Kanchi Dileep

ಮೀಸಲಾತಿಗಿಂತ ಬೃಹತ್ತಾಗಿದೆ ಭಾರತದ ಉದ್ಯೋಗ ಬಿಕ್ಕಟ್ಟು: ನಮಗೀಗ ಬೇಕಿದೆ ಅವಕಾಶಗಳ ಸೃಷ್ಟಿ!


ಮೀಸಲಾತಿಗಿಂತ ಬೃಹತ್ತಾಗಿದೆ ಭಾರತದ ಉದ್ಯೋಗ ಬಿಕ್ಕಟ್ಟು: ನಮಗೀಗ ಬೇಕಿದೆ ಅವಕಾಶಗಳ ಸೃಷ್ಟಿ!
x
ಮೀಸಲಾತಿ ಎನ್ನುವುದು ಲಭ್ಯವಿರುವ ಸೀಮಿತ ಸೀಟುಗಳನ್ನು ಅಥವಾ ಉದ್ಯೋಗಗಳನ್ನು ಯಾರಿಗೆ ನೀಡಬೇಕು ಎಂದು ಹಂಚುವ ಒಂದು ದಾರಿ ಅಷ್ಟೇ. ಆದರೆ ದೇಶದಲ್ಲಿ ಒಟ್ಟಾರೆಯಾಗಿ ಎಷ್ಟು ಸುರಕ್ಷಿತ ಕೆಲಸಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಅದು ನಿರ್ಧರಿಸುವುದಿಲ್ಲ.

ನೀಟ್‌ ಹಗರಣದ ವಿರುದ್ಧ ಬೃಹತ್‌ ಪ್ರತಿಭಟನೆಯ ಬಳಿಕ ಈಗ ಮೀಸಲಾತಿ ವಿರೋಧಿ ಅಭಿಯಾನ ಗರಿಗೆದರುತ್ತಿದೆ. ಭಾರತದ ಉದ್ಯೋಗ ಬಿಕ್ಕಟ್ಟು ಮಿತಿ ಮೀರಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅವಕಾಶಗಳ ಸೃಷ್ಟಿಯೇ ಸವಾಲಾಗಿದೆ.

ನೀಟ್‌ ಪರೀಕ್ಷೆಯ ಗೊಂದಲಗಳನ್ನು ಮುಂದಿಟ್ಟುಕೊಂಡು ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಭಾರೀ ಚಳವಳಿ ನಡೆಸಿದ ಬಳಿಕ ದೆಹಲಿಯ ಜಂತರ್‌ ಮಂತರ್‌ ಮತ್ತೊಂದು ಪ್ರತಿಭಟನೆಗೆ ಸಾಕ್ಷಿಯಾಯಿತು- ಅದು ʼಮೀಸಲಾತಿ ಹಠಾವೋ ಆಂದೋಲನ.ʼ

ಮೀಸಲಾತಿ ವಿರೋಧಿ ಅಭಿಯಾನವು ಎಷ್ಟು ತೀವ್ರ ಸ್ವರೂಪವನ್ನು ಪಡೆದಿದೆ ಎಂಬುದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಅದರ ಅನುಯಾಯಿಗಳ ಸಂಖ್ಯೆ 5.6 ದಶಲಕ್ಷವನ್ನೂ ಮೀರಿರುವುದೇ ಸಾಕ್ಷಿ. ಈ ಸಂಬಂಧದ ಅಸಮಾಧಾನವು ಸಾರ್ವಜನಿಕವಾಗಿ ಮುನ್ನೆಲೆಗೆ ಬಂದಿರುವುದು ಕೂಡ ಇದರಿಂದ ವೇದ್ಯವಾಗುತ್ತದೆ. ಪ್ರತಿಭಟನಾಕಾರರು ಪದೇ ಪದೇ ಹೇಳುವ ಮಾತೇನೆಂದರೆ ಮೀಸಲಾತಿಗೆ ತಮ್ಮ ವಿರೋಧವೇನೂ ಇಲ್ಲ. ಆದರೆ ಅದಕ್ಕೆ ಜನರ ಆರ್ಥಿಕ ಸ್ಥಿತಿಯೇ ಮಾನದಂಡವಾಗಬೇಕು ಎಂಬುದು.

