
ಸಾರ್ಕ್ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವಾದ ಸಾಫ್ಟಾ (SAFTA) ಅಸ್ತಿತ್ವದಲ್ಲಿದ್ದರೂ ಅದರ ಸಂಪೂರ್ಣ ಸಾಮರ್ಥ್ಯ ಇನ್ನೂ ಬಳಕೆಯಾಗಿಲ್ಲ.
ಬ್ರಿಕ್ಸ್ ಮಾತು ಬಿಡಿ, ಸಾರ್ಕ್ ಕಡೆಗೂ ಚಿತ್ತ ಹರಿಸಿ: ಭಾರತದ ಮುಂದಿದೆ ಬೆಟ್ಟದಂತಹ ಸವಾಲು
ಸಾರ್ಕ್‌ನ ಕೊನೆಯ ಶೃಂಗಸಭೆ 2014ರಲ್ಲಿ ಕಠ್ಮಂಡುವಿನಲ್ಲಿ ನಡೆದಿತ್ತು. ಅಂದಿನಿಂದ ಸಂಘಟನೆಯ ಪ್ರಮುಖ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಈ ವಾರಾಂತ್ಯದಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಸಮಾವೇಶದ ಜೊತೆಗೆ, ಈ ವೇದಿಕೆಗಳಲ್ಲಿ ಭಾರತದ ಪ್ರಭಾವ ಕ್ಷೀಣಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಎಲ್ಲರ ಅಭಿಪ್ರಾಯವನ್ನು ಒಪ್ಪುವುದೇ ಹೌದಾದರೆ ಈ ಎರಡೂ ಸಂಘಟನೆಗಳಲ್ಲಿ ಈಗ ಚೀನಾ ಪ್ರಾಬಲ್ಯವೇ ಅಧಿಕವಾಗಿದೆ. ಹಾಗಾದರೆ ಇದರಿಂದ ಭಾರತದ ಸ್ಥಿತಿ ಏನಾಗುತ್ತದೆ?
ದಕ್ಷಿಣ ಏಷ್ಯಾ ಪ್ರದೇಶದ ದೇಶಗಳನ್ನು ಒಳಗೊಂಡಿರುವ ಸಾರ್ಕ್ ಗುಂಪು ಒಂದೇ ಒಂದು ಬಹುಪಕ್ಷೀಯ ಸಂಸ್ಥೆಯಾಗಿದ್ದು, ಇದರಲ್ಲಿ ಭಾರತವು ಸ್ವಲ್ಪ ಮಟ್ಟಿಗೆ ತನ್ನ ಮಾತನ್ನು ನಡೆಯುವಂತೆ ಮಾಡುವ ಎಲ್ಲ ಸಾಧ್ಯತೆಯಿತ್ತು ಮತ್ತು ಬಹುಶಃ ನಾಯಕತ್ವವನ್ನು ಕೂಡ ವಹಿಸಬಹುದಿತ್ತು ಅಥವಾ ಪ್ರಾಬಲ್ಯ ಸಾಧಿಸಬಹುದಿತ್ತು. ಆದರೆ 2016 ರಲ್ಲಿ ಪಾಕಿಸ್ತಾನದ ಗಡಿಯಲ್ಲಿರುವ ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದನಾ ದಾಳಿ ನಡೆದ ಬಳಿಕ, ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಕೊನೆಯ ಶೃಂಗಸಭೆಯಿಂದ ಭಾರತ ಹಿಂದೆ ಸರಿದಾಗಿನಿಂದ ಈ ಗುಂಪು ಬಹುತೇಕ ನಿಷ್ಕ್ರಿಯಗೊಂಡಿದೆ. ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ಕೂಡ ಹಿಂದೆ ಸರಿದಿದ್ದರಿಂದ ಶೃಂಗಸಭೆಯು ರದ್ದಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ವೈಷಮ್ಯವೇ ಸಾರ್ಕ್ನ ಈ ದುಸ್ಥಿತಿಗೆ ಮುಖ್ಯ ಕಾರಣ ಎಂದರೆ ತಪ್ಪಲಾಗರಾದು. ಆದರೆ, ದಕ್ಷಿಣ ಏಷ್ಯಾದ ಉಪಸ್ಥಿತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿರುವ ಮತ್ತು ಈ ಪ್ರದೇಶದಲ್ಲಿ ಒಂದು ಒಗ್ಗಟ್ಟಿನ ಸೂತ್ರವಾಗಿ ಕಾರ್ಯನಿರ್ವಹಿಸಬಲ್ಲ ಸಾರ್ಕ್ ಕೈಬಿಟ್ಟಿದ್ದು ರಾಜಕೀಯವಾಗಿ ಎಷ್ಟರ ಮಟ್ಟಿಗೆ ಬುದ್ಧಿವಂತಿಕೆಯ ನಿರ್ಧಾರ? ಹಾಗಂತ ಇದು ಇನ್ನೂ ಔಪಚಾರಿಕವಾಗಿ ವಿಸರ್ಜನೆಗೊಂಡಿಲ್ಲ ಎಂಬುದು ನಿಜವಾದರೂ, ಪ್ರಾಯೋಗಿಕ ಉದ್ದೇಶಗಳಿಗಾಗಿ ಕೆಲವೇ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ, ಈ ಗುಂಪಿನ ಉಳಿದ ಚಟುವಟಿಕೆಗಳು ಅನಿಶ್ಚಿತತೆಯಲ್ಲಿ ಮುಳುಗಿ ಹೋಗಿದೆ.
