TK Arun

ದಂಗೆ ಇಲ್ಲದೆಯೂ ಸರ್ವಾಧಿಕಾರ ಅಂತ್ಯ ಕಂಡೀತು: ಹಂಗೇರಿಯ ವಿಕ್ಟರ್ ಪತನ ಕಲಿಸಿದ ಪಾಠಗಳು


ದಂಗೆ ಇಲ್ಲದೆಯೂ ಸರ್ವಾಧಿಕಾರ ಅಂತ್ಯ ಕಂಡೀತು: ಹಂಗೇರಿಯ ವಿಕ್ಟರ್ ಪತನ ಕಲಿಸಿದ ಪಾಠಗಳು
x
ಹಂಗೇರಿಯ ದೆಬ್ರೆಸೆನ್ನಲ್ಲಿ ಶನಿವಾರ ನಡೆದ ಅಂತಿಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ವಿರೋಧ ಪಕ್ಷವಾದ 'ಟಿಸ್ಜಾ' ಪಕ್ಷದ ನಾಯಕ ಪೀಟರ್ ಮ್ಯಾಗ್ಯಾರ್ ಅವರ ಬೆಂಬಲಿಗರು ತಮ್ಮ ಮೊಬೈಲ್ ಫೋನ್ಗಳ ಬೆಳಕನ್ನು ಬೆಳಗಿಸಿ ಬೆಂಬಲ ಸೂಚಿಸಿದ ಪರಿ.
Click the Play button to hear this message in audio format

ಅವರು 16 ವರ್ಷಗಳಿಂದ ಅಧಿಕಾರಕ್ಕೆ ಅಂಟಿಕೊಂಡಿದ್ದರು. ಸರ್ವಾಧಿಕಾರಿಯಾದರು. ಎಲ್ಲವನ್ನೂ ಬದಲಿಸುತ್ತ ಹೋದರು. ತಾನೇ ಶಾಶ್ವತ ಎಂಬಂತಿದ್ದ ಹಂಗೇರಿ ಪ್ರಧಾನಿ ವಿಕ್ಟರ್ ಪತನ ಎಲ್ಲರಿಗೊಂದು ಪಾಠ.

ಕಟ್ಟಕಡೆಯಲ್ಲಿ ಅವರು ಯಾವುದೇ ಅಪಸವ್ಯವನ್ನು ಎಸಗಲಿಲ್ಲ. ಯಾವ ಸದ್ದೂ ಇಲ್ಲದೆ ಸೋಲನ್ನು ಒಪ್ಪಿಕೊಂಡರು ಮತ್ತು ತಮ್ಮನ್ನು ಸೋಲಿಸಿದ ಪ್ರತಿಸ್ಪರ್ಧಿಯನ್ನು ಅಭಿನಂದಿಸಿದರು. ಅವರು ಇನ್ನಾರೂ ಅಲ್ಲ, ಹಂಗೇರಿಯ ವಿಕ್ಟರ್ ಓರ್ಬನ್.

ಹಾಗಂತ ಅವರು ಮತದಾರರ ಪಟ್ಟಿಯಲ್ಲಿ ಅಕ್ರಮವನ್ನು ಎಸಗಲಿಲ್ಲ. ಚುನಾವಣೆಯಲ್ಲಿ ವಂಚನೆಯಾಗಿದೆ ಎಂದು ಬೊಬ್ಬೆ ಹೊಡೆಯಲಿಲ್ಲ. ಅದೂ ಅಲ್ಲದೆ ಚುನಾವಣಾ ಸೋಲಿನ ಅಧಿಕೃತ ಅಂಗೀಕಾರವನ್ನು ತಡೆಯಲು ತಮ್ಮ ಬೆಂಬಲಿಗರನ್ನು ದೇಶದ ಶಾಸಕಾಂಗದ ಕಟ್ಟಡಗಳ ಮೇಲೆ ಹತ್ತಿಸಿ ದುಂಡಾವರ್ತಿ ಮಾಡಲು ಪ್ರಚೋದಿಸಲಿಲ್ಲ. ಕೊನೆಯ ಅಸ್ತ್ರವಾಗಿ ಚುನಾವಣಾ ಫಲಿತಾಂಶವನ್ನು ತಡೆಯಲು ತಾವೇ ನಿಯಂತ್ರಿಸುತ್ತಿದ್ದ ನ್ಯಾಯಾಲಯಗಳಲ್ಲಿ ಸಾಲು ಸಾಲು ಮೊಕದ್ದಮೆಗಳನ್ನು ಹೂಡಲು ಹೋಗಲಿಲ್ಲ.

