
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಮೂಲಕ ಸಿಜೆಪಿಗೆ ನೈತಿಕ ವಿಜಯ ಸಂದಿದೆ. ಮೋದಿ ಅವರಂತಹ ವ್ಯಕ್ತಿತ್ವವನ್ನು ಕೂಡ ಪಟ್ಟುಬಿಡದ ಪ್ರತಿಭಟನೆಯಿಂದ ಸೋಲಿಸಲು ಸಾಧ್ಯ ಎಂದು ಸಾಬೀತಾಗಿದೆ.
ಜುಲೈ 25ರ ಶನಿವಾರ ಮಧ್ಯಾಹ್ನ ಸರಿಸುಮಾರು ಎರಡು ಗಂಟೆಯ ಬಳಿಕ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರದ ಮಾಜಿ ಶಿಕ್ಷಣ ಸಚಿವರಾದರು. ಇಂತಹ ನಿರ್ಧಾರವನ್ನು ಬಹುಶಃ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ. ಸಾರ್ವಜನಿಕ ಒತ್ತಡ ನಿರಂತರವಾದರೆ, ಪ್ರತಿಭಟನೆ ಅನೂಚಾನಾಗಿ ನಡೆಯುತ್ತಲೇ ಇದ್ದರೆ ಎಂತಹ ಸರ್ವಾಧಿಕಾರಿಯೂ ಕೂಡ ತಲೆಬಾಗಲೇಬೇಕು ಎಂಬುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಾಗಿಲ್ಲ.
ಅವರೂ ಹಲವು ವಾರಗಳ ಕಾಲ ಪ್ರತಿರೋಧ ಒಡ್ಡಿದರು. ಆದರೆ ಅದ್ಯಾವುದೂ ಪರಿಣಾಮ ಬೀರುತ್ತಿಲ್ಲ ಎಂಬುದು ಅವರಿಗೆ ಅರಿವಾಗಿತ್ತು. ತಮ್ಮ ಧೋರಣೆ ಕೆಲಸಕ್ಕೆ ಬರುತ್ತಿಲ್ಲ, ಬದಲಾಗಿ ತಿರುಗುಬಾಣವಾಗುತ್ತಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆಯಾಗಿತ್ತು. ಅತ್ಯಂತ ಸ್ಪಷ್ಟವಾಗಿ ಅವರ ಸಾರ್ವಜನಿಕ ಇಮೇಜ್‌ಗೆ ಧಕ್ಕೆಯಾಗಿತ್ತು. ʼಬ್ರಾಂಡ್ ಮೋದಿʼಗೆ ಭಾರೀ ಪೆಟ್ಟು ಬಿದ್ದಿತ್ತು. ಪ್ರತಿ ನಿಮಿಷಕ್ಕೂ ಅವರ ಜನಪ್ರಿಯತೆ ಕುಸಿಯುತ್ತ ಸಾಗಿತ್ತು.
ಸೋಲೊಪ್ಪಿಕೊಂಡ ಪ್ರಧಾನಿ
ಪ್ರಧಾನಿ ಪಟ್ಟವನ್ನು ಏರಿದ ತಮ್ಮ ಹನ್ನೆರಡು ವರುಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ಸಾರ್ವಜನಿಕ ಒತ್ತಡ ಮತ್ತು ಜನರ ಆಂದೋಲನಗಳಿಗೆ ತಲೆಬಾಗಿದ ಸಂದರ್ಭಗಳು ಕೆಲವೇ ಕೆಲವು. ಅವೆಲ್ಲವೂ ಲೆಕ್ಕಾಚಾರದಿಂದ ಕೂಡಿದ್ದಾಗಿತ್ತು ಮತ್ತು ಅವರೇ ಆಯ್ಕೆಮಾಡಿಕೊಂಡ ಸಮಯದಲ್ಲಿ ಆಗಿದ್ದವು. ಆದರೆ ಈ ಬಾರಿಯ ಪರಿಸ್ಥಿತಿ ಎಲ್ಲಕ್ಕೂ ವ್ಯತಿರಿಕ್ತವಾಗಿತ್ತು. ಹದಿನೈದರಿಂದ ಮುವತ್ತು ವರ್ಷ ವಯಸ್ಸಿನ ಯುವಜನರ ಗುಂಪು ಮೋದಿ ಅವರ ಕಲ್ಪನೆಗೆ ಮಾತ್ರ ಬೆದರಿಕೆ ಒಡ್ಡಲಿಲ್ಲ ಬದಲಾಗಿ ಪ್ರಧಾನಿಯವರ ಆರಾಧನಾ ವ್ಯಕ್ತಿತ್ವದ ಮೇಲೆ, ಅವರು ಗಟ್ಟಿಯಾಗಿ ಕಾಯ್ದಿಟ್ಟುಕೊಂಡು ಬಂದ ಇಮೇಜ್ ಮೇಲೆ ನಿರಂತರವಾಗಿ ದಾಳಿ ಮಾಡಿದರು.
