Uniform Civil Code| ಒಂದು ದೇಶ ಹಲವು ಸಂಹಿತೆಗಳು: ಅಮಿತ್ ಶಾ ಕೊಟ್ಟ ಭರವಸೆಯ ವಿರೋಧಾಭಾಸಗಳು
ರಾಜ್ಯಗಳಲ್ಲಿರುವ ನಾಗರಿಕ ಸಂಹಿತೆಗಳು ವೈಯಕ್ತಿಕ ಕಾನೂನುಗಳಿಗೆ ಸುಧಾರಣೆಗಳನ್ನು ತರಬಹುದು. ಆದರೆ ಅವುಗಳಲ್ಲಿರುವ ವಿಭಿನ್ನತೆ ಈಗ ಭರವಸೆ ನೀಡಲಾಗಿರುವ ಏಕರೂಪತೆಯನ್ನು ಕಡೆಗಣಿಸಬಹುದು.

ಬಿಜೆಪಿಯ ಸುದೀರ್ಘ ಕಾಲದಿಂದ ಕಾರ್ಯರೂಪಕ್ಕೆ ಬಾರದೇ ಇರುವ ರಾಜಕೀಯ ಸಂಕಲ್ಪವೊಂದಕ್ಕೆ ಗೃಹ ಸಚಿವ ಅಮಿತ್ ಶಾ ಅವರೀಗ ದಿನಾಂಕ ನಿಗದಿ ಮಾಡಿದ್ದಾರೆ. ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ನೇತೃತ್ವದ ಎನ್ಡಿಎ ಆಡಳಿತವಿರುವ ಎಲ್ಲ 21 ರಾಜ್ಯಗಳಲ್ಲಿ ಏಕರೂಪ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ಶಾ ಅವರು ನೀಡಿದ ಹೇಳಿಕೆಯು ಸಂವಿಧಾನದ ಮೇಲಿನ ಚರ್ಚೆಯನ್ನು ಸಮಯದ ಮಿತಿಯನ್ನು ಹೊಂದಿದ ಶಾಸಕಾಂಗದ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದೆ. ಇಷ್ಟು ಮಾತ್ರವಲ್ಲದೆ ಇದು ಧರ್ಮ ಮತ್ತು ವೈಯಕ್ತಿಕ ಕಾನೂನುಗಳನ್ನು ಕುರಿತಾದ ಸಾಮಾನ್ಯ ವಾದಗಳಿಗಿಂತ ಮಿಗಿಲಾದ ಗಮನವನ್ನು ಸೆಳೆಯದೇ ಇರುವ ಒಂದು ಪ್ರಶ್ನೆಯನ್ನು ನಮ್ಮ ಮುಂದೆ ಮಂಡಿಸುತ್ತದೆ; 21 ರಾಜ್ಯ ಶಾಸನಸಭೆಗಳು ಜಾರಿಗೆ ತಂದ 21 ಕಾನೂನುಗಳು ಒಟ್ಟಾರೆಯಾಗಿ ಏಕರೂಪ ಸಂಹಿತೆ ಎಂದು ಕರೆಸಿಕೊಳ್ಳಲು ಸಾಧ್ಯವಿದೆಯೇ?
ಕುಟುಂಬ ಕಾನೂನಿನ ಬಗ್ಗೆ ಶಾಸನ ಮಾಡಲು ಸಂವಿಧಾನವು ರಾಜ್ಯಗಳಿಗೆ ಗಣನೀಯವಾದ ಅವಕಾಶವನ್ನು ನೀಡುತ್ತದೆ. ಆದರೆ ಅದೇ ಒಕ್ಕೂಟ ವ್ಯವಸ್ಥೆಯ ಮಾರ್ಗವು ಪ್ರತಿ ರಾಜ್ಯಕ್ಕೂ ತನ್ನದೇ ಆದ ನಿಬಂಧನೆಗಳು, ವಿನಾಯಿತಿಗಳು ಮತ್ತು ಜಾರಿ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ. ಪರಿಣಾಮವಾಗಿ ಭಾರತವು ಪ್ರತ್ಯೇಕ ರಾಜ್ಯಗಳ ಒಳಗೆ ಹೆಚ್ಚಿನ ಏಕರೂಪತೆಯ ಕಡೆಗೆ ಸಾಗಬಹುದು. ಆದರೆ ಅವುಗಳ ನಡುವೆ ಹೊಸ ವ್ಯತ್ಯಾಸವನ್ನು ಸೃಷ್ಟಿಸಬಹುದು.
ಆ ವಿರೋಧಾಭಾಸವೇ ಅಮಿತ್ ಶಾ ಅವರ 2029ರ ಭರವಸೆಯ ತಿರುಳಾಗಿದೆ.
ಅನುಷ್ಠಾನಕ್ಕೆ ತಂದ ರಾಜ್ಯಗಳು
ಕೆಲವು ರಾಜ್ಯಗಳು ಈಗಾಗಲೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿದ್ದಾಗಿದೆ ಎಂದೂ ಹೇಳಿದ ಕೇಂದ್ರ ಗೃಹ ಸಚಿವರು, ಮುಂದಿನ ಸಾರ್ವಜನಿಕ ಚುನಾವಣೆಗೂ ಮುನ್ನವೇ ಎನ್ಡಿಎ ಆಡಳಿತ ನಡೆಸುತ್ತಿರುವ ಎಲ್ಲ 21 ರಾಜ್ಯಗಳು ಅದನ್ನು ಕಾರ್ಯರೂಪಕ್ಕೆ ತರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2025ರ ಜನವರಿ 27ರಂದೇ ಉತ್ತರಾಖಂಡವು ಈ ಸಂಹಿತೆಯನ್ನು ಜಾರಿಗೆ ತಂದಿದೆ. ಅದಾದ ಬಳಿಕ ಗುಜರಾತ್, ಅಸ್ಸಾಂ ಮತ್ತು ಮಧ್ಯಪ್ರದೇಶ ವಿಧಾನಸಭೆಗಳೂ ಯುಸಿಸಿ ಮಸೂದೆಗಳನ್ನು ಅಂಗೀಕರಿಸಿವೆ.
