
ಪಶ್ಚಿಮ ಬಂಗಾಳ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಹೋಳು ಹೋಳಾಗಿದೆ. ಆದರೆ ಅದರ ಧುರೀಣರಾದ ಮಮತಾ ಬ್ಯಾನರ್ಜಿ ಮೌನಕ್ಕೆ ಶರಣಾಗಿರುವುದು ಗೊಂದಲ ಮೂಡಿಸಿದೆ.
ಇಲ್ಲೊಂದು ಆಂತರಿಕ ದಂಗೆ ಭುಗಿಲೆದ್ದಿದೆ. ಅದು ತೃಣಮೂಲ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಂಡಾಯ. ಇದರಿಂದಾಗಿ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯ 80 ಮಂದಿ ನೂತನ ಶಾಸಕರು ಹಾಗೂ ಲೋಕಸಭೆಯ 29 ಮಂದಿ ಸಂಸದರ ನಡುವೆ ನಡೆಯುತ್ತಿರುವ ಆಂತರಿಕ ದಂಗೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.
ಕೊಲ್ಕತ್ತಾ ಮತ್ತು ನವದೆಹಲಿ ಎರಡೂ ಕಡೆಗಳಲ್ಲಿ ಇರುವ ಬಣಗಳ ನಡುವೆ ಕಂಡುಬಂದಿರುವ ಒಂದೇ ಒಂದು ಸಾಮ್ಯತೆ ಎಂದರೆ ಉಭಯ ಬಣಗಳೂ ಬಹುಪಾಲು ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿಕೊಂಡಿರುವುದು. ಅಷ್ಟೇ ಅಲ್ಲದೆ ಆಯಾ ಶಾಸಕಾಂಗ ಸಂಸ್ಥೆಗಳ ಸ್ಪೀಕರ್‌ಗಳಿಂದ ಅಧಿಕೃತ ಮನ್ನಣೆ ಪಡೆಯಲು ಹೊರಟಿರುವುದೇ ತಾವು ಪಕ್ಷದ ನಿಜವಾದ ಪ್ರತಿನಿಧಿಗಳು ಎಂಬುದಕ್ಕೆ ಸಾಕ್ಷಿ ಎಂದು ಈ ಬಣಗಳು ನಂಬಿಕೊಂಡಿವೆ.
ಸ್ಪೀಕರ್ ಅಂಗಳದಲ್ಲಿ ಚೆಂಡು
ಹಾಗಿದ್ದೂ ಇಲ್ಲಿ ಎರಡು ಬಹುಮುಖ್ಯ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಲೋಕಸಭೆಯ ಬಂಡುಕೋರರಿಗೆ ಇದುವರೆಗೆ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಂದ ಯಾವುದೇ ಅಧಿಕೃತ ಮನ್ನಣೆ ದೊರೆತಿಲ್ಲ. ಮೇ ಎಂಟರಂದೇ 19-20 ಸಂಸದರ ಸಹಿಗಳೊಂದಿಗೆ ಲೋಕಸಭಾ ಸ್ಪೀಕರ್ ಅವರ ಕಚೇರಿಗೆ ಪತ್ರ ಸಲ್ಲಿಸಲಾಗಿದೆ ಎಂದು ಬಂಡಾಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರು ಹೇಳಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಆ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಲಾಗಿರಲೇ ಇಲ್ಲ. ಟಿಎಂಸಿ ಸಂಸದೀಯ ಪಕ್ಷವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ದಂಗೆಯಲ್ಲಿ ಆಕೆಯ ಜೊತೆಗೆ ಕೈಜೋಡಿಸಿರುವ ಬಂಡಾಯಗಾರರ ಸಹಿ ಇರುವ ಪತ್ರವನ್ನು ಸ್ಪೀಕರ್ ಬಿರ್ಲಾ ಅವರಿಗೆ ಒಪ್ಪಿಸಲು ಜೂನ್ 15ರಂದು ದಿನಾಂಕ ನಿಗದಿ ಮಾಡಿರುವುದಾಗಿ ತಿಳಿದುಬಂದಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಆಸನಗಳಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೇಳಿದ್ದಾಗಿ ಘೋಷ್ ದಸ್ತಿದಾರ್ ಬಣವು ಈ ಮೊದಲು ಹೇಳಿಕೊಂಡಿತ್ತು. ಆದರೆ ಈಗ ಆ ಬಣವು ತನ್ನ ನಿಲುವನ್ನು ಬದಲಿಸಿದೆ. ಅದರ ಸದಸ್ಯರು ಪಕ್ಷೇತರರಾಗಿ ಕಾರ್ಯನಿರ್ವಹಿಸುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭೆಯಲ್ಲಿದೆ. ಅಲ್ಲಿ 60ಕ್ಕೂ ಅಧಿಕ ಬಂಡುಕೋರ ಶಾಸಕರು ತಮ್ಮನ್ನು ಬಿಜೆಪಿ ಸರ್ಕಾರದ ವಿರೋಧಪಕ್ಷವೆಂದು ಘೋಷಿಸಿಕೊಂಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಹೊಸಬರಾಗಿರುವ ಋತಬ್ರತ ಬ್ಯಾನರ್ಜಿ ಅವರನ್ನು ಸ್ಪೀಕರ್ ರವೀಂದ್ರ ಬಸು ಅವರು ವಿರೋಧ ಪಕ್ಷದ ನಾಯಕ ಎಂಬುದಾಗಿ ಮಾನ್ಯ ಮಾಡಿದ್ದಾರೆ.
