KS Dakshina Murthy

ಶಾಂತಿ ಮಂತ್ರ, ಯುದ್ಧ ತಂತ್ರ: ಇರಾನ್ ವಿರುದ್ಧ ಕಪಟ ನಾಟಕದ ಸೂತ್ರಧಾರ ಟ್ರಂಪ್ ಇಬ್ಬಂದಿ ನೀತಿ


ಶಾಂತಿ ಮಂತ್ರ, ಯುದ್ಧ ತಂತ್ರ: ಇರಾನ್ ವಿರುದ್ಧ ಕಪಟ ನಾಟಕದ ಸೂತ್ರಧಾರ ಟ್ರಂಪ್ ಇಬ್ಬಂದಿ ನೀತಿ
x
ಇರಾನ್ ತನ್ನ ಪರಮಾಣು ಯೋಜನೆ ಕೈಬಿಡಬೇಕು ಎಂದು ಟ್ರಂಪ್ ಬೊಬ್ಬೆ ಹಾಕುತ್ತಿರಬಹುದು, ಆದರೆ ಜಪಾನ್ನ ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಅಣುಬಾಂಬ್ ಹಾಕಿದ್ದು ತನ್ನದೇ ದೇಶ ಎಂಬುದನ್ನು ಅವರು ಯಾವ ಕಾರಣಕ್ಕೂ ಮರೆಯುವಂತಿಲ್ಲ.
Click the Play button to hear this message in audio format

ಯಹೂದಿ-ಕ್ರಿಶ್ಚಿಯನ್ ವಿಶ್ವದೃಷ್ಟಿಕೋನಕ್ಕಿಂತ ಭಿನ್ನವಾದ ಪ್ರತಿಯೊಂದರ ಮೇಲಿನ ಸಹಜವಾದ ಅಪನಂಬಿಕೆ ಹಾಗೂ ಹಗೆತನದ ಹೊರತಾಗಿ ಇರಾನ್ ದೇಶವನ್ನು ಕಂಡು ಭಯಪಡಲು ಯಾವ ಮೂಲಭೂತ ಆಧಾರಗಳು ಕಾಣುತ್ತಿಲ್ಲ.

ಅಲ್ಲಿ ಅಡ್ಡಿಯಾಗಿರುವುದು ಒಂದೇ ಒಂದು ʼಅಣು.ʼ ಅದು ಪರಮಾಣು. ಇರಾನ್ ಮತ್ತು ಅದಕ್ಕೆ ಸವಾಲೊಡ್ಡಿ ನಿಂತಿರುವ ಅಮೆರಿಕ ಮತ್ತು ಇಸ್ರೇಲ್ ನಡುವಿನ ಶಾಂತಿ ಒಪ್ಪಂದಕ್ಕೆ ಅಡ್ಡಿಯಾಗಿ ನಿಂತಿರುವುದು ಅದೊಂದೇ.

ಇರಾನ್ ತನ್ನ ಪರಮಾಣು ಯೋಜನೆಯನ್ನು ಶತಾಯಗತಾಯ ಕೈಬಿಡಬೇಕು ಮತ್ತು ತನ್ನ ಬಳಿ ಇರುವ 440 ಕಿಲೋಗ್ರಾಮ್ಗಳಷ್ಟು ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರ ಮಾಡಬೇಕು. ಆಗ ಮಾತ್ರ ಯುದ್ಧ ಮುಗಿಯಲು ಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಲೆಚಿಟ್ಟು ಹಿಡಿದುಹೋಗುವಷ್ಟು ಬಾರಿ ಹೇಳಿದ್ದಾರೆ ಮತ್ತು ಹೇಳುತ್ತಲೇ ಇದ್ದಾರೆ. ಆದರೆ ಅದನ್ನು ಇರಾನ್ ಅತ್ಯಂತ ದೃಢವಾಗಿ ನಿರಾಕರಿಸುತ್ತ ಬಂದಿದೆ.