ಈ ಹಿನ್ನೆಲೆಯಲ್ಲಿ ಬೇಡಿಕೆಯು ಒಂದು ಹಳೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಅದೇನೆಂದರೆ ತೀರಾ ದುರ್ಲಭವಾಗಿರುವ ಅವಕಾಶ ಯಾರಿಗೆ ಸಿಗಬೇಕು? ಆದರೆ ಇಲ್ಲಿ ಇನ್ನೂ ಮುಖ್ಯವಾದ ಇನ್ನೊಂದು ಪ್ರಶ್ನೆಯೂ ಇದೆ; ಅವಕಾಶಗಳ ಹಂಚಿಕೆ ಯಾಕೆ ಇಷ್ಟೊಂದು ಕಡಿಮೆಯಾಗಿವೆ? ಇದರಿಂದಾಗಿಯೇ ಗುಂಪುಗಳ ನಡುವೆ ತೀವ್ರವಾದ ಪೈಪೋಟಿ ಹುಟ್ಟಿಕೊಳ್ಳುವಂತಾಗಿದೆ.

ಭಾರತದ ಮೀಸಲಾತಿ ಕುರಿತ ಚರ್ಚೆಯು ಮೂಲತಃ ಕೊರತೆಯ ಬಗೆಗಿನ ಚರ್ಚೆಯಾಗಿದೆ. ಸೀಮಿತ ಉದ್ಯೋಗಗಳು, ಶೈಕ್ಷಣಿಕ ಸೀಟುಗಳು ಹಾಗೂ ಸಾರ್ವಜನಿಕ ಸಂಪನ್ಮೂಲಗಳನ್ನು ಸಾಮಾಜಿಕವಾಗಿ ಪ್ರಮುಖ ವರ್ಗಗಳ ಮೂಲಕ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಉಂಟಾಗುವ ಸ್ಪರ್ಧೆಯು ʼಶೂನ್ಯ-ಮೊತ್ತʼದ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಂದರೆ ಒಂದು ಗುಂಪು ಪಡೆಯುವ ಲಾಭವನ್ನು ಮತ್ತೊಂದು ಗುಂಪಿನ ನಷ್ಟ ಎಂದು ಪರಿಗಣಿಸಲಾಗುತ್ತದೆ.

ಮರುಹಂಚಿಕೆಯನ್ನು ತಿರಸ್ಕರಿಸುವುದರಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ ಅಥವಾ ಕೇವಲ ಆರ್ಥಿಕ ಬೆಳವಣಿಗೆಯಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದೂ ಸರಿಯಾಗದು. ಇದಕ್ಕೆ ಬದಲಾಗಿ ಐತಿಹಾಸಿಕವಾಗಿರುವ ತಾರತಮ್ಯವನ್ನು ಪರಿಹರಿಸಬೇಕು, ಇದರಿಂದ ನಾಗರಿಕರು ಸ್ಪರ್ಧಿಸುವ ಸಂಸ್ಥೆಗಳು ಮತ್ತು ಅವಕಾಶಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ.

ಭರಪೂರ ವಿದ್ಯಾರ್ಥಿಗಳು-ಸೀಮಿತ ಅವಕಾಶಗಳು

ಇತ್ತೀಚಿನ ವರ್ಷಗಳಲ್ಲಿ ಭಾರತದ ಉನ್ನತ ಶಿಕ್ಷಣ ಗಣನೀಯವಾಗಿ ವಿಸ್ತರಿಸಿದೆ. 2014-15ರಲ್ಲಿ 3.42 ಕೋಟಿಯಷ್ಟಿದ್ದ ಒಟ್ಟು ದಾಖಲಾತಿಯು 2022-23ರಲ್ಲಿ 4.46 ಕೋಟಿಗೆ ಏರಿಕೆ ಕಂಡಿದೆ. 18-23 ವಯಸ್ಸಿನವರ ಒಟ್ಟು ದಾಖಲಾತಿ ಅನುಪಾತವು 2014-15 ಮತ್ತು 2023-24 ರ ನಡುವೆ ಶೇ.23.7 ರಿಂದ ಶೇ.30ಕ್ಕೆ ಏರಿಕೆಯಾಗಿದೆ. 2014-15 ಮತ್ತು 2022-23ರ ನಡುವೆ ಪರಿಶಿಷ್ಟ ಜಾತಿಯ ದಾಖಲಾತಿಯು ಸುಮಾರು ಶೇ.50 ರಷ್ಟು ಮತ್ತು ಪರಿಶಿಷ್ಟ ಪಂಗಡದ ದಾಖಲಾತಿಯು ಶೇ.75 ರಷ್ಟು ಹೆಚ್ಚಾಗಿದೆ.