ಹೌದು ವಿಕ್ಟರ್ ಓರ್ಬನ್ ಅವರು ಅಧಿಕಾರಕ್ಕೆ ಅಂಟಿಕೊಂಡು ಕೂರಲು ಏನೇನೂ ಮಾಡಲಿಲ್ಲ.

ಅವರನ್ನು ಪ್ರಜಾಪ್ರಭುತ್ವ ವಿರೋಧಿ ನಾಯಕ ಎಂಬಂತೆ ಚಿತ್ರಿಸಲಾಗಿತ್ತು. ಅವರು ನಿಜಕ್ಕೂ ಹಾಗೆ ಇದ್ದರೇ? ಅಜಮಾಸು ಒಂದು ಕೋಟಿಗೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಮತ್ತು ಸರಿಸುಮಾರು 248 ಶತಕೋಟಿ ಅಮೆರಿಕನ್ ಡಾಲರ್ ಜಿಡಿಪಿಯನ್ನು ಹೊಂದಿರುವ ಒಂದು ಪುಟ್ಟ ದೇಶದ ಅಧಿಕಾರ ಬದಲಾವಣೆಯ ಬಗ್ಗೆ ನಾವು ನಿಜಕ್ಕೂ ಚರ್ಚಿಸಬೇಕೇ?

ಕ್ರೋನಿ ಬಂಡವಾಳಶಾಹಿಗೆ ಬೆಂಬಲ

ಹೌದು, ನಾವು ಚರ್ಚಿಸಬೇಕು. ಪಶ್ಚಿಮದ ರಾಷ್ಟ್ರಗಳಲ್ಲಿ ಈಗ ಪಾರಮ್ಯ ಸಾಧಿಸುತ್ತಿರುವ ಧಾರ್ಮಿಕ-ರಾಷ್ಟ್ರೀಯತಾವಾದಿ ಜನಪ್ರಿಯತೆಯ ರಾಜಕಾರಣದ ಮುಖವಾಗಿ ಅವರು ಸುಖಾಸುಮ್ಮನೆ ಹೊರಹೊಮ್ಮಿದವರಲ್ಲ. ಅವರು ಅಧಿಕಾರದಲ್ಲಿದ್ದುದು ಬರೋಬ್ಬರಿ ಹದಿನಾರು ವರ್ಷಗಳ ಕಾಲ. ಅರಬ್ ಜಗತ್ತಿನಲ್ಲಿ ಉಂಟಾಗುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯ ಅಲೆಯ ಹಿಂಸಾತ್ಮಕ ದಮನದಿಂದ ದಿಕ್ಕೆಟ್ಟು ಪಲಾಯನ ಮಾಡುತ್ತಿದ್ದ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಐರೋಪ್ಯ ಒಕ್ಕೂಟದ ಕರೆಯನ್ನು ಅವರು ಮಾನ್ಯ ಮಾಡಲೇ ಇಲ್ಲ.