ಹಾಗಾದರೆ ಇರಾನ್ ಪರಮಾಣು ಯೋಜನೆಗೆ ಅಂಟಿಕೊಂಡಿರುವುದು ನ್ಯಾಯಸಮ್ಮತವೇ? ಅಥವಾ ಅದೇ ಪ್ರಶ್ನೆಯನ್ನು ಉಲ್ಟಾ ಮಾಡಿ ಇರಾನ್ ಯಾಕೆ ಪರಮಾಣು ಸಾಮರ್ಥ್ಯ ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು? ಮತ್ತು ಇರಾನ್ ಯಾಕೆ ಪರಮಾಣು ಶಕ್ತಿ ಆಗಬಾರದು? ಹಾಗೆ ಒತ್ತಾಯ ಮಾಡಲು ಅಮೆರಿಕ ಮತ್ತು ಇಸ್ರೇಲ್ಗೆ ಯಾವ ಹಕ್ಕಿದೆ? ಎಂದು ಯಾಕೆ ಕೇಳಬಾರದು?

ಇರಾನ್ ತನ್ನ ಪರಮಾಣು ಸಾಮರ್ಥ್ಯವನ್ನು ಬಳಿಸಿಕೊಂಡು ಇತರ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ಮಾಡಲು ಶುರುವಿಟ್ಟುಕೊಳ್ಳುತ್ತದೆ ಎಂಬ ಕಾರಣಕ್ಕಾಗಿಯೇ? ಇರಾನ್ ಒಂದು ಯುದ್ಧ ಹಸಿವಿನ ರಾಷ್ಟ್ರ ಎಂಬುದಕ್ಕೆ ಅಥವಾ ಆ ಸರ್ಕಾರದ ಕೈಯಲ್ಲಿ ಪರಮಾಣು ಅಸ್ತ್ರವಿದ್ದರೆ ಅದು ಇಡೀ ಜಗತ್ತಿಗೆ ಅಪಾಯವನ್ನು ತಂದೊಡ್ಡುತ್ತದೆ ಎಂಬುದಕ್ಕೆ ಏನಾದರೂ ಸೂಚನೆಗಳಿವೆಯೇ? ಆ ನಿಟ್ಟಿನಲ್ಲಿ ಯಾವ ಪುರಾವೆ ಕೂಡ ಇಲ್ಲ.

ಯಾವ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂಬ ನಿಲುವನ್ನು ಬೆಂಬಲಿಸುವವರು ಮಂಡಿಸುವ ವಾದಗಳಲ್ಲಿ—ಹಿಜ್ಬೊಲ್ಲಾ, ಹಮಾಸ್, ಹೌತಿಗಳು ಮತ್ತು ಹಿಂದಿನ ಬಶರ್ ಅಲ್-ಅಸ್ಸಾದ್ ನೇತೃತ್ವದ ಸಿರಿಯಾಕ್ಕೆ ಇರಾನ್ ನೀಡುತ್ತಿರುವ ಬೆಂಬಲವೂ ಸೇರಿದೆ. ಇಸ್ರೇಲ್ ಮುಂಚೂಣಿಯಲ್ಲಿಟ್ಟು ಮಂಡಿಸುತ್ತಿರುವ ವಾದದ ಪ್ರಕಾರ, ಈ ಮೈತ್ರಿಕೂಟವೇ ಇರಾನ್ನ್ನು ಒಂದು ದೊಡ್ಡ ಆಪತ್ತಿನ ಕೇಂದ್ರಬಿಂದುವಾಗಿ ಮಾಡಿದೆ.

ಪ್ಯಾಲೇಸ್ತೀನ್ ಭೂಪ್ರದೇಶದ ಮೇಲಿನ ಇಸ್ರೇಲಿ ಆಕ್ರಮಣದ ವಿರುದ್ಧದ ಪ್ರತಿರೋಧವೇ ಈ ಮೈತ್ರಿಕೂಟ ಎಂದು ಇರಾನ್ ಸಮರ್ಥಿಸಿಕೊಳ್ಳುತ್ತದೆ. ಅಲ್ಲದೆ, ತನ್ನ ಮೈತ್ರಿಯು ಇಸ್ರೇಲ್ ಮತ್ತು ಅಮೆರಿಕ ನಡುವೆ ಇರುವ ಮೈತ್ರಿಗಿಂತ ಭಿನ್ನವೇನೂ ಅಲ್ಲ ಎಂದೂ ಅದು ಹೇಳುತ್ತದೆ.