ಆದರೆ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆಗೆ ಸರಿಯಾಗಿ ಎಂದಿಗೂ ಸ್ವಯಂಚಾಲಿತವಾಗಿ ಉದ್ಯೋಗಾವಕಾಶ ಕೂಡ ಹೆಚ್ಚಾಗಿದೆಯೇ ಎಂಬುದನ್ನು ಸೂಚಿಸುವುದಿಲ್ಲ. ಸದೃಢವಾದ ಅಧ್ಯಾಪಕವರ್ಗ, ನೆಟ್‌ವರ್ಕ್‌ಮತ್ತು ಉದ್ಯೋಗಾವಕಾಶಗಳನ್ನು ಹೊಂದಿರುವ ಸುಸಜ್ಜಿತ ಸಂಸ್ಥೆಯ ಪದವಿಯು, ಕಳಪೆ ಸೌಲಭ್ಯವಿರುವ ಕಾಲೇಜಿನ ಪದವಿಗೆ ಎಂದಿಗೂ ಸಮನಾಗಲಾರದು.

ಉದ್ಯೋಗ ಮಾರುಕಟ್ಟೆಯು ಈ ಅಂತರವನ್ನು ಪ್ರತಿಬಿಂಬಿಸುತ್ತದೆ; 2025 ರ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆಯು (ಪಿಎಲ್‌ಎಫ್‌ಎಸ್‌) 15-29 ವರ್ಷ ವಯಸ್ಸಿನವರ ನಿರುದ್ಯೋಗವನ್ನು ಶೇ.9.9 ಎಂದು ತೋರಿಸುತ್ತದೆ ಮತ್ತು ನಗರ ಪ್ರದೇಶಗಳಲ್ಲಿ ಇದು ಶೇ.13.6ಕ್ಕೆ ಜಿಗಿಯುತ್ತದೆ. ಕೇವಲ ಶೇ.23.6ರಷ್ಟು ಕಾರ್ಮಿಕರು ನಿಯಮಿತ ವೇತನ ಅಥವಾ ಸಂಬಳದ ಉದ್ಯೋಗದಲ್ಲಿದ್ದರೆ, ಶೇ.56.2ರಷ್ಟು ಜನರು ಸೋದ್ಯೋಗವನ್ನು ಅವಲಂಬಿಸಿದ್ದಾರೆ. ಈ ಅಂಕಿಅಂಶಗಳು ಕೇವಲ ಉದ್ಯೋಗದ ಕೊರತೆಗಿಂತಲೂ ಮಿಗಿಲಾದ ಕಥೆಯನ್ನು ಬಿಚ್ಚಿಡುತ್ತವೆ; ಯುವಕರು ನಿರೀಕ್ಷಿಸುವ ಸುರಕ್ಷಿತ ಮತ್ತು ಅಪೇಕ್ಷಿತ ಉದ್ಯೋಗಗಳಿಗೆ ಸಿಗುವ ಪ್ರವೇಶಕ್ಕಿಂತಲೂ ವೇಗವಾಗಿ ಶಿಕ್ಷಣ ಕ್ಷೇತ್ರ ವಿಸ್ತರಿಸುತ್ತಿದೆ. ಇದರಿಂದಾಗಿಯೇ ಅಸ್ತಿತ್ವದಲ್ಲಿರುವ ಅವಕಾಶಗಳ ಹಂಚಿಕೆಯನ್ನು ರಾಜಕೀಯವಾಗಿ ಹೆಚ್ಚು ಮಹತ್ವಪೂರ್ಣವಾಗಿ ಮಾಡುತ್ತದೆ.

ಕೊರತೆಯ ಚೌಕಟ್ಟಿನಲ್ಲಿ ಮೀಸಲಾತಿ

ಮೀಸಲಾತಿಯು ಸೀಮಿತ ಸಂಖ್ಯೆಯ ಹುದ್ದೆಗಳಿಗೆ ಪ್ರವೇಶವನ್ನು ನಿರ್ಧರಿಸುವ ಹಂಚಿಕೆಯ ವ್ಯವಸ್ಥೆಯಾಗಿದೆ. ಆದರೆ ಆರ್ಥಿಕತೆಯು ಎಷ್ಟು ಸುರಕ್ಷಿತ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಅದು ನಿರ್ಧರಿಸುವುದಿಲ್ಲ. ಈ ವ್ಯತ್ಯಾಸವು ನ್ಯಾಯಸಮ್ಮತವಲ್ಲದೇ ಇರುವ ಮೀಸಲಾತಿಯ ಕುರಿತಾದ ಕಳವಳಗಳನ್ನು ಪರಿಹರಿಸುವುದಿಲ್ಲ. ಅನುಷ್ಠಾನ, ಗುರಿ ನಿಗದಿ ಮತ್ತು ವರ್ಗಗಳ ಒಳಗೆ ಪ್ರಯೋಜನಗಳ ವಿತರಣೆಯ ಬಗೆಗಿನ ಪ್ರಶ್ನೆಗಳು ನೀತಿ ನಿರೂಪಣೆಯ ಸೂಕ್ಷ್ಮ ಪರಿಶೀಲನೆಗೆ ಅರ್ಹವಾಗಿವೆ. ಆದರೆ ಮೀಸಲಾತಿಯನ್ನು ವ್ಯಾಪಕವಾದ ಕೊರತೆಗೆ ಕಾರಣವೆಂದು ಪರಿಗಣಿಸಲು ಕೂಡ ಸಾಧ್ಯವಿಲ್ಲ.