ವಿಧಾನಸಭೆಗಳಲ್ಲಿ ಅಂಗೀಕರಿಸಿದ್ದನ್ನು ರಾಷ್ಟ್ರಪತಿಗಳ ಸಮ್ಮತಿ, ನಿಯಮಗಳ ಅಧೀಸೂಚನೆ ಮತ್ತು ನಿಜವಾದ ಜಾರಿಯಿಂದ ಪ್ರತ್ಯೇಕಿಸಬೇಕಾಗುತ್ತದೆ ಮತ್ತು ಇವುಗಳನ್ನು ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆಲ್ಲ ಸರ್ಕಾರ ಒಂದು ಸಮಿತಿಯನ್ನು ಘೋಷಿಸಬಹುದು. ಅದರ ವರದಿಯನ್ನು ಪ್ರಕಟಿಸಬಹುದು, ಮಸೂದೆಯನ್ನು ಮಂಡಿಸಬಹುದು, ಒಪ್ಪಿಗೆಯನ್ನು ಪಡೆಯಬಹುದು, ವಿವರವಾದ ನಿಯಮಗಳನ್ನು ರೂಪಿಸಬಹುದು ಹಾಗೂ ಅಂತಿಮವಾಗಿ ಕಾನೂನನ್ನು ಜಾರಿಗೆ ತರಬಹುದು. ಪ್ರತಿಯೊಂದೂ ವಿಭಿನ್ನ ಹಂತವನ್ನು ಅನುಸರಿಸಬೇಕಾಗುತ್ತದೆ ಮತ್ತು ಕೊನೆಯ ಹಂತ ಮಾತ್ರ ನಾಗರಿಕರನ್ನು ನಿಯಂತ್ರಿಸುವ ಕಾನೂನಾಗಿ ಬದಲಾಗುತ್ತದೆ.
ಉತ್ತರಾಖಂಡದ ಉದಾಹರಣೆಯನ್ನು ಗಮನಿಸಿದರೆ ಈ ಕೆಲಸ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ಇಲ್ಲಿನ ಕಾಯ್ದೆ ಬರಿ ಧರ್ಮದ ನಿಯಮಗಳನ್ನು ಬದಲಾಯಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಮದುವೆ ಮತ್ತು ವಿಚ್ಛೇದನದ ನೋಂದಣಿ, ಆಸ್ತಿ ಹಕ್ಕಿನ ನಿಯಮಗಳು ಹಾಗೂ ಲಿವ್-ಇನ್ ಸಂಬಂಧಗಳ ನೋಂದಣಿಯನ್ನು ಕೂಡ ಕಡ್ಡಾಯಗೊಳಿಸುತ್ತದೆ. ಇವೆಲ್ಲವೂ ಸರಿಯಾಗಿ ನಡೆಯಲು ರಿಜಿಸ್ಟ್ರಾರ್ಗಳು, ಆನ್ಲೈನ್ ವ್ಯವಸ್ಥೆ, ಮೇಲ್ಮನವಿ ಸಲ್ಲಿಸುವ ಅವಕಾಶ ಮತ್ತು ಅರ್ಜಿ ಪರಿಶೀಲಿಸುವ ವಿಧಾನಗಳು ಕೂಡ ಬೇಕಾಗುತ್ತವೆ.
ಶಾ ಅವರ ಗಡುವು ನಿಜವಾದ ಜಾರಿಯನ್ನು ಸೂಚಿಸುತ್ತಿದ್ದರೆ, ರಾಜ್ಯಗಳಿಗೆ ಶಾಸಕಾಂಗ ಬಹುಮತಕ್ಕಿಂತ ಹೆಚ್ಚಿನ ಅಧಿಕಾರ ಬೇಕಾಗುತ್ತದೆ. ಅವರು ತಮ್ಮ ಸಂಹಿತೆಗಳ ವಿಷಯಗಳನ್ನು ಅಂತಿಮಗೊಳಿಸಬೇಕು, ಅಗತ್ಯವಿರುವ ಎಲ್ಲೆಡೆ ಒಪ್ಪಿಗೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ನಿಯಮಗಳನ್ನು ರೂಪಿಸಬೇಕು, ಅಧಿಕಾರಿಗಳಿಗೆ ತರಬೇತಿಯನ್ನು ನೀಡಬೇಕು ಮತ್ತು ಮದುವೆಗಳು, ವಿಚ್ಛೇದನಗಳು, ಆನುವಂಶಿಯತೆ ಮತ್ತು ವೈಯಕ್ತಿಕ ಸಂಬಂಧಗಳ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ನಿರ್ವಹಿಸುವ ಸಾಮರ್ಥ್ಯವಿರುವ ವ್ಯವಸ್ಥೆಗಳನ್ನು ಸೃಷ್ಟಿಸಬೇಕು.
ಕಾನೂನು ರೂಪಿಸುವಲ್ಲಿ ತೊಡಕು
ಭಾರತದಾದ್ಯಂತ ನಾಗರಿಕರಿಗೆ ಸಮಾನ ನಾಗರಿಕ ಸಂಹಿತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಪ್ರಯತ್ನಿಸಬೇಕು ಎಂದು ಸಂವಿಧಾನದ 44 ನೇ ವಿಧಿ ಹೇಳುತ್ತದೆ. ಇದು ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಭಾಗವಾಗಿದೆ, ಇದು ಕಾನೂನುಗಳನ್ನು ಮಾಡುವಲ್ಲಿ ಸರ್ಕಾರಗಳಿಗೆ ಮಾರ್ಗದರ್ಶನ ನೀಡುತ್ತದೆ.
