Sanket Upadhyay

ಪ್ರಭುತ್ವದ ಗರ್ವಭಂಗ ಮಾಡಿದ ಸಿಜೆಪಿ ಪ್ರತಿಭಟನೆ: ಜನಸಂಗ್ರಾಮ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದ ವಿದ್ಯಾರ್ಥಿ ಚಳವಳಿ


ಪ್ರಭುತ್ವದ ಗರ್ವಭಂಗ ಮಾಡಿದ ಸಿಜೆಪಿ ಪ್ರತಿಭಟನೆ: ಜನಸಂಗ್ರಾಮ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದ ವಿದ್ಯಾರ್ಥಿ ಚಳವಳಿ
x
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಸಂಸತ್ತಿಗೆ ಹೊರಟ ಪಾದಯಾತ್ರೆ ಅನೇಕ ಆಯಾಮಗಳನ್ನು ಅನಾವರಣಗೊಳಿಸಿದೆ. ಒಂದು ಸುಸ್ಥಿರ ಸಾರ್ವಜನಿಕ ಧ್ವನಿ ರೂಪುಗೊಳ್ಳಲು ವಿರೋಧ ಪಕ್ಷಗಳ ನಾಯಕತ್ವ ಅಥವಾ ಮುಖ್ಯವಾಹಿನಿ ಮಾಧ್ಯಮಗಳ ಬೆಂಬಲವೂ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
Click the Play button to hear this message in audio format

ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಸಂಸತ್ತಿಗೆ ಹೊರಟ ಪಾದಯಾತ್ರೆಯು, ʼಸಾರ್ವಜನಿಕ ಧ್ವನಿ ರೂಪುಗೊಳ್ಳಲು ವಿರೋಧ ಪಕ್ಷಗಳ, ಮುಖ್ಯವಾಹಿನಿ ಮಾಧ್ಯಮ ಬೆಂಬಲ ಬೇಕಿಲ್ಲ,ʼ ಎಂದು ಸಾಬೀತುಪಡಿಸಿದೆ.

ಜುಲೈ 20ರ ಸೋಮವಾರ ದೆಹಲಿಯ ರಸ್ತೆಗಳಲ್ಲಿ ನಡೆದದ್ದು ಕೇವಲ ಮತ್ತೊಂದು ಪ್ರತಿಭಟನೆ ಅಷ್ಟೇ ಎಂದು ಭಾವಿಸದಿರಿ. ಅದು ಸರ್ಕಾರದ ಎಲ್ಲ ಮಿತಿಗಳನ್ನು ಮೀರಿದ ಮತ್ತು ಸಾರ್ವಜನಿಕರ ಆಕ್ರೋಶದ ಶಕ್ತಿಯನ್ನು ಅನಾವರಣಗೊಳಿಸಿದ ಒಂದು ಸ್ವಾಭಾವಿಕ ಉದ್ವೇಗವಾಗಿತ್ತು. ರಾಜಧಾನಿಯ ಹೊರಗಿನ ಕೋಚಿಂಗ್ ಹಬ್‌ಗಳಿಂದ ಧಾವಿಸಿಬಂದ ಸಾವಿರ ಸಾವಿರ ವಿದ್ಯಾರ್ಥಿಗಳು ಮತ್ತು ಯುವಕರು ಜಂತರ್ ಮಂತರ್ನಲ್ಲಿ ಜಮಾಯಿಸಿಬಿಟ್ಟಿದ್ದರು.

