
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಮುಸ್ಲಿಮರ ಮತದಾನದ ಹಕ್ಕನ್ನು ಷರತ್ತುಬದ್ಧವಾಗಿ ಕಸಿದುಕೊಳ್ಳಬೇಕು ಎಂದು 2016ರಲ್ಲಿಯೇ ಎಂ.ಜಿ.ವೈದ್ಯ ಅವರು ಪ್ರತಿಪಾದಿಸಿದ್ದರು. ಅದನ್ನು ಇಂದು ಎಸ್ಐಆರ್ ಮೂಲಕ ಕಾರ್ಯರೂಪಕ್ಕೆ ತರಲಾಗಿದೆಯೆ?
ನಾನಾ ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯು ಭಾರತದ ಸಂವಿಧಾನದ ಒಳಗೊಳ್ಳುವಿಕೆಯ ಮನೋಭಾವವನ್ನು ಗೌರವಿಸುವವರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನವನ್ನು ಹುಟ್ಟುಹಾಕಿದೆ. ಹಲವು ರಾಜ್ಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಕೈಬಿಟ್ಟಿರುವುದು ಈ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತಂದಿರುವ ನರೇಂದ್ರ ಮೋದಿ ಅವರ ಸರ್ಕಾರದ ಉದ್ದೇಶದ ಬಗ್ಗೆ ಗಂಭೀರ ಅನುಮಾನ ಹುಟ್ಟುವಂತೆ ಮಾಡಿದೆ.
ಈಗಂತೂ ಸಾಕ್ಷ್ಯಾಧಾರಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟವರ ಪೈಕಿ ಬಹುತೇಕ ಮಂದಿ ಮುಸ್ಲಿಮರು. ʼಅಲ್ಟ್ ನ್ಯೂಸ್ʼ ನಡೆಸಿದ ತನಿಖೆಯ ಪ್ರಕಾರ ಪಶ್ಚಿಮ ಬಂಗಾಲದಲ್ಲಿ ಪಟ್ಟಿಯಿಂದ ಕೈಬಿಡಲಾದ ಮುಸ್ಲಿಮರ ಶೇಕಡಾವಾರು ಪ್ರಮಾಣವು ಬರೋಬ್ಬರಿ 80 ರಷ್ಟಿದೆ.
ಮುಸ್ಲಿಂ ಜನಸಂಖ್ಯೆಯು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲಿ ಈ ಅಂಕಿ-ಅಂಶವು ಹೆಚ್ಚಿನ ಚುನಾವಣಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇಲ್ಲಿ ಸ್ಪಷ್ಟವಾಗಿ ಉದಾಹರಿಸಬಹುದಾದ ರಾಜ್ಯಗಳೆಂದರೆ; ಅಸ್ಸಾಂ (ಶೇ.34.2), ಪಶ್ಚಿಮ ಬಂಗಾಲ (ಶೇ. 27), ಕೇರಳ (ಶೇ. 26.6), ಉತ್ತರ ಪ್ರದೇಶ (ಶೇ.19.3), ಬಿಹಾರ (ಶೇ.17.7), ಜಾರ್ಖಂಡ್ (ಶೇ. 14) ಮತ್ತು ಕರ್ನಾಟಕ (ಶೇ. 12.9).
ಲಕ್ಷದ್ವೀಪ ಮತ್ತು ಕಾಶ್ಮೀರದಂತಹ ಕೇಂದ್ರಾಡಳಿತ ಪ್ರದೇಶಗಳು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿದ್ದು, ಅಲ್ಲಿನ ಜನಸಂಖ್ಯೆಯು ಕ್ರಮವಾಗಿ ಸುಮಾರು ಶೇಕಡಾ 80 ಮತ್ತು 65 ರಷ್ಟಿದೆ.
