Vivek Deshpande

ಮರಾಠರ ನಾಡಿನ ಚತುರ ದೇವೇಂದ್ರ: ನರೇಂದ್ರರ ಎತ್ತರಕ್ಕೆ ಬೆಳೆದಾರೆ?


ಮರಾಠರ ನಾಡಿನ ಚತುರ ದೇವೇಂದ್ರ: ನರೇಂದ್ರರ ಎತ್ತರಕ್ಕೆ ಬೆಳೆದಾರೆ?
x
Click the Play button to hear this message in audio format

2029ರ ಸಾರ್ವತ್ರಿಕ ಚುನಾವಣೆಯ ನಂತರ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿ ಅಥವಾ ಬಿಡಲಿ, ಮೋದಿ ನಂತರದ ಬಿಜೆಪಿಯ ಮುಂದಿನ ಉತ್ತಮ ಆಯ್ಕೆ ಇವರೇ ಆಗಿದ್ದಾರೆಯೇ?

ಮಹಾರಾಷ್ಟ್ರದ ಇತ್ತೀಚಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸಾಧಿಸಿದ ಭರ್ಜರಿ ಗೆಲುವು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಜನವರಿ 15ರಂದು ಚುನಾವಣೆ ನಡೆದ 29 ಮಹಾನಗರ ಪಾಲಿಕೆಗಳ ಪೈಕಿ 25ರಲ್ಲಿ ಪಕ್ಷವನ್ನು ವಿಜಯದತ್ತ ಮುನ್ನಡೆಯುವಂತೆ ಮಾಡಿದ ನಂತರ ಫಡ್ನವಿಸ್ ಅವರು ಸತತ ಚುನಾವಣಾ ಯಶಸ್ಸಿನ ದಾಖಲೆಯನ್ನು ಹೊಂದಿರುವ ಒಬ್ಬ ʼಚತುರ ತಂತ್ರಜ್ಞʼ ಎಂಬ ತಮ್ಮ ಚಿತ್ರಣವನ್ನು ಮತ್ತಷ್ಟು ಸ್ಥಿರಗೊಳಿಸಿದ್ದಾರೆ.

ಅವರ ಸಾರಥ್ಯದಲ್ಲಿನ ಈ ಸಾಧನೆಯು 2024ರ ವಿಧಾನಸಭಾ ಚುನಾವಣೆಯ ವಿಜಯದ ಮುಂದುವರಿದ ಭಾಗವಾಗಿದೆ. ಆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪ್ರಕ್ಷಗಳು ಪ್ರಮುಖವಾಗಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ 288 ಸದಸ್ಯ ಬಲದ ವಿಧಾನಸಭೆಯಲ್ಲಿ 236 ಸ್ಥಾನಗಳ ದಾಖಲೆ ಜನಾದೇಶ ಪಡೆದಿದ್ದವು. ಇವುಗಳಲ್ಲಿ ಬಿಜೆಪಿ 131 ಮತ್ತು ಶಿವಸೇನೆ 52 ಸ್ಥಾನಗಳನ್ನು ಗೆದ್ದಿದ್ದವು.

ಬಿಜೆಪಿ ನೇತೃತ್ವದ ಮೈತ್ರಿಯು ನಂತರ ನಡೆದ ಗ್ರಾಮ ಪಂಚಾಯತ್, ಪುರಸಭೆ ಮತ್ತು ನಗರ ಪಂಚಾಯತ್ ಚುನಾವಣೆಗಳಲ್ಲಿಯೂ ಮುಂದುವರಿದಿತ್ತು ಮತ್ತು ವಿರೋಧ ಪಕ್ಷವನ್ನು ಯಶಸ್ವಿಯಾಗಿ ಹಿಂದಿಕ್ಕಿತ್ತು. ಈ ಸರಣಿಯಲ್ಲಿ ಇತ್ತೀಚಿನದ್ದು ಮಹಾನಗರ ಪಾಲಿಕೆ ಚುನಾವಣೆಯ ಗೆಲುವು. ಇಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ 2869 ಅಭ್ಯರ್ಥಿಗಳಲ್ಲಿ 1425 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಪಕ್ಷದ ಯಾವುದೇ ಸ್ಟಾರ್ ಪ್ರಚಾರಕರು ಚುನಾವಣಾ ಪ್ರಚಾರಗಳನ್ನು ನಡೆಸದೇ ಈ ಯಶಸ್ಸು ದಕ್ಕಿರುವುದು.

ರಾಷ್ಟ್ರೀಯ ನಾಯಕರ ಸಾಲಿನಲ್ಲಿ

ಮಹಾತ್ಮ ಜ್ಯೋತಿಬಾ ಪುಲೆ, ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ನಾಯಕರು ರೂಪಿಸಿದ ಪ್ರಗತಿಪರ ಸಾಮಾಜಿಕ ಮತ್ತು ಸೈದ್ಧಾಂತಿಕ ಅಡಿಪಾಯದ ರಾಜಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಹಿಂದುತ್ವದ ಪ್ರಭಾವ ಸಾಂಪ್ರದಾಯಿಕವಾಗಿ ಸೀಮಿತವಾಗಿತ್ತು. ಅಂತಹ ರಾಜ್ಯದಲ್ಲಿ ದಕ್ಕಿದ ಈ ಪರಿಯ ಫಲಿತಾಂಶಗಳು ಬಿಜೆಪಿ ಒಳಗಡೆ ಫಡ್ನವಿಸ್ ಅವರ ಸ್ಥಾನಮಾನವನ್ನು ಉನ್ನತ ಮಟ್ಟಕ್ಕೆ ಏರಿಸಿದೆ. ಅವರನ್ನು ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಂತರದ ಪ್ರಮುಖ ರಾಷ್ಟ್ರೀಯ ನಾಯಕರ ಸಾಲಿನಲ್ಲಿ ನೋಡಲಾಗುತ್ತಿದೆ. ಇದಕ್ಕೆ ಕಾರಣ ಅವರಲ್ಲಿರುವ ರಾಜಕೀಯ ಕೌಶಲ, ಕಾರ್ಯತತ್ಪರತೆ ಹಾಗೂ ನಾಯಕತ್ವದಲ್ಲಿನ ದೃಢತೆ.

