
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಶಂಕರಾಚಾರ್ಯ ಮತ್ತು ಯೋಗಿ ಆದಿತ್ಯನಾಥ ನಡುವಿನ ವಿವಾದ ಹಾಗೂ ಮಂದಿರ ಧ್ವಂಸದ ಬಗ್ಗೆ ವಹಿಸಿರುವ ಮೌನವು ಸಂಘ ಪರಿವಾರವು ತನ್ನ ಅಧಿಕಾರದ ಹಸಿವಿಗೆ ಧರ್ಮವನ್ನು ಬಳಸುತ್ತಿದೆ ಎಂಬುದಕ್ಕೆ ಸಾಕ್ಷಿ.
ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ರಾಜಕೀಯದ ಜೊತೆ ಧರ್ಮದ ಬಳಕೆಯನ್ನು ಯಾವತ್ತೂ ದೂರವಿಡಲಾಗಿತ್ತು. ಆದರೆ ಆರ್.ಎಸ್.ಎಸ್. ಮಾತ್ರ ಇಂತಹ ಗೌರವಾನ್ವಿತ ತತ್ವವನ್ನು ಯಾವತ್ತೂ ತಿರಸ್ಕಾರದಿಂದಲೇ ನೋಡುತ್ತ ಬಂದಿದೆ ಮತ್ತು ಧರ್ಮವನ್ನು ರಾಜಕೀಯದೊಳಗೆ ಎಳೆದು ತರಲು ದಣಿವಿಲ್ಲದೆ ಶ್ರಮಿಸುತ್ತ ಬಂದಿದೆ.
ಆದರೆ, ʼಧರ್ಮಸತ್ತೆಯು ರಾಜಕೀಯ ಅಧಿಕಾರದ ಮೇಲೆ ಅಂಕುಶವನ್ನು ಹೊಂದಿರಬೇಕುʼ (ಧರ್ಮಸತ್ತಾ ಕಾ ಸತ್ತಾ ಪರ್ ಅಂಕುಶ್) ಎಂಬ ಸಿದ್ಧಾಂತವನ್ನೇ ಆರ್.ಎಸ್.ಎಸ್. ಪ್ರತಿಪಾದಿಸುತ್ತ ಬಂದಿದೆ. ಆ ಉದ್ದೇಶದಿಂದಲೇ ರಾಜಕೀಯವನ್ನು ಧರ್ಮದ ಅಧೀನವಾಗಿ ಮಾಡಲು ಅದು ಪ್ರಯತ್ನ ನಡೆಸಿದೆಯೇ? ಅಥವಾ ಅದು ರಾಜಕೀಯ ಅಧಿಕಾರವನ್ನು ದಕ್ಕಿಸಿಕೊಳ್ಳಲು ಮತ್ತು ಧರ್ಮವನ್ನು ತನ್ನ ಹಿತಾಸಕ್ತಿಗೆ ತಕ್ಕಂತೆ ಬಳಸಿಕೊಂಡು ಧರ್ಮಕ್ಕೆ ಸರ್ವೋಚ್ಛ ಸ್ಥಾನವನ್ನು ನೀಡದೇ ನಿರಂತರವಾಗಿ ಅಧಿಕಾರ ನಡೆಸಲು ಹೂಡಿರುವ ತಂತ್ರವೇ?
ಹಾಗಾಗಿ ನರೇಂದ್ರ ಮೋದಿ ಅವರ ಕಳೆದ ಹತ್ತೂ ಮತ್ತೊಂದು ವರ್ಷಗಳ ಆಡಳಿತದ ಅವಧಿಯಲ್ಲಿ ನಡೆದ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಸಂಘ ಪರಿವಾರದ ನೈಜ ಉದ್ದೇಶವೇನಿದ್ದರೂ ಅಧಿಕಾರ ಹಿಡಿಯಲು ಧರ್ಮವನ್ನು ಬಳಕೆ ಮಾಡುವುದು ಮತ್ತು ಆ ಬಳಿಕ ಧರ್ಮವನ್ನೇ ರಾಜಕೀಯ ಗಣ್ಯರ ಅಧೀನಕ್ಕೆ ತರುವುದು ಎಂಬುದು ಸ್ಪಷ್ಟವಾಗಿ ತಿಳಿಯುತ್ತ ಹೋಗುತ್ತದೆ.
