
ಪರ-ಪುರುಷರ (ಮಹ್ರಮ್ ಅಲ್ಲದವರು) ಮುಂದೆ ಹಾಜರಾಗದಂತೆ ಸಮಸ್ತಾ ಮಹಿಳೆಯರಿಗೆ ತಾಕೀತು ಮಾಡಿರುವುದು ಲಿಂಗ ಸಮಾನತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಪಿತೃಪ್ರಧಾನ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ.
ಸಾಂವಿಧಾನಿಕ ಖಾತರಿ ಮತ್ತು ಧರ್ಮಗುರುಗಳ ಸಂಪ್ರದಾಯದ ನಡುವಿನ ಕಂದಕ ಎಷ್ಟು ಆಳವಾಗಿದೆ ಎಂಬುದು ಸ್ಪಷ್ಟವಾಗಿ ಬಹಿರಂಗಗೊಂಡ ಘಟನೆಯದು. ಅದು ಬಯಲಾಗಿದ್ದು ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ. ಈ ವಿವಾದ ಬಹಿರಂಗವಾಗುತ್ತಲೇ ತಾನೊಂದು ಪ್ರಗತಿಪರ ರಾಜ್ಯವೆಂದು ಬೀಗುತ್ತಿದ್ದ ಕೇರಳ ನಿಜಕ್ಕೂ ಬೆಚ್ಚಿಬಿದ್ದಿತು.
ರಾಜ್ಯದ ಅತ್ಯಂತ ಪ್ರಭಾವಿ ಸಾಂಪ್ರದಾಯಿಕ ಸುನ್ನಿ ಸಂಘಟನೆಗಳಲ್ಲಿ ಒಂದಾದ ಸಮಸ್ತ ಕೇರಳ ಜಮೀಯ್ಯರತ್ತುಲ್ ಉಲಮಾದ ಎ.ಪಿ. ಬಣವು ಕಾಂತಾಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಆಗಸ್ಟ್ 28ರಂದು ಸಭೆ ಸೇರಿ ತನ್ನ ಸ್ಥಳೀಯ ಮಹಲ್ ಮತ್ತು ಮದ್ರಸಾ ಜಾಲಕ್ಕೆ ಅಧಿಕೃತ ನಿರ್ದೇಶನವನ್ನು ನೀಡಿತು.
ʼಮಿಲಾದ್-ಉನ್-ನಬಿʼ ಆಚರಣೆಗಳು ಮತ್ತು ಧಾರ್ಮಿಕ ಸಭೆಗಳ ಸಮಯದಲ್ಲಿ ಮಹಿಳೆಯರನ್ನು ಪರ-ಪುರಷರ ಮುಂದೆ ಪ್ರದರ್ಶನ ಮಾಡಬಾರದು ಎಂಬುದು ಆ ಸಂಘಟನೆಯು ನೀಡಿದ ಸುತ್ತೋಲೆಯ ಎಚ್ಚರಿಕೆ. ಜೊತೆಗೆ ಸಾರ್ವಜನಿಕ ಹಬ್ಬಗಳು ಕಟ್ಟುನಿಟ್ಟಾಗಿ ಸಂಪ್ರದಾಯವಾದಿ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಸೂಚಿಸಿದೆ.
ಸರ್ವಸ್ವತಂತ್ರರಾದ ನಾಗರಿಕರನ್ನು ಪ್ರದರ್ಶನದ ವಸ್ತುಗಳಂತೆ ವರ್ಣಿಸಿರುವುದು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ತಾವಾಡಿದ ಮಾತನ್ನು ಇನ್ನಷ್ಟು ಮೃದುಗೊಳಿಸುವುದಕ್ಕೆ ಬದಲಾಗಿ ಕಾಂತಾಪುರಂ ಅಬೂಬಕರ್ ಅವರು ಎರಡು ದಿನಗಳ ಬಳಿಕ ಕೊಚ್ಚಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಸಂಘರ್ಷಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ಕೆಲಸ ಮಾಡಿದರು.
