
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ತನ್ನ ಮೇಲೆ ಎರಗಿ ಬಂದ ಯುದ್ಧದ ಯಾತನೆಯನ್ನು ಇಡೀ ಜಗತ್ತಿಗೆ ಉಣಬಡಿಸಬೇಕು ಎಂದು ಹೊರಟಿದೆ ಇರಾನ್. ಕೊಲ್ಲಿಯ ಇಂಧನ ಮಾರ್ಗಗಳಿಗೆ ಕೊಳ್ಳಿಯಿಡುವ ಅದರ ಉದ್ದೇಶದಿಂದ ಇದು ಸ್ಪಷ್ಟವಾಗುತ್ತಿದೆ.
ಇರಾನ್ ತನ್ನ ಗಡಿಯಾಚೆಗೆ ಪ್ರದರ್ಶಿಸುವ ಸಾಂಪ್ರದಾಯಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಂದಿಸಿಬಿಡಬೇಕು ಎಂಬುದು ಅಮೆರಿಕದ ಗುರಿ. ಆ ಉದ್ದೇಶಕ್ಕೆ ಅನುಗುಣವಾಗಿ ಫೆಬ್ರವರಿ ತಿಂಗಳ ಕೊನೆಯ ದಿನದಿಂದ ಅಮೆರಿಕ ಇರಾನ್ನ ಕ್ಷಿಪಣಿಗಳು, ಡ್ರೋನ್ ಮತ್ತು ಅವುಗಳ ವಾಹಕಗಳನ್ನು ನಾಶ ಮಾಡುತ್ತ ಬಂದಿದೆ. ಅಷ್ಟುಮಾತ್ರವಲ್ಲದೆ ಕ್ಷಿಪಣಿ ಹಾಗೂ ಡ್ರೋನ್ ಉತ್ಪಾದನಾ ಘಟಕಗಳನ್ನು ಕೂಡ ಪುಡಿಗಟ್ಟಿದೆ.
ಒಟ್ಟಾರೆಯಾಗಿ ಇರಾನಿನಲ್ಲಿ 5500ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿಮಾಡಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಅವುಗಳಲ್ಲಿ ನೌಕಾ ಹಡಗುಗಳ ಮೇಲೆ ನಡೆಸಿರುವ ಬಾಂಬ್ ದಾಳಿ ಕೂಡ ಸೇರಿದೆ. ಇಷ್ಟೆಲ್ಲ ದಾಳಿಗಳು ಶತ್ರು ರಾಷ್ಟ್ರಗಳಿಂದ ನಡೆಯುತ್ತಿದ್ದರೂ ಇರಾನ್ ಮಾರ್ಚ್ 12ರಂದು ಇರಾಕ್ನಲ್ಲಿರುವ ಟ್ಯಾಂಕರ್ಗಳು ಮತ್ತು ಓಮನ್, ಯುಎಇ, ಕುವೈತ್, ಬಹ್ರೇನ್ ಹಾಗೂ ಸೌದಿ ಅರೇಬಿಯಾದ ತೈಲ ಸೌಲಭ್ಯಗಳನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ಮತ್ತು ಡ್ರೋನ್ಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿದೆ.
ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುವ ಕಡಲ ಸಂಚಾರಕ್ಕೆ ಸಂಚಕಾರ ತರುವಲ್ಲಿ ಇರಾನ್ ಸಫಲವಾಗಿದೆ. ಈ ಆಯಕಟ್ಟಿನ ಜಲಮಾರ್ಗವು ಅದರ ಕಿರಿದಾದ ಬಿಂದುವಿನಲ್ಲಿ ಕೇವಲ 22 ಮೈಲಿಗಳಷ್ಟು ಅಗಲವಿದೆ. ಅದರ ಪ್ರತಿ ದಿಕ್ಕಿನಲ್ಲಿ ಕೇವಲ ಎರಡು ಮೈಲಿಗಳಷ್ಟು ಮಾರ್ಗವನ್ನು ಮಾತ್ರ ಹಡಗು ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ವಿಶ್ವದ ಸುಮಾರು ಶೇ.20ರಷ್ಟು ತೈಲವು ಈ ಹೊರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ ಮತ್ತು ಈಗ ಅದರ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಇದರ ಪರಿಣಾಮವನ್ನು ಇಡೀ ಜಗತ್ತು ಅನುಭವಿಸುತ್ತಿದೆ. ತೈಲ ಬೆಲೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ ಮತ್ತು ಇನ್ನಷ್ಟು ಏರಿಕೆಯ ದಾರಿಯಲ್ಲಿದೆ. ಕೊಲ್ಲಿ ಅರಬ್ ರಾಷ್ಟ್ರಗಳ ಮೇಲೆ ಇರಾನಿನ ದಾಳಿ ಮತ್ತು ಹೊರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ನೈಸರ್ಗಿಕ ಅನಿಲದ ಉತ್ಪಾದನೆ ಮತ್ತು ಪೂರೈಕೆಯನ್ನು ಕುಂಠಿತಗೊಳಿಸಿದೆ.