ಇಸ್ರೇಲ್ಗಿರುವ ಅಭದ್ರತೆ

ವರ್ಷಗಳಿಂದಲೂ ಪಾಶ್ಚಾತ್ಯ ಮಾಧ್ಯಮಗಳು ಬಿಂಬಿಸುತ್ತಿರುವ ಪ್ರಬಲ ನಿರೂಪಣೆಯು, ಇರಾನ್ ಈ ವಲಯದಲ್ಲಿ ಮೈತ್ರಿಕೂಟವನ್ನು ರಚಿಸುವ ಮೂಲಕ ಯಾವುದೋ ಒಂದು ರೀತಿಯಲ್ಲಿ ಉಲ್ಲಂಘನೆ ಮಾಡಿದೆ ಎಂಬಂತೆ ತೋರಿಸುತ್ತದೆ. ಒಂದು ಸ್ವತಂತ್ರ ರಾಷ್ಟ್ರವಾಗಿ ಇರಾನ್ ತನ್ನದೇ ಆದ ಮೈತ್ರಿಗಳನ್ನು ಮಾಡಿಕೊಳ್ಳಲು ಮತ್ತು ಈ ವಲಯದಲ್ಲಿ ಇಸ್ರೇಲ್ನ ಸರ್ವಾಧಿಕಾರಿ ಧೋರಣೆಯನ್ನು ಎದುರಿಸಲು ಅದಕ್ಕೆ ಯಾವುದೇ ಹಕ್ಕಿಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಮೂಲಭೂತವಾಗಿ ಇರಾನ್ನಿಂದ ಅಭದ್ರತೆ ಅನುಭವಿಸುತ್ತಿರುವುದು ಇಸ್ರೇಲ್, ವಿಶೇಷವಾಗಿ 1979ರ ಜನಪ್ರಿಯ ಕ್ರಾಂತಿಯ ನಂತರ ಟೆಹ್ರಾನ್ ಯಹೂದಿ ರಾಷ್ಟ್ರವನ್ನು (ಇಸ್ರೇಲ್) ಮಾನ್ಯ ಮಾಡುವುದರಿಂದ ಹಿಂದೆ ಸರಿದಾಗಿನಿಂದ ಈ ಅಭದ್ರತೆ ಕಾಡಲು ಶುರುವಾಗಿದೆ.

ಇಸ್ರೇಲ್ನ ಈ ಭಯವನ್ನು ಖಚಿತಪಡಿಸುವಂತೆ, ಇರಾನ್ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸೇರಿದಂತೆ ಅಲ್ಲಿನ ಕೆಲವು ಉಗ್ರಗಾಮಿ ರಾಜಕೀಯ ಮುಖಂಡರು ಇಸ್ರೇಲ್ನ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ.

ಇಸ್ರೇಲ್ ಯಾವ ರೀತಿಯಲ್ಲಿ ಅಭದ್ರತೆ ಅನುಭವಿಸುತ್ತಿದೆ ಎಂಬುದು ಅರ್ಥವಾಗುವಂತಹದ್ದೇ, ಆದರೆ ಅದನ್ನು ಇರಾನ್ನ ಪರಮಾಣು ಯೋಜನೆಗೆ ಜೋಡಿಸಿ ನೋಡುವುದು ಕೇವಲ ಒಂದು ಕಲ್ಪನೆಯಷ್ಟೇ ಆಗುತ್ತದೆ (ಅದಕ್ಕೆ ಬಲವಾದ ಆಧಾರವಿಲ್ಲ). ಇನ್ನು ಅಮೆರಿಕದ ವಿಷಯಕ್ಕೆ ಬಂದರೆ, ಅದಕ್ಕೆ ಇರಾನ್ನಿಂದ ಎಂದಿಗೂ ಯಾವುದೇ ಬೆದರಿಕೆ ಎದುರಾಗಿಲ್ಲ, ಆದರೂ ಅದು ಇಸ್ರೇಲ್ನ ಮಾತುಗಳನ್ನೇ ಗಿಣಿಪಾಠದಂತೆ ಪುನರಾವರ್ತಿಸುತ್ತದೆ ಮತ್ತು ತನ್ನನ್ನೂ ಒಬ್ಬ ಸಂಭಾವ್ಯ ಸಂತ್ರಸ್ತನಂತೆ ಬಿಂಬಿಸಿಕೊಳ್ಳುತ್ತದೆ.