ವಿಕ್ಟರ್ ಓರ್ಬನ್ ಅವರು ನ್ಯಾಯಾಂಗದ ಮೇಲೆ ಶಾಸಕಾಂಗದ ನಿಯಂತ್ರಣವನ್ನು ಸಾಧಿಸಿದರು. ಇಂತಹ ಸಾಂಸ್ಥಿಕ ವೈಫಲ್ಯದ ಬಗ್ಗೆ ಐರೋಪ್ಯ ಒಕ್ಕೂಟದ ಕಣ್ಣು ಕೆಂಪಾಗುವಂತೆ ಮಾಡಿತು. ಹಂಗೇರಿಗೆ ಅಭಿವೃದ್ಧಿಗೆಂದು ಮೀಸಲಿಟ್ಟ ಹಣವನ್ನು ಅವರು ತಡೆಹಿಡಿದರು. ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳು ತಮ್ಮ ಸರ್ಕಾರವನ್ನು ಯಾವುದೇ ವಿಮರ್ಶೆ ಇಲ್ಲದೆ ಬೆಂಬಲಿಸಬೇಕು ಮತ್ತು ವಿರೋಧ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಬೇಕು. ಅದಕ್ಕಾಗಿ ಮಾಧ್ಯಮ ಸಂಸ್ಥೆಗಳನ್ನು ಖರೀದಿಸುವಂತೆ ತಮ್ಮ ಸಿರಿವಂತ ಸ್ನೇಹಿತರನ್ನು ಪ್ರೋತ್ಸಾಹಿಸಿದರು. ವಿಕ್ಟರ್ ಕ್ರೋನಿ ಬಂಡವಾಳಶಾಹಿ ಮತ್ತು ಭ್ರಷ್ಟಾಚಾರ ವ್ಯವಸ್ಥೆಯ ಪೋಷಕರು ಎಂಬುದು ವಿರೋಧಪಕ್ಷದ ಆರೋಪವಾಗಿತ್ತು.

ಉಕ್ರೇನ್ಗೆ ತೊಂಭತ್ತು ಶತಕೋಟಿ ಡಾಲರ್ಗಳಷ್ಟು ಬೃಹತ್ ಸಾಲವನ್ನು ನೀಡುವ ಐರೋಪ್ಯ ಒಕ್ಕೂಟದ ಪ್ರಮುಖ ನೀತಿಯ ಉಪಕ್ರಮಗಳನ್ನು ತಡೆಯುವ ಸಲುವಾಗಿ ಒಕ್ಕೂಟದ ʼಸರ್ವಾನುಮತ ನಿರ್ಧಾರʼದ ಅಗತ್ಯವನ್ನು ಬಳಸಿಕೊಂಡರು. ಅವರು ರಷ್ಯಾದ ಹೈಡ್ರೋಕಾರ್ಬನ್ಗಳ ವಿಚಾರದಲ್ಲಿ ಹಾಗೂ ಉಕ್ರೇನ್ ವಿರುದ್ಧವಾಗಿ ಐರೋಪ್ಯ ಒಕ್ಕೂಟದ ಶತ್ರುವಾಗಿರುವ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಜೊತೆ ಕೈಜೋಡಿಸಿದರು. ಯುರೋಪ್ನ ಆಟೋಮೊಬೈಲ್ ಉದ್ಯಮವು ಕಡಿಮೆ ಬೆಲೆಯ ಚೀನಿ ಎಲೆಕ್ಟ್ರಿಕ್ ವಾಹನಗಳನ್ನು ದೂರವಿಡಲು ಪ್ರಯತ್ನ ಮಾಡುತ್ತಿದ್ದ ಕಾಲದಲ್ಲಿ ಅವರು ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಚೀನಿ ಹೂಡಿಕೆಗೆ ಆತಿಥ್ಯವನ್ನು ನೀಡಿದರು.

