Debashis Chakrabarti

ಮೋದಿ ವಿರುದ್ಧ ಕೋಟೆ ಕಟ್ಟಿ ಮೆರೆದವರೆಲ್ಲ ಎಲ್ಲಿ ಹೋದರು? ಪ್ರಜಾಪ್ರಭುತ್ವಕ್ಕೆ ಸಹ್ಯವಲ್ಲ ಪ್ರತಿಪಕ್ಷಗಳ ಈ ಪತನ


ಮೋದಿ ವಿರುದ್ಧ ಕೋಟೆ ಕಟ್ಟಿ ಮೆರೆದವರೆಲ್ಲ ಎಲ್ಲಿ ಹೋದರು? ಪ್ರಜಾಪ್ರಭುತ್ವಕ್ಕೆ ಸಹ್ಯವಲ್ಲ ಪ್ರತಿಪಕ್ಷಗಳ ಈ ಪತನ
x
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸೆಣಸಾಡುತ್ತಿದ್ದ ವಿರೋಧ ಪಕ್ಷಗಳು ಇಂದು ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿವೆ. ಭಾರತದಂತಹ ಬೃಹತ್‌ ಪ್ರಜಾಪ್ರಭುತ್ವಕ್ಕೆ ಇದು ಆರೋಗ್ಯಕ,ರವಾದ ಬೆಳವಣಿಗೆಯಲ್ಲ.
Click the Play button to hear this message in audio format

ಬಂಗಾಳದಿಂದ ದೆಹಲಿಯ ತನಕ ಪ್ರಾದೇಶಿಕ ಕೋಟೆಗಳು ಒಂದೊಂದಾಗಿ ಕುಸಿಯುತ್ತಿವೆ. ಬಿಜೆಪಿಯ ಕಲ್ಯಾಣ ಜನಪ್ರಿಯತೆ ಮತ್ತು ನಾಗರಿಕತೆಯ ನಿರೂಪಣೆಯ ಸಮ್ಮಿಶ್ರಣ ಪ್ರತಿಸ್ಪರ್ಧಿಗಳನ್ನು ಹೈರಾಣಾಗುವಂತೆ ಮಾಡಿದೆ.

ಭಾರತೀಯ ಪ್ರಜಾಪ್ರಭುತ್ವದ ಭವ್ಯ ಹಾಗೂ ಅಸ್ತವ್ಯಸ್ತ ಭೂಮಿಕೆಯಲ್ಲಿ ಈಗ ಒಂದು ರೀತಿಯ ವಿಚಿತ್ರ ಮೌನ. ಕಳೆದ ಕೆಲ ದಶಕಗಳಿಂದ ದೇಶದ ರಾಜಕೀಯವು ಅತ್ಯಂತ ದಟ್ಟಣೆಯಿಂದ ಕೂಡಿತ್ತು. ವಾದ-ವಿವಾದಗಳ ಗದ್ದಲ ಜೋರಾಗಿತ್ತು. ಆದರೆ ಈಗ ಈ ರಂಗಭೂಮಿಕೆಯಲ್ಲಿ ಕೇವಲ ಒಬ್ಬರೇ ಒಬ್ಬರು ವಟಗುಟ್ಟುವ ಏಕಪಾತ್ರಾಭಿನಯದಂತೆ ಭಾಸವಾಗುತ್ತಿದೆ.

ಪ್ರಧಾನಿ ಅವರು ಹೇಗೆ ಗೆಲ್ಲುತ್ತಾರೆ ಎಂಬುದು ಈಗ ಪ್ರಶ್ನೆಯಾಗಿ ಉಳಿದಿಲ್ಲ. ಬದಲಾಗಿ ಅವರ ಪ್ರತಿಸ್ಪರ್ಧಿಗಳು ಅವರಿಗೆ ಉತ್ತರ ನೀಡಲು ಪದಗಳನ್ನೇ ಹುಡುಕಲಾಗದ ರೀತಿಯಲ್ಲಿ ಯಾಕೆ ಅಸಹಾಯಕರಾಗಿ ಹೋಗಿದ್ದಾರೆ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ.

ಬಂಗಾಳದಿಂದ ಬಿಹಾರದ ತನಕ, ದೆಹಲಿಯಿಂದ ಮಹಾರಾಷ್ಟ್ರದ ವರೆಗೆ ಭಾರತದ ಪ್ರಜಾಪ್ರಭುತ್ವದ ನಕ್ಷೆಯು ಕೇವಲ ಚುನಾವಣೆಗಳ ಮೂಲಕ ಮಾತ್ರವೇ ಶಿಥಿಲವಾಗಿಲ್ಲ. ಬದಲಾಗಿ ವಿರೋಧಪಕ್ಷಗಳ ರಾಜಕೀಯವನ್ನು ಕೂಡ ವ್ಯವಸ್ಥಿತವಾಗಿ ಧ್ವಂಸಗೊಳಿಸುವ ಮೂಲಕ ಮರುರೂಪಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ಸು ಈಗ ಕೇವಲ ಚುನಾವಣಾ ಪ್ರಾಬಲ್ಯದ ಬಾಬತ್ತಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಒಂದು ಸರ್ವ ನಿಯಂತ್ರಿತ ಬಹುಸಂಖ್ಯಾತ ಗಣರಾಜ್ಯವಾಗಿ ಪರಿವರ್ತಿಸುವ ಒಂದು ಸಾಂಸ್ಥಿಕ ಯೋಜನೆಯಾಗಿ ಬದಲಾಗುತ್ತಿದೆ. ಇಲ್ಲಿ ವ್ಯಕ್ತವಾಗುವ ಭಿನ್ನಾಭಿಪ್ರಾಯ ಅಥವಾ ಪ್ರತಿರೋಧವಾಗಲಿ ಕೇವಲ ಪ್ರದರ್ಶನಕ್ಕಾಗಿ ಮಾತ್ರ ಉಳಿದುಕೊಂಡಿದೆ.

