
ಹೊರ್ಮುಜ್ ಮತ್ತು ಬಾಬ್ ಅಲ್-ಮಂಡಬ್ ದಿಗ್ಬಂಧನದಿಂದ ಹುಟ್ಟಿಕೊಂಡಿರುವ ಈ ಜಿದ್ದಾಜಿದ್ದಿ ಮುಸ್ಲಿಂ ರಾಷ್ಟ್ರಗಳ ನಡುವೆ ನಡೆಯುತ್ತಿದ್ದರೂ ಅದರ ಪರಿಣಾಮ ಮಾತ್ರ ಜಗತ್ತಿಗೇ ಆಗುವುದು ನಿಶ್ಚಿತ.
ಯೆಮೆನ್‌ನ ಹೌತಿ ಮತ್ತು ಸೌದಿ ಸಂಘರ್ಷವನ್ನು ಅಮರಿಕ ಮತ್ತು ಇಸ್ರೇಲ್ ನಡೆಸಿದ ಇರಾನ್ ಮೇಲಿನ ದಾಳಿಯ ಜೊತೆ ಸಮೀಕರಿಸುವುದು ಎಂದರೆ ತಾಳಮೇಳವಿಲ್ಲದ ಎರಡು ಕಥೆಗಳು ಆಕಸ್ಮಿಕವಾಗಿ ಒಂದಕ್ಕೊಂದು ತಳಕುಹಾಕಿಕೊಂಡು ಹೊಸ ಹಾಗೂ ಸಂಕೀರ್ಣ ನಿರೂಪಣೆಯನ್ನು ಸೃಷ್ಟಿಸಿದಂತೆ ಕಾಣುತ್ತಿದೆ. ಆದರೆ ಇದಕ್ಕೆ ಈ ಪ್ರದೇಶವನ್ನು ಅಸ್ಥಿರಗೊಳಿಸುವ ಮತ್ತು ಇಡೀ ಜಗತ್ತಿನ ತಳಮಳಕ್ಕೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ.
ಪಾಶ್ಚಿಮಾತ್ಯ ಒಕ್ಕೂಟದ ಬೆಂಬಲದೊಂದಿಗೆ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಗಣರಾಜ್ಯ ದೇಶಗಳನ್ನು ಸೆಳೆದ ಯೆಮೆನ್ನ ಭೀಕರ ಅಂತರ್ಯುದ್ಧವು 2011ರ ಅತ್ಯಂತ ಜನಪ್ರಿಯ ಅಂದರೆ ಅರಬ್ ದಂಗೆಯ ನೇರ ಪರಿಣಾಮವಾಗಿತ್ತು. ಆ ಸಮಯದಲ್ಲಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲೆಹ್ ಅವರು ದೀರ್ಘ ಕಾಲದಿಂದ ಯೆಮೆನ್ನ್ನು ಆಳುತ್ತಿದ್ದರು.
ಜನಪ್ರತಿಭಟನೆ ಬದಲಿಸಿದ ಅಧಿಕಾರ
ಟ್ಯುನಿಷಿಯಾ ಮತ್ತು ಈಜಿಪ್ಟ್ನಂತೆಯೇ ಯೆಮೆನ್ನಲ್ಲಿಯೂ ವ್ಯಾಪಕ ಪ್ರಮಾಣದ ಪ್ರತಿಭಟನೆಗಳು ನಡೆದವು. ದೀರ್ಘಕಾಲದಿಂದ ಬಂಡಾಯ ಹೂಡಿದ್ದ ಹೌತಿಗಳು ಅಥವಾ ಅನ್ಸಾರ್ ಅಲ್ಲಾ ಸಂಘಟನೆಗೆ ಇದು ಅನುಕೂಲವಾಗಿ ಪರಿಣಮಿಸಿತು. ಅವರೆಲ್ಲ ಜನಪ್ರಿಯ ಪ್ರತಿಭಟನೆಗಳಲ್ಲಿ ನುಸುಳಿಕೊಂಡು ಅದಕ್ಕೆ ಇನ್ನಷ್ಟು ಬಲತುಂಬುವ ಕೆಲಸ ಮಾಡಿದರು. ಇದು ಅಂತಿಮವಾಗಿ ಸಾಲೆಹ್ ಅವರ ಅಧಿಕಾರಕ್ಕೇ ಕುತ್ತು ತಂದಿತು ಮತ್ತು ಉಪಾಧ್ಯಕ್ಷ ಅಬ್ದುರಬ್ಬು ಮನ್ಸೂರ್ ಹದಿ ಅಧಿಕಾರಕ್ಕೆ ಏರಲು ದಾರಿಮಾಡಿಕೊಟ್ಟಿತು. ಆಗ ಇವರಿಗೆ ಸೌದಿ ಅರೇಬಿಯಾ ಬೆಂಬಲವಿತ್ತು.
