ಹರಿಯಾಣದಲ್ಲಿ ಎಡವಿದ ರಾಹುಲ್ ಹಾಗೂ ನೈಜ ರಾಜಕಾರಣದಲ್ಲಿ ʼಕೈ ಕೊಳಕುʼ ಮಾಡಿಕೊಳ್ಳಬೇಕಾದ ತುರ್ತು ಅಗತ್ಯ
ರಾಹುಲ್ ಗಾಂಧಿ ಅವರ ರಾಜಕೀಯ ನಿಷ್ಕಪಟತನ ಮತ್ತು ಅವರ ನೇತೃತ್ವದ ಚುನಾವಣಾ ಸೋಲುಗಳ ಸರಣಿಯಿಂದಾಗಿ ಹಿಂದುತ್ವ ರಾಜಕೀಯ ಮತ್ತಷ್ಟು ಬಲಿಷ್ಠವಾಗಿರುವುದರಿಂದ, ಅವರನ್ನು ಇಷ್ಟವಿಲ್ಲದಿದ್ದರೂ, ಒಪ್ಪಿಕೊಳ್ಳಲೇಬೇಕಾದ ನಾಯಕರಂತೆ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಹರಿಯಾಣದಲ್ಲಿ ಇತ್ತೀಚೆಗೆ ಕಂಡ ಚುನಾವಣಾ ಸೋಲಿನ ನಂತರ ಕಾಂಗ್ರೆಸ್ ಪಕ್ಷ ನಾಯಕತ್ವವು ಪಕ್ಷದೊಳಗೆ ಮಹತ್ವದ ಬದಲಾವಣೆಗಳನ್ನು ಮಾಡಲೇಬೇಕಾದ ಸಂಕಷ್ಟದ ಕಾಲವನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಈ ನಿರ್ಣಾಯಕ ಕಾಲಘಟ್ಟದಲ್ಲಿ ಪಕ್ಷದ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಮುಂದಿಡುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ವ ವಹಿಸಬೇಕಾದ ತುರ್ತು ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಒಟ್ಟಾಗಿ ಇಟ್ಟು ನೋಡಿದರೆ, ಅವರು ಒಂದು ರೀತಿಯಲ್ಲಿ ಇಚ್ಛೆರಹಿತ ನಾಯಕರಂತೆ ಕಾಣಿಸುತ್ತಾರೆ. ಅಷ್ಟೇ ಅಲ್ಲ. ರಾಹುಲ್ ಗಾಂಧಿ ಅವರ ರಾಜಕೀಯ ನಿಷ್ಕಪಟತನ ಮತ್ತು ಅವರ ನೇತೃತ್ವದ ಚುನಾವಣಾ ಸೋಲುಗಳ ಸರಣಿಯಿಂದಾಗಿ ಹಿಂದುತ್ವ ರಾಜಕೀಯ ಮತ್ತಷ್ಟು ಬಲಿಷ್ಠವಾಗಿರುವುದರಿಂದ, ಅವರನ್ನು ಇಷ್ಟವಿಲ್ಲದಿದ್ದರೂ, ಒಪ್ಪಿಕೊಳ್ಳಲೇಬೇಕಾದ ನಾಯಕರಂತೆ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ. ಪ್ರಬಲ ರಾಜಕೀಯ ಪಕ್ಷಗಳ ನಾಯಕರ ಮಾತುಗಾರಿಕೆ ಮತ್ತು ಚಾಣಾಕ್ಷತನವನ್ನು ದಿಟ್ಟವಾಗಿ ಎದುರಿಸಲಾಗದ ಅವರ ಅಪಕ್ವತೆ ಅವರ ಈ ಚಿತ್ರವನ್ನು ಕಡೆದಿಟ್ಟಿದೆ. ಅಷ್ಟೇ ಅಲ್ಲ ದೇಶದ ರಾಜಕಾರಣದಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲ ಸೋಲಿಗೂ ಹೊಣೆಗಾರರನ್ನಾಗಿಸಿ, ಪ್ರತಿಸ್ಪರ್ಧಿ ಪ್ರತಿಪಕ್ಷಗಳಿಗೆ ಅವರೊಬ್ಬ ದಾಳದ ವಸ್ತುವಾಗಿರುವಂತೆ ನೋಡುವ ಸಂದರ್ಭವನ್ನು ಸೃಷ್ಟಿಮಾಡಿದೆ.