ಕಟ್ಟಾ ಬಲಪಂಥೀಯ ರಾಜಕಾರಣದ ಪೋಸ್ಟರ್ ಬಾಯ್

ಅವರು ತೀವ್ರ ಸಂಪ್ರದಾಯವಾದಿ ರಾಜಕಾರಣದ, ಅಷ್ಟೇ ಏಕೆ, 'ಚುನಾವಣಾ ಸರ್ವಾಧಿಕಾರ'ದ ಪೋಸ್ಟರ್ ಬಾಯ್ ಆಗಿದ್ದರು. ಜರ್ಮನಿ, ಫ್ರಾನ್ಸ್ ಮತ್ತು ಈಗ ಬ್ರಿಟನ್ನಲ್ಲಿ ತೀವ್ರ ಬಲಪಂಥೀಯರ ಬೆಳವಣಿಗೆಗೆ ಅವರು ಮುನ್ಸೂಚಕರು ಎಂಬಂತೆ ಕಾಣುತ್ತಿದ್ದರು. ಅಮೆರಿಕದ ಪ್ರಮುಖ ಸಂಪ್ರದಾಯವಾದಿ ರಾಜಕೀಯ ಕಾರ್ಯಕ್ರಮವಾದ ಸಿಪಿಎಸಿಯಲ್ಲಿ ಅವರು ಸ್ಟಾರ್ ಸ್ಪೀಕರ್ ಆಗಿದ್ದರು. ಟ್ರಂಪ್ ಅವರ 'ಮೇಕ್ ಅಮೆರಿಕಾ ಗ್ರೇಟ್ ಎಗೇನ್' ಬೆಂಬಲಿಗರಿಗೆ ವಿಕ್ಟರ್ ಕಂಡರೆ ಅಚ್ಚುಮೆಚ್ಚು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಂಗೇರಿಯನ್ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಸೈದ್ಧಾಂತಿಕ ಒಡನಾಡಿಯ ಪರವಾಗಿ ಮಾತನಾಡಲು ಹಂಗೇರಿಗೆ ಪ್ರಯಾಣ ಬೆಳೆಸಿದ್ದರು. ಅದು ಬೇರೆ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವಲ್ಲ, ಖಂಡಿತವಾಗಿಯೂ ಅಲ್ಲ!

ಆದರೂ, ಓರ್ಬನ್ ಮಣ್ಣು ಮುಕ್ಕಿದ್ದಾರೆ. ಅವರದೇ ಫಿಡೆಸ್ ಪಕ್ಷದ ಮಾಜಿ ಸಹೋದ್ಯೋಗಿ ಮತ್ತು ಪದಾಧಿಕಾರಿಯಾಗಿದ್ದ ಪೀಟರ್ ಮಗ್ಯಾರ್ ಮತ್ತು ಅವರ ಹೊಸದಾಗಿ ರಚನೆಯಾದ ತಿಸಾ ಪಕ್ಷವು ಹಂಗೇರಿಯನ್ ಸಂಸತ್ತಿನ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗೆದ್ದಿದೆ.

ಹಾಗಂತ ಹಂಗೇರಿಯ ರಾಜಕೀಯವು ಸಂಪೂರ್ಣವಾಗಿ ಉದಾರವಾದಿಯಾಗಿ ಬದಲಾಗಿಲ್ಲ; ಸಂಸತ್ತಿಗೆ ಆಯ್ಕೆಯಾದ ಎಲ್ಲಾ ಪಕ್ಷಗಳು ಇನ್ನೂ ಬಲಪಂಥೀಯ ವಿಚಾರಧಾರೆಗಳನ್ನೇ ಹೊಂದಿವೆ. ಆದರೂ, ಬುಡಾಪೆಸ್ಟ್ನ ಯುವಕರು ಮತ್ತು ವೃದ್ಧರು ನಗರದ ಇತಿಹಾಸದೊಂದಿಗೆ ಬೆಸೆದಿರುವ ನದಿಯ ದಡದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ.