ನಿಜ, ಅವರೆಲ್ಲರ ಗುರಿ ಸ್ಪಷ್ಟವಾಗಿತ್ತು; ಭವಿಷ್ಯವನ್ನು ನುಚ್ಚುನೂರು ಮಾಡಿದ ಪ್ರಶ್ನೆಪತ್ರಿಕೆ ಸೋರಿಕೆಗಳು, ನೀಟ್ ಪರೀಕ್ಷೆಯಲ್ಲಿನ ಅಖಂಡ ಭ್ರಷ್ಟಾಚಾರ, ಅಕ್ರಮ ಮತ್ತು ನೆಲಕಚ್ಚಿ ಹೋಗಿರುವ ದೇಶದ ಶಿಕ್ಷಣ ವ್ಯವಸ್ಥೆ. ಅವರು ಶಾಂತಿಯಿಂದ ಸಂಸತ್ತಿಗೆ ಪಾದಯಾತ್ರೆ ನಡೆಸಲು ಬಯಸಿದ್ದರು. ಅಂತಹ ಮಕ್ಕಳ ಮೇಲೆ ನಡೆಸಿದ್ದು ದೆಹಲಿ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ. ಅವರು ಭದ್ರತಾ ಪಡೆಗಳನ್ನು ನಿಯೋಜಿಸಿದರು, ದೈತ್ಯಾಕಾರದ ಕಬ್ಬಿಣದ ಬ್ಯಾರಿಕೇಡ್ಗಳನ್ನು ತಂದು ಅಡ್ಡ ಕೆಡವಿದರು, ಅಗ್ನಿಶಾಮಕ ವಾಹನಗಳ ದಂಡೇ ಬಂದವು, ಸಂಸತ್ತಿನ ಸುತ್ತಲೂ ಬ್ಯಾರಿಕೇಡ್ಗಳ ಕೋಟೆ ಕಟ್ಟಿದರು… ಆದರೂ ಮಕ್ಕಳು, ಅವರ ಪೋಷಕರು ಹರಿದುಬರುವುದು ಮಾತ್ರ ನಿಲ್ಲಲೇ ಇಲ್ಲ.

ಈ ಪ್ರತಿಭಟನೆಯು 2012ರ ನಿರ್ಭಯಾ ಚಳವಳಿ ಮತ್ತು 2011-12ರ ಅಣ್ಣಾ ಹಜಾರೆ ಅಂದೋಲನದ ಜನಸಾಗರವನ್ನೂ ಮೀರಿಸುವಂತಿತ್ತು. ಇದಕ್ಕೆ ಇನ್ನೂ ಒಂದು ಆಯಾಮವಿದೆ; ಯಾಕೆಂದರೆ ಇದು ನಡೆದಿರುವುದು ಅತ್ಯಂತ ಶಕ್ತಿಶಾಲಿ ಹಾಗೂ ಸಂಘಟಿತ ಆಡಳಿತದ ಅವಧಿಯಲ್ಲಿ.

2012ರಲ್ಲಿ ಭ್ರಷ್ಟಾಚಾರದ ಹಗರಣಗಳಿಂದ ಯುಪಿಎ ಸರ್ಕಾರ ಹೈರಾಣಾಗಿ ಹೋಗಿತ್ತು. ದುರ್ಬಲವಾಗಿತ್ತು. ಇನ್ನೊಂದು ಕಡೆ ಗಟ್ಟಿಯಾಗುತ್ತಿದ್ದ ವಿರೋಧ ಪಕ್ಷವನ್ನು ಅದು ಎದುರಿಸಬೇಕಾಗಿತ್ತು. 2011ರಲ್ಲಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಬೃಹತ್ ಬೆಂಬಲ ಸಿಕ್ಕಿತ್ತು. ಅದಕ್ಕೆ ಮುಖ್ಯ ಕಾರಣವೆಂದರೆ ಅಂದಿನ ರಾಜಕೀಯ ವಾತಾವರಣ. ನಾಗರಿಕ ಸಮಾಜ ಮತ್ತು ವಿರೋಧಪಕ್ಷಗಳ ಧ್ವನಿಗೆ ಹೆಚ್ಚಿನ ಪ್ರಚಾರ ಸಿಗಲು ಅದು ಅನುವು ಮಾಡಿಕೊಟ್ಟಿತು. ಈ ಎರಡೂ ಚಳವಳಿಗಳೂ ತುಲನಾತ್ಮಕವಾಗು ಅನುಕೂಲಕರ ವಾತಾವರಣದಲ್ಲಿ ನಡೆದಿದ್ದರಿಂದ ತಕ್ಷಣದ ಭಾರೀ ಹತೋಟಿಯಾಗಲಿ, ಹಸಿಬಿಸಿಯ ನಿಗ್ರಹವಾಗಲಿ ಇಲ್ಲದ ಕಾರಣದಿಂದ ಪ್ರತಿಭಟನೆ ಪ್ರಬಲ ವೇಗವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಹಾಗಂತ ಅಂದಿನ ಆಡಳಿತವೇನೂ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಪ್ರತಿಭಟನೆಯನ್ನು ಬಲವಂತವಾಗಿ ಕೊನೆಗೊಳಿಸಲು ಪ್ರಯತ್ನ ನಡೆಸಿತು ಎಂಬ ಆರೋಪವೂ ಅದರ ವಿರುದ್ಧ ಕೇಳಿಬಂತು. ಆದರೆ ಅಂದಿನ ಮತ್ತು ಇಂದಿನ ವಿದ್ಯಮಾನಗಳಲ್ಲಿ ಇರುವ ವ್ಯತ್ಯಾಸವೇನೆಂದರೆ ಪ್ರತಿಭಟನೆಯನ್ನು ತಡೆಗಟ್ಟಲು ಬಳಸಿದ ಆಡಳಿತಾತ್ಮಕ ಶಕ್ತಿಯ ಪ್ರಮಾಣ.