ಸಾರ್ಕ್ ಮರುಸ್ಥಾಪನೆಗೆ ಬಾಂಗ್ಲಾ ಆಸಕ್ತಿ
ಅಮೆರಿಕದ ಏಕಪಕ್ಷೀಯ ಧೋರಣೆಯಿಂದ ಅಂತರರಾಷ್ಟ್ರೀಯ ವ್ಯವಸ್ಥೆಯು ಬಹುತೇಕ ಕುಸಿದುಬಿದ್ದಿರುವ ಈ ಸಂದರ್ಭದಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟ ವಿಶೇಷ ಆಸಕ್ತಿಯನ್ನು ಮೂಡಿಸಿದೆ. ಇದು ಇರಾನ್ ಜೊತೆಗಿನ ಯುದ್ಧಕ್ಕೂ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕಗಳನ್ನೇ ತಮ್ಮ ಅಸ್ತ್ರವಾಗಿ ಬಳಸಿರುವುದು ಸಾರ್ಕ್ನ ಎಂಟು ದೇಶಗಳು ಸೇರಿದಂತೆ ಇಡೀ ಜಾಗತಿಕ ಸಮುದಾಯದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಮರೆಯುವಂತಿಲ್ಲ. ಇದರ ಜೊತೆಗೆ, ರಷ್ಯಾ-ಉಕ್ರೇನ್ ಯುದ್ಧವು ಮುಂದುವರಿದಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ.
ಕುತೂಹಲದ ಸಂಗತಿ ಎಂದರೆ ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ತಾರಿಕ್ ರೆಹಮಾನ್ ಅವರು ತಮ್ಮ ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಸಾರ್ಕ್ ಬಗ್ಗೆ ಪ್ರಸ್ತಾಪಿಸಿ, ಅದಕ್ಕೆ ಮರುಜೀವ ನೀಡುವ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದರು. ಈಗಿನ ಪ್ರಧಾನಿಯ ತಂದೆಯಾದ ಮಾಜಿ ಪ್ರಧಾನಿ ಜಿಯಾ ಉರ್ ರೆಹಮಾನ್ ಅವರ ಆಡಳಿತಾವಧಿಯಲ್ಲಿ, ಅಂದರೆ 41 ವರ್ಷಗಳ ಹಿಂದೆ ಸಾರ್ಕ್ ಆರಂಭವಾಗಲು ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಗಮನಾರ್ಹ.
ಇಸ್ಲಾಮಾಬಾದ್ ಜೊತೆಗಿನ ವೈಷಮ್ಯವನ್ನು ಲೆಕ್ಕಿಸದೆ, ಸಾರ್ಕ್ ಸಂಘಟನೆಗೆ ಮತ್ತೆ ಜೀವ ತುಂಬುವುದು ಭಾರತದ ಹಿತಾಸಕ್ತಿಯೂ ಹೌದು. ಈ ಗುಂಪಿನ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಳ್ಳಲು ಕಾರಣ, ಅದರ ಸಂವಿಧಾನದಲ್ಲಿದ್ದ ಎಲ್ಲಾ ನಿರ್ಧಾರಗಳನ್ನು ಒಮ್ಮತದಿಂದ ಮಾತ್ರ ಕೈಗೊಳ್ಳಬೇಕು ಎಂಬ ನಿಬಂಧನೆ. ಪ್ರಮುಖ ವಿಷಯಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಒಮ್ಮತ ಮೂಡಲು ಸಾಧ್ಯವಾಗದ ಕಾರಣ ಈ ಗುಂಪು ಜಡವಾಗಿ ಹೋಗಿತ್ತು.
