Nilanjan Mukhopadyay

ಮೋದಿ ಅಧಿಕಾರದ ರಜತ ಸಂಭ್ರಮ: ಸ್ವತಂತ್ರ ಭಾರತದಲ್ಲಿ ರಾಜಕೀಯ ಕೇಂದ್ರೀಕರಣದ ಅಸಾಧಾರಣ ಪಯಣ


ಮೋದಿ ಅಧಿಕಾರದ ರಜತ ಸಂಭ್ರಮ: ಸ್ವತಂತ್ರ ಭಾರತದಲ್ಲಿ ರಾಜಕೀಯ ಕೇಂದ್ರೀಕರಣದ ಅಸಾಧಾರಣ ಪಯಣ
x
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ. ಇದರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿರುತ್ತದೆ. ಮೋದಿಯವರ ಈ ಅಧಿಕಾರದ ರಜತ ಮಹೋತ್ಸವವು ಸವಾಲಿಗೆ ಜಗ್ಗದ ಅಧಿಕಾರಕ್ಕಿಂತ ಪ್ರಜಾಸತ್ತಾತ್ಮಕ ಸೆಣೆಸಾಟಕ್ಕೆ ಎದೆಯೊಡ್ಡಿದ ಪ್ರಭುತ್ವವಾಗಿ ಗುರುತಿಸಲ್ಪಟ್ಟಿದೆ.
Click the Play button to hear this message in audio format

ಮೋದಿ ಅಧಿಕಾರದ ರಜತ ಮಹೋತ್ಸವ ಅಸಾಧಾರಣ ರಾಜಕೀಯ ಪಯಣದ ಪ್ರತೀಕವಾಗಿದೆ. ಆದರೆ ಪುಟಿದೇಳುತ್ತಿರುವ ಇಂಡಿಯಾ ಒಕ್ಕೂಟದ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ಈಗ ರಾಜಕೀಯ ಚಿತ್ರಣವೇ ಬದಲಾಗಿಹೋಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯ ಸತತ ಇಪ್ಪತ್ತೈದು ವರ್ಷಗಳನ್ನು ಒಂದು ಸಾಧನೆಯಾಗಿ ಯಾವುದೇ ಪಕ್ಷಪಾತವಿಲ್ಲದೆ ಮೌಲ್ಯಮಾಪನ ಮಾಡಿದ್ದೇ ಆದರೆ ಅದು ಒಂದು ಅಸಾಮಾನ್ಯ ಸಾಧನೆ ಎಂಬುದು ವೇದ್ಯವಾಗುತ್ತದೆ. ಇಂತಹ ಸಂದರ್ಭವನ್ನು ಆಚರಿಸಲು ಪಕ್ಷಕ್ಕೆ ಸಂಪೂರ್ಣ ಹಕ್ಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದಾಗ್ಯೂ ಈ ಸಂಭ್ರಮಾಚರಣೆಯ ಹೊತ್ತಿನಲ್ಲಿಯೇ ಮೋದಿ ಅವರ ವೈಯಕ್ತಿಕ ಮತ್ತು ರಾಜಕೀಯ ವರ್ಚಸ್ಸು ಮಂಕಾಗುತ್ತಿರುವ ಮತ್ತು ಸಾರ್ವಜನಿಕ ಜನಪ್ರಿಯತೆಯ ಗ್ರಾಫ್ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವುದು ದುರದೃಷ್ಟದ ಸಂಗತಿಯೂ ಹೌದು.

ಅಸಲಿಗೆ ನೋಡಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತನ್ನ ಸ್ವಂತ ಸಂಖ್ಯಾಬಲದ ಬಹುಮತವನ್ನು ಕಳೆದುಕೊಂಡಾಗಿನಿಂದ ಮತ್ತು ಅಂದಿನಿಂದಲೇ ಒಕ್ಕೂಟ ಸರ್ಕಾರದ ಪಾಲುದಾರರ ಮೇಲೆ ಅದು ಅಲಂಬಿತವಾಗಿರುವ ಕಾರಣ ರಾಜಕೀಯ ದೌರ್ಬಲ್ಯ ಅವರನ್ನು ಕಾಡುತ್ತಲೇ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರೇಟಿಂಗ್ ಹೆಚ್ಚಿಸಿಕೊಳ್ಳುವ ಜಿದ್ದು

