
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಮತದಾರರ ಪಟ್ಟಿಯಿಂದ ಕಿತ್ತೆಸೆದ 91 ಲಕ್ಷ ಹೆಸರುಗಳು, ಏಕರೂಪ ನಾಗರಿಕ ಸಂಹಿತೆಯ ಬಲೆ, ಭ್ರಷ್ಟಾಚಾರದ ತಲೆನೋವಿನ ನಡುವೆ ಚುನಾವಣೆ ಎದುರಿಸುತ್ತಿರುವ ಪ.ಬಂಗಾಲ ಈಗಲೇ ರಾಜಕೀಯದ ಕುದಿನೆಲವಾಗಿ ಪರಿಣಮಿಸಿದೆ.
2026ರ ಪಶ್ಚಿಮ ಬಂಗಾಲ ಚುನಾವಣೆ ನಮ್ಮ ಎದುರು ಬಂದು ನಿಂತಿದೆ. ಇದು ಬದುಕಿರುವವರ ನೆನಪಿನಲ್ಲಿಯೇ ಕಾಣದೇ ಇರುವಂತಹ ಅನೇಕ ರಾಜಕೀಯ ತಿರುವುಗಳೊಂದಿಗೆ ಪ್ರತ್ಯಕ್ಷವಾಗಿದೆ ಎಂಬುದು ವಿಶೇಷ.
ಅಧಿಕಾರ ನಡೆಸುತ್ತಿರುವವರು ಕಲ್ಯಾಣ ಯೋಜನೆಗಳ ಸದೃಢ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ರಾಜಕೀಯ ಸಂಸ್ಥೆಯಂತೆ ಕಾಣುತ್ತಿದ್ದಾರೆ. ರಾಷ್ಟ್ರ ಮಟ್ಟದ ಆವೇಗವನ್ನು ಹೊಂದಿದ್ದರೂ ವಿರೋಧ ಪಕ್ಷದ ಸಾಂಸ್ಥಿಕ ಕೊರತೆಗಳು ಢಾಳಾಗಿ ಕಾಣುತ್ತಿದೆ. ಒಂದು ಕಾಲದಲ್ಲಿ ರಾಜ್ಯದ ಪ್ರಬಲ ಶಕ್ತಿಗಳಂತಿದ್ದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಈಗ ಕೇವಲ ಸಮಾಧಾನಕರ ಬಹುಮಾನಕ್ಕೆ ಪೈಪೋಟಿ ನಡೆಸುತ್ತಿವೆ.
ಎಲ್ಲಕ್ಕಿಂತ ಮಿಗಿಲಾಗಿ ರಾಜಕೀಯದ ಕಾವು ತಾರಕಕ್ಕೇರಿರುವ ಹೊತ್ತಿನಲ್ಲಿಯೇ ತೊಂಭತ್ತೊಂದು ಲಕ್ಷ ಮತದಾರರ ಪಟ್ಟಿಯಿಂದಲೇ ಕಿತ್ತೆಸೆದಿರುವುದು ಬಹಳ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.
ರಾಜ್ಯದಲ್ಲಿ ನಡೆಯುವ ಚುನಾವಣೆಯ ಫಲಿತಾಂಶ ಪ್ರಕಟವಾಗುವುದು ಮೇ ನಾ;ಲ್ಕರಂದು. ಇಂದು ನಡೆಯುತ್ತಿರುವ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅಂದಿನ ಉತ್ಕಟ ಸ್ಥಿತಿಗೂ ಸವಾಲು ಹಾಕುವ ರೀತಿಯಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ.
ಬಂಗಾಲದ ಅಸ್ಮಿತೆಯಾದ ಮಮತಾ
ತೃಣಮೂಲ ಕಾಂಗ್ರೆಸ್ಸಿನ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಈ ಚುನಾವಣೆಯನ್ನು ಕೇವಲ ಒಬ್ಬ ಮುಖ್ಯಮಂತ್ರಿಯಾಗಿ ಎದುರಿಸುತ್ತಿದ್ದಾರೆ ಎಂದರೆ ಅದು ಕ್ಲೀಷೆಯಾದೀತು. ಇಂದು ಅವರು ಅದಕ್ಕಿಂತ ಭಿನ್ನವಾದ ಅಥವಾ ಮಿಗಿಲಾದ ಸ್ಥಾನದಲ್ಲಿ ನಿಂತಿದ್ದಾರೆ. ಅವರೇ ರಾಜ್ಯದ ಪ್ರಬಲ ಶಕ್ತಿ. ಅವರ ವ್ಯಕ್ತಿತ್ವವು ಬಂಗಾಲ ಅಸ್ಮಿತೆಯೊಂದಿಗೇ ಬೆರೆತುಹೋಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಟಿಎಂಸಿ ವಿರುದ್ಧ ಮತ ಹಾಕುವುದೆಂದರೆ ಬಂಗಾಲದ ಕಲ್ಪನೆಯ ವಿರುದ್ಧವೇ ಮತ ಚಲಾಯಿಸಿದಂತೆ ಎಂದು ಅನೇಕರಿಗೆ ಭಾಸವಾಗುತ್ತಿದೆ ಎಂದರೆ ಅಚ್ಚರಿಯಲ್ಲ.