ಒಮ್ಮತದಿಂದ ಬಹುಮತಕ್ಕೆ ನಿಯಮ
ಹಾಗಾಗಿ ಎಲ್ಲಾ ನಿರ್ಧಾರಗಳಲ್ಲಿ ಮೂಲ ನಿಯಮವನ್ನು ಒಮ್ಮತದಿಂದ ಬಹುಮತಕ್ಕೆ ಬದಲಾಯಿಸಿದರೆ ಮಾತ್ರ ಈ ಗುಂಪನ್ನು ಮತ್ತೆ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ, ಭಾರತ ಮತ್ತು ಪಾಕಿಸ್ತಾನವು ಪರಸ್ಪರ ವಿರೋಧದಲ್ಲಿದ್ದರೂ ಕೂಡ ಈ ಗುಂಪು ತನ್ನ ಕೆಲಸವನ್ನು ಮುಂದುವರಿಸಬಹುದು.
ಕೊನೆಯದಾಗಿ, ನೆರೆಹೊರೆಯಲ್ಲಿರುವ ಸಣ್ಣ ದೇಶಗಳು ಈ ಗುಂಪಿನ ಮೂಲಕ ತಮ್ಮ ಧ್ವನಿಯನ್ನು ಕೇಳುವಂತೆ ಮಾಡಲು ಮತ್ತು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಯಸುತ್ತವೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಕೂಡ ಇತ್ತೀಚೆಗೆ ಸಾರ್ಕ್ನ್ನು ಪುನರುಜ್ಜೀವನಗೊಳಿಸುವ ತಾರಿಕ್ ರೆಹಮಾನ್ ಅವರ ಮನವಿಯನ್ನು ಪುನರುಚ್ಚರಿಸಿದ್ದಾರೆ.
ಭಾರತ-ಪಾಕಿಸ್ತಾನದ ಅಂಶವನ್ನು ಹೊರತುಪಡಿಸಿದರೆ, ವಾಸ್ತವ ಪರಿಸ್ಥಿತಿಗಳು ಸಾರ್ಕ್ನ ಸಾಮರ್ಥ್ಯಕ್ಕೆ ವಿರುದ್ಧವಾಗಿವೆ, ಆದರೆ ಅವುಗಳನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ ಎಂದೇನಿಲ್ಲ. ಉದಾಹರಣೆಗೆ, ಸಾರ್ಕ್ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವಾದ 'ಸಾಫ್ಟಾ' (SAFTA)ಗೆ ಸಹಿ ಹಾಕಲಾಗಿದ್ದು ಅದು ಅಸ್ತಿತ್ವದಲ್ಲಿದ್ದರೂ ಇನ್ನೂ ಪರಿಣಾಮಕಾರಿಯಾಗಿಲ್ಲ. ಅಧಿಕ ಸುಂಕಗಳು ಮತ್ತು ಸಂಕೀರ್ಣವಾದ ಆಮದು-ರಫ್ತು ಸುಂಕದ ರಚನೆಗಳು ಈ ಮುಕ್ತ ವ್ಯಾಪಾರ ಒಪ್ಪಂದವು ಯಶಸ್ವಿಯಾಗದಂತೆ ತಡೆದಿವೆ.
ದಕ್ಷಿಣ ಆಗ್ನೇಯ ಏಷ್ಯಾದ ಆಸಿಯಾನ್ ಗುಂಪಿನತ್ತ ಗಮನ ಹರಿಸಿದರೆ ಸಾಫ್ಟಾ ಎಲ್ಲಿದೆ ಎಂಬ ಕಲ್ಪನೆ ಸಿಗುತ್ತದೆ. 2023 ರಲ್ಲಿ, ಆಸಿಯಾನ್ ಒಳಗೆ ನಡೆದ ವ್ಯಾಪಾರವು ಗುಂಪಿನಲ್ಲಿರುವ ಪ್ರತ್ಯೇಕ ದೇಶಗಳು ಮಾಡಿದ ಒಟ್ಟು ವ್ಯಾಪಾರದ ಸುಮಾರು ಶೇಕಡಾ 22ರಷ್ಟಿತ್ತು. ಇದಕ್ಕೆ ಹೋಲಿಸಿದರೆ, ಸಾರ್ಕ್ ವ್ಯಾಪಾರದ ಪ್ರಮಾಣವು ಶೇಕಡಾ ಆರಕ್ಕಿಂತ ಸ್ವಲ್ಪ ಕಡಿಮೆ ಇತ್ತು. ಆದರೆ ಸಾಫ್ಟಾದ ಅಸ್ತಿತ್ವ ಮತ್ತು ಅದರ ಸಾಮರ್ಥ್ಯವು ಇನ್ನೂ ಆಕರ್ಷಕ ಪ್ರಸ್ತಾಪವಾಗಿದೆ; ಆದರೆ ಗುಂಪಿನಲ್ಲಿರುವ ದೇಶಗಳು ಆ ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ತಮ್ಮ ದುರ್ಬಲಗೊಳಿಸುವ ಭಿನ್ನಾಭಿಪ್ರಾಯಗಳನ್ನು ಸಾಮೂಹಿಕವಾಗಿ ಬಗೆಹರಿಸಿಕೊಳ್ಳಲು ದೃಢನಿಶ್ಚಯ ಮಾಡಬೇಕು.