2014ರಲ್ಲಿ ಮೋದಿ ಅವರು ಮೊದಲ ಬಾರಿಗೆ "ಕಾಂಗ್ರೆಸ್ ಮುಕ್ತ ಭಾರತ"ದ ಮಾತು ಹೇಳಿದಾಗ ಅನೇಕರು ಅದನ್ನು ಕೇವಲ ಚುನಾವಣಾ ಪ್ರಚಾರದ ಅತಿಶಯೋಕ್ತಿ ಎಂದೋ ಅಥವಾ ರಾಜಕೀಯ ರಂಗಭೂಮಿಯಲ್ಲಿ ನುರಿತ ರಾಜಕಾರಣಿಯ ಮತ್ತೊಂದು ಘೋಷಣೆ ಎಂದೋ ತಳ್ಳಿಹಾಕಿದ್ದರು. ಹನ್ನೆರಡು ವರ್ಷಗಳ ನಂತರ, ಆ ಘೋಷಣೆ ಇನ್ನು ಮುಂದೆ ಕೇವಲ ಒಂದು ಉಪಮೆಯಾಗಿ ಕೇಳಿಸುತ್ತಿಲ್ಲ. ಬದಲಿಗೆ ಅದು ಆಡಳಿತದ ಒಂದು ಮುಖ್ಯ ಸಿದ್ಧಾಂತದಂತೆ ಓದಿಕೊಳ್ಳುವಂತಾಗಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪತನವು ಕೇವಲ ಆರಂಭಿಕ ಹಂತ. ಇಂದು ಭಾರತದಾದ್ಯಂತ ಅನಾವರಣಗೊಳ್ಳುತ್ತಿರುವ ಅತ್ಯಂತ ಗಹನವಾದ ಸಂಗತಿ ಎಂದರೆ, ಭಾರತೀಯ ಜನತಾ ಪಕ್ಷದ ರಾಜಕೀಯ ಏಕಸ್ವಾಮ್ಯದ ಮುನ್ನಡೆಯನ್ನು ತಡೆಯಬಲ್ಲ ಪ್ರತಿಯೊಂದು ಸಾಂಸ್ಥಿಕ, ಪ್ರಾದೇಶಿಕ ಮತ್ತು ಸೈದ್ಧಾಂತಿಕ ಶಕ್ತಿಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿರುವುದು. ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿಯವರ ದೀರ್ಘಕಾಲದ ಕೋಟೆ ಅಂತಿಮವಾಗಿ ಕುಸಿದಿರುವುದು, ದೇಶದಾದ್ಯಂತದ ವಿಶ್ವವಿದ್ಯಾಲಯಗಳು, ನೀತಿ ನಿರೂಪಣಾ ವಲಯಗಳು ಮತ್ತು ನಾಗರಿಕ ಸಮಾಜದ ವೇದಿಕೆಗಳಲ್ಲಿ ಈಗ ಪಿಸುಗುಟ್ಟುತ್ತಿರುವ ಒಂದು ಪ್ರಶ್ನೆ ಈಗ ಮತ್ತಷ್ಟು ಗಟ್ಟಿಯಾಗಿ ಕೇಳುವಂತಾಗಿದೆ: ಮೋದಿ ವಿರುದ್ಧ ದನಿ ಎತ್ತುತ್ತಿದ್ದ ಪ್ರತಿಸ್ಪರ್ಧಿಗಳು ಎಲ್ಲಿಗೆ ಹೋದವು?

ರಾತ್ರೋರಾತ್ರಿ ಸಂಭವಿಸಿದ್ದಲ್ಲ

ಇದಕ್ಕೆ ಉತ್ತರ ಸರಳವೂ ಅಲ್ಲ ಅಥವಾ ಏಕಮುಖವೂ ಅಲ್ಲ. ಭಾರತದ ವಿರೋಧ ಪಕ್ಷಗಳು ರಾತ್ರೋರಾತ್ರಿ ಮಾಯವಾಗಿಲ್ಲ. ಅವುಗಳನ್ನು ರಾಜಕೀಯ ಸಂಘಟನೆಯಲ್ಲಿ ಸೋಲಿಸಲಾಗಿದೆ, ಆರ್ಥಿಕವಾಗಿ ಉಸಿರುಗಟ್ಟಿಸಲಾಗಿದೆ, ಸಾಂಸ್ಥಿಕವಾಗಿ ಮೂಲೆಗುಂಪು ಮಾಡಲಾಗಿದೆ, ಸಾಂಸ್ಕೃತಿಕವಾಗಿ ಅಮಾನ್ಯಗೊಳಿಸಲಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಆಂತರಿಕವಾಗಿಯೇ ಟೊಳ್ಳಾಗುವಂತೆ ಮಾಡಲಾಗಿದೆ. ಈಗ ಉಳಿದಿರುವುದು ಕೇವಲ ಚುನಾವಣಾ ಸ್ವರೂಪದಲ್ಲಿ ಮಾತ್ರ ಪ್ರಜಾಪ್ರಭುತ್ವವಾಗಿ ಕಾಣುವ, ಆದರೆ ಸತ್ವದಲ್ಲಿ ಅಸಮಾನತೆಯಿಂದ ಕೂಡಿರುವ ಒಂದು ವ್ಯವಸ್ಥೆ ಮಾತ್ರ.

ಇದು ಇನ್ನೂ ಸರ್ವಾಧಿಕಾರವಾಗಿಲ್ಲ. ಆದರೆ ಇದು ನಿಸ್ಸಂದೇಹವಾಗಿ, ಅಸಮಾನ ಶಕ್ತಿಯ ಪರಿಸ್ಥಿತಿಗಳ ಅಡಿಯಲ್ಲಿ ಏಕಪಕ್ಷೀಯ ಪ್ರಾಬಲ್ಯದ ಕಡೆಗೆ ಸಾಗುತ್ತಿರುವ ಪ್ರಜಾಪ್ರಭುತ್ವವಾಗಿದೆ.

