Parsa Venkateshwar Rao Jr

ಒಗಟಾದ ಸಾಹಿಲ್ ಸಾವು: ʼಪ್ರತಿಭೆʼ ಎಂಬ ಮುಖವಾಡದ ಹಿಂದೆ ಜಾತಿ ತಾರತಮ್ಯದ ಕುದಿ ಬೆಂಕಿ


ಒಗಟಾದ ಸಾಹಿಲ್ ಸಾವು: ʼಪ್ರತಿಭೆʼ ಎಂಬ ಮುಖವಾಡದ ಹಿಂದೆ ಜಾತಿ ತಾರತಮ್ಯದ ಕುದಿ ಬೆಂಕಿ
x
ಬಾಂಬೆ ಐಐಟಿ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರೊಫೆಸರ್ ಸತ್ಯನಾರಾಯಣ ದೊಲ್ಲಾ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಹಿಲ್ ಅವರ ಪಾಲಕರು.
Click the Play button to hear this message in audio format

ಮೀಸಲಾತಿಯಂತಹ ಸೌಲಭ್ಯದ ಮೂಲಕ ವಿದ್ಯಾರ್ಥಿಗಳು ಸುಲಭದ ದಾರಿ ಹಿಡಿದಿದ್ದಾರೆ ಎಂಬ ಮಿಥ್ಯೆಯನ್ನು ಸಾಹಿಲ್ ವಾಕೋಡೆ ಆತ್ಮಹತ್ಯೆ ಮುರಿಯಬೇಕಿದೆ. ಆತ ಇಲ್ಲಿ ಇದ್ದುದು ತನ್ನ ಬೌದ್ಧಿಕ ಅರ್ಹತೆಯಿಂದಲೇ ಹೊರತು ಅನ್ಯ ಕಾರಣಕ್ಕಲ್ಲ.

ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಬಾಂಬೆ)ಯ ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ದುರದೃಷ್ಟಕರ ಆತ್ಮಹತ್ಯೆಯು ಭಾರತೀಯ ಸಮಾಜದಲ್ಲಿ ಜಾತಿಪದ್ಧತಿಯು ಹೇಗೆ ಬೇರೂರಿದೆ ಎಂಬುದನ್ನು ಅವಲೋಕಿಸಲು ಸೂಕ್ತ ಪ್ರಕರಣವಾಗಿದೆ. ಇಂತಹ ಅನಿಷ್ಟಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಹೊರತಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಭಾವಿ ಬಲಪಂಥೀಯ ವಿಚಾರಧಾರೆಗಳು ಮೇಲುಗೈ ಸಾಧಿಸುತ್ತಿರುವ ಇಂತಹ ವಿಷಕಾರಿಯಾದ ಕಾಲಘಟ್ಟದಲ್ಲಿ ಇದು ಹೆಚ್ಚು ಪ್ರಸ್ತುತವೂ ಆಗಿದೆ.

ಸಾಹಿಲ್ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿದ್ದಾರೆ ಎಂಬುದು ಆರೋಪ. ಆ ಕಾರಣಕ್ಕೇ ವಿದ್ಯಾರ್ಥಿ ವ್ಯವಹಾರಗಳ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊಫೆಸರ್ ಸತ್ಯನಾರಾಯಣ ದೊಲ್ಲಾ ಅವರು ಸಾಹಿಲ್ ಅವರನ್ನು ಕೊಠಡಿಯಿಂದ ಹೊರಹೋಗುವಂತೆ ಸೂಚಿಸಿದ್ದರು ಎನ್ನಲಾಗುತ್ತದೆ. ಇದರಿಂದ ಅವಮಾನಕ್ಕೆ ಒಳಗಾದ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪಿಸಲಾಗಿದೆ. ಈ ವಿದ್ಯಾರ್ಥಿಯ ಪಾಲಕರು ಮತ್ತು ಕುಟುಂಬದ ಸದಸ್ಯರು ತೀವ್ರ ದುಃಖದಲ್ಲಿದ್ದಾರೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದಾರೆ.