ಈ ವಿಷಯಗಳ ಮೇಲಿನ ಶಾಸಕಾಂಗ ಅಧಿಕಾರವನ್ನು ಹಂಚಿಕೊಳ್ಳಲಾಗಿದೆ. ಸಮವರ್ತಿ ಪಟ್ಟಿಯ ಪ್ರವೇಶ 5 ಮದುವೆ ಮತ್ತು ವಿಚ್ಛೇದನ, ಶಿಶುಗಳು ಮತ್ತು ಅಪ್ರಾಪ್ತ ವಯಸ್ಕರು, ದತ್ತು ಸ್ವೀಕಾರ, ಉಯಿಲುಗಳು, ಆನುವಂಶಿಕತೆ, ಉತ್ತರಾಧಿಕಾರ ಮತ್ತು ಅವಿಭಕ್ತ ಕುಟುಂಬದ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಈ ಕ್ಷೇತ್ರಗಳಲ್ಲಿ ಕಾನೂನುಗಳನ್ನು ಮಾಡಲು ಯಾವುದೇ ಅಡ್ಡಿಯಿಲ್ಲ.
ಅದೇ ಸಮವರ್ತಿ ಪಟ್ಟಿಯ ವಿಷಯವನ್ನು ನಿಯಂತ್ರಿಸುವ ಸಂಸತ್ತಿನ ಕಾನೂನಿನೊಂದಿಗೆ ರಾಜ್ಯ ಕಾನೂನಿನ ನಿಬಂಧನೆಗಳು ಸಂಘರ್ಷಕ್ಕೊಳಗಾದಾಗ ಒಂದು ತೊಡಕು ಉಂಟಾಗುತ್ತದೆ.
ವಿಧಿ 254 ಸಾಮಾನ್ಯವಾಗಿ ಕೇಂದ್ರ ಕಾನೂನಿಗೆ ಅಗ್ರಸ್ಥಾನವನ್ನು ನೀಡುತ್ತದೆ. ಸಂಘರ್ಷದಲ್ಲಿರುವ ರಾಜ್ಯ ಕಾನೂನು ರಾಷ್ಟ್ರಪತಿಯವರ ಒಪ್ಪಿಗೆಯನ್ನು ಪಡೆದ ನಂತರ ಆ ರಾಜ್ಯದೊಳಗೆ ಕಾರ್ಯನಿರ್ವಹಿಸಬಹುದು, ಆದರೂ ಸಂಸತ್ತು ಅದನ್ನು ನಂತರವೇ ಮೇಲುಗೈ ಸಾಧಿಸಿ ರದ್ದುಗೊಳಿಸುವ ಅಥವಾ ಬದಲಾಯಿಸುವ ಅಧಿಕಾರವನ್ನು ಉಳಿಸಿಕೊಂಡಿರುತ್ತದೆ.
ಹಾಗಾಗಿ ರಾಜ್ಯ ಸಂಹಿತೆಯ ನಿಬಂಧನೆಗಳು ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ, ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯ್ದೆಯಂತಹ ಸಂಸತ್ತಿನ ಕಾನೂನುಗಳೊಂದಿಗೆ ಸಂಘರ್ಷ ಏರ್ಪಟ್ಟಾಗ ರಾಷ್ಟ್ರಪತಿಗಳ ಸಮ್ಮತಿಯನ್ನು ಪಡೆಯುವುದು ಮುಖ್ಯವಾಗಬಹುದು.
ಇಂತಹುದೊಂದ ಸಾಂವಿಧಾನಿಕ ವ್ಯವಸ್ಥೆಯು ಕುಟುಂಬ ಕಾನೂನು ಸುಧಾರಣೆಯ ಜೊತೆಗೆ ಪ್ರಯೋಗಗಳನ್ನು ಮಾಡಲು ರಾಜ್ಯಗಳಿಗೆ ಅವಕಾಶ ಒದಗಿಸುತ್ತದೆ. ಇದು ಪ್ರತಿ ಶಾಸಕಾಂಗಕ್ಕೂ ವಿಭಿನ್ನವಾದ ಆಯ್ಕೆಗಳನ್ನು ಮಾಡಿಕೊಳ್ಳಲೂ ಅನುವು ಮಾಡಿಕೊಡುತ್ತದೆ. ಒಂದು ರಾಜ್ಯ ಉತ್ತರಾಖಂಡದ ಮಾದರಿಯನ್ನು ಪುನರಾವರ್ತಿಸಬಹುದು, ಆಯ್ದ ನಿಬಂಧನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಅಥವಾ ಪ್ರತ್ಯೇಕ ಚೌಕಟ್ಟನ್ನು ರೂಪಿಸಬಹುದು. ಪ್ರತಿಯೊಂದು ವ್ಯತ್ಯಾಸವೂ ಕೂಡ ʼಏಕರೂಪʼ ಎಂದರೆ ಏನು ಎಂಬ ಪ್ರಶ್ನೆಗೆ ಮತ್ತೊಂದು ಆಯಾಮವನ್ನು ಸೇರಿಸುವ ಅರ್ಹತೆಯನ್ನು ಹೊಂದಿದೆ.
ರಾಜ್ಯದಲ್ಲಿ ಏಕರೂಪ-ದೇಶದಲ್ಲಿ ಭಿನ್ನ
ಒಂದು ರಾಜ್ಯವು ಲಿವ್-ಇನ್ ಸಂಬಂಧದಲ್ಲಿರುವ ಸಹಭಾಗಿಗಳು ಅದನ್ನು ನೋಂದಾವಣೆ ಮಾಡಿಕೊಳ್ಳಬೇಕು ಎಂದು ಬಯಸುತ್ತದೆ ಎಂದು ಭಾವಿಸೋಣ. ಆದರೆ ನೆರೆಯ ರಾಜ್ಯವು ಅಂತಹ ಸಂಬಂಧಗಳನ್ನು ತನ್ನ ನೋಂದಣಿ ವ್ಯವಸ್ಥೆಯಿಂದ ಹೊರಗೆ ಇಡಬಹುದು. ಅಂತಹ ಸಂದರ್ಭದಲ್ಲಿ ರಾಜ್ಯಗಳ ಗಡಿಯನ್ನು ದಾಟಿ ಹೋಗುವ ಜೋಡಿಗಳು ತಮ್ಮ ನಿವಾಸ ಬದಲಾಗಿದೆ ಎಂಬ ಕಾರಣಕ್ಕೇ ವಿಭಿನ್ನವಾದ ಕಾನೂನು ಬಾಧ್ಯತೆಗಳನ್ನು ಎದುರಿಸಬೇಕಾದ ಸಂದರ್ಭ ಬರಬಹುದು.
