TK Arun

ಬಜೆಟ್ ವಿಶೇಷ-2026 - ಲೋಕವೆಲ್ಲಾ ತಲ್ಲಣ: ಥಳುಕು ಬಳುಕಿನ ಬಜೆಟ್-ಗೆ ರಾಜ್ಯಗಳ ನಿಧಿ ಮೇಲೇ ಕಣ್ಣು


ಬಜೆಟ್ ವಿಶೇಷ-2026 - ಲೋಕವೆಲ್ಲಾ ತಲ್ಲಣ: ಥಳುಕು ಬಳುಕಿನ ಬಜೆಟ್-ಗೆ ರಾಜ್ಯಗಳ ನಿಧಿ ಮೇಲೇ ಕಣ್ಣು
x
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್-ಗಳ ಮಂಡನೆಯಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ ಅದರಲ್ಲಿ ಇನ್ನೇನು ಹೆಚ್ಚುಗಾರಿಕೆ ಇದೆ?
Click the Play button to hear this message in audio format

ಈ ಬಜೆಟ್-ನಲ್ಲಿ ಆದ್ಯತೆಗಳ ಮರುಪರಿಶೀಲನೆಯಾಗಲಿ ಇಲ್ಲ. ಸರ್ಕಾರ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯಗಳಲ್ಲಿ ಮೂಗು ತೂರಿಸುತ್ತ ಅಧಿಕಾರ ವ್ಯಾಪ್ತಿ ವಿಸ್ತರಿಸುವ ಕೆಲಸ ಮುಂದುವರಿಸಿದೆ.

ಇದೊಂದು ನಿರಾಶದಾಯಕ ಬಜೆಟ್. ಮುಂಗಡಪತ್ರ ಮಂಡಿಸಿದ ಬಳಿಕ ಷೇರು ಮಾರುಕಟ್ಟೆ ಲಗಾಟಿ ಹೊಡೆದಿದೆ. ಇದಕ್ಕೆ ʼಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ʼ (STT) ದರಗಳ ಏರಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಹೇಳಿದ ಹಾಗೆ, ಜಗತ್ತಿನ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿರುವ ʼಮಹಾ ಬಿರುಕುʼ ಮತ್ತು ಅದರಿಂದ ಉದ್ಭವಿಸಿರುವ ಸವಾಲುಗಳಿಗೆ ಸ್ಪಂದಿಸುವಲ್ಲಿ ಬಜೆಟ್ ವಿಫಲವಾಗಿರುವುದೇ ಅಸಲಿ ನಿರಾಶೆಗೆ ಕಾರಣ.

ಭಾರತದ ಅಭಿವೃದ್ಧಿಯ ಕಾರ್ಯತಂತ್ರದಲ್ಲಿ ʼವ್ಯೂಹಾತ್ಮಕ ಸ್ವಾಯತ್ತತೆʼ ಯಾವತ್ತೂ ಮುಖ್ಯ ಪಾತ್ರವನ್ನು ವಹಿಸುತ್ತ ಬಂದಿದೆ. ಉದಾಹರಣೆಗೆ, ಎರಡನೇ ಮಹಾಯುದ್ಧದ ನಂತರ ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳು ಅಮೆರಿಕದ ಆದೇಶಗಳನ್ನು, ಅದರ ಪರಮಾಣು ರಕ್ಷಣೆಯನ್ನು ಮತ್ತು ಅದರ ಮಾರುಕಟ್ಟೆಯ ಮುಕ್ತ ಪ್ರವೇಶವನ್ನು ಯಾವುದೇ ಭಿಡೆ ಇಲ್ಲದೆ ಒಪ್ಪಿಕೊಂಡವು. ಆದರೆ ಭಾರತ ಹಾಗೆ ಮಾಡಲಿಲ್ಲ. ಅದು ತನ್ನದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸಿತು. ಶೀತಲ ಸಮರದ ಸಮಯದಲ್ಲಿ ಎರಡೂ ಬಣಗಳಿಂದ ರಿಯಾಯ್ತಿಗಳನ್ನು ಪಡೆಯಲು ಅಲಿಪ್ತ ನೀತಿಯನ್ನು ರೂಪಿಸಿತು.