ಅಧಿಕಾರದಿಂದ ಕೆಳಗಿಳಿದ ಸಾಲೆಹ್ ಅವರು ಮಾಡಿದ್ದೇನೆಂದರೆ ರಾಜಧಾನಿ ಸನಾದತ್ತ ಮುನ್ನುಗ್ಗುತ್ತಿದ್ದ ಹೌತಿಗಳ ಜೊತೆ ಕೈಜೋಡಿಸಿದರು. ಇದರ ಪರಿಣಾಮವಾಗಿ ಹದಿ ಸರ್ಕಾರ ಪತನ ಹೊಂದಿತು. ಮನ್ಸೂರ್ ಹದಿ ತಮ್ಮ ಇಡೀ ಮಂತ್ರಿಮಂಡಳ ಹಾಗೂ ಇಲಾಖೆಯ ಇತರ ಸರ್ಕಾರಿ ಅಧಿಕಾರಿಗಳ ದಂಡಿನೊಂದಿಗೆ ದಕ್ಷಿಣದ ಏಡೆನ್ಗೆ ಪಲಾಯನ ಮಾಡಿದರು. ಹೌತಿಗಳು ರಾಜಧಾನಿಯ ಅಧಿಕಾರ ವಶಕ್ಕೆ ತೆಗೆದುಕೊಂಡರು. ಸಾಲೆಹ್ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಹಿಡಿದರು.
ಸಾಲೆಹ್ ಹತ್ಯೆ-ಶುರುವಾದ ಹೊಸ ಸಮರ
ಅದಾದ ಬಳಿಕ ಸೌದಿಗಳು ಸಾಲೆಹ್ ಅವರ ಜೊತೆಗೆ ಮಾತುಕತೆ ನಡೆಸಲು ಮುಂದಾದರು ಮತ್ತು ರಾಜಿ ಮಾಡಿಕೊಳ್ಳುವ ಸ್ಪಷ್ಟ ಸೂಚನೆ ಕಾಣತೊಡಗಿತು. ಆದರೆ ಹೌತಿಗಳು ಇದನ್ನು ದ್ರೋಹ ಎಂದು ಭಾವಿಸಿದರು. ಹಾಗಾಗಿ ಸಾಲೆಹ್ ಅವರನ್ನೇ ಹತ್ಯೆ ಮಾಡಿದರು. ಇದರ ಫಲವಾಗಿಯೇ ಒಂದು ಕಡೆ ಹೌತಿ ಬಂಡುಕೋರರು ಮತ್ತು ಇನ್ನೊಂದು ಕಡೆ ಸೌದಿ ಅರೆಬಿಯಾ ಬೆಂಬಲಿತ ಮನ್ಸೂರ್ ಹದಿ ನೇತೃತ್ವದ ಸರ್ಕಾರದ ನಡುವೆ ಯುದ್ಧ ಆರಂಭವಾಯಿತು. ಯುಎಇ ಕೂಡ ಸೌದಿ ಅರೆಬಿಯಾಕ್ಕೆ ಸಾಥ್ ನೀಡಿತು. ಇದರ ಜೊತೆಗೆ ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ಒಕ್ಕೂಟವು ಅವರಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತ ಬೆಂಬಲಕ್ಕೆ ನಿಂತವು. ಇನ್ನೊಂದು ಕಡೆ ಹೌತಿಗಳಿಗೆ ಇರಾನ್ನ ಇಸ್ಲಾಮಿಗಳ ಬೆಂಬಲ ದೊರೆಯಿತು.
ಹೌತಿಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ಇರಾನ್ ಪಾಲಿಗೆ ತರ್ಕಬದ್ಧವೇ ಆಗಿತ್ತು. ಈ ತರ್ಕದ ಚೌಕಟ್ಟಿನಲ್ಲಿ ಲೆಬನಾನಿನ ಹಿಜ್ಬುಲ್ಲ, ಸಿರಿಯಾದ ಬಶರ್ ಅಲ್-ಅಸಾದ್ ಮತ್ತು ಪ್ಯಾಲೆಸ್ತೀನಿನ ಹಮಾಸ್ ಕೂಡ ಸೇರಿದ್ದವು. ಹಮಾಸ್ನ್ನು ಹೊರತುಪಡಿಸಿದರೆ ಈ ವಲಯದಲ್ಲಿ ಇರಾನ್ನಲ್ಲಿ ಆಳುತ್ತಿದ್ದ ಶಿಯಾ ಪಂಗಡದ ಪ್ರಾಬಲ್ಯವೇ ಹೆಚ್ಚಿತ್ತು. 2015ರಿಂದ ಏಳು ವರ್ಷಗಳ ಕಾಲ ಸೌದಿ ನೇತೃತ್ವದ ಒಕ್ಕೂಟವು ಹೌತಿಗಳ ಮೇಲೆ ನಿರಂತರ ದಾಳಿ ನಡೆಸಿತು. ಹೌತಿಗಳಂತೂ ಇರಾನಿನ ಸಹಾಯ ಪಡೆದು ತಿರುಗೇಟು ನೀಡಿದರು.
ಮಾನವೀಯ ಬಿಕ್ಕಟ್ಟು
ಈ ಯುದ್ಧದಿಂದ ಯೆಮೆನ್ಗೆ ಆದ ಹಾನಿ ದೊಡ್ಡದು. ವಿಶ್ವಸಂಸ್ಥೆ ಇದನ್ನು ಮಾನವೀಯ ಬಿಕ್ಕಟ್ಟು ಎಂದು ಕರೆಯಿತು. ಈ ಸಂಘರ್ಷದ ಕಾರಣದಿಂದಾಗಿಯೇ ಯೆಮೆನ್ನೊಳಗಿದ್ದ ಐದು ದಶಲಕ್ಷ ನಾಗರಿಕರು ಸ್ಥಳಾಂತರಗೊಂಡರು. ವಿಶ್ವಸಂಸ್ಥೆಯ ಪ್ರಕಾರ ಯೆಮೆನ್ನ 41 ದಶಲಕ್ಷ ಜನಸಂಖ್ಯೆಯಲ್ಲಿ ಅರ್ಧಕ್ಕರ್ಧದಷ್ಟು ಜನರಿಗೆ ತುರ್ತು ಸಹಾಯದ ಅಗತ್ಯವಿತ್ತು.
ಸುದೀರ್ಘ ಹೋರಾಟದ ಬಳಿಕವೂ ಯಾವುದೇ ಪಕ್ಷಕ್ಕೆ ಗೆಲುವು ದಕ್ಕದೇ ಹೋದಾಗ 2022ರಲ್ಲಿ ಕದನ ವಿರಾಮ ಘೋಷಿಸಲಾಯಿತು. ಹೌತಿಗಳು ಸನಾದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದರು. ಪದಚ್ಯುತ ಹದಿ ಸರ್ಕಾರವು ಏಡೆನ್ ಕರಾವಳಿಯ ಬಳಿ ಆಶ್ರಯಪಡೆದಿತ್ತು. ವಿಶ್ವಸಂಸ್ಥೆಯು ಹದಿ ಸರ್ಕಾರವನ್ನು ಯೆಮೆನ್ನ ಕಾನೂನುಬದ್ಧ ಸರ್ಕಾರವೆಂದು ಮಾನ್ಯ ಮಾಡಿತು.