ನಾಗಪುರದ ಒಬ್ಬ ಸ್ಥಳೀಯ ಶಾಸಕನ ಹಂತದಿಂದ ಮಹಾರಾಷ್ಟ್ರ ಬಿಜೆಪಿಯ ಪ್ರಮುಖ ವ್ಯಕ್ತಿಯಾಗಿ ಬೆಳೆದ ಫಡ್ನವಿಸ್ ಅವರ ಇಷ್ಟೂ ಏಳಿಗೆ ಸಂಭವಿಸಿದ್ದು ಕೇವಲ ಹನ್ನೊಂದು ವರ್ಷಗಳ ಅವಧಿಯಲ್ಲಿ ಎಂಬುದು ಗಮನಾರ್ಹ. 2014ರಲ್ಲಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುವ ಮೂಲಕ ಅವರ ರಾಜಕೀಯ ಜೀವನವು ಪ್ರಮುಖ ತಿರುವು ಪಡೆಯಿತು.

ಹಾಗಂತ ಅವರಿಗೆ ಹಿಂದೆ ಯಾವುದೇ ಸಚಿವ ಸ್ಥಾನವನ್ನು ಕೂಡ ನಿಭಾಯಿಸಿದ ಅನುಭವ ಇದ್ದಿರಲಿಲ್ಲ. ಆದರೂ ಅವರನ್ನು ನೇರವಾಗಿ ಮುಖ್ಯಮಂತ್ರಿ ಹುದ್ದೆಗೆ ಏರಿಸಿದ್ದು ಅನೇಕರ ಹುಬ್ಬೇರುವಂತೆ ಮಾಡಿತ್ತು.

ಈ ಅವಧಿಯಲ್ಲಿ ಫಡ್ನವಿಸ್ ಅವರ ರಾಜಕೀಯ ಕಾರ್ಯವೈಖರಿಯಲ್ಲಿ ಕಂಡು ಬಂದ ಗಮನಾರ್ಹ ಬದಲಾವಣೆ ಎಂದರೆ ಅವರು ಅತ್ಯಂತ ದೃಢ ನಿಶ್ಚಯದಿಂದ ಹಿಂದುತ್ವವನ್ನು ಅಪ್ಪಿಕೊಂಡಿದ್ದು.

ಮರಾಠಾ ಪ್ರಾಬಲ್ಯದ ನಡುವೆ ಬ್ರಾಹ್ಮಣ ನಾಯಕ

ಇಷ್ಟು ಮಾತ್ರವಲ್ಲದೆ ದೀರ್ಘಕಾಲದಿಂದ ಮರಾಠಾ ರಾಜಕಾರಣದ ಪ್ರಾಬಲ್ಯವನ್ನು ಹೊಂದಿರುವ ರಾಜ್ಯದಲ್ಲಿ ಒಬ್ಬ ಬ್ರಾಹ್ಮಣ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು ಕೂಡ ಅಸಾಮಾನ್ಯ ಸಂಗತಿಯಾಗಿತ್ತು. 1995ರಲ್ಲಿ ಶಿವಸೇನೆಯ ನಾಯಕ ಮನೋಹರ್ ಜೋಶಿ ಅವರನ್ನು ಹೊರತುಪಡಿಸಿದರೆ ಬೇರೆ ಉದಾಹರಣೆ ಇರಲಿಲ್ಲ. ಹಾಗಿದ್ದೂ ನಂತರದ ಐದು ವರ್ಷಗಳ ಅವಧಿಯಲ್ಲಿ ಫಡ್ನವಿಸ್ ಅವರು ಜವಾಬ್ದಾರಿಯನ್ನು ನಿಭಾಯಿಸಿದ ರೀತಿ, ಅವರ ಆತ್ಮವಿಶ್ವಾಸ ಹಾಗೂ ಆಡಳಿತಾತ್ಮಕವಾದ ಸ್ಥಿರತೆ ಎಲ್ಲರ ಗಮನ ಸೆಳೆಯಿತು. ದಶಕಗಳ ಬಳಿಕ ಪೂರ್ಣ ಐದು ವರ್ಷಗಳ ಅಧಿಕಾರ ಅವಧಿ ಪೂರೈಸಿದ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಯೂ ಅವರದಾಯಿತು.

ಆದಾಗ್ಯೂ ಅವರು ಈ ಅವಧಿಯಲ್ಲಿ ಅತ್ಯಂತ ಸುಸಂಸ್ಕೃತ ಮತ್ತು ಸಂಯಮದ ರಾಜಕಾರಣಿಯಾಗಿ ಕಾಣಿಸಿಕೊಂಡರು. ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಅನುಸರಿಸುತ್ತಿದ್ದ ಆಕ್ರಮಣಕಾರಿ ಶೈಲಿಗೆ ವಿರುದ್ಧವಾಗಿತ್ತು. ದೇಶದ ಉಳಿದ ಕಡೆಗಳಲ್ಲಿ ಬಹಿರಂಗ ಆಕ್ರಮಣಕಾರಿ ಹಿಂದುತ್ವದ ರಾಜಕಾರಣ ಢಾಳಾಗಿ ಕಾಣಿಸುತ್ತಿದ್ದರೆ ಅಂತಹ ಶೈಲಿಯನ್ನು ಮಹಾರಾಷ್ಟ್ರದಲ್ಲಿ ಪ್ರಯೋಗಿಸುವ ಅಗತ್ಯ ಫಡ್ನವಿಸ್ ಅವರಿಗೆ ಕಂಡುಬರಲಿಲ್ಲ.

