P John J Kennedy

ಕರ್ನಾಟಕದಲ್ಲಿ AI ಕ್ರಾಂತಿಗೆ ಸಿದ್ಧತೆ: ಭಾಷಾ ಕಲಿಕೆಗೆ ಬೀಳಲಿದೆಯೇ ಕತ್ತರಿ?


ಕರ್ನಾಟಕದಲ್ಲಿ AI ಕ್ರಾಂತಿಗೆ ಸಿದ್ಧತೆ: ಭಾಷಾ ಕಲಿಕೆಗೆ ಬೀಳಲಿದೆಯೇ ಕತ್ತರಿ?
x
ಭಾರತದಲ್ಲಿ ಭಾಷಾ ಶಿಕ್ಷಣ ಎಂಬುದು ಬಹಳ ಹಿಂದಿನಿಂದಲೂ ಸಂಕೀರ್ಣ ಸಂಗತಿಯಾಗಿ ಮುಂದುವರಿದಿದೆ. ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದರೆ ಅದು ಟೀಕೆಗಳಿಂದ ಅತೀತವಾಗಿದೆ ಎಂದೇನೂ ಅರ್ಥವಲ್ಲ.
Click the Play button to hear this message in audio format

ವಿಮರ್ಶಾತ್ಮಕ ಓದು, ತಾರ್ಕಿಕ ಚಿಂತನೆಯ ಕಡೆಗೆ ಗಮನ ನೀಡದೇ ಕೇವಲ ತಂತ್ರಜ್ಞಾನವನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಿಕ್ಷಣದ ಒಂದು ಭಾಗವನ್ನು ಮಾತ್ರ ಒದಗಿಸುತ್ತದೆ.

ಒಂಭತ್ತು ಮತ್ತು ಹತ್ತನೇ ತರಗತಿಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ವೃತ್ತಿಪರ ವಿಷಯವಾಗಿ ಪರಿಚಯಿಸಲು ಕರ್ನಾಟಕ ಸರ್ಕಾರಕ್ಕೆ ಸೂಕ್ತ ಕಾರಣವಿರುವಂತೆ ಕಾಣುತ್ತಿದೆ. ಕೃತಕ ಬುದ್ಧಿಮತ್ತೆ ನಮ್ಮ ಉನ್ನತ ಶಿಕ್ಷಣ, ಉದ್ಯೋಗ ಮತ್ತು ದೈನಂದಿನ ಜೀವನಕ್ಕೆ ಬದಲಾವಣೆಯ ಸ್ಪರ್ಶ ನೀಡುತ್ತಿದೆ ಮತ್ತು ಶಾಲಾ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವ ಈ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

2026 ರಿಂದ 27ರ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿ (ಎನ್ಎಸ್ಕ್ಯೂಎಫ್)ನ ಅಡಿಯಲ್ಲಿ 1642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಪರಿಚಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೂರನೇ ಭಾಷೆಯ ಬದಲಿಗೆ ಎನ್ಎಸ್ಕ್ಯೂಎಫ್ ವೃತ್ತಿಪರ ಆಯ್ಕೆಯನ್ನು ನೀಡುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಭಾಷೆಯ ಬದಲು ಎಐಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದ್ದರಿಂದ ಇಲ್ಲಿ ಉದ್ಭವವಾಗುವ ಪ್ರಶ್ನೆ ಎಂದರೆ ವಿದ್ಯಾರ್ಥಿಗಳಿಗೆ ಎಐ ಬೇಕೇ ಎಂಬುದಲ್ಲ ಬದಲಿಗೆ ಎಐ ಕಲಿಯಲು ಅವರು ಒಂದು ಭಾಷೆಯನ್ನು ಕೈಬಿಡಬೇಕೇ ಎಂಬುದು.

ಸೆಪ್ಟೆಂಬರ್ 21ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಷಾ ಶಿಕ್ಷಕರು ಪ್ರತಿಭಟನೆ ನಡೆಸಿದರು. ಅವರು ಎಐ ಶಿಕ್ಷಣಕ್ಕೆ ವಿರೋಧವೇನೂ ಇಲ್ಲ. ಆದರೆ ಅದರಿಂದ ಮೂರನೇ ಭಾಷೆಯ ಬದಲಿಗೆ ಬರುತ್ತಿರುವುದು ಸರಿಯಲ್ಲ ಎಂಬ ವಾದವನ್ನು ಮುಂದಿಡುತ್ತಾರೆ.