ಈ ಬೆಳವಣಿಗೆಯ ಅಸಲಿ ಅರ್ಥವೇನೆಂದರೆ ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿರುವ ತೃಣಮೂಲ ಕಾಂಗ್ರೆಸ್ಸಿನಿಂದ ವಿರೋಧಪಕ್ಷದ ನಾಯಕರನ್ನಾಗಿ ಹೆಸರಿಸಲಾಗಿದ್ದ ಸೋವನ್‌ದೇವ್ ಚಟ್ಟೋಪಾಧ್ಯಾಯ ಅವರು ಆ ಸ್ಥಾನಕ್ಕೆ ಕಾನೂನುಬದ್ಧ ಹಕ್ಕುದಾರರಲ್ಲ ಎಂಬುದು. ಬಸು ಅವರಿಗೆ ಸಲ್ಲಿಸಲಾಗಿರುವ ನಿರ್ಣಯದಲ್ಲಿ ಟಿಎಂಸಿ ಶಾಸಕರ ಸಹಿಯನ್ನು ನಕಲಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನಾಮನಿರ್ದೇಶನ ಮಾಡಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂಬ ವಿಷಯವು ಈಗ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ಸಹಿ ಮತ್ತು ಪತ್ರಗಳ ಸುತ್ತಲಿನ ಈ ನಿಗೂಢತೆಯಿಂದಾಗಿ ಯಾವ ಶಾಸಕರ ಬಣವು ತೃಣಮೂಲ ಕಾಂಗ್ರೆಸ್‌ನ್ನು ನಿಜವಾಗಿ ಪ್ರತಿನಿಧಿಸುತ್ತದೆ ಎಂಬ ವಿಷಯದಲ್ಲಿ ದೊಡ್ಡ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಗೊಂದಲವು ತೃಣಮೂಲ ಕಾಂಗ್ರೆಸ್‌ನೊಳಗಿನ ಅಸ್ಥಿರತೆಯನ್ನು ಎತ್ತಿ ತೋರಿಸುತ್ತಿದೆ. ಭವಾನಿಪುರ ಕ್ಷೇತ್ರದಿಂದ ತಮ್ಮ ವೈಯಕ್ತಿಕ ಸೋಲು ಮತ್ತು ಪಕ್ಷದ ಒಟ್ಟಾರೆ ಸೋಲಿನ ನಂತರ, ಮಮತಾ ಬ್ಯಾನರ್ಜಿ ಅವರು ಇನ್ನು ಮುಂದೆ ನಾಯಕಿಯಾಗಿ ಉಳಿದಿಲ್ಲ ಎಂಬ ಅಭಿಪ್ರಾಯವನ್ನು ಕೂಡ ಇದು ಘಂಟಾಘೋಷವಾಗಿ ಹೇಳುತ್ತಿದೆ.
