
ಮೊದಲು ಅವರು ಹಣದ ಮೇಲೆ ಕೈಯಿಟ್ಟರು, ನಂತರ ಅಂಪೈರ್ ಮೇಲೆ. ಹಾಗಿದ್ದೂ ಅವರು 2024ರ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರೀಗ ಕಣ್ಣಿಟ್ಟಿದ್ದು ಮತದಾರರ ಮೇಲೆಯೇ!
ಪ್ರಜಾಪ್ರಭುತ್ವವು ಒಂದು ಸರಳ ಸಿದ್ಧಾಂತದೊಂದಿಗೆ ಆರಂಭವಾಗುತ್ತದೆ- ಜನರೇ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ನಂತರವೂ ಆ ಸಿದ್ದಾಂತ ಇನ್ನೂ ಜೀವಂತವಿದೆ ಅನಿಸುತ್ತದೆಯೇ?
ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ಪತ್ರಿಕೆಯಲ್ಲಿ ರಿತಿಕಾ ಛೋಪ್ರಾ ಮತ್ತು ಅವರ ಸಹೋದ್ಯೋಗಿಗಳು ಎಸ್ಐಆರ್ ಅವಧಿಯಲ್ಲಿ ನಡೆಸಿದ ಅಸಾಧಾರಣ ತನಿಖೆಯು ಇದೇ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಇಬ್ಬರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ತಮ್ಮ ಗಮನಕ್ಕೇ ತಾರದೆ ತೆಗೆದುಕೊಂಡ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಕೇವಲ ಹತ್ತು ತಿಂಗಳಲ್ಲಿ ಕನಿಷ್ಠ ಹದಿನಾಲ್ಕು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಸೆ.23 ರಂದು ಪತ್ರಿಕೆ ಬಹಿರಂಗಪಡಿಸಿತು. ಅವರ ಆಕ್ಷೇಪಣೆಗಳು ಚುನಾವಣಾ ಪ್ರಕ್ರಿಯೆಯ ಪ್ರಮುಖ ಅಂಶಗಳಿಗೆ ಸಂಬಂಧಿಸಿದ್ದಾಗಿದ್ದವು. ಅಂದರೆ ಮತದಾರರ ಸೇರ್ಪಡೆ, ಹೆಸರುಗಳನ್ನು ಅಳಿಸಿ ಹಾಕುವುದು ಮತ್ತು ಅವರ ಮರುಸ್ಥಾಪನೆ, ಅರ್ಜಿ ನಮೂನೆ ಆರರಲ್ಲಿನ ಬದಲಾವಣೆಗಳು, ಚುನಾವಣಾ ಆಯೋಗದ ಹೆಸರಿನಲ್ಲಿ ಹೂಡಿದ ಮೇಲ್ಮನವಿಗಳು ಹಾಗೂ ಮತದಾರರ ಪಟ್ಟಿಯನ್ನು ಹೊಂದಿರುವ ಡಿಜಿಟಲ್ ಮೂಲಸೌಕರ್ಯದ ಮೇಲಿನ ನಿಯಂತ್ರಣ ಮುಂತಾದ ಅಂಶಗಳು ಸೇರಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆಗಳನ್ನು ʼಅನಧಿಕೃತ ಮತ್ತು ಕಾನೂನು ಬಾಹಿರʼ ಎಂದು ಕರೆಯಲಾಗಿದೆ.
ಯಾರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು?
ಚುನಾವಣಾ ಆಯೋಗವು ಮೂವರು ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಸಂಸ್ಥೆ. ಮುಖ್ಯ ಚುನಾವಣಾ ಆಯುಕ್ತರು ಸಮಾನರಲ್ಲಿ ಅಗ್ರಣಿಯಾಗಿರುತ್ತಾರೆ. ಇಬ್ಬರು ಚುನಾವಣಾ ಆಯುಕ್ತರು ವ್ಯಕ್ತಪಡಿಸಿರುವ ಆಕ್ಷೇಪಣೆಗಳ ಗಹನವಾದ ಸಂಗತಿ ಏನೆಂದರೆ ಅನಧಿಕೃತ ಮತ್ತು ಕಾನೂನು ಬಾಹಿರ ನಿರ್ಧಾರಗಳು ಮತ್ತು ಕ್ರಮಗಳ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಆಯೋಗಕ್ಕಿರುವ ʼಸಮಗ್ರತೆʼಯನ್ನು ಮುರಿದರು ಎಂಬುದು. ಜೊತೆಗೆ ಅವರು ಬೇರೆಯವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು.
ಇದು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಮತ್ತೊಂದು ವಿವಾದವಲ್ಲ. ಇದು ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಪ್ರಜಾಪ್ರಭುತ್ವದಲ್ಲಿ ಒಬ್ಬ ನಾಗರಿಕ ಭಾಗಿಯಾಗುವ ನಿಯಮಗಳನ್ನು ಯಾರು ನಿರ್ಧರಿಸುತ್ತಾರೆ?
ಮತ್ತು ಇದು ಎಸ್ಐಆರ್ನೊಂದಿಗೆ ಶುರುವಾದುದಲ್ಲ. ಎಸ್ಐಆರ್ ಎಂಬುದು ಒಂದು ದಶಕದ ಹಿಂದೆ ಆರಂಭವಾದ ಕಥೆಯ ಇತ್ತೀಚಿನ ಹಂತ ಮಾತ್ರ. ಇದು ಪ್ರಜಾಪ್ರಭುತ್ವಕ್ಕೆ ಹಣ ಒದಗಿಸುವ, ಅದನ್ನು ನಡೆಸುವ ಮತ್ತು ಕೊನೆಗೆ ಅಧಿಕಾರವಾಗಿ ಬದಲಾಯಿಸುವ ವ್ಯವಸ್ಥೆಯನ್ನು ಕ್ರಮೇಣ ತನ್ನ ಕಬ್ಜಾ ಮಾಡಿಕೊಂಡ ಕಥೆಯಾಗಿದೆ.