ಉದ್ಯೋಗ ಮತ್ತು ಉದ್ಯೋಗಾರ್ಹತೆಗೆ ಮೀರಿದ ಸಂಗತಿ

ಈ ಎರಡೂ ವಿಷಯಗಳನ್ನು ಯಾಕೆ ಪರಸ್ಪರ ಪೈಪೋಟಿಗೆ ಒಡ್ಡಲಾಗಿದೆ ಎಂಬುದು ಸಹಜ ಪ್ರಶ್ನೆ. ಇವೆರಡೂ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ. ಕೃತಕ ಬುದ್ಧಿಮತ್ತೆ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಕೌಶಲಗಳನ್ನು ಕಲ್ಪಿಸುತ್ತದೆ. ಭಾಷೆಯು ಸಂವಹನ, ಓದು, ಬರವಣೆಗೆಯನ್ನು ಅಭಿವೃದ್ಧಿಪಡಿಸುತ್ತದೆ ಮಾತ್ರವಲ್ಲದೆ ಜನರು, ವಿಚಾರಗಳು ಮತ್ತು ಸಂಸ್ಕೃತಿಗಳ ಜೊತೆಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಒಂದನ್ನು ಬಿಟ್ಟು ಮತ್ತೊಂದನ್ನು ಸ್ಥಾನ ಪಲ್ಲಟ ಮಾಡಲು ಯಾವುದೇ ಸ್ಪಷ್ಟ ಶೈಕ್ಷಣಿಕ ಕಾರಣ ಕಾಣುತ್ತಿಲ್ಲ.

ಕೃತಕ ಬುದ್ಧಿಮತ್ತೆಯ ಸಾಕ್ಷರತೆಯು ಎಐನಲ್ಲಿ ನೀಡುವ ವೃತ್ತಿಪರ ತರಬೇತಿಗಿಂತಲೂ ತುಂಬ ಭಿನ್ನವಾಗಿದೆ. ಎಐ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ, ಅವು ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಮತ್ತು ಅವುಗಳ ಫಲಿತಾಂಶಗಳನ್ನು ಹೇಗೆ ಮೌಲ್ಯಮಾಪನ ಮಾಡಬೇಕು ಎಂಬುದರ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಮೂಲಭೂತ ಜ್ಞಾನದ ಅಗತ್ಯವಿದೆ. ಅವರು ಗೌಪ್ಯತೆ, ಪೂರ್ವಗ್ರಹ ಮತ್ತು ಎಐ ಉತ್ಪಾದಿತ ವಿಚಾರದ ವಿಶ್ವಾಸಾರ್ಹತೆಯ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಇದು ವಿದ್ಯಾರ್ಥಿಗಳನ್ನು ನಿರ್ದಿಷ್ಟ ವೃತ್ತಿಗೆ ಸಿದ್ಧಪಡಿಸುವುದಕ್ಕಿಂತ ಭಿನ್ನವಾಗಿದೆ. ಕರ್ನಾಟಕವು ನಿಜಕ್ಕೂ ಯಾವ ರೀತಿಯ ಎಐ ಶಿಕ್ಷಣವನ್ನು ನೀಡಲು ಬಯಸಿದೆ ಮತ್ತು ಅದಕ್ಕೆ ಭಾಷೆಯು ಆಕ್ರಮಿಸಿಕೊಂಡಿರುವ ಜಾಗವೇ ಯಾಕೆ ಬೇಕು ಎಂಬುದು ಪ್ರಶ್ನೆಯಾಗಿದೆ.