ಬರೀ ಬೂಟಾಟಿಕೆ…
ಪವಿತ್ರ ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡದಂತೆ ನಿರ್ಬಂಧ ವಿಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜ್ಯೋತಿರ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ನಡುವೆ ಪ್ರಯಾಗ್-ರಾಜ್-ನಲ್ಲಿ ನಡೆಯುತ್ತಿರುವ ಮುಖಾಮುಖಿ ಸಂಘ ಪರಿವಾರದ ಮಾತುಗಳು ಎಷ್ಟು ಬೂಟಾಟಿಕೆಯಿಂದ ಕೂಡಿದ್ದು ಎಂಬುದು ಅರ್ಥವಾಗುತ್ತದೆ. “ರಾಷ್ಟ್ರದ ಜೀವನದ ಪ್ರತಿಯೊಂದು ಚುಟುವಟಿಕೆಗೆ ಧರ್ಮವೇ ಸರ್ವೋಚ್ಚ ಮಾರ್ಗದರ್ಶಿ” ಎಂಬ ತನ್ನದೇ ನಿಲುವನ್ನು ಸಂಘ ಪರಿವಾರ ಇಲ್ಲಿ ಪಾಲಿಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಸಾಬೀತಾಗುತ್ತದೆ.
ಸ್ವಾಮೀಜಿಯವರನ್ನು ಅವಮಾನಿಸಿದ ರೀತಿ ಮತ್ತು ಅವರ ಬೆಂಬಲಿಗರು ಹಾಗೂ ಶಿಷ್ಯರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದ ಈ ಘಟನೆಯಲ್ಲಿ ಆರ್.ಎಸ್.ಎಸ್. ಸ್ವತಃ ಧರ್ಮ, ಸಾಧುಗಳು ಮತ್ತು ಸಂತರನ್ನು ಸರ್ಕಾರದ ಕಾನೂನು ಅಧಿಕಾರಕ್ಕಿಂತ ಮಿಗಿಲಾದವರೆಂದು ಪರಿಗಣಿಸುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಅಂದರೆ ಧಾರ್ಮಿಕ ವಿಚಾರಗಳಲ್ಲಿಯೂ ಇಂತಹ ಧರ್ಮದ ವ್ಯಕ್ತಿಗಳು ಸರ್ಕಾರದ ಅಧಿಕಾರಿಕ್ಕೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ನೀಡುವಲ್ಲಿ ಇದು ಯಶಸ್ವಿಯಾಗಿದೆ. ಜೊತೆಗೆ ಶಂಕರಾಚಾರ್ಯರಂತಹ ವ್ಯಕ್ತಿಗಳೂ ಕೂಡ ಸರ್ಕಾರದ ಈ ಸರ್ವೋಚ್ಚ ಅಧಿಕಾರಕ್ಕೆ ಹೊರತಲ್ಲ ಎಂಬುದೂ ವೇದ್ಯವಾಗುತ್ತದೆ.
“ಇದು ಶಂಕರಾಚಾರ್ಯ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ವಿಷಯ, ಇದಕ್ಕೂ ಆರ್ಎಸ್ಎಸ್ಗೂ ಸಂಬಂಧವಿಲ್ಲ" ಎಂದು ಪ್ರತಿವಾದ ಮಾಡಬಹುದು. ಆದರೆ, ಧರ್ಮ ಆಧಾರಿತ ರಾಜಕೀಯ ವ್ಯವಸ್ಥೆಯ ಮೂಲ ಕಥೆಗಾರರೇ ಆರ್ಎಸ್ಎಸ್. ಅವರೇ ಈ ಘಟನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಅಥವಾ ಇದರಿಂದ ಕೈತೊಳೆದುಕೊಳ್ಳಲೂ ಆಗದು.