ಅದೇ ರೀತಿ ಉತ್ತರಾಧಿಕಾರವು ಕಠಿಣ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಒಬ್ಬ ವ್ಯಕ್ತಿಯು ಒಂದು ರಾಜ್ಯದಲ್ಲಿ ವಾಸಿಸಬಹುದು ಹಾಗೂ ಇತರ ಎರಡು ರಾಜ್ಯಗಳಲ್ಲಿ ಆಸ್ತಿಗಳನ್ನು ಹೊಂದಿರಬಹುದು. ಒಂದು ರಾಜ್ಯದಿಂದ ವಿನಾಯ್ತಿಯನ್ನು ಪಡೆದು, ಮತ್ತೊಂದು ರಾಜ್ಯದಿಂದ ಒಳಗೊಳ್ಳುವ ಸಮುದಾಯಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ. ಆ ಸಂದರ್ಭದಲ್ಲಿ ಆಸ್ತಿಯನ್ನು ಯಾವ ಕಾನೂನು ನಿಯಂತ್ರಿಸುತ್ತದೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲು ನ್ಯಾಯಾಲಯಗಳು ಹರಸಾಹಸ ಪಡಬೇಕಾದೀತು.
ನಿಷೇಧಿತ ಸಂಬಂಧಗಳು, ಪದ್ಧತಿಗಳ ಮಾನ್ಯತೆ, ಜೀವನಾಂಶ, ಉತ್ತರಾಧಿಕಾರ ಮತ್ತು ಉಯಿಲುಗಳ ಕಾನೂನುಬದ್ಧತೆಯ ಕುರಿತು ಇದೇ ರೀತಿಯ ಸಂಘರ್ಷಗಳು ಹುಟ್ಟಿಕೊಳ್ಳಬಹುದು. ರಾಜ್ಯವು ತನ್ನ ಕಾನೂನನ್ನು ಅನ್ವಯಿಸುವ ಆಧಾರವೂ ಮುಖ್ಯವಾಗಿದೆ. ಒಂದು ಸಂಹಿತೆಯು ನಿವಾಸಿಗಳೆಂದು ವರ್ಗೀಕರಿಸಲ್ಪಟ್ಟ ಜನರನ್ನು ಅನುಸರಿಸಬಹುದು, ಮತ್ತೊಂದು ವಾಸಸ್ಥಳವನ್ನು ಬಳಸಬಹುದು ಮತ್ತು ಮೂರನೇಯದು ಅದರ ಭೂಪ್ರದೇಶದಲ್ಲಿ ರೂಪುಗೊಂಡ ಮದುವೆಗಳು ಅಥವಾ ಸಂಬಂಧಗಳ ಮೇಲೆ ಕೇಂದ್ರೀಕರಿಸಬಹುದು.
ಉತ್ತರಾಖಂಡದ ನಿಯಮಗಳು ರಾಜ್ಯದಾದ್ಯಂತ ವಿಸ್ತರಿಸುತ್ತವೆ ಮತ್ತು ಅದರ ಹೊರಗೆ ವಾಸಿಸುವ ಉತ್ತರಾಖಂಡದ ನಿವಾಸಿಗಳಿಗೂ ಅನ್ವಯಿಸುತ್ತವೆ. ಮದುವೆ, ವಿಚ್ಛೇದನ ಮತ್ತು ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದ ನಿಬಂಧನೆಗಳು ಒಬ್ಬ ಸಹಭಾಗಿ ವಿದೇಶಿ ಪ್ರಜೆಯಾಗಿದ್ದು ಮತ್ತೊಬ್ಬರು ಉತ್ತರಾಖಂಡದ ನಿವಾಸಿಗಳಾಗಿದ್ದಾಗ ಅನ್ವಯವಾಗುವ ಸಾಧ್ಯತೆ ಇರುತ್ತದೆ.
ಮತ್ತೊಂದು ರಾಜ್ಯವು ಪ್ರಾಥಮಿಕವಾಗಿ ಪ್ರಾದೇಶಿಕ ವಿಧಾನವನ್ನು ಅಳವಡಿಸಿಕೊಂಡರೆ, ಒಬ್ಬ ವ್ಯಕ್ತಿಯು ಸ್ಪರ್ಧಾತ್ಮಕ ಅವಶ್ಯಕತೆಗಳನ್ನು ಎದುರಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಆಗ ನಿವಾಸ, ವಾಸಸ್ಥಳ ಮತ್ತು ಬೇರೆಡೆ ನೀಡಲಾದ ಪ್ರಮಾಣಪತ್ರಗಳ ಮಾನ್ಯತೆಯು ದೈನಂದಿನ ವಿವಾದಗಳಲ್ಲಿ ಮುಖ್ಯವಾಗುತ್ತವೆ.