2019ರ ವಿಧಾನಸಭಾ ಚುನಾವಣೆಯ ಬಳಿಕ ಇನ್ನೊಂದು ಅಗ್ನಿ ಪರೀಕ್ಷೆ ಎದುರಾಯಿತು. ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರವಾಗಿ ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆಯೊಂದಿಗೆ ಬಿಜೆಪಿ ಮೈತ್ರಿ ಮುರಿದುಬಿದ್ದಾಗಲೇ ಫಡ್ನವಿಸ್ ಅವರಿಗೆ ತಮ್ಮ ರಾಜಕೀಯ ಕೌಶಲವನ್ನು ಒರೆಗೆ ಹಚ್ಚಬೇಕಾದ ಪ್ರಮೇಯ ಎದುರಾಯಿತು. ಮಹಾರಾಷ್ಟ್ರದ ರಾಜಕೀಯ ಮಾತ್ರವಲ್ಲದೆ ಭಾರತೀಯ ರಾಜಕಾರಣದಲ್ಲೇ ಅಭೂತಪೂರ್ವ ಎನ್ನಬಹುದಾದ ಹೆಜ್ಜೆಗಳನ್ನು ಇಡುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಠಾಕ್ರೆ ಅವರ ನಿಲುವನ್ನು ಎದುರಿಸಲು ಫಡ್ನವಿಸ್ ಅವರು 2019ರ ನವೆಂಬರ್ 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮಗೆ ಎನ್.ಸಿ.ಪಿ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಆ ಪ್ರಯತ್ನವು ಬಹಳ ಕಾಲ ಉಳಿಯಲಿಲ್ಲ. ಶರದ್ ಪವಾರ್ ಅವರು ದೂರ ಸರಿದ ಕಾರಣ ಫಡ್ನವಿಸ್ ಕೇವಲ ಮೂರೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು.

ನಂತರದ ಎರಡೂವರೆ ವರ್ಷಗಳಲ್ಲಿ ಮಹಾರಾಷ್ಟ್ರ ಮತ್ತೊಂದು ಅನಿರೀಕ್ಷಿತ ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಯಿತು. ಈ ಬಾರಿ ಅಚ್ಚರಿಯ ಹೆಜ್ಜೆ ಇಟ್ಟಿದ್ದು ವಿರೋಧಿ ಪಾಳಯದಿಂದ. ಉದ್ಧವ್ ಠಾಕ್ರೆ ಅವರು ತಮ್ಮ ಧೀರ್ಘಕಾಲದ ರಾಜಕೀಯ ವೈರಿಗಳಾದ ಕಾಂಗ್ರೆಸ್ ಮತ್ತು ಎನ್.ಸಿ.ಪಿ ಜೊತೆಗೂಡಿ ʼಮಹಾ ವಿಕಾಸ ಅಘಾಡಿʼ (ಎಂ.ಎನ್.ಎ) ಮೈತ್ರಿಕೂಟವನ್ನು ರಚಿಸಿದರು. ಆ ಮೂಲಕ ಬಿಜೆಪಿಗೆ ಶಾಕ್ ನೀಡಿ ತಾವೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಮತ್ತೆ ಪುಟಿದೆದ್ದ ಪರಿ

ಮೂಲೆಗುಂಪಾದ ಫಡ್ನವಿಸ್ ನೇತೃತ್ವದ ಬಿಜೆಪಿ ಮತ್ತೆ ಪುಟಿದೇಳುವ ಹಾದಿಯನ್ನು ಹುಡುಕಲು ಶುರುಮಾಡಿತು. ಇದರ ಬೆನ್ನಲ್ಲೇ ಫಡ್ನವಿಸ್ ಅವರು ಪುನರಾಗಮನಕ್ಕಾಗಿ ಸರಣಿ ಸ್ವರೂಪದ ಕಾರ್ಯತಂತ್ರಗಳನ್ನು ರೂಪಿಸಿದರು. ಅದರ ಮೊದಲ ಹಂತವೆಂದರೆ ಶಿವಸೇನೆ ಮತ್ತು ಎನ್.ಸಿ.ಪಿಯನ್ನು ಇಂಚಿಂಚಾಗಿ ದುರ್ಬಲಗೊಳಿಸುವುದು. ಯಾರಿಗೂ ತಿಳಿಯದ ರೀತಿಯಲ್ಲಿ ತಮ್ಮ ತಂತ್ರವನ್ನು ಜಾರಿಗೆ ತರುತ್ತಲೇ ಹೋದರು. ಮೊದಲ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು ಶಿವಸೇನೆಯನ್ನು ಒಡೆಯುವ ಮೂಲಕ. ಏಕನಾಥ ಶಿಂಧೆ ನೇತ್ರತ್ವದ 40ಕ್ಕೂ ಹೆಚ್ಚು ಶಾಸಕರನ್ನು ಸೆಳೆದರು. ನಂತರ ಅದೇ ಬಂಡಾಯ ಬಣದ ಜೊತೆಗೆ ಕೈಜೋಡಿಸಿ ಠಾಕ್ರೆ ಸರ್ಕಾರವನ್ನು ಅಧಿಕಾರದಿಂದ ಕೆಡವಿದರು.

ಇಡೀ ಘಟನೆಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದವು. ಶಿಂಧೆ ಬಣಕ್ಕೆ ಆಮಿಷವೊಡ್ಡಲಾಗಿದೆ ಎಂಬ ಮಾತುಗಳು ಕೇಳಿಬಂದವು. ಅಷ್ಟಾದರೂ ಫಡ್ನವಿಸ್ ಅವರಿಗೆ ಮರಳಿ ಅಧಿಕಾರವನ್ನು ದಕ್ಕಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು.