ಇಷ್ಟು ಮಾತ್ರವಲ್ಲದೆ ತನ್ನನ್ನು ತಾನು ಹಿಂದೂ ಧರ್ಮದ ʼಸಾರಥಿʼ ಎಂಬಂತೆ ಬಿಂಬಿಸಿಕೊಂಡಿರುವ ಆರ್ಎಸ್ಎಸ್, ಶಂಕರಾಚಾರ್ಯರ ಈ ಗಂಭೀರ ಘಟನೆಯಿಂದ ಮುಖ ತಿರುಗಿಸಿಕೊಳ್ಳುವ ಹಕ್ಕನ್ನು ಕೂಡ ಕಳೆದುಕೊಂಡಿದೆ.
ಇದಲ್ಲದೆ, ಶಂಕರಾಚಾರ್ಯರು ಇತರರಿಗೆ ಲಭ್ಯವಿಲ್ಲದೇ ಇರುವ ಕೇಳುತ್ತಿರಲಿಲ್ಲ. ಅವರೇ ಸರಿಯಾಗಿ ಹೇಳಿದಂತೆ, ಅವರು ಯಾವುದೇ ಕಾನೂನುಬಾಹಿರ ಬೇಡಿಕೆಯನ್ನು ಇಟ್ಟಿರಲಿಲ್ಲ; ಏಕೆಂದರೆ ಕುಂಭಮೇಳದ ಸಮಯದಲ್ಲಿ ವಿಐಪಿಗಳಿಗಾಗಿ ಗಂಗಾ ಘಾಟ್ಗಳ ವಿಶೇಷ ಪ್ರದೇಶಗಳಲ್ಲಿ ಕೆಂಪು ಹಾಸಿನ ಸ್ವಾಗತದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವಿಮುಕ್ತೇಶ್ವರಾನಂದರ ಘಟನೆಯ ಬಗ್ಗೆ ಆರ್ಎಸ್ಎಸ್ ವಹಿಸಿರುವ ಮೌನವು, ಧರ್ಮ ಮತ್ತು ಸಾಧು-ಸಂತರ ಪ್ರಾಮುಖ್ಯತೆಯ ಬಗ್ಗೆ ಅದು ಹೊಂದಿರುವ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ಇದು ಆರ್ಎಸ್ಎಸ್ ಕೇವಲ “ಸರ್ಕಾರಿ ಸಾಧುಗಳು” ಮತ್ತು ಆರ್ಎಸ್ಎಸ್ನಿಂದ ಮಾನ್ಯತೆ ಪಡೆದ ಸಂತರ ಪರವಾಗಿ ಮಾತ್ರ ಧ್ವನಿ ಎತ್ತುತ್ತದೆ ಎಂಬಂತಿದೆ.
ರಾಜಕೀಯ ಶೋಷಕರು
ಆರ್ಎಸ್ಎಸ್ ವ್ಯವಸ್ಥೆಯು ಅಂತಹ ಸಾಧುಗಳು ಮತ್ತು ಸಂತರ ಒಂದು ಪರ್ಯಾಯ ಪಡೆಯನ್ನೇ ಎಚ್ಚರಿಕೆಯಿಂದ ಪೋಷಿಸಿದೆ. ಅವರಲ್ಲಿ ಕೆಲವರು ರಾಜಕೀಯ ಆಶ್ರಯ ಮತ್ತು ಅದರೊಂದಿಗೆ ಬರುವ ಎಲ್ಲಾ ಪಂಚತಾರಾ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿಯದೇ ಇರುವ ಸಂಗತಿಯೇನೂ ಅಲ್ಲ.
ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ, ಇತರ ಶಂಕರಾಚಾರ್ಯರು ಕೂಡ ಈ ವಿಷಯದಲ್ಲಿ ಮತ್ತು ಈ ಹಿಂದಿನ ಹಲವು ಸಂದರ್ಭಗಳಲ್ಲಿ ಯಾವುದೇ ತಪ್ಪು ಕಲ್ಪನೆಗಳಿಗೆ ಅವಕಾಶವೇ ಇಲ್ಲದಂತೆ ಅವಿಮುಕ್ತೇಶ್ವರಾನಂದ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಿರುವಾಗ, ಹಿಂದೂ ಧರ್ಮದ ಅತ್ಯುನ್ನತ ಧಾರ್ಮಿಕ ಅಧಿಕಾರಿಗಳ ಧ್ವನಿಯನ್ನು ಹತ್ತಿಕ್ಕಲು ಆರ್ಎಸ್ಎಸ್ ಮತ್ತು ಅದರ ವ್ಯವಸ್ಥೆಯು ಮಾಡುತ್ತಿರುವ ಪ್ರಯತ್ನವು, ಅದು ಧರ್ಮದ ರಕ್ಷಕನಲ್ಲ ಬದಲಿಗೆ ಧರ್ಮದ ರಾಜಕೀಯ ಶೋಷಕ ಎಂಬುದನ್ನು ಸ್ಪಷ್ಟವಾಗಿ ಬಯಲು ಮಾಡುತ್ತದೆ.
ಅವಿಮುಕ್ತೇಶ್ವರಾನಂದರು ಅನೇಕ ವಿಷಯಗಳಲ್ಲಿ ಮೋದಿ ಅಥವಾ ಯೋಗಿ ಸರ್ಕಾರದ ನಿಲುವನ್ನು ಒಪ್ಪಲು ನಿರಾಕರಿಸಿದ್ದಾರೆ ಮತ್ತು ಕಟು ಮಾತುಗಳಲ್ಲಿ ಅವರನ್ನು ಟೀಕಿಸುತ್ತ ಬಂದಿದ್ದಾರೆ. ಗೋಹತ್ಯೆಯ ವಿಷಯವಿರಲಿ ಅಥವಾ ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಅಯೋಧ್ಯೆ ಮತ್ತು ವಾರಾಣಸಿಯಲ್ಲಿ ದೇವಾಲಯಗಳ ಧ್ವಂಸದ ವಿಷಯವಿರಲಿ, ಅವರ ಹೆಚ್ಚಿನ ಟೀಕೆಗಳು ಆಧಾರಯುತವಾಗಿದ್ದು ಮತ್ತು ಸರ್ಕಾರಕ್ಕೆ ತಟ್ಟಬೇಕಾದ ಕಡೆ ಸರಿಯಾಗಿಯೇ ತಟ್ಟಿವೆ.
ಕಿವಿಗಡಚಿಕ್ಕುವ ಮೌನ
ವಾರಾಣಸಿ ಮತ್ತು ಇತರ ಸ್ಥಳಗಳಲ್ಲಿ ಪಂಚತಾರಾ ಪ್ರವಾಸಿ ಪರಿಸರವನ್ನು ನಿರ್ಮಿಸಲು ಹಲವಾರು ಹಳೆಯ ದೇವಾಲಯಗಳನ್ನು ಧ್ವಂಸಗೊಳಿಸಿದ ಬಗ್ಗೆ ಆರ್ಎಸ್ಎಸ್ನ ಮೌನವು ವಿಶೇಷವಾಗಿ ಕಿವಿಗಡಚಿಕ್ಕುವಂತಿದೆ. ದೆಹಲಿಯಲ್ಲಿ ಆರ್ಎಸ್ಎಸ್ನ 'ಕೇಶವ ಕುಂಜ್' ಟವರ್ಗಳಿಗೆ ಪಾರ್ಕಿಂಗ್ ಜಾಗವನ್ನು ನಿರ್ಮಿಸಲು ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿದಾಗ ಇವರ ಬೂಟಾಟಿಕೆ ಪರಾಕಾಷ್ಠೆ ತಲುಪಿತ್ತು.
ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಮೋದಿ ಅವರು ಪ್ರಾಣಪ್ರತಿಷ್ಠೆ ಪೂಜೆ ನೆರವೇರಿಸಿದಾಗ ಹಿಂದೂ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ವಿಷಯವನ್ನೂ ಶಂಕರಾಚಾರ್ಯರು ಎತ್ತಿದ್ದರು. ಅಪೂರ್ಣವಾಗಿರುವ ದೇವಾಲಯದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆಗೆ ಹಿಂದೂ ಶಾಸ್ತ್ರಗಳು ಅನುಮತಿ ನೀಡುವುದಿಲ್ಲ ಮತ್ತು 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿಯ ಚುನಾವಣಾ ರಾಜಕೀಯಕ್ಕೆ ಪೂರಕವಾಗಿ ಇದನ್ನು ಆತುರದಲ್ಲಿ ಮಾಡಲಾಗುತ್ತಿದೆ ಎಂದು ಅವರು ವಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರಾಣಪ್ರತಿಷ್ಠೆಯನ್ನು ದಂಪತಿಗಳು ನೆರವೇರಿಸಬೇಕೇ ಹೊರತು ಏಕಾಂಗಿ ವ್ಯಕ್ತಿಯಲ್ಲ ಎಂಬ ಸಂಗತಿಯನ್ನು ಅನೇಕರು ಹೇಳಿದ್ದರು. ಅದನ್ನು ಇವರೂ ಹೇಳಿದ್ದರು. ಅದು ಧಾರ್ಮಿಕ ಗುರುಪರಂಪರೆಯನ್ನೂ ತನ್ನೊಳಗೆ ವಿಲೀನವಾಗಿ ಮಾಡಿಕೊಳ್ಳುವ ಮೂಲಕ ಧರ್ಮವನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ತಂದುಕೊಳ್ಳಲು ರಾಜಕೀಯ ಗಣ್ಯರು ನಡೆಸಿದ ಒಂದು ಸಾಹಸಮಯ ಮತ್ತು ಧಾರ್ಮಿಕ ವಿಧಿಗಳಿಗೆ ವಿರುದ್ಧವಾದ ಪ್ರಯತ್ನವಾಗಿತ್ತು.
ಒಂದು ವೇಳೆ ಬೇರೆ ಯಾರಾದರೂ ಇದನ್ನು ಮಾಡಿದ್ದರೆ, ಆರ್ಎಸ್ಎಸ್ ಅಕ್ಷರಶಃ ಆಕಾಶವೇ ತಲೆ ಮೇಲೆ ಬಿದ್ದಂತೆ ರಾದ್ಧಾಂತ, ರಂಪಾಟ ಮಾಡುತ್ತಿತ್ತು. ಪಂಡಿತ್ ನೆಹರೂ ಅವರು ಸೋಮನಾಥ ದೇವಾಲಯದ ಪ್ರಾಣಪ್ರತಿಷ್ಠೆ ಸಮಾರಂಭದಿಂದ ದೂರವಿರಲು ತೆಗೆದುಕೊಂಡ ಗೌರವಾನ್ವಿತ ನಿರ್ಧಾರವನ್ನು ಆರ್ಎಸ್ಎಸ್ ಎಷ್ಟು ತಿರಸ್ಕಾರದಿಂದ ನೋಡುತ್ತಿತ್ತು ಎಂಬುದಕ್ಕೆ ಇದನ್ನು ಹೋಲಿಸಿ ನೋಡಿದರೆ ನಿಮಗೆ ಅರ್ಥವಾದೀತು.