ಯಾಕೆಂದರೆ ಪ್ರೊಫೆಸರ್ ದೊಲ್ಲಾ ಹಾಗೆ ಕ್ರಮ ಕೈಗೊಳ್ಳದೇ ಇದ್ದಿದ್ದರೆ ಸಾಹಿಲ್ ಆತ್ಮಹತ್ಯೆ ಕೈಗೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಕುಟುಂಬದ ಸದಸ್ಯರು ಆರೋಪಿಸುತ್ತಾರೆ. ಆದರೆ ಈಗ ನಡೆಯುತ್ತಿರುವ ತನಿಖೆಯು ಯಾವುದೇ ಸಂದೇಹಕ್ಕೆ ಅವಕಾಶ ಇಲ್ಲದಂತೆ ಆರೋಪವನ್ನು ಸಾಬೀತು ಮಾಡುವ ತನಕ ಅದಕ್ಕೆ ಯಾವುದೇ ರೀತಿಯಲ್ಲಿ ಅಧಿಕೃತ ಮುದ್ರೆ ಒತ್ತಲು ಸಾಧ್ಯವಿಲ್ಲ. ಇದು ಸಾಹಿಲ್ ಮತ್ತು ಪ್ರೊ.ದೊಲ್ಲಾ ಎರಡೂ ಕುಟುಂಬಗಳಿಗೆ ಅತ್ಯಂತ ನೋವಿನ ಪ್ರಕ್ರಿಯೆಯಾಗಿದೆ.

ಜಾತಿ ಯಾಕೆ ಹಿನ್ನಡೆಯಾಯಿತು?

ಸಾಹಿಲ್ ಸಾವಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶವು ಸ್ಪಷ್ಟವಾಗಿ ಕಾಣುತ್ತಿದೆ. ಯಾಕೆಂದರೆ ಸಮಾಜದಲ್ಲಿ ವಿಷದಂತೆ ಗಾಳಿಯಲ್ಲಿ ತೇಲಾಡುವ ಕಣ್ಣಿಗೆ ಕಾಣದ ಜಾತಿ ವಿಭಜನೆಯೊಂದು ಬೇರುಬಿಟ್ಟಿದೆ. ಇದು ಸ್ಪಷ್ಟವಾಗಿ ಕೈಗೆ ಸಿಗದ, ನುಣುಚಿಕೊಳ್ಳುವ ವಿಷಯವಾಗಿದೆ. ಜಾತಿ ಪದ್ದತಿ ಇದ್ದೂ ಇಲ್ಲದಂತೆ ಕಾಡುತ್ತಲೇ ಇದೆ.

ಇನ್ನೊಂದು ಕಡೆ ಭಿನ್ನ ವಾದವನ್ನು ಮಂಡಿಸುವವರೂ ಇದ್ದಾರೆ. ಪ್ರತಿಭೆಗೆ ಮಾತ್ರ ಆದ್ಯತೆ ಎಂಬ ಮಾನದಂಡದ ಹಿಂದೆ ಅವರು ಅಡಗಿಕೊಳ್ಳುತ್ತಾರೆ. ಪ್ರೊಫೆಸರ್ ದೊಲ್ಲಾ ಅವರು ಕೇವಲ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ವಾದಿಸುತ್ತಾರೆ. ಮೀಸಲಾತಿಯ ಕೋಟಾದಲ್ಲಿ ಬಂದ ಎಂಬ ಒಂದೇ ಕಾರಣಕ್ಕೆ ಆತ ಮಾಡಿದ ತಪ್ಪುಗಳನ್ನು ಮನ್ನಿಸಲು ಸಾಧ್ಯವಿಲ್ಲ ಎಂಬುದೂ ಅವರ ತರ್ಕವಾಗಿದೆ.

ಇವೆಲ್ಲದರ ನಡುವೆಯೇ ಆತ್ಮಹತ್ಯೆಗೆ ಶರಣಾದ ಇನ್ನೂ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಸಾಹಿಲ್ ಕುಟುಂಬ ಮಾಡಿದಂತೆ ಆ ಇಬ್ಬರು ವಿದ್ಯಾರ್ಥಿಗಳ ಕುಟುಂಬದವರು ತಾರತಮ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಹಾಗೆ ಮಾಡಲಾಗುತ್ತಿದೆಯೇ?