ಜನ ಸಾಗರದಂತೆ ಹರಿದು ಬಂದರು

ಇಂದಿನ ವಾಸ್ತವ ಸ್ಥಿತಿ ಭಿನ್ನ. ಈಗ ಆಡಳಿತ ನಡೆಸುತ್ತಿರುವ ಸರ್ಕಾರವು ಭಾರೀ ಪ್ರಮಾಣದ ಪ್ರತಿಭಟನೆಗಳನ್ನು ಕೂಡ ಹದ್ದುಬಸ್ತಿನಲ್ಲಿ ಇಡುವ ತಾಕತ್ತು ಹೊಂದಿದೆ. ಅದು ತನ್ನ ಆಡಳಿತಾತ್ಮಕ ದಕ್ಷತೆ, ಕಾನೂನು ಸಾಧನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಥನ ನಿಯಂತ್ರಣದ ಮೂಲಕ ಬಹಳಷ್ಟು ಮುಂಚಿತವಾಗಿಯೇ ಊಹಿಸಲು, ವಿಮರ್ಶಿಸಲು, ನಿರ್ವಹಿಸಲು ಹಾಗೂ ನಿಷ್ಕ್ರಿಯಗೊಳಿಸಲು ಸಾಧ್ಯ ಎಂಬುದನ್ನು ಪದೇ ಪದೇ ನಿರೂಪಿಸುತ್ತ ಬಂದಿದೆ. ಹಾಗಿದ್ದೂ ಕೂಡ ಗುಪ್ತಚರದ ಮುನ್ನೆಚ್ಚರಿಕೆ ಮಾಹಿತಿ ಇದ್ದರೂ ಜುಲೈ 20ರಂದು ಜನ ತೊರೆಗಳೋಪಾದಿಯಾಗಿ ಹರಿದು ಬರುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಕಳೆದ ಒಂದು ತಿಂಗಳಿಂದಲೂ ಪ್ರತಿಭಟನೆ ನಡೆಯುತ್ತಲೇ ಇತ್ತು, ಪೊಲೀಸರ ಆಕ್ರಮಣಕಾರಿಯಾಗಿ ವರ್ತಿಸಿದ್ದರು. ಆದರೂ ಜನ ಅಳುಕಲಿಲ್ಲ-ಅಂಜಲಿಲ್ಲ. ಅವರು ಸಾಗರದಂತೆ ಬಂದರು. ದೆಹಲಿಯ ಆಚೆಯ ಊರುಗಳಿಂದ, ಪಟ್ಟಣಗಳಿಂದಲೂ ಧಾವಿಸಿ ಬಂದರು. ಪ್ರತಿಭಟನೆ ಕೊಂಚವೂ ವಿರಾಮವಿಲ್ಲದೆ ಮುಂದುವರಿಯಿತು. ಪ್ರತಿಭಟನೆ ತಡೆಯಲೆಂದೇ ಅನೇಕ ತಂತ್ರಗಳನ್ನು ವಿನ್ಯಾಸಗೊಳಿಸಲಾಗಿತ್ತು. ಆದರೂ ಮಕ್ಕಳ ಪಟ್ಟುಗಳನ್ನು ಯಾವ ಕಾರಣಕ್ಕೂ ತಡೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಲೇ ಇದು ಹಿಂದಿನ ಕ್ಷಣಗಳಿಗಿಂತ ಭಿನ್ನ ಎಂಬುದನ್ನು ಎತ್ತಿ ತೋರಿಸಿತು.