ರಾಹುಲ್‌ಗೆ ಮಾಡಬೇಕಾದ ಕೆಲಸಗಳು
ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ರೂಪುಗೊಂಡಿರುವ ಈ ತಿಳುವಳಿಕೆಯನ್ನು ಎದುರಿಸಲು, ರಾಹುಲ್ ವ್ಯಾಪಕವಾಗಿ ಪಾದಯಾತ್ರೆಯನ್ನು ಕೈಗೊಂಡಿದ್ದು, ಈ ರೀತಿ ಅವರು ದೇಶಾದ್ಯಂತ ನಡೆದಾಡಿ, ಜನಮನದಲ್ಲಿ ಬೇರುಬಿಟ್ಟ ಈ ಭಾವನೆಯನ್ನು ಬದಲಿಸಲು ಅವರ ಪ್ರಯತ್ನ ಸಹಕಾರಿಯಾಯಿತೆನ್ನುವುದರಲ್ಲಿ ಎರಡು ಮಾತಿಲ್ಲ. ಈ ಪಾದಯಾತ್ರೆ ಯತ್ನ, ಅಲ್ಲಿಯವರೆಗೆ ಅವರು ಎದುರಿಸಿದ ಲೇವಡಿ, ಟೀಕೆಗೆ ತಕ್ಕ ಉತ್ತರವನ್ನು ಕೊಟ್ಟರೂ, ಅದು ಕೇವಲ ಅವರ ರಾಜಕೀಯ ತಿಳುವಳಿಕೆಯನ್ನು ಸಾಣೆ ಹಿಡಿಯುವ ಅರಂಭದ ಪ್ರಯತ್ನಗಳ ಮುನ್ನುಡಿ ಎಂದು ಹೇಳಬಹುದು.
ಆರ್‌ಎಸ್‌ಎಸ್ ನಂಥ ನುರಿತ ಕಾರ್ಯಕರ್ತರ ಪಡೆಯ ತಳಮಟ್ಟದ ಸಂಘಟನೆಯ ಜಾಲದ ನೆರವಿರುವ ಬಿಜೆಪಿಯಂಥ ಅಸಾಧಾರಣ ಎದುರಾಳಿಯನ್ನು ಎದುರಿಸುತ್ತಿರುವ ಕಾಂಗ್ರೆಸ್, ತನ್ನ ಸಂಘಟನೆಯನ್ನು ತಳಮಟ್ಟದಿಂದ ಮತ್ತೆ ಕಟ್ಟಬೇಕಾದಂಥ ತುರ್ತು ಅಗತ್ಯ ಈಗ ಎದುರಾಗಿದೆ. ಈ ಪ್ರಕ್ರಿಯೆಯಲ್ಲಿ ದೇಶದ ವಿವಿಧ ರಾಜ್ಯಗಳಾದ್ಯಂತ ಪಕ್ಷದ ನಿಷ್ಠಾವಂತರ ನೇಮಕದ ಅಗತ್ಯವನ್ನು ಒತ್ತಿ ಹೇಳಿದೆ. ಇದು ರಾಹುಲ್ ಗಾಂಧಿ ಅವರ ಹಿಂದಿನ ಅನುಭವಗಳ ದೃಷ್ಟಿಯಿಂದ ಗಮನಿಸಿದರೆ, ನಿಜಕ್ಕೂ ಕಷ್ಟಸಾಧ್ಯವಾದ ಸವಾಲು ಎನ್ನಬೇಕು. ಆಗ ರಾಹುಲ್ ಅವರು ನಂಬಿದ ಅವರ ಅನೇಕ ಮಿತ್ರರು, ವಂಶಪಾರಂಪರ್ಯವಾಗಿ ಅಧಿಕಾರ ಅನುಭವಿಸಿದ ರಾಜವಂಶಸ್ಥರರ ಮುಂದಿನ ತಲೆಮಾರಿನವರು ಹಾಗೂ, ಅಂಥಹುದೇ ಶ್ರೀಮಂತ ಸಾಮಾಜಿಕ-ಅರ್ಥಿಕ ಹಿನ್ನೆಲೆಯಿಂದ ಬಂದವರು, ರಾಹುಲ್ ಗಾಂಧಿ ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟು ನಡೆದಿರುವುದು ಎಲ್ಲರ ನೆನಪಿನಲ್ಲಿದೆ.