ವಿಶ್ವದಲ್ಲಿ ಈಗಾಗಲೇ ಪರಮಾಣು ಶಸ್ತ್ರಾಸ್ತ್ರಗಳ ಭಂಡಾರವನ್ನು ಹೊಂದಿಲ್ಲದಿದ್ದರೂ, ಪರಮಾಣು ಸಾಮರ್ಥ್ಯವನ್ನು ಹೊಂದಿರುವ ಹಲವಾರು ದೇಶಗಳಿವೆ. ಮತ್ತು ಅವೆಲ್ಲವುಗಳಿಗೂ ತಮ್ಮದೇ ಆದ ವೈಯಕ್ತಿಕ ದ್ವೇಷ ಹಾಗೂ ಪರಮ ಶತ್ರುಗಳಿದ್ದಾರೆ. ಆದರೆ ಅಮೆರಿಕವನ್ನು ಹೊರತುಪಡಿಸಿ ಮತ್ಯಾರೂ ಇದುವರೆಗೆ ಅದನ್ನು ಬಳಸಿಲ್ಲ. ಇರಾನ್ ತನ್ನ ಪರಮಾಣು ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಟ್ರಂಪ್ ಗಂಟಲು ಹರಿದುಕೊಳ್ಳುತ್ತಿರಬಹುದು, ಆದರೆ ಜಪಾನ್ನ ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಅಣುಬಾಂಬ್ ಹಾಕಿದ್ದು ತನ್ನದೇ ದೇಶ ಎಂಬುದನ್ನು ಅವರು ಯಾವ ಕಾರಣಕ್ಕೂ ಮರೆಯುವಂತಿಲ್ಲ.

ಯಾರು ಹೊಂದಬಹುದು ಪರಮಾಣು ಶಸ್ತ್ರಾಸ್ತ್ರ

ಒಂದು ದೃಷ್ಟಿಕೋನದ ಪ್ರಕಾರ, ಇರಾನ್ ಒಂದು ಇಸ್ಲಾಮಿಕ್ ದೈವಪ್ರಭುತ್ವದ ಆಡಳಿತ ವ್ಯವಸ್ಥೆ ಹೊಂದಿರುವುದರಿಂದ ಅದು ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಹೊಂದಿರಬಾರದು. ಮತ್ತು ಅದು ತನ್ನನ್ನು ತಾನು ಪ್ರಜಾಪ್ರಭುತ್ವ ಎಂದು ಕರೆದುಕೊಂಡರೂ ಎಲ್ಲಾ ವಿಷಯಗಳ ಅಂತಿಮ ನಿರ್ಧಾರವು ಇರಾನ್ ಸಂಸತ್ತಿನ ನಿರ್ಧಾರಗಳನ್ನೇ ರದ್ದುಗೊಳಿಸಬಲ್ಲ ಶಕ್ತಿಯುಳ್ಳ, ಚುನಾಯಿತರಲ್ಲದ 'ಗಾರ್ಡಿಯನ್ ಕೌನ್ಸಿಲ್' ಸದಸ್ಯರ ಕೈಯಲ್ಲಿದೆ.

ಮತ್ತೊಮ್ಮೆ ಹೇಳುವುದಾದರೆ, ಯಹೂದಿ-ಕ್ರಿಶ್ಚಿಯನ್ ಮನಸ್ಥಿತಿಗಿಂತ ಭಿನ್ನವಾಗಿರುವ ಪ್ರತಿಯೊಂದರ ಮೇಲಿರುವ ಸಹಜವಾದ ಅಪನಂಬಿಕೆ ಮತ್ತು ಹಗೆತನವನ್ನು ಹೊರತುಪಡಿಸಿದರೆ, ಕೇವಲ ಈ ಕಾರಣಕ್ಕಾಗಿ ಭಯಪಡಲು ಯಾವುದೇ ಬಲವಾದ ಮೂಲಭೂತ ಆಧಾರಗಳಿಲ್ಲ.