ಅಲ್ಲಿಂದೀಚೆಗೆ ಜಗತ್ತು ನಾಟಕೀಯ ರೀತಿಯಲ್ಲಿ ಬದಲಾಗಿದೆ. ಚೀನಾ ಈಗ ಎರಡನೇ ಅತ್ಯಂತ ಶಕ್ತಿಶಾಲಿ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿದೆ ಹಾಗೂ ಅಮೆರಿಕಕ್ಕೇ ಕಾರ್ಯತಂತ್ರದ ಪ್ರತಿಸ್ಪರ್ಧಿಯಾಗಿ ನಿಂತಿದೆ. ಅಮೆರಿಕ ಮತ್ತು ಉಳಿದ ಜಗತ್ತಿಗೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಏಳ್ಗೆಯನ್ನು ತಹಬಂದಿಯಲ್ಲಿ ಇಡಲು ಭಾರತವು ಒಂದು ಸಮತೋಲಿತ ಶಕ್ತಿಯಾಗಿ ಬೆಳೆಯುವುದೇ ಅತ್ಯಂತ ಖಚಿತ ಮಾರ್ಗ ಅನ್ನುವುದರಲ್ಲಿ ಅನುಮಾನವಿಲ್ಲ.

ಇಂತಹುದೇ ತರ್ಕದ ಆಧಾರದ ಮೇಲೆ 1998ರ ಪರಮಾಣು ಪರೀಕ್ಷೆಗಳ ನಂತರ ಅಮೆರಿಕದ ಜಾರ್ಜ್ ಬುಷ್ ನೇತೃತ್ವದ ಸರ್ಕಾರವು ಭಾರತದ ಮೇಲೆ ಹೇರಿದ್ದ ತಂತ್ರಜ್ಞಾನ ನಿಷೇಧದ ನಿರ್ಬಂಧಗಳಿಂದ ಭಾರತವನ್ನು ಮುಕ್ತಗೊಳಿಸಿತು. 2008ರಲ್ಲಿ ʼಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದʼಕ್ಕೆ ಸಹಿಹಾಕುವ ಮೂಲಕ ಸಾಧಿಸಲಾಯಿತು. ಅಂದಿನಿಂದ ಭಾರತವು ʼಪರಮಾಣು ಸರಬರಾಜುದಾರರ ಗುಂಪಿನʼ ಅರೆ-ಸದಸ್ಯತ್ವವನ್ನು ಮತ್ತು ಕ್ಷಿಪಣಿ ತಂತ್ರಜ್ಞಾನ, ದ್ವಿಬಳಕೆ ತಂತ್ರಜ್ಞಾನ, ರಾಸಾಯನಿಕ ಶಸ್ತ್ರಾಸ್ತ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಅಂತಾರಾಷ್ಟ್ರೀಯ ತಂತ್ರಜ್ಞಾನಗಳ ಒಕ್ಕೂಟಗಳ ಪೂರ್ಣ ಸದಸ್ಯತ್ವವನ್ನು ಪಡೆದುಕೊಂಡಿತು.

ಭಾರತವು ತನ್ನ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ನಿರಾಕರಿಸುತ್ತಿರುವ ಚೀನಾದ ವಿರುದ್ಧ ಕಾರ್ಯತಂತ್ರದ ಬೆಂಬಲಕ್ಕಾಗಿ ಅಮೆರಿಕವನ್ನು ಅವಲಂಬಿಸಿದೆ. ಚೀನಾ ತನ್ನ ಆಪ್ತ ರಾಷ್ಟ್ರವಾದ ಪಾಕಿಸ್ತಾನವನ್ನು ಬಳಸಿಕೊಂಡು ಭಾರತವನ್ನು ಕೇವಲ ದಕ್ಷಿಣ ಏಷ್ಯಾದ ಪ್ರಾದೇಶಿಕ ಶಕ್ತಿಯನ್ನಾಗಿ ಸಿಮಿತಗೊಳಿಸಲು ಪ್ರಯತ್ನಿಸುತ್ತಿದೆ. ಭಾರತವು ಅಮೆರಿಕ ಮತ್ತು ಚತುಷ್ಕೋನ ಗುಂಪಿನ ಇತರ ಸದಸ್ಯರಾದ ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ನಿಯಮಿತವಾಗಿ ಸೇನಾ ಸಮರಾಭ್ಯಾಸಗಳನ್ನು ನಡೆಸುತ್ತ ಬಂದಿದೆ. ಆದರೆ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಬರುವ ಆಮದುಗಳ ಮೇಲೆ ಭಾರಿ ಸುಂಕಗಳನ್ನು ಹೇರುವ ಮೂಲಕ ಹಾಗೂ ಪಾಕಿಸ್ತಾನವನ್ನು ಮತ್ತೆ ತನ್ನ ಆಪ್ತ ರಾಷ್ಟ್ರವಾಗಿ ಬೆಳೆಸುವ ಮೂಲಕ ಈ ಸುಗಮ ವ್ಯವಸ್ಥೆಗೆ ಕಿಚ್ಚು ಹಚ್ಚಿದ್ದಾರೆ.