ಇದರ ಮೊದಲ ಹಂತವೇ ನೋಟ್ ಬ್ಯಾನ್. ಕಪ್ಪು ಹಣ, ಭ್ರಷ್ಟಾಚಾರ, ನಕಲಿ ಕರೆನ್ಸಿ ಮತ್ತು ಭಯೋತ್ಪಾದನಾ ನಿಧಿಯ ವಿರುದ್ಧ ಯುದ್ಧ ಸಾರುತ್ತೇವೆ ಎಂದು ಹೊರಟು 2016ರ ನವೆಂಬರ್ ಎಂಟರಂದು ಏಕಾಏಕಿ ಚಲಾವಣೆಯಲ್ಲಿದ್ದ ಒಟ್ಟು ಕರೆನ್ಸಿ ಮೌಲ್ಯದ ಶೇ.86ರಷ್ಟು ಪ್ರಮಾಣವನ್ನು ಅಮಾನ್ಯಗೊಳಿಸಲಾಯಿತು.
ನೋಟ್ ಬಂದಿಯ ಅಸಲಿ ಗುಟ್ಟು
ಈ ನೋಟ್ಬಂದಿ ಕಪ್ಪು ಹಣವನ್ನು ಮರಳಿ ತರಲು ಸಹಾಯ ಮಾಡಿತೇ? ಇದು ಅರ್ಥ ವ್ಯವಸ್ಥೆಯಲ್ಲಿ ಕರೆನ್ಸಿ ವಹಿವಾಟನ್ನು ಕಡಿಮೆ ಮಾಡಿತೇ? ಇದು ಭ್ರಷ್ಟಾಚಾರಕ್ಕೆ ಅಂಕುಶ ಹಾಕಿತೇ? ನಕಲಿ ಕರೆನ್ಸಿ ಸಮಸ್ಯೆ ಮಾಯಾವಾಯಿತೇ?
ಆದರೆ ಸಂಭವಿಸಿದ್ದೇ ಬೇರೆ. ಇಡೀ ದೇಶದಲ್ಲಿ ರಾಜಕೀಯವಾಗಿ ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ 2017ರ ಚುನಾವಣೆಗಳು ನಡೆಯಲು ಇನ್ನೇನು ಆರು ತಿಂಗಳಿರುವಂತೆ ಕೈಗೊಂಡ ನೋಟ್ಬಂದಿ ವಿರೋಧ ಪಕ್ಷಗಳ ಹಣಕಾಸಿನ ಸತ್ವವನ್ನೇ ಹೀರಿಹಾಕಿತು. ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಬರೋಬ್ಬರಿ 312 ಸ್ಥಾನಗಳನ್ನು. ಇಡೀ ದೇಶವನ್ನು ನೋಟು ಅಮಾನ್ಯೀಕರಣದ ಸುಳಿಯಲ್ಲಿ ಸಿಲುಕಿಸಿದ್ದಾದರೂ ಯಾಕೆ ಎಂಬುದು ಅದರಿಂದ ಅರ್ಥವಾಗಿತ್ತು.
ನಂತರ ಶುರುವಾಗಿದ್ದು ಎರಡನೇ ಹಂತ. ಇದ್ದಕ್ಕಿದ್ದಂತೆ ಚುನಾವಣಾ ಬಾಂಡ್ಗಳು ಹಾಜರಾದವು.
ನಗದು ರೂಪದಲ್ಲಿ ನೀಡುವ ದೇಣಿಗೆಗಳನ್ನು ಲೆಕ್ಕಕ್ಕೆ ಸಿಗದ ಕಪ್ಪು ಹಣ ಎಂದು ಟೀಕಿಸಲಾಗುತ್ತಿತ್ತು. ಆದರೆ ಚುನಾವಣಾ ಬಾಂಡ್ಗಳನ್ನು ಸ್ವಚ್ಛ ಹಾಗೂ ಪರಿಶುದ್ಧ ಪರ್ಯಾಯ ಮಾರ್ಗ ಎಂದು ಬಿಂಬಿಸಲಾಯಿತು. ಸತ್ಯವೇನೆಂದರೆ ಆಡಳಿತ ನಡೆಸುತ್ತಿದ್ದ ಪಕ್ಷಕ್ಕೆ ಸಿಂಹಪಾಲು ದಕ್ಕಿತು. ರಾಜಕೀಯ ಪಕ್ಷಗಳು ರಹಸ್ಯವಾಗಿ ನಗದಿನಷ್ಟೇ ಮೌಲ್ಯಯುತವಾದ ಬೇರರ್ ಬಾಂಡ್ಗಳ ಮೂಲಕ ಅಪರಿಮಿತ ದೇಣಿಗೆಗಳನ್ನು ಪಡೆಯಲು ಸರ್ಕಾರವು ಒಂದು ಮಾರ್ಗವನ್ನು ಕಲ್ಪಿಸಿಕೊಟ್ಟಿತ್ತು.
2019ರಲ್ಲಿ ಈ ಯೋಜನೆ ಅಸಂವಿಧಾನಿಕವಾಗಿದ್ದು ಅದನ್ನು ರದ್ದು ಮಾಡಬೇಕು ಎಂದು ವಾದಿಸಿ ನಾನು ಸುಪ್ರೀಂ ಕೋರ್ಟ್ ಮುಂದೆ ಮನವಿ ಸಲ್ಲಿಸಿದ್ದೆ. 2022ರಲ್ಲಿ, ಚುನಾವಣಾ ನಿಧಿಯ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ನೋಟು ಅಮಾನ್ಯೀಕರಣ ಮತ್ತು ಚುನಾವಣಾ ಬಾಂಡ್ಗಳು ಬಿಜೆಪಿ ಪಾಲಿಗೆ ಮೊದಲ ಮತ್ತು ಎರಡನೇ ಹಂತಗಳಾಗಿವೆ ಎಂಬ ವಾದವನ್ನು ನಾನು ಮಂಡಿಸಿದ್ದೆ. ಫೆಬ್ರುವರಿ 2024ರಲ್ಲಿ ಸುಪ್ರೀಂ ಕೋರ್ಟ್ ಅಂತಿಮವಾಗಿ ಇದಕ್ಕೆ ಸಮ್ಮತಿ ಸೂಚಿಸಿ ಆ ಇಡೀ ಯೋಜನೆಯನ್ನೇ ಅಸಂವಿಧಾನಿಕ ಎಂದು ತಳ್ಳಿಹಾಕಿತು. ಅಷ್ಟರಲ್ಲಾಗಲೇ ಬಿಜೆಪಿ ಯಾವುದೇ ಪಕ್ಷಕ್ಕೂ ಸಾಟಿಯಿಲ್ಲದ ರೀತಿಯಲ್ಲಿ ಬೃಹತ್ ನಿಧಿಯನ್ನು ಸಂಗ್ರಹಿಸಿಬಿಟ್ಟಿತ್ತು. ಅನಾಮಧೇಯ ದೇಣಿಗೆಗಳ ಮೂಲಕ ಅದು ಒಟ್ಟು 8200 ಕೋಟಿಗೂ ಅಧಿಕ ಹಣವನ್ನು ಪೇರಿಸಿತ್ತು. ಹಿಂದೆ ಕಾನೂನು ಬಾಹಿರವಾಗಿದ್ದನ್ನು ಕಾನೂನುಬದ್ಧಗೊಳಿಸುವ ಮೂಲಕ ಈ ಬೃಹತ್ ನಿಧಿಯನ್ನು ಒಟ್ಟುಗೂಡಿಸಿತ್ತು.