ಇಂಧನದ ಹರಿವಿನ ಮೇಲೆ ಇರಾನ್ ಕೈಗೊಂಡಿರುವ ಕ್ರಮಗಳ ಕಾರಣದಿಂದಾಗಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ತಟ್ಟಿದೆ. ಈಗ ಭಾರತದಾದ್ಯಂತ ಅಡುಗೆ ಅನಿಲದ ಕೊರತೆ ಎದುರಿಸುತ್ತಿರುವುದನ್ನು ಕಾಣಬಹುದು.
ಮಾರ್ಚ್ 12ರಂದು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೆ.28ರಂದು ಇಸ್ರೇಲ್ ಜೊತೆಗೂಡಿ ನಡೆಸಿದ ಜಂಟಿ ವೈಮಾನಿಕ ದಾಳಿಯ ಮೊದಲ ಗಂಟೆಯಲ್ಲಿಯೇ ಅಮೆರಿಕ ಯುದ್ಧವನ್ನು ಗೆದ್ದಿದ್ದಾಗಿದೆ ಎಂದು ಹೇಳಿಕೊಂಡಿದ್ದರು. ಗುರಿ ಸಾಧನೆ ಆಗುವ ತನಕವೂ ಈ ಕಾರ್ಯಾಚರಣೆ ಮುಂದುವರಿಯಬೇಕು ಎಂದು ಅವರು ತಿಳಿಸಿದ್ದರು.
ನಂತರ ಪ್ರತ್ಯೇಕವಾಗಿ ಮಾತನಾಡಿದ ಅವರು, ಈ ಯುದ್ಧವನ್ನು ಯಾವಾಗ ಬೇಕಾದರೂ ಕೊನೆಗೊಳಿಸುವ ಸಾಮರ್ಥ್ಯ ತನಗಿದೆ ಮತ್ತು ಅದು ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ ಎಂದೂ ಅವರು ಹೇಳಿದರು. ʼಈ ಸಂಘರ್ಷ ಒಂದು ಸಣ್ಣ ಪ್ರವಾಸ ಅಷ್ಟೇʼ ಎಂದೂ ಅವರು ಹೇಳಿದರು. ಮೊದಲಿನಿಂದಲೂ ಟ್ರಂಪ್ ಹೇಳಿಕೆಯಲ್ಲಿ ಸ್ಥಿರತೆಯನ್ನು ಹೊಂದಿಲ್ಲದೇ ಇರುವುದನ್ನು ಗಮನಿಸಬಹುದು. ತಲ್ಲಣಗೊಂಡಿರುವ ತೈಲ ಮತ್ತು ಷೇರು ಮಾರುಕಟ್ಟೆಗಳನ್ನು ತಹಬಂದಿಗೆ ತರುವ ಉದ್ದೇಶ ಅವರ ಮಾತುಗಳಲ್ಲಿತ್ತು ಎಂಬುದನ್ನು ಗಮನಿಸಬಹುದು.