ವಿರೋಧಪಕ್ಷಗಳಿಗೆ ನಿಲುಕದ ಹೋರಾಟ

ಇದೇ ವಿಷಯಗಳ ಮೇಲೆ ಸಂಘಟಿತ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ, ಹೋರಾಟಗಳಿಗಿಂತಲೂ ಈ ಆಂದೋಲನ ಸಾಮರ್ಥ್ಯ ಮೀರಿ ಮುಂದೆ ಸಾಗಿದೆ. ವರ್ಷಗಳಿಂದ ವಿರೋಧ ಪಕ್ಷಗಳು ಪ್ರಶ್ನೆಪತ್ರಿಕೆ ಸೋರಿಕೆ, ನೀಟ್ ಅಕ್ರಮಗಳು ಮತ್ತು ಶಿಕ್ಷಣ ಸಚಿವರ ಹೊಣೆಗಾರಿಕೆಯ ಕುರಿತು ಸಂಸತ್ತಿನಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತಲೇ ಬಂದಿವೆ. ಆದರೆ ಈ ಹೋರಾಟ, ಪ್ರತಿಭಟನೆಗಳು ಹೆಚ್ಚಾಗಿ ಸಾಂಕೇತಿಕವಾಗಿಯೇ ಉಳಿದಿದ್ದವು. ಅವು ಮುಖ್ಯಾಂಶಗಳನ್ನು ಸೃಷ್ಟಿಸಿದವೇ ಹೊರತು, ಇಂದು ಕಂಡುಬಂದ ಬೃಹತ್ ಮಟ್ಟದ ಸುಸ್ಥಿರ ಬೀದಿ ಹೋರಾಟವಾಗಿ ಎಂದಿಗೂ ಬದಲಾಗಲಿಲ್ಲ.

ಯುವ ಪೀಳಿಗೆ (Gen Z) ಮತ್ತು ಉದ್ಯೋಗಾಕಾಂಕ್ಷಿ ಯುವಕರ ದಿನನಿತ್ಯದ ಶಿಕ್ಷಣ ಸಂಬಂಧಿತ ವೈಫಲ್ಯಗಳೊಂದಿಗೆ ಕನೆಕ್ಟ್ ಆಗಲು ವಿರೋಧ ಪಕ್ಷಗಳು ಎಷ್ಟರ ಮಟ್ಟಿಗೆ ಹೆಣಗಾಡುತ್ತಿವೆ ಎಂಬುದಕ್ಕೆ ಇದು ಸಾಕ್ಷಿ. ಆಂತರಿಕ ಭಿನ್ನಾಭಿಪ್ರಾಯಗಳು, ಬದಲಾಗುತ್ತಿರುವ ರಾಜಕೀಯ ಆದ್ಯತೆಗಳು ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ತಳಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಲ್ಲಿ ಇರುವ ಕಷ್ಟಗಳು ಅವರ ವ್ಯಾಪ್ತಿಯನ್ನು ಮಿತಿಗೊಳ್ಳುವಂತೆ ಮಾಡಿವೆ. ಇದರ ಪರಿಣಾಮವಾಗಿ ಪ್ರಭಾವಶಾಲಿ ಭಾಷಣಗಳು ಮೂಡಿಬಂದವೇ ಹೊರತು, ಜನಸಂಖ್ಯೆಯ ಬೆಂಬಲ ಅಥವಾ ಪರಿಣಾಮ ಮಾತ್ರ ತೀರಾ ಕಡಿಮೆಯಿತ್ತು.

