಬಳಸಿಕೊಂಡವೋ, ಅದೇ ರೀತಿಯಲ್ಲಿ ಸೈದ್ಧಾಂತಿಕ ಜೂಜಾಟವೊಂದನ್ನು ಆಡಲು ಕಾಂಗ್ರೆಸ್ಗೆ ಈ ಹಿನ್ನೆಲೆಯು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಕಾಂಗ್ರೆಸ್ಸಿಗಿದು ಉತ್ತಮ ಅವಕಾಶ
ಮೋದಿಯವರ ಆಡಳಿತದಲ್ಲಿ ಬಿಜೆಪಿಯ ಬಗ್ಗೆ ಹೆಚ್ಚಿನ ಸಂಖ್ಯೆಯ ಹಿಂದೂಗಳು ನಿರಾಶರಾಗಿರುವ ಸಾಧ್ಯತೆಯಿರುವುದರಿಂದ, ವಂದೇ ಮಾತರಂ ವಿಷಯವನ್ನು ಮುಂದಿಟ್ಟು ಬಿಜೆಪಿ ಮಾಡುವ ದಾಳಿಗೆ ಜನರು ಸಿಲುಕಿಕೊಳ್ಳುವ ಸಾಧ್ಯತೆ ಕ್ಷೀಣ. ಇದು ಕಾಂಗ್ರೆಸ್ಗೆ ತನ್ನದೇ ಆದ ಸೈದ್ಧಾಂತಿಕ ನಿಲುವನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಂಡಿಸಲು ಅವಕಾಶ ಕಲ್ಪಿಸಿಕೊಡುತ್ತದೆ.
ಪುಣೆಯ "ಛಾತ್ರೋನ್ ಕಿ ಗೂಂಜ್" ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೂಡಿದ ಇತ್ತೀಚಿನ ವಾಗ್ದಾಳಿಯು, ಇದು ಬಿಜೆಪಿಯ ಸ್ವಂತ 'ಶಾ ಬಾನೋ' ಕ್ಷಣವಾಗಿ ಬದಲಾಗುವ ಸಾಮರ್ಥ್ಯವನ್ನು ಹೊಂದಿದೆ. ಬಿಜೆಪಿ-ಆರ್‌ಎಸ್‌ಎಸ್ ಅನ್ನು ಮನುಸ್ಮೃತಿಯ ಅನುಯಾಯಿಗಳೆಂದು ಅವರು ಬಿಂಬಿಸಿರುವುದು ಆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರಿಗೆ ಇದನ್ನು ಸಮರ್ಥಿಸಿಕೊಳ್ಳಲೂ ಆಗುತ್ತಿಲ್ಲ ಹಾಗೂ ಕೈಬಿಡಲೂ ಆಗುತ್ತಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಅದರ ಕೆಲವು ನಾಯಕರು ಈಗಾಗಲೇ ಮನುಸ್ಮೃತಿಯನ್ನು ಬೆಂಬಲಿಸಿ ಮಾತನಾಡಿರುವುದನ್ನು ಕೂಡ ಇಲ್ಲಿ ಗಮನಿಸಬೇಕಾಗುತ್ತದೆ.
ಯುಜಿಸಿ ನಿಯಮಗಳು ಮತ್ತು ಮೀಸಲಾತಿ ನೀತಿಯ ವಿರುದ್ಧ ಮೇಲ್ಜಾತಿಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನ ಹಾಗೂ ಮನುಸ್ಮೃತಿಯನ್ನು ಬಿಜೆಪಿ ಬೆಂಬಲಿಸುವುದರಿಂದ ಹಿಂದುಳಿದ ವರ್ಗದವರು, ಪರಿಶಿಷ್ಟ ಪಂಗಡ ಮತ್ತು ವರ್ಗದವರು ಹಾಗೂ ಮಹಿಳೆಯರು ಆಕ್ರೋಶಗೊಳ್ಳುವ ಸಾಧ್ಯತೆಯು ಆ ಪಕ್ಷವನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳುವಂತಾದರೆ ಅಚ್ಚರಿಯಿಲ್ಲ.
ಇನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳುವುದಾದರೆ, ವಂದೇ ಮಾತರಂ ಕಾಂಗ್ರೆಸ್‌ನ ಎರಡನೇ ಶಾ ಬಾನೋ ಕ್ಷಣವಾಗುವುದಿರಲಿ, ರಾಹುಲ್ ಅವರ ಮನುಸ್ಮೃತಿ ವಾದವು ಬಿಜೆಪಿಯದೇ ಸ್ವಂತ ಶಾ ಬಾನೋ ಕ್ಷಣವೆಂದು ಸಾಬೀತುಪಡಿಸಬಹುದು.
ರಾಹುಲ್ ಗಾಂಧಿ ಇದನ್ನು ಸರಿಯಾದ ಸಮಯಕ್ಕೆ ಗ್ರಹಿಸಿರುವಂತೆ ಗೋಚರಿಸುತ್ತಿದೆ ಮತ್ತು ಅದಕ್ಕೇ ಅವರು ನೇರವಾಗಿ ಬಿಜೆಪಿಯ ಮರ್ಮಸ್ಥಾನದ ಮೇಲೆಯೇ ದಾಳಿ ನಡೆಸುತ್ತಿದ್ದಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.-