ಸಾರ್ಕ್‌ಗೆ ಮರುಜೀವ ತುಂಬುವವರು ಯಾರು?
ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ನೆರೆಹೊರೆಯ ರಾಷ್ಟ್ರಗಳ ನಡುವಿನ ಕೆಲವು ತುರ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಾರ್ಕ್ನಂತಹ ವೇದಿಕೆಯು ಸಹಾಯ ಮಾಡುತ್ತದೆ ಎಂಬುದು ಸಂಪೂರ್ಣವಾಗಿ ಅಚಿಂತ್ಯವೇನಲ್ಲ. ಜನಪ್ರಿಯ ಗಾದೆ ಮಾತಿನಂತೆ ರಾಜತಂತ್ರ ಎಂಬುದು "ಸಾಧ್ಯತೆಗಳ ಕಲೆ".
ಇದು ಈಗಿರುವ ಬಹುತೇಕ ಸ್ಥಾಯಿ ಸ್ಥಿತಿಯಿಂದ, ಯಾರಾದರೂ ಪ್ರಮುಖ ಪ್ರಯತ್ನ ಮಾಡದ ಹೊರತು ಸಾರ್ಕ್ಗೆ ಮರುಜೀವ ನೀಡಲು ಸಾಧ್ಯವಿಲ್ಲ. ಈ ಪ್ರದೇಶದಲ್ಲಿ ಭಾರತದ ಗಾತ್ರ ಮತ್ತು ಸ್ಥಾನಮಾನವನ್ನು ಗಮನಿಸಿದರೆ, ಆ ಕೆಲಸವನ್ನು ಮಾಡುವುದು ಭಾರತದ ಹಿತಾಸಕ್ತಿಯೂ ಆಗಲಿದೆ ಎಂಬುದು ಸ್ಪಷ್ಟ. ಇದಕ್ಕೆ ಕಾರ್ಯತಂತ್ರದ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿರುತ್ತದೆ, ಯಾಕೆಂದರೆ ಭಾರತವು ಸಾಂಪ್ರದಾಯಿಕವಾಗಿ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಸಾರ್ಕ್ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಪ್ರದೇಶದ ಇತರ ದೇಶಗಳು ಒಂದಾಗಿ ಸೇರಿಕೊಂಡು ತಮ್ಮ ಹಿತಾಸಕ್ತಿಗಳಿಗೆ ಸಂಚಕಾರ ತರಬಹುದು ಎಂಬ ಆತಂಕವೂ ಭಾರತದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗಿದೆ.
ಆದರೆ, ಸಕ್ರಿಯ ಸಾರ್ಕ್ನ ಧನಾತ್ಮಕ ಅಂಶಗಳು ಭಾರತ ಸೇರಿದಂತೆ ಎಲ್ಲರಿಗೂ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಪ್ರಾದೇಶಿಕ ಗುಂಪಿನ ಭಾಗವಾಗುವುದು ಎಂದರೆ ಭಾರತದ ವಿದೇಶಾಂಗ ನೀತಿಯ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. ಇದು ಬಾಂಗ್ಲಾದೇಶ ಮತ್ತು ನೇಪಾಳದಂತಹ ರಾಷ್ಟ್ರಗಳ ಜೊತೆಗೆ ದ್ವಿಪಕ್ಷೀಯ ಸಂಬಂಧಗಳ ವಿಷಯದಲ್ಲಿ ಕಳೆದುಕೊಂಡಿರುವ ನೆಲೆಯನ್ನು ಮರಳಿ ದಕ್ಕಿಸಿಕೊಳ್ಳಲು ಸಹಕಾರಿಯಾಗಲಿದೆ.