ಹಿಂದೂ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪದ್ಧತಿಗಳ ಪಾವಿತ್ರ್ಯತೆಯ ಬಗ್ಗೆ ಆಗಾಗ ಧ್ವನಿ ಎತ್ತುವ ಆರ್ಎಸ್ಎಸ್, ತನ್ನದೇ ಸರ್ಕಾರದ ವಿರುದ್ಧ ಆರ್ಎಸ್ಎಸ್ ಸಿದ್ಧಾಂತಕ್ಕೆ ಒಪ್ಪದ ಹಿಂದೂಗಳು ಇಂತಹ ಪ್ರಶ್ನೆಗಳನ್ನು ಎತ್ತಿದಾಗ ಮಾತ್ರ ಮಾತೇ ಹೊರಡದವರಂತೆ ಉಳಿಯಲು ಬಯಸುತ್ತದೆ. ಈಗ ಬಲಪಂಥೀಯ ಟ್ರೋಲ್ಗಳು ಅವಿಮುಕ್ತೇಶ್ವರಾನಂದರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿವೆ ಮತ್ತು ಆ ಮೂಲಕ ಅವರೆಲ್ಲರೂ ʼಶಂಕರಾಚಾರ್ಯರುʼ ಎಂಬುದಕ್ಕೆ ಪುರಾವೆಗಳನ್ನು ಕೇಳುತ್ತಿದ್ದಾರೆ!
ಒಮ್ಮೆ ಯೋಚಿಸಿ, ಅವಿಮುಕ್ತೇಶ್ವರಾನಂದರಂತಹ ಉನ್ನತ ಸ್ಥಾನದಲ್ಲಿರುವ ಧಾರ್ಮಿಕ ಗುರುಗಳನ್ನು ಬೇರೆ ಯಾರಾದರೂ ಅಥವಾ ಯಾವುದಾದರೂ ಸಂಸ್ಥೆ ಹೀಗೆ ಪ್ರಶ್ನಿಸಿದ್ದರೆ, ಈ ಹೊತ್ತಿಗೆ ಎಂತಹ ದೊಡ್ಡ ಗದ್ದಲವೇ ಸೃಷ್ಟಿಯಾಗುತ್ತಿತ್ತು.
ಹಿಂದೂ ಧರ್ಮದ ರಾಜಕೀಯ
ಹಾಗಾದರೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಹಿಂದೂ ಧಾರ್ಮಿಕ ಪದ್ಧತಿಗಳು ಮತ್ತು ಸಂಸ್ಥೆಗಳ ಸರ್ವೋಚ್ಚ ಸ್ಥಾನದ ವಿಷಯದಲ್ಲಿ ಆರ್ಎಸ್ಎಸ್ ಹೀಗೆ ತನಗೆ ಬೇಕಾದುದನ್ನು ಮಾತ್ರ ಆಯ್ದುಕೊಳ್ಳುವ ಪ್ರವೃತ್ತಿ ಹೊಸದೇ? ಉತ್ತರ "ಇಲ್ಲ".
ಆರ್ಎಸ್ಎಸ್ ಇದನ್ನು ಬಹಳ ಹಿಂದೆಯೇ ಊಹಿಸಿತ್ತು ಮತ್ತು ವಿಶ್ವ ಹಿಂದೂ ಪರಿಷತ್-ನಂತಹ ಸಂಘಟನೆಗಳನ್ನು ಹಾಗೂ ಅನೇಕ ಇತರ ಹಿಂದೂ ಮುಂಚೂಣಿ ಘಟಕಗಳನ್ನು ಕಟ್ಟುವ ಮೂಲಕ ಧಾರ್ಮಿಕ ವಿಷಯಗಳಲ್ಲಿ ತನ್ನದೇ ಆದ ಅತೀವ ಪ್ರಭಾವವನ್ನು ನಿರ್ಮಿಸಿಕೊಳ್ಳುತ್ತಾ ಬಂದಿದೆ. ಇಂದು, ಸಾಂಪ್ರದಾಯಿಕ ಹಿಂದೂ ಧಾರ್ಮಿಕ ಸಂಸ್ಥೆಗಳಾದ ದೇವಾಲಯದ ಟ್ರಸ್ಟ್ಗಳು ಮತ್ತು ಅಖಾಡಗಳ ಮೇಲೆ ವಿಎಚ್ಪಿ ಅಪಾರವಾದ ಹಿಡಿತವನ್ನು ಹೊಂದಿದೆ. ಮತ್ತು ಮೊದಲೇ ಹೇಳಿದಂತೆ, ಅದು ತನ್ನದೇ ಆದ ನಿಷ್ಠಾವಂತ ಸಾಧು ಮತ್ತು ಸಂತರ ಪಡೆಯನ್ನೂ ಸಿದ್ಧಪಡಿಸಿಕೊಂಡಿದೆ.