ಜುಲೈ 20 ರಂದು ಆಗಿರುವ ಬದಲಾವಣೆ ಮಾತ್ರ ಸ್ಪಷ್ಟ.—ಅಲ್ಲಿನ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷದ ಆಸರೆ ಇರಲಿಲ್ಲ. ಈ ಪ್ರತಿಭಟನೆ ವಿರೋಧ ಪಕ್ಷಗಳು ನೀಡಿದ ಕರೆಯಾಗಿರಲಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯವಸ್ಥಿತ ಭ್ರಷ್ಟಾಚಾರದಿಂದಾಗಿ ಭವಿಷ್ಯವೇ ಹಾಳಾದ ವಿದ್ಯಾರ್ಥಿಗಳಲ್ಲಿ ತಿಂಗಳುಗಳಿಂದ ಮಡುಗಟ್ಟಿದ ನಿರಾಶೆಯಿಂದ ಇದು ಉದ್ಭವಿಸಿತ್ತು. ಯಾವುದೇ ಪ್ರಮುಖ ಪಕ್ಷದ ಬೆಂಬಲವಿಲ್ಲದೆ, ಮುಖ್ಯವಾಗಿ ವಿದ್ಯಾರ್ಥಿ ಮತ್ತು ಯುವ ಜಾಲಗಳಿಂದಲೇ ನಡೆಸಲ್ಪಟ್ಟ ಒಂದು ತಿಂಗಳ ಹಳೆಯ ಹೋರಾಟವು ಅಂತಿಮವಾಗಿ ರಾಜಧಾನಿಯ ರಸ್ತೆಗಳು ಭರ್ತಿಯಾಗುವಂತೆ ಮಾಡಿತು. ಇದರಿಂದ ವಿರೋಧ ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದನ್ನು ಈ ಹೋರಾಟ ಅನಾವರಣಗೊಳಿಸಿತು—ಇಲ್ಲಿ ಚುನಾವಣಾ ಅಜೆಂಡಾಗಳಿರಲಿಲ್ಲ ಅಥವಾ ಹೈಕಮಾಂಡ್ ನಿರ್ದೇಶನಗಳನ್ನು ನೆಚ್ಚಿಕೊಳ್ಳಬೇಕಾಗಿರಲಿಲ್ಲ. ಇಲ್ಲಿದ್ದುದು ಸ್ವಯಂಪ್ರೇರಿತ ಮತ್ತು ಸುಸ್ಥಿರ ಸಾರ್ವಜನಿಕ ಜಾಗೃತಿ.

ರಚನಾತ್ಮಕವಾಗಿ ಹೇಗೆ ಭಿನ್ನ

ನಿರ್ಭಯಾ ಮತ್ತು ಅಣ್ಣಾ ಹಜಾರೆ ಚಳವಳಿಗಳೊಂದಿಗಿನ ಹೋಲಿಕೆಯು ಮತ್ತೊಂದು ಹಂತದಲ್ಲಿ ಅರ್ಥಪೂರ್ಣವಾಗಿದೆ. ಆ ಎರಡೂ ಚಳವಳಿಗಳ ಸಮಯದಲ್ಲಿ, ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಪರೋಕ್ಷ ಅಥವಾ ಬಹಿರಂಗ ಬೆಂಬಲವನ್ನು ನೀಡಿತ್ತು. ಅದು ಮಾಧ್ಯಮ ಮತ್ತು ರಾಜಕೀಯ ವಲಯಗಳಲ್ಲಿ ಆ ಕಥನವನ್ನು ಬಲಪಡಿಸಿ, ಪ್ರತಿಭಟನಾಕಾರರಿಗೆ ಹೆಚ್ಚಿನ ಶಕ್ತಿಯನ್ನು ನೀಡಿತು. ಆ ಬಾಹ್ಯ ರಾಜಕೀಯ ಬೆಂಬಲವು ಸಾರ್ವಜನಿಕ ಆಕ್ರೋಶವನ್ನು ಸುಸ್ಥಿರ ಒತ್ತಡವಾಗಿ ಬದಲಾಯಿಸಲು ನೆರವಾಯಿತು. ಆದರೆ ಇಂದಿನ ಶಿಕ್ಷಣ ಸಂಬಂಧಿತ ಪ್ರತಿಭಟನೆಗೆ ಯಾವುದೇ ಪ್ರಮುಖ ರಾಜಕೀಯ ಪಕ್ಷದಿಂದ ಅಂತಹ ಹೋಲಿಸಬಹುದಾದ ಬೆಂಬಲವಿಲ್ಲ. ಹೀಗಿದ್ದೂ ಇದು ಬೆಳೆದು, ಸಂಸತ್ತಿನ ಬಾಗಿಲನ್ನು ತಲುಪಿ, ವಾರಗಳ ಮೌನದ ನಂತರ ಸರ್ಕಾರದ ಉನ್ನತ ಮಟ್ಟದ ಮಾತುಕತೆಗೆ ಕಾರಣವಾಯಿತು ಎನ್ನುವುದೇ ಇದನ್ನು ರಚನಾತ್ಮಕವಾಗಿ ಭಿನ್ನ ಮತ್ತು ಅನೇಕ ರೀತಿಯಲ್ಲಿ ಹೆಚ್ಚು ಮಹತ್ವದ್ದಾಗಿ ಮಾಡುತ್ತದೆ.