ರಾಜ್ಯ ಕಾನೂನುಗಳ ಸಾಮಾನ್ಯ ಶೀರ್ಷಿಕೆಗಳು ಅಂತಹ ಸಂಘರ್ಷಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಮತ್ತೊಂದು ರಾಜ್ಯದ ಕಾನೂನಿನಡಿಯಲ್ಲಿ ಸೃಷ್ಟಿಸಲಾದ ಮದುವೆಗಳು, ವಿಚ್ಛೇದನಗಳು, ಸಂಬಂಧಗಳು ಮತ್ತು ಉತ್ತರಾಧಿಕಾರದ ಹಕ್ಕುಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ವಿವರಿಸುವ ಹೊಂದಾಣಿಕೆಯ ವ್ಯಾಖ್ಯಾನಗಳು ಮತ್ತು ಸ್ಪಷ್ಟ ನಿಯಮಗಳು ರಾಜ್ಯಗಳಿಗೆ ಬೇಕಾಗುತ್ತವೆ.
ಸಮೀಕರಣ ಬದಲಿಸುವ ವಿನಾಯ್ತಿಗಳು
ಶಾ ಅವರ ಘೋಷಣೆಯೊಂದಿಗೆ ಬಂದ ವರದಿಗಳ ಪ್ರಕಾರ, ಬುಡಕಟ್ಟು ಸಮುದಾಯಗಳ ಪದ್ಧತಿಗಳು, ಸಂಪ್ರದಾಯಗಳು ತಮ್ಮ ಅಸ್ತಿತ್ವವನ್ನು ರಕ್ಷಿಸಲು ಅವು ಯುಸಿಸಿಯ ಹೊರಗೆ ಉಳಿಯುತ್ತವೆ ಎಂದು ತಿಳಿದುಬಂದಿದೆ. ಉತ್ತರಾಖಂಡದ ಸಂಹಿತೆಯು ಪರಿಶಿಷ್ಟ ಪಂಗಡಗಳ ಸದಸ್ಯರನ್ನು ಹಾಗೂ ಸಂವಿಧಾನದ XXI ನೇ ಭಾಗದ ಅಡಿಯಲ್ಲಿ ಯಾರ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸಲಾಗಿದೆಯೋ ಆ ವ್ಯಕ್ತಿಗಳು ಮತ್ತು ಗುಂಪುಗಳನ್ನು ಹೊರಗಿಡುತ್ತದೆ.
ಅಂತಹ ರಕ್ಷಣೆಯ ಆಧಾರವು ಗಣನೀಯವಾಗಿದೆ. ಮದುವೆ, ಉತ್ತರಾಧಿಕಾರ, ಕುಟುಂಬ ಸಂಘಟನೆ ಮತ್ತು ಸಮುದಾಯದ ಆಸ್ತಿಗೆ ಸಂಬಂಧಿಸಿದ ಬುಡಕಟ್ಟು ಪದ್ಧತಿಗಳು ಧರ್ಮ-ನಿರ್ದಿಷ್ಟ ವೈಯಕ್ತಿಕ ಕಾನೂನುಗಳು ಮತ್ತು ಏಕರೂಪ ನಾಗರಿಕ ಸಂಹಿತೆ ಊಹಿಸುವ ಕುಟುಂಬ ರಚನೆಗಳೆರಡರಿಂದಲೂ ಭಿನ್ನವಾಗಿರಬಹುದು. ಸಂವಿಧಾನವು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಸಾಂಪ್ರದಾಯಿಕ ಕಾನೂನುಗಳಿಗೆ ನಿರ್ದಿಷ್ಟ ರಕ್ಷಣೆಯನ್ನು ನೀಡುತ್ತದೆ.
ನಾಗಾಲ್ಯಾಂಡ್ನಲ್ಲಿ ನಾಗಾ ಪದ್ಧತಿ ಕಾನೂನು ಮತ್ತು ಕಾರ್ಯವಿಧಾನಗಳನ್ನು ರಕ್ಷಿಸುವ ಕೆಲಸವನ್ನು ಅನುಚ್ಛೇದ 371ಎ ನಿರ್ವಹಿಸುತ್ತದೆ, ಆದರೆ ಅನುಚ್ಛೇದ 371ಜಿ ಮಿಜೋರಾಂನಲ್ಲಿ ಸಮಾನವಾದ ರಕ್ಷಣೆಯನ್ನು ಒದಗಿಸುತ್ತದೆ. ಆರನೇ ಪರಿಚ್ಛೇದವು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನ ನಿರ್ದಿಷ್ಟಪಡಿಸಿದ ಬುಡಕಟ್ಟು ಪ್ರದೇಶಗಳಲ್ಲಿ ಆನುವಂಶಿಯತೆ, ವಿವಾಹ ಮತ್ತು ಸಾಮಾಜಿಕ ಪದ್ಧತಿಗಳು ಸೇರಿದಂತೆ ನಾನಾ ವಿಷಯಗಳ ಮೇಲೆ ಸ್ವಾಯತ್ತ ಸಂಸ್ಥೆಗಳಿಗೆ ಕಾನೂನು ರೂಪಿಸುವ ಅಧಿಕಾರವನ್ನು ನೀಡುತ್ತದೆ.
ವಿನಾಯ್ತಿಯಿಂದ ಬುಡಕಟ್ಟು ಸ್ವಾಯತ್ತತೆಗೆ ನೀಡಲಾದ ಈ ಸಾವಿಧಾನಿಕ ಬದ್ಧತೆಗಳನ್ನು ಕಾಪಾಡಿಕೊಳ್ಳಬಹುದು. ಇದರರ್ಥ ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಯು ರಾಜ್ಯಗಳ ನಡುವೆ ಗಣನೀಯವಾಗಿ ಬದಲಾಗುತ್ತ ಹೋಗುತ್ತದೆ. ಪರಿಶಿಷ್ಟ ಪಂಗಡದ ಜನಸಂಖ್ಯೆಯು ತುಲನಾತ್ಮಕವಾಗಿ ಚಿಕ್ಕದಾಗಿರುವ ಕಡೆ, ವಿನಾಯ್ತಿಯು ಸೀಮಿತ ಸಂಖ್ಯೆಯ ನಿವಾಸಿಗಳ ಮೇಲೆ ಪರಿಣಾಮ ಬೀರಬಹುದು. ಈಶಾನ್ಯದ ಕೆಲವು ರಾಜ್ಯಗಳಲ್ಲಿ, ಇದು ಬಹುತೇಕ ಜನರನ್ನು ತಮ್ಮ ಸಾಂಪ್ರದಾಯಿಕ ಕಾನೂನುಗಳ ಅಡಿಯಲ್ಲೇ ಉಳಿಯುವಂತೆ ಮಾಡಬಹುದು.