ಮಮತಾ ಅವರ ಜನಪ್ರಿಯತೆ ಏನಿದ್ದರೂ ಎರದು ಪ್ರಬಲ ಸ್ತಂಭಗಳ ಮೇಲೆ ಬಲವಾಗಿ ನಿಂತಿದೆ: ಅದು ಅವರು ನಿರ್ಮಾಣ ಮಾಡಿದ ಕಲ್ಯಾಣ ರಾಜ್ಯ ಮತ್ತು ಅವರು ಈವರೆಗೂ ರಕ್ಷಿಸಿಕೊಂಡು ಬಂದಿರುವ ಬಂಗಾಲದ ಅಸ್ಮಿತೆ.
ಕಲ್ಯಾಣ ಯೋಜನೆಗಳ ವಿಚಾರದಲ್ಲಿ ಅವರ ಸಾಧನೆಗಳು ವಾಸ್ತವಕ್ಕೆ ಹತ್ತಿರವಾಗಿದೆ. ʼಲಕ್ಷ್ಮಿರ್ ಭಂಡಾರ್ʼ ಯೋಜನೆಯು ಸಾಮಾನ್ಯ ವರ್ಗದ ಮಹಿಳೆಯರಿಗೆ ತಿಂಗಳಿಗೆ 1500 ರೂ ಮತ್ತು ಪರಿಶಿಷ್ಟ ವರ್ಗ ಮತ್ತು ಪಂಗಡದ ಮಹಿಳೆಯರಿಗೆ 1700 ರೂ. ನಗದು ವರ್ಗಾವಣೆ ಮಾಡುವ ಮೂಲಕ ಲಕ್ಷಾಂತರ ಕುಟುಂಬಗಳ ಅರ್ಥ ವ್ಯವಸ್ಥೆಯನ್ನೇ ಹೊಸದಾಗಿ ರೂಪಿಸಿದಂತಾಗಿದೆ. ಇದನ್ನು ಕೇವಲ ದಾನ ಎಂದು ಕರೆಯಲು ಸಾಧ್ಯವಿಲ್ಲ. ಇದು ಕುಟುಂಬದ ಬಜೆಟ್ನೊಳಗೇ ವ್ಯವಸ್ಥಿತವಾಗಿ ಹಾಸುಹೊಕ್ಕಾಗಿರುವ ರಾಜಕೀಯ.
ಭೇದಿಸುವ ಬಗೆಯಾದರೂ ಹೇಗೆ?
ಇದರ ಜೊತೆ ಜೊತೆಗೇ ಇರುವ ವಸತಿ ಯೋಜನೆಗಳು, ಆರೋಗ್ಯ ಕಾರ್ಯಕ್ರಮಗಳು ಮತ್ತು ಕನ್ಯಾಶ್ರೀಯಂತಹ ಉಪಕ್ರಮಗಳನ್ನೂ ಸೇರ್ಪಡೆಗೊಳಿಸಿದರೆ ಟಿಎಂಸಿಯ ಭೌತಿಕ ಅವಲಂಬನೆಯು ಗಟ್ಟಿಯಾದ ಬಲೆಯನ್ನು ಹೆಣೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನು ಭೇದಿಸುವುದಾದರೂ ಹೇಗೆ ಎಂಬುದು ವಿರೋಧಪಕ್ಷಕ್ಕೆ ಇದುವರೆಗೂ ತಿಳಿದಂತೆ ಕಾಣಿಸುತ್ತಿಲ್ಲ.