ಸರ್ಕಾರದ ಅಧಿಕಾರದ ಮಿತಿಗಳು

ಸರ್ಕಾರವು ಈ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿ ನಾಲ್ಕು ಸ್ಪಷ್ಟ ವೈಫಲ್ಯಗಳನ್ನು ಬಯಲಿಗೆಳೆದಿದೆ:

ವಾರಗಳ ಮುಂಚಿತ ಸೂಚನೆಗಳಿದ್ದರೂ ಸಾರ್ವಜನಿಕರ ಆಕ್ರೋಶದ ಪ್ರಮಾಣವನ್ನು ಊಹಿಸುವಲ್ಲಿ ಅದು ವಿಫಲವಾಯಿತು. ಬಹುತೇಕ ಶಾಂತಿಯುತವಾಗಿ ಭಾಗವಹಿಸಿದವರ ವಿರುದ್ಧ ಬಲಪ್ರಯೋಗ ಮಾಡದೆ ಪ್ರತಿಭಟನೆಯನ್ನು ನಿರ್ವಹಿಸುವುದು ಕೂಡ ಅದಕ್ಕೆ ಸಾಧ್ಯವಾಗಲಿಲ್ಲ. ಯಾವುದೇ ಅರ್ಥಪೂರ್ಣ ಸಂವಾದವನ್ನು ಆರಂಭಿಸಲು ಸುಮಾರು ಒಂದು ತಿಂಗಳು ಕಾಲಹರಣ ಮಾಡಿತು. ಆ ಮೂಲಕ ಆರಂಭಿಕ ಹಂತದಲ್ಲೇ ಮಾತುಕತೆ ನಡೆಸುವಲ್ಲಿ ವಿಫಲವಾಯಿತು. ಪರಿಹಾರಗಳಿಗಿಂತ ಹೆಚ್ಚಾಗಿ ಮತ್ತೆ ಮತ್ತೆ ಎದುರಾಗುವ ಬಿಕ್ಕಟ್ಟುಗಳಿಗೇ ಹೆಸರಾಗಿರುವ ಶಿಕ್ಷಣ ಸಚಿವರನ್ನು ಮುಂದುವರಿಸಿ ಬೆಂಬಲಕ್ಕೆ ನಿಲ್ಲುವ ಮೂಲಕ ವೈಫಲ್ಯವನ್ನು ಕಂಡಿತು.

ರಸ್ತೆಗಳು ಜನರಿಂದ ತುಂಬಿದ ನಂತರವಷ್ಟೇ ನಿಯೋಗವೊಂದು ಅಂತಿಮವಾಗಿ ಹಿರಿಯ ನಾಯಕರನ್ನು ಭೇಟಿಯಾಗಿ ಬೇಡಿಕೆಗಳನ್ನು ಸಲ್ಲಿಸಿತು. ಅದರ ನಂತರ, ಮಾತುಕತೆಗೆ ಬಂದ ಬಾಹ್ಯ ಮನವಿಗಳ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವು ಅಂತ್ಯಗೊಂಡಿತು.