ಸ್ಥಳೀಯ ಸಂದರ್ಭ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ವಿಶಾಲವಾದ ಸಾಮಾಜಿಕ ಒಕ್ಕೂಟಗಳನ್ನು ರಚಿಸುವತ್ತ ರಾಹುಲ್ ಅವರು ಗಮನಹರಿಸಬೇಕಾದ ತುರ್ತು ಅಗತ್ಯವಿದೆ. ಇದಕ್ಕೆ ರಾಜ್ಯ ಮಟ್ಟದ ರಾಜಕೀಯದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎನ್ನುವುದು ಅವರು ಮನಗಾಣಬೇಕಿದೆ. ನಾಯಕರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಆಸ್ತೆ ವಹಿಸುತ್ತಾರೆ ಮತ್ತು ಪಕ್ಷದ ಧ್ಯೇಯೋದ್ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ ಎಂಬುದು ರಾಹುಲ್ ಗಾಂಧಿ ಅವರಿಗೆ ಅರ್ಥವಾಗಿದ್ದರೂ, ಅವರು ಅದನ್ನು ತಮ್ಮ ಅಂತರಂಗೀಕರಿಸಿಕೊಳ್ಳಬೇಕಿದೆ.
ಉದಾಹರಣೆಗೆ, ಹರಿಯಾಣದಲ್ಲಿ, ಭೂಪಿಂದರ್ ಸಿಂಗ್ ಹೂಡಾ ಅವರು ಕುಮಾರಿ ಸೆಲ್ಜಾ ಅವರ ದಲಿತ ಬೆಂಬಲಿಗರನ್ನು ಹೆದರಿಸಿದವರಂತೆ ಕಂಡುಬಂದರು. ಹೂಡಾ ಅವರ ನೇತೃತ್ವದ ಪ್ರಬಲ ಜಾಟ್ ಸಮುದಾಯದ ಮೇಲಿನ ಹೆಚ್ಚಿನ ಅವಲಂಬನೆ ಅವರನ್ನು ಬಹುಶಃ ಇತರ ಸಮುದಾಯಗಳಿಂದ ದೂರ ಮಾಡಿದಂತೆ ಕಾಣಿಸುತ್ತದೆ. ಇಂಥ ರಾಜಕೀಯ ಪರಿಸ್ಥಿತಿಯಲ್ಲಿ ಸಾಮಾಜಿಕವಾದ ಪೈಪೋಟಿ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಜ, ಆಗ ಭಿನ್ನಾಭಿಪ್ರಾಯ ಮೂಡುವುದು ಕೂಡ ಸಹಜ. ಆದರೆ, ಕಾಂಗ್ರೆಸ್ ಪಕ್ಷದೊಳಗಿನ ಈ ಕುರಿತ ಭಿನ್ನಾಭಿಪ್ರಾಯಗಳು ಎದ್ದುಕಾಣುವಂತಿದ್ದವು.