ಮುಂದಿನ ತಂತ್ರವೇ ಚುನಾವಣಾ ಆಯೋಗ
ಚುನಾವಣಾ ಆಯುಕ್ತರನ್ನು ನೇಮಿಸಲು ಸಂವಿಧಾನದ 324ನೇ ವಿಧಿಯು ನಿರೀಕ್ಷಿಸಿದ್ದ ಕಾನೂನನ್ನು ಸಂಸತ್ತು ಎಂದಿಗೂ ಜಾರಿಗೆ ತಂದಿರಲಿಲ್ಲ. 2023ರಲ್ಲಿ, ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಅಂತಹ ಕಾನೂನನ್ನು ರೂಪಿಸುವಂತೆ ನಿರ್ದೇಶಿಸಿತು ಮತ್ತು ಪ್ರಧಾನಿ, ವಿರೋಧ ಪಕ್ಷದ ನಾಯಕರು ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಾನ ತೂಕದ ಒಂದು ನ್ಯಾಯಯುತ ಸಮಿತಿಯು ಹೇಗಿರಬೇಕು ಎಂಬುದನ್ನು ಮಧ್ಯಂತರ ವ್ಯವಸ್ಥೆಯ ಮೂಲಕ ತೋರಿಸಿಕೊಟ್ಟಿತು.
ಸರ್ಕಾರವು ಕಾನೂನನ್ನೇನೋ ರೂಪಿಸಿತು ಆದರೆ ಮುಖ್ಯ ನ್ಯಾಯಮೂರ್ತಿಯವರ ಬದಲಿಗೆ ಪ್ರಧಾನಮಂತ್ರಿಯವರೇ ಆಯ್ಕೆ ಮಾಡಿದ ಒಬ್ಬ ಕೇಂದ್ರ ಸಂಪುಟ ಸಚಿವರನ್ನು ಸೇರಿಸಿಕೊಂಡಿತು - ಮತ್ತು ಅಮಿತ್ ಶಾ ಹೊರತುಪಡಿಸಿ ಅದು ಬೇರೆ ಯಾರಾಗಿರಲು ಸಾಧ್ಯ? - ಈ ಮೂಲಕ ನೇಮಕಾತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಾಯಿತು. ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡುವುದನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಸಮ್ಮತಿ ವ್ಯಕ್ತಪಡಿಸಿದರು. ಆದರೂ ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಇಟ್ಟ ಹೆಜ್ಜೆ ಹಿಂದೆ ತೆಗೆಯಲಿಲ್ಲ.
ಈಗ ಎಸ್ಐಆರ್ ಬಂದಿದೆ
ಅಷ್ಟಕ್ಕೂ ಉಳಿದ ಸಮಸ್ಯೆ ಏನು? ಓಹ್, ಹೌದು, ಅದು ಭಾರತೀಯ ಮತದಾರ. ಚುನಾವಣಾ ನಿಧಿಯ ಮೇಲೆ ತನ್ನ ಬಹುತೇಕ ಏಕಸ್ವಾಮ್ಯ ಹಾಗೂ ಚುನಾವಣಾ ಆಯುಕ್ತರ ನೇಮಕಾತಿಯ ಮೇಲಿನ ನಿಯಂತ್ರಣದ ಹೊರತಾಗಿಯೂ, ಬಿಜೆಪಿ 2024ರಲ್ಲಿ ಸರಳ ಬಹುಮತವನ್ನೂ ಗಳಿಸಲು ವಿಫಲವಾಯಿತಲ್ಲ? ಹಾಗಾಗಿ ಮತದಾರರನ್ನೇ ಹದ್ದುಬಸ್ತಿನಲ್ಲಿ ಇಟ್ಟುಬಿಟ್ಟರೆ ಸಮಸ್ಯೆಯೇ ಖತಂ!
ನಿಮ್ಮ ತಾತ ಕೂಡ ಮತ ಹಾಕಿದ್ದರೆ? ಅದನ್ನು ಸಾಬೀತುಪಡಿಸಿ.
ಮತದಾರರ ಪಟ್ಟಿಯ ಪರಿಷ್ಕರಣೆಯು ಸಾಮಾನ್ಯವಾಗಿ ಮತದಾರರ ಪಟ್ಟಿಯನ್ನು ಸ್ವಚ್ಛವಾಗಿಡಲು ಅಗತ್ಯವಿರುವ ಆಯಾ ಕಾಲಕ್ಕೆ ನಡೆಸುವ ಪ್ರಕ್ರಿಯೆ. ಮೃತಪಟ್ಟವರು, ನಕಲಿ ಹೆಸರುಗಳು ಮತ್ತು ಶಾಶ್ವತವಾಗಿ ಸ್ಥಳಾಂತರಗೊಂಡ ಜನರನ್ನು ಪಟ್ಟಿಯಿಂದ ತೆಗೆದುಹಾಕುವುದು ಇದರ ಹಿಂದಿನ ಉದ್ದೇಶ.