ವಿಶ್ವದ ಉಳಿದ ಭಾಗಗಳಿಗೆ ಪಾಠ

ಅಷ್ಟಕ್ಕೂ ವಿಕ್ಟರ್ ಓರ್ಬನ್ ಅವರ ಪತನವು ವಿಶ್ವದ ಉಳಿದ ಭಾಗಗಳಿಗೆ ಯಾವ ಪಾಠಗಳನ್ನು ಹೇಳುತ್ತದೆ?

ಹೊಸ ಆಡಳಿತ ಬಂದಿರುವ ಹಿನ್ನೆಲೆಯಲ್ಲಿ, ಆಂತರಿಕ ಚಟುವಟಿಕೆಗಳು ಸುಗಮವಾಗಿ ನಡೆಯುತ್ತವೆ, ಉಕ್ರೇನ್ಗೆ ನೀಡುವ ಸಹಾಯಕ್ಕೆ ಅಡೆತಡೆಗಳು ಕಡಿಮೆಯಾಗುತ್ತವೆ ಮತ್ತು ರಷ್ಯಾದ ಪರವಾದ ಉತ್ಸಾಹವು ತಗ್ಗುತ್ತದೆ. ಹಂಗೇರಿಗೆ ಸಂಬಂಧಿಸಿದಂತೆ, ಓರ್ಬನ್ ಆಡಳಿತದಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರದ ಕಳವಳದಿಂದಾಗಿ ಐರೋಪ್ಯ ಒಕ್ಕೂಟ ತಡೆಹಿಡಿದಿದ್ದ ಹಣವನ್ನು ಬಿಡುಗಡೆ ಮಾಡಲು ಇದು ದಾರಿ ಮಾಡಿಕೊಡಬಹುದು.

ಯುರೋಪ್ ಮತ್ತು ಅಮೆರಿಕದಲ್ಲಿ ಒಂದು ರಾಜಕೀಯ ಚಕ್ರವು ಬದಲಾಗುತ್ತಿರುವ ಸೂಚನೆ ಕಾಣುತ್ತಿದೆ. ಜರ್ಮನಿಯ ತೀವ್ರ ಬಲಪಂಥೀಯ ಎಎಫ್ಡಿ ಪಕ್ಷದ ಚುನಾವಣಾ ಲಾಭಗಳು, ಫ್ರಾನ್ಸ್ನ ರಾಷ್ಟ್ರೀಯ ಸಭೆಯ ಬೆಳವಣಿಗೆ (ಅಲ್ಲಿನ ಅಭ್ಯರ್ಥಿ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ), ಬ್ರಿಟನ್ನಲ್ಲಿ ನೈಜೆಲ್ ಫರಾಜ್ ನೇತೃತ್ವದ ರಿಫಾರ್ಮ್ ಯುಕೆಯ ಜನಪ್ರಿಯತೆ ಮತ್ತು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಲೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಬಲಪಂಥೀಯ ಜನಪ್ರಿಯತೆಯ ಅಲೆಯು ಅಬೇಧ್ಯವಾಗಿದೆ ಎಂಬ ಸಂಕೇತ ನೀಡಿದ್ದವು. ಆದರೆ ಹಂಗೇರಿಯಲ್ಲಿ ಓರ್ಬನ್ ಅವರ ಸೋಲು ಈ ನರೇಟಿವ್ವನ್ನು ಸಂಪೂರ್ಣ ಬದಲಿಸಿದೆ. ಇದು ಫ್ರಾನ್ಸ್ನ ಇತ್ತೀಚಿನ ಮುನ್ಸಿಪಲ್ ಚುನಾವಣೆಯಲ್ಲಿ ರಾಷ್ಟ್ರೀಯ ಸಭೆಯು ಅಸಾಧಾರಣ ಪ್ರಭಾವ ಬೀರಿದೆ.