ಅಸ್ಮಿತೆಯ ವಿಚಾರದಲ್ಲಿಯೂ ಮಮತಾ ಬ್ಯಾನರ್ಜಿ ಅಷ್ಟೇ ಸ್ಥಿರವಾಗಿದ್ದಾರೆ. ಮೊದಲು ಎಡಪಕ್ಷಗಳ ಸೈದ್ಧಾಂತಿಕ ಬಿಗುವಿನ ವಿರುದ್ಧ ಮತ್ತು ಈಗ ʼದೆಹಲಿಯ ಹಿಂದೂ ಬಹುಸಂಖ್ಯಾತವಾದಿ ಯೋಜನೆʼ ಎಂದು ಬಣ್ಣಿಸುವ ಶಕ್ತಿಗಳ ವಿರುದ್ಧ ಬಂಗಾಳದ ರಕ್ಷಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಈ ನಿಲುವು ಎಲ್ಲ ಸಮುದಾಯಗಳಲ್ಲಿಯೂ ಅನುರಣಿಸುವಂತಹ ಒಂದು ಭಾಷೆಯನ್ನು ಅವರಿಗೆ ದಕ್ಕುವಂತೆ ಮಾಡಿದೆ.
ಭಾರತದ ಅತ್ಯಂತ ಸಂಕೀರ್ಣ ಜನಸಂಖ್ಯಾ ವಿನ್ಯಾಸವನ್ನು ಹೊಂದಿರುವ ರಾಜ್ಯದಲ್ಲಿ ಆ ಭಾಷೆಯು ಒಂದು ರಾಜಕೀಯ ಸಂಪರ್ಕ ಭಾಷೆಯಾಗಿ ಕಾರ್ಯ ನಿರ್ವಹಿಸಿದೆ.
ಅರಗಿಸಿಕೊಳ್ಳಲಾಗದ ಹೊಡೆತ: ಎಸ್ಐಆರ್
ಇವೆಲ್ಲ ತರ್ಕಗಳು ಒತ್ತಟ್ಟಿಗಿರಲಿ, ಅವರ ಸಂಘಟನೆಯು ಕೂಡ ಅರಗಿಸಿಕೊಳ್ಳಲು ಸಾಧ್ಯವಾಗದ ಸಂಗತಿಗಳೂ ಹೆಚ್ಚುತ್ತಿವೆ. ಅವುಗಳಲ್ಲಿ ಅತ್ಯಂತ ಸ್ಫೋಟಕವಾದುದು ಮತ್ತು ತಾಂತ್ರಿಕವಾದುದು ಎಂದರೆ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್). ಇದರ ಪರಿಣಾಮವಾಗಿ ಕಿತ್ತೆಸೆದಿರುವುದು ಬರೋಬ್ಬರಿ 91 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು. ಇದರಿಂದಾಗಿ ಒಟ್ಟು ನೋಂದಾಯಿತ ಮತದಾರರ ಪೈಕಿ ಸುಮಾರು ಶೇ.12ರಷ್ಟು ಕಡಿತ ಮಾಡಿದಂತಾಗಿದೆ.
ಇದು ನಕಲಿ, ಮೃತಪಟ್ಟ ಮತ್ತು ಸ್ಥಳಾಂತರವಾದ ಮತದಾರರನ್ನು ತೆಗೆದುಹಾಕುವ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಆದರೆ ಇದನ್ನು ʼಮತಾಧಿಕಾರ ಕಸಿದುಕೊಳ್ಳುವ ಹುನ್ನಾರʼ ಎಂದು ಕರೆದಿರುವ ಟಿಎಂಸಿ, ಇದಕ್ಕಾಗಿ ಟಾರ್ಗೆಟ್ ಮಾಡಿರುವುದು ಮುಸ್ಲಿಮರು, ಮಟುವಾಗಳು ಮತ್ತು ರಾಜ್ವಂಶಿಗಳಂತಹ ಪಕ್ಷದ ಪ್ರಮುಖ ಮತಬ್ಯಾಂಕ್ಗಳನ್ನು ಎಂದು ಆರೋಪಿಸಿದೆ.
ಮುರ್ಷಿದಾಬಾದ್, ಮಾಲ್ಡಾ, ಉತ್ತರ ಮತ್ತು ದಕ್ಷಿಣ ಪರಗಣ ಹಾಗೂ ನಾಡಿಯಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹೆಸರುಗಳನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಈ ಜಿಲ್ಲೆಗಳು ಟಿಎಂಸಿಯ ಹೃದಯವೇ ಆಗಿದೆ. ಹಾಗಾಗಿ ಆಯೋಗದ ಈ ಕಾರ್ಯಾಚರಣೆಯ ಹಿಂದೆ ಬಲವಾದ ಉದ್ದೇಶವಿದೆ ಎಂಬುದು ಸ್ಪಷ್ಟವಾಗುತ್ತದೆ.