ನಿರ್ಣಾಯಕ ನಾಯಕತ್ವದ ಅಗತ್ಯ
ತಾವು ಕಳೆದುಕೊಂಡಿರುವ ಅಥವಾ ಕಳೆದುಕೊಳ್ಳುತ್ತಿರುವ ರಾಜಕೀಯ ನಾಯಕತ್ವದ ಸ್ಥಾನವನ್ನು ಮರಳಿ ಪಡೆಯಲು, ರಾಹುಲ್ ಈಗ ತಮ್ಮ ನಾಯಕತ್ವವನ್ನು ನಿರ್ಣಾಯಕವಾಗಿ ಪ್ರತಿಪಾದಿಸಬೇಕಾದ ಅಗತ್ಯವಿದೆ. . ಬಿಜೆಪಿಯ ವಿಧಾನಕ್ಕಿಂತ ಭಿನ್ನವಾಗಿ, ಕಾಂಗ್ರೆಸ್ ನಲ್ಲಿ ರಾಜ್ಯ ನಾಯಕರಿಗೆ ಸ್ವಾಯತ್ತತೆಯನ್ನು ನೀಡಲಾಗಿದೆ. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಪಕ್ಷದ ಹೈಕಮಾಂಡ್ ತನ್ನ ಆದೇಶದ ಮೂಲಕ ಮಾರ್ಗದರ್ಶನ ನೀಡುತ್ತದೆ. ಆದರೆ ಕಾಂಗ್ರೆಸ್ ತನ್ನ ಪಕ್ಷದ ರಾಜ್ಯ ಘಟಕಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಅವಕಾಶ ನೀಡಿದೆ ಎನ್ನಬಹುದು. ಈ ಮೇಲುಸ್ತುವಾರಿ ಕೊರತೆಯು ಕಮಲ್ ನಾಥ್, ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಾಘೇಲ್ ಅವರಂತಹ ನಾಯಕರಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ಉಂಟುಮಾಡಿದ್ದರಿಂದ ಚುನಾವಣಾ ಹಿನ್ನಡೆಗೆ ಕಾರಣವಾಗಿದೆ. ಅವರೆಲ್ಲರೂ ಹೆಚ್ಚು ಭರವಸೆ ನೀಡಿದರು ಆದರೆ ಭರವಸೆಯನ್ನು ನಿಜ ಮಾಡುವಲ್ಲಿ ವಿಫಲರಾದರು.
ಆಧುನಿಕ ಚುನಾವಣಾ ತಂತ್ರದ ನಿರ್ವಹಣೆಯ ಸಂಕೀರ್ಣತೆಯು ಮಿಲಿಟರಿ ತಂತ್ರಗಳಿಗೆ ಸಮಾನವಾದ ನೈಜ-ಸಮಯದ ಮಧ್ಯಸ್ಥಿಕೆಗಳನ್ನು ಅಗತ್ಯವನ್ನು ಮನದಟ್ಟು ಮಾಡಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಸಮೂಹ ಮಾಧ್ಯಮಗಳು ನಿರೂಪಣೆಗಳನ್ನು (narratives) ರೂಪಿಸುವಲ್ಲಿ ಮತ್ತು ಮತದಾರರ ಗ್ರಹಿಕೆಗಳ ಮೇಲೆ ಪ್ರಭಾವ ಬೀರುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ, ಕಾಂಗ್ರೆಸ್ ತನ್ನ ವಿಧಾನವನ್ನು ಚುನಾವಣಾ ಪ್ರಚಾರಕ್ಕೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಹರಿಯಾಣ ಚುನಾವಣೆಯ ಫಲಿತಾಂಶ ಈ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದೇ ರೀತಿಯ ಮತ ಹಂಚಿಕೆಗಳ ಹೊರತಾಗಿಯೂ, ಬಿಜೆಪಿಯ ನಾಯಕರು ಅನುಸರಿಸಿದ ತಂತ್ರದಿಂದಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಮಾಡಿಕೊಟ್ಟಿತು.