ಹೊತ್ತಿಕೊಂಡ ಹೊಸ ಕಿಡಿ
ಆದ್ದರಿಂದ ಈ ವರ್ಷದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ ಹೌತಿ ಬಂಡುಕೋರರು ಸಹಜವಾಗಿ ಇರಾನ್ ಬೆಂಬಲಕ್ಕೆ ನಿಂತವು. ಆದರೆ ಅವರು ಇರಾನ್ಗೆ ಸಕ್ರಿಯವಾಗಿ ಸಹಾಯ ಮಾಡಲು ಮಧ್ಯಪ್ರವೇಶಿಸಲಿಲ್ಲ. ಅದಾಗಿ ಜುಲೈ ತಿಂಗಳಿನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಹೊತ್ತಿನಲ್ಲಿ ಯುದ್ಧದ ಆರಂಭದಲ್ಲಿಯೇ ಹತ್ಯೆಗೀಡಾದ ತನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯ ಸಂಸ್ಕಾರವನ್ನು ಇರಾನ್ ಆಯೋಜಿಸಿತ್ತು.
ಈ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಸುಮಾರು 200 ಮಂದಿ ಹೌತಿ ಅಧಿಕಾರಿಗಳನ್ನು ಕರೆತರುವ ಸಲುವಾಗಿ ಇರಾನ್ ಸರ್ಕಾರವು ಸನಾಗೆ ನಾಗರಿಕ ವಿಮಾನವನ್ನು ಕಳುಹಿಸಿತು. ಈ ಹಿಂದೆ ಮಾಡಿಕೊಂಡ ಒಪ್ಪಂದದಲ್ಲಿನ ನಿಬಂಧನೆ ಪ್ರಕಾರ ಯೆಮೆನ್ ವಾಯುಪ್ರದೇಶದ ಮೇಲೆ ಯಾವುದೇ ರೀತಿಯ ಹಾರಾಟಕ್ಕೆ ಸೌದಿ ನೇತೃತ್ವದ ಒಕ್ಕೂಟದ ಅನುಮೋದನೆ ಬೇಕಾಗಿತ್ತು. ಆದರೆ ಇರಾನಿನ ವಿಮಾನವು ಈ ನಿಬಂಧನೆಯನ್ನು ಗಾಳಿಗೆ ತೂರಿ ಸನಾದಲ್ಲಿ ಭೂಸ್ಪರ್ಶ ಮಾಡಿತು. ಇದಕ್ಕೆ ರಿಯಾದ್ ಭಾರೀ ಪ್ರತಿಭಟನೆ ವ್ಯಕ್ತಪಡಿಸಿತು.
ಅಯತೊಲ್ಲಾ ಖಮೇನಿ ಅವರ ಅಂತ್ಯ ಸಂಸ್ಕಾರ ಮುಗಿದ ಬಳಿಕ ಜುಲೈ ತಿಂಗಳ ಆರಂಭದಲ್ಲಿ ವಿಮಾನವು ಹೌತಿ ಅಧಿಕಾರಿಗಳನ್ನು ವಾಪಸ್ ಕರೆತರುತ್ತಿದ್ದಾಗ ಸೌದಿ ಅರೆಬಿಯಾ ಸನಾ ವಿಮಾನ ನಿಲ್ದಾಣದ ಮೇಲೆ ಗುಂಡಿನ ದಾಳಿ ನಡೆಸಿತು. ಇದರಿಂದಾಗಿ ವಿಮಾನವು ಹೌತಿ ನಿಯಂತ್ರಣದಲ್ಲಿರುವ ಮತ್ತೊಂದು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾದ ಒತ್ತಡ ನಿರ್ಮಾಣವಾಯಿತು.
ಮುರಿದು ಬಿದ್ದ ಕದನ ವಿರಾಮ
ಈ ಬೆಳವಣಿಗೆಯ ಬಳಿಕ ಹೌತಿಗಳು ಸುಮ್ಮನಿರಲು ಕಾರಣವಿರಲಿಲ್ಲ. ಹಾಗಾಗಿ ಹೌತಿ ಮತ್ತು ಸೌದಿ ಅರೇಬಿಯಾ ನಡುವೆ ಹೊಸ ಸುತ್ತಿನ ಹೋರಾಟ ಹೊತ್ತಿಕೊಂಡಿತು. ಇದರಿಂದಾಗಿ ನಾಲ್ಕು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ಕದನ ವಿರಾಮವು ಮುರಿದುಬಿದ್ದಿತು. ಹದಿ ಬೆಂಬಲಿತ ಯೆಮೆನ್ ಸರ್ಕಾರದ ಸೇನೆಯು ತಕ್ಷಣವೇ ಹೋರಾಟದ ಕಣಕ್ಕೆ ಧುಮುಕಿ ಹೌತಿಗಳ ಮೇಲೆ ದಾಳಿ ನಡೆಸಿತು. ಇದರಿಂದಾಗಿಯೇ ಅಂತರ್ಯುದ್ಧಕ್ಕೆ ಮತ್ತೆ ಕಿಚ್ಚು ಹಚ್ಚಿದಂತಾಯಿತು.