ಬಿಜೆಪಿಯ ಬೆಳವಣಿಗೆಯನ್ನು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಆ ರೀತಿಯ ವಿವರಣೆಯು ವಿರೋಧ ಪಕ್ಷಗಳ ವೈಫಲ್ಯವನ್ನು ಮರೆಮಾಚಿ ಅವುಗಳನ್ನು ದೋಷಮುಕ್ತಗೊಳಿಸಿದಂತೆ ಮಾಡುತ್ತದೆ.

ಮೋದಿ ನವದೆಹಲಿಯನ್ನು ಗೆಲ್ಲುವುದಕ್ಕಿಂತ ಬಹಳ ಮುಂಚೆಯೇ ಕಾಂಗ್ರೆಸ್ ದುರ್ಬಲಗೊಳ್ಳಲು ಪ್ರಾರಂಭಿಸಿತ್ತು. ವಂಶಾಡಳಿತದ ನಿರಾಸಕ್ತಿ, ಸೈದ್ಧಾಂತಿಕ ಗೊಂದಲ, ಅಧಿಕಾರಶಾಹಿ ಜಡತ್ವ ಮತ್ತು ಸಾಂಸ್ಥಿಕ ಕುಸಿತವು ಜವಾಹರಲಾಲ್ ನೆಹರೂ ಅವರ ಪಕ್ಷವನ್ನು ಸ್ವಾತಂತ್ರ್ಯೋತ್ತರ ಕಾಲದ ಕೇವಲ ಒಂದು ನೆನಪಿನ ಸ್ಮರಣಿಕೆಯನ್ನಾಗಿ ಪರಿವರ್ತಿಸಿತು.

2014ರಲ್ಲಿ ಸಂಸತ್ತಿನಲ್ಲಿ ಅದರ ಸ್ಥಾನಗಳು 206 ರಿಂದ ಕೇವಲ 44ಕ್ಕೆ ಕುಸಿದಿದ್ದು ಕೇವಲ ಒಂದು ಚುನಾವಣಾ ಸೋಲಲ್ಲ, ಬದಲಿಗೆ ಇಡೀ ರಾಜಕೀಯ ಯುಗದ ಪತನವಾಗಿತ್ತು. ಆದಾಗ್ಯೂ, ಕಾಂಗ್ರೆಸ್‌ನ ಪತನದ ನಂತರ ಸಂಭವಿಸಿದ ಬೆಳವಣಿಗೆಗಳು ಐತಿಹಾಸಿಕವಾಗಿ ಹೆಚ್ಚು ಮಹತ್ವದ್ದಾಗಿವೆ.

ಕುಗ್ಗಿದ ಪ್ರಾದೇಶಿಕ ಧ್ವನಿಗಳು

ಒಂದು ವಿಕೇಂದ್ರೀಕೃತ ಬಹುಪಕ್ಷೀಯ ಒಕ್ಕೂಟ ವ್ಯವಸ್ಥೆಯು ಬೆಳೆಯಲು ಅವಕಾಶ ನೀಡುವ ಬದಲಿಗೆ, ಬಿಜೆಪಿ ಪ್ರಾದೇಶಿಕ ಪ್ರತಿರೋಧಗಳನ್ನು ಧ್ವಂಸಗೊಳಿಸಲು ಆಕ್ರಮಣಕಾರಿಯಾಗಿ ಮುನ್ನಡೆಯುತ್ತ ಹೋಯಿತು.

ಭಾರತದ ಒಕ್ಕೂಟ ವ್ಯವಸ್ಥೆಯು ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ಆಘಾತಗಳನ್ನು ತಡೆಯುವ ನಿರೋಧಕ (Shock absorber)ದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಎಂ. ಕೆ. ಸ್ಟಾಲಿನ್, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್, ಬಿಹಾರದಲ್ಲಿ ನಿತೀಶ್ ಕುಮಾರ್ ಅವರಂತಹ ಪ್ರಬಲ ರಾಜ್ಯ ನಾಯಕರು ಮತ್ತು ಮಹಾರಾಷ್ಟ್ರದ ಪ್ರಾದೇಶಿಕ ಮೈತ್ರಿಕೂಟಗಳು ಕೇವಲ ಚುನಾವಣಾ ಪ್ರತಿಸ್ಪರ್ಧಿಗಳಾಗಿ ಮಾತ್ರ ಇರಲಿಲ್ಲ, ಬದಲಿಗೆ ಪರ್ಯಾಯ ರಾಜಕೀಯ ಚಿಂತನೆಗಳನ್ನು ಪ್ರತಿನಿಧಿಸುತ್ತಿದ್ದವು.

ಇಂದು, ಆ ಪ್ರತಿರೋಧದ ಕೇಂದ್ರಗಳಲ್ಲಿ ಬಹುತೇಕವು ದುರ್ಬಲಗೊಂಡಿವೆ, ಒಡೆದು ಚೂರಾಗಿವೆ ಅಥವಾ ಚುನಾವಣಾ ರಾಜಕೀಯದಲ್ಲಿ ಧ್ವಂಸಗೊಂಡಿವೆ.

ಬಿಜೆಪಿಯ ಪ್ರಾಬಲ್ಯವು ಈಗ ಭಾರತದ ಬಹುತೇಕ ರಾಜಕೀಯ ಭೂಗೋಳದಾದ್ಯಂತ ವಿಸ್ತರಿಸಿದೆ. ಅದರ ವಿಸ್ತಾರಗೊಳ್ಳುತ್ತಿರುವ ಪ್ರಭಾವ ವಲಯದಿಂದ ಹೊರಗೆ ಉಳಿದಿರುವುದು ಕೇವಲ ಬೆರಳೆಣಿಕೆಯಷ್ಟು ಸೈದ್ಧಾಂತಿಕ ನೆಲೆಗಳು ಮಾತ್ರ—ಅವುಗಳೆಂದರೆ ಕೇರಳ, ತಮಿಳುನಾಡಿನ ಕೆಲವು ಭಾಗಗಳು ಮತ್ತು ಅಲ್ಲೊಂದು ಇಲ್ಲೊಂದು ಇರುವ ಪ್ರಾದೇಶಿಕ ಪಾಕೆಟ್‌ಗಳು.