ಹಾಗಂತ ಮೋದಿ ಅವರಿಗೆ ಎದುರಾಗಿರುವ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾಗಿಲ್ಲ. ಆದರೆ ದೆಹಲಿಯ ಜಂತರ್ ಮಂತರ್ ಹಾಗೂ ಒಂದು ವರದಿಯ ಪ್ರಕಾರ ಭಾರತದ ಸುಮಾರು ನೂರು ನಗರಗಳಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಮನೆಗೆ ಮರಳಿರುವುದು ಸದ್ಯ ಅವರಿಗೆ ದೊಡ್ಡ ನಿರಾಳಭಾವ ಮೂಡಿಸಿದ್ದರೆ ಅನುಮಾನವಿಲ್ಲ. ಮನೆಗೆ ಮರಳಿರುವವರು ವಿಜಯದ ಹೆಮ್ಮೆಯಿಂದ ಬೀಗಿದ್ದಾರೆ. ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಇತ್ತ ಮೋದಿ ಅವರು ಇನ್ನು ಮುಂದೆ ಹಾಗೂ ಬಹಳ ದೀರ್ಘಕಾಲದ ವರೆಗೆ ವಿರೋಧಿಗಳ ಜೊತೆ ವ್ಯವಹರಿಸುವಾಗ ತಮ್ಮ ಸಹಜವಾದ ಅತಿ ಉತ್ಸಾಹ ಹಾಗೂ ವ್ಯಂಗ್ಯವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ.
“ಇದು ಮೊದಲ ವಿಕೆಟ್. ನಮ್ಮ ಹೋರಾಟ ಇಲ್ಲಿಗೇ ವಿರಮಿಸುವುದಿಲ್ಲ. ಇದು ಕೇವಲ ಆರಂಭ.” ಎಂದಿದ್ದಾರೆ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ. ಈ ಮಾತುಗಳನ್ನು ಕೂಡ ಮೋದಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
ಬಲಿಷ್ಠ ನಾಯಕನ ಪತನ
ಪರಿಸ್ಥಿತಿ ಹೀಗಿದ್ದರೂ ಕೂಡ ಈ ಸುತ್ತಿನಲ್ಲಿ ಮೋದಿ ಅವರ ಸೋಲು ಈ ಘಟನೆಗೆ ಮಾತ್ರ ಸೀಮಿತಗೊಂಡಿದೆ ಎಂದು ಸುತಾರಾಮ್ ಹೇಳಲು ಸಾಧ್ಯವೇ ಇಲ್ಲ. ಇದರ ಪ್ರಭಾವವೇನಿದ್ದರೂ ಇನ್ನಷ್ಟು ವ್ಯಾಪ್ತಿಯನ್ನು ದಾಟಿ ಮುಂದಕ್ಕೆ ಸಾಗಲಿದೆ ಎಂಬುದು ಮಾತ್ರ ದಿಟ. ಪ್ರಧಾನ್ ಅವರ ರಾಜೀನಾಮೆ ಸುದ್ದಿ ಪ್ರಕಟವಾಗುತ್ತಲೇ ಒಂದು ದಶಕಕ್ಕೂ ಅಧಿಕ ಕಾಲ ಕ್ರೌರ್ಯಕ್ಕೆ ಒಳಗಾಗಿದ್ದ ಭಾರತದಲ್ಲಿ ಪ್ರಜಾಪ್ರಭುತ್ವದ ಹೊಸ ಬೆಳಗು ಮೂಡಿದೆ ಎಂಬುದು ಸ್ಪಷ್ಟವಾಗಿದೆ. ನಿರಂತರ ಸಾರ್ವಜನಿಕ ಒತ್ತಡ ಹಾಗೂ ಅಹಿಂಸಾತ್ಮಕ ಪ್ರತಿಭಟನೆಗಳು ನಡೆದರೆ ಮೋದಿ ಅವರಂತಹ ಪ್ರಧಾನಿಯೂ ತಲೆತಗ್ಗಿಸಬೇಕಾಗುತ್ತದೆ ಎಂಬುದಕ್ಕೆ ಪ್ರಧಾನ್ ಅವರ ರಾಜೀನಾಮೆಗಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ.