ಆದರೆ ಮತದಾರರ ಪಟ್ಟಿಯಿಂದ ಮುಸ್ಲಿಮರನ್ನು ಕೈಬಿಡಲು ರೂಪಿಸಲಾದ ಈ ಎಸ್ಐಆರ್ ಕೇವಲ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನವೇ? ಅಥವಾ ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕನಸಿನ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಬೃಹತ್ ಯೋಜನೆಯ ಭಾಗವೇ, ಅಲ್ಲಿ ಮುಸ್ಲಿಮರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲು ಉದ್ದೇಶಿಸಲಾಗಿದೆಯೇ?
ಎಂ.ಜಿ. ವೈದ್ಯ ಮಾತಿನ ಮರ್ಮವೇನು?
ಈ ನಿಟ್ಟಿನಲ್ಲಿ, ಆರ್‌ಎಸ್‌ಎಸ್ ಸೈದ್ಧಾಂತಿಕ ಮುಖಂಡ ದಿವಂಗತ ಎಂ.ಜಿ. ವೈದ್ಯ ಅವರು 2016 ರಲ್ಲಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯಲ್ಲಿ ಬರೆದ ಲೇಖನವನ್ನು ಮರುಪರಿಶೀಲನೆ ಮಾಡುವುದು ಸೂಕ್ತ.
ಮುಸ್ಲಿಮರು ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಮತದಾನದ ಹಕ್ಕು—ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದು ವೈದ್ಯ ಅವರು ತಿಳಿಸಿದ್ದರು. ಅವರು ಎರಡನ್ನೂ ಅನುಭವಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಭಾವನೆಯನ್ನು 2016ರ ನವೆಂಬರ್ 1 ರಂದು ಪ್ರಕಟವಾದ ಆ ಲೇಖನವು ಸ್ಥೂಲವಾಗಿ ತಿಳಿಸಿತ್ತು.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮೋದಿ ಸರ್ಕಾರವು ತನ್ನ ಸಂಕಲ್ಪವನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ ಬೆನ್ನಲ್ಲೇ ವೈದ್ಯ ಅವರ ಲೇಖನ ಪ್ರಕಟವಾಗಿತ್ತು. ಭಾರತೀಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕುರಿತು ಅವರ ಅಭಿಪ್ರಾಯಗಳನ್ನು ಕೇಳಿ ಕಳುಹಿಸಿದ್ದ ಪ್ರಶ್ನಾವಳಿಗೆ ಅವರು ನೀಡಿದ ಪ್ರತಿಕ್ರಿಯೆಯ ಸಾರಾಂಶವೇ ಆ ಲೇಖನವಾಗಿತ್ತು.
ಮತದಾನದ ಹಕ್ಕಿಗೆ ಕತ್ತರಿ
ಅಂದು ಮೋದಿ ಸರ್ಕಾರದ ಸಂಕಲ್ಪವನ್ನು ಸ್ವಾಗತಿಸುತ್ತಾ ವೈದ್ಯ ಅವರು ಹೀಗೆ ಬರೆದಿದ್ದರು: "ಇತ್ತೀಚೆಗೆ ನನಗೆ ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಿಂದ ಪ್ರಶ್ನಾವಳಿಯೊಂದು ಬಂದಿತ್ತು. ಅದರಲ್ಲಿದ್ದ ಐದನೇ ಪ್ರಶ್ನೆಯು ಹೀಗಿತ್ತು: ಏಕರೂಪ ನಾಗರಿಕ ಸಂಹಿತೆಯು (UCC) ಐಚ್ಛಿಕವಾಗಿರಬೇಕೇ?