ಮಹಿಳೆಯರಿರಲಿ ಮನೆಯೊಳಗೇ
ತಾವು ಕೊಟ್ಟ ನಿರ್ದೇಶನವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರುವುದರಿಂದ ಅನಿರ್ವಾಯವಾಗಿ ಸಾಮಾಜಿಕ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು. ಜೊತೆಗೆ ಮಹಿಳೆಯರು ಮನೆಯ ಒಳಗೇ ಇರಬೇಕು ಎಂದು ಧರ್ಮಗ್ರಂಥಗಳು ಸೂಚನೆ ನೀಡುತ್ತವೆ ಎಂಬ ವಾದವನ್ನೂ ಮುಂದಿಟ್ಟರು. ಈ ಸಂಬಂಧ ಟೀಕೆಗಳನ್ನು ಅಷ್ಟೇ ಬಲವಾಗಿ ತಿರಸ್ಕರಿಸಿದ ಅವರು, ಸಮಸ್ತವು ಈ ಸಿದ್ಧಾಂತವನ್ನು ಶತಮಾನಗಳಿಂದ ಬೋಧಿಸಿಕೊಂಡು ಬರುತ್ತಿದೆ. ಯಾವುದೇ ಬಾಹ್ಯ ಶಕ್ತಿ ಅದನ್ನು ಬದಲಿಸುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ವಿದ್ಯಮಾನವು ಕೇವಲ ಒಂದು ಧರ್ಮದೊಳಗಿನ ಸಣ್ಣ ಧಾರ್ಮಿಕ ವಿವಾದಕ್ಕಿಂತಲೂ ಮಿಗಿಲಾದುದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಸಂಪೂರ್ಣ ಸಾಕ್ಷರತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪ್ರಸಿದ್ಧಿಯನ್ನು ಪಡೆದಿರುವ ರಾಜ್ಯದಲ್ಲಿಯೇ ಪಿತೃಪ್ರಧಾನ ಸಂಪ್ರದಾಯ ಹಾಗೂ ಮಹಿಳೆಯರ ನಾಗರಿಕ ಘನತೆಯ ನಡುವೆ ನೇರಾನೇರ ಸಂಘರ್ಷ ಏರ್ಪಟ್ಟಿರುವುದು ಮುಖ್ಯವಾಗಿದೆ.
ಈ ಸಂಘರ್ಷವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಕೇರಳದ ಮುಸ್ಲಿಂ ಸಮುದಾಯದ ವಿಶಿಷ್ಟ ಸಾಂಸ್ಥಿಕ ಇತಿಹಾಸ, ಅದರ ಮಸೀದಿಗಳನ್ನು ನಿಯಂತ್ರಿಸುವ ಬಣ ರಾಜಕೀಯ ಹಾಗೂ ಪ್ರತಿಗಾಮಿ ಧರ್ಮಗುರುಗಳನ್ನು ಹೊಣೆಗಾರಿಕೆಯಿಂದ ಪದೇ ಪದೇ ಬಚಾವು ಮಾಡುವ ರಾಜಕೀಯ ಲೆಕ್ಕಾಚಾರಗಳನ್ನು ಬಿಚ್ಚಿಡಬೇಕಾಗುತ್ತದೆ.
ಕೇರಳ ಮುಸ್ಲಿಂ ಸಂಘಟನೆಗಳ ಒಟ್ಟು ಚಿತ್ರಣ
ಉತ್ತರ ಭಾರತಕ್ಕೆ ಹೋಲಿಸಿದರೆ ಕೇರಳದ ಮುಸ್ಲಿಂ ಸಮುದಾಯದ ಸಾಮಾಜಿಕ-ಧಾರ್ಮಿಕ ಸಂರಚನೆಯು ತುಂಬ ಭಿನ್ನವಾಗಿದೆ. ಉತ್ತರ ಭಾರತದ ಮುಸ್ಲಿಂ ಸಮುದಾಯಗಳು ಹೆಚ್ಚಾಗಿ ದೇವಬಂದಿ ಮತ್ತು ಬರೇಲ್ವಿ ಸಂಪ್ರದಾಯಗಳಂತಹ ಧಾರ್ಮಿಕ ನ್ಯಾಯಶಾಸ್ತ್ರ ಪದ್ಧತಿಗಳ ನಡುವಿನ ಸಾಂಸ್ಥಿಕ ವಿಭಜನೆಗೆ ಮುಖಾಮುಖಿಯಾದರೆ ಕೇರಳವು ಇಪ್ಪತ್ತನೇ ಶತಮಾನದ ಆರಂಭಿಕ ಕಾಲಘಟ್ಟದಲ್ಲಿ ಸಂಘಟಿತ, ಮಹಲ್-ಕೇಂದ್ರಿತವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿತು.