ಮೋದಿ ಅವರು ಯಾವತ್ತು ತಮ್ಮನ್ನು ತಾವು ಬಲಿಷ್ಠ ನಾಯಕ ಎಂದು ಬಿಂಬಿಸಿಕೊಂಡರೋ ಅಂದಿನಿಂದಲೇ ಅವರ ʼಬಲಿಷ್ಠʼ ರಾಜಕಾರಣ ಸಾರ್ವಜನಿಕ ಒತ್ತಡಕ್ಕೆ ಬಗ್ಗುವುದಿಲ್ಲ ಎಂಬ ಮುನ್ಸೂಚನೆ ಕೂಡ ದೊರೆತಿತ್ತು. ಒತ್ತಡವೇನಾದರೂ ಎದುರಾದರೆ ಪ್ರತಿಭಟನಾಕಾರರ ಜೊತೆ ಚರ್ಚೆ ನಡೆಸದೇ ಇರುವುದೇ ಮೋದಿ ಅವರ ಸಾಮಾನ್ಯ ಪ್ರತಿಕ್ರಿಯೆಯಾಗಿತ್ತು. ಅದು ಎಲ್ಲರಿಗೂ ತಿಳಿದ ಸಂಗತಿಯೇ. ಯಾವತ್ತೆಂದರೆ ಯಾವತ್ತೂ ತಮ್ಮ ನಿರ್ಧಾರವೇ ಅಂತಿಮ ಎನ್ನುವ ʼ56 ಇಂಚಿನ ಎದೆಯʼ ನಾಯಕನೆಂಬ ತಮ್ಮ ಬೆಂಬಲಿಗರ ಕಲ್ಪನೆಯನ್ನು ಬಿಂಬಿಸಲು ಅವರು ಯಾವತ್ತೂ ಬಯಸುತ್ತಿದ್ದರು. ಆದರೆ ಅವರು ಯಾವತ್ತು ಸಾಮಾಜಿಕ ಮಾಧ್ಯಮದ ಯುದ್ಧಕ್ಕೆ ಅಡಿಪಾಯ ಹಾಕಿದರೋ ಅಂದಿನಿಂದ ಅವರು ಟೀಕೆ ಮತ್ತು ಆಕ್ರೋಶಗಳನ್ನು ಸ್ವೀಕರಿಸುವ ನಾಯಕರಾಗಿ ಬದಲಾದರು.
ಜುಲೈ 20 ರಂದು, ದೆಹಲಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದಾಗ, ಅಶ್ರುವಾಯು ಗುಂಡುಗಳನ್ನು ಹಾರಿಸಿದಾಗ ಮತ್ತು ಇನ್ನೂ ತರಾವರಿ ದೌರ್ಜನ್ಯಗಳನ್ನು ಎಸಗಿದಾಗ, ಪ್ರಧಾನ್ ಅವರ ರಾಜೀನಾಮೆಯನ್ನು ಒಪ್ಪಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರ ಇಮೇಜ್‌ಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂದೇ ತೋರುತ್ತಿತ್ತು.
ಹೋರಾಟ ಮುಂದುವರಿಸೀತೇ ಸಿಜೆಪಿ?