ಈ ಎಲ್ಲ ರಾಜಕೀಯ ನಡವಳಿಕೆಯಲ್ಲಿ ಒಂದು ನಿರ್ದಿಷ್ಟ ಮಟ್ಟದ ಘನತೆಯನ್ನು ಕಾಯ್ದುಕೊಳ್ಳುವ ಮಹಾರಾಷ್ಟ್ರದ ಸಂಪ್ರದಾಯದಿಂದ ವಿಮುಖವಾದಂತೆ ಕಂಡುಬಂದಿತು. ಫಡ್ನವಿಸ್ ಅವರು ತಮ್ಮ ಹಿಂದಿನ ಮೃದು ಮತ್ತು ಸುಸಂಸ್ಕೃತ ವ್ಯಕ್ತಿತ್ವದಿಂದ ಹೊರಬಂದು ಹೆಚ್ಚು ಕಠಿಣ ಹಾಗೂ ದೃಢ ರಾಜಕೀಯ ನಿಲುವನ್ನು ತಳೆದರು.


ಈ ನಡುವೆ ಮೋದಿ ಮತ್ತು ಅಮಿತ್ ಶಾ ಜೋಡಿ ಶಿಂದೆ ಅವರನ್ನು ಮುಖ್ಯಮಂತ್ರಿ ಮಾಡುವ ತೀರ್ಮಾನಕ್ಕೆ ಬಂತು. ಆ ಬೆಳವಣಿಗೆಯಿಂದ ಫಡ್ನವಿಸ್ ಅವರಿಗೆ ಕಷ್ಟದ ಕ್ಷಣಗಳು ಎದುರಾದವು. ಆದರೆ ಅವರಿಗೆ ಅದನ್ನು ಒಪ್ಪಿಕೊಳ್ಳದೇ ಅನ್ಯ ಮಾರ್ಗವಿರಲಿಲ್ಲ. ಅಮಿತ್ ಶಾ ಕೈಗೊಂಡ ಇನ್ನೊಂದು ನಿರ್ಧಾರ ಅವರಿಗೆ ಮತ್ತೂ ಒಂದು ಹಿನ್ನಡೆ ಅನುಭವಿಸಬೇಕಾಯಿತು. ಅದು, ಶಿಂಧೆ ಅವರ ಕೈಕೆಳಗೆ ಫಡ್ನವಿಸ್ ಅವರನ್ನು ಉಪ-ಮುಖ್ಯಮಂತ್ರಿಯಾಗಿ ಕೆಲಸ ಮಾಡುವಂತೆ ಸೂಚಿಸಿದ್ದು.

ಒಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ ಯಾರಿಗೇ ಆದರೂ ಇಂತಹ ಒಂದು ಸ್ಥಿತಿ ಆತ್ಮವಿಶ್ವಾಸವನ್ನು ಕುಗ್ಗಿಸುವ ಹಿಂಬಡ್ತಿಯಾಗಿತ್ತು. ಹಾಗಿದ್ದೂ ಫಡ್ನವಿಸ್ ಅವರು ಎರಡೂವರೆ ವರ್ಷಗಳ ಕಾಲ ಶಿಂಧೆ ಅವರ ಅಧೀನದಲ್ಲಿ ಉಪ-ಮುಖ್ಯಮಂತ್ರಿ ಹುದ್ದೆಗೆ ಸೀಮಿತವಾಗಬೇಕಾಯಿತು. ಇಂತಹ ಸ್ಥಿತಿಯಲ್ಲಿ ದೃಢಸಂಕಲ್ಪ ಮತ್ತು ತಾಳ್ಮೆಗೆ ಗಟ್ಟಿಯಾಗಿ ಅಂಟಿಕೊಂಡ ಫಡ್ನವಿಸ್ ಅವರು ಉನ್ನತ ಹುದ್ದೆಗೆ ಮರಳಲು ಇದೊಂದು ಉತ್ತಮ ಅವಕಾಶ ಎನ್ನುವಂತೆ ಕಾಯಲು ಸಿದ್ಧರಾದರು.

2024ರ ವಿಧಾನಸಭಾ ಚುನಾವಣೆಯ ಭರ್ಜರಿ ಫಲಿತಾಂಶ ಎಲ್ಲವನ್ನೂ ಬದಲಾಯಿಸಿಬಿಟ್ಟಿತು. ದೆಹಲಿ ನಾಯಕತ್ವವು ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೇಮಕ ಮಾಡುವುದರೊಂದಿಗೆ ಅವರ ತಾಳ್ಮೆ ಮತ್ತು ಛಲಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿತ್ತು. ಶಿಂಧೆ ಅವರ ಉಪ-ಮುಖ್ಯಮಂತ್ರಿಯಾದರು.

ಶರದ್ ಪವಾರ್-ಗೆ ಕೊಟ್ಟ ಮರ್ಮಾಘಾತ

ಹಾಗಂತ ಈ ನಡುವಿನ ಅವಧಿಯಲ್ಲಿ ಫಡ್ನವಿಸ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಾಜ್ಯ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಮರುಹೊಂದಾಣಿಕೆಗೆ ಅವರು ನಾಂದಿ ಹಾಡಿದರು. ಈ ಬಾರಿ ಅವರು ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷವನ್ನು ವಿಭಜಿಸಿ, ಅವರ ಸೋದರಳಿಯ ಅಜಿತ್ ಪವಾರ್ ಅವರನ್ನು ಬಿಜೆಪಿ ಜೊತೆಗೆ ಕೈಜೋಡಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಆರು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ಜೀವನದಲ್ಲಿ ಮಹಾರಾಷ್ಟ್ರದ ಬೇರೆ ಯಾವುದೇ ರಾಜಕಾರಣಿ ಶರದ್ ಪವಾರ್ ಅವರಿಗೆ ಇಂತಹ ಮರ್ಮಾಘಾತವನ್ನು ನೀಡಲು ಸಾಧ್ಯವಾಗಿರಲಿಲ್ಲ.

