
ಎಂಎಂಡಿಆರ್ ತಿದ್ದುಪಡಿಯಿಂದ ಖನಿಜಗಳ ಮೇಲಿನ ರಾಜ್ಯಗಳ ತೆರಿಗೆ ಅಧಿಕಾರಕ್ಕೆ ನಿರ್ಬಂಧ ಬಿದ್ದಿದ್ದು, ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.
ಕರ್ನಾಟಕವೂ ಸೇರಿ ರಾಜ್ಯಗಳ ಖನಿಜ ಸಂಪತ್ತಿನ ಮೇಲೆ ಕೇಂದ್ರದ ಕಾಕದೃಷ್ಟಿ: ಕಾಯ್ದೆ ತಿದ್ದುಪಡಿಯಿಂದ ಕಾದಿದೆ ಆಪತ್ತು
2026ರ ಖನಿಜಗಳು ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆ (MMDR) ತಿದ್ದುಪಡಿಯು ಇದಕ್ಕೆ ವಿರುದ್ಧವಾದ ಉದಾಹರಣೆಯಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.
ಜಿಎಸ್ಟಿ ಜಾರಿಗೆ ಬಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ʼಒಕ್ಕೂಟ ವ್ಯವಸ್ಥೆಯು ಕೇಂದ್ರ-ರಾಜ್ಯ ಸಂಬಂಧಗಳ ನಡುವಿನ ಬಿಕ್ಕಟ್ಟಿನ ಗೆರೆಯಾಗಿರುವುದಿಲ್ಲ, ಬದಲಾಗಿ ʼಟೀಮ್ ಇಂಡಿಯಾʼದ ಹೊಸ ಪಾಲುದಾರಿಕೆಯ ವ್ಯಾಖ್ಯಾನವಾಗಿದೆ,” ಎಂದು ಹೇಳಿದ್ದರು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರಕ್ಕೆ ಜಿಎಸ್ಟಿ ಅತ್ಯುತ್ತಮ ಉದಾಹರಣೆಯಾಗಿದೆ.
ಜಿಎಸ್ಟಿ ಜಾರಿಗೆ ಬರುವುದಕ್ಕೂ ಮುನ್ನ 2017ಕ್ಕಿಂತಲೂ ಮೊದಲು ಕೇಂದ್ರ ಮತ್ತು ರಾಜ್ಯಗಳ ನಡುವೆ ತೀವ್ರತರದ ಚರ್ಚೆಗಳು ನಡೆದಿದ್ದವು. ಸುಮಾರು ಹತ್ತು ವರ್ಷಗಳನ್ನು ಅದರ ಸಿದ್ಧತೆಗಾಗಿಯೇ ಕಳೆಯಲಾಗಿತ್ತು. ರಾಜ್ಯಗಳ ಪಾಲಿನ ಆದಾಯ ನಷ್ಟದ ಕಳವಳವನ್ನು ದೂರ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಆದಾಯ ನಷ್ಟದ ಪರಿಹಾರವನ್ನು ಖಾತರಿಪಡಿಸುವ ಮೂಲಕ ಹೆಚ್ಚಿನ ಪ್ರಯತ್ನ ನಡೆಸಿತ್ತು.
ಆದರೆ, ಮೈನಿಂಗ್ ಅಂಡ್ ಮಿನರಲ್ಸ್ (ಡೆವಲಪ್ಮೆಂಟ್ ಅಂಡ್ ರೆಗ್ಯುಲೇಷನ್) ತಿದ್ದುಪಡಿ ಕಾಯ್ದೆ 2026 (MMDR) ಇದಕ್ಕೆ ತದ್ವಿರುದ್ಧವಾದ ಉದಾಹರಣೆಯಾಗಿದೆ. ಕೇಂದ್ರ-ರಾಜ್ಯ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಾರದು ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕಿಲ್ಲ.