ಹೋರಾಟ ಮತ್ತೆ ಆರಂಭವಾಗಿರುವುದು ಇರಾನ್ಗೆ ಮಿಲಿಟರಿ ದೃಷ್ಟಿಯಿಂದ ಅನುಕೂಲವೇ ಆಗಿದೆ. ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯ ಜೊತೆ ಸಂಧಿಸುವಂತೆ ಮಾಡುವ ಕಿರಿದಾದ ಬಾಬ್ ಅಲ್-ಮಂಡಬ್ ಜಲಸಂಧಿಯಲ್ಲಿ, ಹೊರ್ಮುಜ್ ಜಲಸಂಧಿ ಮೇಲೆ ಇರಾನ್ ಹೇರಿರುವ ದಿಗ್ಬಂಧನವನ್ನು ತನ್ನ ಮಿತ್ರಪಕ್ಷಗಳಾದ ಹೌತಿಗಳು ಪುನರಾರಂಭ ಮಾಡಬಹುದು ಎಂಬುದು ಇರಾನಿನ ಲೆಕ್ಕಾಚಾರವಾಗಿದೆ.
ಹೊರ್ಮುಜ್ ಜಲಸಂಧಿಯಷ್ಟು ವ್ಯಾಪಕ ಪ್ರಮಾಣದಲ್ಲಿ ಬಳಸಲಾಗದೇ ಇದ್ದರೂ, ಬಾಬ್ ಅಲ್-ಮಂಡಬ್ ಕೂಡ ಅಂತರರಾಷ್ಟ್ರೀಯ ನೌಕಾಯಾನಕ್ಕೆ ಅಷ್ಟೇ ಪ್ರಮುಖವಾಗಿದೆ. ಸೌದಿ ಅರೇಬಿಯಾವು ತನ್ನ ಪೂರ್ವದಿಂದ ಪಶ್ಚಿಮಕ್ಕೆ ಚಾಚಿಕೊಂಡಿರುವ ಭೂಮಿಯ ಮೇಲಿನ ತೈಲ ಪೈಪ್ಲೈನ್ ಮೂಲಕ, ಬಾಬ್ ಅಲ್-ಮಂಡಬ್ ಮೂಲಕ ತನ್ನ ತೈಲ ಸರಬರಾಜನ್ನು ರವಾನಿಸುತ್ತಿತ್ತು. ಇದರ ಪ್ರಮಾಣ ಪ್ರತಿದಿನ ಸುಮಾರು ಆರು ಮಿಲಿಯನ್ ಬ್ಯಾರಲ್ಗಳಷ್ಟಿದೆ. ಯುರೋಪಿನಿಂದ ಏಷ್ಯಾಕ್ಕೆ ಮತ್ತು ಪ್ರತಿಯಾಗಿ ಸಾಗಿಸುವ ಸರಕು ಸಾಗಣೆಗೂ ಈ ಜಲಸಂಧಿಯು ಅಷ್ಟೇ ನಿರ್ಣಾಯಕವಾಗಿದೆ.