ರಾಜಕೀಯ ಪಕ್ಷಗಳ ಅಸ್ತಿತ್ವದ ಪ್ರಶ್ನೆ
ಒಂದು ರಾಜಕೀಯ ಪಕ್ಷವನ್ನು ಅದರ ಶಾಸಕಾಂಗ ಅಥವಾ ಸಂಸದೀಯ ಪ್ರತಿನಿಧಿಗಳಿಗೆ ಮಾತ್ರ ಸೀಮಿತಗೊಳಿಸುವುದು ಅಸಂಬದ್ಧವಾಗಿದೆ. ಒಂದು ವೇಳೆ ಹಾಗೆಯೇ ಆಗಿದ್ದರೆ, 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲದಿದ್ದಾಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಅದರ ಎಡರಂಗದ ಮಿತ್ರಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿವೆ ಅಥವಾ ಕಣ್ಮರೆಯಾಗಿ ಹೋಗಿವೆ ಎಂದೇ ಭಾವಿಸಬೇಕಿತ್ತು. ಸಿಪಿಐ(ಎಂ) ವಿಷಯವನ್ನೇ ಪರಿಗಣಿಸುವುದಾದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಅದು ಒಂದೇ ಒಂದು ಸ್ಥಾನವನ್ನೂ ಗೆಲ್ಲದೇ ಇರುವ ಕಾರಣಕ್ಕೆ, ಆ ಪಕ್ಷದ ಅಸ್ತಿತ್ವೇ ಮುಗಿದುಹೋಗಿದೆ ಎಂದು ಪರಿಗಣಿಸಬೇಕಾಗುತ್ತಿತ್ತು.
ಹಾಗಂತ ಸದ್ಯದ ಹೊತ್ತಿನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ ಎಂದು ವಾದಿಸಲು ಸಾಧ್ಯವಿಲ್ಲ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರ ವಿರುದ್ಧ 'ಶೂನ್ಯ ಎಫ್‌ಐಆರ್' ದಾಖಲಾಗಿದೆ ಮತ್ತು ಮತದಾನೋತ್ತರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.
ಅವರು 'ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಿಯನ್ಸ್' (INDIA ಮೈತ್ರಿಕೂಟ) ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳಿದ್ದಾಗ, ಅವರ ನಿವಾಸ ಮತ್ತು ಪಕ್ಷದ ಕಚೇರಿಯ ಮೇಲೆ ರಾಜ್ಯದ ಅಪರಾಧ ತನಿಖಾ ದಳ ದಾಳಿ ನಡೆಸಿರುವ ಬೆಳವಣಿಗೆ ಗಮನಾರ್ಹ.
ಕೋಲ್ಕತ್ತಾ ಮಹಾನಗರ ಪಾಲಿಕೆಯ ಕೌನ್ಸಿಲರ್‌ಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ಅಪರಾಧಗಳ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಅಥವಾ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಮತಾ ಅವರ ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಹ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ನಡೆಸಿದೆ. ಡೈಮಂಡ್ ಹಾರ್ಬರ್ ಸಂಸದೀಯ ಕ್ಷೇತ್ರದ ಬಿಜೆಪಿ ನಾಯಕ ಅಭಿಜಿತ್ ದಾಸ್ (ಅಲಿಯಾಸ್ ಬಾಬಿ) ನೀಡಿದ ದೂರಿನ ಮೇರೆಗೆ, 2018ರ ಹಳೆಯ ಹಲ್ಲೆ ಪ್ರಕರಣಕ್ಕೆ ಮತ್ತೆ ಜೀವ ನೀಡಲಾಗಿದೆ. ಈ ಹಳೆಯ ಪ್ರಕರಣಕ್ಕೆ ಮತ್ತೆ ಚಾಲನೆ ನೀಡಿರುವುದು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿ ಅನುಸರಿಸಿದ 'ನ್ಯಾಷನಲ್ ಹೆರಾಲ್ಡ್' ಪ್ರಕರಣಗಳ ಕಾರ್ಯತಂತ್ರವನ್ನೇ ನೆನಪಿಸುತ್ತಿದೆ.