“ಧರ್ಮದ ಆಧಾರದ ಮೇಲಾಗಲಿ ಅಥವಾ ಆದಿವಾಸಿಗಳು ಎಂದು ಕರೆಯಲ್ಪಡುವವರ ಆಳವಾಗಿ ಬೇರೂರಿರುವ ಪದ್ಧತಿಗಳ ಆಧಾರದ ಮೇಲಾಗಲಿ, ಯಾರು ಯುಸಿಸಿಯನ್ನು ವಿರೋಧಿಸುತ್ತಾರೋ ಅವರಿಗೆ ಒಂದು ಸೀಮಿತ ಆಯ್ಕೆಯನ್ನು ನೀಡಬೇಕು ಎಂದು ನಾನು ಹೇಳಿದೆ. ಈ ಸೀಮಿತ ಆಯ್ಕೆಯು ಸಂಪೂರ್ಣ ಆಯ್ಕೆಯಾಗಿರಲು ಸಾಧ್ಯವಿಲ್ಲ, ಬದಲಿಗೆ ಕೆಲವು ಷರತ್ತುಗಳಿಗೆ ಒಳಪಟ್ಟ ಆಯ್ಕೆಯಾಗಿರಬೇಕು. ನಾನು ಪ್ರಸ್ತಾಪಿಸಿದ ಮಿತಿ ಹೀಗಿರಬೇಕು: ಯುಸಿಸಿಯನ್ನು ವಿರೋಧಿಸುವವರಿಗೆ ಅದನ್ನು ಪಾಲಿಸದಿರುವ ಆಯ್ಕೆಯನ್ನು ನೀಡಬಹುದು. ಆದರೆ ಅಂತಹ ಸಂದರ್ಭದಲ್ಲಿ, ಅವರು ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಮತ ಚಲಾಯಿಸುವ ತಮ್ಮ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ."
ವೈದ್ಯ ಅವರು ಮುಂದುವರಿದು ಹೀಗೆ ಬರೆದಿದ್ದರು: "ಕಾರಣ ಸರಳವಾಗಿದೆ. ಸಂವಿಧಾನದ 44ನೇ ವಿಧಿಯು, ಭಾರತದ ಇಡೀ ಭೂಪ್ರದೇಶದಲ್ಲಿ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಖಚಿತಪಡಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಹೇಳುತ್ತದೆ. ಇಲ್ಲಿ 'shall' (ಖಂಡಿತವಾಗಿಯೂ ಮಾಡಬೇಕು) ಎಂಬ ಪದವು ಮುಖ್ಯವಾಗಿದೆ. ಯುಸಿಸಿ ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವುದು ರಾಜ್ಯಕ್ಕೆ ಕಡ್ಡಾಯವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.”
ಇಲ್ಲಿಯವರೆಗೆ, ಯಾವುದೇ ಸರ್ಕಾರವು ಆ ದಿಸೆಯಲ್ಲಿ ಒಂದು ಸಣ್ಣ ಹೆಜ್ಜೆಯನ್ನೂ ಇಟ್ಟಿಲ್ಲ. ಮುಸ್ಲಿಂ ಸಮಾಜದಲ್ಲಿ ಚಾಲ್ತಿಯಲ್ಲಿದ್ದ 'ತ್ರಿವಳಿ ತಲಾಖ್' ಪದ್ಧತಿಯನ್ನು ರದ್ದುಗೊಳಿಸಲು ನಿರ್ಧರಿಸಿರುವ ಪ್ರಸ್ತುತ ಬಿಜೆಪಿ ಸರ್ಕಾರವು ಶ್ಲಾಘನೆಗೆ ಅರ್ಹವಾಗಿದೆ."
ಅನುಕೂಲಸಿಂಧು ನಿಲುವು
ಅದೇ ಲೇಖನದಲ್ಲಿ ವೈದ್ಯ ಅವರು ಮುಂದೆ ಹೀಗೆ ಬರೆಯುತ್ತಾರೆ: “44ನೇ ವಿಧಿಯು ಸಂವಿಧಾನದ IVನೇ ಭಾಗದಲ್ಲಿ ಸೇರಿದೆ ಎಂಬುದು ನಿಜ, ಇದು ರಾಜ್ಯ ನಿರ್ದೇಶಕ ತತ್ವಗಳನ್ನು ತಿಳಿಸುತ್ತದೆ. ಈ ಭಾಗದಲ್ಲಿರುವ ನಿಬಂಧನೆಗಳನ್ನು ಯಾವುದೇ ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ ಎಂದೂ ಉಲ್ಲೇಖಿಸಲಾಗಿದೆ. ಆದರೆ ಅದೇ—37ನೇ ವಿಧಿ—ಮುಂದುವರಿದು ಹೀಗೆ ಹೇಳುತ್ತದೆ: ಅದರಲ್ಲಿ ನಮೂದಿಸಲಾದ ತತ್ವಗಳು ದೇಶದ ಆಡಳಿತದಲ್ಲಿ ಮೂಲಭೂತವಾಗಿವೆ ಮತ್ತು ಕಾನೂನುಗಳನ್ನು ಮಾಡುವಾಗ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯವಾಗಿದೆ."