ರಾಜ್ಯಗಳ ಬೊಕ್ಕಸ ತುಂಬಿಸುವ ಗಣಿಗಾರಿಕೆ
ಖನಿಜ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರರು V/S ಎಂ/ಎಸ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದಲ್ಲಿ, ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಂಬಂಧಗಳ ಮೇಲಿದ್ದ ಅನೇಕ ವಿವಾದಾತ್ಮಕ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ 2024ರಲ್ಲಿ ಇತ್ಯರ್ಥಪಡಿಸಿತು. 1957ರ ಎಂಎಂಡಿಆರ್ ಕಾಯ್ದೆಯಡಿ ಗಣಿಗಾರಿಕೆ ಚಟುವಟಿಕೆಗಳ ಮೇಲಿನ ರಾಯಲ್ಟಿ ಎಂಬುದು 'ತೆರಿಗೆಯೇ' ಮತ್ತು ಭೂಮಿ ಹಾಗೂ ಕಟ್ಟಡಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರವು ಖನಿಜಯುಕ್ತ ಭೂಮಿಗೂ ಅನ್ವಯಿಸುತ್ತದೆಯೇ ಎಂಬುದನ್ನು ಅದು ನಿರ್ಧರಿಸಬೇಕಿತ್ತು. ರಾಜ್ಯಗಳ ಈ ಅಧಿಕಾರವನ್ನು ಮಿತಿಗೊಳಿಸುವ ಅಧಿಕಾರ ಸಂಸತ್ತಿಗೆ ಇದೆಯೇ ಎಂಬುದು ಮತ್ತೊಂದು ಸಂಬಂಧಿತ ಪ್ರಶ್ನೆಯಾಗಿತ್ತು.
ಸುಪ್ರೀಂ ಕೋರ್ಟ್ ಪೀಠವು 8:1ರ ಬಹುಮತದೊಂದಿಗೆ, ರಾಯಲ್ಟಿ ಎಂಬುದು ತೆರಿಗೆಯಲ್ಲ, ಬದಲಿಗೆ ಖನಿಜ ಹಕ್ಕುಗಳನ್ನು ಅನುಭವಿಸಲು ನೀಡಲಾದ ಅಧಿಕಾರದ ಪರಿಣಾಮವಾಗಿ ದಕ್ಕುವ ಕೇವಲ ಒಂದು ಪಾವತಿಯಾಗಿದೆ ಎಂದು ತೀರ್ಪು ನೀಡಿತು. ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದೂ ಮತ್ತು ಈ ವಿಷಯದಲ್ಲಿ ರಾಜ್ಯಗಳ ಅಧಿಕಾರವನ್ನು ಮಿತಿಗೊಳಿಸುವ ಅಧಿಕಾರ ಸಂಸತ್ತಿಗೆ ಇಲ್ಲವೆಂದೂ ಕೋರ್ಟ್ ಖಚಿತಪಡಿಸಿತು.
ಭಾರತದ ಖನಿಜ ಸಂಪತ್ತು ಕೆಲವೇ ಕೆಲವು ರಾಜ್ಯಗಳಲ್ಲಿದೆ ಮತ್ತು ಇದು ಆ ರಾಜ್ಯಗಳಿಗೆ ಆದಾಯದ ಪ್ರಮುಖ ಮೂಲ. ರಾಜ್ಯಗಳು ಸಾಮಾನ್ಯವಾಗಿ ಪ್ರಮುಖ ಖನಿಜಗಳಿಗೆ ರಾಯಧನವನ್ನು, ಸಣ್ಣ ಖನಿಜಗಳಿಗೆ ಸೀನ್ಯೋರೇಜ್ ಶುಲ್ಕವನ್ನು, ಖನಿಜಯುಕ್ತ ಭೂಮಿಯ ಮೇಲಿನ ತೆರಿಗೆಯನ್ನು, ಹರಾಜು ಅಥವಾ ಗುತ್ತಿಗೆ ಮೊತ್ತವನ್ನು ಹಾಗೂ ನಾನಾ ರೀತಿಯ ಉಲ್ಲಂಘನೆಗಳಿಗೆ ವಿಧಿಸಲಾಗುವ ದಂಡವನ್ನು ಸಂಗ್ರಹಿಸುತ್ತವೆ. ಹಾಗಾಗಿ, ಇದನ್ನು ಆದಾಯದ ಪ್ರಮುಖ ಮೂಲ ಎಂದೇ ಪರಿಗಣಿಸಲಾಗಿದೆ. ಉದಾಹರಣೆಗೆ, ಇತ್ತೀಚಿನ ತಮಿಳುನಾಡು ಬಜೆಟ್ನಲ್ಲಿ ಖನಿಜಗಳಿಂದ 7,482 ಕೋಟಿ ರೂ.ಗಳ ಆದಾಯದ ಗುರಿಯನ್ನು ಅಂದಾಜು ಮಾಡಲಾಗಿದೆ; ಕರ್ನಾಟಕವು ತನ್ನ ಕೊನೆಯ ಬಜೆಟ್ ಪ್ರಕಾರ 13,000 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ.