ಇದೇನೂ ಆಕಸ್ಮಿಕವಾಗಿ ನಡೆದದ್ದಲ್ಲ. ಇದು 1975ರಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಾಣದ ರಾಜಕೀಯ ಕೇಂದ್ರೀಕರಣದ ದೀರ್ಘಾವಧಿಯ ಯೋಜನೆಯನ್ನು ಪ್ರತಿಬಿಂಬಿಸುತ್ತದೆ.

ಅಸಮಾನ ರಣರಂಗ

ಆದರೆ ತುರ್ತು ಪರಿಸ್ಥಿತಿಗೆ ಭಿನ್ನವಾಗಿ, ಮೋದಿಯವರ ವ್ಯವಸ್ಥೆಯು ಚುನಾವಣೆಗಳನ್ನು ಅಮಾನತುಗೊಳಿಸುವ ಬದಲಿಗೆ ಚುನಾವಣೆಗಳ ಮೂಲಕವೇ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. ಆ ವ್ಯತ್ಯಾಸವು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಿಜೆಪಿ ಒಂದೆಡೆ ಮತದಾನದ ಮೂಲಕವೇ ತನ್ನ ಸಿಂಧುತ್ವ ಮತ್ತು ಕಾನೂನುಬದ್ಧತೆಯನ್ನು ಪಡೆದುಕೊಳ್ಳಲು ಬಯಸುತ್ತದೆ, ಮತ್ತೊಂದೆಡೆ ಆ ಮತದಾನ ನಡೆಯುವ ಸಂದರ್ಭ ಹಾಗೂ ಪರಿಸ್ಥಿತಿಗಳನ್ನೇ ಮರುರೂಪಿಸುತ್ತದೆ.

ಆಧುನಿಕ ಪ್ರಜಾಪ್ರಭುತ್ವದ ಅವನತಿಯು ಬೀದಿಗಳಲ್ಲಿ ಟ್ಯಾಂಕ್‌ಗಳು ಮೆರವಣಿಗೆ ಹೊರಡುವ ಮೂಲಕ ವಿರಳವಾಗಿ ಸಂಭವಿಸುತ್ತದೆ. ಅದು ಸಾಂಸ್ಥಿಕ ವ್ಯವಸ್ಥೆಗಳು ನಿಧಾನವಾಗಿ ಕಾರ್ಯಾಂಗದ ಅಧಿಕಾರದತ್ತ ವಾಲುವುದರ ಮೂಲಕ ಉದ್ಭವಿಸುತ್ತದೆ.

ಭಾರತದ ಚುನಾವಣಾ ವ್ಯವಸ್ಥೆಯೇ ದಿನೇದಿನೇ ಅಸಮಾನ ಕಣವಾಗಿ ಬದಲಾಗುತ್ತಿದೆ ಎಂದು ಬಿಜೆಪಿಯ ವಿಮರ್ಶಕರು ವಾದಿಸುತ್ತಾರೆ. ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಗಳು ಸೇರಿದಂತೆ ಕೇಂದ್ರ ಸಂಸ್ಥೆಗಳು ತಟಸ್ಥ ಸಂಸ್ಥೆಗಳಾಗಿ ಕೆಲಸ ಮಾಡುವ ಬದಲು, ರಾಜಕೀಯ ಬೆದರಿಕೆಯ ಸಾಧನಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವಿರೋಧ ಪಕ್ಷದ ನಾಯಕರು ಪದೇ ಪದೇ ಆರೋಪಿಸಿದ್ದಾರೆ.

ಕೇಜ್ರಿವಾಲ್ ಅವರ ಪತನವು ಈ ಹೊಸ ವಾಸ್ತವಕ್ಕೆ ಒಂದು ಸ್ಪಷ್ಟ ಸಂಕೇತವಾಗಿ ಕಂಡಿದೆ. ಸರಣಿ ದಾಳಿಗಳು, ಬಂಧನಗಳು ಮತ್ತು ಭ್ರಷ್ಟಾಚಾರದ ಆರೋಪಗಳು ದೆಹಲಿ ಮುಖ್ಯಮಂತ್ರಿ ಮತ್ತು ಅವರ ಪಕ್ಷದ ಸುತ್ತ ಸದಾ ಕಾಲ ದಿಗ್ಬಂಧನದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವು. ಅಪರಾಧಗಳು ಸಾಬೀತಾಗದೇ ಉಳಿದಿದ್ದರೂ, ಅದರಿಂದಾದ ರಾಜಕೀಯ ಹಾನಿಯನ್ನು ಮಾತ್ರ ಅಗಣಿತವಾದುದು.

ನೈತಿಕ ಅಸ್ಥಿರತೆ

ಇದರ ಸಂದೇಶವು ತೀರಾ ಸ್ಪಷ್ಟವಾಗಿತ್ತು: ವಿರೋಧ ಪಕ್ಷದ ನಾಯಕರು ಆಡಳಿತದ ವಿರುದ್ಧ ಪ್ರತಿರೋಧವನ್ನು ಸಂಘಟಿಸುವ ಬದಲು, ವರ್ಷಗಟ್ಟಲೆ ತನಿಖೆಗಳ ವಿರುದ್ಧ ಹೋರಾಡುವುದರಲ್ಲೇ ಕಾಲ ಕಳೆಯಬೇಕಾಗುತ್ತದೆ. ಇದೇ ಸಮಯದಲ್ಲಿ, ಚುನಾವಣಾ ಪ್ರಕ್ರಿಯೆಗಳೇ ದಿನೇದಿನೇ ಬೆಳೆಯುತ್ತಿರುವ ವಿವಾದದ ಕೇಂದ್ರಗಳಾಗುತ್ತಿವೆ.