ಅವಿಮುಕ್ತೇಶ್ವರಾನಂದರು ಮತ್ತು ಅವರಂತೆಯೇ ಇರುವ ಇತರರು ತಮ್ಮ ಧಾರ್ಮಿಕ ಅಧಿಕಾರವನ್ನು ಬಲವಾಗಿ ಪ್ರತಿಪಾದಿಸುತ್ತ ಬಂದವರು. ಇಂಥವರು ಧಾರ್ಮಿಕ ಅಧಿಕಾರವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಳ್ಳಲು ನಡೆಸುತ್ತಿರುವ ಆರ್ಎಸ್ಎಸ್ ವ್ಯವಸ್ಥೆಯು ಮಾಡುತ್ತಿರುವ ಪ್ರಯತ್ನದ ವಿರುದ್ಧ ಸಾಂಪ್ರದಾಯಿಕ ಹಿಂದೂ ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಒಂದು ಬಂಡಾಯವೆಂದೇ ಪರಿಗಣಿಸಬಹುದಾಗಿದೆ.
ಹಿಂದೂ ಹಿತಾಸಕ್ತಿಯ ಸ್ವಯಂ ಘೋಷಿತ ಮಾರ್ಗದರ್ಶಿಯೆಂದು ಕರೆಸಿಕೊಳ್ಳುವ ಆರ್ಎಸ್ಎಸ್, ಈಗ ವಾಸ್ತವವಾಗಿ ತಾನೇ ಒಂದು ಧರ್ಮವಾಗಿ ರೂಪಾಂತರಗೊಂಡಿದೆ. ಅವಿಮುಕ್ತೇಶ್ವರಾನಂದ ಅವರಂತಹವರು ಆರ್ಎಸ್ಎಸ್ನ ಪ್ರಭಾವಲಯದೊಳಗೆ ಇರಬೇಕು ಅಥವಾ ಯಾವುದೇ ಮುಲಾಜಿಲ್ಲದೆ ಹೊರಕ್ಕೆ ದಬ್ಬಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ರಾಜಕೀಯವನ್ನು ನಿಯಂತ್ರಿಸುವ ಯಾವುದೇ ನೈತಿಕ ಶಕ್ತಿಯನ್ನು ಧರ್ಮವು ಉಳಿಸಿಕೊಂಡಿಲ್ಲ ಎನ್ನುವುದಕ್ಕೆ ಬದಲಾಗಿ ರಾಜಕೀಯವೇ ಧರ್ಮದ ಮೇಲೆ ಸವಾರಿ ಮಾಡುತ್ತಿದೆ.
ಅಂತಿಮವಾಗಿ, ಸರ್ಕಾರಿ ಅಥವಾ ಇತರ ಸಂಸ್ಥೆಗಳಂತೆಯೇ, 'ಧರ್ಮವಾಗಿ ಹಿಂದೂ ಧರ್ಮ'ವು ಶೀಘ್ರದಲ್ಲೇ 'ರಾಜಕೀಯವಾಗಿ ಹಿಂದುತ್ವ'ಕ್ಕೆ ಸಂಪೂರ್ಣವಾಗಿ ಅಧೀನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