ಚತುರ ಫಡ್ನವಿಸ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ರಾಜ್ಯದ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ತಿನಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗೆ ಎಲ್ಲಾ ಹಂತಗಳಲ್ಲಿ ವಿರೋಧ ಪಕ್ಷದ ಭದ್ರಕೋಟೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮುಂದುವರಿಸಿದರು. ಇದರ ಫಲವಾಗಿ ನೂರಾರು ಕಾರ್ಪೊರೇಟರ್ಗಳು, ಕೌನ್ಸಿಲರ್ಗಳು, ಶಾಸಕರು ಮತ್ತು ಸಂಸದರು ಪಕ್ಷಾಂತರಗೊಂಡು ಬಿಜೆಪಿ ಸೇರಿದರು. ಇದರಿಂದಾಗಿ ತೀವ್ರ ಶಕ್ತಿಕುಂದಿದ ವಿರೋಧ ಪಕ್ಷದ ಬಳಿ ಬಿಜೆಪಿಯ ಸಾಂಘಿಕ ಬಲವನ್ನು ಎದುರಿಸಲು ಉಳಿದಿದ್ದು ಸೀಮಿತ ಸಂಪನ್ಮೂಲಗಳು ಮತ್ತು ಜನಬಲ ಮಾತ್ರ.

ಇದರ ಪರಿಣಾಮವಾಗಿ 2024ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಾರಿ ಸೋಲನ್ನು ಅನುಭವಿಸಿದವು; 288 ಸದಸ್ಯ ಬಲದ ಸದನದಲ್ಲಿ ಅವರೆಲ್ಲರೂ ಸೇರಿ ಗೆಲ್ಲಲು ಶಕ್ತರಾಗಿದ್ದು ಕೇವಲ 52 ಸ್ಥಾನಗಳು ಮಾತ್ರ.

ಆದರೆ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುನ್ನ, ರಾಜ್ಯದಲ್ಲಿ ನಡೆದ 2024ರ ಲೋಕಸಭಾ ಚುನಾವಣೆಯಲ್ಲಿ ಎದುರಾದ ಹಿನ್ನಡೆಯು ಬಿಜೆಪಿ ಮತ್ತು ಫಡ್ನವಿಸ್ ಅವರ ರಾಜಕೀಯ ಭವಿಷ್ಯವನ್ನು ಹಿಂದಕ್ಕೆ ತಳ್ಳುವಂತೆ ಕಾಣಿಸಿತ್ತು. ಒಟ್ಟು 48 ಸ್ಥಾನಗಳಲ್ಲಿ ಪಕ್ಷವು ಕೇವಲ 17 ಸ್ಥಾನಗಳನ್ನು ಮಾತ್ರ ಗೆದ್ದಿತು, ಇದು 2019ರ ಫಲಿತಾಂಶಕ್ಕೆ ಹೋಲಿಸಿದರೆ 27 ಸ್ಥಾನಗಳಷ್ಟು ಕುಸಿತವಾಗಿತ್ತು. ತಮ್ಮ ಇತ್ತೀಚಿನ ರಾಜಕೀಯ ನಡೆಗಳಿಗೆ ಬಿಜೆಪಿ ಮತ್ತು ಫಡ್ನವಿಸ್ ಬೆಲೆ ತೆರುವಂತಾಯಿತು ಎಂದು ಹಲವರು ಭಾವಿಸಿದ್ದರು. ಆದರೆ ಕೆಲವು ತಿಂಗಳುಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಭೂತಪೂರ್ವ 236 ಸ್ಥಾನಗಳನ್ನು ಪಡೆಯುವ ಮೂಲಕ ಆ ಭಾವನೆಯನ್ನು ಸುಳ್ಳಾಗಿಸಿತು.

ಗ್ರಾಮ ಪಂಚಾಯತ್ನಿಂದ ಹಿಡಿದು ಮಹಾನಗರ ಪಾಲಿಕೆ ಮಟ್ಟದವರೆಗೆ ನಂತರ ನಡೆದ ಸರಣಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿನ ಗೆಲುವುಗಳು, 2024ರ ಲೋಕಸಭಾ ಫಲಿತಾಂಶವು ಕೇವಲ ಒಂದು ಅಪವಾದವೇ ಹೊರತು ಅದು ರಾಜ್ಯದ ರಾಜಕೀಯ ಪ್ರವೃತ್ತಿಯಲ್ಲ ಎಂಬುದನ್ನು ಸೂಚಿಸಿದವು.

ತೀವ್ರ ಹಿಂದುತ್ವದ ತೆಕ್ಕೆಯಲ್ಲಿ

ಇದೇ ಹೊತ್ತಿನಲ್ಲಿ ದೇವೇಂದ್ರ ಫಡ್ನವಿಸ್ ಅವರ ರಾಜಕೀಯ ಕಾರ್ಯತಂತ್ರಕ್ಕೆ ಸೇರ್ಪಡೆಯಾದ ಇನ್ನೊಂದು ಗಮನಾರ್ಹ ಅಂಶವೆಂದರೆ ಹೆಚ್ಚು ಪ್ರಖರವಾದ ಹಿಂದುತ್ವವನ್ನು ಅಪ್ಪಿಕೊಂಡಿದ್ದು. ಸಕಲ ಹಿಂದೂ ಸಮಾಜದಂತಹ ಸಂಘಟನೆಗಳು ವ್ಯಾಪಕವಾದ ರ್ಯಾಲಿಗಳನ್ನು ನಡೆಸಲು ಅನುವು ಮಾಡಿಕೊಡುವುದರಿಂದ ಹಿಡಿದು, ಪ್ರಬಲ ಹಿಂದೂ ಅಸ್ಮಿತೆಯನ್ನು ಬಹಿರಂಗವಾಗಿ ಪ್ರತಿಪಾದಿಸುವವರೆಗೆ, ಫಡ್ನವಿಸ್ ರಾಜ್ಯದಲ್ಲಿ ಬಿಜೆಪಿಯ ಸೈದ್ಧಾಂತಿಕ ಪ್ರಭಾವವನ್ನು ವಿಸ್ತರಿಸುವ ನೇತೃತ್ವವಹಿಸಿದರು.