ದುಃಖತಪ್ತರಾಗಿರುವ ಸಾಹಿಲ್ ಅವರ ಕುಟುಂಬವು ಆತ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್ ಬಳಸಿದನ್ನು ಸಮರ್ಥಿಸಿಕೊಳ್ಳುವುದಿಲ್ಲ. ಬದಲಿಗೆ ಅವರು ಕಾಲೇಜಿನ ಕ್ಯಾಂಪಸ್ನಲ್ಲಿ ಆಳವಾಗಿ ಬೇರು ಬಿಟ್ಟಿರುವ ಮತ್ತು ಎಲ್ಲ ಕಡೆಗಳಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿಯ ಬಗ್ಗೆ ಆಕ್ರೋಶ ಹೊರಹಾಕುತ್ತಾರೆ. ಇದು ವಿಷಯವನ್ನು ಮರೆಮಾಚುವ ಅಥವಾ ಸಮರ್ಥನೆ ನೀಡುವ ತಂತ್ರವಲ್ಲ. ಜಾತಿ ಪದ್ಧತಿಗೆ ಸಂಬಂಧಿಸಿದ ಪ್ರಶ್ನೆಯಲ್ಲಿ ದೊಡ್ಡ ಸತ್ಯವೊಂದು ಅಡಗಿದೆ. ಒಂದು ವೇಳೆ ಸಾಹಿಲ್ ಅವರಂತೆ ಪ್ರಭಾವಿ ಜಾತಿಯ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದರೆ ಆತ ಆ ಹಿಯಾಳಿಕೆ ಮತ್ತು ಕಳಂಕವನ್ನು ಲಘುವಾಗಿ ತಳ್ಳಿಹಾಕುತ್ತಿದ್ದ. ಯಾಕೆಂದರೆ ಆತನ ಜಾತಿ ಮತ್ತು ಸಹಪಾಠಿಗಳಿಂದ ಆತನಿಗೆ ಸಾಮಾಜಿಕ ಬೆಂಬಲ ಸಿಗುತ್ತಿತ್ತು. ಅದರಿಂದಾಗಿ ಆತನಿಗೆ ಆತ್ಮವಿಶ್ವಾಸ ತುಂಬುತ್ತಿತ್ತು. ಸಾಹಿಲ್ಗೆ ಆ ರೀತಿಯ ಬೆಂಬಲ ಇರಲಿಲ್ಲ ಎಂಬುದು ಸ್ಪಷ್ಟ. ಒಬ್ಬ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಸಮಾಜದ ವ್ಯವಸ್ಥೆ ಕ್ಷಮಿಸದ ಗುಣವನ್ನು ಹೊಂದಿರುವುದರಿಂದ ಸಣ್ಣ ತಪ್ಪು ಕೂಡ ದೊಡ್ಡದಾಗಿಯೇ ಕಾಣುತ್ತದೆ ಮತ್ತು ಮುಂದೆ ಸಾಗಲು ಕಡಿಮೆ ಅವಕಾಶವಿರುತ್ತದೆ.

ಸಾಹಿಲ್ ಒಡನಾಟ ಹೇಗಿತ್ತು?

ಈ ಘಟನೆ ಕುರಿತು ಅನಗತ್ಯವಾದ ವಾಗ್ವಾದದ ತಿರುವು ಪಡೆದುಕೊಂಡಿರುವುದರಿಂದ ಇದರಲ್ಲಿ ಅಡಕವಾಗಿರುವ ಪ್ರಮುಖ ಸಂಗತಿಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಘಟನೆಯ ಬಗ್ಗೆ ಸಾಹಿಲ್ ಅವರ ಸಹಪಾಠಿಗಳು ಮತ್ತು ಸಹವಾಸಿಗಳು (ಹಾಸ್ಟೆಲ್ ವಿದ್ಯಾರ್ಥಿಗಳು) ಎಂತಹ ಭಾವನೆ ಹೊಂದಿದ್ದಾರೆ ಎನ್ನುವ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ವಿದ್ಯಾರ್ಥಿ ಸಮುದಾಯದ ಜೊತೆ ಹೊಂದಿಕೊಳ್ಳುವ ಮನೋಭಾವ ಸಾಹಿಲ್ ಅವರಿಗೆ ಇರಲಿಲ್ಲವೇ? ಅವರ ಸಾವಿನ ಬಗ್ಗೆ ಐಐಟಿ-ಬಾಂಬೆ ವಿದ್ಯಾರ್ಥಿಗಳು ಯಾಕೆ ಯಾವುದೇ ಶೋಕಾಚರಣೆ ನಡೆಸಲಿಲ್ಲ? ಸಾಹಿಲ್ ಅಂತರ್ಮುಖಿಯಾಗಿದ್ದರೆ? ಆ ಕಾರಣಕ್ಕೆ ಅವರು ಒಂಟಿಯಾಗಿ ಇರುತ್ತಿದ್ದರೆ ಅಥವಾ ಜಾತಿ ಸ್ಥಾನಮಾನದ ಕಾರಣದಿಂದ ಹಾಗೆ ಇರುತ್ತಿದ್ದರೇ? ಐಐಟಿಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಬೆರೆಯಲು ಮತ್ತು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಯಾವುದೇ ಪರಿಚಯ ಕಾರ್ಯಕ್ರಮಗಳು ಇದ್ದವೇ? ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಯಾವುದೇ ಔಪಚಾರಿಕ ಸಾಮಾಜಿಕ ಆರಂಭಿಕ ಪ್ರಕ್ರಿಯೆಗಳು ಇರುವುದಿಲ್ಲ. ವಿದ್ಯಾರ್ಥಿಗಳು ಕಾಲಾಂತರದಲ್ಲಿ ಅಥವಾ ಬ್ರಿಟಿಷ್ ವಸಾಹತುಶಾಹಿ ಪರಂಪರೆಯಾದ ragging ಮೂಲಕವೇ ಪರಸ್ಪರ ಪರಿಚಿತರಾಗುತ್ತಾರೆ.