ಪ್ರಸ್ತುತ ರಾಜಕೀಯ ಚಕ್ರದಲ್ಲಿ ಈ ಕ್ಷಣವನ್ನು ಅಭೂತಪೂರ್ವವಾಗಿಸುವುದು ಏನೆಂದರೆ ಮುಖ್ಯವಾಹಿನಿಯ ಮಾಧ್ಯಮಗಳ ಬೆಂಬಲವಿಲ್ಲದಿರುವುದು. ನಿರ್ಭಯಾ ಮತ್ತು ಅಣ್ಣಾ ಹಜಾರೆ ಆಂದೋಲನಗಳನ್ನು ಮುಖ್ಯವಾಹಿನಿಯ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ದಿನದ 24 ಗಂಟೆಯೂ ವರದಿ ಮಾಡಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಸಿಜೆಪಿ ಪ್ರತಿಭಟನೆಯನ್ನು ಈ ದೊಡ್ಡ ವೇದಿಕೆಗಳಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಯಿತು ಮತ್ತು ಇದು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಆಧಾರದ ಮೇಲೆಯೇ ಉಳಿದುಕೊಂಡಿತು.

ಆಡಳಿತಾತ್ಮಕ ಶಕ್ತಿಗೂ ಮೀರಿದ ಸಂಗತಿ

ಈ ಪ್ರತಿಭಟನೆಯು ಪ್ರಜಾಪ್ರಭುತ್ವದ ಅವಕಾಶಗಳ ಬಗ್ಗೆಯೂ ದೊಡ್ಡ ಪ್ರಶ್ನೆಯನ್ನು ಎತ್ತುತ್ತದೆ. ಒಂದು ಶಕ್ತಿಶಾಲಿ ಸರ್ಕಾರವು ಹೆಚ್ಚಿನ ಸಂಘಟಿತ ಪ್ರತಿಭಟನೆಗಳನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಹೊಂದಿದ್ದರೂ, ತಮ್ಮ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದ ವಿಷಯದ ಮೇಲೆ ಯುವಕರ ಸ್ವಯಂಪ್ರೇರಿತ ಜಾಗೃತಿ ಎದುರಿಸಬೇಕಾಗಿ ಬಂದಾಗ, ಅದು ಆಡಳಿತಾತ್ಮಕ ಶಕ್ತಿಗೂ ಮಿತಿಗಳಿವೆ ಎಂಬುದನ್ನು ತೋರಿಸುತ್ತದೆ. ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಕೇವಲ ಸೈದ್ಧಾಂತಿಕ ನೀತಿಗೆ ಸಂಬಂಧಿಸಿದ ವಿವಾದಗಳಲ್ಲ, ಅವು ವ್ಯಕ್ತಿಗಳ ಜೀವನವನ್ನು ಮತ್ತು ಸಾಮೂಹಿಕ ನಂಬಿಕೆಯನ್ನು ನಾಶಮಾಡುತ್ತವೆ. ಅಂತಹ ವೈಫಲ್ಯಗಳು ಪರಿಹಾರವಿಲ್ಲದೆ ದುಪ್ಪಟ್ಟಾಗುತ್ತಾ ಹೋದಾಗ, ಆಕ್ರೋಶವು ಕಟ್ಟೆಯೊಡೆದು ತನ್ನದೇ ಆದ ಹಾದಿಯನ್ನು ಕಂಡುಕೊಳ್ಳುತ್ತದೆ.

ಮುಂದಿರುವ ನೈಜ ಪರೀಕ್ಷೆ

ಮುಂಬರುವ ದಿನಗಳು ಸರ್ಕಾರವು ಈ ಪರಿಸ್ಥಿತಿಗೆ ಮತ್ತಷ್ಟು ಹತೋಟಿ ಹೇರುವ ಮೂಲಕ ಸ್ಪಂದಿಸುತ್ತದೆಯೋ ಅಥವಾ ಅರ್ಥಪೂರ್ಣ ತಿದ್ದುಪಡಿಯ ಮೂಲಕ ಸ್ಪಂದಿಸುತ್ತದೆಯೋ ಎಂಬುದಕ್ಕೆ ನಿಜವಾದ ಪರೀಕ್ಷೆಯಾಗಲಿವೆ. ಸಿಜೆಪಿ ನಿಯೋಗವು ಸಲ್ಲಿಸಿರುವ ಮೂರು ಬೇಡಿಕೆಗಳಾದ—ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಯಿಂದ ತಕ್ಷಣವೇ ಬಿಡುಗಡೆ ಮಾಡುವುದು, ಧರ್ಮೇಂದ್ರ ಪ್ರಧಾನ್ ಅವರನ್ನು ವಜಾ ಮಾಡುವುದು ಮತ್ತು ಆತ್ಮಹತ್ಯೆಗೆ ಶರಣಾದ ನೀಟ್ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ—ತೀರಾ ಸಾಧಾರಣದಲ್ಲಿ ಸಾಧಾರಣವಾಗಿವೆ.