ಜಾತಿ ಮತ್ತು ಅಸಮಾನತೆಯ ನೆರಳು

ಈ ಸಮಸ್ಯೆಯನ್ನು ಕೇವಲ ಆದಾಯ ಅಥವಾ ಸ್ಪರ್ಧೆಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಮತ್ತೊಂದು ಕಾರಣವೂ ಇದೆ. ಪರೀಕ್ಷೆ ಅಥವಾ ನೇಮಕಾತಿ ಪ್ರಕ್ರಿಯೆಯನ್ನು ತಲುಪುವ ಮೊದಲು ಅಸಮಾನವಾದ ಶಾಲಾ ಶಿಕ್ಷಣ, ವೃತ್ತಿಪರ ನೆಟ್‌ವರ್ಕ್‌ಗಳು, ವಸತಿ, ಸಾಲ ಮತ್ತು ತಾರತಮ್ಯದ ಮೂಲಕ ಜಾತಿಯು ಒಬ್ಬ ವ್ಯಕ್ತಿಗೆ ಅವಕಾಶಗಳನ್ನು ರೂಪಿಸಬಲ್ಲದು. ಭಾರತೀಯ ಕ್ಷೇತ್ರ ಪ್ರಯೋಗಗಳು ಇದನ್ನು ಸ್ಪಷ್ಟಪಡಿಸುತ್ತವೆ.

ಕೆಳ-ಜಾತಿಯ ಅರ್ಜಿದಾರರು ಅದೇ ಸಂಖ್ಯೆಯ ಕಾಲ್‌ಬ್ಯಾಕ್‌ಗಳನ್ನು ಸ್ವೀಕರಿಸಲು ಉನ್ನತ ಜಾತಿಯ ಅರ್ಜಿದಾರರಿಗಿಂತ ಸುಮಾರು ಶೇ.20ರಷ್ಟು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಬೇಕಾಯಿತು ಎಂಬುದನ್ನು ಝಹ್ರಾ ಸಿದ್ದಿಕ್ ಅವರ 2011ರ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಬ್ಯಾನರ್ಜಿ, ಬರ್ಟ್‌ರಂಡ್‌, ದತ್ತ ಮತ್ತು ಮುಲ್ಲೈನಾಥನ್ ಅವರ 2009ರ ದೆಹಲಿ ಕ್ಷೇತ್ರ ಪ್ರಯೋಗದ ಪ್ರಕಾರ ಸಾಫ್ಟ್‌ವೇರ್ ನೇಮಕಾತಿಯಲ್ಲಿ ಯಾವುದೇ ಜಾತಿಯ ಪ್ರಯೋಗವನ್ನು ಪತ್ತೆ ಮಾಡಲಾಗಿಲ್ಲ, ಆದರೆ ಕಾಲ್ ಸೆಂಟರ್ ನೇಮಕಾತಿಯಲ್ಲಿ ಒಬಿಸಿ ಮತ್ತು ತಕ್ಕಮಟ್ಟಿಗೆ ಎಸ್‌ಸಿ ಸಮುದಾಯದ ಅರ್ಜಿದಾರರಿಗೆ ಗಣನೀಯ ಪ್ರಮಾಣದ ಅನನುಕೂಲತೆಗಳಿವೆ ಎಂಬುದು ತಿಳಿದುಬಂದಿದೆ. ವಲಯಗಳ ನಡುವಿನ ವ್ಯತ್ಯಾಸವು ಮುಖ್ಯವಾಗಿದೆ, ಆದರೆ ಔಪಚಾರಿಕ ಅರ್ಹತೆಗಳ ಹೊರತಾಗಿಯೂ ಜಾತಿಯು ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕ್ಷ್ಯವೂ ಅಷ್ಟೇ ಮುಖ್ಯವಾಗಿದೆ.

ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ಪರಿಚಯಿಸಲಾದ ಶೇಕಡಾ 10ರಷ್ಟು ಇಡಬ್ಲ್ಯೂಎಸ್ ಮೀಸಲಾತಿಯು, ಆರ್ಥಿಕ ಹಿನ್ನಡೆಯನ್ನು ಕೂಡ ಸಕಾರಾತ್ಮಕ ಕ್ರಮದ ಮೂಲಕ ಗುರುತಿಸಲು ಸಾಧ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ ಆದಾಯ ಮತ್ತು ಜಾತಿಯ ಅನನುಕೂಲತೆಗಳು ಒಂದೇ ರೀತಿಯ ಕಾರ್ಯವಿಧಾನಗಳನ್ನು ಪ್ರತಿಬಿಂಬಿಸುವ ಅಗತ್ಯ ಇರುವುದಿಲ್ಲ. ಪ್ರವೇಶ ಪರೀಕ್ಷೆ ಅಥವಾ ಸಂದರ್ಶನಕ್ಕಿಂತ ಬಹಳಷ್ಟು ಮುಂಚಿತವಾಗಿಯೇ ಪೈಪೋಟಿ ಪ್ರಾರಂಭವಾಗುತ್ತದೆ, ಮತ್ತು ಜನರು ಒಂದೇ ಆರಂಭಿಕ ಬಿಂದುವಿನಿಂದ ಓಟವನ್ನು ಪ್ರಾರಂಭಿಸುವುದಿಲ್ಲ. ಆದ್ದರಿಂದ, ಸಂಪನ್ಮೂಲಗಳ ಕೊರತೆ ಮತ್ತು ಸಾಮಾಜಿಕ ಶ್ರೇಣೀಕರಣವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಪರಸ್ಪರ ಪ್ರಭಾವ ಬೀರುತ್ತವೆ.

ಅಭಾವದಿಂದ ಗುಂಪು ರಾಜಕೀಯದವರೆಗೆ

ಈ ಪರಸ್ಪರ ಕ್ರಿಯೆಯಿಂದ ವಿತರಣೆಗೆ ಸಂಬಂಧಿಸಿದ ಅಸಮಾಧಾನವು ಹೇಗೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ. ಸೀಮಿತ ಸೀಟುಗಳು ಅಥವಾ ಉದ್ಯೋಗ ಸಮಸ್ಯೆಗಳನ್ನು ಎದುರಿಸುವ ಜನರು ಸಹಜವಾಗಿ ತಮ್ಮ ಭವಿಷ್ಯವನ್ನು ಇತರರ ಜೊತೆಗೆ ಹೋಲಿಕೆ ಮಾಡುತ್ತಾರೆ. ಈ ಹೋಲಿಕೆಯನ್ನು ಅರ್ಥಮಾಡಿಕೊಳ್ಳಲು ಈಗಾಗಲೇ ಅಸ್ತಿತ್ವದಲ್ಲಿರುವ ಸಂಗತಿಗಳು ಸಿದ್ಧಪಡಿಸಿದ ವರ್ಗಗಳನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ ರಾಜಕೀಯ ಸಂಸ್ಥೆಗಳು ಮತ್ತು ಡಿಜಿಟಲ್ ಅಭಿಯಾನಗಳು ವೈಯಕ್ತಿಕ ಅಸಮಾಧಾನವನ್ನು ಸಾಮೂಹಿಕ ಚಳವಳಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ.

ಇಲ್ಲಿ ರಾಜಕೀಯವು ನಗಣ್ಯ ಎನಿಸಬಹುದು: ಅಸ್ತಿತ್ವದಲ್ಲಿರುವ ಅವಕಾಶಗಳನ್ನು ಹೇಗೆ ಸೃಷ್ಟಿಸುವುದು ಎಂಬುದಕ್ಕಿಂತ, ಈಗಾಗಲೇ ಇರುವ ಅವಕಾಶಗಳನ್ನು ಯಾರು ಪಡೆಯಬೇಕು ಎಂಬುದರ ಮೇಲೆ ವಿಷಯವನ್ನು ಕೇಂದ್ರೀಕರಿಸಲಾಗುತ್ತದೆ. ಆದರೆ ಕೊರತೆ ಎಂಬುದು ಸಂಪೂರ್ಣ ನಿಶ್ಚಿತ ಎಂದು ಪರಿಗಣಿಸಲು ಸಾಧ್ಯವಿಲ್ಲ; ಸಾರ್ವಜನಿಕ ವಿಶ್ವವಿದ್ಯಾಲಯಗಳ ಸಂಖ್ಯೆ ಮತ್ತು ಗುಣಮಟ್ಟವು ಭಾಗಶಃ ಸಾರ್ವಜನಿಕ ಹೂಡಿಕೆ ಮತ್ತು ಆಡಳಿತವನ್ನು ಅವಲಂಬಿಸಿರುತ್ತದೆ ಮತ್ತು ಉದ್ಯೋಗವು ಕೈಗಾರಿಕಾ ಹೂಡಿಕೆ, ಮೂಲಭೂತ ಸೌಕರ್ಯ ಮತ್ತು ಕೌಶಲ್ಯಗಳನ್ನು ಅವಲಂಬಿಸಿದೆ. ಮಕ್ಕಳ ಆರೈಕೆ ಮತ್ತು ಸಾರಿಗೆ ಸೌಕರ್ಯವು ಮಹಿಳೆಯರು ವೇತನದಾರರ ಕೆಲಸವನ್ನು ಪಡೆದುಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ನಿರ್ಧರಿಸುತ್ತದೆ.