ಅವರು ಮತ್ತಷ್ಟು ವಿವರವಾಗಿ ಹೀಗೆ ಹೇಳಿದ್ದರು, "ರಾಜ್ಯ ವಿಧಾನಮಂಡಲ ಮತ್ತು ಸಂಸತ್ತು ನಮ್ಮ ಸಾರ್ವಭೌಮ ಸಂವಿಧಾನದ ಸೃಷ್ಟಿಗಳಾಗಿವೆ. 168ನೇ ವಿಧಿಯು ರಾಜ್ಯ ವಿಧಾನಮಂಡಲಕ್ಕೆ ಅನುಮೋದನೆ ನೀಡುತ್ತದೆ ಮತ್ತು 79ನೇ ವಿಧಿಯು ಸಂಸತ್ತನ್ನು ರಚಿಸುತ್ತದೆ. ಆದ್ದರಿಂದ, 44ನೇ ವಿಧಿಯ ಅಡಿಯಲ್ಲಿ ಆಡಳಿತಕ್ಕೆ ಒಳಪಡಲು ಇಷ್ಟಪಡದವರು, ರಾಜ್ಯ ವಿಧಾನಮಂಡಲ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಮತ ಚಲಾಯಿಸುವ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಸಂವಿಧಾನದ ಬಗ್ಗೆ ಯಾರೊಬ್ಬರಿಗೂ ಇಂತಹ ಆಯ್ದ ಧೋರಣೆಯನ್ನು ಹೊಂದಲು ಅನುಮತಿ ನೀಡಬಾರದು."
"ಆದಾಗ್ಯೂ, ಅವರು ಈ ದೇಶದ ನಾಗರಿಕರಾಗಿಯೇ ಉಳಿಯುತ್ತಾರೆ ಮತ್ತು ಆದ್ದರಿಂದ ನಾಗರಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ, ಅವರು ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ಗಳು, ಜಿಲ್ಲಾ ಪರಿಷತ್ಗಳು, ಪುರಸಭೆಗಳು ಅಥವಾ ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಮತ್ತು/ಅಥವಾ ಮತ ಚಲಾಯಿಸಬಹುದು."
“ಸಾಮಾನ್ಯ ಕ್ರಿಮಿನಲ್ ಕಾನೂನುಗಳಂತೆ, ಸಾಮಾನ್ಯ ಸಿವಿಲ್ (ನಾಗರಿಕ) ಕಾನೂನು ಕೂಡ ಯಾವುದೇ ಧರ್ಮದ ಮೇಲೆ ಹಸ್ತಕ್ಷೇಪ ಮಾಡುವುದಿಲ್ಲ. ಸಾಮಾನ್ಯ ನಾಗರಿಕ ಕಾನೂನು ಜಾರಿಗೆ ಬಂದರೂ ಭಾರತದಲ್ಲಿ ಮುಸ್ಲಿಮರು ಮುಸ್ಲಿಮರಾಗಿಯೇ ಉಳಿಯುತ್ತಾರೆ. ಆದರೆ ಮುಸ್ಲಿಮರ ಕೆಲವು ವರ್ಗಗಳು ಕೆಲವು ಹಳೆಯ ಆಚರಣೆಗಳನ್ನು ಅನುಸರಿಸಲು ಬಯಸಿದರೆ, ಅವರು ಅದಕ್ಕೆ ತಕ್ಕುನಾಗಿ ಬೆಲೆಯನ್ನು ಕೂಡ ತೆರಬೇಕಾಗುತ್ತದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕೆಲವು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ, ಬೇರೆ ಯಾರೂ ಈ ಸೀಮಿತ ಆಯ್ಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ.”