ಆದರೂ ನೀತಿ-ನಿರ್ಧಾರಗಳ ಮೂಲಕ ಅವರು ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಂಖ್ಯಾಬಲದ ಕೊರತೆಯಿಂದ ಹೊರಬಂದಿರುವ ಸಂದರ್ಭಗಳೂ ಇವೆ ಎಂಬುದನ್ನು ಈ ವೇಳೆ ನೆನಪು ಮಾಡಿಕೊಳ್ಳುವುದು ಸೂಕ್ತ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದರೆ 2025ರ ʼಆಪರೇಷನ್ ಸಿಂಧೂರ್.ʼ ಲೋಕಸಭೆ ಚುನಾವಣೆ ಮುಗಿದ ಕೆಲವೇ ತಿಂಗಳುಗಳ ಬಳಿಕ 2024ರಲ್ಲಿ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸತತವಾಗಿ ಜಯಶಾಲಿಯಾದರು. 2025ರಲ್ಲಿ ದೆಹಲಿ ಮತ್ತು ಬಿಹಾರದಲ್ಲಿ ಜನತಾ ದಳ(ಯು)ದ ಜೊತೆ ಮೈತ್ರಿ ಮಾಡಿಕೊಂಡು ಮಹತ್ವದ ಗೆಲವುಗಳನ್ನು ಸಾಧಿಸಿದರು. ಆ ಮೂಲಕ ಅವರು ತಮ್ಮ ಚುನಾವಣಾ ಹಿನ್ನಡೆಯನ್ನು ಸರಿಪಡಿಸುವಲ್ಲಿ ಪಕ್ಷವನ್ನು ಮುಂಚೂಣಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.

ಆದರೆ ಚುನಾವಣಾ ರಾಜಕೀಯದ ಅಂತಿಮ ವಿಜಯವು ಈ ವರ್ಷಕ್ಕಾಗಿಯೇ ಮೀಸಲಿತ್ತು. ಈ ವರ್ಷ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯ ಮೇಲೆ ನಡೆಸಿದ ರಾಜಕೀಯ ದಾಳಿ ಸರ್ವೋತ್ಕೃಷ್ಟವಾದುದು. ಅಂತಿಮವಾಗಿ, ಅವರು ಕೇವಲ ರಾಜ್ಯವನ್ನು ಮಾತ್ರವಲ್ಲದೆ ಅವರ ಪಕ್ಷವನ್ನೂ ಯಶಸ್ವಿಯಾಗಿ ತಮ್ಮದಾಗಿಸಿಕೊಂಡರು, ಆದರೂ ಈ ನಂತರದ ಕಬಳಿಕೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು ಮತ್ತು ಅವೆಲ್ಲವೂ ಇನ್ನೂ ಸಂಪೂರ್ಣವಾಗಿ ಪರಿಹಾರ ಕಂಡಿಲ್ಲ ಎಂಬುದು ಗಮನಾರ್ಹ ಕೂಡ.

ಸೆಪ್ಟೆಂಬರ್ 17 ರಂದು ಮೋದಿಯವರಿಗೆ 76 ವರ್ಷ ತುಂಬಿತು. 2014ರಿಂದಲೇ 75 ವರ್ಷ ಮೇಲ್ಪಟ್ಟ ಪಕ್ಷದ ಹಿರಿಯ ನಾಯಕರನ್ನು ಹುದ್ದೆಗಳಿಂದ ದೂರವಿಟ್ಟು, ಕ್ರಿಯಾಶೀಲವಲ್ಲದ 'ಮಾರ್ಗದರ್ಶಕ ಮಂಡಳ'ಕ್ಕೆ ತಳ್ಳಲು ಅವರು ಈ ವಯಸ್ಸಿನ ಮಾನದಂಡ ಬಳಸಿದ್ದರು. ಹೀಗಿದ್ದರೂ, ಅಂದು ಪಕ್ಷ, ಸರ್ಕಾರ ಮತ್ತು ಅಧಿಕೃತ ನಿಧಿಗಳು ಒಂದಾದಾಗ, ಅವರ ಕಾರ್ಯಕ್ರಮ ಪ್ರೀತಿಯನ್ನು ಪಕ್ಷದಲ್ಲಿದ್ದ ಕೆಲವರು ಅಸಮಾಧಾನದಿಂದ ನೋಡಿದರೆ, ಹೆಚ್ಚಿನವರು ಸದ್ದಿಲ್ಲದೆ ಬೆಂಬಲಕ್ಕೆ ನಿಂತರು.