ದುರದೃಷ್ಟವಶಾತ್, ನಮಗೆ ವಿದ್ಯಾರ್ಥಿಗಳ ಸಾಮಾಜಿಕ ಜೀವನದ ಬಗ್ಗೆ ಹೆಚ್ಚಿನ ವಿಷಯಗಳು ತಿಳಿದಿಲ್ಲ. ಬೇರೆ ಬೇರೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಗುಂಪುಗಳು ಪರಸ್ಪರ ಹೇಗೆ ಬೆರೆಯುತ್ತವೆ ಎಂಬುದರ ಅರಿವು ನಮಗಿಲ್ಲ. ಅದೇ ರೀತಿ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಮತ್ತು ಭಯಾನಕವಾಗಿ ಆವರಿಸಿರುವ ಭಾಷೆ, ಜಾತಿ ಮತ್ತು ಧರ್ಮದ ವಿಷಯಗಳ ಬಗ್ಗೆಯೂ ನಮಗೆ ತಿಳಿದಿಲ್ಲ.

ಆದರೆ ಪರಿಸ್ಥಿತಿ ಹೀಗಿರಬೇಕಾದ ಅಗತ್ಯವೇನೂ ಇಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಈ ಭೇದಭಾವಗಳನ್ನು ಮೆಟ್ಟಿ ನಿಲ್ಲುತ್ತಾರೆ. ಅವರು ಸ್ವಭಾವತಃ ಈ ಎಲ್ಲ ಗೆರೆಗಳನ್ನು ದಾಟಿ ಒಂದಾಗುತ್ತಾರೆ. ಆದರೆ ಇದು ತಾನಾಗಿಯೇ ನಡೆಯುವ ಒಂದು ಪ್ರಕ್ರಿಯೆ. ಇದನ್ನು ಯಾರೂ ಗಮನಿಸುವುದಿಲ್ಲ ಮತ್ತು ಯಾರೂ ದಾಖಲಿಸುವುದಿಲ್ಲ ಕೂಡ.