1921ರಲ್ಲಿ ನಡೆದ ಮಲಬಾರ್ ದಂಗೆಯು ಇದಕ್ಕೆ ಮುಖ್ಯ ಕಾರಣವಾಯಿತು. ಇದಾದ ಬಳಿಕವೇ ಶೈಕ್ಷಣಿಕವಾಗಿ ಹಿಂದುಳಿದಿರುವುದು, ಮೂಢನಂಬಿಕೆ ಮತ್ತು ಧರ್ಮಗುರುಗಳ ಪ್ರತ್ಯೇಕತೆ ಸಮುದಾಯವನ್ನು ದುರ್ಬಲಗೊಳಿಸಿತು ಎಂಬ ಸಂಗತಿಯನ್ನು ಪ್ರಗತಿಪರ ಚಿಂತಕರು ಅರ್ಥಮಾಡಿಕೊಂಡರು. ಇದರ ಫಲವಾಗಿಯೇ 1922ರಲ್ಲಿ ಸುಧಾರಣಾವಾದಿಗಳೆಲ್ಲ ಸೇರಿ ಆಧುನಿಕ ಶಿಕ್ಷಣ, ಮಹಿಳಾ ಸಾಕ್ಷರತೆ ಮತ್ತು ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಸಮರ್ಪಿತವಾದ ʼಕೇರಳ ಮುಸ್ಲಿಂ ಐಕ್ಯ ಸಂಘʼವನ್ನು ರಚಿಸಿಕೊಂಡರು.
ಅದಾಗಿ ಎರಡು ವರ್ಷಗಳ ಬಳಿಕ, ಅಂದರೆ 1924ರಲ್ಲಿ ಇದೇ ಚಳವಳಿಯು ಕೇರಳದ ಮೊದಲ ಆಧುನಿಕ ಇಸ್ಲಾಮಿಕ್ ವಿದ್ವತ್ಪೂರ್ಣ ಮಂಡಳಿಯಾದ ʼಕೇರಳ ಜಮೀಯ್ಯತ್ತುಲ್ ಉಲಮಾʼ (ಕೆಜೆಯು) ಸ್ಥಾಪನೆ ಮಾಡಿದರು. ಆನಂತರ ಕೇರಳ ನದ್ವತುಲ್ ಮುಜಾಹಿದ್ (ಮುಜಾಹಿದ್ ಚಳವಳಿ) ಎಂದು ಕರೆಯಲಾಗುವ ಐಕ್ಯ ಸಂಘವು ಕುರಾನ್ನ ಮಲಯಾಳಂ ಅನುವಾದವನ್ನು ಪ್ರತಿಪಾದಿಸಿತು. ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಲು ಪ್ರೋತ್ಸಾಹ ಹಾಗೂ ಪ್ರಭುತ್ವದ ರೂಢಿಗಳನ್ನು ಕಿತ್ತೆಸೆಯುವ ಮೂಲಕ ಆಳವಾಗಿ ಬೇರೂರಿದ್ದ ಧರ್ಮಗುರುಗಳ ಪ್ರಾಬಲ್ಯವನ್ನು ಪ್ರಶ್ನಿಸುವ ಕೆಲಸ ಮಾಡಿತು.
ಇಂತಹುದೊಂದು ಪ್ರಗತಿಪರ ಅಲೆಯನ್ನು ಸಾಂಪ್ರದಾಯಿಕ ವಿದ್ವಾಂಸರು ನಿರೀಕ್ಷಿಸಿರಲಿಲ್ಲ. ಹಾಗಾಗಿ ಅವರು ಮುಸ್ಲಿಂ ಪದ್ಧತಿಗಳು, ದರ್ಗಾ ಭೇಟಿ, ಮಧ್ಯಸ್ಥಿಕೆ ಹಾಗೂ ಕಟ್ಟರ್ವಾದಿ ಪಿತೃಪ್ರಧಾನದ ನಿಯಂತ್ರಣವನ್ನು ಸಮರ್ಥಿಸಿಕೊಂಡು, 1926ರಲ್ಲಿ ಪ್ರತ್ಯೇಕವಾಗಿ ʼಸಮಸ್ತ ಕೇರಳ ಜಮೀಯ್ಯತ್ತುಲ್ ಉಲಮಾʼವನ್ನು ಸ್ಥಾಪಿಸಿದರು. ಸುಧಾರಣಾವಾದಿಗಳು ಮಹಿಳೆಯರಿಗೆ ಶಿಕ್ಷಣ ನೀಡುವುದು ಮತ್ತು ಸಾಮಾಜಿಕ ಏಕೀಕರಣವನ್ನು ಬೆಂಬಲಿಸಿದರು. ಸಮಸ್ತವು ಮಹಿಳೆಯರ ಸಾರ್ವಜನಿಕ ಉಪಸ್ಥಿತಿಯನ್ನು ಸಾರಾಸಗಟಾಗಿ ವಿರೋಧಿಸಿದರು ಮತ್ತು ಅದು ನೈತಿಕತೆಗೆ ಸಂಪೂರ್ಣ ವಿರುದ್ಧವಾದುದು ಎಂಬ ವಾದವನ್ನು ಮಂಡಿಸಿದರು.