ಭವ್ಯ ಕಾರ್ಯಕ್ರಮಗಳ ಕಡೆಗೆ ಒಲವು

ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ವಿಷಯದಲ್ಲಿ ಮೋದಿ ಅವರಿಗೆ ಇರುವ ಒಲವು, ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದಂದೇ ಸ್ಪಷ್ಟವಾಗಿತ್ತು. ಸಾಮಾನ್ಯವಾಗಿ ರಾಜ್ಯದ ರಾಜ್ಯಪಾಲರ ನಿವಾಸದಲ್ಲಿ ನಡೆಯುವ ಸಾಂಪ್ರದಾಯಿಕ ಸಮಾರಂಭವನ್ನು ಕ್ರೀಡಾಂಗಣದಲ್ಲಿ ನಡೆಸಲಾಯಿತು. ಆ ಕಾಲದ ಮಾಧ್ಯಮ ವರದಿಯೊಂದು ಇದನ್ನು "ಅದರ ವ್ಯಾಪ್ತಿ ಮತ್ತು ಆಡಂಬರದಲ್ಲಿ ಸಾಟಿಯಿಲ್ಲದ ಅತಿ ಅದ್ದೂರಿತನದಿಂದ ಕೂಡಿದ ಸಮಾರಂಭ" ಎಂದು ವರ್ಣಿಸಿತ್ತು.

ಈ ಸಮಾರಂಭವು ಸಾಂಪ್ರದಾಯಿಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಅಧಿಕಾರ, ಜನಪ್ರಿಯತೆ ಮತ್ತು ಆಧುನಿಕ ದಕ್ಷತೆಯನ್ನು ಬಿಂಬಿಸಲು ವಿನ್ಯಾಸಗೊಳಿಸಲಾದ ಭವ್ಯ ರಾಜಕೀಯ ದೃಶ್ಯಗಳಾಗಿ ಪರಿವರ್ತಿಸುವ ಉದ್ದೇಶಪೂರ್ವಕ ತಂತ್ರದ ಆರಂಭವನ್ನು ಸೂಚಿಸಿತು. ಗಾಂಧಿನಗರದ ರಾಜಭವನವನ್ನು ಬಳಸುವ ಬದಲು, ಸಮಾರಂಭವನ್ನು ಅಹಮದಾಬಾದ್ನ ಮುಕ್ತ ಮೈದಾನದ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ (ಫೆಬ್ರವರಿ 2024ರಲ್ಲಿ ಇದನ್ನು 'ನರೇಂದ್ರ ಮೋದಿ ಕ್ರೀಡಾಂಗಣ' ಎಂದು ಮರುನಾಮಕರಣ ಮಾಡಲಾಯಿತು) ಶಿಫ್ಟ್ ಮಾಡಲಾಗಿತ್ತು.

ಈ ಸ್ಥಳ ಬದಲಾವಣೆಯು ಸಾಂವಿಧಾನಿಕವಾಗಿ ಕಡ್ಡಾಯವಾದ ಪ್ರಕ್ರಿಯೆಯನ್ನು ಕ್ರೀಡಾಂಗಣದಷ್ಟು ದೊಡ್ಡ ಸಾರ್ವಜನಿಕ ಸಭೆಯನ್ನಾಗಿ ಪರಿವರ್ತಿಸಿತು. ಈ ಕಾರ್ಯಕ್ರಮದಲ್ಲಿ ಬೃಹತ್ ಬ್ಯಾನರ್ಗಳು, ಹೂವಿನ ಅಲಂಕಾರಗಳು ಮತ್ತು ಎತ್ತರದ ವೇದಿಕೆಗಳನ್ನು ಒಳಗೊಂಡಿತ್ತು. ಈ ವ್ಯವಸ್ಥೆಯು ಫೋಟೋ ಜರ್ನಲಿಸ್ಟ್ ಮತ್ತು ಟಿವಿ ಕ್ಯಾಮೆರಾಗಳ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುವಂತಿತ್ತು. ಇದರ ಚಿತ್ರಗಳು ಸುದ್ದಿ ಪ್ರಸಾರದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಖಚಿತಪಡಿಸಿತು. ಮುಂದೇನಾಗಲಿದೆ ಎಂಬುದರ ಸೂಚನೆಯಾಗಿ, ಮೋದಿ ಅವರು ಪ್ರಧಾನಿಯಾದ ನಂತರವೂ ಈ ಸಮಾರಂಭದಲ್ಲಿ ಸಾಂಪ್ರದಾಯಿಕ ಆಚರಣೆಗಳು, ವೇದ ಮಂತ್ರಗಳು ಮತ್ತು ಪ್ರಮುಖ ಹಿಂದೂ ಆಧ್ಯಾತ್ಮಿಕ ನಾಯಕರ ಆಶೀರ್ವಾದಗಳು ಸೇರಿಕೊಂಡವು, ಇದು ರಾಜಕೀಯ ಅಧಿಕಾರವನ್ನು ಧರ್ಮದ ಅಧಿಕಾರದೊಂದಿಗೆ ಬೆರೆಸಿತು.