ಭಾರತ ಕಲಿಯಬೇಕಾದ ಪಾಠಗಳು

ಓರ್ಬನ್ ಸೋಲು ಭಾರತಕ್ಕೆ ನೀಡುವ ಸಂದೇಶವೇನು? ಯಾರ ಅಧಿಕಾರದ ಹಿಡಿತವೂ ಶಾಶ್ವತವಲ್ಲ ಎಂಬುದು ಮೊದಲ ಸ್ಪಷ್ಟ ಪಾಠ. ಒಬ್ಬ ಪ್ರಬಲ ನಾಯಕನ ವರ್ಚಸ್ಸು ಹಂಗೇರಿಯ ಬಹುಸಂಖ್ಯಾತರ ಮೇಲಿನ ಹಿಡಿತವನ್ನು ಕಳೆದುಕೊಳ್ಳಲು 16 ವರ್ಷ ಬೇಕಾಯಿತು, ಆದರೆ ಕೊನೆಗೂ ಅದು ಸಂಭವಿಸಿತು. ಬುಡಾಪೆಸ್ಟ್ನ ನಗರವಾಸಿಗಳು ಎಂದಿಗೂ ಅವರ ಪ್ರಭಾವಕ್ಕೆ ಒಳಗಾಗದೇ ಇದ್ದರೂ, ಸಾಮಾಜಿಕವಾಗಿ ಸಂಪ್ರದಾಯವಾದಿಗಳಾದ ಗ್ರಾಮೀಣ ಹಂಗೇರಿಯ ಜನರು ಅವರ ಕ್ರಿಶ್ಚಿಯನ್ ಮೌಲ್ಯಗಳನ್ನು ಮತ್ತು ಮುಸ್ಲಿಂ ನಿರಾಶ್ರಿತರಿಂದ ಕ್ರೈಸ್ತ ಜಗತ್ತನ್ನು ರಕ್ಷಿಸುವ ಅವರ ಆವೇಶದ ಭರವಸೆಯನ್ನು ಬೆಂಬಲಿಸಿದ್ದರು.

ಭ್ರಷ್ಟಾಚಾರದ ಕಳವಳಕ್ಕೆ ಹೆದರಿ ಹಂಗೇರಿಗೆ ನೀಡಬೇಕಾದ ಹಣವನ್ನು ಐರೋಪ್ಯ ಒಕ್ಕೂಟ ತಡೆಹಿಡಿದಿತ್ತು. ಹತಾಶ ವಿರೋಧ ಪಕ್ಷವನ್ನು ಒಗ್ಗೂಡಿಸಿ ಓರ್ಬನ್ ಅವರನ್ನು ಪದಚ್ಯುತಗೊಳಿಸಲು ಒಬ್ಬ ವರ್ಚಸ್ವಿ ನಾಯಕನ ಅಗತ್ಯವಿತ್ತು.

ಓರ್ಬನ್ ಅವರನ್ನು ನಿಜವಾಗಿಯೂ ಪತನದತ್ತ ತಳ್ಳಿದ್ದು ಭ್ರಷ್ಟಾಚಾರ. ಆರಂಭದಲ್ಲಿ ಓರ್ಬನ್ ಕೇವಲ ಅಧಿಕಾರ ಹೊಂದಿದ್ದರು. ನಂತರ ಅವರು ಸಂವಿಧಾನವನ್ನು ತಿದ್ದುಪಡಿ ಮಾಡುವ ಮತ್ತು ನ್ಯಾಯಾಂಗ ಹಾಗೂ ಮಾಧ್ಯಮಗಳ ಮೇಲೆ ತಮ್ಮ ಪಕ್ಷದ ನಿಯಂತ್ರಣ ಸಾಧಿಸುವ ಸಂಪೂರ್ಣ ಅಧಿಕಾರವನ್ನು ಪಡೆದರು. "ಅಧಿಕಾರವು ಮನುಷ್ಯನನ್ನು ಭ್ರಷ್ಟಗೊಳಿಸುತ್ತದೆ; ಸಂಪೂರ್ಣ ಅಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ."