ಕಾಲ ಸರಿದು ಹೋಗುತ್ತಿದ್ದಂತೆ ಮುಂದಿನ ದಶಕಗಳಲ್ಲಿ, ಎರಡೂ ಬಣಗಳು ಸಿದ್ಧಾಂತ ಮತ್ತು ಸಾಂಸ್ಥಿಕ ರೇಖೆಗಳ ಉದ್ದಕ್ಕೂ ಒಡೆದುಹೋದವು. ಮುಜಾಹಿದ್ ಚಳವಳಿಯು ದೇವತಾಶಾಸ್ತ್ರದ ಸೂಕ್ಷ್ಮತೆಗಳು ಮತ್ತು ಸಾಂಸ್ಥಿಕ ಅಧಿಕಾರಕ್ಕಾಗಿ 2002ರಲ್ಲಿ ಹಲವು ಬಣಗಳಾಗಿ ಒಡೆಯಿತು. ಅದಕ್ಕಿಂತ ಮುಖ್ಯವಾಗಿ, ಸಮಸ್ತ ಸ್ವತಃ 1989ರಲ್ಲಿ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಹೆಸರಿನ ಇ.ಕೆ. ಬಣ ಮತ್ತು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದ ಎ.ಪಿ. ಬಣ ಎಂಬ ಗುಂಪುಗಳೊಂದಿಗೆ ಪ್ರತ್ಯೇಕಗೊಂಡವು. ಆ ಬಳಿಕ ಅವು ತೀವ್ರವಾಗಿ ವಿರೋಧಿಸುವ ಎರಡು ಬಣಗಳಾಗಿ ಗುರುತಿಸಿಕೊಂಡವು.
ನಂಬಿಕೆಯಲ್ಲಿ ಪೈಪೋಟಿ, ಪಿತೃಪ್ರಧಾನದಲ್ಲಿ ಒಮ್ಮತ
ಸುಮಾರು ನಾಲ್ಕು ದಶಕಗಳಿಂದ, ಇ.ಕೆ. ಮತ್ತು ಎ.ಪಿ. ಬಣಗಳು ನಿರಂತರ ಪೈಪೋಟಿ, ಜಿದ್ದಾಜಿದ್ದಿಯಲ್ಲಿ ತೊಡಗಿವೆ. ಅವರು ಗ್ರಾಮ ಮಸೀದಿಗಳ ನಿಯಂತ್ರಣಕ್ಕಾಗಿ ನಿರಂತರ ಸ್ಪರ್ಧಿಸಿದ್ದಾರೆ, ಸ್ಪರ್ಧಾತ್ಮಕ ಮದ್ರಸಾ ಶಿಕ್ಷಣ ಮಂಡಳಿಗಳನ್ನು ಪ್ರಾರಂಭಿಸಿದ್ದಾರೆ, ಪ್ರತಿಸ್ಪರ್ಧಿ ದೈನಿಕ ಪತ್ರಿಕೆಗಳನ್ನು ನಡೆಸಿದ್ದಾರೆ ಮತ್ತು ಧಾರ್ಮಿಕ ಖಂಡನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ಇ.ಕೆ. ಬಣವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನೊಂದಿಗೆ ಸಾಂಸ್ಥಿಕ ಮತ್ತು ಭಾವನಾತ್ಮಕ ಮೈತ್ರಿಯನ್ನು ಉಳಿಸಿಕೊಂಡಿದೆ, ಇದು ದೀರ್ಘಕಾಲದಿಂದ ತನ್ನನ್ನು ತಾನು ಮುಖ್ಯವಾಹಿನಿಯ ಧಾರ್ಮಿಕ ಸ್ಥಾಪನೆಯಾಗಿ ಗುರುತಿಸಿಕೊಂಡಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕಾಂತಾಪುರಂ ಅವರ ಎ.ಪಿ. ಬಣವು ಕೋಳಿಕ್ಕೋಡ್ನಲ್ಲಿ ಮಾರ್ಕಾಜ್ ಲಾಂಛನದಡಿಯಲ್ಲಿ ಕೇಂದ್ರೀಕೃತ ಸಾಂಸ್ಥಿಕ ಸಾಮ್ರಾಜ್ಯವನ್ನು ನಿರ್ಮಿಸಿತು, ಇದು IUML ನ ರಾಜಕೀಯ ಏಕಸ್ವಾಮ್ಯ ಮತ್ತು ಇ.ಕೆ. ಬಣದ ಸಾಂಸ್ಥಿಕ ಪ್ರಾಬಲ್ಯ ಎರಡೂ ಸವಾಲುಗಳನ್ನು ಆಕ್ರಮಣಕಾರಿಯಾಗಿ ಎದುರಿಸಿತು.