ಫಲನೀಡದ ತಡವಾದ ಯತ್ನ
ಕೇವಲ ಆರು ತಿಂಗಳ ಹಿಂದೆ, ಬಿಜೆಪಿಯು ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೇಳಕ್ಕಿಳಿಸಿ ಅವರ ಸ್ಥಾನಕ್ಕೆ ಹೆಚ್ಚು ತಿಳಿದಿಲ್ಲದ ನಯಾಬ್ ಸಿಂಗ್ ಸೈನಿ ಅವರನ್ನು ತಂದು ಕೂರಿಸಿತು. ಸಂಸತ್ತು ಮತ್ತು ವಿಧಾನ ಸಭೆಯ ಚುನಾವಣೆಗಳಿಗೆ ತಿಂಗಳುಗಳ ಮೊದಲು ಕೈಗೆತ್ತಿಕೊಂಡ ಈ ಕ್ರಮವು, ಆಡಳಿತ ವಿರೋಧಿ ಮತಗಳ ಕ್ರೂಢಿಕರಣಕ್ಕೆಂದೇ ರೂಪಿಸಲಾಯಿತು. ದಲಿತರ ಮತಗಳನ್ನು ಪಡೆಯಲು ಮತದಾನಕ್ಕೂ ಮುನ್ನ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್‌ಗೆ ತಾಂತ್ರಿಕ ರೂಪದ ಪೆರೋಲ್ ದಕ್ಕುವಂತೆ ನೋಡಿಕೊಳ್ಳಲಾಯಿತು. ದಲಿತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ರಾಹುಲ್ ಈ ಪ್ರಯತ್ನಕ್ಕೆ ಟಕ್ಕರ್ ನೀಡಲು ಪ್ರಯತ್ನಿಸಿದರು. ಅಚ್ಚರಿಯ ನಡೆಯಲ್ಲಿ, ಬಂಡಾಯ ದಲಿತ ನಾಯಕ ಅಶೋಕ್ ತನ್ವಾರ್ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕೊನೆಯ ಕ್ಷಣದಲ್ಲಿ ಏಕತೆಯ ಪ್ರದರ್ಶನವಾಗಿ, ಸಾರ್ವಜನಿಕ ಸಭೆಯಲ್ಲಿ ಹೂಡಾ ಮತ್ತು ಸೆಲ್ಜಾ ಕೈಜೋಡಿಸುವಲ್ಲಿ ರಾಹುಲ್ ಯಶಸ್ವಿಯಾದರು. ಆದರೆ, ರಾಹುಲ್ ಅವರ ಮಾಡಿದ ಪ್ರಯತ್ನಗಳು ತಡವಾಯಿತೆಂದೇ ಹೇಳಬೇಕು.
ಮುಂದಿನ ನೋಟ
ಕಾಂಗ್ರೆಸ್ ತನ್ನ ಇತ್ತೀಚಿನ ಸೋಲಿನ ಕಾರಣಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಂಡು, ಸಂಭಾವ್ಯ ಗೆಲುವಿನ ಸಾಧ್ಯತೆ ಇರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮುಂಬರುವ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸಬೇಕು. ಬಾಹ್ಯ ರೂಪದ ಸೂಕ್ಷ್ಮ ನಿರ್ವಹಣಾ ತಂತ್ರಗಳೊಂದಿಗೆ, ತೀರಾ ಕೆಳಮಟ್ಟದಲ್ಲಿ ಮತಗಳಿಕೆ ತಂತ್ರಗಳನ್ನು ಸಂಯೋಜಿಸುವ ಸಮಗ್ರ ಯೋಜನೆಯನ್ನು ಕಾಂಗ್ರೆಸ್ ರೂಪಿಸಬೇಕಾದ ಅಗತ್ಯವಿದೆ. ಚುನಾವಣಾ ಮತಯಂತ್ರದ ಅರೋಪಿತ ಬಳಕೆಯ ದೂರನ್ನು ಮೀರಿ ಮುನ್ನಡೆಯುತ್ತಲೇ, ಸೋಲು-ಗೆಲುವಿನ ಜವಾಬ್ದಾರಿಯನ್ನು ಹೊತ್ತು ರಾಹುಲ್ ಮುಂದಾಳತ್ವ ವಹಿಸಬೇಕು.