ಸದ್ಯದ ವಿಚಾರಕ್ಕೆ ಬಂದರೆ, ಸಂಘರ್ಷದ ಬಳಿ ಇರಾನ್ ನಾಯಕ ಯಾರಾಗಬೇಕು ಎಂದು ನಿರ್ಧಾರ ಕೈಗೊಳ್ಳುವ ಅಥವಾ ತಮಗೆ ಒಪ್ಪಿಗೆಯಾಗುವ ನಾಯಕನನ್ನು ಇರಾನಿನವರು ಘೋಷಿಸುತ್ತಾರೆ ಎಂಬ ನಿರೀಕ್ಷೆ ಟ್ರಂಪ್ ಅವರಿಗಿತ್ತು. ಅದನ್ನೀಗ ಅವರು ಕೈಬಿಟ್ಟಂತೆ ಕಾಣುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ತಮ್ಮ ವೈಮಾನಿಕ ದಾಳಿಯ ಆರಂಭದಲ್ಲಿಯೇ ಇರಾನಿನ ಸುಪ್ರೀಂ ನಾಯಕ ಅಯತೊಲ್ಲ ಅಲಿ ಖಮೇನಿ ಮತ್ತು ಅಲ್ಲಿನ ಉನ್ನತಮಟ್ಟದ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ಆದರೆ ಖಮೇನಿ ಅವರ ಪುತ್ರ ಅಯತೊಲ್ಲ ಮೊಜ್ತಾಬಾ ಖಮೇನಿಯನ್ನು ಉತ್ತರಾಧಿಕಾರಿ ಎಂದು ಅಲ್ಲಿನ ಪರಿಣತ ಮಂಡಳಿ ಆಯ್ಕೆ ಮಾಡಿತು. ಇದರಿಂದ ದೊಡ್ಡ ನಿರಾಶೆಯಾಗಿದ್ದು ಟ್ರಂಪ್ ಅವರಿಗೆ.
ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ನಡೆಯುತ್ತಿರುವ ಯುದ್ಧದಲ್ಲಿ ಅದನ್ನೊಂದು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಮೊಜ್ತಾಬಾ ಖಮೇನಿ ಹೇಳಿದ್ದಾರೆ. ಇದಲ್ಲದೆ, ಇರಾನ್ ತನ್ನ ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ. ದೇಶದ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ನಂತರ ನೀಡಿದ ತಮ್ಮ ಮೊದಲ ಹೇಳಿಕೆಯಲ್ಲಿ, ಇರಾನಿನ ಶಾಲೆಯ ಮೇಲೆ ನಡೆಸಿದ ದಾಳಿಯೂ ಸೇರಿದಂತೆ ಈ ಯುದ್ಧದಲ್ಲಿ ಹತರಾದವರ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಮೊಜ್ತಾಬಾ ಪ್ರತಿಜ್ಞೆ ಮಾಡಿದ್ದಾರೆ.
ತೀವ್ರಗೊಂಡ ಪ್ರಾದೇಶಿಕ ಸಂಘರ್ಷ
ಇರಾನ್ನಲ್ಲಿ ಅಲ್ಪಸಂಖ್ಯಾತರು ಮತ್ತು 'ವಿಲಾಯತ್-ಎ-ಫಕೀಹ್' ವಿರೋಧಿ ಅಂಶಗಳು ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತವೆ ಎಂದು ಟ್ರಂಪ್ ಆಶಿಸಿದ್ದರು. ಆದರೆ ಅವರ ಈ ಆಸೆಗಳು ಇದುವರೆಗೆ ಈಡೇರಿಲ್ಲ. ದೇಶದ ಭದ್ರತಾ ವ್ಯವಸ್ಥೆಯು ಅಂತಹ ವಿರೋಧಿ ಅಂಶಗಳನ್ನು ಮೌನವಾಗಿಸಿದೆ. ಇದರೊಂದಿಗೆ ಇರಾನ್ನ ಸಹಜ ರಾಷ್ಟ್ರೀಯತೆಯೂ ಪ್ರಬಲವಾಗಿದೆ ಮತ್ತು ಅದು ಪ್ರಸ್ತುತ ಮಹತ್ವದ ಪಾತ್ರ ವಹಿಸುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ನ ತಂತ್ರವೆಂದರೆ ಸಂಘರ್ಷದ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಅದನ್ನು ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳಿಗೆ ಹಾಗೂ ಆ ನೆಲೆಗಳಿಗೆ ಆಶ್ರಯ ನೀಡುವ ದೇಶಗಳಿಗೆ ಕೊಂಡೊಯ್ಯುವುದಾಗಿದೆ. ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವ 'ವಿಲಾಯತ್-ಎ-ಫಕೀಹ್' ಈಗ ಆಕ್ರಮಣಕಾರಿ ಹಾದಿ ಹಿಡಿದಿದೆ. ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ದೊಡ್ಡ ತಪ್ಪು ಮಾಡಿದೆ ಎಂದು ಟ್ರಂಪ್ ಭಾವಿಸಿರಬಹುದು, ಆದರೆ ಇದು ಇರಾನ್ ನಡೆಸುತ್ತಿರುವ ಕಾರ್ಯತಂತ್ರದಲ್ಲಿ ಮುಖ್ಯವಾದುದು.