ಒಂದು ವೇಳೆ ಆಯ್ಕೆ ನೀಡಿದ್ದರೆ, ಫಡ್ನವಿಸ್ ಅವರು ಮೃದು ಹಿಂದೂತ್ವದ ಹಾದಿಯನ್ನೇ ಮುಂದುವರಿಸಲು ಬಯಸುತ್ತಿರಬಹುದು. ಆದರೆ ಮೋದಿ-ಶಾ ಯುಗದ ಬಿಜೆಪಿಯಲ್ಲಿ ಕೆಲಸ ಮಾಡುವಾಗ ಎದುರಾದ ರಾಜಕೀಯ ಅನಿವಾರ್ಯತೆಗಳು ಅವರನ್ನು ಕಠಿಣ ಸೈದ್ಧಾಂತಿಕ ನಿಲುವು ತಳೆಯುವಂತೆ ಮಾಡಿದವು. ಹೀಗಾಗಿ, 2024ರ ಲೋಕಸಭಾ ಚುನಾವಣೆಯ ಹಿನ್ನಡೆಯ ನಂತರದ ಸುಮಾರು 20 ತಿಂಗಳ ಅವಧಿಯಲ್ಲಿ, ಫಡ್ನವಿಸ್ ಬಿಜೆಪಿಯನ್ನು ಒಂದು ಅಜೇಯ ಚುನಾವಣಾ ಯಂತ್ರವನ್ನಾಗಿ ಪರಿವರ್ತಿಸಲು ಶಕ್ತರಾದರು.

ಈ ಕಾಲಘಟ್ಟದಲ್ಲಿ ಅವರು ಹಲವು ಸಂಕಷ್ಟಗಳನ್ನು ಕೂಡ ಎದುರಿಸಿದರು. ಅವುಗಳಲ್ಲಿ ಪ್ರಮುಖವಾದುದು ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದ ಮರಾಠಾ ಮೀಸಲಾತಿ ಹೋರಾಟ. ಜಾರಂಗೆ ಅವರ ಸರಣಿ ಉಪವಾಸ ಸತ್ಯಾಗ್ರಹಗಳು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶ ಹೊಂದಿದ್ದವು ಮತ್ತು ಹೆಚ್ಚಾಗಿ ಫಡ್ನವಿಸ್ ಅವರನ್ನೇ ವೈಯಕ್ತಿಕವಾಗಿ ಗುರಿ ಮಾಡಲಾಗಿದ್ದವು.

ಪ್ರತಿಭಟನಾಕಾರರು ಅವರ ಬ್ರಾಹ್ಮಣ ಹಿನ್ನೆಲೆಯನ್ನು ಪದೇ ಪದೇ ಪ್ರಸ್ತಾಪಿಸಿದರೂ, ಫಡ್ನವಿಸ್ ಎದೆಗುಂದದೆ ಈ ಹೋರಾಟದ ರಾಜಕೀಯ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರು.

ಜನರ ಪಾಲಿನ ದೇವ್ ಬಾವು

ಈ ಅವಧಿಯುದ್ದಕ್ಕೂ, ಫಡ್ನವಿಸ್ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ವಿರೋಧಿಗಳನ್ನು ಪಕ್ಷದ ತೆಕ್ಕೆಗೆ ಸೇರಿಸಿಕೊಳ್ಳುವ ಮೂಲಕ ಪಕ್ಷದ ನೆಲೆಯನ್ನು ವಿಸ್ತರಿಸುತ್ತಾ ಹೋದರು ಮತ್ತು ಆಯಾ ಸಮಯದ ರಾಜಕೀಯ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಮೈತ್ರಿ ಪಾಲುದಾರರನ್ನು ಜೊತೆಯಲ್ಲಿಟ್ಟುಕೊಳ್ಳುವಲ್ಲಿ ಹಾಗೂ ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾದರು. ಇವೆಲ್ಲದರ ಫಲವಾಗಿ ಒಂದು ಕಾಲದಲ್ಲಿ ಪ್ರತ್ಯೇಕ ವಿದರ್ಭ ರಾಜ್ಯದ ಹೋರಾಟದೊಂದಿಗೆ ಗುರುತಿಸಿಕೊಂಡಿದ್ದ ನಾಗ್ಪುರದ ಸ್ಥಳೀಯ ನಾಯಕನನ್ನು, ರಾಜ್ಯಾದ್ಯಂತ ಪ್ರಭಾವವಿರುವ ಒಬ್ಬ ಜನನಾಯಕನನ್ನಾಗಿ ಪರಿಣಾಮಕಾರಿಯಾಗಿ ಪರಿವರ್ತಿಸಲು ಯಶಸ್ವಿಯಾದವು. ಈಗ ಬಿಜೆಪಿ ಬೆಂಬಲಿಗರು ಅವರನ್ನು 'ದೇವೇಂದ್ರ' ಎಂದು ಕರೆಯುವ ಬದಲು ಪ್ರೀತಿಯಿಂದ "ದೇವ ಭಾವು" ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ.

ಮುಖ್ಯಮಂತ್ರಿ ಪದವಿಯ ಆಕಾಂಕ್ಷೆಯನ್ನು ಹೊಂದಿರುವ ಹಾಗೂ ಅಸಮಾಧಾನ ಹೊಂದಿರುವ ಶಿಂಧೆಯವರು ಫಡ್ನವಿಸ್ ಅವರಿಗೆ ಕೆಲವು ಕಠಿಣ ಸಂದರ್ಭಗಳನ್ನೂ ತಂದೊಡ್ಡಿದರು, ಆದರೆ ಫಡ್ನವಿಸ್ ಅದಕ್ಕೆ ಕುಗ್ಗಲಿಲ್ಲ. ಇಲ್ಲಿಯ ತನಕವೂ ಅವರು ಶಿಂಧೆಯವರನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದಾರೆ. ಶಿಂಧೆ ಅವರೊಂದಿಗಿನ ಈ ಅಸ್ಥಿರ ಸಂಬಂಧದ ಇತ್ತೀಚಿನ ಸವಾಲಿನ ಹಂತವು ಬೃಹನ್-ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಹುದ್ದೆಯ ಬೇಡಿಕೆಯ ಸುತ್ತ ನಡೆಯುತ್ತಿದೆ; ಇಲ್ಲಿ ಬಿಜೆಪಿ ಬಹುಮತಕ್ಕಾಗಿ ಶಿಂಧೆ ಅವರ ಪಕ್ಷದ ಮೇಲೆ ಅವಲಂಬಿತವಾಗಿದೆ. ಫಡ್ನವಿಸ್ ಈ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮೋದಿ ನಂತರದ ಆಯ್ಕೆ?