ಈ ಪ್ರಶ್ನೆಯ ಹಿಂದೆ ಅಡಕವಾಗಿರುವುದು ಶಾಲಾ ಶಿಕ್ಷಣದ ಉದ್ದೇಶಕ್ಕೆ ಸಂಬಂಧಿಸಿದ ವಿಚಾರ. ಶಾಲಾ ಪಠ್ಯ ವಿಷಯಗಳು ಕಾರ್ಮಿಕ ಮಾರುಕಟ್ಟೆಯಲ್ಲಿ ತಮ್ಮ ಉಪಯುಕ್ತತೆ ಎಷ್ಟು ಎಂಬುದನ್ನು ಸಾಬೀತುಪಡಿಸುವ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಉದ್ಯೋಗದ ಅವಕಾಶಗಳ ಬಗ್ಗೆ ನಿರೀಕ್ಷೆಯನ್ನು ಹೊಂದಿರುತ್ತಾರೆ. ಬದಲಾಗುತ್ತಿರುವ ಆರ್ಥಿಕತೆಗೆ ತಕ್ಕಂತೆ ಯುವಕರು ಸೂಕ್ತ ಕೌಶಲಗಳನ್ನು ಹೊಂದಬೇಕು ಎಂಬುದು ಸರ್ಕಾರದ ಬಯಕೆ. ಶಾಲೆಗಳು ಇವೆರಡೂ ಕಳಕಳಿಗಳನ್ನು ಕಡೆಗಣಿಸಿ ಮುಂದೆ ಸಾಗಲು ಸಾಧ್ಯವಿಲ್ಲ. ಹಾಗಿದ್ದೂ ಉದ್ಯೋಗದಾತರು ಕೂಡ ಉಪಯುಕ್ತ ಕೌಶಲಗಳನ್ನು ಕಿರಿದಾದ ಅಥವಾ ಸೀಮಿತವಾದ ಅರ್ಥದಲ್ಲಿ ವ್ಯಾಖ್ಯಾನಿಸಲು ಹೋಗುವುದಿಲ್ಲ.

ಬದಲಾಗುತ್ತಿರುವ ಆರ್ಥಿಕತೆಗಾಗಿ ಕೌಶಲಗಳು

ವಿಶ್ವ ಆರ್ಥಿಕ ವೇದಿಕೆಯ 2025ರ ಉದ್ಯೋಗಗಳ ಭವಿಷ್ಯದ ವರದಿಯು, 2030ರ ವೇಳೆಗೆ ಕಾರ್ಮಿಕರ ಮೂಲ ಕೌಶಲ್ಯಗಳ ವಿಚಾರದಲ್ಲಿ ಶೇ. 39ರಷ್ಟು ಬದಲಾವಣೆ ಉಂಟಾಗಲಿದೆ ಎಂದು ಅಂದಾಜು ಮಾಡಿದೆ. ವಿಶ್ಲೇಷಣಾತ್ಮಕ ಚಿಂತನೆಯು ಅತ್ಯಂತ ಪ್ರಮುಖ ಮೂಲ ಕೌಶಲ್ಯವಾಗಿ ಮುಂದುವರಿದಿದ್ದು, ಹತ್ತರಲ್ಲಿ ಏಳು ಮಂದಿ ಉದ್ಯೋಗದಾತರು ಇದನ್ನು ಅತ್ಯಗತ್ಯವೆಂದು ಪರಿಗಣಿಸಿದ್ದಾರೆ. ಸ್ಥಿತಿಸ್ಥಾಪಕತ್ವ, ನಮ್ಯತೆ, ನಾಯಕತ್ವ ಮತ್ತು ಸಾಮಾಜಿಕ ಪ್ರಭಾವ ಕೂಡ ಉನ್ನತ ಸ್ಥಾನದಲ್ಲಿವೆ. ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯಗಳಲ್ಲಿ ಸೇರಿವೆ, ಆದರೆ ಸೃಜನಶೀಲ ಚಿಂತನೆ, ಜಿಜ್ಞಾಸೆ, ಜೀವಮಾನದ ಕಲಿಕೆ ಮತ್ತು ತಾಂತ್ರಿಕ ಸಾಕ್ಷರತೆಯು ಸಹ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಇದು ನಮಗೆ ಪಠ್ಯಕ್ರಮದ ಬಗ್ಗೆ ಏನು ತಿಳಿಸುತ್ತದೆ? ಅರಿವಿನ ಮತ್ತು ಮಾನವೀಯ ಕೌಶಲ್ಯಗಳೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು. ಅದೇ ವರದಿಯು ಓದು, ಬರವಣಿಗೆ ಮತ್ತು ಗಣಿತವನ್ನು ತುಲನಾತ್ಮಕವಾಗಿ ಸ್ಥಿರವಾದ ಕೌಶಲ್ಯಗಳೆಂದು ಪಟ್ಟಿ ಮಾಡಿದೆ, ಆದರೂ ಅವುಗಳ ಪ್ರಾಮುಖ್ಯತೆಯು ಸ್ವಲ್ಪ ಮಟ್ಟಿಗೆ ತಗ್ಗುವ ನಿರೀಕ್ಷೆಯಿದೆ. ಇದು 2030ರ ವೇಳೆಗೆ ಬೆಳೆಯುವ ನಿರೀಕ್ಷೆಯಿರುವ ಕೌಶಲ್ಯಗಳಲ್ಲಿ ಬಹುಭಾಷಾ ತತ್ವವನ್ನೂ ಪಟ್ಟಿ ಮಾಡಿದೆ.