2001ರ ಜನವರಿ 26 ರಂದು ಸಂಭವಿಸಿದ ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ಕಚ್ ಪ್ರದೇಶದ ಇನ್ನೂ ದುಃಸ್ಥಿತಿಯಲ್ಲಿರುವ ಮನೆಗಳು ಮತ್ತು ಆಸ್ತಿ-ಪಾಸ್ತಿಗಳಿಗೆ ಈ ಆಡಂಬರವು ತೀವ್ರ ವ್ಯತಿರಿಕ್ತವಾಗಿತ್ತು. ಕೇಶುಭಾಯ್ ಪಟೇಲ್ ನೇತೃತ್ವದ ರಾಜ್ಯ ಸರ್ಕಾರದ ಅಸಮರ್ಪಕ ಹಾಗೂ ಅದಕ್ಷತೆಯಿಂದ ಕೂಡಿದ ಪರಿಹಾರ ಮತ್ತು ಪುನರ್ವಸತಿ ಯೋಜನೆಗಳೇ ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಮೋದಿಯವರನ್ನು ಅಲ್ಲಿಗೆ ನಿಯೋಜಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಆ ಸಮಯದಲ್ಲಿ ಆಡಳಿತಾತ್ಮಕ ಮಿತವ್ಯಯದ ಅಗತ್ಯವಿದ್ದರೂ, ಮೋದಿ ಅವರು ಬೃಹತ್ ಪ್ರಮಾಣದ ವಿಶ್ವಾಸಾರ್ಹತೆಯ ಪ್ರದರ್ಶನವನ್ನು ಆರಿಸಿಕೊಂಡರು. ಈ ಪ್ರಮಾಣ ವಚನ ಸಮಾರಂಭವು, ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗಿ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಮೋದಿಯವರ ವಿಶಿಷ್ಟವಾದ 'ಕಾರ್ಯಕ್ರಮ ನಿರ್ವಹಣೆ' ಶೈಲಿಗೆ ಒಂದು ಮಾದರಿಯನ್ನು ಸೃಷ್ಟಿಸಿತು.

ಮಾದರಿಯ ಪ್ರಮುಖ ಅಂಶಗಳು

ರಾಜಕೀಯ ಸಂದೇಶದೊಂದಿಗೆ ಅವರ ಅದ್ದೂರಿ ಪ್ರದರ್ಶನದ ಬಯಕೆಯನ್ನು ಅರ್ಥಮಾಡಿಕೊಳ್ಳಲು ಈ ಮಾದರಿಯ ಪ್ರಮುಖ ಅಂಶಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ:

• ಸಾರ್ವಜನಿಕ ಸಂದರ್ಭಗಳನ್ನು ಸಾಮಾನ್ಯ ಪ್ರೋಟೋಕಾಲ್-ಗಳಂತೆ ನೋಡದೆ, ಶಕ್ತಿ, ನಿರ್ಧಾರ ಮತ್ತು ವೈಭವವನ್ನು ಬಿಂಬಿಸುವ ಉನ್ನತ ಉತ್ಪಾದನೆಯ ಪ್ರದರ್ಶನಗಳಾಗಿ ರೂಪಿಸುವುದು.

• ಸಾಂಪ್ರದಾಯಿಕ ಮಾಧ್ಯಮ ಫಿಲ್ಟರ್ಗಳನ್ನು ಬೈಪಾಸ್ ಮಾಡಿ ಮತ್ತು ಮತದಾರರೊಂದಿಗೆ ನೇರ ದೃಶ್ಯ ಸಂಪರ್ಕ ಸಾಧಿಸುವಂತೆ ಮಾಡುವ ಮೂಲಕ ನೇರ ಪ್ರಸಾರಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಕಸ್ಟಮೈಸ್ ಮಾಡಲು ಅವಕಾಶ ಕಲ್ಪಿಸುವುದು.

• ಪ್ರಮುಖವಾಗಿ ಪಕ್ಷದ ಕಾರ್ಯಕರ್ತರು, ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಒಳಗೊಂಡಿರುವ ಬೃಹತ್ ಜನಸ್ತೂಮದ ಮೂಲಕ ಇಂತಹ ಸಮಾರಂಭಗಳು ಕಾನೂನುಬದ್ಧತೆಯ ಪುರಾವೆಯಾಗಿ ಗುರುತಿಸುವಂತೆ ಮಾಡುವುದು.