ಕಾಂತಾಪುರಂ ಅವರ ಆದೇಶದ ವಿರುದ್ಧ ಸಾರ್ವಜನಿಕ ಟೀಕೆಗಳು ಹೆಚ್ಚಾದಾಗ, ಜಿಫ್ರಿ ಮುತ್ತು ಕೋಯ ತಂಗಳ್ ಅವರಂತಹ ಪ್ರತಿಸ್ಪರ್ಧಿ ಇ.ಕೆ. ಬಣದ ನಾಯಕರು ತಮ್ಮ ದೀರ್ಘಕಾಲದ ವಿರೋಧಿಯನ್ನು ಖಂಡಿಸಲು ಮುಂದೆ ಬರಲಿಲ್ಲ, ಬದಲಿಗೆ ಅವರ ಧರ್ಮಶಾಸ್ತ್ರದ ಸ್ಥಾನವನ್ನು ಸಮರ್ಥಿಸಿಕೊಂಡರು. ಈ ಹಠಾತ್ ಒಗ್ಗಟ್ಟು, ಕೇರಳದ ಸಾಂಪ್ರದಾಯಿಕ ಧರ್ಮಗುರುಗಳ ನಾಯಕತ್ವವು ಸಾಂಸ್ಥಿಕ ಅಧಿಕಾರದ ಹುಡುಕಾಟದಲ್ಲಿ ಛಿದ್ರಗೊಂಡಿದ್ದರೂ, ಲಿಂಗ ನ್ಯಾಯದ ವಿರುದ್ಧ ಅಖಂಡ ಮುಂಚೂಣಿಯನ್ನು ಕಾಯ್ದುಕೊಂಡಿದೆ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸಿತು. ಮಹಿಳೆಯರು ಸಾರ್ವಜನಿಕ ವೇದಿಕೆಯಿಂದ ಮಾತನಾಡಬಹುದೇ ಅಥವಾ ಸಮುದಾಯ ಹಬ್ಬಗಳಲ್ಲಿ ತೊಡಗಿಸಿಕೊಳ್ಳಬಹುದೇ ಎಂಬ ಚರ್ಚೆಯು ಬಣಗಳ ಡಂಬಾಚಾರ ಕಳಚಿವಂತೆ ಮಾಡಿತು ಮತ್ತು ಸಾಂಪ್ರದಾಯಿಕ ಕ್ಷೇತ್ರದಲ್ಲಿ ಸ್ತ್ರೀ ಸ್ವಾಯತ್ತತೆಯ ಬಗ್ಗೆ ಇದ್ದ ಒಂದೇ ರೀತಿಯ ಮೂಲಭೂತ ಅಸಮಾಧಾನವನ್ನು ಬಹಿರಂಗಪಡಿಸಿತು.
ಸಾಂಪ್ರದಾಯಿಕ ನಾಯಕತ್ವ- ಅವಕಾಶವಾದಿ ರಾಜಕಾರಣ
ಸಾರ್ವಜನಿಕ ಜೀವನದ ಉತ್ತುಂಗದಲ್ಲಿ ಕಾಂತಾಪುರಂ ಅವರ ನಿರಂತರ ಉಳಿವಿಗೆ ಕಾರಣ ಮುಖ್ಯವಾಗಿ ಅವರ ಲೆಕ್ಕಾಚಾರದ ರಾಜಕೀಯ ಕುಶಲತೆ. ಮನೆಯಲ್ಲಿ ತಮ್ಮನ್ನು ತಾವು ಶಾಸ್ತ್ರೀಯ ಸಂಪ್ರದಾಯವಾದದ ರಾಜಿ ಮಾಡಿಕೊಳ್ಳದ ರಕ್ಷಕ ಎಂದು ಬಿಂಬಿಸಿಕೊಳ್ಳುವ ಅವರು, ವ್ಯವಹಾರಿಕ ಜಾತ್ಯತೀತ ಮತ್ತು ರಾಷ್ಟ್ರೀಯ ರಾಜಕಾರಣದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಕೇರಳದ ಒಳಗೆ, ಕಾಂತಾಪುರಂ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ನೇತೃತ್ವದ ಎಲ್.ಡಿ.ಎಫ್.ನೊಂದಿಗೆ ಕಾರ್ಯತಂತ್ರದ, ಪರೋಕ್ಷ ಪಾಲುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವಾಗಿ ಉತ್ತರ ಕೇರಳದಲ್ಲಿ ಕಾಂಗ್ರೆಸ್-ಐ.ಯು.ಎಂ.ಎಲ್. ಮೈತ್ರಿಕೂಟದ ವಿರುದ್ಧ ಚುನಾವಣಾ ಬೆಂಬಲವನ್ನು ನೀಡುವ ಮೂಲಕ, ಅವರ ಬಣವು ರಾಜ್ಯದ ಪ್ರೋತ್ಸಾಹಕ, ಆಡಳಿತಾತ್ಮಕ ಪ್ರಾತಿನಿಧಿಕ ಮತ್ತು ಆಕ್ರಮಣಕಾರಿ ಸಿದ್ಧಾಂತದ ಟೀಕೆಯಿಂದ ಮೌನ ವಿನಾಯಿತಿಯನ್ನು ಪಡೆದುಕೊಂಡಿದೆ.
ಅದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ, ಕಾಂತಾಪುರಂ ಅವರು ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಕಾರ್ಯಾಕಾರಣದ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಭಾರತದ ಶಾಂತಿಪ್ರಿಯ ಸೂಫಿ ಪರಂಪರೆಯ ನಾಯಕ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಮೂಲಕ, ಅವರು ನವದೆಹಲಿಯಲ್ಲಿ ರಾಜ್ಯದ ಅನುಮೋದಿತ ಅಂತರರಾಷ್ಟ್ರೀಯ ಸೂಫಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಮತ್ತು ವಹಾಬಿ ಉಗ್ರವಾದವನ್ನು ಎದುರಿಸುವ ಮಿತವಾದಿ ಧರ್ಮಗುರುವಾಗಿ ತಮ್ಮ ಚಿತ್ರಣವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಈ ದ್ವಂದ್ವ ನಿಲುವು ಢಾಳಾದ ಅವಕಾಶವಾದದ ಪ್ರತೀಕ. ನವದೆಹಲಿಯಲ್ಲಿ, ಕೇಂದ್ರ ಸರ್ಕಾರದ ಮೆಚ್ಚುಗೆಯನ್ನು ಗಳಿಸಲು ಅವರು ಆಧುನಿಕ ಪ್ರಗತಿಪರ ಸೂಫಿ ಹಿರಿಯ ರಾಜಕಾರಣಿಯಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಆದರೆ ತಿರುವನಂತಪುರದಲ್ಲಿ ಅವರು ತಮ್ಮ ಪ್ರಾದೇಶಿಕ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಲು ಸಂಸತ್ತಿನ ಎಡಪಕ್ಷಗಳೊಂದಿಗೆ ವ್ಯವಹರಿಸುತ್ತಾರೆ. ಆದರೆ ಮಲಪ್ಪುರಂ, ಕೋಝಿಕ್ಕೋಡ್ ಮತ್ತು ಕಣ್ಣೂರಿನ ಪ್ರದೇಶಗಳಲ್ಲಿ, ಅವರ ಸಂಸ್ಥೆಯು ಹೊರಡಿಸುವ ಆದೇಶಗಳು ಮಹಿಳೆಯರನ್ನು ಕೇವಲ ಒಂದು ಸಮಸ್ಯೆಯಾಗಿ ನೋಡುತ್ತವೆ ಹಾಗೂ ಅವರನ್ನು ಸಾರ್ವಜನಿಕ ಜೀವನದಿಂದ ಹೊರಗಿಡಲು ಯತ್ನಿಸುತ್ತವೆ.
ರಾಜಕೀಯ ಅಸ್ಪಷ್ಟತೆ ಮತ್ತು ಒಡೆದ ನಿಲುವುಗಳು
2026ರ ಆಗಸ್ಟ್ನ ಆದೇಶದಿಂದಾಗಿ ಕೇರಳದ ರಾಜಕೀಯ ಪಕ್ಷಗಳ ನಡುವೆ ಭಿನ್ನವಾದ ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಇದು ಮತ ಬ್ಯಾಂಕ್ ಲೆಕ್ಕಾಚಾರಗಳು ಪ್ರಗತಿಪರ ಬದ್ಧತೆಗಳನ್ನು ಹೇಗೆ ಸಂಕೀರ್ಣಗೊಳಿಸುತ್ತವೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ.