ಕೇಂದ್ರ ಸಂಸ್ಥೆಗಳ ಮೇಲಿನ ತನ್ನ ಪ್ರಭಾವವನ್ನು ಬಳಸಿ ಬಿಜೆಪಿ ಈ ಹೆಸರುಗಳನ್ನು ಕಿತ್ತು ಹಾಕುವ ಕೆಲಸಕ್ಕೆ ಕೈಹಾಕಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ತೀವ್ರವಾದ ಪ್ರತಿಕ್ರಿಯಿ ನೀಡಿದ್ದಾರೆ ಮತ್ತು ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಯಾವುದೇ ಪರಿಹಾರ ಸಿಗುವ ಮೊದಲೇ ಹಾನಿ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಗೆಲುವಿನ ಅಂತರವು ನಿರ್ಣಾಯಕವಾಗಿರುವ ಚುನಾವಣೆಯಲ್ಲಿ — ಮತ್ತು 2026ರ ಬಂಗಾಳದ ಚುನಾವಣೆ ನಿಖರವಾಗಿ ಅಂತಹ ಹಾದಿಯಲ್ಲೇ ಸಾಗುತ್ತಿದೆ — ಈ ಜಿಲ್ಲೆಗಳಲ್ಲಿ ಮತದಾನದ ಪ್ರಮಾಣದಲ್ಲಿ ಉಂಟಾಗುವ ಸಣ್ಣ ಕುಸಿತವೂ ಕೂಡ ಯಾವುದೇ ರ‍್ಯಾಲಿ ಅಥವಾ ಭಾಷಣಗಳಿಂದ ಸರಿಪಡಿಸಲಾಗದ ರೀತಿಯಲ್ಲಿ ಫಲಿತಾಂಶದಲ್ಲಿ ಪಲ್ಲಟವನ್ನು ಉಂಟುಮಾಡಿಬಿಡಬಹುದು.
ಅಸ್ಮಿತೆಯನ್ನು ಮೀರಿದ ಸಂಗತಿಗಳು
ಟಿಎಂಸಿ ಪಾಲಿನ ಎರಡನೇ ಪ್ರಮುಖ ದೌರ್ಬಲ್ಯ ಆಡಳಿತಾತ್ಮಕವಾದುದಲ್ಲ. ಅದು ಅಲ್ಲಿನ ವಾತಾವರಣಕ್ಕೆ ಸಂಬಂಧಿಸಿದ್ದು. ಮಹಿಳೆಯರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನಿರಂತರವಾಗಿ ಕಾಡುತ್ತಿರುವ ಭ್ರಷ್ಟಾಚಾರ ಹಗರಣಗಳು (ಮುಖ್ಯವಾಗಿ 2022ರ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣ) ಬಿಜೆಪಿಗೆ ಅಸ್ಮಿತೆಯ ರಾಜಕಾರಣವನ್ನು ಮೀರಿದ ಒಂದು ಪ್ರಬಲ ಕಥಾವಸ್ತುವನ್ನು ಒದಗಿಸಿವೆ.
ಆ ಪ್ರಕರಣದಲ್ಲಿ ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ಬಂಧನವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿರಲಿಲ್ಲ; ಅದು ಟಿಎಂಸಿಗೆ ಬಿದ್ದ ರಾಜಕೀಯ ಗಾಯವಾಗಿದ್ದು, ಅದರಿಂದ ಪಕ್ಷವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ದಕ್ಷಿಣ ಕೋಲ್ಕತ್ತಾ, ಹೌರಾ ಮತ್ತು ಹೂಗ್ಲಿಯ ನಗರ ಕ್ಷೇತ್ರಗಳಲ್ಲಿ, 2011ರಲ್ಲಿ ಟಿಎಂಸಿಯ ಸುಶಿಕ್ಷಿತ ಮತ್ತು ಜಾತ್ಯತೀತ ಒಕ್ಕೂಟದ ಬೆನ್ನೆಲುಬಾಗಿದ್ದ ಮತದಾರರು ಈಗ ಒಂದು ರೀತಿಯಲ್ಲಿ ದಣಿದಂತೆ ಕಾಣುತ್ತಿದ್ದಾರೆ. ಇದು ಸೈದ್ಧಾಂತಿಕ ವಿರೋಧಕ್ಕಿಂತ ಭಿನ್ನವಾದುದು; ಇದು ನಿರೀಕ್ಷೆಗಳು ಹುಸಿಯಾದಾಗ ಉಂಟಾಗುವ ಬೇಸರ.