ಆದರೆ, ಇಂತಹ ಕೆಲಸಗಳನ್ನು ಮಾಡುವಾಗ ಪ್ರಜಾಪ್ರಭುತ್ವದ ಮೂಲಭೂತ ನಿಯಮ ಅಥವಾ ತತ್ವವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸಂವಿಧಾನವು ಸೂಚಿಸುವ ಮೂರು ಷರತ್ತುಗಳನ್ನು ಪೂರೈಸುವ ನಾಗರಿಕನು- 18 ವರ್ಷ ವಯಸ್ಸಾಗಿರುವುದು, ಭಾರತೀಯ ನಾಗರಿಕನಾಗಿರುವುದು ಮತ್ತು ಕಾನೂನುಬದ್ಧವಾಗಿ ಮತದಾನದಿಂದ ಅನರ್ಹತೆ ಹೊಂದದೇ ಇರುವುದು- ಇವುಗಳಿಂದ ಮತ ಚಲಾಯಿಸಲು ಅರ್ಹನೆಂದು ಪರಿಗಣಿಸಲ್ಪಡುತ್ತಾನೆ. ನಿರ್ದಿಷ್ಟ ಹೆಸರೊಂದು ಮತದಾರರ ಪಟ್ಟಿಗೆ ಸೇರಿದ್ದಲ್ಲ ಎಂದು ಸರ್ಕಾರವು ನಂಬಿದರೆ, ಪ್ರತಿ ಪ್ರಕರಣದಲ್ಲೂ ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ.
ಆದರೆ ಎಸ್ಐಆರ್ ಈ ಮೂಲ ನಿಯಮವನ್ನೇ ತಲೆಕೆಳಗಾಗಿ ಮಾಡಿದೆ. ಅದು ಎಲ್ಲರನ್ನೂ ಒಳಗೊಳ್ಳುವ ಬದಲು, ಜನರನ್ನು ಹೊರಗಿಡುವುದಕ್ಕೇ ಹೆಚ್ಚಿನ ಆದ್ಯತೆ ನೀಡಿದೆ. ಅನುಮಾನಾಸ್ಪದ ಹೆಸರುಗಳನ್ನು ಪರಿಶೀಲಿಸುವ ಹೊಣೆಯನ್ನು ಸರ್ಕಾರ ತೆಗೆದುಕೊಳ್ಳುವ ಬದಲಿಗೆ, ಪ್ರತಿಯೊಬ್ಬ ನಾಗರಿಕನೇ ತಾನು ನಿಜವಾದ ಮತದಾರ ಎಂದು ನಿಗದಿತ ಸಮಯದೊಳಗೆ ಸಾಬೀತುಪಡಿಸಬೇಕಾದ ಸ್ಥಿತಿ ಎದುರಾಗಿದೆ. ಈ ಸಾಕ್ಷಿ ನೀಡಲು ಸಾಧ್ಯವಾಗದ ಕಾರಣ ದೇಶಾದ್ಯಂತ 13 ಕೋಟಿಗೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗಿವೆ.
ಸರ್ಕಾರ ಕೊಟ್ಟ ದಾಖಲೆಗಳೇ ಪುರಾವೆಯಲ್ಲ!
ಸರ್ಕಾರವು ಪೌರತ್ವ ಸಾಬೀತುಪಡಿಸಲು ದಾಖಲೆಗಳನ್ನು ಕೇಳುತ್ತದೆ, ಆದರೆ ಭಾರತವು ಪೌರತ್ವವನ್ನು ಖಚಿತವಾಗಿ ನಿರೂಪಿಸುವ ಯಾವುದೇ ಒಂದೇ ಒಂದು ದಾಖಲೆಯನ್ನು ನೀಡುವುದಿಲ್ಲ. ಒಬ್ಬ ನಾಗರಿಕನು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಸ್ವತಃ ಸರ್ಕಾರವೇ ನೀಡಿದ ಭಾರತೀಯ ಪಾಸ್ಪೋರ್ಟ್ ಅನ್ನು ಹೊಂದಿರಬಹುದು. ಆದಾಗ್ಯೂ, ಈ ಪ್ರಕ್ರಿಯೆಯ ಮಧ್ಯೆ, ಭಾರತೀಯ ಪಾಸ್ಪೋರ್ಟ್ ಕೇವಲ ಪ್ರಯಾಣದ ದಾಖಲೆಯೇ ಹೊರತು ಪೌರತ್ವದ ಪುರಾವೆಯಲ್ಲ ಎಂದು ವಿದೇಶಾಂಗ ಸಚಿವಾಲಯ ಘೋಷಿಸಿತು. ಸರ್ಕಾರವೇ ಈ ಕಾಗದಪತ್ರವನ್ನು ನೀಡುತ್ತದೆ, ಆದರೆ ಅದನ್ನು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಸಂಪೂರ್ಣ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ, ಸಾಂವಿಧಾನಿಕ ಹಕ್ಕೊಂದು ಆಡಳಿತ ವ್ಯವಸ್ಥೆಯು ನೀಡುವ ಕೇವಲ ಸೌಲಭ್ಯವಾಗಿ ತಳಮಟ್ಟಕ್ಕೆ ಇಳಿಯುತ್ತದೆ.
ಅಷ್ಟೆಲ್ ಆದ ಬಳಿಕ ಈ ಬಾರಿ ಬೇಡಿಕೆಯಿಟ್ಟಿರುವ ಪುರಾವೆಯು ಒಂದು ತಲೆಮಾರಿನ ಹಿಂದಿನವರ ದಾಖಲೆಯನ್ನು ಕೇಳುತ್ತಿದೆ. ಬದಲಾಯಿಸಲಾದ 'ಫಾರ್ಮ್ 6' ಅಡಿಯಲ್ಲಿ, ಯುವ ಭಾರತೀಯನೊಬ್ಬ ಮತದಾರನಾಗಲು ಅರ್ಜಿ ಸಲ್ಲಿಸಬೇಕೆಂದರೆ, ಮೊದಲು ತನ್ನ ಪೋಷಕರು ಅಥವಾ ಅಜ್ಜ-ಅಜ್ಜಿ ಎರಡು ದಶಕಗಳ ಹಿಂದಿನ ಹಿಂದಿನ ಎಸ್ಐಆರ್ ಮತದಾರರ ಪಟ್ಟಿಯಲ್ಲಿದ್ದರೇ ಎಂಬುದನ್ನು ಸ್ಥಾಪಿಸಬೇಕಾಗುತ್ತದೆ - ಅಂದರೆ ಮತದಾನದ ಹಕ್ಕು ವ್ಯಕ್ತಿಯೊಬ್ಬನ ಸ್ವತಂತ್ರ ಸಾಂವಿಧಾನಿಕ ಹಕ್ಕಲ್ಲ, ಬದಲಿಗೆ ಪರಂಪರೆಯಿಂದ ಬರುವ ಆಸ್ತಿಯೆಂಬಂತೆ ಬಿಂಬಿಸಲಾಗಿದೆ.