ಮಳೆಗಾಲದ ಅಧಿವೇಶನದಲ್ಲಿ 2026ರ ಆಗಸ್ಟ್ 10ರಂದು ಲೋಕಸಭೆಯಲ್ಲಿ ಎಂಎಂಡಿಆರ್ (ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಇದು ಯಾವುದೇ ಚರ್ಚೆ ಅಥವಾ ಸಂವಾದಕ್ಕೆ ಆಸ್ಪದವೇ ಇಲ್ಲದಂತೆ ಆಗಸ್ಟ್ 12 ರಂದು ಲೋಕಸಭೆಯಲ್ಲಿ, ಆಗಸ್ಟ್ 13 ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು ಮತ್ತು ಆಗಸ್ಟ್ 18 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಕೂಡ ಪಡೆಯಿತು.
ಈ ಮಸೂದೆಯ ಅಂಗೀಕಾರವಾಗುವುದರೊಂದಿಗೆ ಸಂಸತ್ತಿನಲ್ಲಿ ಪ್ರಸ್ತುತ ಇರುವ ಪರಿಸ್ಥಿತಿಯ ಪ್ರತಿಬಿಂಬ ಮಾತ್ರ ಎಂಬುದು ಬೇರೆ ವಿಷಯ. ಈ ಅಧಿವೇಶನದಲ್ಲಿ ಹನ್ನೆರಡು ಮಸೂದೆಗಳನ್ನು ಮಂಡಿಸಲಾಯಿತು ಮತ್ತು ಸಾರ್ವಜನಿಕ ಪರೀಕ್ಷಾ ಮಸೂದೆಯನ್ನು ಹೊರತುಪಡಿಸಿ ಅವುಗಳಲ್ಲಿ 11 ಮಸೂದೆಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂಬುದು ಗಮನಾರ್ಹ ಸಂಗತಿ.
ರಾಜ್ಯಗಳ ಅಧಿಕಾರಕ್ಕೆ ಕತ್ತರಿ
2026ರ ಎಂಎಂಡಿಆರ್ (ತಿದ್ದುಪಡಿ) ಕಾಯ್ದೆಯಿಂದಾಗಿ 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಗೊಳ್ಳುವಂತೆ ಮಾಡಿದೆ. ಇದರಲ್ಲಿ ಹೊಸ ವಿಭಾಗವೊಂದನ್ನು (ವಿಭಾಗ 9D) ಪರಿಚಯಿಸಲಾಗಿದೆ, ಇದರ ಪ್ರಕಾರ ಯಾವುದೇ ಹೆಸರಿನಲ್ಲಿರಲಿ, ತೆರಿಗೆ, ಸೆಸ್ ಅಥವಾ ಲೆವಿಗಳನ್ನು ವಿಧಿಸುವ ರಾಜ್ಯಗಳ ಅಧಿಕಾರವನ್ನು ಮೊಟಕುಗೊಂಡಂತಾಗುತ್ತದೆ.
ಇನ್ನುಮುಂದೆ ಇಂತಹ ಶುಲ್ಕಗಳನ್ನು ಕೇಂದ್ರ ಸರ್ಕಾರವು ಸೂಚಿಸುವ ಷರತ್ತುಗಳ ಅನುಸಾರ ಮಾತ್ರ ವಿಧಿಸಬೇಕಾಗುತ್ತದೆ. ಈ ತಿದ್ದುಪಡಿಯು ಮುಂದುವರಿದು, ತಿದ್ದುಪಡಿಗಿಂತ ಮೊದಲು ರಾಜ್ಯದಿಂದ ಪಾವತಿಸದ ಅಥವಾ ಸಂಗ್ರಹಿಸದ ಯಾವುದೇ ತೆರಿಗೆ ಅಥವಾ ಶುಲ್ಕವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದೂ ತಿಳಿಸುತ್ತದೆ.
ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯು (Statement of Objects and Reasons), "ಸಮಂಜಸವಾದ ನಿರ್ಬಂಧಗಳ" ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು "ತೆರಿಗೆ ಅಥವಾ ಇತರ ಶುಲ್ಕಗಳನ್ನು ಅಸಮಾನವಾಗಿ ವಿಧಿಸುತ್ತಿರುವುದರಿಂದ", "ಬೃಹತ್ ಸಾರ್ವಜನಿಕ ಹಿತಾಸಕ್ತಿಯಿಂದ" ಕೇಂದ್ರವು ಗಣಿಗಳ ನಿಯಂತ್ರಣ ಮತ್ತು ಖನಿಜಗಳ ಅಭಿವೃದ್ಧಿಯ ನಿಯಂತ್ರಣವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿಸುತ್ತದೆ.
ಅಧಿಕಾರ ಯಾರ ಬಳಿಯಿದೆ?
ಈ ತಿದ್ದುಪಡಿಗಳು ಖನಿಜ ವಲಯದ ವಿತ್ತೀಯ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಮುನ್ಸೂಚನೆಯನ್ನು ಒದಗಿಸುತ್ತವೆ, ಆ ಮೂಲಕ ರಾಷ್ಟ್ರೀಯ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ ಎಂಬುದು ಈ ಹೇಳಿಕೆ ನೀಡುವ ಸಮಜಾಯಿಷಿ. ಏನೇ ಇರಲಿ, ಇದು ರಾಜ್ಯದ ವಿತ್ತೀಯ ಅಧಿಕಾರವನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಖನಿಜಯುಕ್ತ ಭೂಮಿಯನ್ನು ನಿಯಂತ್ರಿಸುವ ಅಧಿಕಾರ ಸಂಸತ್ತಿಗೆ ಇದೆಯೇ ಎಂಬುದು ಚರ್ಚಾಸ್ಪದ ಸಂಗತಿ. ಭೂಮಿಯು ರಾಜ್ಯ ಪಟ್ಟಿಯ ವಿಷಯವಾಗಿದ್ದು, ರಾಜ್ಯ ವಿಧಾನಸಭೆಗಳಿಗೆ ಭೂಮಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆ (ಏಳನೇ ಶೆಡ್ಯೂಲ್, ಪಟ್ಟಿ II ರ ನಮೂದು 49 ಮತ್ತು 50). ಖನಿಜಯುಕ್ತ ಭೂಮಿಯು ನಮೂದು 49ರ ಅಡಿಯಲ್ಲಿ ಬರುವಂತಹದ್ದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿರುವುದನ್ನು ಗಮನಿಸಬಹುದು.
ಅದೇ ಪಟ್ಟಿಯ ನಮೂದು 50, ಖನಿಜ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸತ್ತು ಕಾನೂನಿನ ಮೂಲಕ ವಿಧಿಸಬಹುದಾದ ಮಿತಿಗಳ ಬಗ್ಗೆ ತಿಳಿಸುವುದರಿಂದ ಈ ಸವಾಲು ಎದುರಾಗುತ್ತದೆ. ಆದರೆ ನಮೂದು 49ರ ಅಡಿಯಲ್ಲಿ ರಾಜ್ಯದ ಅಧಿಕಾರಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಒಕ್ಕೂಟ ವ್ಯವಸ್ಥೆಯ ಸಮತೋಲನಕ್ಕಿಲ್ಲ ಕಿಮ್ಮತ್ತು