ಬಿಜೆಪಿಯ ಸೋನಾರ್ ಬಾಂಗ್ಲಾ ಭರವಸೆಗಳು
ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ಒಂದು ದಶಕದ ಹಿಂದೆ ಕಲ್ಪನೆಗೂ ನಿಲುಕದಂತಿದ್ದ ಒಂದು ವಾದದೊಂದಿಗೆ ಈ ಚುನಾವಣೆಯನ್ನು ಎದುರಿಸುತ್ತಿದೆ: ರಾಜ್ಯದ ಸುಮಾರು ಅರ್ಧದಷ್ಟು ಕ್ಷೇತ್ರಗಳಲ್ಲಿ ಅದು ಪ್ರಬಲ ಪೈಪೋಟಿ ನೀಡುತ್ತಿದೆ. 2016ರಲ್ಲಿ ಕೇವಲ 3 ಸ್ಥಾನಗಳಿಂದ 2021ರಲ್ಲಿ 77 ಸ್ಥಾನಗಳಿಗೆ ಏರಿರುವ ಅದರ ಬೆಳವಣಿಗೆಯ ಹಾದಿ ಅಚ್ಚರಿ ಮೂಡಿಸುವಂತಹುದು.
ಈ ಚುನಾವಣೆಯ ಕೇಂದ್ರಬಿಂದುವಾಗಿರುವ ಪ್ರಮುಖ ಪ್ರಶ್ನೆ ಎಂದರೆ 2026ರ ಫಲಿತಾಂಶವು ಈ ಬೆಳವಣಿಗೆಯ ಮುಂದುವರಿಕೆಯಾಗಲಿದೆಯೇ ಅಥವಾ ಒಂದು ಹಂತದಲ್ಲಿ ಸ್ಥಗಿತಗೊಳ್ಳಲಿದೆಯೇ?
ರಾಜ್ಯದಲ್ಲಿ ಬಿಜೆಪಿಯ ಪ್ರಚಾರವಂತೂ ಅತ್ಯಂತ ಬಿರುಸಿನಿಂದ ಕೂಡಿದೆ. ಅದಕ್ಕೆ ರಾಷ್ಟ್ರೀಯ ಸ್ವರೂಪವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ 15 ದಿನಗಳ ಕಾಲ ಪ್ರಚಾರ ನಡೆಸುವ ನಿರ್ಧಾರ ಮಾಡಿದ್ದಾರೆ.. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಹಲವಾರು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
"ಸೋನಾರ್ ಬಾಂಗ್ಲಾ" (ಚಿನ್ನದ ಬಂಗಾಳ) ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಲಾದ ಪಕ್ಷದ ಪ್ರಣಾಳಿಕೆಯಲ್ಲಿ 'ಏಕರೂಪ ನಾಗರಿಕ ಸಂಹಿತೆ'ಗೆ (ಯುಸಿಸಿ) ಆದ್ಯತೆ ನೀಡಲಾಗಿದೆ. ಸರ್ಕಾರ ರಚನೆಯಾದ ಆರು ತಿಂಗಳೊಳಗೆ ಅದನ್ನು ಜಾರಿಗೆ ತರುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ. ಇದರೊಂದಿಗೆ ಮಹಿಳೆಯರಿಗೆ ಮಾಸಿಕ 3,000 ರೂ. (ಟಿಎಂಸಿಯ ಲಕ್ಷ್ಮೀರ್ ಭಂಡಾರ್ಗಿಂತ ಹೆಚ್ಚಿನ ಮೊತ್ತ), ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿ ಮತ್ತು ಅಕ್ರಮ ವಲಸೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಭರವಸೆಗಳನ್ನು ನೀಡಲಾಗಿದೆ.