ವೈದ್ಯ ದೃಷ್ಟಿಕೋನ ಮತ್ತು 2026ರ ವಾಸ್ತವ
ಮುಸ್ಲಿಮರ ಮೂಲಭೂತ ಮತದಾನದ ಹಕ್ಕನ್ನು “ಷರತ್ತುಬದ್ಧವಾಗಿ" ಕಸಿದುಕೊಳ್ಳಬೇಕೆಂಬ ವೈದ್ಯ ಅವರ ಯಾವುದೇ ಹಿಂಜರಿಕೆಯಿಲ್ಲದ ಪ್ರತಿಪಾದನೆಯನ್ನು, ಇಂದು ಮೋದಿ ಸರ್ಕಾರವು ಎಸ್ಐಆರ್ ಮೂಲಕ ಹೆಚ್ಚು ದುಷ್ಟ ಮತ್ತು ಅಸಂವಿಧಾನಿಕ ರೀತಿಯಲ್ಲಿ ಅತ್ಯಂತ ಕಳವಳಕಾರಿ ವಾಸ್ತವವನ್ನಾಗಿ ಪರಿವರ್ತಿಸುತ್ತಿದೆ.
ಮತ್ತಷ್ಟು ಜುಗುಪ್ಸೆ ಹುಟ್ಟಿಸುವ ಸಂಗತಿಯೆಂದರೆ, ಒಂದೆಡೆ ಮುಸ್ಲಿಮರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಮತ್ತು ಮತ್ತೊಂದೆಡೆ, ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಅವರನ್ನು ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಗೆ ತರಲಾಗುತ್ತಿದೆ.
ಸ್ಪಷ್ಟವಾಗಿ ಹೇಳುವುದಾದರೆ, ವೈದ್ಯ ಅವರು ಅಂದು ನೀಡಿದ್ದ ಐಚ್ಛಿಕ ಆಯ್ಕೆಯನ್ನು, ಇಂದು ಹಿಂತಿರುಗಿ ನೋಡಿದಾಗ ಅದೊಂದು ಎಂದಿಗೂ ಜಾರಿಗೆ ಬಾರದ ಉದಾರತೆಯ ಮರೆಯಲ್ಲಿ ಅಡಗಿದ್ದ ತಂತ್ರದಂತೆ ಕಾಣುತ್ತಿದೆ. ಈಗ ಸ್ಪಷ್ಟವಾಗಿ ಕಾಣಿಸುತ್ತಿರುವಂತೆ, ಆರ್‌ಎಸ್‌ಎಸ್‌ನ ಯೋಜನೆಯು ಮುಸ್ಲಿಮರ ವೈಯಕ್ತಿಕ ಕಾನೂನಿನ ಆಯ್ಕೆಯನ್ನು ಮಾತ್ರವಲ್ಲದೆ, ಅವರ ಮತದಾನದ ಹಕ್ಕನ್ನೂ ಕೂಡ ಕಸಿದುಕೊಳ್ಳುವ ತಂತ್ರವಾಗಿದೆ.
ಭಾರತದ ನಾಗರಿಕರಲ್ಲದ ಮುಸ್ಲಿಮರನ್ನು ಮಾತ್ರ ಮತದಾನದ ಹಕ್ಕಿನಿಂದ ಹೊರಗಿಡಲಾಗುತ್ತಿದೆ ಎಂದು ವಾದಿಸಬಹುದು. ಆದರೆ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿರುವ ಅತ್ಯಂತ ಅಸಂವಿಧಾನಿಕ ವಿಧಾನವನ್ನು ಗಮನಿಸಿದರೆ, ಲಕ್ಷಾಂತರ ಮುಸ್ಲಿಮರನ್ನು ಯಾವುದೇ ಪುನಃಸ್ಥಾಪನೆಯ ಭರವಸೆಯ ಪರಿಹಾರ ವ್ಯವಸ್ಥೆಯಿಲ್ಲದೆಯೇ ಒಟ್ಟಾರೆಯಾಗಿ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ.