ಹೌತಿ ವಾದ: ಜಾಗತಿಕ ಅಡಚಣೆ
ತಾವು ಸೌದಿ ಸಂಬಂಧಿತ ಸರಕುಗಳ ಮೇಲೆ ಮಾತ್ರ ಗುರಿ ಇಟ್ಟಿದ್ದೇವೆಯೇ ಹೊರತು ಇತರರ ಮೇಲೆ ಅಲ್ಲ ಎಂದು ಹೌತಿಗಳು ಹೇಳಿದ್ದಾರೆ. ಆದರೆ ಸೌದಿ ತೈಲ ಹಾಗೂ ಇತರ ವಸ್ತುಗಳನ್ನು ಅವಲಂಬಿಸಿರುವ ಏಷ್ಯಾದ ರಾಷ್ಟ್ರಗಳಿಗೆ ಇದು ಕೂಡ ಅಷ್ಟೇ ದೊಡ್ಡ ಅಡಚಣೆ ಉಂಟುಮಾಡುತ್ತದೆ. ತಾವು ಸೌದಿ ನೌಕೆಗಳನ್ನು ಮಾತ್ರ ಗುರಿಯಾಗಿಸುತ್ತಿದ್ದೇವೆ ಎಂದು ಹೌತಿಗಳೆನೋ ವಾದ ಮಾಡಬಹುದು, ಆದರೆ ಇದರಿಂದ ಉಂಟಾದ ಅನಿಶ್ಚಿತತೆಯು ಈಗಾಗಲೇ ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರೊಂದಿಗೆ ಬೆಲೆಯು ಮತ್ತೆ ಪ್ರತಿ ಬ್ಯಾರಲ್ಗೆ 100 ಡಾಲರ್ಗಿಂತ ಹೆಚ್ಚಾಗಿದೆ.
ಹೌತಿಗಳು ಭೂಮಿ ಮತ್ತು ಸಮುದ್ರ ಎರಡರಲ್ಲೂ ಸೌದಿಗಳನ್ನು ಮಾತ್ರ ಗುರಿಯಾಗಿಸುತ್ತಿದ್ದೇವೆ ಎಂದು ಹೇಳುತ್ತಿದ್ದರೂ, ಈ ಎಲ್ಲಾ ಘಟನೆಗಳು ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಎರಡನೇ ರಂಗ ತೆರೆದುಕೊಳ್ಳುವಂತೆ ಮಾಡಿದೆ.
ಟ್ರಂಪ್ ಯುದ್ಧವನ್ನು ಮುಂದುವರಿಸುವ ಆಸಕ್ತಿ ಕಳೆದುಕೊಂಡಂತೆ ತೋರುತ್ತಿದ್ದರೂ ಮತ್ತು ಯಾವುದೇ ಮುಖಭಂಗವಾಗದೇ, ಅದರಿಂದ ಹೊರಬರಲು ಪ್ರಯತ್ನಿಸಿದ್ದರೂ, ಅವರ ನಿಯಂತ್ರಣ ಮೀರಿದ ವಿದ್ಯಮಾನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಗಳು ಅವರ ಯೋಜನೆಗಳನ್ನು ವಿಫಲಗೊಳಿಸಿವೆ. ಟ್ರಂಪ್ ಅವರ ಹಸ್ತಕ್ಷೇಪಕ್ಕಾಗಿ ಸೌದಿ ಅರೇಬಿಯಾ ಮನವಿ ಮಾಡಿಕೊಂಡಿದ್ದರೂ, ಹೌತಿಗಳ ವಿರುದ್ಧದ ಹೋರಾಟಕ್ಕೆ ತಾವು ಬಹಿರಂಗವಾಗಿ ಧುಮುಕುವುದಿಲ್ಲ ಎಂದು ಅಮೆರಿಕ ಹೇಳಲು ಇದೂ ಒಂದು ಕಾರಣವಾಗಿದೆ.