ಹಾಗಾದರೆ, ಮುಂಬರುವ ವರ್ಷಗಳಲ್ಲಿ ಫಡ್ನವಿಸ್ ಅವರ ಹಾದಿ ಯಾವ ದಿಕ್ಕಿನಲ್ಲಿ ಸಾಗೀತು? 2029ರ ಸಾರ್ವತ್ರಿಕ ಚುನಾವಣೆಯ ನಂತರ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿ ಅಥವಾ ಬಿಡಲಿ, ಮೋದಿ ನಂತರದ ಬಿಜೆಪಿಯ ಮುಂದಿನ ಉತ್ತಮ ಆಯ್ಕೆ ಇವರೇ ಆಗಿದ್ದಾರೆಯೇ?

ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಅಸ್ಸಾಂನಂತಹ ರಾಜ್ಯಗಳು ಬಹಳ ಕಾಲದಿಂದ ಹಿಂದುತ್ವಕ್ಕೆ ಫಲವತ್ತಾದ ಭೂಮಿಯನ್ನು ಒದಗಿಸಿದೆ. ಆದರೆ ಮಹಾರಾಷ್ಟ್ರ ಹಾಗಲ್ಲ, ಸಾಂಪ್ರದಾಯಿಕವಾಗಿ ಕೋಮು ರಾಜಕಾರಣವನ್ನು ವಿರೋಧಿಸುತ್ತಾ ಬಂದಿರುವ ಮಹಾರಾಷ್ಟ್ರದಲ್ಲಿ, ಫಡ್ನವಿಸ್ ಅವರು ಅಲ್ಪಾವಧಿಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯನ್ನು ಗಮನಿಸಿದರೆ, 2029ರ ನಂತರದ ರಾಜಕೀಯ ಭೂಪಟದಲ್ಲಿ ಅವರು ಬಿಜೆಪಿಯ ಪಾಲಿಗೆ ಬಹಳ ಮಹತ್ವದ ವ್ಯಕ್ತಿಯಾಗಬಹುದು.

ಅತಿ ಮುಖ್ಯವಾಗಿ, ಬಿಜೆಪಿಯ ಅಧಿಕಾರದ ಲೆಕ್ಕಾಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆರ್ಎಸ್ಎಸ್ ಸಂಘಟನೆಯ ವಿಶ್ವಾಸವನ್ನು ಫಡ್ನವಿಸ್ ಗಳಿಸಿದ್ದಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ತಮ್ಮನ್ನು ಆಕ್ರಮಣಕಾರಿ ಹಿಂದುತ್ವದ ಪ್ರತಿಪಾದಕ ಮತ್ತು ಸಮರ್ಥ ಆಡಳಿತಗಾರ ಎಂದು ಸ್ಥಾಪಿಸಿಕೊಳ್ಳುವುದರ ಜೊತೆಗೆ, ದೆಹಲಿಯ ಉನ್ನತ ಸ್ಥಾನಕ್ಕಾಗಿ ಬಿಜೆಪಿಯೊಳಗಿನ ಇತರ ಸಂಭಾವ್ಯ ಸ್ಪರ್ಧಿಗಳಿಗಿಂತ ಫಡ್ನವಿಸ್ ಹಲವು ಅನುಕೂಲಗಳನ್ನು ಹೊಂದಿದ್ದಾರೆ. ಅವರು ಸುಶಿಕ್ಷಿತರಾಗಿದ್ದಾರೆ ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದಾರೆ. ಜೊತೆಗೆ ಅವರು ಉತ್ತಮವಾಗಿ ಇಂಗ್ಲಿಷ್ ಮಾತನಾಡಬಲ್ಲರು, ಇದು ಅಂತರಾಷ್ಟ್ರೀಯ ಮಟ್ಟದ ಕಾರ್ಯಗಳಲ್ಲಿ ಮಹತ್ವ ಪಡೆಯುವ ಕೌಶಲವಾಗಿದೆ. ಎದುರಾಳಿಗಳನ್ನು ರಾಜಕೀಯವಾಗಿ ಮಣಿಸುವ ಚತುರತೆಯೂ ಅವರಿಗಿದೆ. ಮೋದಿ ಮತ್ತು ಶಾ ಅವರಂತೆಯೇ ಅವರು 24x7 ರಾಜಕಾರಣಿ. ನಿರಂತರವಾಗಿ ಸಂಘಟನಾತ್ಮಕ ಕೆಲಸಗಳಲ್ಲಿ ತೊಡಗಿರುತ್ತಾರೆ. ಅವರಿಗೆ ವಯಸ್ಸಿನ ಅನುಕೂಲವೂ ಇದೆ - 2029ರಲ್ಲಿ ಅವರಿಗೆ ಕೇವಲ 59 ವರ್ಷ ವಯಸ್ಸಾಗಿರುತ್ತದೆ.