ಬುಡಕಟ್ಟು ವ್ಯಕ್ತಿಗೆ ವಿನಾಯ್ತಿ ಅನ್ವಯ?
ಈ ವಿಚಾರದಲ್ಲಿ ಹಲವಾರು ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಗಳ ಅಗತ್ಯವಿರುತ್ತದೆ. ಸಂರಕ್ಷಿತ ಪ್ರದೇಶದ ಹೊರಗೆ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ಬುಡಕಟ್ಟು ವ್ಯಕ್ತಿಗೆ ವಿನಾಯ್ತಿ ಅನ್ವಯಿಸುತ್ತದೆಯೇ? ವಿನಾಯ್ತಿ ಪಡೆದ ವ್ಯಕ್ತಿ ಮತ್ತು ಸಂಹಿತೆಯ ವ್ಯಾಪ್ತಿಗೆ ಒಳಪಡುವ ವ್ಯಕ್ತಿಯ ನಡುವಿನ ವಿವಾಹವನ್ನು ಯಾವ ಕಾನೂನು ನಿಯಂತ್ರಿಸುತ್ತದೆ? ಆ ರಾಜ್ಯದಲ್ಲಿರುವ ಆಸ್ತಿಗೆ ವಿನಾಯ್ತಿಯು ವಿಸ್ತರಿಸುವುದೇ? ರಾಜ್ಯಗಳು ಈ ಪ್ರಶ್ನೆಗಳಿಗೆ ವಿಭಿನ್ನವಾಗಿ ಉತ್ತರಿಸಿದರೆ, ವಿನಾಯ್ತಿಗಳು ಕಾನೂನು ವೈವಿಧ್ಯತೆಯ ಮತ್ತೊಂದು ಮೂಲವಾಗುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ.
ಸಮಾನತೆಯು ಸಂಹಿತೆಯ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ.
ಬಿಜೆಪಿಯು ಏಕರೂಪ ಸಂಹಿತೆಯನ್ನು ಲಿಂಗ ನ್ಯಾಯದ ಸಾಧನವಾಗಿ ಪ್ರಸ್ತುತಪಡಿಸುತ್ತದೆ, ವಿಶೇಷವಾಗಿ ವಿವಾಹ, ವಿಚ್ಛೇದನ ಮತ್ತು ಆನುವಂಶಿಕತೆಯನ್ನು ನಿಯಂತ್ರಿಸುವ ಅಸಮಾನ ನಿಯಮಗಳಿಂದ ಪರಿಣಾಮಕ್ಕೆ ಒಳಗಾದ ಮಹಿಳೆಯರಿಗೆ. ಸಮಾನ ಆನುವಂಶಿಕ ಹಕ್ಕುಗಳು ಮತ್ತು ತಾರತಮ್ಯದ ವೈವಾಹಿಕ ಪದ್ಧತಿಗಳ ವಿರುದ್ಧದ ರಕ್ಷಣೆಯು ನೈಜ ಅನನುಕೂಲಗಳನ್ನು ಪರಿಹರಿಸಬಲ್ಲದು. ಆದರೂ ಸಮಾನತೆಯ ದಾವೆಯನ್ನು ಪ್ರತಿ ನಿಬಂಧನೆಯ ಆಧಾರದ ಮೇಲೆ ಪರೀಶೀಲಿಸಬೇಕಾಗುತ್ತದೆ.
ಒಂದು ಕಾನೂನು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕನ್ನು ನೀಡಬಹುದು ಹಾಗೂ ಒಬ್ಬರಿಗಿಂತ ಹೆಚ್ಚು ಮದುವೆಯಾಗುವುದನ್ನು ತಡೆಯಬಹುದು. ಆದರೆ ಅದೇ ಸಮಯದಲ್ಲಿ, ತಮ್ಮ ಇಷ್ಟದಂತೆ ಒಟ್ಟಿಗೆ ವಾಸಿಸುವ (ಲಿವ್-ಇನ್) ಜೋಡಿಗಳು ಸರ್ಕಾರದ ಬಳಿ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಮಾಡುವ ಮೂಲಕ ಅವರ ಖಾಸಗಿ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸಬಹುದು. ಉತ್ತರಾಖಂಡದ ಲಿವ್-ಇನ್ ಸಂಬಂಧಗಳ ಕಡ್ಡಾಯ ನೊಂದಣೆಯು ಗೌಪ್ಯತೆ ಮತ್ತು ವೈಯಕ್ತಿಕ ಸ್ವಾಯತ್ತತೆಯ ಆಧಾರದ ಮೇಲೆ ಸಾಂವಿಧಾನಿಕ ಸವಾಲುಗಳನ್ನು ಎದುರಿಸಿದೆ.