ಬಿಹಾರ ಮತ್ತು ಬಂಗಾಳದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆಯು ಅಲ್ಪಸಂಖ್ಯಾತರು ಮತ್ತು ಬಡ ಮತದಾರರ ಹೆಸರನ್ನು ಹೆಕ್ಕಿ ಹೆಕ್ಕಿ ತೆಗೆದುಹಾಕಲಾಗಿದೆ ಎಂಬ ಆರೋಪಗಳಿಗೆ ಕಾರಣವಾಯಿತು. ಬಂಗಾಳವೊಂದರಲ್ಲೇ, ಪರಿಷ್ಕರಣೆ ಪ್ರಕ್ರಿಯೆಗಳ ಸಮಯದಲ್ಲಿ ಲಕ್ಷಾಂತರ ಹೆಸರುಗಳು ಮತದಾರರ ಪಟ್ಟಿಯಿಂದ ಮಾಯವಾಗಿವೆ ಎಂದು ವರದಿಯಾಗಿದೆ. ವಿರೋಧ ಪಕ್ಷಗಳು ಇದನ್ನು ವ್ಯವಸ್ಥಿತವಾಗಿ ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ಎಂದು ಆರೋಪಿಸಿದವು. ಆದರೆ ಚುನಾವಣಾ ಆಯೋಗವು ಈ ಪಕ್ಷಪಾತದ ಆರೋಪಗಳನ್ನು ತಿರಸ್ಕರಿಸಿತು.

ಆದರೆ ಪ್ರಜಾಪ್ರಭುತ್ವ ರಾಜಕಾರಣದಲ್ಲಿ, ಸಾಕ್ಷ್ಯಾಧಾರಗಳಷ್ಟೇ ಗ್ರಹಿಕೆಗಳೂ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು. ಅಪಾಯವಿರುವುದು ಕೇವಲ ಅಕ್ರಮ ನಡೆದಿದೆಯೇ ಇಲ್ಲವೇ ಎಂಬುದರಲ್ಲಲ್ಲ, ಬದಲಿಗೆ ಪ್ರಜಾಪ್ರಭುತ್ವದಲ್ಲಿರುವ ತಟಸ್ಥ ಸ್ಥಿತಿಯೇ ನಶಿಸುತ್ತಿದೆ ಎಂಬ ಸಾರ್ವಜನಿಕ ನಂಬಿಕೆ ಹೆಚ್ಚುತ್ತಿರುವುದರಲ್ಲಿ ಅಡಗಿದೆ.

ಸಂಸ್ಥೆಗಳು ಸಂವಿಧಾನದ ಉತ್ತರದಾಯಿತ್ವಕ್ಕೆ ಬದ್ಧವಾಗಿರುವ ಬದಲು, ಕಾರ್ಯಾಂಗದ ಅಧಿಕಾರಕ್ಕೆ ತಲೆಬಾಗುತ್ತಿವೆ ಎಂದು ನಾಗರಿಕರು ಸಂಶಯ ಪಡಲು ಶುರುಮಾಡಿದ ತಕ್ಷಣ, ಪ್ರಜಾಪ್ರಭುತ್ವವು ನೈತಿಕ ಅಸ್ಥಿರತೆಯ ವಲಯವನ್ನು ಪ್ರವೇಶಿಸುತ್ತದೆ.

ಬಿಜೆಪಿಯ ರಾಜಕೀಯ ನಾವೀನ್ಯತೆ

ಬಿಜೆಪಿಯ ಅತ್ಯಂತ ದೊಡ್ಡ ರಾಜಕೀಯ ನಾವೀನ್ಯತೆಯೆಂದರೆ, ಜಾತಿ ತಾರತಮ್ಯಗಳನ್ನು ಮೀರಿ ನಿಲ್ಲಬಲ್ಲ ಹಿಂದೂ ಬಹುಸಂಖ್ಯಾತ ವಾದವನ್ನು ಇಡೀ ಭಾರತದ ರಾಜಕೀಯ ಗುರುತನ್ನಾಗಿ ಪರಿವರ್ತಿಸುವಲ್ಲಿ ಸಾಧಿಸಿದ ಯಶಸ್ಸು.

ದಶಕಗಳ ಕಾಲ, ಭಾರತದ ಚುನಾವಣಾ ವ್ಯವಸ್ಥೆಯು ಭಾಷೆ, ಜಾತಿ ಮತ್ತು ಪ್ರಾದೇಶಿಕ ರೇಖೆಗಳ ಆಧಾರದ ಮೇಲೆ ಚದುರಿಹೋಗಿತ್ತು. ಮೋದಿಯವರ ನೇತೃತ್ವದ ಬಿಜೆಪಿ, ರಾಜಕೀಯವನ್ನು ವಿಶಾಲವಾದ ನಾಗರಿಕತೆಯ ನಿರೂಪಣೆಯ ಸುತ್ತ ಮರುಸಂಘಟಿಸಿತು. ಅಂದರೆ, ಜಾತ್ಯತೀತ ಗಣ್ಯರು, ಅಲ್ಪಸಂಖ್ಯಾತರು ಮತ್ತು ವಸಾಹತುಶಾಹಿ ಕಾಲದ ವಿಕೃತಿಗಳಿಂದ ರಾಷ್ಟ್ರವನ್ನು ಮರಳಿ ಪಡೆದುಕೊಳ್ಳುತ್ತಿರುವ, ಐತಿಹಾಸಿಕವಾಗಿ ಅನ್ಯಾಯಕ್ಕೆ ಒಳಗಾದ ಬಹುಸಂಖ್ಯಾತರು ಹಿಂದೂಗಳು ಎಂಬ ಪರಿಕಲ್ಪನೆಯನ್ನು ಅದು ಮುಂಚೂಣಿಗೆ ತಂದಿತು.

ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವೊಂದೇ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವಷ್ಟು ಪ್ರಬಲವಾದ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಭಾರತವು ನಿರಂತರ ನಿರುದ್ಯೋಗ, ಹಣದುಬ್ಬರ ಮತ್ತು ತೀವ್ರವಾದ ಅಸಮಾನತೆಯನ್ನು ಎದುರಿಸುತ್ತಿದೆ. ಪದವೀಧರರಾದ ಲಕ್ಷಾಂತರ ಯುವಕರು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ. ಆದರೆ ಈ ಮಾರುಕಟ್ಟೆ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಸಮರ್ಥವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಆದಾಗ್ಯೂ, ಮತದಾರರ ನಿರಾಶೆಯು ಪದೇ ಪದೇ ಆಡಳಿತದ ಮೇಲಿನ ಸಂಪೂರ್ಣ ತಿರಸ್ಕಾರವಾಗಿ ಬದಲಾಗುತ್ತಿಲ್ಲ. ಏಕೆ?

ಯಾಕೆಂದರೆ, ಬಿಜೆಪಿ ಕಲ್ಯಾಣ ಆಧಾರಿತ ಜನಪ್ರಿಯತೆ ಮತ್ತು ರಾಷ್ಟ್ರೀಯತಾವಾದಿ ಅಸ್ಮಿತೆ ಒಂದಕ್ಕೊಂದು ಬೆಸೆದುಕೊಂಡಿದೆ. ಸಬ್ಸಿಡಿ ದರದ ಆಹಾರ, ನಗದು ವರ್ಗಾವಣೆ, ಧಾರ್ಮಿಕ ಸಂಕೇತಗಳು, ಆಕ್ರಮಣಕಾರಿ ವಿದೇಶಾಂಗ ನೀತಿ ಮತ್ತು ಡಿಜಿಟಲ್ ಪ್ರಚಾರ—ಇವೆಲ್ಲವೂ ಈಗ ಒಂದೇ ಸಮಗ್ರ ರಾಜಕೀಯ ಯಂತ್ರದೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

ಅನೇಕ ಮತದಾರರಿಗೆ, ಮೋದಿ ಕೇವಲ ಆಡಳಿತದ ಪ್ರತೀಕವಲ್ಲ, ಬದಲಿಗೆ ರಾಷ್ಟ್ರೀಯ ಪುನರುತ್ಥಾನದ ಸಂಕೇತವಾಗಿ ಕಾಣುತ್ತಿದ್ದಾರೆ. ವಿರೋಧ ಪಕ್ಷಗಳು ಇನ್ನೂ ಕೇವಲ ಆಡಳಿತಾತ್ಮಕ ವೈಫಲ್ಯಗಳ ಭಾಷೆಯಲ್ಲೇ ಮಾತನಾಡುತ್ತಿವೆ.

ಆದರೆ ಬಿಜೆಪಿ ಐತಿಹಾಸಿಕ ವಿಧಿಯ ಭಾಷೆಯಲ್ಲಿ ಮಾತನಾಡುತ್ತದೆ. ಈ ಅಸಮಾನತೆಯು ವಿರೋಧ ಪಕ್ಷಗಳಿಗೆ ಭಾರಿ ಹೊಡೆತ ನೀಡುತ್ತಿದೆ.

ಅಸ್ಮಿತೆ ಮೇಲಿನ ಜನಾಭಿಪ್ರಾಯ

ಬಂಗಾಳವು ಒಂದು ಕಾಲದಲ್ಲಿ ಭಾರತದಲ್ಲಿ ಬಹುಸಂಖ್ಯಾತ ವಿರೋಧಿ ರಾಜಕಾರಣದ ಬೌದ್ಧಿಕ ಕೇಂದ್ರಬಿಂದುವಾಗಿತ್ತು. ಎಡರಂಗದ ಯುಗದಿಂದ ಹಿಡಿದು ಮಮತಾ ಬ್ಯಾನರ್ಜಿಯವರ ಜನಪ್ರಿಯ ಪ್ರಾದೇಶಿಕವಾದದವರೆಗೆ, ಆ ರಾಜ್ಯವು ಭಾಷಾ ರಾಷ್ಟ್ರೀಯತೆ, ಸಾಂಸ್ಕೃತಿಕ ಸಾರ್ವತ್ರಿಕತೆ ಮತ್ತು ಹಿಂದಿ-ಹಿಂದೂ ಕೇಂದ್ರೀಕರಣದ ಮೇಲಿನ ಅನುಮಾನದಲ್ಲಿ ಬೇರೂರಿದ ಅಸ್ಮಿತೆಯನ್ನು ಬೆಳೆಸಿಕೊಂಡಿತ್ತು. ಆದರೆ ಆ ಗೋಡೆಯೂ ಈಗ ಬಿರುಕು ಬಿಟ್ಟಿದೆ.

ಬಂಗಾಳದಲ್ಲಿ ಬಿಜೆಪಿಗೆ ದಕ್ಕಿರುವ ಗೆಲುವು ಕೇವಲ ಒಂದು ಪ್ರಾದೇಶಿಕ ಅಧಿಕಾರ ಬದಲಾವಣೆಗಿಂತ ಹೆಚ್ಚಿನ ಸಂಗತಿಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ ಹಿಂದುತ್ವ ರಾಜಕಾರಣಕ್ಕೆ ಮಣಿಯುವುದಿಲ್ಲ ಎಂದು ಪರಿಗಣಿಸಲಾಗಿದ್ದ ಪ್ರದೇಶಗಳಿಗೂ ಅದು ಲಗ್ಗೆ ಇಟ್ಟಿರುವುದಕ್ಕೆ ಇದು ಸಂಕೇತವಾಗಿದೆ.