ಏಕೆಂದರೆ, 37 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದ ಸರ್ವೋಚ್ಚ ನಾಯಕ ಮತ್ತು ಇರಾನ್ನ ಅನೇಕ ಸಂಸ್ಥೆಗಳ ಮುಖ್ಯಸ್ಥರ ಹತ್ಯೆಯ ಹೊರತಾಗಿಯೂ ಈ ಯೋಜನೆಯು ಜಾರಿಗೆ ಬಂದಿದೆ. ಒಂದು ದೇಶದಲ್ಲಿ ಅಸ್ತವ್ಯಸ್ತ ವ್ಯವಸ್ಥೆಯಿದ್ದರೆ ಸಂಘರ್ಷವನ್ನು ವಿದೇಶಗಳಿಗೆ ಅಥವಾ ಇರಾನ್ನ ಗಲ್ಫ್ ಕಡಲ ನೆರೆಹೊರೆಯವರಿಗೆ ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
ಇರಾನ್ ಕೈಗೊಂಡಿರುವ ಈ ನಿರ್ಧಾರದ ಸಾರಾಂಶವೇನೆಂದರೆ, ಕೇವಲ ಗಲ್ಫ್ ರಾಷ್ಟ್ರಗಳು ಮತ್ತು ಈ ಪ್ರದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಆರ್ಥಿಕ ಸಂಕಷ್ಟವನ್ನು ಉಂಟುಮಾಡುವುದು. ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಇರಾನ್ ನೀಡುತ್ತಿರುವ ಪ್ರತ್ಯುತ್ತರದಿಂದಾಗಿ ಪ್ರಪಂಚದ ಬಹುಭಾಗ ತೊಂದರೆ ಅನುಭವಿಸುವಂತಾಗಿದೆ. ಇದು ಇರಾನ್ನ ಕಾರ್ಯತಂತ್ರದ ಬಗ್ಗೆ ಜಗತ್ತು ನಕಾರಾತ್ಮಕವಾಗಿ ನೋಡುವಂತೆ ಮಾಡಬಹುದು, ಆದರೆ ಶಿಯಾ ರಾಷ್ಟ್ರವಾದ ಇರಾನ್ ಈ ಪರಿಣಾಮಗಳನ್ನು ಎದುರಿಸಲು ಸಿದ್ಧವಿರುವುದು ಸ್ಪಷ್ಟ.
ಇರಾನ್ನ ಈ ತಂತ್ರದ ಪರಿಣಾಮವಾಗಿ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ತಲ್ಲಣ ಉಂಟಾಗಿರುವುದು ನಿಚ್ಚಳವಾಗಿ ಕಾಣುತ್ತಿದೆ. ಸಂಘರ್ಷ ಇದೇ ರೀತಿ ಮುಂದುವರಿಯುತ್ತ ಹೋದಂತೆ ಇದು ಮತ್ತಷ್ಟು ತೀವ್ರಗೊಳ್ಳಲಿದೆ. ಆದ್ದರಿಂದ, ಈ ಯುದ್ಧವು ಆದಷ್ಟು ಬೇಗ ಕೊನೆಗೊಳ್ಳುವುದು ಇಡೀ ವಿಶ್ವದ ಹಿತದೃಷ್ಟಿಯಿಂದ ಅಗತ್ಯವಾಗಿದೆ. ಆದರೆ ಇದು ಶೀಘ್ರದಲ್ಲಿ ಕೊನೆಗೊಳ್ಳುವ ಸಾಧ್ಯತೆಗಳು ಎಷ್ಟಿವೆ?