ಎಡಪಕ್ಷಗಳು ಸೈದ್ಧಾಂತಿಕ ತತ್ವಗಳು ಮತ್ತು ಚುನಾವಣಾ ಲಾಭದ ನಡುವೆ ಸಿಲುಕಿಕೊಂಡವು. ಸಿ.ಪಿ.ಐ. (ಎಂ)ನ ಹಿರಿಯ ನಾಯಕಿಯರಾದ ಪಿ.ಕೆ. ಶ್ರೀಮತಿ ಮತ್ತು ಕೆ.ಕೆ. ಶೈಲಜಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯೊಂದಿಗೆ ಸೇರಿಕೊಂಡು ಸುತ್ತೋಲೆಯನ್ನು ಖಂಡಿಸಿದರು. ಇದು ಪ್ರಭುತ್ವದ, ಹಿಮ್ಮುಖ ನಡೆ ಮತ್ತು ಅಮಾನವೀಯವಾದದ್ದು ಎಂದು ಅವರು ಖಂಡಿಸಿದರು. ತೀರಾ ಪರಿಶ್ರಮದಿಂದ ಗಳಿಸಿದ ನವೋದಯ ಪರಂಪರೆಯು ಮಹಿಳೆಯರನ್ನು ಖಾಸಗಿ ಆಸ್ತಿಯಂತೆ ಪರಿಗಣಿಸಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಎಡಪಕ್ಷಗಳ ಒಳಗೇ ಇರುವ ಕೆಲವರು ಕಾಂತಾಪುರಂ ಅವರು ತಮ್ಮ ಸಮುದಾಯವನ್ನು ಉದ್ದೇಶಿಸಿ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಈ ವಿರೋಧಕ್ಕೆ ಮಂಕುಕವಿಯುವಂತೆ ಮಾಡಿದರು. ಮಾಜಿ ಸಚಿವರಾದ ಕೆ.ಟಿ. ಜಲೀಲ್ ಮತ್ತು ಟಿ.ಕೆ. ಹಮ್ಜಾ ಹಾಗೂ ಸಂಯೋಜಿತ ಇಂಡಿಯನ್ ನ್ಯಾಷನಲ್ ಲೀಗ್ ನಾಯಕರು ಸಮರ್ಥನೆಗಳನ್ನು ನೀಡಿದರು.
ಸಂಪ್ರದಾಯವಾದಿ ಮತದಾರ ಜೊತೆ ಅಂತರ ಕಾಯ್ದುಕೊಳ್ಳಲು ಯಾವಾಗಲೂ ಎಚ್ಚರಿಕೆಯಿಂದ ಇರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ತಟಸ್ಥ ನಿಲುವಿನ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿತು. ಪನಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಗಳ್ ಅವರಂತಹ ಹಿರಿಯ ವ್ಯಕ್ತಿಗಳು ಈ ವಿವಾದವನ್ನು ಜನದಟ್ಟಣೆಯ ಪರಿಸರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ತಂದೆಯ ಕಾಳಜಿಯ ಅಭಿವ್ಯಕ್ತಿ ಎಂದು ಮಾತ್ರ ಬಣ್ಣಿಸಿದರು, ಇತರ ಹಿರಿಯ ಪಕ್ಷದ ಧ್ವನಿಗಳು ಮೌನವಾಗಿದ್ದುದು ಎದ್ದು ಕಾಣುವಂತಿದ್ದವು, ಎರಡೂ ಸಮಸ್ತಾಗಳ ನಡುವಿನ ಜಂಗೀ ಕುಸ್ತಿಯ ಆಖಾಡವನ್ನು ಪ್ರವೇಶಿಸಲು ಹೆದರಿದವು.
ಸಲಾಫಿ ಸಂಸ್ಥೆಗಳ ಪ್ರತಿರೋಧ
ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದ ಸಲಾಫಿ ಸಂಸ್ಥೆಗಳು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಸ್ಪಷ್ಟ ನಿಲುವನ್ನು ತೆಗೆದುಕೊಂಡರು. ಕೆ.ಎನ್.ಎಂ. (ಮುಜಾಹಿದ್) ಗುಂಪುಗಳ ನಾಯಕರು ಕಾಂತಾಪುರಂ ಅವರ ವಾದಗಳನ್ನು ಇಸ್ಲಾಮ್ ಪೂರ್ವದ ಅರೇಬಿಯನ್ ಪ್ರಭುತ್ವದ ಅಸಮಂಜಸ ಅವಶೇಷ ಎಂದು ತಿರಸ್ಕರಿಸಿದ್ದು ವಿಶೇಷವಾಗಿತ್ತು. ಅದನ್ನು ಸಮರ್ಥಿಸಿಕೊಳ್ಳಲು ಅವರು ಐತಿಹಾಸಿಕ ನಿದರ್ಶನಗಳನ್ನು ಎತ್ತಿ ತೋರಿಸಿದರು; ಪ್ರವಾದಿಯವರ ಮೊದಲ ಪತ್ನಿ ಖದೀಜಾ ಅವರು ವ್ಯಾಪಾರಿ ಒಂಟೆಗಳ ಗುಂಪನ್ನು ನಿರ್ವಹಿಸುತ್ತಿದ್ದ ಸ್ವತಂತ್ರ ವ್ಯಾಪಾರಿಯಾಗಿದ್ದರು ಮತ್ತು ಆಯಿಷಾ ಅವರು ಅಧಿಕೃತ ನ್ಯಾಯಶಾಸ್ತ್ರಜ್ಞೆ, ಶಿಕ್ಷಕಿ ಹಾಗೂ ನಿರ್ಣಾಯಕ ಸಂದರ್ಭಗಳಲ್ಲಿ ಸೈನ್ಯವನ್ನು ಮುನ್ನಡೆಸಿದ ರಾಜಕೀಯ ವ್ಯಕ್ತಿಯಾಗಿದ್ದರು. ಮೂಲಭೂತ ಇಸ್ಲಾಮಿಕ್ ಇತಿಹಾಸವನ್ನು ಉಲ್ಲೇಖಿಸುವ ಮೂಲಕ, ಸುಧಾರಣಾವಾದಿಗಳು ಕಾಂತಾಪುರಂ ಅವರ ಮಹಿಳಾ ದ್ವೇಷವು ಮೂಲ ಧರ್ಮಗ್ರಂಥಗಳ ಆದೇಶಗಳ ಪ್ರತಿಬಿಂಬವಲ್ಲ, ಬದಲಿಗೆ ಧರ್ಮಗುರುಗಳ ಸ್ವಾರ್ಥಪರ ಗೇಟ್ಕೀಪಿಂಗ್ನ ಫಲ ಎಂದು ಬೊಟ್ಟು ಮಾಡಿದರು.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಂದ ಅತ್ಯಂತ ಪ್ರಬಲವಾದ ರಾಜಕೀಯ ಪ್ರತಿರೋಧ ಕಂಡುಬಂದಿತು, ಅವರು ಸಾಂವಿಧಾನಿಕ ಆಡಳಿತಕ್ಕಾಗಿ ದೃಢವಾದ ಮಾನದಂಡವನ್ನು ವ್ಯಕ್ತಪಡಿಸಿದರು, "ಹತ್ತೊಂಬತ್ತನೇ ಶತಮಾನದ ಸಿದ್ಧಾಂತಗಳನ್ನು 21ನೇ ಶತಮಾನಕ್ಕೆ ಹೇರುವ ಪ್ರಯತ್ನಗಳನ್ನು ಯಾವುದೇ ಸಂದರ್ಭದಲ್ಲೂ ಸಹಿಸಲು ಸಾಧ್ಯವಿಲ್ಲ. ನಾವು ಖದೀಜಾ, ಆಯಿಷಾ ಮತ್ತು ರಾಣಿ ಬಿಲ್ಕಿಸ್ ಅವರಂತಹ ಸಾಂಪ್ರದಾಯಿಕ ಐತಿಹಾಸಿಕ ವ್ಯಕ್ತಿಗಳನ್ನು ನೋಡಿದಾಗ, ಮಹಿಳೆಯರನ್ನು ದಮನ ಮಾಡುವುದಕ್ಕೂ ನಿಜವಾದ ಇಸ್ಲಾಮಿಕ್ ತತ್ವಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಸರ್ಕಾರ ಮತ್ತು ನಾಗರಿಕ ಸಮಾಜವು ಮಹಿಳೆಯರನ್ನು ಮುಖ್ಯವಾಹಿನಿಯಿಂದ ಹಿಂದಕ್ಕೆ ತಳ್ಳಲು ಪ್ರಯತ್ನಿಸುವ ಯಾವುದೇ ನೀತಿಯ ವಿರುದ್ಧ ದೃಢವಾಗಿ ನಿಲ್ಲುತ್ತದೆ."
ಎ.ಪಿ. ಬಣದ ಪ್ರತಿನಿಧಿಗಳು ಸರ್ಕಾರದ ನಿಲುವನ್ನು ತಣ್ಣಗಾಗಿಸಲು ಆಡಳಿತವರ್ಗದೊಂದಿಗೆ ಸಭೆಗಳನ್ನು ನಡೆಸಲು ಪ್ರಯತ್ನಿಸಿದರೂ, ಅವರು ಹೊರಡಿಸಿದ ಆದೇಶವನ್ನು ಅಧಿಕೃತವೆಂದು ಒಪ್ಪಿಕೊಳ್ಳಲು ಸರ್ಕಾರ ನಿರಾಕರಿಸಿತು. ಇದರಿಂದ ಪ್ರತಿರೋಧದ ಪ್ರಬಲ ಮುದ್ರೆಯನ್ನು ಒತ್ತಿದರು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