ದೊಡ್ಡ ಅವಕಾಶಗಳ ಸೃಷ್ಟಿ

ಆದರೂ ʼಅವಕಾಶಗಳ ಕೇಕ್‌ನ್ನು ದೊಡ್ಡದಾಗಿ ಮಾಡುವುದುʼ ಕೂಡ ಸುಲಭವಾದ ಕೆಲಸವಲ್ಲ. ಅವಕಾಶಗಳ ವಿಸ್ತರಣೆಯು ವಿತ್ತೀಯ ಸಂಪನ್ಮೂಲಗಳು, ಆಡಳಿತಾತ್ಮಕ ಸಾಮರ್ಥ್ಯ, ಒಕ್ಕೂಟ ವ್ಯವಸ್ಥೆ, ಖಾಸಗಿ ಹೂಡಿಕೆ ಮತ್ತು ರಾಜಕೀಯ ಹಿಡಿತದಿಂದ ನಿರ್ಬಂಧಿಸಲ್ಪಟ್ಟಿದೆ. ಇದು ಹೊಸ ರೀತಿಯ ಸ್ಪರ್ಧೆಗಳನ್ನೂ ಸೃಷ್ಟಿಸಬಹುದು. ಆದ್ದರಿಂದ ವಿಸ್ತರಣೆಯು ಸಂಘರ್ಷವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಎಂದಲ್ಲ, ಬದಲಿಗೆ ನಿಗದಿತ ಸಂಖ್ಯೆಯ ಸ್ಥಾನಗಳಿಗಾಗಿ ಹೋರಾಡುವುದರಿಂದ ಹಿಡಿದು, ಸಂಸ್ಥೆಗಳು ಹೇಗೆ ಹೆಚ್ಚು ಮತ್ತು ಉತ್ತಮವಾದ ಅವಕಾಶಗಳನ್ನು ಸೃಷ್ಟಿಸಬಹುದು ಎಂಬುದರ ಕಡೆಗೆ ಸಂಘರ್ಷದ ಸ್ವರೂಪವನ್ನು ಬದಲಾಯಿಸಬಹುದು.

ರಾಜಕೀಯದಲ್ಲಿ ಹಂಚಿಕೆ ಏಕೆ ಸುಲಭ?

ಕಲ್ಯಾಣ ಯೋಜನೆಯ ಕೋಟಾವು ಗುರುತಿಸಬಹುದಾದ ಫಲಾನುಭವಿಯನ್ನು ಹೊಂದಿರುತ್ತದೆ, ಕಲ್ಯಾಣ ಸಂಬಂಧಿ ವರ್ಗಾವಣೆಗಳು ನೇರವಾಗಿ ಕುಟುಂಬಗಳನ್ನು ತಲುಪುತ್ತವೆ. ಹೊಸ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಬಹುದು ಮತ್ತು ರಾಜಕೀಯವಾಗಿ ಅದರ ಕ್ರೆಡಿಟ್ ಪಡೆಯಬಹುದು. ಆದರೆ ಉತ್ತಮ ಅಧ್ಯಾಪಕರ ನೇಮಕಾತಿ, ಉತ್ತಮ ಮಾನ್ಯತೆ ಅಥವಾ ಸುಧಾರಿತ ಅಪ್ರೆಂಟಿಸ್‌ಶಿಪ್ ವ್ಯವಸ್ಥೆಗಳು ಉದ್ದೇಶಿತ ಫಲಿತಾಂಶಗಳನ್ನು ನೀಡಲು ವರ್ಷಗಳೇ ಬೇಕಾಗುತ್ತವೆ.