ಇತ್ತ ಮಮತಾ ಬ್ಯಾನರ್ಜಿಯವರ ಸೋಲು ಹಲವು ಬಿಕ್ಕಟ್ಟುಗಳಿಂದ ಉದ್ಭವಿಸಿದ್ದಾಗಿದೆ — ಕುಂಟುತ್ತಿರುವ ಆರ್ಥಿಕತೆ, ಭ್ರಷ್ಟಾಚಾರದ ಆರೋಪಗಳು, ವರ್ಷಗಳ ಆಡಳಿತದ ನಂತರ ಮೂಡಿದ ಜಿಗುಪ್ಸೆ ಮತ್ತು ಹೆಚ್ಚುತ್ತಿರುವ ಹಿಂದೂ ಧ್ರುವೀಕರಣ. ಆದರೆ ಬಿಜೆಪಿಯ ಯಶಸ್ಸು, ಸ್ಥಳೀಯ ಕುಂದುಕೊರತೆಗಳನ್ನು ನಾಗರಿಕತೆಯ ರಾಜಕಾರಣವನ್ನಾಗಿ ಪರಿವರ್ತಿಸುವಲ್ಲಿ ಅದಕ್ಕಿರುವ ಪರಿಣತಿಯನ್ನೂ ಪ್ರತಿಬಿಂಬಿಸುತ್ತದೆ.

ಬಿಜೆಪಿಯು ಬಂಗಾಳವನ್ನು ಕೇವಲ ಆಡಳಿತಾತ್ಮಕವಾಗಿ ಕುಸಿಯುತ್ತಿರುವ ರಾಜ್ಯವಾಗಿ ಮಾತ್ರ ಬಿಂಬಿಸಲಿಲ್ಲ; ಬದಲಿಗೆ ಅದನ್ನು ಅಲ್ಪಸಂಖ್ಯಾತರ ಓಲೈಕೆ ಮತ್ತು ಜನಸಂಖ್ಯಾ ಬದಲಾವಣೆಯ ಆತಂಕದಿಂದ ಅಪಾಯಕ್ಕೆ ಸಿಲುಕಿರುವ ಹಿಂದೂ ಸಮಾಜವಾಗಿ ಬಿಂಬಿಸಿತು. ಈ ವಾಕ್ಚಾತುರ್ಯದ ತಂತ್ರವೇ ಈಗ ಬಿಜೆಪಿಯ ರಾಷ್ಟ್ರೀಯ ಮಾದರಿಯಾಗಿದೆ. ಪ್ರತಿಯೊಂದು ಪ್ರಾದೇಶಿಕ ಚುನಾವಣೆಯೂ ಕೇವಲ ಆಡಳಿತದ ಮೇಲಿನ ಚರ್ಚೆಯಾಗಿ ಉಳಿಯದೆ, ಅಸ್ಮಿತೆಯ ಮೇಲಿನ ಜನಾಭಿಪ್ರಾಯವಾಗಿ ರೂಪಾಂತರಗೊಳ್ಳುತ್ತಿದೆ.

ವಿಭಜನೆಗೊಂಡಿರುವ ಮತ್ತು ಕೇವಲ ಪ್ರತಿಕ್ರಿಯೆ ನೀಡುವುದಕ್ಕಷ್ಟೇ ಸೀಮಿತವಾಗಿರುವ ವಿರೋಧ ಪಕ್ಷಗಳು, ಧರ್ಮ, ಮಾಧ್ಯಮ ವ್ಯವಸ್ಥೆ, ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ವರ್ಚಸ್ವಿ ನಾಯಕತ್ವದ ಮೂಲಕ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಇಂತಹ ಬಲಿಷ್ಠ ನಿರೂಪಣೆಯನ್ನು ಎದುರಿಸಲು ಪರದಾಡುತ್ತಿವೆ. ಇದು ಒಂದು ರಾಜಕೀಯ ಶೂನ್ಯತೆ ಸೃಷ್ಟಿಸಲು ಕಾರಣವಾಗಿದೆ. ರಾಜಕಾರಣದಲ್ಲಿ ಶೂನ್ಯತೆ ಎಂದಿಗೂ ದೀರ್ಘಕಾಲ ಶೂನ್ಯತೆಯಾಗಿಯೇ ಉಳಿಯುವುದಿಲ್ಲ.

ನಿಯಂತ್ರಿತ ಪ್ರಜಾಪ್ರಭುತ್ವ

ಭಾರತವು ಇನ್ನೂ ಅಧಿಕೃತವಾಗಿ ಏಕಪಕ್ಷೀಯ ರಾಷ್ಟ್ರವಾಗಿ ಬದಲಾಗಿಲ್ಲ. ಚುನಾವಣೆಗಳು ನಡೆಯುತ್ತಲೇ ಇವೆ; ನ್ಯಾಯಾಲಯಗಳು ಸಂಪೂರ್ಣವಾಗಿ ಶರಣಾಗಿಲ್ಲ. ಸ್ವತಂತ್ರ ಪತ್ರಕರ್ತರು, ಕಾರ್ಯಕರ್ತರು ಮತ್ತು ಪ್ರಾದೇಶಿಕ ನಾಯಕರು ಇಂದಿಗೂ ಪ್ರತಿರೋಧ ಒಡ್ಡುತ್ತಿದ್ದಾರೆ.

ಆದರೆ ಪ್ರಜಾಪ್ರಭುತ್ವ ಕೇವಲ ವ್ಯವಸ್ಥೆಯ ನಿರ್ವಾತದಿಂದ ಮಾತ್ರ ಸಾಯುವುದಿಲ್ಲ. ಅವು ಅಸಮತೋಲನದ ಮೂಲಕವೂ ಕ್ಷೀಣಿಸಬಹುದು.

ಆಡಳಿತ ಪಕ್ಷವೊಂದು ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕಗೊಳಿಸಿ, ಅವು ದಣಿದು ಹೋಗುವಂತೆ ಮಾಡಲು ಸಾಧ್ಯವಾದರೆ, ಆ ಪಕ್ಷಗಳನ್ನು ನಿಷೇಧಿಸುವ ಅಗತ್ಯವೇ ಅದಕ್ಕಿರುವುದಿಲ್ಲ. ಇಂದಿನ ಮೋದಿ ಅವರ ಭಾರತದ ಗಹನತೆ ಇರುವುದೇ ಇಲ್ಲೇ.