ನೋಂದಣಿ ಮಾಡಿಸುವುದರಿಂದ ಒಂದು ಸಂಬಂಧಕ್ಕೆ ಅಧಿಕೃತ ಪುರಾವೆ ಸಿಗುತ್ತದೆ. ಇದು ಮಹಿಳೆಗೆ ಜೀವನಾಂಶ ಅಥವಾ ರಕ್ಷಣೆ ಪಡೆಯಲು ನೆರವಾಗುತ್ತದೆ. ಆದರೆ, ಇದು ಖಾಸಗಿತನವನ್ನು ಕಾಪಾಡುತ್ತಲೇ ಸುರಕ್ಷತೆಯನ್ನು ನೀಡುತ್ತದೆಯೇ ಎಂಬುದು ಆ ನಿಯಮವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಆದ್ದರಿಂದ ಸಂಗ್ರಹಿಸುವ ಮಾಹಿತಿ, ವಿಚಾರಣೆ ನಡೆಸಲು ಅಧಿಕಾರಿಗಳಿಗಿರುವ ಅಧಿಕಾರ, ನೋಂದಣಿ ದಾಖಲೆಗಳ ಲಭ್ಯತೆ ಮತ್ತು ಪೋಷಕರು ಅಥವಾ ಪೊಲೀಸರೊಂದಿಗೆ ಸಂಪರ್ಕಿಸುವ ವಿಷಯಗಳು ಈ ಕಾಯ್ದೆಯ ಮುಖ್ಯ ಭಾಗಗಳಾಗಿವೆ.
ಲಿಂಗ ಸಮಾನತೆ ಅಥವಾ ಮಹಿಳೆಯರ ಹಕ್ಕುಗಳನ್ನು ಮದುವೆಯ ನಂತರದ ಆಸ್ತಿ ಹಕ್ಕು, ವಿಚ್ಛೇದನದ ನಂತರ ಸಿಗುವ ಜೀವನಾಂಶ, ಮಕ್ಕಳ ಪಾಲನೆ ಮತ್ತು ಮದುವೆ ಮುರಿದುಬಿದ್ದಾಗ ಮಹಿಳೆಯ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ಅಳೆಯಬೇಕು.
ಹಲವು ವೈಯಕ್ತಿಕ ಕಾನೂನುಗಳ ಬದಲಿಗೆ ಒಂದೇ ಕಾನೂನನ್ನು ತರುವುದರಿಂದ ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಸಿಗಬಹುದು. ಆದರೆ ನಿಜವಾದ ಸಮಾನತೆ ಸಿಗುತ್ತದೆಯೇ ಇಲ್ಲವೇ ಎಂಬುದು ಆ ಕಾನೂನಿನಲ್ಲಿ ನೀಡಿರುವ ಹಕ್ಕುಗಳನ್ನು ಅವಲಂಬಿಸಿರುತ್ತದೆ.
ರಾಜಕೀಯ ಗಡುವು ಮತ್ತು ಬದಲಾಗುವ ಗುರಿ
ಅಮಿತ್ ಶಾ ಅವರು ಪ್ರಸ್ತಾಪ ಮಾಡಿರುವ 21 ರಾಜ್ಯಗಳು ಎಂಬ ಲೆಕ್ಕಾಚಾರವು ಸದ್ಯದ ರಾಜಕೀಯ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಆದರೆ 2029ರ ವೇಳೆಗೆ ರಾಜ್ಯಗಳ ಚುನಾವಣೆ ಮತ್ತು ಮೈತ್ರಿಗಳ ಲೆಕ್ಕಾಚಾರದಲ್ಲಿ ಏರುಪೇರು ಉಂಟಾಗಿ ಈ ಸಂಖ್ಯೆ ಬದಲಾಗಬಹುದು. ಕಾನೂನು ರೂಪಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಒಂದು ರಾಜ್ಯ ಎನ್‌ಡಿಎ ಮೈತ್ರಿಯಿಂದ ಹೊರಬರಬಹುದು, ಅಥವಾ ಗಡುವಿನ ವೇಳೆಗೆ ಇನ್ನೊಂದು ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು.
ಈ ಭರವಸೆಯು ಬಿಜೆಪಿಯ ನೇರ ಆಡಳಿತವಿರುವ ರಾಜ್ಯಗಳ ಜೊತೆಗೆ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಸರ್ಕಾರಗಳಿಗೂ ಅನ್ವಯಿಸುತ್ತದೆ. ಮೈತ್ರಿ ಪಕ್ಷಗಳು ಕೆಲವೊಂದು ವಿಷಯಗಳಲ್ಲಿ ಕಾನೂನು ತಿದ್ದುಪಡಿಗೆ ಒಪ್ಪಬಹುದು, ಆದರೆ ತಮ್ಮ ಪ್ರಾದೇಶಿಕ ಮತ್ತು ಸಾಂಪ್ರದಾಯಿಕ ಪದ್ಧತಿಗಳ ರಕ್ಷಣೆಗೆ ಪಟ್ಟು ಹಿಡಿಯಬಹುದು. ಹಾಗಾಗಿ, ದೇಶಾದ್ಯಂತ ಒಂದೇ ವೇಳಾಪಟ್ಟಿಯನ್ನು ಜಾರಿಗೆ ತರಲು ಹೋದಾಗ ಆಯಾ ರಾಜ್ಯಗಳ ರಾಜಕೀಯ ಮಾತುಕತೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಸಮಯದ ಗಡುವು ಮತ್ತು ಕುಟುಂಬ ಕಾನೂನು
ಸರ್ಕಾರಗಳಿಗೆ ನಿಗದಿಪಡಿಸಿದ ಗಡುವು ಬೇಗ ಕೆಲಸ ಮಾಡಲು ಪ್ರೇರೇಪಿಸಬಹುದು. ಆದರೆ ಕುಟುಂಬ ಕಾನೂನು ಎಂಬುದು ಜನರ ತೀರ ಖಾಸಗಿ ನಿರ್ಧಾರಗಳಿಗೆ ಸಂಬಂಧಿಸಿದ್ದು, ಇದರ ಪರಿಣಾಮಗಳು ತಲೆಮಾರುಗಳ ಕಾಲ ಮುಂದುವರಿಯುತ್ತವೆ. ಈ ಕುರಿತು ಮಹಿಳಾ ಸಂಘಟನೆಗಳು, ಬುಡಕಟ್ಟು ಸಂಸ್ಥೆಗಳು, ಧಾರ್ಮಿಕ ಸಮುದಾಯಗಳು, ಕೌಟುಂಬಿಕ ನ್ಯಾಯವಾದಿಗಳು ಮತ್ತು ಅನುಷ್ಠಾನಗೊಳಿಸುವ ಅಧಿಕಾರಿಗಳೊಂದಿಗೆ ಮುಂಚಿತವಾಗಿಯೇ ಚರ್ಚಿಸಿದರೆ ಉತ್ತಮ. ಇದರಿಂದ ವಿಭಿನ್ನ ಧರ್ಮ/ಜಾತಿಗಳ ಮದುವೆ, ವಲಸೆ, ರಾಜ್ಯಗಳ ನಡುವಿನ ಆಸ್ತಿ ಹಕ್ಕು ಮತ್ತು ಸಂಕಷ್ಟದಲ್ಲಿರುವ ಜೋಡಿಗಳಿಗೆ ಎದುರಾಗಬಹುದಾದ ಸಮಸ್ಯೆಗಳು ಕೋರ್ಟ್ ಮೆಟ್ಟಿಲೇರುವ ಮುನ್ನವೇ ಹೊರಬರುತ್ತವೆ.