ಮೋದಿ ರಾಜಕೀಯ ತಂತ್ರ

ಮೋದಿ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ನಂತರ, ಸಾರ್ವಜನಿಕ ಕಾರ್ಯಕ್ರಮಗಳ ಬಳಕೆ ಕೇವಲ ಒಂದು ಸಂವಹನ ತಂತ್ರ ಮಾತ್ರವಲ್ಲ, ಅದು ಅವರ ರಾಜಕೀಯ ತಂತ್ರದ ಕೇಂದ್ರ ಸ್ತಂಭ ಎಂಬುದು ಸ್ಪಷ್ಟವಾಯಿತು. ಕಳೆದ ಕಾಲು ಶತಮಾನದಿಂದ ಪ್ರತಿದಿನವೂ, ಅವರ ಈವೆಂಟ್ ಮ್ಯಾನೇಜ್ಮೆಂಟ್ ಶೈಲಿಯು ಸ್ಥಳೀಯ ಮಟ್ಟದ ಸಜ್ಜುಗೊಳಿಸುವುದರಿಂದ ಆರಂಭಿಸಿ ಉನ್ನತ ಮಟ್ಟದ ಅಂತರರಾಷ್ಟ್ರೀಯ ರಾಜತಂತ್ರ ರಾಜಕೀಯವಾಗಿ ವಿಕಸನಗೊಂಡಿದೆ ಎಂದು ವಾದಿಸಬಹುದು.

ಗುಜರಾತನ್ನು ಆರ್ಥಿಕ ಎಂಜಿನ್ ಆಗಿ ಸ್ಥಾಪಿಸಲು ವಾರ್ಷಿಕ ವೈಬ್ರಂಟ್ ಗುಜರಾತ್ ಶೃಂಗಸಭೆಗಳಾಗಿರಲಿ, ಪ್ರಾದೇಶಿಕ ಸಾಂಸ್ಕೃತಿಕ ಹೆಮ್ಮೆಯನ್ನು ನೇರವಾಗಿ ಅವರ ರಾಜಕೀಯ ಬ್ರಾಂಡ್ಗೆ ಜೋಡಿಸಲು ರಣ್ ಉತ್ಸವ್ ಮತ್ತು ಅಂತರರಾಷ್ಟ್ರೀಯ ಪತಂಗ ಉತ್ಸವವಾಗಿರಲಿ, 2012ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ 3D ಹಾಲೊಗ್ರಾಫಿಕ್ ಪ್ರೊಜೆಕ್ಷನ್ ರಾಲಿಯಾಗಿರಲಿ, ಅಥವಾ ಮೋದಿಯವರ ಜಾಗತಿಕ ರಾಜತಂತ್ರದ ಕಾರ್ಯಕ್ರಮಗಳಾಗಿರಲಿ - 2019 ರಲ್ಲಿ ಟೆಕ್ಸಾಸ್ನಲ್ಲಿ ನಡೆದ 'ಹೌಡಿ ಮೋದಿ' ಮತ್ತು ಸಹಜವಾಗಿ G-20 ಮತ್ತು ಬ್ರಿಕ್ಸ್ ಶೃಂಗಸಭೆಯು - ಇವೆಲ್ಲವೂ ಭಾರತದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನವನ್ನು ಮತ್ತು ಅದರ ಕೇಂದ್ರಬಿಂದುವಾಗಿ ಮೋದಿಯವರ ಇರುವಿಕೆಯನ್ನು ಸಾಬೀತುಪಡಿಸುತ್ತವೆ.

ಅವರ ರಾಜಕೀಯ ಶೈಲಿಯು ಯಾವಾಗಲೂ ನಾನಾ ರೀತಿಯ ಸಂದೇಶಗಳನ್ನು ಸಾರುವಂತಿರುತ್ತವೆ. ಅಯೋಧ್ಯೆಯ ರಾಮಮಂದಿರ ಮತ್ತು ಹೊಸದೆಹಲಿಯ ಹೊಸ ಸಂಸತ್ ಭವನದಲ್ಲಿ ನಡೆದ ಪುನರಾವರ್ತಿತ ಕಾರ್ಯಕ್ರಮಗಳು ಸಾಬೀತುಪಡಿಸಿದಂತೆ, ಅವರು ಸರ್ಕಾರಿ ಆಡಳಿತವನ್ನೇ ಒಂದು ಪವಿತ್ರ ಕೃತ್ಯವನ್ನಾಗಿ ಬದಲಾಯಿಸಿದರು. ಇಂತಹ ಸಮಾರಂಭಗಳು ಮೋದಿಯವರನ್ನು ಪ್ರಮುಖವಾಗಿ ಹಿಂದೂ ಧರ್ಮೀಯ ಸರ್ಕಾರಿ ಸಂಪ್ರದಾಯದ ರಕ್ಷಕನಂತೆ ಬಿಂಬಿಸುವ ಗುರಿ ಹೊಂದಿದ್ದವು.