ಆದ್ದರಿಂದ, ಉದ್ಯೋಗಾರ್ಹತೆಗೆ ಭಾಷಾ ಶಿಕ್ಷಣವು ಯಾವುದೇ ರೀತಿಯಲ್ಲಿ ತಡೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಭಾಷೆಯು ಸಂವಹನಕ್ಕಿರುವ ಕೇವಲ ಒಂದು ಸಾಧನಕ್ಕಿಂತ ಮಿಗಿಲಾದುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಯೋಚನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ವ್ಯವಸ್ಥಿತಗೊಳಿಸಲು ಮತ್ತು ವ್ಯಕ್ತಪಡಿಸಲು ಹಾಗೂ ಜನರೊಂದಿಗೆ ಮತ್ತು ವಿಚಾರಗಳೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ತಂತ್ರಜ್ಞಾನ-ಚಾಲಿತ ಅರ್ಥ ವ್ಯವಸ್ಥೆಯಲ್ಲಿಯೂ ಈ ಸಾಮರ್ಥ್ಯಗಳು ಮುಂದುವರಿಯುತ್ತವೆ.

ಭಾಷಾ ಬೋಧನೆಯ ಸುಧಾರಣೆ

ಭಾರತದಲ್ಲಿ ಭಾಷಾ ಶಿಕ್ಷಣವು ಬಹಳ ಹಿಂದಿನಿಂದಲೂ ವಿವಾದಾಸ್ಪದವಾಗಿದೆ, ಮತ್ತು ಅದನ್ನು ಸಮರ್ಥಿಸುವುದು ಎಂದರೆ ಅದರ ಬೋಧನೆಯು ಟೀಕೆಗಳಿಗೆ ಅತೀತವಾಗಿದೆ ಎಂದೇನೂ ಅಲ್ಲ. ಕಾಲಕಾಲಕ್ಕೆ ಪರಿಶೀಲನೆ ಮತ್ತು ಸುಧಾರಣೆ ಅತ್ಯಗತ್ಯ. ಆದಾಗ್ಯೂ, ಒಂದು ವಿಷಯವನ್ನು ಕೈಬಿಡುವ ಮೊದಲು, ವಿದ್ಯಾರ್ಥಿಗಳು ಭಾಷಾ ತರಗತಿಗಳಲ್ಲಿ ಏನನ್ನು ಕಲಿಯುತ್ತಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು.

ಭಾಷಾ ಸ್ವಾಧೀನ ಮತ್ತು ಪ್ರಜ್ಞಾಪೂರ್ವಕ ಕಲಿಕೆಯ ನಡುವೆ ಸ್ಟೀಫನ್ ಕ್ರಾಶೆನ್ ಅವರು ಕಂಡುಕೊಂಡಿರುವ ವ್ಯತ್ಯಾಸವು, ಶಾಲೆಗಳಲ್ಲಿ ಭಾಷೆಗಳನ್ನು ಹೇಗೆ ಕಲಿಸಲಾಗುತ್ತದೆ ಎಂಬುದರ ಕುರಿತು ಕೂಡ ಪ್ರಶ್ನೆ ಹುಟ್ಟುಹಾಕುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ಪರೀಕ್ಷೆಗಳಿಗಾಗಿ ನಿಯಮಗಳನ್ನು ಕಂಠಪಾಠ ಮಾಡಿದರೆ, ಅವರು ಭಾಷೆಯನ್ನು ಬಳಸುವಲ್ಲಿ ಆತ್ಮವಿಶ್ವಾಸವನ್ನು ಗಳಿಸದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ವಿಷಯವನ್ನು ಕಿತ್ತುಹಾಕುವುದಕ್ಕಿಂತ ಉತ್ತಮ ಬೋಧನಾಶಾಸ್ತ್ರವು ಆ ಸಮಸ್ಯೆಯನ್ನು ಹೆಚ್ಚು ನೇರವಾಗಿ ಪರಿಹರಿಸುವ ಕೆಲಸ ಮಾಡುತ್ತದೆ.