ಏಕರೂಪದ ನೈಜ ಪರೀಕ್ಷೆ
ಭಾರತದ ಸಂವಿಧಾನದ ವ್ಯವಸ್ಥೆಯು ರಾಜ್ಯಗಳಿಗೆ ಕುಟುಂಬ ಕಾನೂನಿನ ತಿದ್ದುಪಡಿಗಳನ್ನು ಪ್ರಯೋಗಿಸಿ ನೋಡಲು ಅವಕಾಶ ನೀಡುತ್ತದೆ. ಒಂದು ರಾಜ್ಯದ ಅನುಭವವು, ಅಲ್ಲಿನ ನಿಯಮವು ಮಹಿಳೆಯರಿಗೆ ರಕ್ಷಣೆ ನೀಡುತ್ತಿದೆಯೇ, ಜೋಡಿಗಳಿಗೆ ಹೊರೆಯಾಗಿ ಪರಿಣಮಿಸುತ್ತಿದೆಯೇ, ಆಡಳಿತಾತ್ಮಕವಾಗಿ ವಿಳಂಬವಾಗುತ್ತಿದೆಯೇ ಅಥವಾ ಹೊಸ ವಿವಾದಗಳನ್ನು ಹುಟ್ಟುಹಾಕುತ್ತಿದೆಯೇ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದನ್ನು ನೋಡಿ ಇತರ ರಾಜ್ಯಗಳು ಆ ಮಾದರಿಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ.
ಸುಲಭ ನಿಯಮ ಯಾವುದು?
ಅಮಿತ್ ಶಾ ಅವರು ನಿಗದಿಪಡಿಸಿರುವ ಗಡುವು ಕೇವಲ ಎಷ್ಟು ರಾಜ್ಯಗಳು ಕಾನೂನು ಜಾರಿಗೊಳಿಸಿವೆ ಎಂಬುದನ್ನು ಮಾತ್ರ ತೋರಿಸುತ್ತದೆ. ಆದರೆ ನಿಜವಾದ ಬದಲಾವಣೆ ತಿಳಿಯಲು, ಆ ಕಾನೂನುಗಳು ಸಮಾನ ಹಕ್ಕುಗಳನ್ನು ನೀಡುತ್ತವೆಯಾ, ರಾಜ್ಯಗಳ ನಡುವೆ ಒಪ್ಪಿಕೊಳ್ಳಲು ಸುಲಭವಾದ ನಿಯಮಗಳನ್ನು ಹೊಂದಿವೆಯಾ ಮತ್ತು ಬುಡಕಟ್ಟು ಜನಾಂಗದವರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತವೆಯಾ ಎಂದು ನೋಡಬೇಕು.
ಮುಂದೆ ಬರುವ ವ್ಯವಸ್ಥೆಯಲ್ಲಿ ಕೇಂದ್ರದ ಕಾಯ್ದೆಗಳು, ಬೇರೆ ಬೇರೆ ರಾಜ್ಯಗಳ ಯುಸಿಸಿ ಕಾನೂನುಗಳು, ಬುಡಕಟ್ಟು ಪದ್ಧತಿಗಳು ಮತ್ತು ವಿವಿಧ ವಿನಾಯಿತಿಗಳು ಇರಬಹುದು. ಹೀಗಾಗಿ, ಬೇರೆ ರಾಜ್ಯಗಳಿಗೆ ಹೋಗುವವರು, ಮದುವೆಯಾಗುವವರು ಅಥವಾ ಆಸ್ತಿ ಹೊಂದುವವರಿಗೆ "ಒಂದೇ ದೇಶ, ಒಂದು ಕಾನೂನು" ಎನ್ನುವುದಕ್ಕಿಂತ ಹೆಚ್ಚು ಗೊಂದಲದ ಮತ್ತು ಕಷ್ಟಕರವಾದ ಕಾನೂನು ಪರಿಸ್ಥಿತಿ ಎದುರಾಗಬಹುದು.
2029ರ ಗುರಿಯು ತಾರತಮ್ಯದಿಂದ ನೋಡುವ ಹಳೆಯ ಕಾನೂನುಗಳನ್ನು ಬೇಗ ಬದಲಾಯಿಸಲು ಸಹಾಯ ಮಾಡಬಹುದು. ಆದರೆ ಇದರ ಯಶಸ್ಸು ಕೇವಲ 21 ವಿಧಾನಸಭೆಗಳು ಒಂದೇ ಹೆಸರಿನಲ್ಲಿ ಕಾನೂನು ಪಾಸ್ ಮಾಡುವುದರ ಮೇಲೆ ಅಲ್ಲ, ಬದಲಿಗೆ ಆ ಕಾನೂನುಗಳ ಗುಣಮಟ್ಟ ಮತ್ತು ಅವು ಪರಸ್ಪರ ಹೊಂದಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