ಯುದ್ಧದ ಗುರಿಗಳ ಕುರಿತ ಚರ್ಚೆ
ತಮ್ಮ ಮೂಲಭೂತ ಗುರಿಗಳನ್ನು ಸಾಧಿಸಲಾಗಿದೆ ಎಂದು ಟ್ರಂಪ್ ಪ್ರತಿಪಾದಿಸುತ್ತಿದ್ದಾರೆ. ಪ್ರಸ್ತುತ, ವಿದೇಶಗಳ ಮೇಲೆ ದಾಳಿ ಮಾಡುವ ಇರಾನ್ನ ಸಾಮರ್ಥ್ಯವು ಕಡಿಮೆಯಾಗಿದೆಯೇ ಹೊರತು ಸಂಪೂರ್ಣವಾಗಿ ನಾಶವಾಗಿಲ್ಲ. ಇದು ಮಾರ್ಚ್ 12ರ ಘಟನೆಗಳಿಂದ ಸಾಬೀತಾಗಿದೆ. ಅಮೆರಿಕವು ಮೈನ್-ಲೇಯರ್ಗಳು ಸೇರಿದಂತೆ ಇರಾನ್ನ ಹೆಚ್ಚಿನ ಸಂಖ್ಯೆಯ ನೌಕಾ ಹಡಗುಗಳನ್ನು ನಾಶಪಡಿಸಿದೆ. ಆದಾಗ್ಯೂ, ಹೊರ್ಮುಜ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಪಡಿಸಲು ಇರಾನ್ ಸಣ್ಣ ನಾಗರಿಕ ಹಡಗುಗಳನ್ನು ಸಹ ಬಳಸಬಹುದು. ಇವುಗಳನ್ನು ಕೇವಲ ವೈಮಾನಿಕ ದಾಳಿಯ ಮೂಲಕ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸುಲಭವಲ್ಲ.
ಕಳೆದ ವರ್ಷಇರಾನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಅದರ ಪರಮಾಣು ಕಾರ್ಯಕ್ರಮದ ಸಾಮರ್ಥ್ಯವು ತೀವ್ರವಾಗಿ ಕುಂಠಿತಗೊಂಡಿತ್ತು. ವರದಿಗಳ ಪ್ರಕಾರ, ಈ ಬಾರಿಯೂ ಎರಡೂ ದೇಶಗಳು 'ನಟಾಂಜ್' ಪರಮಾಣು ಘಟಕದ ಮೇಲೆ ಬಾಂಬ್ ದಾಳಿ ನಡೆಸಿವೆ. ಮಾರ್ಚ್ 9ರ ಪತ್ರಿಕಾಗೋಷ್ಠಿಯಲ್ಲಿ ಇರಾನ್ನ ಪರಮಾಣು ಸಾಮರ್ಥ್ಯದ ಬಗ್ಗೆ ಟ್ರಂಪ್ ಹೀಗೆ ಹೇಳಿದ್ದರು: "2015ರಲ್ಲಿ ನಾನು ಮೊದಲ ಬಾರಿಗೆ ರಾಜಕೀಯಕ್ಕೆ ಬಂದಾಗಲೇ ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುತ್ತೇನೆ ಎಂದು ಹೇಳಿದ್ದೆ. ನಾನು ಕೇವಲ ನನ್ನ ಮಾತನ್ನು ಉಳಿಸಿಕೊಳ್ಳುತ್ತಿದ್ದೇನೆ. ಅದು ಆಗಲೂ ಬೆದರಿಕೆಯಾಗಿತ್ತು, ಈಗ ಇನ್ನೂ ದೊಡ್ಡ ಬೆದರಿಕೆಯಾಗಿದೆ. ಆದರೆ ಇನ್ನು ಮುಂದೆ ಅದು ಬೆದರಿಕೆಯಾಗಿ ಉಳಿಯುವುದಿಲ್ಲ."