ಒಂದು ಆದರ್ಶ ಜಗತ್ತಿನಲ್ಲಿ ಯಾರೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು. ಉದಾಹರಣೆಗೆ ಭಾರತವು, ಅಮೆರಿಕ ಮತ್ತು (ಈಗಿನ) ರಷ್ಯಾ ಸೇರಿದಂತೆ ಈಗಾಗಲೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ಮೊದಲು ತಮ್ಮ ಶಸ್ತ್ರಾಗಾರವನ್ನು ನಾಶಪಡಿಸಬೇಕು ಮತ್ತು ಎಲ್ಲರಿಗೂ ಸಮಾನವಾದ ವೇದಿಕೆಯನ್ನು ಸೃಷ್ಟಿಸಬೇಕು ಎಂದು ವಾದಿಸಿತ್ತು. ಇಂದಿರಾ ಗಾಂಧಿ ಸರ್ಕಾರದ ಕಾಲದಿಂದಲೂ ಇದು ಭಾರತದ ಸ್ಥಿರ-ದೃಢ ನಿಲುವಾಗಿತ್ತು, ಇದರ ಪರಿಣಾಮವಾಗಿಯೇ ಭಾರತವು ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ (ಎನ್ಪಿಟಿ) ಎಂದಿಗೂ ಸಹಿ ಹಾಕಲಿಲ್ಲ.

ಪರಮಾಣು ಶಸ್ತ್ರಾಸ್ತ್ರ ಎಂಬ ಕಪಟತನ

ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಅವುಗಳನ್ನು ತಯಾರಿಸುವ ಸಾಮರ್ಥ್ಯವು ಸಂಪೂರ್ಣವಾಗಿ ಜಗತ್ತಿನ ಕಪಟತನದಿಂದ ಕೂಡಿದೆ ಹಾಗೂ ಇದು ನ್ಯಾಯ ಮತ್ತು ನಿಷ್ಪಕ್ಷಪಾತದ ಬದಲಾಗಿ ಕೇವಲ ಅಧಿಕಾರದ ಮನಸ್ಥಿತಿಯಿಂದ ನಿಯಂತ್ರಿಸಲ್ಪಡುತ್ತದೆ. ಅಮೆರಿಕವು ದೀರ್ಘಕಾಲದಿಂದ ಇದಕ್ಕೆ ಸೂಕ್ತ ಉದಾಹರಣೆಯಾಗಿ ನಿಂತಿದೆ.

ಉದಾಹರಣೆಗೆ, ಭಾರತವು NPT ಗೆ ಸಹಿ ಹಾಕಲು ನಿರಾಕರಿಸಿದ್ದನ್ನು ಅಮೆರಿಕವು ನಿರ್ಲಕ್ಷಿಸಿ, 2008 ರಲ್ಲಿ ಅದರೊಂದಿಗೆ ಪರಮಾಣು ಒಪ್ಪಂದವನ್ನು ಮುಂದುವರಿಸಿದ್ದಕ್ಕಾಗಿ ಇರಾನ್ ಅಮೆರಿಕವನ್ನು ಲೇವಡಿ ಮಾಡಿತ್ತು. ಜಾರ್ಜ್ ಡಬ್ಲ್ಯೂ ಬುಷ್ ಆಡಳಿತವು ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುವಂತೆ ಅದರ ಮೇಲೆ ಗರಿಷ್ಠ ಒತ್ತಡ ಹೇರುತ್ತಿದ್ದ ಸಮಯವದು. ಆದರೆ, ವಿಪರ್ಯಾಸವೆಂದರೆ ಇರಾನ್ ಸ್ವತಃ NPT ಗೆ ಸಹಿ ಹಾಕಿದ ರಾಷ್ಟ್ರವಾಗಿತ್ತು.