ಪ್ರಧಾನ್ ಅವರ ರಾಜೀನಾಮೆಗಾಗಿ ಸಿಜೆಪಿಯ ಪ್ರಮುಖ ಬೇಡಿಕೆಯನ್ನು ಅಂತಿಮವಾಗಿ ಒಪ್ಪಿಕೊಳ್ಳುವ ಮೋದಿ ಸರ್ಕಾರದ ನಿರ್ಧಾರವು ಆ ಸಂಘಟನೆಗೆ ರಾಜಕೀಯ ಮಾನ್ಯತೆಯ ರಕ್ಷಣಾ ಕವಚವನ್ನೂ ಒದಗಿಸುತ್ತದೆ. ಪ್ರಧಾನ್ ಅವರನ್ನು ಕೈಬಿಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದು ಮೋದಿ ಸರ್ಕಾರಕ್ಕೆ ಮನವರಿಕೆಯಾದ ಕಾರಣ ಹೊಸ ಚೈತನ್ಯ ಪಡೆದಿರುವ ಸಿಜೆಪಿ, ಈಗ ದೊಡ್ಡ ಕನಸು ಕಾಣಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿರುವ ಅತ್ಯಂತ ಮೂಲಭೂತ ವಿಷಯಗಳನ್ನು ಪ್ರಸ್ತಾಪಿಸಲು ಧೈರ್ಯ ದಕ್ಕಿಸಿಕೊಂಡಂತಾಗಿದೆ. ಇವು 2014 ರಿಂದ ಶಿಕ್ಷಣಕ್ಕಾಗಿ ಬಜೆಟ್ ಹಂಚಿಕೆಯಲ್ಲಿನ ತೀವ್ರ ಕಡಿತದಿಂದ ಹಿಡಿದು, ಕುಲಪತಿಗಳು, ನಿರ್ದೇಶಕರು ಮತ್ತು ಅಧಿಕಾರ ಸ್ಥಾನಗಳಲ್ಲಿರುವ ಇತರ ವ್ಯಕ್ತಿಗಳು ಸಾಬೀತುಪಡಿಸಿದಂತೆ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ವ್ಯವಸ್ಥಿತ ನಿಯಂತ್ರಣದವರೆಗೆ, ಹಿಂದುತ್ವ ಬ್ರಿಗೇಡ್ನ ರಾಜಕೀಯ ನಂಬಿಕೆಗಳನ್ನು ಬಿಂಬಿಸುವ ಸಲುವಾಗಿ ಪಠ್ಯಕ್ರಮದಲ್ಲಿ ಇನ್ನಷ್ಟು ಪ್ರಭಾವಶಾಲಿ ಬದಲಾವಣೆಗಳನ್ನು ಮಾಡುವವರೆಗೆ ವಿಸ್ತರಿಸಬಹುದು.
ಇತ್ತೀಚಿನ ವಿಜಯದಿಂದ ಉತ್ಸಾಹಗೊಂಡು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿರುವ ಸಿಜೆಪಿ ಅಥವಾ ಇತರ ವಿರೋಧ ಪಕ್ಷಗಳು, ಮೋದಿಯವರ ಆಡಳಿತದಲ್ಲಿ ಶಿಕ್ಷಣ ವಲಯದಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮರುಪರಿಶೀಲನೆ ನಡೆಸುತ್ತವೆಯೇ ಎಂಬುದು ಪ್ರಮುಖ ಪ್ರಶ್ನೆ. ಮೋದಿಗೆ ಇರುವ ಸಮಸ್ಯೆಯೇನೆಂದರೆ, ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಭಾರತದಲ್ಲಿ ಪ್ರತಿಭಟನೆಯ ರೋಮ್ಯಾನ್ಸ್ ಮತ್ತು ಶಬ್ದಕೋಶ ಮರಳಿ ಬಂದಿದೆ.
ಮೋದಿ ಆರಾಧನೆಗೆ ಭಾರೀ ಪೆಟ್ಟು
ಕಳೆದ ಅನೇಕ ವರ್ಷಗಳಿಂದ ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದ್ದ ಮೋದಿಯವರ ಇಮೇಜ್ ಮತ್ತು ಆರಾಧನಾ ವ್ಯಕ್ತಿತ್ವಕ್ಕೆ ಪ್ರಧಾನ್ ಅವರ ರಾಜೀನಾಮೆ ಗಂಭೀರ ಹಾನಿ ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ, ಹಿಂದೆಂದೂ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿದ್ದ ರೀತಿಯಲ್ಲಿ ಮೋದಿಯನ್ನು ಅಪಹಾಸ್ಯ ಮಾಡುವ ಮತ್ತು ಹೀಯಾಳಿಸುವ ವೀಡಿಯೊಗಳು ಹಾಗೂ ಮೀಮ್‌ಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿಹೋಗಿವೆ.
ಇಲ್ಲಿಂದ ಮುಂದೆ, ಮೋದಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಅವರು ಪ್ರತಿಭಟನಾಕಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಮಾತ್ರವಲ್ಲದೆ, ಅವರು ಮನೆಗೆ ಮರಳುವಂತೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ವಿಜೇತರ ಆತ್ಮವಿಶ್ವಾಸ, ಅಪಹಾಸ್ಯ ಮತ್ತು ಆಕ್ರೋಶವನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ವಿರೋಧ ಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ಕೂಡ ಮತ್ತೊಮ್ಮೆ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿವೆ. ಸಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರ ಸಂಭಾವ್ಯ ರಾಜಕೀಯ ಮಹತ್ವಾಕಾಂಕ್ಷೆಗಳು ಭವಿಷ್ಯದ ರಾಜಕೀಯ ಮತ್ತು ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಕಾಲವು ಸರಿಯುತ್ತದೆ. ರಾಜಕೀಯ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಹಾಗೂ ಸರ್ಕಾರವು ಸಂಸತ್ತಿನಲ್ಲಿ ತನ್ನ ಶಾಸಕಾಂಗ ಕಲಾಪವನ್ನು ಮರಳಿ ಆರಂಭಿಸುತ್ತದೆ. ಆಗ ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭೆ ಹಾಗೂ ರಾಜ್ಯಗಳ ಶಾಸಕಾಂಗಗಳ ವಿಸ್ತರಣೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳಿಗೆ ಸಂಸತ್ತಿನ ಬೆಂಬಲವನ್ನು ಮತ್ತೊಮ್ಮೆ ಪಡೆದುಕೊಳ್ಳುವ ಮೋದಿ ಅವರ ಸಂಭಾವ್ಯ ಉದ್ದೇಶಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ.
ಅವರು ಮುಂದೆಂದೂ ಇಂತಹ ರಾಜಕೀಯ ಅವಮಾನಗಳನ್ನು ಎದುರಿಸಬೇಕಾಗಿಲ್ಲ ಎಂಬ ಅಂಶವನ್ನು ಪರಿಗಣಿಸಿದ್ದೇ ಆದರೆ ವಿರೋಧ ಪಕ್ಷಗಳನ್ನು ಹಿಂದಿನಂತೆ ಮಟ್ಟಹಾಕಲು ಬೇಕಾದ ಮುಷ್ಟಿ ಬಲವನ್ನು ಮತ್ತೆ ಸಂಪಾದಿಸುವ ಸಾಮರ್ಥ್ಯದ ಕಡೆಗೆ ಯಾವ ರೀತಿ ಗಮನ ಹರಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆದರೆ ಅವರ ಅಧಿಕಾರ ಅವಧಿಯ ಉಳಿದ ಭಾಗ ಅಷ್ಟು ಸುಲಭವಾಗಿ ಸಾಗುವುದು ಕಷ್ಟ. ಮೋದಿ ಅವರಿಗೆ ಹಿಂದೆ ರಾಜಕೀಯ ಎನ್ನುವುದು ಸಲೀಸು ಹಾದಿಯಾಗಿತ್ತು. ಮುಂದೆ ಪ್ರತಿಯೊಂದೂ ಅಗ್ನಿಪರೀಕ್ಷೆ. ಹೆಚ್ಚು ಹೆಚ್ಚು ಪೈಪೋಟಿದಾಯಕ. ಮುಂಬರುವ ತಿಂಗಳುಗಳಲ್ಲಿ ಅವರು ತುರ್ತಾಗಿ ಗಮನಹರಿಸಬೇಕಾದ ಸಂಗತಿಗಳು ಒಂದೆರಡಲ್ಲ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