ಜಾಗತಿಕ ಅರ್ಥ ವ್ಯವಸ್ಥೆಗೆ ಪರೀಕ್ಷೆ
ಹೊರ್ಮುಜ ಜಲಸಂಧಿ ಮುಚ್ಚಿರುವುದರಿಂದ ಅಮೆರಿಕದ ಆರ್ಥಿಕತೆಯು ಅದರ ಪರಿಣಾಮಗಳನ್ನು ಎದುರಿಸುತ್ತಿದೆ. ಅಮೆರಿಕದಲ್ಲಿ ಸಾಕಷ್ಟು ಇಂಧನ ಲಭ್ಯವಿದ್ದರೂ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಇದು ಮಧ್ಯಂತರ ಚುನಾವಣಾ ವರ್ಷವಾಗಿರುವುದರಿಂದ, ಟ್ರಂಪ್ ಅಥವಾ ರಿಪಬ್ಲಿಕನ್ ಪಕ್ಷವು ಹಣದುಬ್ಬರವನ್ನು ಬಯಸುವುದಿಲ್ಲ. ಗಲ್ಫ್ ತೈಲದ ಮೇಲೆ ಅವಲಂಬಿತವಾಗಿರುವ ಅಮೆರಿಕದ ಮಿತ್ರ ರಾಷ್ಟ್ರಗಳಿಗೂ ತೈಲ ಲಭ್ಯತೆ ಕಡಿಮೆಯಾಗಿರುವುದನ್ನು ಟ್ರಂಪ್ ಗಮನಿಸಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯನ್ನು ಸಮಾಧಾನಪಡಿಸಲು, ಪಾಶ್ಚಿಮಾತ್ಯ ದೇಶಗಳ ಸಂಘಟನೆಯಾದ 'ಅಂತರಾಷ್ಟ್ರೀಯ ಇಂಧನ ಸಂಸ್ಥೆ' 400 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಮಾರುಕಟ್ಟೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಟ್ರಂಪ್ ಈ ವಿಷಯದಲ್ಲಿ ಒತ್ತಡದಲ್ಲಿದ್ದಾರೆ.
ಈಗ ಇರುವ ಮುಖ್ಯ ಪ್ರಶ್ನೆಯೆಂದರೆ, ಟ್ರಂಪ್ ಯುದ್ಧದ ಜಯವನ್ನು ಘೋಷಿಸಿ ಇರಾನ್ ವಿರುದ್ಧದ ವೈಮಾನಿಕ ಕಾರ್ಯಾಚರಣೆಯನ್ನು ನಿಲ್ಲಿಸುತ್ತಾರೆಯೇ ಎಂಬುದು. ಅವರು ಇಸ್ರೇಲ್ ಕೂಡ ಹಾಗೆಯೇ ಮಾಡುವಂತೆ ಒತ್ತಾಯಿಸಬಹುದು. ಒಂದು ವೇಳೆ ಹಾಗಾದಲ್ಲಿ ಇರಾನ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ? ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮಾರ್ಚ್ 11 ರ ರಾತ್ರಿ ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ: "ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡುವಾಗ, ಈ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡುವ ಇರಾನ್ನ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ. ಝಿಯೋನಿಸ್ಟ್ ಆಡಳಿತ ಮತ್ತು ಅಮೆರಿಕ ಹೊತ್ತಿಸಿರುವ ಈ ಯುದ್ಧವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗವೆಂದರೆ ಇರಾನ್ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ನಷ್ಟ ಪರಿಹಾರ ನೀಡುವುದು ಮತ್ತು ಭವಿಷ್ಯದ ಆಕ್ರಮಣಗಳ ವಿರುದ್ಧ ಅಂತರಾಷ್ಟ್ರೀಯ ಖಾತರಿ ನೀಡುವುದು."
ಅಮೆರಿಕ ಮತ್ತು ಇಸ್ರೇಲ್ ಇದಕ್ಕೆ ಒಪ್ಪುವುದು ಅಸಂಭವ. ಆದರೂ, ಇದು ಮಾತುಕತೆಗೆ ಮತ್ತು ಯುದ್ಧದ ನಿಲ್ಲುವುದಕ್ಕೆ ದಾರಿ ಮಾಡಿಕೊಡುತ್ತದೆಯೇ? ಈ ಪ್ರಶ್ನೆಗೆ ಉತ್ತರ ಮುಂದಿನ ಕೆಲವು ದಿನಗಳ ವಿದ್ಯಮಾನಗಳೇ ನೀಡಲಿವೆ.