ಅಮೆರಿಕದ ದ್ವಂದ್ವ ನೀತಿಗೆ ಮತ್ತೊಂದು ಉದಾಹರಣೆಯೆಂದರೆ, ಅದು ಇಸ್ರೇಲ್ನ ಪರಮಾಣು ಸಾಮರ್ಥ್ಯವನ್ನು ನಿರ್ಲಕ್ಷಿಸಿದ್ದು. 1960ರ ದಶಕದಲ್ಲಿ ರಹಸ್ಯವಾಗಿ ತನ್ನ ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ಅಭಿವೃದ್ಧಿಪಡಿಸಿದ ಇಸ್ರೇಲ್ನ್ನು ಅಮೆರಿಕ ಕ್ಷಮಿಸಿಬಿಟ್ಟಿತ್ತು. ಮತ್ತು ಅವೆರಡರ ನಡುವಿನ ಒಪ್ಪಂದದ ಪ್ರಕಾರ, ಇಸ್ರೇಲ್ ತಾನು ಪರಮಾಣು ಸಾಮರ್ಥ್ಯ ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇನೆಯೇ ಎಂಬ ಬಗ್ಗೆ ಎಂದಿಗೂ ಪ್ರತಿಕ್ರಿಯಿಸದೇ ಇರಲು ನೀತಿಯೊಂದನ್ನು ರೂಪಿಸಿಕೊಂಡಿತು.

ಆದರೆ, ಇಸ್ರೇಲ್ ಒಂದು ಪರಮಾಣು ರಾಷ್ಟ್ರ ಎಂಬುದು ರಹಸ್ಯವಾಗಿ ಉಳಿದಿಲ್ಲ. 1986 ರಲ್ಲಿ ಇಸ್ರೇಲಿ ವಿಸ್ಲ್ಬ್ಲೋವರ್ (ಮಾಹಿತಿ ಸೋರಿಕೆದಾರ) ಮೊರ್ಡೆಕೈ ವಾನುನು ಎಂಬಾತ ಅಲ್ಲಿನ ರಹಸ್ಯ ಯೋಜನೆಯನ್ನು ಛಾಯಾಚಿತ್ರದ ಪುರಾವೆಗಳೊಂದಿಗೆ ಜಗತ್ತಿನ ಮುಂದೆ ಬಹಿರಂಗಪಡಿಸಿದ್ದ. ಪಶ್ಚಿಮ ಏಷ್ಯಾದ ಇತರ ದೇಶಗಳೊಂದಿಗೆ ಇರಾನ್ ಕೂಡ, "ಪ್ರಾದೇಶಿಕವಾಗಿ ಇತರರಿಗೆ ಇಲ್ಲದ ಅಧಿಕಾರ ಇಸ್ರೇಲ್ಗೆ ಮಾತ್ರ ಏಕೆ? ಅದು ಹೇಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಹುದು?" ಎಂದು ಪ್ರಶ್ನಿಸಿದೆ.

ಪೈಪೋಟಿಯ ಅಸಲಿ ಕಾರಣ

ಇರಾನ್ ಪರಮಾಣು ಶಕ್ತಿಯಾಗಿ ಹೊರಹೊಮ್ಮುವುದರ ಹಿಂದಿರುವ ಮತ್ತೊಂದು ಭಯವೆಂದರೆ, ಇದು ಈ ವಲಯದಲ್ಲಿ—ವಿಶೇಷವಾಗಿ ಇರಾನ್ನ ನೆರೆಹೊರೆಯ ಹಾಗೂ ವೈರಿ ರಾಷ್ಟ್ರವಾದ ಸೌದಿ ಅರೇಬಿಯಾದ ನಡುವೆ—ಪರಮಾಣು ಪೈಪೋಟಿಗೆ ಕಾರಣವಾಗಬಹುದು.