ಇದು ವರ್ಗಾವಣೆಗಳು ಅಥವಾ ಮೀಸಲಾತಿಗಳನ್ನು ಸ್ವಾಭಾವಿಕವಾಗಿ ಅನಪೇಕ್ಷಿತವಾಗಿ ಮಾಡುವುದಿಲ್ಲ; ವಿಶೇಷವಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ತಕ್ಷಣದ ಆದಾಯ ಬೆಂಬಲವು ಅತ್ಯಗತ್ಯವಾಗಿರುತ್ತದೆ. ಆದರೆ ದೀರ್ಘಕಾಲೀನ ಸಂಸ್ಥೆಗಳ ನಿರ್ಮಾಣವು ಕಡಿಮೆ ಚುನಾವಣಾ ಲಾಭವನ್ನು ನೀಡುತ್ತದೆ.

ಭಾರತದ ಉನ್ನತ ಶಿಕ್ಷಣ ನೀತಿಯು ಈ ಸಮಸ್ಯೆಯನ್ನು ಗುರುತಿಸುವ ಕೆಲಸ ಮಾಡುತ್ತದೆ. ಉದಾಹರಣೆಗೆ, ಪಿಎಂ-ಉಷಾ ಯೋಜನೆಯು ಕೇವಲ ಪ್ರವೇಶವನ್ನು ವಿಸ್ತರಿಸುವುದರ ಮೇಲೆ ಮಾತ್ರವಲ್ಲದೆ, ಮೂಲಭೂತ ಸೌಕರ್ಯ, ಆಡಳಿತ, ಸಂಶೋಧನೆ ಮತ್ತು ಗುಣಮಟ್ಟ ಸುಧಾರಣೆಗಾಗಿ ಧನಸಹಾಯ ನೀಡುವ ಮೂಲಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಬಲಪಡಿಸುವುದರ ಕಡೆಗೂ ಗಮನಹರಿಸುತ್ತದೆ. ಸಾಂಸ್ಥಿಕ ಗುಣಮಟ್ಟವಿಲ್ಲದೆ ಕೇವಲ ದಾಖಲಾತಿಗಾಗಿ ಮಾಡುವ ವಿಸ್ತರಣೆಯು ಮುಂದಿನ ಅಡಚಣೆಯನ್ನು ಹಾಗೆಯೇ ಉಳಿಸಬಹುದು.

ಅವಕಾಶಗಳ ವ್ಯಾಪ್ತಿಯ ವಿಸ್ತರಣೆ

ಭಾರತಕ್ಕೆ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಹಂಚಿಕೆ ಎರಡೂ ಬೇಕು. ಉನ್ನತ ಶಿಕ್ಷಣದಲ್ಲಿ ಬರೀ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಸಾಲದು; ಅದಕ್ಕೆ ಉತ್ತಮ ಶಿಕ್ಷಕರು, ಆಧುನಿಕ ಸೌಲಭ್ಯಗಳು, ಉತ್ತಮ ಆಡಳಿತ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ಅಗತ್ಯವಿದೆ.

ಅಪ್ರೆಂಟಿಸ್‌ಶಿಪ್‌ಗಳಿಗೆ ಕಾಲೇಜುಗಳು, ಉದ್ಯೋಗದಾತರು ಮತ್ತು ನೈಜ ಉದ್ಯೋಗದ ನಡುವೆ ಉತ್ತಮ ಸಂಪರ್ಕಗಳ ಅಗತ್ಯವಿದೆ. ಮಹಿಳೆಯರ ವಿಷಯದಲ್ಲಿ ಮಕ್ಕಳ ಆರೈಕೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಉದ್ಯೋಗದ ಮೂಲಭೂತ ಸೌಕರ್ಯಗಳೆಂದೇ ಪರಿಗಣಿಸಬೇಕು,. ರಾಜ್ಯ ಸರ್ಕಾರಗಳು ತಕ್ಷಣದ ಸಾಮಾಜಿಕ ರಕ್ಷಣೆಯನ್ನು ಕಾಪಾಡಿಕೊಳ್ಳುವುದರ ಜೊತೆ ಜೊತೆಗೆ ಸಾರ್ವಜನಿಕ ಹೂಡಿಕೆಯನ್ನು ಮುಂದುವರಿಸಲು ಸಾಕಷ್ಟು ಹಣಕಾಸು ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಹೊಂದಿರಬೇಕು.

ಆರ್ಥಿಕ ಸಮೀಕ್ಷೆಯ ಪ್ರಕಾರ 2025-26ರಲ್ಲಿ ಎಲ್ಲ ರಾಜ್ಯಗಳಿಗೆ ಸರಿಸುಮಾರು 1.7 ಲಕ್ಷ ಕೋಟಿ ರೂ.ಗಳನ್ನು ನೇರ ಹಣದ ಸಹಾಯ ನೀಡುವ ಉದ್ದೇಶ ಹೊಂದಲಾಗಿದೆ. ಇಂತಹ ನೆರವಿನಿಂದ ಜನರಿಗೆ ತಕ್ಷಣದ ಬೆಂಬಲ ಸಿಕ್ಕಂತಾಗುತ್ತದೆ. ಆದರೆ ಶಾಲೆಗಳು, ಆಸ್ಪತ್ರೆಗಳು, ಸಾರಿಗೆ ಮತ್ತು ಉತ್ಪಾದನಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣದ ಕೊರತೆಯಾಗದಂತೆ ಮುತುವರ್ಜಿ ವಹಿಸಬೇಕು. ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮೂಲ ದೃಷ್ಟಿಕೋನದಂತೆ, ಕೇವಲ ಸಂಪನ್ಮೂಲಗಳನ್ನು ವಿತರಿಸುವುದು ಮಾತ್ರ ಗುರಿಯಾಗಬಾರದು, ಬದಲಿಗೆ ವಾಸ್ತವಾಗಿ ಜನರ ಸಾಮರ್ಥ್ಯವನ್ನು ಹೆಚ್ಚಿಸಬೇಕು.

ಭಾರತದ ನಿರುದ್ಯೋಗ ಸಮಸ್ಯೆಗೆ ಮೀಸಲಾತಿ ಮಾತ್ರ ಕಾರಣ ಎಂಬುದನ್ನು ಮೀಸಲಾತಿ ಹಠಾವೋ ಆಂದೋಲನ ಸಾಬೀತು ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಜನರು ಉತ್ತಮ ಉದ್ಯೋಗ ಹಾಗೂ ಶಿಕ್ಷಣವನ್ನು ಬಯಸಿದಾಗ ಇಂತಹ ರಾಜಕೀಯ ಒತ್ತಡಗಳು ಉದ್ಭವಿಸುತ್ತವೆ. ಆದರೆ ಎಲ್ಲರಿಗೂ ಸಮಾನವಾದ ಅವಕಾಶಗಳು ಲಭಿಸುವುದು ಕೂಡ ಕಷ್ಟದ ಕೆಲಸವಾಗಿದೆ.

ಹಾಗಾಗಿ ಮೀಸಲಾತಿ ಕುರಿತ ಚರ್ಚೆಯನ್ನು ಕೇವಲ ʼಮೆರಿಟ್‌ ವಿರುದ್ಧದ ಕೋಟಾʼ ಎಂದು ಕೇವಲವಾಗಿ ನೋಡಬಾರದು. ಕೇವಲ ʼಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿʼ ಎನ್ನುವ ಮಾತಿನಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಐತಿಹಾಸಿಕವಾದ ತಾರತಮ್ಯವನ್ನು ಸರಿಪಡಿಸಬೇಕು ಮತ್ತು ಮೀಸಲಾತಿ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಅದನ್ನು ಉದ್ಯೋಗದ ಜೊತೆ ಜೋಡಿಸುವ ಕೆಲಸ ಮಾಡಬೇಕು. ಮಹಿಳೆಯರ ವಿಚಾರ ಬಂದಾಗ ಮಕ್ಕಳ ಆರೈಕೆ ಮತ್ತು ಸಾರಿಗೆ ವ್ಯವಸ್ಥೆಯ ಅಡೆತಡೆಗಳನ್ನು ತಗ್ಗಿಸಬೇಕು.

ಯಾರಿಗೆ ನಿಜಕ್ಕೂ ಏನು ದಕ್ಕಬೇಕು ಎಂಬ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ. ಸೀಮಿತ ಅವಕಾಶಗಳಿಗಾಗಿ ನಡೆಯುವ ಹೋರಾಟದ ಬದಲಿಗೆ ಕೊರತೆಯನ್ನೇ ಒಂದು ಸಾಂಸ್ಥಿಕ ಸಮಸ್ಯೆಯಾಗಿ ಪರಿಗಣಿಸಬೇಕು. ಇವೆಲ್ಲದರ ಜೊತೆ ಜೊತೆಗೇ ಒಂದು ಗುಂಪಿನ ಗೆಲುವನ್ನು ಮತ್ತೊಂದು ಗುಂಪಿನ ನಷ್ಟವಾಗಿ ನೋಡುವ ಸ್ಥಿತಿ ಬದಲಾಗಬೇಕು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story