ಅಪಾಯವಿರುವುದು ಕೇವಲ ಚುನಾವಣಾ ಪ್ರಾಬಲ್ಯದಲ್ಲಲ್ಲ. ವಿರೋಧ ಪಕ್ಷ ಎನ್ನುವುದೇ ಅನಗತ್ಯ, ಕಾನೂನುಬಾಹಿರ ಅಥವಾ ದೇಶವಿರೋಧಿ ಎಂಬ ಕಲ್ಪನೆಯನ್ನು ಸಮಾಜದಲ್ಲಿ ಸಾಮಾನ್ಯ ಎಂಬಂತೆ ಬಿತ್ತಲಾಗುತ್ತಿದೆ. ಇಂತಹ ಸಂಗತಿಯಲ್ಲಿ ಅದರ ಅಪಾಯ ಅಡಗಿದೆ.

ಇತಿಹಾಸವು ನಮಗೆ ಇಂತಹ ಕೆಲವು ಕಠಿಣ ಉದಾಹರಣೆಗಳನ್ನು ನೆನಪಿಸುತ್ತದೆ. 20ನೇ ಶತಮಾನದ ಮೆಕ್ಸಿಕೋದಲ್ಲಿ ಅಸ್ತಿತ್ವದಲ್ಲಿದ್ದ 'ಇನ್‌ಸ್ಟಿಟ್ಯೂಷನಲ್ ರೆವಲ್ಯೂಷನರಿ ಪಾರ್ಟಿ' ಇರಬಹುದು ಅಥವಾ ಇತರ ಕಡೆಗಳಲ್ಲಿ ಇದ್ದ ಪ್ರಬಲ ಪಕ್ಷದ ವ್ಯವಸ್ಥೆಗಳಿರಬಹುದು; ನಿಜವಾದ ರಾಜಕೀಯ ಪರ್ಯಾಯವು ನಿಧಾನವಾಗಿ ಕಣ್ಮರೆಯಾಗುತ್ತಿದ್ದರೂ, ಚುನಾವಣಾ ಸ್ಪರ್ಧೆಯು ಮೇಲ್ನೋಟಕ್ಕೆ ಕಾಣುವಂತೆ ಬದುಕುಳಿಯಬಲ್ಲದು.

ಇದರ ಫಲಿತಾಂಶ ಒಂದು ಸಾಂಪ್ರದಾಯಿಕ ಸರ್ವಾಧಿಕಾರ ಅಲ್ಲ. ಬದಲಿಗೆ, ಅದು "ನಿಯಂತ್ರಿತ ಪ್ರಜಾಪ್ರಭುತ್ವ" ಆಗಿರುತ್ತದೆ — ಅಂದರೆ ಸಮಾನ ಶಕ್ತಿ ಇಲ್ಲದ ಚುನಾವಣೆಗಳು.

ಬಹುತ್ವದ ಭಾರತ ಎಲ್ಲಿದೆ?

ಭಾರತದ ಸಾಂವಿಧಾನಿಕ ಕಲ್ಪನೆಯು ಒಂದು ಕಾಲದಲ್ಲಿ ಭಾಷಿಕ, ಸೈದ್ಧಾಂತಿಕ, ಧಾರ್ಮಿಕ ಮತ್ತು ರಾಜಕೀಯ ಬಹುತ್ವದ ಮೇಲೆ ಆಧಾರಿತವಾಗಿತ್ತು. ನೆಹರೂ ಅವರ "ಭಾರತದ ಪರಿಕಲ್ಪನೆ"ಯು ಯಾವುದೇ ಒಂದು ಗುರುತು ಅಥವಾ ಅಸ್ಮಿತೆಯು ಗಣರಾಜ್ಯವನ್ನು ಶಾಶ್ವತವಾಗಿ ತನ್ನ ಏಕಸ್ವಾಮ್ಯಕ್ಕೆ ಒಳಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆಯ ಮೇಲೆ ನಿಂತಿತ್ತು.

ಆದರೆ ಬಿಜೆಪಿ, ಕೇಂದ್ರೀಕೃತ ರಾಜಕೀಯ ಅಧಿಕಾರದ ಬೆಂಬಲವಿರುವ ಸಾಂಸ್ಕೃತಿಕ ಏಕರೂಪತೆಯ ವಿಭಿನ್ನ ದೃಷ್ಟಿಕೋನವನ್ನು ಪ್ರಸ್ತಾಪಿಸುತ್ತದೆ. ಪ್ರಸ್ತುತ ಆ ದೃಷ್ಟಿಕೋನವೇ ಗೆಲ್ಲುತ್ತಿದೆ.

ಆದರೆ ಪ್ರಜಾಪ್ರಭುತ್ವಗಳನ್ನು ಅಂತಿಮವಾಗಿ ಪರೀಕ್ಷಿಸುವುದು ಸರ್ಕಾರದ ಬಲದ ಮೇಲಲ್ಲ, ಬದಲಿಗೆ ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಬದುಕುಳಿದಿದೆ ಎಂಬುದರ ಮೇಲೆ. ರಾಜಕೀಯ ವಿಶ್ಲೇಷಕರು ಸರಿಯಾಗಿಯೇ ಎಚ್ಚರಿಸಿರುವಂತೆ, ಯಾರೂ ಸಹ ಏಕಪಕ್ಷೀಯ ಆಡಳಿತವನ್ನು ಬಯಸುವುದಿಲ್ಲ.

ಇಂದಿನ ಭಾರತದ ದುರಂತವೇನೆಂದರೆ, ವಿರೋಧ ಪಕ್ಷದ ಬಹುಪಾಲು ಅಸ್ತಿತ್ವವು ಕಣ್ಮರೆಯಾದ ನಂತರವಷ್ಟೇ, ಅನೇಕರು ಅದರ ಮೌಲ್ಯವನ್ನು ಅರಿತುಕೊಳ್ಳಬಹುದು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.


Next Story