
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಇರಾನ್-ಅಮೆರಿಕ ನಡುವೆ ಮಾಡಿಕೊಳ್ಳಲಾಗುವ ಅಂತಿಮ ಒಪ್ಪಂದವೇನಿದ್ದರೂ ಒಬಾಮಾ ಅವರು ಸಂಪೂರ್ಣ ಶಾಂತಿಯುತ ಮಾತುಕತೆ ಮೂಲಕ ಸಾಧಿಸಿದ್ದಕ್ಕಿಂತ ಭಿನ್ನವಾಗೇನೂ ಇರುವುದಿಲ್ಲ.
ಸಾಮಾನ್ಯವಾಗಿ ಡೊನಾಲ್ಡ್ ಟ್ರಂಪ್ ಶೈಲಿಯಲ್ಲಿಯೇ, ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧವನ್ನು ಕೊನೆಗೊಳಿಸುವ ತಿಳುವಳಿಕಾ ಒಪ್ಪಂದಕ್ಕೆ (MoU), ಶುಕ್ರವಾರದಂದು (ಜೂನ್ 19) ನಿಗದಿಯಾಗಿದ್ದ ಅಧಿಕೃತ ಸಮಾರಂಭಕ್ಕೂ ಮುಂಚಿತವಾಗಿಯೇ ಸಹಿ ಹಾಕಲಾಯಿತು. ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸುವಾಗ ಅವರು ಎಷ್ಟು ಆತುರದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೋ, ಅಷ್ಟೇ ಆತುರದಿಂದ ಒಂದೆರಡು ದಿನಗಳಿಗೂ ಮೊದಲೇ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷರು ಉತ್ಸುಕರಾಗಿದ್ದರು.
ಟ್ರಂಪ್ ಅವರು ತಮ್ಮ ಎಲ್ಲಾ ಗುರಿಗಳನ್ನು ಸಾಧಿಸಿದ್ದೇನೆ ಎಂದು ಹೇಳಿಕೊಂಡಿದ್ದರೂ, ಎಂಒಯುನ ತಟಸ್ಥ ಓದುವಿಕೆ ಈ ಹಕ್ಕನ್ನು ಸ್ಪಷ್ಟವಾಗಿ ಬಟಾಬಯಲು ಮಾಡುತ್ತದೆ. ಇಷ್ಟೆಲ್ಲ ಬಾಜಾಭಜಂತ್ರಿಯ ನಡುವೆಯೇ ಇರಾನ್ ವಿಜೇತನಾಗಿ ಹೊರಹೊಮ್ಮಿದೆ. ಅಮೆರಿಕ, ತನ್ನ ಭಯ ಮತ್ತು ಅಚ್ಚರಿಯ ದಾಳಿಗಳ ನಂತರ, ಯಾವುದೇ ಗಮನಾರ್ಹ ಲಾಭವನ್ನು ಗಳಿಸಲಾಗದೇ ಹೋಗಿದೆ. ಇಸ್ರೇಲ್ ಕೂಡ ಸದ್ದಿಲ್ಲದೇ ಅವಮಾನವನ್ನು ನುಂಗಿಕೊಳ್ಳಬೇಕಾಯಿತು.
ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣ ಮುಕ್ತಗೊಳಿಸಿರುವುದನ್ನೇ ಪರಿಗಣಿಸಿ, ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗ, ಆ ಜಲಸಂಧಿಯು ಹೇಗೂ ತೆರೆದಿತ್ತು. ಹಾಗಾಗಿ ಅದು ಯುದ್ಧದ ಆರಂಭಿಕ ಗುರಿಗಳಲ್ಲಿ ಒಂದಾಗಿರಲು ಸಾಧ್ಯವಿಲ್ಲ. ಈಗ ಅದನ್ನು ಮತ್ತೆ-ತೆರೆದಿರುವುದು ಯುದ್ಧಕ್ಕೂ ಮುಂಚಿನ ಸ್ಥಿತಿಯನ್ನು ಪುನಃಸ್ಥಾಪಿಸಿದಂತಾಗಿದೆ ಅಷ್ಟೆ.
ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂಬ ಟ್ರಂಪ್ ಅವರ ಅತಿದೊಡ್ಡ ಸಾಧನೆಯ ವಿಷಯಕ್ಕೆ ಬಂದರೆ, ಟೆಹ್ರಾನ್‌ನಲ್ಲಿರುವ ಇಸ್ಲಾಮಿಕ್ ಆಡಳಿತವು ತಮಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಆಸಕ್ತಿಯಿಲ್ಲ ಎಂದು ಕಾಲಕಾಲಕ್ಕೆ ಪದೇ ಪದೇ ಪ್ರತಿಪಾದಿಸುತ್ತಲೇ ಬಂದಿದೆ ಎಂಬುದು ಕೂಡ ಸ್ಪಷ್ಟವಾಗಿತ್ತು.