ಅಸ್ತವ್ಯಸ್ತವಾದ ಅಧಿಕಾರ ಹಸ್ತಾಂತರ
ಸ್ಥಳೀಯ ಬಿಜೆಪಿ ನಾಯಕರು ನೇತೃತ್ವ ವಹಿಸುತ್ತಿರುವ 'ಕ್ಯಾಂಗರೂ ನ್ಯಾಯಾಲಯಗಳು' (ಅಧಿಕೃತವಲ್ಲದ ನ್ಯಾಯಾಲಯಗಳು), ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಪಂಚಾಯಿತಿ ಪದಾಧಿಕಾರಿಗಳು ಮತ್ತು ಮಾಜಿ ಶಾಸಕರನ್ನು ಗುರಿಯಾಗಿ ಮಾಡಿಕೊಂಡಿವೆ. ತಾಡಪತ್ರಿ, ಬಕೆಟ್ ಮತ್ತು ಬಟ್ಟೆಗಳಂತಹ ಸರ್ಕಾರಿ ಆಸ್ತಿಯನ್ನು ಕದ್ದಿದ್ದಾರೆ ಎಂದು ಆರೋಪಿಸಿ ಅವರನ್ನು ಅಣಕಿಸುತ್ತಾ ಅವರ ಮೇಲೆ ಮೊಟ್ಟೆಗಳನ್ನು ಎಸೆಯಲಾಗುತ್ತಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಅಡಗಿಸಿಟ್ಟಿದ್ದ ನಗದು ರಾಶಿಯನ್ನು ಪತ್ತೆಹಚ್ಚುತ್ತಿರುವ ಗುಂಪುಗಳು, ಆ ಹಣವನ್ನು ಎಣಿಸಿ, ಅದನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ 'ಫಲಾನುಭವಿಗಳಿಗೆ' ಹಂಚುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಹೇಳಿಕೊಳ್ಳುತ್ತಿರುವ ಸುವೇಂದು ಅಧಿಕಾರಿ ಅವರ ಸರ್ಕಾರವು ಈ ಘಟನೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಮಾಧ್ಯಮಗಳಲ್ಲಿ ಈ ವಿಷಯ ವ್ಯಾಪಕವಾಗಿ ವರದಿಯಾಗುತ್ತಿದ್ದರೂ, ಇಂತಹ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗೆ ಅರಿವಿಲ್ಲವೇ ಅಥವಾ ಅವರು ವಾಸ್ತವವನ್ನು ಒಪ್ಪಿಕೊಳ್ಳುವ ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದಾರೆಯೇ ಎಂಬುದು ಒಗಟಾಗಿದೆ.
ಇವೆಲ್ಲವೂ ಆಡಳಿತ ಬದಲಾವಣೆಯ ನಂತರ ಅಸ್ತವ್ಯಸ್ತಗೊಂಡಿರುವ ಪರಿಸ್ಥಿತಿಗೆ ಸಾಕ್ಷಿಯಾಗಿವೆ. ಸುಗಮ ಮತ್ತು ವ್ಯವಸ್ಥಿತವಾದ ಸರ್ಕಾರ ಬದಲಾವಣೆಯು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಲೋಕಸಭೆ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಯಾವುದು ನಿಜವಾದ ತೃಣಮೂಲ ಕಾಂಗ್ರೆಸ್ ಎಂಬ ಗೊಂದಲವು, ಮಮತಾ ಬ್ಯಾನರ್ಜಿ ಅವರ ಪತನದ ನಂತರ ಉಂಟಾಗಿರುವ ಅರಾಜಕತೆಯ ಮತ್ತೊಂದು ಅಭಿವ್ಯಕ್ತಿಯಾಗಿದೆ.
ವಿಧಾನಸಭೆಯಲ್ಲಿ ನಡೆದ ನಕಲಿ ಸಹಿ ವಿವಾದವು ಅಭಿಷೇಕ್ ಬ್ಯಾನರ್ಜಿ ಅವರ ಕೆಲಸವೇ ಆಗಿದ್ದರೂ ಕೂಡ ಅದು ಮಮತಾ ಬ್ಯಾನರ್ಜಿ ಅವರ ಜವಾಬ್ದಾರಿಯಾಗಿದೆ. ಉಳಿದ ವಿಷಯಗಳು, ಅಂದರೆ ನವದೆಹಲಿಯ ಬಂಡಾಯಗಾರರು ಎನ್‌ಡಿಎ ಭಾಗವಾಗಿದ್ದಾರೋ ಅಥವಾ ಸ್ವತಂತ್ರವಾಗಿದ್ದಾರೋ, ಅಥವಾ ಕೋಲ್ಕತ್ತಾದ ಬಂಡಾಯಗಾರರು ವಿರೋಧ ಪಕ್ಷದಲ್ಲಿದ್ದಾರೋ ಅಥವಾ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೋ ಎಂಬುದು ಬೇರೆ ವಿಷಯ, ಮತ್ತು ಅದು ಅವರ ನೇರ ಜವಾಬ್ದಾರಿಯಲ್ಲ.