ಚುನಾವಣಾ ಆಯೋಗದ ಸ್ವತಃ ಮೂವರು ಸದಸ್ಯರಲ್ಲಿ ಇಬ್ಬರು ಈ ಬದಲಾವಣೆಯನ್ನು ಸಾರ್ವಜನಿಕಗೊಳ್ಳುವ ತಿಂಗಳುಗಳಿಗೂ ಮೊದಲೇ "ಕಾನೂನುಬಾಹಿರ" ಮತ್ತು "ಅನಧಿಕೃತ" ಎಂದು ಕರೆದಿದ್ದರು. ರಾಷ್ಟ್ರಪತಿಗಳ ಅನುಮೋದನೆ ಮತ್ತು ನಿಯಮ ತಿದ್ದುಪಡಿಗಳಿಲ್ಲದೆ ಶಾಸನಬದ್ಧ ನಮೂನೆಗಳನ್ನು ತಿದ್ದುಪಡಿ ಮಾಡುವ ಯಾವುದೇ ಕಾನೂನುಬದ್ಧ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು ಬೊಟ್ಟು ಮಾಡಿದ್ದರು. ಆದರೂ ಆ ಬದಲಾವಣೆಯನ್ನು ಹೇಗಾದರೂ ಮಾಡಿ ಪೋರ್ಟಲ್ನಲ್ಲಿ ಛಾಪಿಸಲಾಯಿತು.
ಹೆಸರು ಅಳಿಸಿಹಾಕಲು ಶತಪ್ರಯತ್ನ
ಆ ಅಡಚಣೆಯನ್ನು ಯಶಸ್ವಿಯಾಗಿ ದಾಟಿದವರಿಗೆ, ಚುನಾವಣಾ ಆಯೋಗವು ಡಿಜಿಟಲ್ ಬಹಿಷ್ಕಾರ ಹಾಕುವ ಮತ್ತೊಂದು ವಿಧಾನವನ್ನು ಕಂಡುಹಿಡಿದಿದೆ - "ತಾರ್ಕಿಕ ಅಸಂಗತತೆ" (logical discrepancy) ಎಂಬ ಅಪಾರದರ್ಶಕ ಅಲ್ಗಾರಿದಮಿಕ್ ಫಿಲ್ಟರ್. ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ, ಈ ವ್ಯವಸ್ಥೆಯು 2002ರ ಹಿಂದಿನ ಹಳೆಯ ಪಟ್ಟಿಗಳ ವಿರುದ್ಧ "ಸಂತತಿ ಮ್ಯಾಪಿಂಗ್" ಮಾಡುತ್ತದೆ. ಬಿಹಾರದ ಎಸ್ಐಆರ್ ಹಂತದಲ್ಲಿ ಯಾವುದೇ ತಾರ್ಕಿಕ ಅಸಂಗತತೆ ಇರಲಿಲ್ಲ. ಆದರೆ ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ನಡೆದ ಎರಡನೇ ಹಂತದಲ್ಲಿ ನಾಲ್ಕು ವರ್ಗಗಳನ್ನು ಪರಿಚಯಿಸಲಾಯಿತು. ಮೂರನೇ ಹಂತದಲ್ಲಿ ಅದು 11 ವರ್ಗಗಳಾಯಿತು.
ನಿರ್ದಿಷ್ಟ ರೀತಿಯ ಮತದಾರರನ್ನು ಅಲ್ಗಾರಿದಮ್ ಮೂಲಕ ಗುರುತಿಸಿ ಅವರನ್ನು ಹೊರಹಾಕಲು ಸಾಧ್ಯವಿರುವ ಎಲ್ಲ ಕಾರಣಗಳನ್ನು ಹುಡುಕುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿರುವಂತೆ ತೋರುತ್ತದೆ.
ಹೀಗಾಗಿ, ಪ್ರಾದೇಶಿಕ ಭಾಷಾಂತರಗಳಲ್ಲಿನ ಸಣ್ಣಪುಟ್ಟ ಕಾಗುಣಿತ ವ್ಯತ್ಯಾಸಗಳು, ಪೂರ್ವಜರೊಂದಿಗೆ ಹೊಂದಾಣಿಕೆಯಾಗದ ಮನಬಂದಂತೆ ನಿರ್ಧರಿಸಿದ ವಯಸ್ಸಿನ ವ್ಯತ್ಯಾಸ, ಅಥವಾ ದಶಕಗಳ ಹಿಂದೆ ಸ್ವತಃ ಸರ್ಕಾರವೇ ಮಾಡಿದ ಡೇಟಾ-ಎಂಟ್ರಿ ತಪ್ಪುಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಗುರುತಿಸಲಾಯಿತು. ಮತದಾರರ ಹಕ್ಕುಗಳ ಸಹಾಯವಾಣಿಗೆ ಕರೆ ಮಾಡಿದ ಒಬ್ಬ ವ್ಯಕ್ತಿಗೆ ಅವಳಿ ಸಹೋದರನಿದ್ದ; ಆದರೆ ಇಬ್ಬರು ಒಂದೇ ಹುಟ್ಟಿದ ದಿನಾಂಕವನ್ನು ಹಂಚಿಕೊಳ್ಳಬಹುದು ಎಂಬುದನ್ನು ಸ್ವೀಕರಿಸಲು ವಿಫಲವಾದ ಸಾಫ್ಟ್ವೇರ್, ಅವರಿಬ್ಬರಲ್ಲಿ ಯಾರು ಮತದಾರರ ಪಟ್ಟಿಗೆ ಸೇರಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ.