ಭಾರತದ ಸಂಬಂಧವು, ವಿಶೇಷವಾಗಿ ಬಾಂಗ್ಲಾದೊಂದಿಗೆ ಇತ್ತೀಚಿನ ದಿನಗಳಲ್ಲಿ ಬಿಕ್ಕಟ್ಟಿನಿಂದ ಕೂಡಿದೆ ಮತ್ತು ನೇಪಾಳದೊಂದಿಗಿನ ಸಮೀಕರಣಗಳೂ ಭಿನ್ನವಾಗಿಲ್ಲ. ಶ್ರೀಲಂಕಾ ಕೂಡ ಕಳೆದ ಎರಡು ದಶಕಗಳಿಂದ ಭಾರತ ಮತ್ತು ಚೀನಾದೊಂದಿಗೆ ಸಮತೋಲನದ ಸಂಬಂಧವನ್ನು ಕಾಯ್ದುಕೊಳ್ಳಲು ಯತ್ನಿಸುತ್ತಿದ್ದು ಚೀನಾಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.
ಮಾಲ್ಡೀವ್ಸ್ನಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಆಧಾರದಲ್ಲಿ ಭಾರತದ ಜೊತೆಗಿನ ಅದರ ಸಂಬಂಧವು ಏರಿಳಿತಗೊಳ್ಳುತ್ತದೆ.
2014 ರಿಂದ ನಡೆಯದ ಸಾರ್ಕ್ ಶೃಂಗಸಭೆ
ಒಟ್ಟಾರೆಯಾಗಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಬಿರುಕು ಬಿಟ್ಟಿವೆ ಎಂಬುದರ ಹೊರತಾಗಿಯೂ, ಸಾರ್ಕ್ ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವೆ ಐಕ್ಯತೆಯ ಭಾವನೆಯನ್ನು ಮರುಸ್ಥಾಪಿಸಬಹುದು; ಆದರೆ ಇದು ಕಳೆದ ಕನಿಷ್ಠ ಒಂದು ದಶಕದಿಂದ ಸಾಧ್ಯವಾಗಿಲ್ಲ. ಕೊನೆಯ ಸಾರ್ಕ್ ಶೃಂಗಸಭೆಯು 2014ರಲ್ಲಿ ಕಠ್ಮಂಡುವಿನಲ್ಲಿ ನಡೆದಿತ್ತು, ಅಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ವರ್ಷ. ಅಂದಿನಿಂದ, ಭಾರತವು ಬಿಮ್ಸ್ಟೆಕ್ (BIMSTEC - Bay of Bengal Initiative for Multi Sectoral Technical and Economic Cooperation) ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದೆ.
ಬಿಮ್ಸ್ಟೆಕ್ ಮತ್ತು ಸಾರ್ಕ್ ಹೋಲಿಕೆ
ಪಾಕಿಸ್ತಾನವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಜೊತೆಗೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ಗಳನ್ನು ಒಳಗೊಂಡಿರುವ ಬಿಮ್ಸ್ಟೆಕ್ (BIMSTEC) ಗುಂಪನ್ನು, ಪಾಕಿಸ್ತಾನದ ತಲೆನೋವೇ ಇಲ್ಲದೆ ಸಾರ್ಕ್ಗೆ ಪರ್ಯಾಯವಾಗಿ ನೋಡಲಾಗಿತ್ತು. ಆದರೆ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ನಡುವಿನ ಸೇತುವೆಯಾಗಬೇಕಿದ್ದ ಮ್ಯಾನ್ಮಾರ್ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದರಿಂದ ಈ ಗುಂಪು ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಇದರ ಪರಿಣಾಮವಾಗಿ ಬಿಮ್ಸ್ಟೆಕ್ ನಿಷ್ಕ್ರಿಯಗೊಂಡಿದೆ.
ಮ್ಯಾನ್ಮಾರ್ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಂಡರೂ ಎರಡು ಭಿನ್ನ ಏಷ್ಯನ್ ಪ್ರದೇಶಗಳ ಭೌಗೋಳಿಕ-ರಾಜಕೀಯ ಬೇಡಿಕೆಗಳಿಂದಾಗಿ ಬಿಮ್ಸ್ಟೆಕ್ ಅಂದುಕೊಂಡಷ್ಟು ಪರಿಣಾಮಕಾರಿ ಆಗದೇ ಇರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಸಾರ್ಕ್ ಹೆಚ್ಚು ಪ್ರಬಲವಾದ ಗುಂಪಾಗಿದ್ದು, ರಾಜಕೀಯ-ಕಾರ್ಯತಂತ್ರದ ಅವಶ್ಯಕತೆಗಳ ವಿಷಯದಲ್ಲಿ ಸದಸ್ಯ ರಾಷ್ಟ್ರಗಳು ಪರಸ್ಪರ ಸುಲಭವಾಗಿ ಹೊಂದಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