ಈಗಿರುವ ಪರಿಸ್ಥಿತಿಯು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಆರೋಗ್ಯವಂತ ಪ್ರಜಾಪ್ರಭುತ್ವದಲ್ಲಿ, ಆಡಳಿತ ಪಕ್ಷದ ಪ್ರತಿಯೊಂದು ಲೋಪದೋಷಗಳನ್ನೂ ಟೀಕಿಸುವ ಮೂಲಕ ಅದನ್ನು ಹೊಣೆಗಾರರನ್ನಾಗಿ ಮಾಡುವ ವಿರೋಧ ಪಕ್ಷವೊಂದು ಇರುವುದು ಅಗತ್ಯವಲ್ಲವೇ? ಸದ್ಯದ ಮಟ್ಟಿಗೆ ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ನೋಡಿದರೆ, ತೃಣಮೂಲ ಕಾಂಗ್ರೆಸ್‌ನ ಒಂದು ಭಾಗವು ತಾವು ನಿಷ್ಠೆಯನ್ನು ಬದಲಿಸಿ ಬಿಜೆಪಿಯೊಂದಿಗೆ ಕೈಜೋಡಿಸಿರುವುದನ್ನು ಒಪ್ಪಿಕೊಳ್ಳಲು ಮುಜುಗರಪಡುತ್ತಿದ್ದರೆ, ಇನ್ನೊಂದು ಭಾಗವು ಸಂಕಷ್ಟದಲ್ಲಿದೆ. ಪಕ್ಷದ ಸ್ಥಾಪಕರು ಮತ್ತು ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಅವರು ಇನ್ನೂ ತಮ್ಮ ಮುಂದಿನ ನಡೆ ನಿರ್ಧರಿಸುವ ಬಗ್ಗೆ ಗೊಂದಲದಲ್ಲಿದ್ದಾರೆ.
ಸದ್ಯ ಮಮತಾ ಬ್ಯಾನರ್ಜಿ ಅವರ ನಿಷ್ಕ್ರಿಯತೆಗೆ ಒಂದು ಕಾರಣವೆಂದರೆ, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರಂತಹ ನಿಷ್ಠಾವಂತರಿಂದಲೇ ತಮಗೆ ಒತ್ತಡವಿರುವಾಗ, ಅಭಿಷೇಕ್ ಬ್ಯಾನರ್ಜಿಯಂತಹ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲದಲ್ಲಿ ಅವರು ಸಿಲುಕಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿತ್ತು, ಆದರೆ ಈಗ ಅದೇ ಹುದ್ದೆಯನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಘೋಷ್ ದಸ್ತಿದಾರ್ ಅವರಿಂದ ದೀದಿಗೆ ನಿಜವಾದ ಸವಾಲು ಎದುರಾಗಿದೆ. ಮಮತಾ ಅವರ ಈ ನಿಷ್ಕ್ರಿಯತೆಯು ಅವರ ಬೆಂಬಲಿಗರು, ಅಭಿಮಾನಿಗಳು ಮತ್ತು ಬಿಜೆಪಿಯನ್ನು ವಿರೋಧಿಸುವ ಲಕ್ಷಾಂತರ ಮತದಾರರಲ್ಲಿ ಅಸ್ಥಿರತೆಗೂ, ಗೊಂದಲಕ್ಕೂ ಕಾರಣವಾಗಿದೆ.
ಸಿಎಂ ಸುವೇಂದು ಅಧಿಕಾರಿ ಮತ್ತು ಪ್ರಧಾನಿ ಮೋದಿ ಅವರ 'ಡಬಲ್ ಇಂಜಿನ್' ಆಡಳಿತವನ್ನು ಎದುರಿಸಲು ವಿರೋಧ ಪಕ್ಷದ ನಾಯಕಿಯಾಗಿ ವಿಧಾನಸಭೆ ಅಥವಾ ಸಂಸತ್ತನ್ನು ಬಳಸಿಕೊಳ್ಳಲು ಮಮತಾ ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರಿಗೆ ಉಳಿದಿರುವ ಏಕೈಕ ವೇದಿಕೆ ಎಂದರೆ ಪಶ್ಚಿಮ ಬಂಗಾಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬೀದಿಗಳು.