ಇರಾನ್ ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ (NPT) ಸಹಿ ಹಾಕಿದ ದೇಶವಾಗಿತ್ತು. ಇದನ್ನು 1970ರಲ್ಲೇ (ಆಗಿನ ಷಾ ಆಡಳಿತದ ಅಡಿಯಲ್ಲಿ) ಅದು ಅನುಮೋದಿಸಿತ್ತು, ಇದು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಇರಾನ್‌ನ ಇರಾದೆಯನ್ನು ಖಚಿತಪಡಿಸಿತ್ತು. ಷಾ ಆಳ್ವಿಕೆಯ ನಂತರ ಬಂದ ಇಸ್ಲಾಮಿಕ್ ಆಡಳಿತವೂ ಸಹ ತಮಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಆಸಕ್ತಿಯಿಲ್ಲ ಎಂದು ಪುನರುಚ್ಚರಿಸಿತ್ತು. ಟ್ರಂಪ್ ಈ ಕಾರಣಕ್ಕಾಗಿ ಯುದ್ಧವನ್ನು ಪ್ರಾರಂಭಿಸುವ ಅಗತ್ಯವಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
2015ರ ಒಪ್ಪಂದದೊಂದಿಗೆ ಹೋಲಿಕೆ
ಟ್ರಂಪ್ ಅವರ ಒಪ್ಪಂದವು ಬರಾಕ್ ಒಬಾಮಾ ಅವರ ಹಿಂದಿನ ಪರಮಾಣು ಒಪ್ಪಂದಕ್ಕಿಂತ ಸ್ವಲ್ಪ ಭಿನ್ನವಾಗಿದೆ ಎಂದು ಅವರು ಹೇಳಿಕೊಳ್ಳುವ ಒಂದು ಅಂಶವೆಂದರೆ ಪರಿಹಾರದ ವಿಷಯ. ಇದು ಕೂಡ ಅನುಮಾನದಿಂದ ಕೂಡಿದೆ. 2015ರ ಒಪ್ಪಂದದಲ್ಲಿ, ಅಮೆರಿಕವು ಇರಾನ್‌ಗೆ ಸುಮಾರು 300 ಶತಕೋಟಿ ಡಾಲರ್ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು. ಇದು ಇರಾನ್‌ನ ಸ್ವಂತ ಹಣವಾಗಿದ್ದರೂ, ಅದರ ಸ್ಥಗಿತಗೊಂಡ ಆಸ್ತಿಗಳು ಬಿಡುಗಡೆಯಾದಾಗ ಅದು ಲಭ್ಯವಾಗುತ್ತಿತ್ತು. ಆದರೆ, ಟ್ರಂಪ್ ಮತ್ತು ರಿಪಬ್ಲಿಕನ್ನರು ಇದು ಅಮೆರಿಕದ ಖಜಾನೆಯಿಂದಲೇ ಹೋಗುತ್ತಿದೆ ಎಂಬಂತೆ ಬಿಂಬಿಸಿದ್ದರು.
ಪ್ರಸ್ತುತ ಒಡಂಬಡಿಕೆಯಲ್ಲಿ, ಇರಾನ್‌ಗೆ ಸುಮಾರು 300 ಶತಕೋಟಿ ಡಾಲರ್‌ಗಳ ಭರವಸೆಯನ್ನು ಇದೇ ರೀತಿ ನೀಡಲಾಗಿದೆ. ಆದರೆ ಈಗ, ಟ್ರಂಪ್ ಅವರ ತಂಡವು ಇದು ಅಮೆರಿಕದ ಖಜಾನೆಯಿಂದಲ್ಲ, ಬದಲಾಗಿ ಇರಾನ್‌ನ ಸ್ಥಗಿತಗೊಂಡ ಆಸ್ತಿಗಳಿಂದ ಬಂದಿದೆ ಎಂದು ಹೇಳಿಕೊಳ್ಳುತ್ತಿದೆ. ವಾಸ್ತವದಲ್ಲಿ, ಇದು 2015ರ ಒಪ್ಪಂದಕ್ಕಿಂತ ಭಿನ್ನವೇನೂ ಅಲ್ಲ ಅನ್ನುವುದು ಸ್ಪಷ್ಟ.