ಮೋದಿ ಯುಗದಲ್ಲಿ ಮೂಲಭೂತ ಬದಲಾವಣೆ

ಉದ್ದೇಶಪೂರ್ವಕವಾಗಿ ಸಮಾರಂಭ-ಆಧಾರಿತ ನಾಯಕರಾಗಲು ಆಯ್ಕೆ ಮಾಡಿಕೊಂಡಿದ್ದರೂ (ಅವರು ಎಂದಿಗೂ ಕೇವಲ ಸಾಂಪ್ರದಾಯಿಕ ಪ್ರಧಾನಿಯಾಗಿರದೆ, ಎಲ್ಲವನ್ನೂ ಹತ್ತಿರದಿಂದ ನಿರ್ವಹಿಸುವ ಮ್ಯಾನೇಜರ್ ಅಥವಾ ಮುಖ್ಯಸ್ಥರಾಗಿದ್ದಾರೆ), ಈ ಹಂತದಲ್ಲಿ ಅಭೂತಪೂರ್ವ ರಚನಾತ್ಮಕ ಮತ್ತು ರಾಜಕೀಯ ದೌರ್ಬಲ್ಯಗಳು ತಲೆದೋರಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ.

ಪ್ರಸ್ತುತ ಅವರು ಮೈತ್ರಿಕೂಟದ ಪಾಲುದಾರರಿಂದ ನಿರ್ಬಂಧಕ್ಕೆ ಒಳಗಾಗಿಟ್ಟಿದ್ದಾರೆ - ಉದಾಹರಣೆಗೆ, ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ಗೆ ಸಂಬಂಧಿಸಿದ ವಿಷಯಗಳ ಕುರಿತು ಅವರ ಪ್ರತಿಕ್ರಿಯೆಗಳನ್ನು ಗಮನಿಸಿ - 'ಇಂಡಿಯಾ' ಬ್ಯಾನರ್ ಅಡಿಯಲ್ಲಿ ಪುನರುಜ್ಜೀವನಗೊಂಡ ವಿರೋಧ ಪಕ್ಷಗಳಿಂದ ಹಿಡಿದು ಹೊಸ ರಾಜಕೀಯ ವಿದ್ಯಮಾನವಾದ 'ಕಾಕ್ರೋಚ್ ಜನತಾ ಪಾರ್ಟಿ'ಯವರೆಗೆ ವಿವಿಧ ಶಕ್ತಿಗಳಿಂದ ಮೋದಿ ಅವರು ಸುತ್ತುವರಿಯಲ್ಪಟ್ಟಿರುವ ಕಾರಣ ಮೋದಿ ಯುಗದಲ್ಲಿ ಮೂಲಭೂತ ಬದಲಾವಣೆ ಗೋಚರಿಸುತ್ತಿದೆ. ಇದು ಅಧಿಕಾರದಲ್ಲಿ ಮೋದಿಯವರ ರಜತ ಮಹೋತ್ಸವದ ಹೊಳಪನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದೆ.

ಆದಾಗ್ಯೂ, ಕಳೆದ ಕಾಲು ಶತಮಾನದ (25 ವರ್ಷಗಳ) ಮೋದಿಯವರ ಆಡಳಿತವು ಸ್ವಾತಂತ್ರ್ಯಾನಂತರದ ಭಾರತದಲ್ಲಿ (ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ದಿನಗಳಿಗಿಂತಲೂ ಹೆಚ್ಚು) ಅತ್ಯಂತ ಪ್ರಭಾವಶಾಲಿ ಮತ್ತು ಅಧಿಕಾರ ಕೇಂದ್ರೀಕೃತ ಆಡಳಿತಾವಧಿಯಾಗಿದೆ ಎಂಬುದನ್ನು ನಿರಾಕರಿಸುವಂತಿಲ್ಲ.

ಇದು 'ಉತ್ತಮ, ಕೆಟ್ಟ ಮತ್ತು ವಿಕೃತ' (the good, the bad, and the ugly) ಎಂಬ ನುಡಿಗೆ ತಕ್ಕಂತೆ ಭಾರತೀಯರು ಎಲ್ಲವನ್ನೂ ಅನುಭವಿಸಿದ ವರ್ಷಗಳಾಗಿವೆ. ಮೋದಿಯವರ ನೇತೃತ್ವದ ಸರ್ಕಾರದ ಅವಧಿಗಳಲ್ಲಿ ಪರಿಚಯಿಸಲಾದ ಮತ್ತು ಬಡವರು ಸೇರಿದಂತೆ ಜನರಿಗೆ ಪ್ರಯೋಜನಕಾರಿಯಾದ ಹಲವಾರು ನವೀನ ನೀತಿಗಳು ಇಲ್ಲಿವೆ. ಅದೇ ರೀತಿ, ಅನೇಕ ಪ್ರಶ್ನಾರ್ಹ ಕಾರ್ಯಕ್ರಮಗಳು ಅಥವಾ ಉಪಕ್ರಮಗಳು ಕೂಡ ಇವೆ.