ಹುತಾತ್ಮರ ದಿನದ ಮೆರವಣಿಗೆ
1993ರಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ 13 ಜನರ ಸ್ಮರಣಾರ್ಥ ಮಮತಾ ಬ್ಯಾನರ್ಜಿ ಅವರು 'ಹುತಾತ್ಮರ ದಿನ'ವಾದ ಜುಲೈ 21ರಂದು ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಇದು ಸಾರ್ವಜನಿಕವಾಗಿ ಮತ್ತೆ ಕಾಣಿಸಿಕೊಳ್ಳಲು ಅವರಿಗೆ ಸಿಗುವ ಒಂದು ಉತ್ತಮ ಅವಕಾಶ. ಈ ಷಹೀದ್ ದಿವಸ್ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಇಲ್ಲಿ ಎರಡು ಸಾಧ್ಯತೆಗಳಿವೆ: ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಬಾರದು ಎಂಬ ನ್ಯಾಯಾಲಯದ ಆದೇಶವನ್ನು ನೆಪವಾಗಿಟ್ಟುಕೊಂಡು ಮಮತಾ ಮತ್ತು ಕಾಂಗ್ರೆಸ್‌ಗೆ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಬಹುದು, ಅಥವಾ ಅವರಿಗೆ ತಮ್ಮ ಶಕ್ತಿ ಮತ್ತು ಜನಬೆಂಬಲವನ್ನು ಪ್ರದರ್ಶಿಸಲು ಅವಕಾಶ ನೀಡಲೂಬಹುದು.
ಒಂದು ವೇಳೆ ಸುವೇಂದು ಅಧಿಕಾರಿ ಅವರು ಬಿಜೆಪಿ ಹಾದಿಯಲ್ಲೇ ಸಾಗಿದರೆ, ಕೆಲಸದ ದಿನದಂದು ರಸ್ತೆ ತಡೆ ಉಂಟುಮಾಡುವ ಮಮತಾ ಅವರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಸಾಧ್ಯತೆಯೇ ಹೆಚ್ಚು. ಜಿಲ್ಲೆಗಳಿಂದ ಬರುವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಭೆಗೆ ಬರದಂತೆ ತಡೆಯಬಹುದು. ಅಥವಾ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮಾಡಿದಂತೆ, ಪ್ರತಿಭಟನಾಕಾರರ ಮೇಲೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪ ಹೊರಿಸಿ, ದಂಡ ವಿಧಿಸಿ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮಗಳನ್ನು ಕೂಡ ಕೈಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇದು ಶಾಸಕಾಂಗ ಮತ್ತು ಸಂಸದೀಯ ಬಂಡಾಯಗಾರರಿಗೆ ಒಂದು ಇಕ್ಕಟ್ಟನ್ನು ಉಂಟುಮಾಡುತ್ತದೆ, ಏಕೆಂದರೆ ಇದು ತಾವೇ "ನಿಜವಾದ" ತೃಣಮೂಲ ಕಾಂಗ್ರೆಸ್ ಎಂಬ ಅವರ ಪ್ರತಿಪಾದನೆಗೆ ಸವಾಲೊಡ್ಡುತ್ತದೆ. ಜುಲೈ 21ರ ಹುತಾತ್ಮರ ದಿನವು ಸಾಂಕೇತಿಕ ಮೌಲ್ಯವನ್ನು ಹೊಂದಿದೆ. ಆದ್ದರಿಂದ, ಈ ಅನಿಶ್ಚಿತ ಕಾಲದಲ್ಲಿ ಮಮತಾ ಮತ್ತು ಅವರ ನಾಯಕತ್ವದ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಸವಾಲಿಗೆ ಒಡ್ಡಲಿದೆ.
ಯಾವುದೇ ಸನ್ನಿವೇಶ ಉದ್ಭವಿಸಿದರೂ, ಅದು ಮಮತಾ ಅವರಿಗೆ ತಮ್ಮ 'ಸ್ಟ್ರೀಟ್ ಫೈಟರ್' (ಹೋರಾಟಗಾರ್ತಿ) ವ್ಯಕ್ತಿತ್ವಕ್ಕೆ ಮರಳಲು ಅವಕಾಶವನ್ನು ಒದಗಿಸಲಿದೆ. ಯಾವುದೇ ರೀತಿಯ ಗೊಂದಲವು ವಿರೋಧ ಪಕ್ಷಗಳು ಬೀದಿಗಿಳಿಯಲು ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯಬೇಕಾದ ರಾಜಕೀಯ ಚಟುವಟಿಕೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಒಮ್ಮೆ ಪರಿಸ್ಥಿತಿ ತಿಳಿಯಾದರೆ, ಅದು ಮಮತಾ ಮತ್ತು ಸಿಪಿಐ(ಎಂ), ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯುಲರ್ ಫ್ರಂಟ್ ಒಳಗೊಂಡ ಸಂಯುಕ್ತ ವಿರೋಧ ಪಕ್ಷಕ್ಕೆ ದೊಡ್ಡ ಪರೀಕ್ಷೆಯಾಗುವುದು ಮಾತ್ರ ನಿಶ್ಚಿತ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