ಅಮೆರಿಕ ಮತ್ತು ಇಸ್ರೇಲ್ನ ಈ ಆತಂಕಗಳನ್ನು ಈ ವಲಯದ ಇಸ್ಲಾಮಿಕ್ ಅರಬ್ ರಾಷ್ಟ್ರಗಳೂ ಹಂಚಿಕೊಳ್ಳುತ್ತವೆ. ಮುಖ್ಯವಾಗಿ ಪಂಥೀಯ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಅವು ಬಯಸುವುದಿಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪಡೆದುಕೊಳ್ಳದಂತೆ ನೋಡಿಕೊಳ್ಳಲು ಕೊಲ್ಲಿ ರಾಷ್ಟ್ರಗಳಿಂದ ಮತ್ತು ಇತರರಿಂದ ತಮಗೆ ವಿನಂತಿಗಳು ಬರುತ್ತಿವೆ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಪಾದಿಸುತ್ತಾರೆ. ಇದು ಶಿಯಾ ಪಂಥದ ಇರಾನ್ ಮತ್ತು ಅದರ ಸುನ್ನಿ ಪಂಥದ ನೆರೆಹೊರೆಯ ದೇಶಗಳ ನಡುವಿನ ಗಹನ ಐತಿಹಾಸಿಕ, ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳು ಮತ್ತು ನಿರಂತರ ಹಗೆತನವನ್ನು ಎತ್ತಿ ತೋರಿಸುತ್ತದೆ.

ಇದಕ್ಕೆ ತದ್ವಿರುದ್ಧವಾಗಿ, ಇರಾನ್ ಮತ್ತು ವಿಪರ್ಯಾಸವೆಂದರೆ ಅದರ ಇಸ್ಲಾಮಿಕ್ ನೆರೆಹೊರೆಯವರ ನಡುವೆ ಇರುವ ಹಗೆತನದ ಹಿನ್ನೆಲೆಯಲ್ಲಿಯೇ, ಟೆಹ್ರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರಮಾಣು ಸಾಮರ್ಥ್ಯವನ್ನು ಹೊಂದುವುದು ಅತ್ಯಗತ್ಯ ಎಂದು ಭಾವಿಸುತ್ತದೆ. 1980 ರಲ್ಲಿ ಇರಾಕ್ ನಡೆಸಿದ ಆಕ್ರಮಣ ಮತ್ತು ಅದು ಇವೆರಡರ ನಡುವೆ ಎಂಟು ವರ್ಷಗಳ ಸುದೀರ್ಘ ಯುದ್ಧಕ್ಕೆ ಕಾರಣವಾದದ್ದು ಇರಾನ್ನ ಈ ಭಯವನ್ನು ನಿಜವಾಗಿಸುತ್ತದೆ.

ತಾನು ಪರಮಾಣು ಸಾಮರ್ಥ್ಯವನ್ನು ಕೇವಲ ವಿದ್ಯುತ್ ಉತ್ಪಾದನೆಗೆ ಮತ್ತು ಇತರ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಿದ್ದೇನೆ ಎಂದು ಇರಾನ್ ಅಧಿಕೃತವಾಗಿ ಪ್ರತಿಪಾದಿಸುತ್ತದೆಯಾದರೂ, ಪರಿಸ್ಥಿತಿ ಹೀಗಿದ್ದಲ್ಲಿ ಅದು ಯುರೇನಿಯಂನ್ನು ಶೇ.60 ರಷ್ಟು ಸಮೃದ್ಧಗೊಳಿಸಿದ್ದಾದರೂ ಯಾಕೆ ಎಂದು ಸಂದೇಹವಾದಿಗಳು ಪ್ರಶ್ನಿಸುತ್ತಾರೆ.

ಲಭ್ಯವಿರುವ ದತ್ತಾಂಶಗಳ ಪ್ರಕಾರ, ಸುಮಾರು ಶೇಕಡಾ 5 ರಷ್ಟು ಸಮೃದ್ಧಗೊಳಿಸಿದ ಯುರೇನಿಯಂನ್ನು ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ಶೇಕಡಾ 20 ರಷ್ಟನ್ನು ಸುಧಾರಿತ ಸಂಶೋಧನಾ ರಿಯಾಕ್ಟರ್ಗಳಲ್ಲಿ ಬಳಸಲಾಗುತ್ತದೆ. ಶೇಕಡಾ 85ರವರೆಗೆ ಸಮೃದ್ಧಗೊಳಿಸಿದ ಯುರೇನಿಯಂನ್ನು ವೈದ್ಯಕೀಯ ಐಸೋಟೋಪ್ಗಳನ್ನು ಪರೀಕ್ಷಿಸಲು ಮತ್ತು ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲು ಮಾತ್ರ ಸೀಮಿತವಾಗಿ ಬಳಸಬಹುದು. ಆದರೆ ಯುರೇನಿಯಂ ಶೇಕಡಾ 90 ರಷ್ಟು ಸಮೃದ್ಧಗೊಂಡಾಗ ಮಾತ್ರ ಅದು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಬಳಸಬಹುದಾದ ಪ್ರಬಲ ವಸ್ತುವಾಗಿ ಬದಲಾಗುತ್ತದೆ.