ಇರಾನ್‌ನ ಸ್ಥಗಿತಗೊಂಡ ಆಸ್ತಿಗಳು ಬಿಡುಗಡೆಯಾದಾಗ ಮತ್ತು ಅದರ ಮೇಲಿರುವ ನಾನಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಿದಾಗ, ಹೆಚ್ಚಿನ ಹಣವು ಇರಾನ್‌ಗೆ ಲಭ್ಯವಾಗುತ್ತದೆ. ಇರಾನ್‌ಗೆ ಹರಿಯುವ ಹಣವು ಅದರ ಸ್ವಂತ ಹಣವಾಗಿರುತ್ತದೆ ಅಥವಾ ಅದರ ನೆರೆಯ ದೇಶಗಳಿಂದ ಬಂದಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಪಾಲಿಗೆ, ಈ ಒಡಂಬಡಿಕೆ ಮತ್ತು ನಂತರದ ಶಾಶ್ವತ ಒಪ್ಪಂದವು ದೇಶದ ಮೇಲೆ ಹೇರಲಾಗಿರುವ ತೀವ್ರವಾದ ನಿರ್ಬಂಧಗಳಿಂದ ಪರಿಹಾರ ಒದಗಿಸಲಿದೆ. ಈ ನಿರ್ಬಂಧಗಳಲ್ಲಿ ಹಲವು ಇರಾನ್‌ನ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿಲ್ಲ ಮತ್ತು ಅವು 1979ರಷ್ಟು ಹಳೆಯದಾಗಿವೆ. 1979ರಲ್ಲಿ ಷಾ ಆಡಳಿತ ಪತನಗೊಂಡ ನಂತರ ಅಲ್ಲಿ ಇಸ್ಲಾಮಿಕ್ ದೇವಪ್ರಭುತ್ವ ಜಾರಿಗೆ ಬಂದಿತು. ಈ ನಿರ್ಬಂಧಗಳಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆ ಹೇರಿದ ಹಲವಾರು ನಿರ್ಬಂಧಗಳು ಸೇರಿವೆ.
ಯುರೇನಿಯಂ ಪುಷ್ಟೀಕರಣದ ವಿಷಯ
ಇನ್ನೊಂದು ಕಠಿಣವಾದ ಸಮಸ್ಯೆಯೆಂದರೆ ಇರಾನ್ ಬಳಿಯಿರುವ ಪುಷ್ಟೀಕರಿಸಿದ ಯುರೇನಿಯಂನ ವಿಷಯ. ಪ್ರಸ್ತುತ ಸ್ಥಿತಿಯ ಪ್ರಕಾರ, ಇರಾನ್ ಅದನ್ನು ಸುಮಾರು 60 ಪ್ರತಿಶತದಷ್ಟು ಪುಷ್ಟೀಕರಿಸಿದೆ. ಪರಮಾಣು ಶಸ್ತ್ರಾಸ್ತ್ರವನ್ನು ತಯಾರಿಸಲು, ಯುರೇನಿಯಂನ್ನು 90 ಪ್ರತಿಶತದಷ್ಟು ಪುಷ್ಟೀಕರಿಸಬೇಕಾದ ಅಗತ್ಯವಿರುತ್ತದೆ. ಈ ಎಂಒಯುನಲ್ಲಿ "ಡೌನ್‌ಬ್ಲೆಂಡಿಂಗ್" ಎಂಬ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ. ಅಂದರೆ, ಯುರೇನಿಯಂನ ಪುಷ್ಟೀಕರಣವನ್ನು ಶಸ್ತ್ರಾಸ್ತ್ರಗಳಲ್ಲಿ ಬಳಸಲು ಸಾಧ್ಯವಾಗದ ಮಟ್ಟಕ್ಕೆ ಕಡಿಮೆ ಮಾಡುವುದು.
ಒಬಾಮಾ ಅವರೊಂದಿಗಿನ ಹಿಂದಿನ ಒಪ್ಪಂದದಲ್ಲಿಯೂ ಕೂಡ, ಇರಾನ್ ಯುರೇನಿಯಂ ಪುಷ್ಟೀಕರಣವನ್ನು 3.67 ಪ್ರತಿಶತಕ್ಕೆ ಮಿತಿಗೊಳಿಸಲು ಒಪ್ಪಿಕೊಂಡಿತ್ತು, ಇದು ಯುರೇನಿಯಂನ್ನು ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಬಳಸುವುದನ್ನು ಖಚಿತಪಡಿಸುತ್ತದೆ. 300 ಟನ್‌ಗಳಿಗಿಂತ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹಿಸದಿರಲು ಕೂಡ ಅದು ಒಪ್ಪಿಕೊಂಡಿತ್ತು.
ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (IAEA) ಸ್ವತಂತ್ರ ಪರಿಶೀಲಕರು ಇರಾನ್‌ನ ಪರಮಾಣು ಸೌಲಭ್ಯಗಳಿಗೆ (ಪುಷ್ಟೀಕರಿಸಿದ ಯುರೇನಿಯಂ ಸೇರಿದಂತೆ) ಮುಕ್ತ ಪ್ರವೇಶವನ್ನು ಹೊಂದಿರುತ್ತಾರೆ, ಇದು ಟೆಹ್ರಾನ್ ತನ್ನ ಬದ್ಧತೆಗೆ ಬದ್ಧವಾಗಿದೆ ಎಂದು ಜಗತ್ತಿಗೆ ಖಚಿತಪಡಿಸುತ್ತದೆ.
ಆದರೆ, 2018ರಲ್ಲಿ ಟ್ರಂಪ್ ಅವರು ಏಕಪಕ್ಷೀಯವಾಗಿ ಆ ಒಪ್ಪಂದವನ್ನು ರದ್ದುಗೊಳಿಸಿದಾಗ, ಇರಾನ್ ಕೂಡ ಒಪ್ಪಂದದ ತನ್ನ ಪಾಲಿನ ಷರತ್ತುಗಳನ್ನು ಪಾಲಿಸದೇ ಇರುವ ನಿರ್ಧಾರಕ್ಕೆ ಬಂದಿತ್ತು. ಅದು ಅಂತರರಾಷ್ಟ್ರೀಯ ಪರಮಾಣು ಪರಿಶೀಲಕರಿಗೆ ನೀಡುತ್ತಿದ್ದ ಪ್ರವೇಶವನ್ನು ನಿರ್ಬಂಧಿಸಿತು ಮತ್ತು ತಡೆಹಿಡಿಯಿತು, ಮತ್ತೆ ಯುರೇನಿಯಂ ಪುಷ್ಟೀಕರಣವನ್ನು ಪುನರಾರಂಭಿಸಿತು ಹಾಗೂ ಪರಮಾಣು ವಸ್ತುಗಳ ಪ್ರಮಾಣವನ್ನು ಸುಮಾರು 440 ಟನ್‌ಗಳಿಗೆ ಹೆಚ್ಚಿಸಿಕೊಂಡಿತು.
ಟ್ರಂಪ್ ಸಹಿ ಹಾಕಿರುವ ಈ ಎಂಒಯು ಅಂತಿಮ ಒಪ್ಪಂದಕ್ಕೆ ಬರುವ ಮೊದಲು ಮುಂದಿನ 60 ದಿನಗಳ ಕಾಲ ಮಾತುಕತೆಗಳು ಹೇಗೆ ನಡೆಯುತ್ತವೆ ಎಂಬುದರ ಆಧಾರದ ಮೇಲೆ, ಹೆಚ್ಚು ಎಂದರೆ ಯಥಾಸ್ಥಿತಿಯ ಮರುಸ್ಥಾಪನೆ ಮಾಡಲಿದೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇರಾನ್‌ನ ಖಂಡಾಂತರ ಕ್ಷಿಪಣಿಗಳ ಬಗ್ಗೆ ಎಂಒಯುನಲ್ಲಿ ಯಾವುದೇ ಉಲ್ಲೇಖ ಮಾಡಲಾಗಿಲ್ಲ. ಇರಾನ್ ತನ್ನ ನೆರೆಹೊರೆಯಲ್ಲಿರುವ ಇಸ್ರೇಲಿ ಮತ್ತು ಅಮೆರಿಕದ ನೆಲೆಗಳನ್ನು ಪ್ರತಿರೋಧಿಸಲು ಮತ್ತು ಅವುಗಳಿಗೆ ಹಾನಿ ಉಂಟುಮಾಡಲು ಈ ಕ್ಷಿಪಣಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು.
ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ ಶಕ್ತಿಯನ್ನು ಕುಂದಿಸಲು ನಿರೀಕ್ಷಿಸಿದ್ದರೆ, ಅದರಲ್ಲಿ ಅವರು ವಿಫಲರಾಗಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
6000 ನಾಗರಿಕರನ್ನು ನುಂಗಿದ ಕದನ
ಇರಾನ್ ತನ್ನ ಪಾಲಿನ ದುಃಖವನ್ನು ಅನುಭವಿಸಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ, ಅದು ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯನ್ನು ಅನುಭವಿಸಿದೆ. ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ, ಹಲವು ಉನ್ನತ ಸೇನಾ ಕಮಾಂಡರ್‌ಗಳು ಮತ್ತು ರಾಜಕೀಯ ನಾಯಕರು ಹತರಾಗಿದ್ದಾರೆ. ಇದರ ಜೊತೆಗೆ, ಅಂದಾಜು 6,000 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇವುಗಳಲ್ಲಿ ಅತಿ ಭೀಕರವೂ ಹೇಯವೂ ಆದುದೆಂದರೆ ಪ್ರಾಥಮಿಕ ಶಾಲೆಯ ಮೇಲೆ ನಡೆದ ಬಾಂಬ್ ದಾಳಿ, ಇದರಲ್ಲಿಸಾವನ್ನಪ್ಪಿದ ಮಕ್ಕಳ ಸಂಖ್ಯೆ ಸುಮಾರು 160.
ಅಮೆರಿಕವು ಇಸ್ರೇಲ್‌ನೊಂದಿಗೆ ಕೈಜೋಡಿಸುವ ಮೂಲಕ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ರಕ್ತಪಾತದಲ್ಲಿ ತೊಡಗಲು ಅವಕಾಶ ಮಾಡಿಕೊಟ್ಟಿತು; ಆದರೆ ಇರಾನ್‌ನ ಸಾಹಸಮಯ ಪ್ರತಿರೋಧ ಮತ್ತು ಪ್ರತಿ-ದಾಳಿಯ ಹೊರತಾಗಿಯೂ ಇಸ್ರೇಲ್‌ನ ಮುಖ್ಯ ಗುರಿಯಾಗಿದ್ದ ಇಸ್ಲಾಮಿಕ್ ಆಡಳಿತವನ್ನು ಕಿತ್ತೊಗೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಸ್ರೇಲ್ ಕೂಡ ಏನನ್ನೂ ಸಾಧಿಸಲಾಗದೇ ಕೈಚೆಲ್ಲಿತು.
ನೆತನ್ಯಾಹು ಅವರು ಇರಾನ್‌ನ ಪರಮಾಣು ಸೌಲಭ್ಯಗಳನ್ನು ನಾಶಪಡಿಸಲು ಮತ್ತು ಅವು ಮತ್ತೆ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸದಂತೆ ತಡೆಯಲು ಕೂಡ ವಿಫಲರಾದರು.
ಒಟ್ಟಾರೆಯಾಗಿ ಹೇಳುವುದಾದರೆ, ಇರಾನ್ ವಿರುದ್ಧದ ಈ ಇಸ್ರೇಲ್-ಅಮೆರಿಕ ಯುದ್ಧವು ಇತಿಹಾಸದಲ್ಲಿ ಅತ್ಯಂತ ಕಳಪೆಯಾಗಿ ಯೋಜಿಸಲಾದ, ಯಾವುದೇ ಪ್ರಚೋದನೆಯಿಲ್ಲದ, ದೂರದೃಷ್ಟಿಯಿಲ್ಲದ ಮತ್ತು ವಿವೇಚನೆಯಿಲ್ಲದ ಯುದ್ಧಗಳಲ್ಲಿ ಒಂದಾಗಿ ದಾಖಲಾಗುತ್ತದೆ; ಇರಾನ್ ಶಾಂತಿಗಾಗಿ ಮಾತುಕತೆ ನಡೆಸುತ್ತಿದ್ದರೂ ಈ ಯುದ್ಧವನ್ನು ಬಲವಂತವಾಗಿ ಹೇರಲಾಯಿತು.
ಟ್ರಂಪ್ ಏನು ಹೇಳಿಕೊಂಡರೂ, ಈಗಿನ ಎಂಒಯು ತೋರಿಸುವಂತೆ, 60 ದಿನಗಳ ನಂತರದ ಅಂತಿಮ ಒಪ್ಪಂದವು, ಅವರ ಹಿಂದಿನ ಅಧ್ಯಕ್ಷ ಒಬಾಮಾ ಅವರು ಸಂಪೂರ್ಣವಾಗಿ ಶಾಂತಿಯುತ ಮಾತುಕತೆಗಳ ಪ್ರಕ್ರಿಯೆಯ ಮೂಲಕ ಸಾಧಿಸಿದ್ದಕ್ಕಿಂತ ಭಿನ್ನವಾಗಿರುವುದಿಲ್ಲ ಎಂಬುದು ಮಾತ್ರ ನೂರಕ್ಕೆ ನೂರು ಸತ್ಯ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