ಮರಳಿ ಸಿಕ್ಕೀತೇ ಮತದಾನದ ಹಕ್ಕು?
ಇತ್ತೀಚೆಗೆ ಐದು ರಾಜ್ಯಗಳಲ್ಲಿ ಮುಕ್ತಾಯಗೊಂಡ ಚುನಾವಣೆಗಳು ಮತ್ತು ಕೆಲವು ತಿಂಗಳುಗಳ ಹಿಂದೆ ಬಿಹಾರದಲ್ಲಿ ನಡೆದ ಚುನಾವಣೆಯನ್ನು ಗಮನಿಸಿದರೆ, ಅನರ್ಹಗೊಂಡವರಿಗೆ ಅವರ ಮತದಾನದ ಹಕ್ಕು ಮರಳಿ ಸಿಗುವ ಸಾಧ್ಯತೆಗಳು ತೀರಾ ಕ್ಷೀಣವಾಗಿವೆ.
ಒಂದು ವೇಳೆ ಹಾಗಲ್ಲದಿದ್ದರೆ, ಕನಿಷ್ಠ ಸುಪ್ರೀಂ ಕೋರ್ಟ್ ಆದರೂ "ಅಪರಾಧ ಸಾಬೀತಾಗುವವರೆಗೆ ಅಪರಾಧಿಯಲ್ಲ" ಎಂಬ ನ್ಯಾಯಶಾಸ್ತ್ರದ ಪವಿತ್ರ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿತ್ತು. ಅಧಿಕೃತ ಪರಿಹಾರ ವ್ಯವಸ್ಥೆಯ ಕೊರತೆಯಿಂದಾಗಿ ಬಂಗಾಳದ 27 ಲಕ್ಷ ಮತದಾರರ ಪ್ರಕರಣಗಳು ನೆನೆಗುದಿಗೆ ಬಿದ್ದಿರುವುದರಿಂದ, ಈ ಬಾರಿಯಾದರೂ ಅವರಿಗೆ ಮತ ಚಲಾಯಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿತ್ತು.
ಅಂಗಾಂಗ ಛಿದ್ರ-ಜೀವ ಸುರಕ್ಷಿತ!
ಆದರೆ ಭಾರತದಲ್ಲಿ ಕನಿಷ್ಠ ಸುಮಾರು 25 ಕೋಟಿ ಮುಸ್ಲಿಮರಿದ್ದಾರೆ ಮತ್ತು ಅವರೆಲ್ಲರನ್ನೂ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದೂ ವಾದಿಸಬಹುದು. ಇದು ಬಹುಸಂಖ್ಯಾತ ಧೋರಣೆಯ ಅಹಂಕಾರದ ಸಂಕೇತ ಎಂದೇ ಹೇಳಬೇಕಾಗುತ್ತದೆ. ಇದು "ನಾವು ಕೇವಲ ನಿಮ್ಮ ಅಂಗಾಂಗಗಳನ್ನು ಕತ್ತರಿಸುತ್ತಿದ್ದೇವೆಯೇ ಹೊರತು, ನಿಮ್ಮ ಜೀವವನ್ನಲ್ಲ" ಎಂದು ಹೇಳಿದಂತಿದೆ.
ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರದ ಯೋಜನೆಗೆ, ಇಡೀ ಮುಸ್ಲಿಂ ಸಮುದಾಯವನ್ನು ಚುನಾವಣಾ ರಾಜಕೀಯದಲ್ಲಿ ಅಪ್ರಸ್ತುತಗೊಳಿಸಲು ಒಂದು ನಿರ್ಣಾಯಕ ಪ್ರಮಾಣದಷ್ಟು ಮುಸ್ಲಿಮರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಿದರೆ ಸಾಕು. ತದನಂತರ ಅವರೆಲ್ಲರನ್ನೂ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲು ಮುಂದಿನ ಹೆಜ್ಜೆ ಇಡಬಹುದು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