2024ರ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER) ವಿಶಾಲವಾದ ಭಾಷಾ ಸವಾಲಿನ ಕುರಿತು ಇನ್ನಷ್ಟು ಬೆಳಕನ್ನು ಚೆಲ್ಲುತ್ತದೆ. ಭಾರತದಾದ್ಯಂತ ಸರ್ಕಾರಿಶಾಲೆಗಳಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಶೇ. 67.5 ರಷ್ಟು ಮಂದಿ ಮಾತ್ರ ಎರಡನೇ ತರಗತಿ ಮಟ್ಟದ ಪಠ್ಯವನ್ನು ಓದಬಲ್ಲವರಾಗಿದ್ದಾರೆ. ಸಹಜವಾಗಿ, ASERನ ಪರಿಶೀಲನೆಯು ಮೂರನೇ ಭಾಷೆಯನ್ನು ನಿರ್ಣಯಿಸುವುದಿಲ್ಲ, ಆದ್ದರಿಂದ ಈ ಅಂಕಿ ಅಂಶವನ್ನು ಮೂರನೇ ಭಾಷಾ ಕಲಿಕೆಯ ಬಗ್ಗೆ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದಾಗ್ಯೂ, ಇದು ಶಾಲೆಗಳು ಪರಿಹರಿಸಬೇಕಾದ ದುರ್ಬಲ ಭಾಷಾ ಅಡಿಪಾಯವನ್ನು ತೋರಿಸುತ್ತದೆ. ಮೂಲ ಓದು ಸವಾಲಾಗಿ ಉಳಿದಿದ್ದರೆ, ಭಾಷಾ ಅವಕಾಶಗಳನ್ನು ಮತ್ತಷ್ಟು ಕಡಿಮೆ ಮಾಡುವುದು ಸರಿಯಾದ ಪ್ರತಿಕ್ರಿಯೆ ಎಂದು ಭಾವಿಸಬಹುದೇ?

ಭಾಷಾ ಆಯ್ಕೆಗಳ ಸಮತೋಲನ

ಹೊಸ ಉಪಕ್ರಮವು ಸಿಬ್ಬಂದಿಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸರ್ಕಾರವು ಭಾಗವಹಿಸುವ ಶಾಲೆಗಳಿಗೆ 2026-27ನೇ ಸಾಲಿಗೆ ತಿಂಗಳಿಗೆ 20,000 ಗೌರವಧನದೊಂದಿಗೆ ಎಐ ಅತಿಥಿ ಶಿಕ್ಷಕರನ್ನು ನೇಮಕ ಮಾಡುವಂತೆ ನಿರ್ದೇಶನ ನೀಡಿದೆ ಮತ್ತು ಈಗ ಇರುವ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದೆ. ಅದೇ ಸಮಯದಲ್ಲಿ, ಭಾಷಾ ಶಿಕ್ಷಕರು ಆಗಸ್ಟ್ 10ರ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಿಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳು ಹಿಂದಿ, ಸಂಸ್ಕೃತ, ಉರ್ದು, ತೆಲುಗು, ತಮಿಳು, ಮರಾಠಿ, ಕೊಂಕಣಿ, ತುಳು, ಮಲಯಾಳಂ ಮತ್ತು ಅರೇಬಿಕ್ ಭಾಷೆಗಳನ್ನು ಕೂಡ ಕಲಿಸುತ್ತಿದ್ದರೂ, ಭಾಷಾ ಶಿಕ್ಷಕರ ನೇಮಕಾತಿಯು ಕನ್ನಡ ಮತ್ತು ಇಂಗ್ಲಿಷ್ ಮೇಲೆ ಮಾತ್ರ ಹೆಚ್ಚು ಗಮನ ಹರಿಸುತ್ತಿರುವಂತೆ ತೋರುತ್ತಿದೆ ಎಂದು ಅವರು ಹೇಳುತ್ತಾರೆ. ನೇಮಕಾತಿಯು ಈ ಭಾಷೆಗಳನ್ನು ಒಳಗೊಳ್ಳದಿದ್ದರೆ, ವಿದ್ಯಾರ್ಥಿಗಳು ಕ್ರಮೇಣ ಕಡಿಮೆ ಆಯ್ಕೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ಕರ್ನಾಟಕವು ಎಐ ಮತ್ತು ಭಾಷಾ ಶಿಕ್ಷಣ ಎರಡನ್ನೂ ಸುಧಾರಿಸಬೇಕು ಮತ್ತು ಸಾಕ್ಷ್ಯ, ಶೈಕ್ಷಣಿಕ ಉದ್ದೇಶ ಹಾಗೂ ಅನುಷ್ಠಾನದ ಸಾಮರ್ಥ್ಯದ ಆಧಾರದ ಮೇಲೆ ಪ್ರತಿ ವಿಷಯಕ್ಕೆ ಎಷ್ಟು ಪಠ್ಯಕ್ರಮದ ಸಮಯ ಬೇಕು ಎಂಬುದನ್ನು ನಿರ್ಧರಿಸಬೇಕು.