ಚತುರ ರಾಜಕಾರಣದ ನಡೆ
ಒಂದು ತಂತ್ರಗಾರಿಕೆಯ ನಡೆಯಾಗಿ 'ಏಕರೂಪ ನಾಗರಿಕ ಸಂಹಿತೆ' (UCC) ಭರವಸೆಯು ವಿಶೇಷ ಗಮನ ಸೆಳೆಯುತ್ತದೆ. ಇದನ್ನು ಮಮತಾ ಬ್ಯಾನರ್ಜಿ ಅವರಿಗೆ ಒಂದು ರಾಜಕೀಯ ಬಲೆಯಾಗಿ ರೂಪಿಸಲಾಗಿದೆ: ಇದನ್ನು ವಿರೋಧಿಸಿದರೆ, ಬಿಜೆಪಿ ಬಿಂಬಿಸುವ "ಅಲ್ಪಸಂಖ್ಯಾತರ ಓಲೈಕೆ" ಎಂಬ ವಾದಕ್ಕೆ ಅವರು ಪುಷ್ಟಿ ನೀಡಿದಂತಾಗುತ್ತದೆ; ಒಂದು ವೇಳೆ ಬೆಂಬಲಿಸಿದರೆ, ತಮ್ಮ ಮುಸ್ಲಿಂ ಮತಬ್ಯಾಂಕ್ ಅಸ್ಥಿರಗೊಳ್ಳುವ ಅಪಾಯವಿರುತ್ತದೆ. ಇದು ಚತುರ ರಾಜಕಾರಣವೇ ಸರಿ, ಆದರೆ ಇದು ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂದು ಹೇಳುವುದು ಕಷ್ಟ. ಬಿಜೆಪಿಯ ಹಿಂದಿನ ಬಾರಿಯ ಹಿಂದೂ ಮತಗಳ ಧ್ರುವೀಕರಣವು ಆ ಪಕ್ಷದ ಸಾಂಸ್ಥಿಕ ಕೊರತೆಗಳನ್ನು ಮೀರಬಲ್ಲಷ್ಟು ಇದು ಪ್ರಬಲವಾಗಿದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ.
ಆ ಸಾಂಸ್ಥಿಕ ಕೊರತೆಗಳು ವಾಸ್ತವಿಕವಾಗಿವೆ. ಬಂಗಾಳದ ಚುನಾವಣೆಗಳು ಗೆಲ್ಲುವುದು ಬೂತ್ ಮಟ್ಟದಲ್ಲಿ; ಅಂದರೆ ವರ್ಷಗಳ ಕಾಲ ಕಟ್ಟಿ ಬೆಳೆಸಿದ ಸ್ಥಳೀಯ ಬಾಂಧವ್ಯಗಳ ಜಾಲದ ಮೂಲಕ. ತೃಣಮೂಲ ಕಾಂಗ್ರೆಸ್ನ ಕೆಡರ್ ರಚನೆಯು ಇತ್ತೀಚಿನ ಪಕ್ಷಾಂತರಗಳು ಮತ್ತು ನೈತಿಕ ಕುಸಿತದ ಹೊರತಾಗಿಯೂ, ಒಂದು ರೀತಿಯ ಮೇಲುಗೈಯನ್ನು ಕಾಯ್ದುಕೊಂಡಿದೆ. ರಾಷ್ಟ್ರೀಯ ನಾಯಕರ ಎಷ್ಟೇ ದೊಡ್ಡ ರ‍್ಯಾಲಿಗಳೂ ಇದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ.
ಬಿಜೆಪಿಯ ಆಂತರಿಕ ಮೌಲ್ಯಮಾಪನಗಳೂ ಸಹ ಇದನ್ನೇ ಪ್ರತಿಬಿಂಬಿಸುತ್ತಿವೆ. ತನ್ನ ಶಕ್ತಿಯನ್ನು ಎಲ್ಲಾ ಕಡೆ ವಿನಿಯೋಗಿಸುವ ಬದಲಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಹರಿಸಲು ಪಕ್ಷ ನಿರ್ಧರಿಸಿದೆ. ಬಂಗಾಳದ ರಾಜಕೀಯ ಭೂಪ್ರದೇಶದಲ್ಲಿ ಕೇವಲ ಅಲೆಯು ಸಂಘಟನೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕಾಂಗ್ರೆಸ್, ಎಡಪಕ್ಷ ಮತ್ತು ಅಪ್ರಸ್ತುತ ರಾಜಕಾರಣ
ಕಾಂಗ್ರೆಸ್ 2006ರ ನಂತರ ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ಟಿಎಂಸಿ ಮತ್ತು ಬಿಜೆಪಿ ಎರಡರ ವಿರುದ್ಧವೂ ಸಮಾನವಾಗಿ ವಾಗ್ದಾಳಿ ನಡೆಸುತ್ತಾ 294 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಸೈದ್ಧಾಂತಿಕವಾಗಿ ಸರಿಯಾದ ನಿಲುವಾಗಿದ್ದರೂ, ಚುನಾವಣಾ ದೃಷ್ಟಿಯಿಂದ ಹೆಚ್ಚಿನ ಲಾಭ ತರುವಂತೆ ಕಾಣುತ್ತಿಲ್ಲ. ಇನ್ನು ಅಬ್ಬಾಸ್ ಸಿದ್ದಿಕಿಯವರ 'ಇಂಡಿಯನ್ ಸೆಕ್ಯುಲರ್ ಫ್ರಂಟ್' ಜೊತೆ ಮೈತ್ರಿ ಮಾಡಿಕೊಂಡಿರುವ ಎಡಪಕ್ಷಗಳು, ಈಗ ಎಐಎಂಐಎಂನಿಂದಾಗಿ ಮುಸ್ಲಿಂ ಮತಗಳ ಹಂಚಿಕೆಯ ಸವಾಲನ್ನು ಎದುರಿಸುತ್ತಿವೆ.