ಈ ಅಲ್ಗಾರಿದಮ್ ಎಂಬುದು ಸಂಕೇತಕ್ಕೆ ಒಳಪಡದ ಕಪ್ಪುಪೆಟ್ಟಿಗೆ. ಆದರೂ, ಅದರ ಸ್ವಯಂಚಾಲಿತ ಸಮನ್ಸ್ಗೆ ಕಟ್ಟುಬಿದ್ದು, ಲಕ್ಷಾಂತರ ಜನರು ತಾವು ಅಸ್ತಿತ್ವದಲ್ಲಿದ್ದೇವೆ ಎಂದು ಸಾಬೀತುಪಡಿಸಲು ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಹತ್ತು ವರ್ಷಗಳ ಹಿಂದೆ ನೋಟ್ ಬಂದಿ ಸಮಯದಲ್ಲಿ ಮಾಡಿದಂತೆ, ಇಡೀ ದೇಶವನ್ನು ಮತ್ತೊಮ್ಮೆ ಒಂದು ಅಣಕು ಪ್ರದರ್ಶನದ ಸುಳಿಗೆ ಸಿಲುಕಿಸಲಾಗುತ್ತಿದೆ.
ಆದರೆ ಒಬ್ಬ ನಾಗರಿಕ ಆ ಅಡೆತಡೆಯನ್ನೂ ದಾಟುತ್ತಾನೆ ಎಂದಿಟ್ಟುಕೊಳ್ಳಿ. ಅವನ ದಾಖಲೆಗಳು ಸರಿಯಾಗಿದ್ದು, ತೀರ್ಮಾನ ತೆಗೆದುಕೊಳ್ಳಲು ಕಾನೂನಿನಿಂದ ಅಧಿಕಾರ ಪಡೆದಿರುವ ಚುನಾವಣಾ ನೋಂದಣಿ ಅಧಿಕಾರಿಯು (ERO) ಅವುಗಳನ್ನು ಅಂಗೀಕರಿಸುತ್ತಾನೆ ಎಂದೇ ಭಾವಿಸಿ.
ಗೋವಾದಲ್ಲಿ, 97 ನಾಗರಿಕರ ಹೆಸರುಗಳನ್ನು ನೇರವಾಗಿ ಅಳಿಸುವ ಬದಲು "ತಾರ್ಕಿಕ ಅಸಂಗತತೆ" ಎಂದು ಗುರುತಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳೀಯ ಅಧಿಕಾರಿಗಳು ಅವರ ಪ್ರಕರಣಗಳನ್ನು ವಿಚಾರಣೆ ನಡೆಸಿ ಅವರು ಅರ್ಹರು ಎಂದು ಹೇಳಿದರು ಮತ್ತು ಕೇವಲ ಆ ಗುರುತನ್ನು ತೆರವುಗೊಳಿಸಲು ಬಯಸಿದರು. ಆದರೆ ಸಾಫ್ಟ್ವೇರ್ನಲ್ಲಿ ಅವರನ್ನು ಮರುಸ್ಥಾಪನೆ ಮಾಡಲು ಯಾವುದೇ ರೋಲ್ಬ್ಯಾಕ್ ಆಯ್ಕೆ ಇರಲಿಲ್ಲ! ಗೋವಾದ ಮುಖ್ಯ ಚುನಾವಣಾ ಅಧಿಕಾರಿಯು ಅದನ್ನು ಸರಿಪಡಿಸಲು ಕೋರಿ ಚುನಾವಣಾ ಆಯೋಗಕ್ಕೆ ಎಂಟು ತುರ್ತು ಇಮೇಲ್ಗಳನ್ನು ಕಳುಹಿಸಿದರು. ಆದರೆ ದೆಹಲಿಯಲ್ಲಿರುವ ಕೇಂದ್ರೀಕೃತ ಐಟಿ ವಿಭಾಗವು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಅಂತಿಮ ಪಟ್ಟಿಯನ್ನು ಪ್ರಕಟಿಸಲಾಯಿತು, ಮತ್ತು ಆ ಎಲ್ಲಾ 97 ಮತದಾರರನ್ನು ಕೈಬಿಡಲಾಯಿತು.
ನೋಟು ಅಪಮೌಲ್ಯೀಕರಣವನ್ನು 'ನೋಟುಬಂದಿ' ಎಂದು ಎಸ್ಐಆರ್ನ್ನು 'ವೋಟುಬಂದಿ' ಎಂದು ವಿಶ್ಲೇಷಿಸಲಾಗುತ್ತದೆ.
ಜನರನ್ನೇ ಹೊರಹಾಕುವ ಯಂತ್ರ
ಈ ಹೆಸರನ್ನು ಕಿತ್ತುಹಾಕುವ ಯಂತ್ರಕ್ಕೆ ವಂಶವೃಕ್ಷ ಮತ್ತು ಸಾಫ್ಟ್ವೇರ್ಗಿಂತಲೂ ಅತ್ಯಂತ ವಿಕೃತವಾದ ಮೂರನೇ ಮುಖವಿದೆ: ಅದುವೇ ಹೆಸರುಗಳನ್ನು ಅಳಿಸಲು ನಡೆಸುವ ವ್ಯವಸ್ಥಿತ ಹಸ್ತಕ್ಷೇಪಗಳು. ಕರ್ನಾಟಕದಲ್ಲಿ, ವಿವಿಧ ಕ್ಷೇತ್ರಗಳಲ್ಲಿನ ಬೂತ್ ಮಟ್ಟದ ಅಧಿಕಾರಿಗಳು ಮುದ್ರಿತ ರೂಪದಲ್ಲಿ ಬಂದ ಬೃಹತ್ ಪ್ರಮಾಣದ ಫಾರ್ಮ್-7 ಅರ್ಜಿಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ - ಇದು ಈಗಾಗಲೇ ಪಟ್ಟಿಯಲ್ಲಿರುವ ಹೆಸರನ್ನು ವಿರೋಧಿಸಲು ಬಳಸುವ ನಮೂನೆಯಾಗಿದೆ - ಇದರಲ್ಲಿ ಮುಸ್ಲಿಂ ಮತದಾರರ ಹೆಸರುಗಳು ಮತ್ತು ಎಪಿಕ್ ಸಂಖ್ಯೆಗಳು ಮುದ್ರಿತವಾಗಿ ಬಂದಿದ್ದವು. ಇವು ಬಿಜೆಪಿಯ ಸದಸ್ಯರಿಂದ ಬಂದಿವೆ ಎಂದು ಪತ್ತೆಹಚ್ಚಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಮಾದರಿಯನ್ನು ನಿರಾಕರಿಸಲಿಲ್ಲ, ಬದಲಿಗೆ "ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು" ಪಟ್ಟಿಗೆ ಸೇರಿಸಿರಬಹುದು ಎಂದು ಸಮರ್ಥಿಸಿಕೊಂಡರು. ಈ ಎಸ್ಐಆರ್ ಯಂತ್ರವನ್ನು ಯಾರನ್ನು ಹೊರಹಾಕಲು ನಿರ್ಮಿಸಲಾಗಿದೆ ಎಂಬುದು ಮೊದಲಿನಿಂದಲೂ ಶಂಕಿಸಲಾಗಿತ್ತು. ಈಗ ಅದು ದೃಢಪಟ್ಟಿದೆ.