ಹಾಗಾದರೆ, ಸರ್ಕಾರ ಈಗ ಏನು ಮಾಡಬೇಕು? ಮೊದಲನೆಯದಾಗಿ, ಇದು ಕೃತಕ ಬುದ್ಧಿಮತ್ತೆ ಕಾರ್ಯಕ್ರಮದ ಶೈಕ್ಷಣಿಕ ಉದ್ದೇಶವನ್ನು ಸ್ಪಷ್ಟಪಡಿಸಬೇಕು; ಅದರ ಗುರಿಯು ಮೂಲ ಎಐ ಸಾಕ್ಷರತೆ ಎಂಬುದಾಗಿದ್ದರೆ, ಪಠ್ಯಕ್ರಮವು ಪೂರ್ಣ ವೃತ್ತಿಪರ ವಿಷಯದಷ್ಟೇ ಜಾಗವನ್ನು ಆಕ್ರಮಿಸಿಕೊಳ್ಳಬೇಕಾಗಿಲ್ಲ. ಗುರಿಯು ವೃತ್ತಿಪರ ತರಬೇತಿಯಾಗಿದ್ದರೆ, ಮೂರನೇ ಭಾಷೆಯ ಆಯ್ಕೆಯನ್ನು ಏಕೆ ತೆಗೆದುಹಾಕಬೇಕು ಎಂಬುದರ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಎರಡನೆಯದಾಗಿ, ಭಾಷಾ ಆಯ್ಕೆಗಳನ್ನು ಕಡಿಮೆ ಮಾಡದೆ AI ಅನ್ನು ಐಚ್ಛಿಕ ವಿಷಯವಾಗಿ ಅಥವಾ ಹೆಚ್ಚುವರಿ ಪಠ್ಯಕ್ರಮದ ಸಮಯದ ಮೂಲಕ ನೀಡಬಹುದೇ ಎಂದು ಪರಿಶೀಲಿಸಬೇಕು. ಮೂರನೆಯದಾಗಿ, ಇದು ಭಾಷಾ ಬೋಧನೆಯನ್ನು ಸುಧಾರಿಸಬೇಕು ಮತ್ತು ಗುರುತಿಸಲಾದ ಭಾಷೆಗಳಿಗೆ ವಿದ್ಯಾರ್ಥಿಗಳ ನೈಜ ಬೇಡಿಕೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿಯನ್ನು ಮಾಡಬೇಕು.