ಸಾಮಾಜಿಕ ಆಯಾಮಗಳನ್ನು ಮೀರಿ

ಭಾರತವು ಶತಮಾನಗಳಿಂದ ಬದಲಾಗುತ್ತ ಸಾಗಿದೆ. ಜಾತಿಗಳು ಎಂದಿಗೂ ಮುಚ್ಚಿದ ಕೋಟೆಗಳಾಗಿರಲಿಲ್ಲ. ಜನರು ಪರಸ್ಪರ ಬೆರೆತಿದ್ದಾರೆ, ಒಡನಾಡಿದ್ದಾರೆ. ಆದರೆ, ತಮ್ಮದೇ ಆದ ನಾನಾ ರೀತಿಯ ಆಂತರಿಕ ರಚನೆಗಳನ್ನು ಹೊಂದಿರುವ ಪರಿಶಿಷ್ಟ ಜಾತಿಗಳು ಅಂದರೆ ದಲಿತರ ಪರಿಸ್ಥಿತಿ ಭಿನ್ನವಾಗಿದೆ. ವಸಾಹತುಶಾಹಿ ಕಾಲದಲ್ಲಿ ಇದರ ಸ್ವರೂಪ ವಿರೂಪಗೊಂಡಿತು. ಬ್ರಿಟಿಷ್ ಆಡಳಿತಗಾರರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಭಾರತೀಯ ಸಮಾಜದ ಸಾಂಪ್ರದಾಯಿಕ ಜಾತಿ ಶ್ರೇಣಿಗಳನ್ನು ಮುರಿಯಲು ಪ್ರಯತ್ನಿಸಿದರು ಮತ್ತು ಸ್ವತಂತ್ರ ಭಾರತದ ಸರ್ಕಾರಗಳು ಈ ವ್ಯವಸ್ಥೆಯನ್ನು ಮುಂದುವರೆಸಿವೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯಾವುದೇ ಕೋಟಾ ವ್ಯವಸ್ಥೆ ಇಲ್ಲ (ಪ್ರವೇಶದ ವಿಷಯದಲ್ಲಿ ಮೀಸಲಾತಿ ಇದ್ದರೂ ಮೂಲ ವ್ಯವಸ್ಥೆ ಒಂದೇ). ಖಂಡಿತವಾಗಿಯೂ, ದಾಖಲಾತಿ ಮತ್ತು ಶಾಲೆಯಿಂದ ಹೊರಗುಳಿಯುವ ಅಂಕಿಅಂಶಗಳು ವರ್ಗ ಮತ್ತು ಜಾತಿಯ ಸಂಕೀರ್ಣ ಕಥೆಯನ್ನು ಬಹಿರಂಗಪಡಿಸುತ್ತವೆ. ಆದರೆ ಮೂಲತಃ ಶಾಲೆಗಳಲ್ಲಿ ಸಾಮಾಜಿಕ ಆಯಾಮಗಳನ್ನು ಮೀರಿ ಮಕ್ಕಳು ಪರಸ್ಪರ ಬೆರೆಯುತ್ತಾರೆ. ಕಾಲೇಜುಗಳ ಯುವಕರೂ ಹಾಗೆಯೇ ಬೆರೆಯುತ್ತಾರೆ.

ಸತ್ಯದ ಸಂಗತಿ ಎಂದರೆ ಸಮಾಜದಲ್ಲಿ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅಪಾರ ಬದಲಾವಣೆ ಮತ್ತು ಬೆರೆಯುವ ವಾತಾವರಣವಿದೆ, ಬಹುಶಃ ಶಾಲೆ-ಕಾಲೇಜುಗಳಲ್ಲಿ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ, ಆದರೂ ಜಾತಿ ವಿಭಜನೆಗಳು ಮುಂದುವರೆದಿವೆ. ಮತ್ತು ಅವು ಎಲ್ಲಾ ಜಾತಿಗಳಲ್ಲೂ ಚಾಲ್ತಿಯಲ್ಲಿವೆ. ಜಾತಿ ರೇಖೆಗಳನ್ನು ಮೀರಿ ಸ್ನೇಹ ಮತ್ತು ಇತರ ಸಾಮಾಜಿಕ ಸಂಬಂಧಗಳು ಅಸ್ತಿತ್ವದಲ್ಲಿವೆ, ಮತ್ತು ಯುವಕ-ಯುವತಿಯರು ಪ್ರೀತಿ-ಪ್ರೇಮದಲ್ಲಿ ಬಿದ್ದಾಗ ಆ ರೇಖೆಗಳನ್ನು ಕೂಡ ದಾಟಲಾಗುತ್ತದೆ, ಅಂತರ್ಜಾತಿ ವಿವಾಹಗಳು ನಡೆಯುತ್ತವೆ. ಅಂತರ್ಜಾತಿ ವಿವಾಹಗಳ ಅನುಪಾತದ ಬಗ್ಗೆ ಯಾವುದೇ ಸಾಮಾಜಿಕ ಅಂಕಿಅಂಶಗಳಿಲ್ಲ. ಹಾಗೆಯೇ ಜಾತಿ ವಿಭಜನೆಗಳನ್ನು ಮೀರಿ ಅಸ್ತಿತ್ವದಲ್ಲಿರುವ ಸ್ನೇಹ ಮತ್ತು ವೃತ್ತಿಪರ ಒಡನಾಟದ ಸಾಮಾಜಿಕ ಬಂಧಗಳ ಬಗೆಗೆ ಯಾವುದೇ ಅಳತೆಗೋಲುಗಳಿಲ್ಲ. ಸಾಹಿಲ್ ಮತ್ತು ಅವರಂತಹ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಏನೆಂದರೆ, ಜಾತಿಯ ತಡೆಗೋಡೆಯಿಂದಾಗಿ ಲಭ್ಯವಿರುವ ಸಾಮಾಜಿಕ ಸುರಕ್ಷತಾ ಜಾಲ; ಈ ತಡೆಗೋಡೆಯು ಒಡೆದುಹೋಗಿದೆ ಎಂದು ತೋರುತ್ತದೆ, ಆದರೆ ವಾಸ್ತವವಾಗಿ ಅದು ಮುರಿದಿಲ್ಲ.