ಇವೆಲ್ಲವೂ ಅತ್ಯಂತ ಚತುರತೆಯಿಂದ ಕೂಡಿದ ಕ್ರಮಗಳು.
ಒಬ್ಬ ಪತ್ರಕರ್ತೆಯು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುವವರೆಗೆ ಮತ್ತು "ಮತದಾರರ ಪಟ್ಟಿಯ ಶುದ್ಧೀಕರಣ" ಎಂದರೆ ಕೇವಲ ಕೆಲವು ಸಾವಿರ ಅಥವಾ ಲಕ್ಷಗಟ್ಟಲೆ ಮೃತ ಮತ್ತು ನಕಲಿ ಮತದಾರರನ್ನು ತೆಗೆದುಹಾಕುವುದಲ್ಲ, ಬದಲಿಗೆ ದೇಶಾದ್ಯಂತ ಕರಡು ಮತದಾರರ ಪಟ್ಟಿಯಿಂದ 13 ಕೋಟಿಗೂ ಅಧಿಕ ಹೆಸರುಗಳು ಮಾಯವಾಗಿವೆ ಎಂದು ಭಾರತಕ್ಕೆ ತಿಳಿಯುವವರೆಗೆ ಇದು ಮುಂದುವರಿದಿತ್ತು.
ಇವನ್ನೆಲ್ಲ ನೋಡಿದರೆ ಇನ್ನು ಮುಂದೆ ಪ್ರಜೆಗಳು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವುದಿಲ್ಲ, ಬದಲಿಗೆ ಸರ್ಕಾರವೇ ತನ್ನ ಜನರು ಯಾರು ಎಂಬುದನ್ನು ಆಯ್ಕೆ ಮಾಡುತ್ತದೆ. ಇದನ್ನೇ ನಾವು ʼಉಲ್ಟಾ ಪ್ರಜಾಪ್ರಭುತ್ವʼ ಎನ್ನುವುದು ಅಥವಾ ಪ್ರಜಾಪ್ರಭುತ್ವದ ಹಿಮ್ಮುಖ ಪಯಣ.
ಬ್ರೆಕ್ಟ್ ಕವಿತೆಯ ವ್ಯಂಗ್ಯ
ಜರ್ಮನಿಯ ಖ್ಯಾತ ಕವಿ ಬರ್ಟೋಲ್ಟ್ ಬ್ರೆಕ್ಟ್ ಅವರ ʼದ ಸೊಲ್ಯೂಷನ್ʼ ಎಂಬ ಕವಿತೆಯಲ್ಲಿನ ವ್ಯಂಗ್ಯ ಧ್ವನಿಯು ಇದನ್ನೇ ಹೇಳುತ್ತದೆ. ದೆಹಲಿಯಲ್ಲಿ ಕುಂತಿರುವ ನಮ್ಮ ಈಗಿನ ಆಡಳಿತಗಾರರು ಈ ಕವಿತೆಯಲ್ಲಿನ ಅಂಶವನ್ನೇ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ;
ಜನರೇ ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡರೆ ಅದನ್ನು ಮತ್ತೆ ದಕ್ಕಿಸಿಕೊಳ್ಳಲು ಬೆವರು ಹರಿಸಬೇಕು ಹೋರಾಡಿ ದಣಿಯಬೇಕು ಅಷ್ಟೆಲ್ಲ ಕಷ್ಟವಾದರೂ ಯಾಕೆ? ಸರ್ಕಾರಕ್ಕೆ ಒಲವಿರುವ ಪ್ರಜೆಗಳನ್ನೇ ಬದಲಿಸಿಬಿಟ್ಟರೆ ಮುಗಿಯಿತು! ತನ್ನಾಣತಿಗೆ ಮಣಿಯದವರ ವಿಸರ್ಜಿಸಿ ತನ್ನಿಷ್ಟದ ಅಡಿಯಾಳುಗಳ ಹೊಸ ಜನಸಮೂಹವನ್ನೇ ಆರಿಸಿಬಿಟ್ಟರೆ ಸರ್ಕಾರ ಸುಲಭ-ಸುಗಮ
ಸುಪ್ರೀಂ ಕೋರ್ಟ್ ನಿಲುವು ಏನು?
ನೋಟು ಅಪಮೌಲ್ಯೀಕರಣ ಮತ್ತು ಚುನಾವಣಾ ಬಾಂಡ್ಗಳು ಚುನಾವಣೆಗೆ ಹಣ ಒದಗಿಸುವ ಮಾರ್ಗವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. 2023ರ ಚುನಾವಣಾ ಆಯೋಗದ ನೇಮಕಾತಿ ಕಾಯ್ದೆಯು ದೇಶದಲ್ಲಿ ಚುನಾವಣೆಯನ್ನು ನಡೆಸುವ ಸಾಂವಿಧಾನಿಕ ಸಂಸ್ಥೆಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಎಸ್ಐಆರ್ ಮತದಾರರ ಪಟ್ಟಿಯನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿತು. ಒಂದು ವೇಳೆ ಎಸ್ಐಆರ್ ಹಾಗೆಯೇ ಮುಂದುವರಿಯಲು ಬಿಟ್ಟರೆ, ಚುನಾವಣೆಯ ನಾಲ್ಕು ಪ್ರಮುಖ ಆಧಾರಸ್ತಂಭಗಳಲ್ಲಿ ಮೂರು - ಹಣ, ಅಂಪೈರ್, ಮತದಾರ - ವಾಸ್ತವಿಕವಾಗಿ ಒಂದೇ ಗುಂಪಿನ ಕೈಗೆ ಹೋಗುವುದು ಖಚಿತ.