ಸಂಘದ ಪಾಲಿನ ಅವಕಾಶ

ಮೋದಿ ನಂತರ ಬಿಜೆಪಿಯ ಭವಿಷ್ಯವೇನು ಎಂದು ಅನೇಕರು ಅಚ್ಚರಿಯಿಂದ ಕಾಯುತ್ತಿದ್ದಾರೆ. ಆರ್ಎಸ್ಎಸ್ ಗುಪ್ತವಾಗಿ 'ಪ್ಲಾನ್ ಬಿ' ಅಥವಾ ಕೆಲವರು ಹೇಳುವಂತೆ 'ಪ್ಲಾನ್ ಡಿ' (ದೇವೇಂದ್ರ ಅವರಿಗಾಗಿ) ಮೇಲೆ ಕೆಲಸ ಮಾಡುತ್ತಿರಬಹುದು. 2014ರಲ್ಲಿ ತನ್ನ ನೆಚ್ಚಿನ ನಾಯಕರಲ್ಲಿ ಒಬ್ಬರಾದ ನಿತಿನ್ ಗಡ್ಕರಿ ಅವರನ್ನು ದೆಹಲಿಯ ಉನ್ನತ ಸ್ಥಾನಕ್ಕೆ ತರಲು ವಿಫಲವಾದ ನಂತರ, ಈ ಬಾರಿ ತನ್ನ ಆಯ್ಕೆಯ ನಾಯಕನನ್ನು ಪಟ್ಟಕ್ಕೇರಿಸುವ ಅವಕಾಶವನ್ನು ಸಂಘವು ಅಷ್ಟು ಸುಲಭವಾಗಿ ಕಳೆದುಕೊಳ್ಳಲಾರದು.

ಅಂತಹ ಸಂದರ್ಭದಲ್ಲಿ ಉದ್ಭವಿಸುವ ಸಹಜ ಪ್ರಶ್ನೆಯೆಂದರೆ, ಈ ರೇಸ್‌ನಲ್ಲಿ ಅಮಿತ್ ಶಾ ಅವರ ಸ್ಥಾನವೇನು? ಫಡ್ನವಿಸ್ ಅವರಿಗೆ ಆ ಉನ್ನತ ಸ್ಥಾನ ಸಿಗುವುದನ್ನು ಅವರು ಒಪ್ಪಿಕೊಳ್ಳುವರೇ? ಇದು ಅಸಂಭವ ಎನ್ನಬಹುದು. ಇದು ಪ್ರತಿಯಾಗಿ ಸಂಘ ಮತ್ತು ಬಿಜೆಪಿಯ ನಡುವೆ ಸಂಘರ್ಷದ ಬೀಜಗಳನ್ನು ಬಿತ್ತಬಹುದು.

ಒಟ್ಟಾರೆಯಾಗಿ, ಫಡ್ನವಿಸ್ ಅವರ ರಾಷ್ಟ್ರೀಯ ರಾಜಕಾರಣದ ಪ್ರವೇಶವು ಭಾರತೀಯ ರಾಜಕಾರಣದಲ್ಲಿ ಹಿಂದುತ್ವದ ಪ್ರಭಾವದ ಭವಿಷ್ಯವನ್ನು ಗಮನಾರ್ಹವಾಗಿ ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಪ್ರಶ್ನೆಯೆಂದರೆ: ಆರ್ಎಸ್ಎಸ್ ಆ ಜೂಜನ್ನು ಆಡುತ್ತದೆಯೇ?

ಒಂದು ವೇಳೆ ಮೋದಿ ನಂತರ ಫಡ್ನವಿಸ್ ಪ್ರಧಾನಿಯಾದರೆ, ಭಾರತದ ಜಾತ್ಯತೀತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರಯತ್ನಗಳ ಗತಿ ಏನಾಗಬಹುದು?

ಇದರ ಉತ್ತರವು ಅನೇಕರು ನಿರೀಕ್ಷಿಸುವುದಕ್ಕಿಂತ ಹೆಚ್ಚು ಕಳವಳಕಾರಿಯಾಗಿಯೂ ಇರಬಹುದು. ಏಕೆಂದರೆ ಫಡ್ನವಿಸ್ ಕೇವಲ ರಾಜಕೀಯ ನಿರ್ವಹಣೆಯಲ್ಲಿ ಮಾತ್ರವಲ್ಲದೆ, ಆಡಳಿತದಲ್ಲೂ ಸಮರ್ಥರು ಎಂದು ಗುರುತಿಸಿಕೊಂಡಿದ್ದಾರೆ. ಅವರು ಬಿಜೆಪಿಯ ಇತರ ಅನೇಕ ನಾಯಕರಿಗಿಂತ ಅರ್ಥ ವ್ಯವಸ್ಥೆಯನ್ನು ಕೂಡ ಸಮರ್ಥವಾಗಿ ಕರಗತ ಮಾಡಿಕೊಂಡಿದ್ದಾರೆ ಮತ್ತು ಮೋದಿ ಆಡಳಿತದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಿನ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯ ಅವರಿಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಒಂದು ವೇಳೆ ತೀವ್ರ ಹಿಂದುತ್ವದ ಧೋರಣೆಯು ಸುಧಾರಿತ ಆಡಳಿತದೊಂದಿಗೆ ಮೇಳೈಸಿದರೆ, ಅಂತಹ ನಾಯಕತ್ವವನ್ನು ಪದಚ್ಯುತಗೊಳಿಸುವುದು ವಿರೋಧ ಪಕ್ಷಗಳಿಗೆ ಅತ್ಯಂತ ಕಷ್ಟದ ಕೆಲಸವಾಗಬಹುದು. ಹೀಗಾಗಿ, ಪ್ರಧಾನಿಯಾಗಿ ಫಡ್ನವಿಸ್ ಅವರು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮರುಸ್ಥಾಪನೆಗೆ ಮೋದಿಗಿಂತಲೂ ಹೆಚ್ಚಿನ ಸವಾಲನ್ನು ಒಡ್ಡಬಹುದು.

ಕ್ಯಾಪ್: ನಾಗಪುರದ ಸ್ಥಳೀಯ ಶಾಸಕ ದೇವೇಂದ್ರ ಫಡ್ನವಿಪ್ ಅವರು ಮಹಾರಾಷ್ಟ್ರದ ಬಿಜೆಪಿ ರಾಜಕೀಯದ ಮುಖ್ಯ ಭೂಮಿಕೆಯಲ್ಲಿ ಮಹತ್ವದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಹನ್ನೊಂದು ವರ್ಷಗಳ ಅವಧಿಯಲ್ಲಿ ಎಂಬುದು ಗಮನಾರ್ಹ.

Next Story