ಸಾಹಿಲ್ ಅರ್ಹತೆಯ ಪ್ರತಿರೂಪ

ಮುರಿಯಲೇಬೇಕಾದ ಎರಡು ಪರಸ್ಪರ ವಿರೋಧಿ ಮಿಥ್ಯೆಗಳಿವೆ. ಮೊದಲನೆಯದು ಯೋಗ್ಯತೆ ಅಥವಾ ಅರ್ಹತೆಯ ಕಲ್ಪನೆ. ಎರಡನೆಯದು 'ಮೀಸಲಾತಿ ಕೋಟಾ' ವ್ಯವಸ್ಥೆಯು ಅರ್ಹತೆಯನ್ನು ಕುಂಠಿತಗೊಳಿಸುತ್ತದೆ ಎಂಬ ನಂಬಿಕೆ. ಅರ್ಹತೆ ಎನ್ನುವುದು ಕೇವಲ ಸರಳವಾದ ಸತ್ಯವಲ್ಲ; ಅದರ ಹಿಂದೆ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳು ಅಡಗಿರುತ್ತವೆ. ಇದು ಸಂಪೂರ್ಣವಾಗಿ ನ್ಯಾಯದ ತತ್ವವನ್ನು ಆಧಾರಿಸಿದ್ದಾಗಿರುವುದಿಲ್ಲ. ಅರ್ಹತೆಯ ಮುಖವಾಡದಡಿಯಲ್ಲಿ ಸಾಮಾಜಿಕ ಏಕಸ್ವಾಮ್ಯಗಳು ಮುಂದುವರಿಯುತ್ತವೆ. ಸಮಾಜ ಮತ್ತು ರಾಷ್ಟ್ರ ಸಮೃದ್ಧಿಯಾಗಬೇಕಾದರೆ, ಅಲ್ಲಿ ಸಾಮಾಜಿಕ ವೈವಿಧ್ಯತೆಯ ಅಗತ್ಯವಿರುತ್ತದೆ. ಧಮ೯ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಅಂಚಿಗೆ ಸರಿಸುವ ಭಾರತೀಯ ಸಮಾಜವು, ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡಲು ಅಗತ್ಯವಿರುವ ನುರಿತ ಕಾರ್ಯಪಡೆಯನ್ನು ಹೊಂದಿಲ್ಲ.

ಸಾಹಿಲ್ ಐಐಟಿ-ಬಾಂಬೆಯಲ್ಲಿ ಇರಲು ಕಾರಣ ಮೀಸಲಾತಿಯಿಂದ ಸಿಕ್ಕಿದ ಸುಲಭದ ದಾರಿಯಲ್ಲ. ಆತ ಅಲ್ಲಿರಲು ಕಾರಣ, ತಾನು ಹೊಂದಿದ್ದ ಸಹಜ ಬೌದ್ಧಿಕ ಅರ್ಹತೆಯನ್ನು ಸಾಬೀತುಪಡಿಸಿದ್ದೇ ಆಗಿದೆ. ಪರೀಕ್ಷಾ ಕೊಠಡಿಯಲ್ಲಿ ನಡೆದ ಆ ಘಟನೆಯಿಂದ ಆತನ ಬೌದ್ಧಿಕ ಅರ್ಹತೆಗೆ ಯಾವುದೇ ಧಕ್ಕೆಯಾಗಿಲ್ಲ, ಅಥವಾ ಆ ಅರ್ಹತೆ ಸುಳ್ಳಾಗಿಲ್ಲ.

(ಆತ್ಮಹತ್ಯೆಗಳನ್ನು ತಡೆಯಬಹುದು. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳಿಗೆ ಕರೆ ಮಾಡಿ: ನೇಹಾ ಆತ್ಮಹತ್ಯೆ ತಡೆ ಕೇಂದ್ರ 044-24640050; ಆಸರಾ ಆತ್ಮಹತ್ಯೆ ತಡೆಗಟ್ಟುವ, ಭಾವನಾತ್ಮಕ ಬೆಂಬಲ ಮತ್ತು ಆಘಾತ ಸಹಾಯ ಸಹಾಯವಾಣಿ - +91 9820466726, ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ 1800-599-0019, ದಿಶಾ 0471 2552056, ಮೈತ್ರಿ 0484 2540530, ಮತ್ತು ಸ್ನೇಹಾ ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿ 044-24640050.)

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story