ಇವುಗಳನ್ನು ಈಡೇರಿಸುವುದರಿಂದ ಸರ್ಕಾರದ ಅಧಿಕಾರವೇನೂ ಕುಂದುವುದಿಲ್ಲ; ಆದರೆ ಇವುಗಳನ್ನು ನಿರ್ಲಕ್ಷಿಸುವುದು, ಈ ವ್ಯವಸ್ಥೆಗೆ ಅರ್ಥವಾಗುವ ಏಕೈಕ ಭಾಷೆಯೆಂದರೆ ರಸ್ತೆಯಲ್ಲಿ ನಿಲ್ಲುವ ಜನರ ಸಂಖ್ಯೆ ಮಾತ್ರ ಎಂಬುದು ಸ್ಪಷ್ಟ.

ದೆಹಲಿಯು ಬೃಹತ್ ಜನಸಂದಣಿಗಿಂತಲೂ ಅಪರೂಪವಾದ ಒಂದು ಸಂಗತಿಯನ್ನು ಕಣ್ಣಾರೆ ಕಂಡಿದೆ. ಅಸ್ತಿತ್ವದಲ್ಲಿರಲು ಯಾವುದೇ ರಾಜಕೀಯ ಪಕ್ಷದ ಅನುಮತಿಯನ್ನು ಬಯಸದ, ಸುಸ್ಥಿರವಾದ ಸಾರ್ವಜನಿಕ ಒತ್ತಡಕ್ಕೆ ಅದು ಸಾಕ್ಷಿಯಾಗಿದೆ.

ಅದಕ್ಕಾಗಿಯೇ ಈ ಪ್ರತಿಭಟನೆಯು ನಿರ್ಭಯಾ, ಅಣ್ಣಾ ಹಜಾರೆ ಚಳವಳಿಗಳಿಗಿಂತ ಮತ್ತು ಇದೇ ವಿಷಯದ ಮೇಲಿನ ವಿರೋಧ ಪಕ್ಷಗಳ ವೈಯಕ್ತಿಕ ದಾಖಲೆಗಳಿಗಿಂತಲೂ ಎತ್ತರದಲ್ಲಿ ನಿಲ್ಲುತ್ತದೆ. ಸರ್ಕಾರದ ಶಕ್ತಿಯು, ತಾನು ಇಷ್ಟು ದಿನಗಳ ಕಾಲ ಸುಲಭವಾಗಿ ಪರಿಗಣಿಸಿದ್ದ ಒಂದು ವರ್ಗದಿಂದಲೇ ತನ್ನ ಮೊದಲ ನೈಜ ಪರೀಕ್ಷೆಯನ್ನು ಎದುರಿಸಿದೆ. ಆ ಪರೀಕ್ಷೆಯ ಫಲಿತಾಂಶವು ಕೇವಲ ಒಬ್ಬ ಸಚಿವರ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಸಾಂಸ್ಥಿಕ ವ್ಯವಸ್ಥೆಗಳು ವಿಫಲವಾದಾಗ, ಜವಾಬ್ದಾರಿಯನ್ನು ಪ್ರಶ್ನಿಸಲು ನಾಗರಿಕರಿಗೆ ಎಷ್ಟು ಅವಕಾಶಗಳು ಉಳಿದಿವೆ ಎಂಬ ಸಂಗತಿಯನ್ನು ಕೂಡ ಅದು ಅನಾವರಣಗೊಳಿಸುತ್ತದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story