ಭಾರತದಲ್ಲಿ ಹಕ್ಕುಗಳ ದಮನ

ಭಾರತದಲ್ಲಿ ಬುಡಕಟ್ಟು ಜನರ ಹಕ್ಕುಗಳನ್ನು ತುಳಿಯಲಾಗುತ್ತಿದೆ. ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ಕೇವಲ ಒಂದು ಧಾರ್ಮಿಕ ಆಚರಣೆಯಂತೆ ಪರಿಗಣಿಸಲಾಗುತ್ತಿದೆ; ಅಪರೂಪದ ನ್ಯಾಯಾಂಗ ಹಸ್ತಕ್ಷೇಪದ ಸಂದರ್ಭಗಳಲ್ಲಿ ಮಾತ್ರ ಇವುಗಳಿಗೆ ಸ್ವಲ್ಪ ಮಹತ್ವ ಸಿಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಪಾಲನೆಯ ಜಾಗತಿಕ ಸೂಚ್ಯಂಕಗಳಲ್ಲಿ ಭಾರತ ಸ್ಥಿರವಾಗಿ ಕುಸಿಯುತ್ತಿದ್ದರೂ ಮಾಧ್ಯಮಗಳು ಮೌನಕ್ಕೆ ಶರಣಾಗಿವೆ. ಜಾಹೀರಾತು ವಲಯವು ವಿಭಜನೆಯಾಗಿ ಮುಖ್ಯವಾಹಿನಿ ಮಾಧ್ಯಮಗಳನ್ನು ತೊರೆದು ಡಿಜಿಟಲ್ ಪ್ರಪಂಚದ ಹೊಸ ಮೂಲೆಗಳನ್ನು ಸೇರುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಮುಖ್ಯವಾಹಿನಿ ಮಾಧ್ಯಮಗಳು ಸರ್ಕಾರದ ಜಾಹೀರಾತುಗಳ ಆಮಿಷಕ್ಕೆ ಒಳಗಾಗುತ್ತಿವೆ. ಪ್ರತಿಯೊಂದು ಇಲಾಖೆ, ಸರ್ಕಾರಿ ಸಂಸ್ಥೆ ಮತ್ತು ರಾಜ್ಯಗಳ ಪ್ರತಿನಿಧಿಗಳು ಪೂರ್ಣ ಪುಟದ ಜಾಹೀರಾತುಗಳು ಮತ್ತು ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ 'ಮಹಾ ನಾಯಕನ' ಮುಖವನ್ನು ಪ್ರಕ್ಷೇಪಿಸಲು ಸ್ಪರ್ಧಿಸುತ್ತಿರುವ ವ್ಯಕ್ತಿತ್ವ ಆರಾಧನೆಯ ಸಂಸ್ಕೃತಿ ಇಲ್ಲಿ ಮನೆಮಾಡಿದೆ.

ಭಾರತದ ವೈವಿಧ್ಯತೆಯು ಒಂದುಗೂಡಿದಾಗ ಅಪರೂಪದ ಚೈತನ್ಯದ ಆಕರವಾಗುತ್ತದೆ. ಆದರೆ, ಅತಿ ಹೆಚ್ಚು ಪರಮಾಣು ಸಂಖ್ಯೆ ಹೊಂದಿರುವ ಧಾತುವಿನ ಸಾಂದ್ರವಾದ ನ್ಯೂಕ್ಲಿಯಸ್ನಂತೆ, ಹೊರಗಿನ ಪ್ರಚೋದನೆಗೆ ಒಳಗಾದಾಗ ಇದು ಸುಲಭವಾಗಿ ವಿದಳನಗೊಳ್ಳಬಲ್ಲದು. ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತಹ ಅನೇಕ ಗುರುತುಗಳ ಆಧಾರದ ಮೇಲೆ ಕೋಮು ಭಾವನೆಗಳನ್ನು ಕೆರಳಿಸುವುದು ಸುಲಭದ ಕೆಲಸವಾಗಿದೆ.