ಅಮೆರಿಕ -ಬ್ರಿಟನ್ ಬೆಂಬಲ
ಆದಾಗ್ಯೂ, ಅಮೆರಿಕ ಅಧಿಕಾರಿಗಳು ಮತ್ತು ಬ್ರಿಟನ್ ತಮ್ಮ ಸಿಬ್ಬಂದಿ ತಾಂತ್ರಿಕ ಸಹಾಯ ಮತ್ತು ಇತರ ಮಿಲಿಟರಿ ಸಂಬಂಧಿತ ನೆರವಿನೊಂದಿಗೆ ರಿಯಾದ್ನಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೌತಿಗಳು ಅತ್ಯಂತ ಚುರುಕಾಗಿ ಮುನ್ನುಗ್ಗಿ ಬಾಬ್ ಅಲ್-ಮಂಡಬ್ ಜಲಸಂಧಿಯ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡು ಸೌದಿಗಳ ಹಿನ್ನಡೆಗೆ ಕಾರಣರಾಗಿರುವುದರಿಂದ ಇವರ ಸಹಾಯವು ಎಷ್ಟು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿಲ್ಲ. ಈ ಲೇಖನವನ್ನು ಬರೆಯುವ ಹೊತ್ತಿಗೆ, ಹೌತಿಗಳು ಮೊದಲ ಬಾರಿಗೆ ಸೌದಿ ರಾಜಧಾನಿ ರಿಯಾದ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದು, ತೈಲ ಸೌಲಭ್ಯಗಳು ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಹಾನಿ ಎಸಗಿದ್ದಾರೆ.
ಇದರ ಮಧ್ಯೆ, ಇರಾನ್ ಪ್ರಸ್ತಾಪ ಮಾಡಿದ ಈ ಪ್ರದೇಶದ ಮುಸ್ಲಿಂ ರಾಷ್ಟ್ರಗಳ ನಡುವಿನ ಹೆಚ್ಚು ಚರ್ಚಿತವಾದ ಒಗ್ಗಟ್ಟು, ಅದು ಪ್ರಾರಂಭವಾಗುವ ಮೊದಲೇ ಮುರಿದುಬೀಳುವ ಅಪಾಯದಲ್ಲಿದೆ. ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ನಡುವಿನ ಮಕ್ಕಾ ಒಪ್ಪಂದದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಯಾವುದೇ ಒಂದು ದೇಶದ ಮೇಲೆ ನಡೆಸುವ ದಾಳಿಯು ಮೂರು ದೇಶಗಳ ಮೇಲಿನ ದಾಳಿಯಾಗುತ್ತದೆ ಎಂದು ಈ ಒಪ್ಪಂದವು ಹೇಳುತ್ತದೆ, ಮತ್ತು ಆದ್ದರಿಂದ ಸೌದಿಗಳಿಗೆ ಸಹಾಯ ಮಾಡಲು ಟರ್ಕಿ ಅಥವಾ ಪಾಕಿಸ್ತಾನಕ್ಕೆ ಇದು ಕಾನೂನುಬದ್ಧವಾಗಿದೆ. ಆದರೆ ಬೆಂಬಲದ ಹೇಳಿಕೆಗಳನ್ನು ಹೊರತುಪಡಿಸಿ ಇಲ್ಲಿಯವರೆಗೆ ಬೇರೇನೂ ನಡೆದಿಲ್ಲ.
ಹೊರ್ಮುಜ್ ಮತ್ತು ಬಾಬ್ ಅಲ್-ಮಂಡಬ್ ದಿಗ್ಬಂಧನದಿಂದ ಹುಟ್ಟಿಕೊಂಡಿರುವ ಈ ಯುದ್ಧವು ಇನ್ನೂ ಮುಂದುವರಿದರೆ, (ಎಲ್ಲವೂ ಮುಸ್ಲಿಂ ರಾಷ್ಟ್ರಗಳಾಗಿದ್ದರೂ ಕೂಡ) ಈ ಪ್ರದೇಶದ ರಾಷ್ಟ್ರಗಳ ನಡುವೆ ಒಗ್ಗಟ್ಟು ಸಾಧ್ಯವೇ ಮತ್ತು ಮಕ್ಕಾ ಒಪ್ಪಂದದಂತಹ ರಕ್ಷಣಾ ಒಪ್ಪಂದಗಳು ಕಾರ್ಯಸಾಧುವೇ ಎಂಬುದು ಬಹಿರಂತವಾಗುವುದು ನಿಶ್ಚಿತ. ಆದರೂ ಉಳಿದ ಜಗತ್ತಿಗೆ ಮಾತ್ರ ಇಂಧನ ಪೂರೈಕೆಯ ವಿಚಾರದಲ್ಲಿ ಅಕ್ಷರಶಃ ಪರದಾಡುವ ನಿರ್ಮಾಣವಾದರೆ ಅಚ್ಚರಿಯಿಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