ರಾಜಕೀಯ ಮತ್ತು ಆಡಳಿತಾತ್ಮಕವಾಗಿ ತೀವ್ರ ಆಕ್ಷೇಪಣೆಗೆ ಗುರಿಯಾದ ಹಲವು ಕಠಿಣ ನಿರ್ಧಾರಗಳೂ ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಪ್ರಶಂಸಿಸಲಾಗಿದ್ದರೆ, ಇನ್ನು ಕೆಲವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ ಹಾಗೂ ನೇರವಾಗಿ ಖಂಡಿಸಲಾಗಿದೆ. ಪ್ರಸ್ತುತ ಸುದ್ದಿಯಲ್ಲಿರುವ ಚುನಾವಣಾ ಆಯೋಗದ ನಿಷ್ಪಕ್ಷಪಾತಕ್ಕೆ ಸಂಬಂಧಿಸಿದ ಪ್ರಶ್ನೆಗಳು ಈ ಸಮಸ್ಯೆಗಳಿಗೆ ನಿಕಟವಾಗಿ ಬೆಸೆದುಕೊಂಡಿವೆ. ಜೊತೆಗೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು, ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜನರು ಸರ್ಕಾರದ ಉಚಿತ ಯೋಜನೆಗಳ ಮೇಲೆ ಅವಲಂಬಿತರಾಗದೆ ಬದುಕುವಂತೆ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಷಯಗಳೂ ಇವುಗಳಲ್ಲಿ ಸೇರಿವೆ.

ಮೂರು ಕಾಲಘಟ್ಟಗಳು

ಆದರೆ, 25 ವರ್ಷಗಳ ಸಂಪೂರ್ಣ ಅವಧಿಯನ್ನು ಒಂದೇ ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ತಪ್ಪಾಗುತ್ತದೆ. ಬದಲಾಗಿ, ಮೋದಿಯವರ ಎರಡು ಸಾರ್ವಜನಿಕ ಹುದ್ದೆಗಳ ಕಾಲಾವಧಿಯನ್ನು ಮೂರು ಹಂತಗಳ ಕಥಾನಕವಾಗಿ ನೋಡುವುದು ಉತ್ತಮ: ನಿರ್ಮಾಣ (2001-2014), ಉತ್ತುಂಗ (2014-2024), ಮತ್ತು ಸೆಣೆಸಾಟ (2024-2026).

ಕೇಶುಭಾಯ್ ಪಟೇಲ್ ಅವರ ನಿರ್ಗಮನದ ನಂತರ ಮೋದಿಯವರು ಮುಖ್ಯಮಂತ್ರಿ ಗಾದಿಗೆ ಅನಿರೀಕ್ಷಿತವಾಗಿ ಏರಿದರು ಎಂದು ಹೇಳಲಾಗುತ್ತದೆಯಾದರೂ, ಇದು ಅವರ ಪಯಣಕ್ಕೆ ನಾಂದಿ ಹಾಡಿತು. 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಹೊಸ ದೆಹಲಿಗೆ ನಿಯೋಜನೆಗೊಂಡ ನಂತರ, ವಿಶೇಷವಾಗಿ ಅವರು ಹಲವಾರು ವರ್ಷಗಳಿಂದ ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದರು ಎಂದು ವಾದಿಸಬಹುದು.

ಅವರು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗಾಗಲೇ ಅವರ ವೈಯಕ್ತಿಕ ವೆಬ್ಸೈಟ್ (www.narendramodi.com) ಅಸ್ತಿತ್ವದಲ್ಲಿದ್ದುದು ಇದಕ್ಕೆ ಒಂದು ಸೂಚನೆ. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಇಡೀ ಸಮಾರಂಭವನ್ನು ನೇರ ಪ್ರಸಾರ ಮಾಡಿದ ವೇದಿಕೆಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸಿತು. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಮತ್ತು ಗುಜರಾತ್ ಮುಖ್ಯಮಂತ್ರಿಯಾದ ಆರಂಭಿಕ ದಿನಗಳಲ್ಲಿ ಲೇಖನಗಳು, ಸಾರ್ವಜನಿಕ ಭಾಷಣಗಳು ಮತ್ತು ರಾಜಕೀಯ ಹೊಸತನಗಳನ್ನು ಪ್ರಕಟಿಸಲು ಈ ನಿರ್ದಿಷ್ಟ ವೆಬ್ಸೈಟ್ನ್ನು ನೋಂದಾಯಿಸಿ ಪ್ರಾರಂಭಿಸಲಾಗಿತ್ತು.