ತಂದೆಯ ಅನುಭವದಿಂದ ಕಲಿಯಬೇಕಾದ ಪಾಠ
ರಾಹುಲ್ ತಮ್ಮ ಕುಟುಂಬದ ಪರಂಪರೆಯಿಂದ ಕೆಲವು ಪಾಠಗಳನ್ನು ಕಲಿಯಬಹುದು. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರು ಪಕ್ಷ ಮತ್ತು ಆಡಳಿತದ ಮೇಲೆ ಹಿಡಿತ ಸಾಧಿಸಿದರೂ, ರಾಹುಲ್ ಅವರ ತಂದೆ ರಾಜೀವ್ ಗಾಂಧಿ ತಮ್ಮದೇ ಪಕ್ಷದ ಸದಸ್ಯರಿಂದ ತೊಂದರೆಗಳನ್ನು ಎದುರಿಸಿದರು.
ಇಂದಿರಾ ತನ್ನ ನಂತರದ ದಿನಗಳಲ್ಲಿ ನಿರಂಕುಶವಾದಿಯಾಗಿ ತಿರುಗಿ ಅದನ್ನು ಸಾಧಿಸಿದರೆ, , ತಟ್ಟೆಯಲ್ಲಿಟ್ಟು ಪ್ರಧಾನಿ ಹುದ್ದೆಯನ್ನು ಪಡೆದ ರಾಜೀವ್ ಅದನ್ನು ಉಳಿಸಿಕೊಇಳ್ಳುವಲ್ಲಿ ವಿಫಲರಾದರು. ರಾಜೀವ್ ಅಧಿಕಾರ ಬಯಸದ ರಾಜಕಾರಣಿ. ಅವರು ರಾಜಕೀಯ ಕೌಶಲ್ಯಗಳನ್ನು ಕಲಿತು, ಅದರ ಸದುಪಯೋಗ ಪಡೆದುಕೊಳ್ಳಲು ಸಮಯ ತೆಗೆದುಕೊಂಡರು ಆದರೆ ಅಷ್ಟರೊಳಗೆ ಕಾಲ ಮಿಂಚಿತ್ತು.
ಕೊನೆಯಲ್ಲಿ, ಕಾಂಗ್ರೆಸ್ ಮತ್ತೆ ಪುಟಿದೇಳುವಂತೆ ಮಾಡಲು ರಾಹುಲ್ ನಾಯಕತ್ವದ ಪಾತ್ರವು ನಿರ್ಣಾಯಕವಾಗಿದೆ. ಏಕೆಂದರೆ, ಅದು ಪಕ್ಷವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ 'ಗಾಂಧಿ' ಹಣೆಪಟ್ಟಿಯಾಗಿದೆ. ಪುನಶ್ಚೇತನಗೊಂಡ ಬಿಜೆಪಿ-ಆರ್‌ಎಸ್‌ಎಸ್ ಮೈತ್ರಿಯಿಂದ ಎದುರಾಗುವ ಸವಾಲುಗಳನ್ನು ಪಕ್ಷವು ಚಾಣಾಕ್ಷ ತನದಿಂದ ಎದುರಿಸುವಾಗ ಸ್ಥಳೀಯ ನಾಯಕತ್ವದ ಹೊಣೆಗಾರಿಕೆ ಮತ್ತು ಪ್ರಾದೇಶಿಕ ಘಟಕಗಳ ಪೂರ್ವಭಾವಿ ತಯಾರಿಕೆಯಲ್ಲಿ ಎಚ್ಚರದ ನಿಲುವು ತಳೆಯುವುದು ಅಗತ್ಯವಾಗಿದೆ. ಈಗ ಕಾಂಗ್ರೆಸ್‌ಗೆ ಕೈಮುಗಿಯುವ ಸಮಯ ಮುಗಿದಿದೆ; ಭಾರತೀಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಈ ಪ್ರಯತ್ನ ಕಾಲದಅಗತ್ಯವಾಗಿದೆ.