ಇನ್ನು ಒಂದೇ ಒಂದು ಸ್ತಂಭ ಉಳಿದಿದೆ. ಅದೇ ಕ್ಷೇತ್ರಗಳ ಭೌಗೋಳಿಕತೆ ಮತ್ತು ಜ್ಯಾಮಿತಿ. ಅಂದರೆ ಡಿಲಿಮಿಟೇಷನ್ ಅಥವಾ ಕ್ಷೇತ್ರ ಮರುವಿಂಗಡಣೆ - ಪ್ರತಿಯೊಂದು ರಾಜ್ಯಕ್ಕೆ ಎಷ್ಟು ಸ್ಥಾನಗಳು ಸಿಗುತ್ತವೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಮತದಾರರನ್ನು ಹೇಗೆ ಮರುಹೊಂದಿಸಲಾಗುತ್ತದೆ ಎಂಬುದು. ಆದರೆ ಅದು ಮತ್ತೊಂದು ದಿನದ ಕದನ.
ಸದ್ಯಕ್ಕೆ, ಎಸ್ಐಆರ್ನ ಈ ವಿಲೋಮ (ಉಲ್ಟಾ) ಪ್ರಕ್ರಿಯೆಯನ್ನು ಹಿಂಪಡೆಯಲು ಹೋರಾಟ ನಡೆಯುತ್ತಿದೆ. ಹಾಗೂ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಟವಾದ ನಂತರ ತನ್ನ ಮತ್ತು ತನ್ನ ಯಜಮಾನರ ಮೇಲಿನ ಹಾನಿಯನ್ನು ನಿಯಂತ್ರಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾಡುತ್ತಿರುವ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಅವರು ಈ ಸಂಪೂರ್ಣ ಪ್ರಕರಣದಲ್ಲಿ ತಮ್ಮ ಪಾತ್ರಕ್ಕಾಗಿ ಬೆಲೆ ತೆರುವಂತೆ ಮಾಡುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ.
ಎಸ್ಐಆರ್ ಕರಾಳ ಮುಖ
ತಮ್ಮ ಸಹೋದ್ಯೋಗಿ ಚುನಾವಣಾ ಆಯುಕ್ತರ ವಿರೋಧದ ನಡುವೆಯೂ ತಾವು ತೆಗೆದುಕೊಂಡು ಜಾರಿಗೆ ತಂದ ನಿರ್ಧಾರಗಳಿಂದ ಜ್ಞಾನೇಶ್ ಕುಮಾರ್ ಹಿಂದೆ ಸರಿದಿರುವುದು ಅವರ ತಪ್ಪಿನ ಸ್ಪಷ್ಟ ಒಪ್ಪಿಗೆಯಾಗಿದೆ. ಸೆ. 26 ರಂದು ಚುನಾವಣಾ ಆಯೋಗವು ಘೋಷಿಸಿದ ಒಂಬತ್ತು ನಿರ್ಧಾರಗಳು, ನಂತರ ಬದಲಾಯಿಸದ 'ಫಾರ್ಮ್ 6'ಗೆ ಮರಳುವ ನಿರ್ಧಾರ, ಮತ್ತು ತೆಗೆದುಹಾಕಲಾದ ಕೋಟ್ಯಂತರ ಮತದಾರರನ್ನು ಮರಳಿ ಕರೆತರಲು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿರುವ ನಿರ್ದೇಶನಗಳು - ಇವೆಲ್ಲವೂ ಎಸ್ಐಆರ್ನ ಕರಾಳ ಮುಖವನ್ನು ಜಗತ್ತಿಗೆ ಸಾರಿವೆ.
ಗಾಂಧಿ ಜಯಂತಿಯಂದು ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯನ್ನು ಭಂಗಗೊಳಿಸಿ, 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿರುವುದು, ಜ್ಞಾನೇಶ್ ಕುಮಾರ್ರನ್ನು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸರ್ಕಾರ ಯಾವ ಮಟ್ಟಕ್ಕಾದರೂ ಇಳಿಯಬಲ್ಲುದು ಎಂಬುದರ ಸ್ಪಷ್ಟ ಸಂಕೇತವಾಗಿದೆ.
ದೇಶಾದ್ಯಂತ ಲಕ್ಷಾಂತರ ಯುವಕರು, ನಾಗರಿಕ ಸಮಾಜದ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರು ತಮಗೆ ಎದುರಾಗಿರುವ ಸವಾಲು ಏನು ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಈ ಧರ್ಮಯುದ್ಧಕ್ಕಾಗಿ ಬೀದಿಗಿಳಿಯಲು ಸಿದ್ಧರಿದ್ದೇವೆ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. 2,000ಕ್ಕೂ ಹೆಚ್ಚು ಗಣ್ಯ ನಾಗರಿಕರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಎಸ್ಐಆರ್ ಮತ್ತು ಜ್ಞಾನೇಶ್ ಕುಮಾರ್ ವಿರುದ್ಧ ಸ್ವಯಂಪ್ರೇರಿತ ವಿಚಾರಣೆ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.
ದೇಶ ಮತ್ತು ಸಂವಿಧಾನದ ಇತಿಹಾಸದ ಈ ಮಹತ್ವದ ಘಟ್ಟದಲ್ಲಿ ಸುಪ್ರೀಂ ಕೋರ್ಟ್ ಯಾವ ಪಾತ್ರ ವಹಿಸಲಿದೆ?: ಎಚ್ಚರದಿಂದ ಕಾವಲು ಕಾಯುವ "ಕಾವಲುಗಾರನೋ" ಅಥವಾ ಸರ್ಕಾರದ ಪರ ಒಲವುಳ್ಳ "ಬದ್ಧತಾ ನ್ಯಾಯಾಂಗವೋ"
ಕಾದು ನೋಡಬೇಕಾಗಿದೆ.
DDisclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