ವಸಾಹತುಶಾಹಿ ಕಾಲದಿಂದಲೂ ರಾಜ್ಯದ ಅಧಿಕಾರವನ್ನು ಅನಿಯಂತ್ರಿತವಾಗಿ ಬಳಸಲಾಗುತ್ತಿದೆ. ಆಡಳಿತ ಸಂಸ್ಕೃತಿಯು ಪ್ರಜೆಗಳನ್ನು ಆಮಿಷ ಮತ್ತು ದಂಡನೆಯ ಮೂಲಕ ಹತೋಟಿಯಲ್ಲಿಡುವ ಪದ್ಧತಿಯಿಂದ ಎಂದಿಗೂ ಹೊರಬಂದಿಲ್ಲ. ಆಮಿಷಗಳು ಈಗ ಡಿಜಿಟಲ್ ರೂಪಕ್ಕೆ ವಿಕಸನಗೊಂಡಿವೆ. ದಮನಕಾರಿ ನೀತಿಯು ಕೇವಲ ಲಾಠಿಯಂತೆ ಕಣ್ಣಿಗೆ ಕಾಣುವ ಬದಲು, ಈಗ ಇಡೀ ವ್ಯವಸ್ಥೆಯಲ್ಲೇ ಹಾಸುಹೊಕ್ಕಾಗಿದೆ.

ಯಾರ ಅಧಿಕಾರದ ಹಿಡಿತವೂ ಶಾಶ್ವತವಲ್ಲ

ಭಾರತದಲ್ಲಿ ಪ್ರಸ್ತುತ, ಸಾಮೂಹಿಕ ಮತ್ತು ಸಂಘಟಿತ ಪ್ರಗತಿಯ ಪರ್ಯಾಯ ನಿರೂಪಣೆಯನ್ನು ಜನರ ಮುಂದಿಡುವ ಒಂದು ರಾಷ್ಟ್ರೀಯ ವಿರೋಧ ಪಕ್ಷದ ಕೊರತೆಯಿದೆ. ಈಗಿರುವ ವಿರೋಧ ಪಕ್ಷವು ಕೇವಲ ತಪ್ಪುಗಳನ್ನು ಹುಡುಕಲು ಮತ್ತು ದೂಷಿಸಲು ಮಾತ್ರ ಶಕ್ತವಾಗಿದೆ; ಜನರನ್ನು ಹೈರಾಣು ಮಾಡುತ್ತಿರುವ ಮತ್ತು 'ಲಕ್ಷಾಂತರ ದಂಗೆಗಳಿಗೆ' ಪ್ರೇರೇಪಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತಿಲ್ಲ. ಅಲ್ಲದೆ, ಇಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಬಲ್ಲ ಪೀಟರ್ ಮಗ್ಯಾರ್ ಅವರಂತಹ ಯಾವುದೇ ನಾಯಕ ಸದ್ಯಕ್ಕೆ ಕಾಣಿಸುತ್ತಿಲ್ಲ.

ಹಾಗಿದ್ದರೂ, ದೀರ್ಘಕಾಲ ಬೇರೂರಿರುವ ನಾಯಕರು ಪತನಗೊಳ್ಳಬಹುದು, ಯಾರ ಅಧಿಕಾರದ ಹಿಡಿತವೂ ಶಾಶ್ವತವಲ್ಲ ಮತ್ತು ಚುನಾವಣಾ ಸರ್ವಾಧಿಕಾರವು ಯಾವುದೇ ದಂಗೆಯಿಲ್ಲದೆಯೂ ತನ್ನ ಸರ್ವಾಧಿಕಾರಿಯನ್ನು ಪದಚ್ಯುತಗೊಳಿಸಲು ಸಾಧ್ಯವಿದೆ ಎಂದು ತಿಳಿಯುವುದು ಸಮಾಧಾನಕರ ವಿಷಯವಾಗಿದೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story