ಭಾರತದ ಉನ್ನತ ಮಟ್ಟದ ಡೊಮೇನ್ (.in) 2000ರ ದಶಕದ ಮಧ್ಯಭಾಗದಿಂದಲೇ ವ್ಯಾಪಕವಾಗಿ ಲಭ್ಯವಿತ್ತು ಮತ್ತು ಜನಪ್ರಿಯವೂ ಆಗಿತ್ತು. ಹಾಗಾಗಿ ಮೋದಿಯವರ ತಂಡವು ರಾಷ್ಟ್ರೀಯ ಗುರುತನ್ನು ಬಿಂಬಿಸಲು www.narendramodi.in ಅನ್ನು ಅವರ ಪ್ರಾಥಮಿಕ ವೆಬ್ ವಿಳಾಸವಾಗಿ ಸ್ಥಾಪಿಸಿತು.

ಉಳಿವಿಗಾಗಿ ಸತತ ಹೆಣಗಾಟ

ಯೋಜಿತ ಇನ್ನಿಂಗ್ಸ್ ಆಗಿರಲಿ ಅಥವಾ ಇಲ್ಲದಿರಲಿ, ಮೋದಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಸ್ಮರಣೀಯ ಮೈಲಿಗಲ್ಲನ್ನು ದಾಟಿ ಬಂದಿದ್ದಾರೆ ಎಂಬುದನ್ನು ಈಗ ಅಲ್ಲಗಳೆಯುವ ಹಾಗಿಲ್ಲ. ಘಟನೆಗಳು ತಾವು ಬಯಸಿದಂತೆ ನಡೆಯಬೇಕೆಂದು ಅವರು ಎಷ್ಟು ಬಯಸಿದ್ದರೂ, ಅಧಿಕಾರದಲ್ಲಿ ಮೋದಿಯವರ ರಜತ ಮಹೋತ್ಸವವು ಸವಾಲಿಗೆ ಮಣಿಯದ ಅಧಿಕಾರಕ್ಕಿಂತ ಪ್ರಜಾಸತ್ತಾತ್ಮಕ ಸೆಣೆಸಾಟದಿಂದ ಗುರುತಿಸಲ್ಪಟ್ಟಿದೆ. ಅವರು ಈ ಯುಗವನ್ನು ಯಾರೂ ಪ್ರಶ್ನಿಸದ ನಾಯಕರಾಗಿ ಅಥವಾ ಭೇದಿಸಲಾಗದ ಏಕಶಿಲೆಯಾಗಿ ಮುಕ್ತಾಯಗೊಳಿಸುವಂತೆಯೂ ಇಲ್ಲ, ಬದಲಾಗಿ ತಮ್ಮ ಪೂರ್ವಿಕರಂತಹ ಹಲವಾರು ಸರ್ಕಾರಗಳ ಮುಖ್ಯಸ್ಥರಂತೆ ಮುಕ್ತಾಯಗೊಳಿಸುತ್ತಿದ್ದಾರೆ. ಇದರಲ್ಲಿ ಅವರ ಹಿಂದಿನ ಪಕ್ಷದ ಹಿರಿಯರಾದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವೂ ಸೇರಿದೆ.

ಮೋದಿ ಅವರು ಈಗ ಭಾರತೀಯ ಪ್ರಜಾಸತ್ತಾತ್ಮಕ ರಾಜಕಾರಣದ ಸಾಂಪ್ರದಾಯಿಕ ಚೌಕಟ್ಟಿನೊಳಗೆ - ಮೈತ್ರಿಕೂಟಗಳು, ಸಾಮಾಜಿಕ ಚಳವಳಿಗಳು ಮತ್ತು ಸಾಂಸ್ಥಿಕ ಅಡೆತಡೆಗಳೊಂದಿಗೆ - ತನ್ನ ಉಳಿವಿಗಾಗಿ ಸಕ್ರಿಯವಾಗಿ ಮಾತುಕತೆ ನಡೆಸುತ್ತಾ ಮತ್ತು ತನ್ನ ಸರ್ವಾಧಿಕಾರಿ ಸ್ವಭಾವವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಆಡಳಿತದ ನೇತೃತ್ವ ವಹಿಸಿದ್ದಾರೆ.

ಮುಂದಿನ ವಾರಗಳು, ತಿಂಗಳುಗಳು ಮತ್ತು ಅಂತಿಮವಾಗಿ ವರ್ಷಗಳು - ಮೋದಿ ಅವರು ತಮ್ಮ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆಯೇ, ಭವಿಷ್ಯದ ಇತಿಹಾಸಕಾರರು ಅವರ ಆಡಳಿತಾವಧಿಯನ್ನು ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಲಿವೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story