ಕಾರ್ಯತಂತ್ರದ ತುರ್ತು ಪ್ರಜ್ಞೆಯ ಕೊರತೆ

ಭಾರತವು ಈಗ ನಿಜದ ದೃಷ್ಟಿಯಿಂದ ಏಕಾಂಗಿಯಾಗಿದೆ. ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಲು ಮತ್ತು ಬಲಪಡಿಸಲು ಸುಧಾರಿತ ಸೆಮಿಕಂಡಕ್ಟರ್ಗಳು ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ತನ್ನ ಕಾರ್ಯತಂತ್ರದ ಶಕ್ತಿಯನ್ನು ತಾನೇ ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.. ಇದರರ್ಥ ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲಗಳನ್ನು ನೇರವಾಗಿ ಹಂಚಿಕೆ ಮಾಡುವುದು, ಎಲ್ಲಾ ಹಂತಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಪ್ರಮುಖ ವಲಯಗಳಲ್ಲಿ ಸುಧಾರಿತ ಉತ್ಪಾದನಾ ಸಾಮರ್ಥ್ಯ ನಿರ್ಮಿಸುವ ಜರೂರತ್ತಿದೆ. ಇದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಕಂಡುಕೊಳ್ಳಲು, ಭಾರತವು ಬಜೆಟ್ ತಯಾರಿಕೆಯಲ್ಲಿನ ಸಾಂಪ್ರದಾಯಿಕ ಪದ್ಧತಿಯನ್ನು ಕೈಬಿಡಬೇಕಿದೆ.

ಆದರೆ, ಈ ಬಜೆಟ್‌ನಲ್ಲಿ ಅಂತಹ ಯಾವುದೇ ತುರ್ತು ಪ್ರಜ್ಞೆಯಾಗಲಿ ಅಥವಾ ಆದ್ಯತೆಗಳ ಮರುಪರಿಶೀಲನೆಯಾಗಲಿ ಕಂಡುಬರುತ್ತಿಲ್ಲ. ಕೇಂದ್ರ ಸರ್ಕಾರವು ತಾನು ಮಾತ್ರ ಮಾಡಬೇಕಾದ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು, ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾ ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದನ್ನು ಮುಂದುವರಿಸಿದೆ.

ಸ್ಥೂಲ ಆರ್ಥಿಕ ನಿರ್ವಹಣೆಯು ಕೇಂದ್ರದ ಸ್ಪಷ್ಟ ಜವಾಬ್ದಾರಿಯಾಗಿದೆ. ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ಕಡಿತಗೊಳಿಸಲಾಗಿದ್ದು, 2025-26ರ ಗುರಿಯಾದ ಜಿಡಿಪಿಯ ಶೇ. 4.4ರ ಹಂತವನ್ನು ತಲುಪಲಾಗಿದೆ ಮತ್ತು 2026-27ಕ್ಕೆ ಇದನ್ನು ಶೇ. 4.3 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಇದು ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳನ್ನು ಮೆಚ್ಚಿಸಬಹುದು. ಬಂಡವಾಳ ವೆಚ್ಚವನ್ನು ಸಹ ಹೆಚ್ಚಿಸಲಾಗಿದ್ದು, ಜಿಡಿಪಿಯಲ್ಲಿ ಅದರ ಪಾಲನ್ನು ಶೇ. 3.06 ರಿಂದ ಶೇ. 3.11 ಕ್ಕೆ ಏರಿಸಲಾಗಿದೆ—ಆದರೆ ಇದು ಬಜೆಟ್ನಲ್ಲಿ ಕೇವಲ ಅಂದಾಜಷ್ಟೇ; 2025-26ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ತಲುಪಲು ವಾಸ್ತವಿಕ ಬಂಡವಾಳ ವೆಚ್ಚವನ್ನು ಬಜೆಟ್ ಮೊತ್ತಕ್ಕಿಂತ ಕಡಿಮೆ ಮಾಡಲಾಗಿತ್ತು.