ತಂತ್ರಜ್ಞಾನ ಮತ್ತು ಭಾಷೆಯ ಸಾಂಗತ್ಯ

ಶಿಕ್ಷಕರು ಲಭ್ಯವಿಲ್ಲ ಎಂಬ ಕಾರಣಕ್ಕೆ ಒಂದು ಭಾಷೆಯು ಶಾಲೆಯಿಂದ ಕಣ್ಮರೆಯಾಗಿ ಬಿಡಬಹುದು. ಅಂತಿಮವಾಗಿ, ಸರ್ಕಾರವು ಕೃತಕ ಬುದ್ಧಿಮತ್ತೆ ಶಿಕ್ಷಣದ ಮೊದಲ ವರ್ಷವನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಬೇಕು. ಈ ಮೌಲ್ಯಮಾಪನವು AI ಕಲಿಕೆ, ಬೋಧನಾ ಗುಣಮಟ್ಟ, ಭಾಷಾ ಪಾಲ್ಗೊಳ್ಳುವಿಕೆ ಮತ್ತು ಕಲಿಕಾ ಫಲಿತಾಂಶಗಳನ್ನು ಅಳೆಯಬೇಕು. ಈ ಸಂಶೋಧನೆಗಳು ಕಾರ್ಯಕ್ರಮವನ್ನು ವಿಸ್ತರಿಸುವ ಯಾವುದೇ ನಿರ್ಧಾರಕ್ಕೆ ಮಾರ್ಗದರ್ಶನ ನೀಡಬೇಕು.

ಇಂದಿನ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ಶಿಕ್ಷಣ ಅವಶ್ಯಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಭಾಷಾ ಶಿಕ್ಷಣವೂ ಅತ್ಯಗತ್ಯ. ತಂತ್ರಜ್ಞಾನವನ್ನು ಕಲಿಸುವ ಆದರೆ ಸಂವಹನ, ವಿಮರ್ಶಾತ್ಮಕ ಓದು, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳುವಳಿಕೆಗೆ ಹೆಚ್ಚು ಗಮನಹರಿಸದೇ ಇರುವ ಶಾಲಾ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಿಕ್ಷಣದ ಒಂದು ಭಾಗವನ್ನು ಮಾತ್ರ ಒದಗಿಸುತ್ತದೆ.

ಉದ್ಯೋಗಾರ್ಹತೆಯು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ, ಆದರೆ ಪಠ್ಯ ವಿಷಯಗಳು ಅಸ್ತಿತ್ವದಲ್ಲಿರಲು ಅದೇ ಏಕೈಕ ಮಾನದಂಡವಾಗಲು ಸಾಧ್ಯವಿಲ್ಲ. ಕರ್ನಾಟಕವು AI ಮತ್ತು ಭಾಷಾ ಶಿಕ್ಷಣ ಎರಡನ್ನೂ ಸುಧಾರಿಸಬೇಕು ಮತ್ತು ಸಾಕ್ಷ್ಯ, ಶೈಕ್ಷಣಿಕ ಉದ್ದೇಶ ಹಾಗೂ ಅನುಷ್ಠಾನದ ಸಾಮರ್ಥ್ಯದ ಆಧಾರದ ಮೇಲೆ ಪ್ರತಿ ವಿಷಯಕ್ಕೆ ಎಷ್ಟು ಪಠ್ಯಕ್ರಮದ ಸಮಯ ಬೇಕು ಎಂಬುದನ್ನು ನಿರ್ಧರಿಸಬೇಕು. ತಾಂತ್ರಿಕ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಅವರ ಕಲಿಕೆಯ ಅವಕಾಶಗಳನ್ನು ವಿಸ್ತರಿಸಬೇಕೇ ಹೊರತು, ಒಂದು ರೀತಿಯ ಕಲಿಕೆಯನ್ನು ಬಿಟ್ಟುಕೊಟ್ಟು ಮತ್ತೊಂದನ್ನು ಕಲಿಯುವಂತೆ ಒತ್ತಾಯ ಮಾಡಬಾರದು.ಭಾರತದಲ್ಲಿ ಭಾಷಾ ಶಿಕ್ಷಣ ಎಂಬುದು ಬಹಳ ಹಿಂದಿನಿಂದಲೂ ಸಂಕೀರ್ಣ ಸಂಗತಿಯಾಗಿ ಮುಂದುವರಿದಿದೆ. ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದರೆ ಅದು ಟೀಕೆಗಳಿಂದ ಅತೀತವಾಗಿದೆ ಎಂದೇನೂ ಅರ್ಥವಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story