ಕಾಯ್ದೆಯು ಜಾರಿಗೆ ತಂದಿರುವ ಹಿಂದಿನ ದಿನಾಂಕದಿಂದ ಅನ್ವಯವಾಗುವ ನಿಬಂಧನೆಯು ಕಳವಳಕಾರಿಯಾಗಿದೆ, ಹಾಗೆಯೇ ಸುಪ್ರೀಂ ಕೋರ್ಟ್ನ ಸ್ಪಷ್ಟ ತೀರ್ಪನ್ನು ನಿರ್ಲಕ್ಷಿಸುತ್ತಿರುವ ರೀತಿಯೂ ಆತಂಕಕಾರಿ. ಈ ತಿದ್ದುಪಡಿ ಕಾಯ್ದೆಯನ್ನು ನಿಶ್ಚಿತವಾಗಿ ಪ್ರಶ್ನಾರ್ಹವಾದುದು ಮತ್ತು ಈ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಪಡಿಸಲು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಂವಿಧಾನದ ಏಳನೇ ಪರಿಚ್ಛೇದದ ನಮೂದು 50ರ ಮೇಲಿನ ನಿರ್ಬಂಧಗಳ ಕುರಿತು ಒಮ್ಮತವಿಲ್ಲದ ಏಕೈಕ ನ್ಯಾಯಾಧೀಶರ ಅಭಿಪ್ರಾಯವು ವಿಸ್ತಾರವಾಗಿ ಚರ್ಚಿಸಲ್ಪಟ್ಟಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ರಾಜ್ಯ ಸರ್ಕಾರದ ತೆರಿಗೆ ಅಧಿಕಾರವು ಖನಿಜ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸತ್ತು ಮಾಡುವ ಕಾನೂನುಗಳ ಮಿತಿಗೆ ಒಳಪಡುವ ಏಕೈಕ ತೆರಿಗೆ ಪ್ರವೇಶ ಇದಾಗಿರುವುದರಿಂದ, ಇದು ಅತ್ಯಂತ ವಿಶಿಷ್ಟವಾದದ್ದು ಎಂದು ಗೌರವಾನ್ವಿತ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಕೇಂದ್ರ ಸರ್ಕಾರವು ಇದಕ್ಕೆ ನಿರ್ಬಂಧಗಳನ್ನು ವಿಧಿಸಬಹುದು ಎಂದು ಈ ತೀರ್ಪು ಸೂಚಿಸುತ್ತದೆ.
ಆದರೆ ಉಳಿದ ಎಂಟು ಮಂದಿ ನ್ಯಾಯಾಧೀಶರು ಈ ವ್ಯಾಖ್ಯಾನವನ್ನು ಒಪ್ಪಲಿಲ್ಲ.
ಸಣ್ಣ ಪ್ರಮಾಣದ ಖನಿಜಗಳು ಸಂಪೂರ್ಣವಾಗಿ ರಾಜ್ಯಗಳ ನಿಯಂತ್ರಣದಲ್ಲಿಯೇ ಇರುತ್ತವೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಅಷ್ಟರ ಮಟ್ಟಿಗೆ ರಾಜ್ಯಗಳು ಸಮಾಧಾನಪಟ್ಟುಕೊಳ್ಳಬೇಕು. ಪ್ರಮುಖ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಎಲ್ಲ ರಾಜ್ಯಗಳ ರಾಜಸ್ವದ ಮೇಲೆ ಇದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಖನಿಜ ಕ್ಷೇತ್ರದ ಅರ್ಥ ವ್ಯವಸ್ಥೆಯಲ್ಲಿ ಇರುವ ಖಚಿತತೆ, ಸ್ಥಿರತೆ ಮತ್ತು ನಿರೀಕ್ಷೆಗಳನ್ನು ಖಚಿತಪಡಿಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಜಕ್ಕೂ ಉತ್ಸುಕವಾಗಿದ್ದರೆ ತೀವ್ರತರ ಚರ್ಚೆ ಮತ್ತು ಸಮಾಲೋಚನೆಗಳನ್ನು ನಡೆಸಿ ಎಲ್ಲರ ಕಳಕಳಿಗೆ ಸ್ಪಂದಿಸಿ ಹಾಗೂ ಎಲ್ಲ ರಾಜ್ಯಗಳನ್ನೂ ವಿಶ್ವಾಸ ತೆಗೆದುಕೊಳ್ಳುವ ಮೂಲಕ ಈ ಕೆಲಸವನ್ನು ಮಾಡಬಹುದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ʼಸಹಕಾರಿ ಒಕ್ಕೂಟ ವ್ಯವಸ್ಥೆʼ ಎಂದರೆ ನಿಖರವಾಗಿ ಇದೇ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಗಟ್ಟಿಯಾಗಿ ಬಂಧಿಸುವ ಅಂಟು ಪದಾರ್ಥ ಎಂದರೆ ಆರ್ಥಿಕ ವಿಚಾರಗಳಲ್ಲಿ ಇರುವ ಪರಸ್ಪರ ನಂಬಿಕೆ. ಎಂಎಂಡಿಆರ್ (ತಿದ್ದುಪಡಿ) ಕಾಯ್ದೆಯು ಈ ನಂಬಿಕೆ ಕುಂದಿಸುವಂತೆ ಮಾಡಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