ವೆಚ್ಚ ಕಡಿತದ ಹೊಡೆತ

ಒಟ್ಟು ಸರ್ಕಾರಿ ವೆಚ್ಚವು 2024-25ರಲ್ಲಿ ಜಿಡಿಪಿಯ ಶೇ. 14 ರಷ್ಟಿದ್ದರೆ, ಅದು 2025-26ರಲ್ಲಿ ಶೇ. 13.9 ಕ್ಕೆ ಮತ್ತು 2026-27ಕ್ಕೆ ಶೇ. 13.6ಕ್ಕೆ ಕುಸಿದಿದೆ. ಒಟ್ಟು ಸ್ಥಿರ ಬಂಡವಾಳ ರಚನೆಯು ಜಿಡಿಪಿಯ ಶೇ.30ಕ್ಕಿಂತ ಹೆಚ್ಚು ಏರಲು ವಿಫಲವಾಗಿರುವುದು ಮತ್ತು ಕಂಪನಿಗಳ ಗಳಿಕೆಯ ಕುಸಿತವು ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡಿರುವುದನ್ನು ತೋರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜವಾಬ್ದಾರಿಯುತ ಬಜೆಟ್ ಎಂದರೆ ಒಟ್ಟು ವೆಚ್ಚವನ್ನು ಜಿಡಿಪಿಯ ಕನಿಷ್ಠ ಶೇ. 15 ಕ್ಕೆ ಏರಿಸುವುದಾಗಿದೆ. ಆದರೆ ಒಟ್ಟು ವೆಚ್ಚವನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುವ ಬದಲು, ಸರ್ಕಾರವು ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ಕೊರತೆಯನ್ನು ಮರೆಮಾಚಲು ಪ್ರತಿಯೊಂದು ವಲಯದಲ್ಲೂ ನೂರಾರು ಸಣ್ಣ ಪುಟ್ಟ ಯೋಜನೆಗಳನ್ನು ಘೋಷಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ.

MSME ವಲಯದ ಬಗ್ಗೆ ಕೇವಲ ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಸಣ್ಣ ಕಂಪನಿಗಳಿಗೆ ಸಾಲದ ವೆಚ್ಚವೇನೂ ಕಡಿಮೆಯಾಗದು. ಅದಕ್ಕೆ ಪೂರಕವಾಗಿ, ಸಣ್ಣ ಉದ್ಯಮಗಳಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) 'ಸಬ್-ಪ್ರೈಮ್ ಬಾಂಡ್'ಗಳನ್ನು ಬಿಡುಗಡೆ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಸಾಧ್ಯವಾಗಬೇಕು. ಭಾರತದಲ್ಲಿ ಒಂದು ಪರಿಣಾಮಕಾರಿ ಸಾಲದ ಮಾರುಕಟ್ಟೆ ಸೃಷ್ಟಿಯಾಗಬೇಕಾದರೆ, ಮೊದಲ ಹಂತವಾಗಿ ಸೆಬಿಯು ಸರ್ಕಾರಿ ಮತ್ತು ಖಾಸಗಿ ಸಾಲದ ಮಾರುಕಟ್ಟೆಗಳೆರಡರ ಮೇಲೂ ಏಕೀಕೃತ ನಿಯಂತ್ರಣ ಹೊಂದಿರಬೇಕು. ಜೊತೆಗೆ ಬಡ್ಡಿ ದರ, ಸಾಲ ಮತ್ತು ಕರೆನ್ಸಿ ಅಪಾಯಗಳ ವಿರುದ್ಧ ರಕ್ಷಣೆ ಪಡೆಯಲು ಅಗತ್ಯವಿರುವ ಎಲ್ಲಾ ರೀತಿಯ ಡಿರವೇಟಿವ್ಗಳ ಲಭ್ಯತೆ ಇರಬೇಕು. ಈ ಬಜೆಟ್ ಇದನ್ನು ಸಾಧಿಸಿದೆಯೇ? ನಿಶ್ಚಿತವಾಗಿ ಇಲ್ಲ.

