ಅಕ್ರಮ ಬಂಧನ: ಸೋನಮ್ ವಾಂಗ್‌ಚುಕ್ ಬಿಡುಗಡೆಗೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ
x

'ಅಕ್ರಮ ಬಂಧನ': ಸೋನಮ್ ವಾಂಗ್‌ಚುಕ್ ಬಿಡುಗಡೆಗೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ

ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ಪತಿಯನ್ನು ಆಸ್ಪತ್ರೆಯ 'ಅಕ್ರಮ ಬಂಧನ'ದಿಂದ ಬಿಡುಗಡೆ ಮಾಡಬೇಕು , ವೈದ್ಯರು ಮತ್ತು ವಕೀಲರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಆಂಗ್ಮೋ ಒತ್ತಾಯಿಸಿದ್ದಾರೆ.


ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆ ಹಾಗೂ ನೀಟ್ ರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದಗೆಟ್ಟಿದ್ದು, ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರನ್ನು 'ಅಕ್ರಮ ಬಂಧನ'ದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಜೂನ್ 28 ರಿಂದ ಜಂತರ್ ಮಂತರ್‌ನಲ್ಲಿ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಸತ್ಯಾಗ್ರಹದ 21ನೇ ದಿನದಂದು ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇದೀಗ ಆಸ್ಪತ್ರೆಯಲ್ಲಿ ತಮ್ಮ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಅವರ ಪತ್ನಿ ನ್ಯಾಯಾಲಯವನ್ನು ಕೋರಿದ್ದಾರೆ.

ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ಪತಿಯನ್ನು ಆಸ್ಪತ್ರೆಯ 'ಅಕ್ರಮ ಬಂಧನ'ದಿಂದ ಬಿಡುಗಡೆ ಮಾಡಬೇಕು ಹಾಗೂ ಈ ಹಿಂದೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ವಕೀಲರನ್ನು ಭೇಟಿಯಾಗಲು ಸಂಪೂರ್ಣ ಅವಕಾಶ ಕಲ್ಪಿಸಬೇಕು ಎಂದು ಆಂಗ್ಮೋ ಒತ್ತಾಯಿಸಿದ್ದಾರೆ.

ಆರೋಗ್ಯ ವರದಿಯಲ್ಲಿನ ವ್ಯತ್ಯಾಸದ ಬಗ್ಗೆ ಆರೋಪ

ಸಫ್ದರ್‌ಜಂಗ್ ಸರ್ಕಾರಿ ಆಸ್ಪತ್ರೆಯ ಮೇಲೆ ತಮಗೆ ನಂಬಿಕೆ ಇಲ್ಲ ಎಂದಿರುವ ಆಂಗ್ಮೋ, ಆಸ್ಪತ್ರೆಯು ವೈದ್ಯಕೀಯ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. "ವಾಂಗ್‌ಚುಕ್ ಅವರ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ 2.9ಕ್ಕೆ ಕುಸಿದಿದ್ದು, ಇದು ಜೀವಕ್ಕೆ ಅಪಾಯಕಾರಿ ಎಂದು ಆಸ್ಪತ್ರೆ ನಮಗೆ ತಿಳಿಸಿತ್ತು. ಆದರೆ ಸಾರ್ವಜನಿಕರಿಗೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ನಿಖರ ಅಂಕಿ-ಅಂಶಗಳನ್ನು ಮರೆಮಾಚಿ ಕೇವಲ 'ಪೊಟ್ಯಾಸಿಯಮ್ ಮಟ್ಟ ಕಡಿಮೆಯಾಗುತ್ತಿದೆ' ಎಂದು ಮಾತ್ರ ಉಲ್ಲೇಖಿಸಿದೆ. ನಾವು ಮಾಡಿಸಿದ ಸ್ವತಂತ್ರ ಲ್ಯಾಬ್ ವರದಿಯಲ್ಲಿ ಪೊಟ್ಯಾಸಿಯಮ್ ಮಟ್ಟ 3.5 ಇದ್ದು, ಇದು ಸಾಮಾನ್ಯವಾಗಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಲವು ಬಾರಿ ಮನವಿ ಮಾಡಿದರೂ ವಾಂಗ್‌ಚುಕ್ ಅವರನ್ನು ಡಿಸ್ಚಾರ್ಜ್ ಮಾಡಲು ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಆಸ್ಪತ್ರೆ ಆಡಳಿತ ನಿರಾಕರಿಸಿದೆ. ನೂರಕ್ಕೂ ಹೆಚ್ಚು ಪೊಲೀಸರನ್ನು ಆಸ್ಪತ್ರೆಯ ಆವರಣದಲ್ಲಿ ನಿಯೋಜಿಸಿ, ನಮ್ಮ ಚಲನವಲನಗಳನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ದೂರಿದ್ದಾರೆ.

"ಇದು ವೈದ್ಯಕೀಯ ಆರೈಕೆಯಲ್ಲ, ಸಂಪೂರ್ಣ ಅಕ್ರಮ ಬಂಧನ. ಒಂದು ವೇಳೆ ಸೋನಮ್ ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ," ಎಂದು ಆಂಗ್ಮೋ ಎಚ್ಚರಿಕೆ ನೀಡಿದ್ದಾರೆ.

Read More
Next Story