ಇರಾನ್ ಇನ್ನೂ ಈ ಮಟ್ಟದ ಸಮೃದ್ಧತೆಯನ್ನು ತಲುಪಿಲ್ಲವಾದರೂ, ಅದು ಶೇಕಡಾ 90ರ ಮಟ್ಟವನ್ನು ಮುಟ್ಟಲು ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿ ಇವೆ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಅಮೆರಿಕದ ಜೊತೆ ಇರಾನ್ನ 2015ರ ಒಪ್ಪಂದ

ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ 2015ರಲ್ಲಿ ಸಹಿ ಮಾಡಲಾದ ಪರಮಾಣು ಒಪ್ಪಂದದ ಪ್ರಕಾರ, ಇರಾನ್ ತನ್ನ ಸಮೃದ್ಧ ಯುರೇನಿಯಂ ಅನ್ನು ರಷ್ಯಾ ಅಥವಾ ಯಾವುದೇ ಇತರ ತಟಸ್ಥ ದೇಶಕ್ಕೆ ಹಸ್ತಾಂತರಿಸಲು ಮತ್ತು ತನ್ನ ಪರಮಾಣು ಕೇಂದ್ರಗಳನ್ನು ಅಂತರರಾಷ್ಟ್ರೀಯ ತಪಾಸಣೆಗೆ ಒಳಪಡಿಸಲು ಒಪ್ಪಿಕೊಂಡಿತ್ತು. ಆದರೆ ಟ್ರಂಪ್ 2018ರಲ್ಲಿ ಏಕಪಕ್ಷೀಯವಾಗಿ ಈ ಒಪ್ಪಂದವನ್ನು ರದ್ದುಗೊಳಿಸಿದರು.

ಮತ್ತು ಈಗ ಇರಾನ್ ಮೇಲೆ ಎರಡು ಸುತ್ತಿನ ಮಿಲಿಟರಿ ದಾಳಿಗಳು ಹಾಗೂ ಯುದ್ಧ ನಡೆದ ನಂತರವೂ, ಅಮೆರಿಕದ ಅಧ್ಯಕ್ಷರು ಅದನ್ನೇ ಮತ್ತೆ ಒತ್ತಾಯಿಸುತ್ತಿದ್ದಾರೆ; ಆದರೆ ಅವರು ಇದನ್ನು ವಿಭಿನ್ನವಾಗಿ ತೋರಿಸಲು ಬಯಸುತ್ತಿದ್ದಾರೆ.

ಆದರೆ ಇರಾನ್ ಇದಕ್ಕೆ ಮಣಿಯುವ ಮೂಡ್ನಲ್ಲಿ ಇಲ್ಲ, ಯಾಕೆಂದರೆ ಇದು ಅದರ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಆದಾಗ್ಯೂ, ಚೀನಾ ಮತ್ತು ಪಾಕಿಸ್ತಾನದಂತಹ ಮಿತ್ರರಾಷ್ಟ್ರಗಳ ಜೊತೆಗೆ ಅದರ ಗಲ್ಫ್ ನೆರೆಹೊರೆಯವರೂ ಸಹ ಒಂದು ರಾಜಿ ಒಪ್ಪಂದಕ್ಕೆ ಬರಲು ಇರಾನ್ ಮೇಲೆ ಒತ್ತಡ ಹೇರುತ್ತಿರುವುದರಿಂದ, ಈ ಹಠಮಾರಿ ಪರಮಾಣು ಅಡ್ಡಿಯ ನಡುವೆಯೂ ಶಾಂತಿ ಒಪ್ಪಂದವನ್ನು ಹೇಗೆ ರೂಪಿಸಲಾಗುತ್ತದೆ ಎಂಬುದನ್ನು ನೋಡುವುದು ಕುತೂಹಲದ ಸಂಗತಿ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story