ಹಲವು ತಿಂಗಳುಗಳಿಂದ, ಟಿಎಂಸಿಯಿಂದ ಉಚ್ಚಾಟಿತರಾದ ಶಾಸಕ ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿಯ ಪ್ರತಿರೂಪದ ಮಸೀದಿ ನಿರ್ಮಾಣದಂತಹ ಪ್ರಚೋದನಾತ್ಮಕ ಪ್ರಚಾರದ ಮೂಲಕ ಕಟ್ಟಿದ ಎಐಎಂಐಎಂ-ಎಜೆಯುಪಿ ಮೈತ್ರಿಯು ಟಿಎಂಸಿಗೆ ದೊಡ್ಡ ಅಪಾಯವಾಗಿ ಕಂಡಿತ್ತು. ಇದು ಮುರ್ಷಿದಾಬಾದ್, ಮಾಲ್ಡಾ ಮತ್ತು ಉತ್ತರ ದಿನಾಜ್ಪುರದಲ್ಲಿ ಟಿಎಂಸಿಯ ಮುಸ್ಲಿಂ ಮತಬ್ಯಾಂಕ್ಗೆ ನೇರ ಪೆಟ್ಟು ಕೊಡುವಂತಿತ್ತು.
ಸಾವಿರ ಕೋಟಿಯ ರುಷುವತ್ತು
ಆದರೆ ನಂತರ, ಕಬೀರ್ ಅವರು ಇದೇ ಪಕ್ಷಾಂತರಕ್ಕಾಗಿ ಬಿಜೆಪಿ ನಾಯಕರೊಂದಿಗೆ 1,000 ರೂ. ಕೋಟಿ ಮೊತ್ತದ ವ್ಯವಹಾರದ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೋವೊಂದನ್ನು ಟಿಎಂಸಿ ಬಿಡುಗಡೆ ಮಾಡಿತು. ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಆದರೂ ಎಐಎಂಐಎಂ ಈ ಮೈತ್ರಿಯಿಂದ ಹೊರಬಂತು. ಕಬೀರ್ ಇದನ್ನು 'AI-ಸೃಷ್ಟಿತ ಸುಳ್ಳು ವಿಡಿಯೋ' ಎಂದು ಕರೆದರೆ, ಅಮಿತ್ ಶಾ ಇದನ್ನು ಮಮತಾ ಬ್ಯಾನರ್ಜಿಯವರ ಕೈಚಳಕ ಎಂದು ಬಣ್ಣಿಸಿದರು.
ಒಟ್ಟಾರೆಯಾಗಿ, ಈ ಮೈತ್ರಿಗಳು ಬಿಜೆಪಿ ವಿರುದ್ಧ ಒಂದಾಗಬಹುದಾದ ಜಾತ್ಯತೀತ ಮತ್ತು ನಗರ ಪ್ರದೇಶದ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ. ಇದು ಈ ಪಕ್ಷಗಳಿಗೆ ಯಾವುದೇ ಸ್ಥಾನಗಳನ್ನು ತಂದುಕೊಡದಿದ್ದರೂ, ಅಲ್ಪ ಅಂತರವಿರುವ ಕ್ಷೇತ್ರಗಳಲ್ಲಿ ಕೇಸರಿ ಪಡೆಗೆ (ಬಿಜೆಪಿ) ಲಾಭವಾಗುವಂತೆ ಮಾಡಬಹುದು. ಇದು ವಿರೋಧ ಪಕ್ಷಗಳ ಮುಂದಿರುವ ಸಂದಿಗ್ಧ ಸಂಗತಿಯಾಗಿದ್ದು, ಸದ್ಯಕ್ಕೆ ಯಾವುದೇ ಪಕ್ಷದ ಬಳಿಯೂ ಇದಕ್ಕೆ ಪರಿಹಾರವಿಲ್ಲ.