ಸತ್ವಕ್ಕಿಂತ ಸೋಗು ಹೆಚ್ಚು

ಹಿಂದಿನ 'ಚಾಲೆಂಜ್ ಫಂಡ್'ಗಳನ್ನು ಯಾರೂ ಅಷ್ಟಾಗಿ ಬಳಸದಿದ್ದರೂ ಸಹ, ಸರ್ಕಾರವು ಈ ಬಜೆಟ್ನಲ್ಲಿ ಹಲವು ಹೊಸ ಚಾಲೆಂಜ್ ಫಂಡ್ಗಳನ್ನು ಘೋಷಿಸಿದೆ. ಮುನ್ಸಿಪಲ್ ಬಾಂಡ್ಗಳನ್ನು ಬಿಡುಗಡೆ ಮಾಡುವ ಪೌರಸಂಸ್ಥೆಗಳಿಗೆ ಭಾರಿ ಪ್ರೋತ್ಸಾಹಧನ ನೀಡುವುದಾಗಿ ಹೇಳಿದೆ. ಆದರೆ, ಸ್ವಂತ ವಿತ್ತೀಯ ಮೂಲವೇ ಇಲ್ಲದ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನೇ ಅವಲಂಬಿಸಿರುವ ಪೌರಸಂಸ್ಥೆಗಳು ಮುನ್ಸಿಪಲ್ ಬಾಂಡ್ಗಳ ಮೂಲಕ ನಗರ ಅಭಿವೃದ್ಧಿ ಮಾಡುವುದು ಎಷ್ಟು ವಾಸ್ತವಿಕ?

ಕಾರ್ಬನ್ ಕ್ಯಾಪ್ಚರ್, ಬಳಕೆ ಮತ್ತು ಸಂಗ್ರಹಣೆಗಾಗಿ ಬಜೆಟ್ನಲ್ಲಿ 20,000 ಕೋಟಿ ರೂ. ಘೋಷಿಸಿರುವುದು ಒಳ್ಳೆಯ ನಿರ್ಧಾರ. ಆದರೆ, ಕಾರ್ಬನ್ ಡೈಆಕ್ಸೈಡ್ ಅನ್ನು ಹೇಗೆ ಹೊರಹಾಕಬೇಕು ಮತ್ತು ಸೆರೆಹಿಡಿದ ಅನಿಲವನ್ನು ಲಾಭದಾಯಕ ಉತ್ಪನ್ನಗಳಾಗಿ ಹೇಗೆ ಪರಿವರ್ತಿಸಬೇಕು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಸಂಶೋಧನೆಯಿಲ್ಲದೆ ಇಂತಹ ಘೋಷಣೆಗಳಿಂದ ಏನು ಪ್ರಯೋಜನ?

ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಅಭಿವೃದ್ಧಿಯು ಒಂದು ಉತ್ತಮ ಚಿಂತನೆ. ಆದರೆ, ಆಯಾ ರಾಜ್ಯ ಸರ್ಕಾರಗಳು ಮುಂದೆ ಬಂದು ಆ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳದಿದ್ದರೆ ಅದು ಕೇವಲ ಒಂದು ಆಲೋಚನೆಯಷ್ಟೇ ಆಗಿ ಉಳಿದುಬಿಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಜೆಟ್ ಆಡಳಿತದ ಬಹುತೇಕ ಕ್ಷೇತ್ರಗಳಲ್ಲಿ ವಾಸ್ತವಿಕ ಸತ್ವಕ್ಕಿಂತ ಹೆಚ್ಚಾಗಿ ಕಣ್ಣಿಗೆ ಕಾಣುವ ಆಕರ್ಷಕ ಘೋಷಣೆಗಳನ್ನೇ ನೆಚ್ಚಿಕೊಂಡಿರುವ ಹಳೆಯ ಮಾದರಿಯನ್ನೇ ಅನುಸರಿಸಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story