ಸಾಮಾಜಿಕ ಬದಲಾವಣೆಯತ್ತ ಚಿತ್ತ
ಬಂಗಾಳವು ವಾಸ್ತವವಾಗಿ ನಿರ್ಧರಿಸುತ್ತಿರುವುದು ಏನನ್ನು?
2026ರಲ್ಲಿ ಬಂಗಾಳದ ಮುಂದಿರುವ ಅತ್ಯಂತ ಗಹನವಾದ ಪ್ರಶ್ನೆಯೆಂದರೆ ಯಾರು ಗೆಲ್ಲುತ್ತಾರೆ ಎಂಬುದಲ್ಲ; ಬದಲಾಗಿ ಏಕಪಕ್ಷೀಯ ಪ್ರಾಬಲ್ಯವು ಈ ರಾಜ್ಯದ ಸ್ವಾಭಾವಿಕ ಸ್ಥಿತಿಯೇ ಅಥವಾ ರಾಜ್ಯವು ಒಂದು ಸ್ಪರ್ಧಾತ್ಮಕ ಸಮತೋಲನವನ್ನು ಕಾಯ್ದುಕೊಳ್ಳಬಲ್ಲದೇ ಎಂಬುದು.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಎರಡನೆಯ ಆಯ್ಕೆ ಈಗ ಸಾಧ್ಯ ಎನಿಸುತ್ತಿದೆ. ಅಂದಾಜಿನ ಪ್ರಕಾರ ಅಂದರೆ ಸುಮಾರು 140 ಸ್ಥಾನಗಳನ್ನು ಗೆಲ್ಲುವ ಟಿಎಂಸಿ ವಿರುದ್ಧ, 130ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಬಿಜೆಪಿ ನಿಂತರೆ, ಅದು ಟಿಎಂಸಿಗೆ ಸಿಗುವ ದೊಡ್ಡ ಜನಾದೇಶ ಎನಿಸಿಕೊಳ್ಳದೆ ಕೇವಲ ಒಂದು ಸಾಧಾರಣ ಗೆಲುವು ಆದೀತು. ಒಂದು ವೇಳೆ ಬಿಜೆಪಿ ಗೆದ್ದರೆ, ಅದು ಒಂದು ಯುಗದ ಅಂತ್ಯವಾಗಲಿದೆ; ಮತ್ತು ಅದರ 'ಏಕರೂಪ ನಾಗರಿಕ ಸಂಹಿತೆ'ಯ ಭರವಸೆಯೊಂದೇ, ಈ ಹಿಂದೆ ಎಡಪಕ್ಷಗಳ ಭೂ ಸುಧಾರಣೆಗಳ ನಂತರ ರಾಜ್ಯವು ಕಾಣದಂತಹ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಲಿದೆ.
ಮೇ 4ರಂದು ಬಂಗಾಳವು ಕೇವಲ ಒಂದು ಸರ್ಕಾರವನ್ನು ಆರಿಸುವುದಿಲ್ಲ. ಬದಲಾಗಿ ಅದು ಯಾವ ರೀತಿಯ ಆಡಳಿತ ಶೈಲಿಯನ್ನು ಇಷ್ಟಪಡುತ್ತದೆ ಎಂಬ ಸಂಕೇತವನ್ನು ನೀಡಲಿದೆ: ಹಕ್ಕು ಅಥವಾ ಸವಲತ್ತಿನ ರೂಪದ ಕಲ್ಯಾಣ ಯೋಜನೆಗಳೇ ಅಥವಾ ಸ್ಪರ್ಧೆಯನ್ನು ಆಧರಿಸಿದ ಹೊಣೆಗಾರಿಕೆಯೇ? ಈ ಉತ್ತರವು ಕೇವಲ ಈ ರಾಜ್ಯವೊಂದಕ್ಕೆ ಸೀಮಿತವಾಗದೆ, ಅದರ ಆಚೆಗೂ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ ಎಂಬುದು ದಿಟ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

