KS Dakshina Murthy

ಇರಾನ್-ಅಮೆರಿಕ ಶಾಂತಿ ಒಪ್ಪಂದ ತಲೆಕೆಳಗು ಮಾಡುವ ಏಕೈಕ ಶಕ್ತಿ ಎಂದರೆ ಇಸ್ರೇಲ್‌


ಇರಾನ್-ಅಮೆರಿಕ ಶಾಂತಿ ಒಪ್ಪಂದ ತಲೆಕೆಳಗು ಮಾಡುವ ಏಕೈಕ ಶಕ್ತಿ ಎಂದರೆ ಇಸ್ರೇಲ್‌
x
ಇರಾನ್‌ ಮತ್ತು ಅಮೆರಿಕ ಮಾಡಿಕೊಳ್ಳಲಿರುವ ಶಾಂತಿ ಒಪ್ಪಂದದ ಯಶಸ್ಸಿನ ಹಾದಿಯಲ್ಲಿ ಬಹಳ ದೊಡ್ಡ ಕಂಟಕವೆಂದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು. ಈ ಕುದುರಿಬಿಟ್ಟರೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಅವರನ್ನು ಕಾಡುತ್ತಿರುವ ಭಯ.
Click the Play button to hear this message in audio format

ಶಾಂತಿ ಮಾತುಕತೆಗಳಿಂದ ದೂರ ಇಡಲಾಗಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಈ ಒಪ್ಪಂದದಿಂದ ತಮ್ಮ ದೇಶ ಅಥವಾ ತಮಗಾಗಲಿ ಯಾವುದೇ ಲಾಭವನ್ನು ಕಾಣುತ್ತಿಲ್ಲ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ ಜೊತೆಗಿನ ಯುದ್ಧ ಇನ್ನೇನು ಕೊನೆಗೊಳ್ಳಲಿದೆ ಎಂದು ಅದೆಷ್ಟು ಬಾರಿ ಹೇಳಿದ್ದಾರೆಂದರೆ ಮೊನ್ನೆ ಮೊನ್ನೆ ನೀಡಿದ ಹೇಳಿಕೆಯನ್ನು ಕೂಡ ಜನ ಸಂಶಯದ ಕಣ್ಣಿನಿಂದ ನೋಡುವಂತಾಗಿದೆ. ಹಾಗಿದ್ದೂ ಹಿಂದಿನ ಒಪ್ಪಂದದ ಹಕ್ಕುಗಳಿಗೆ ಹೋಲಿಸಿದರೆ ಇರಾನ್‌ ನಾಯಕತ್ವವು ಟ್ರಂಪ್‌ ಅವರೊಂದಿಗೆ ಸ್ಥೂಲವಾಗಿ ಒಪ್ಪಿಕೊಂಡಿರುವ ಕಾರಣ ಈ ಒಪ್ಪಂದ ಉಳಿಯುವ ಸಾಧ್ಯತೆ ಕಾಣುತ್ತಿದೆ. ಆದಾಗ್ಯೂ ಈ ಒಪ್ಪಂದವು ಒಂದು ಎಚ್ಚರಿಕೆಯನ್ನೂ ತಳಕು ಹಾಕಿಕೊಂಡಿದೆ; ಅದೆಂದರೆ ಇಸ್ರೇಲ್‌ ಈ ಒಪ್ಪಂದವನ್ನು ಯಾವುದೇ ಹಂತದಲ್ಲಿ ಹಾಳುಗೆಡಹುವ ಪ್ರಬಲ ʼಅಜ್ಞಾತʼ ಅಂಶವಾಗಿದೆ.

ಶತಾಯಗತಾಯ ಇಂತಹುದೊಂದು ಒಪ್ಪಂದಕ್ಕೆ ಟ್ರಂಪ್‌ ಬರಲೇಬೇಕಾಗಿತ್ತು. ಕಾರಣವಿಷ್ಟೇ, ಇತ್ತೀಚಿನ ದಿನಗಳಲ್ಲಿ ಅವರ ಜನಪ್ರಿಯತೆ ಸಂಪೂರ್ಣವಾಗಿ ನೆಲಕಚ್ಚಿಹೋಗಿದೆ. ಜೊತೆಗೆ ಅಮೆರಿಕದ ಮಿತ್ರರಾಷ್ಟ್ರಗಳು ಹಾಗೂ ರಿಪಬ್ಲಿಕನ್‌ ಪಕ್ಷದ ಒಳಗಿನಿಂದ ಬಂದ ಒತ್ತಡ ಅವರನ್ನು ಹೈರಾಣಾಗುವಂತೆ ಮಾಡಿದೆ. ಈ ಒಪ್ಪಂದ ಕುದುರಿರುವುದರಿಂದ ಇಸ್ರೇಲ್‌ನೊಂದಿಗೆ ಅಮೆರಿಕ ಹೊಂದಿರುವ ದೀರ್ಘಕಾಲದ ನಂಬಿಕಾರ್ಹ ಸಂಬಂಧಕ್ಕೆ ಧಕ್ಕೆ ಬರುವ ಅಪಾಯ ಹೆಚ್ಚಿದ್ದರೂ ಟ್ರಂಪ್‌ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಇರಾನ್‌ಗೆ ಆಗುವ ಲಾಭವೇನು?

ಅಮೆರಿಕ ಮತ್ತು ಇರಾನ್‌ ನಡುವೆ ಸಮ್ಮತಿಸಲಾದ ಒಡಂಬಡಿಕೆಯಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲವಾದರೂ ಒಪ್ಪಂದದ ಅತ್ಯಂತ ಪ್ರಮುಖ ವಿಷಯವೆಂದರೆ ಹಾರ್ಮುಜ್‌ ಜಲಸಂಧಿಯನ್ನು ಯುದ್ಧಪೂರ್ವ ಸ್ಥಿತಿಗೆ ತಂದು ನಿಲ್ಲಿಸುವುದು ಎಂದು ವರದಿಗಳು ಹೇಳುತ್ತವೆ. ಇದರಿಂದ ಜಗತ್ತಿನಾದ್ಯಂತ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಯುರೋಪಿನಲ್ಲಿರುವ ತನ್ನ ಸ್ನೇಹಿತರಿಂದ ತೀವ್ರತರದ ಟೀಕಿಗೆ ಗುರಿಯಾಗಿರುವ ಟ್ರಂಪ್‌ ಈಗ ಅಂತಹ ಹೊರೆಯಿಂದ ಮುಕ್ತರಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇರಾನ್‌ಗೆ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ವಿಧಿಸಿದ್ದ ಸುಂಕದ ವ್ಯವಸ್ಥೆಯನ್ನು ತೆಗೆದುಹಾಕುವುದಕ್ಕೆ ಬದಲಾಗಿ ಪರಿಹಾರದ ಅಗತ್ಯವಿತ್ತು. ಜೂನ್ 19 ರಂದು ಜಿನೀವಾದಲ್ಲಿ ಅಧಿಕೃತವಾಗಿ ಸಹಿ ಹಾಕಲಿರುವ ಈ ಒಪ್ಪಂದವು, ವಿಶ್ವಾದ್ಯಂತ ಇರಾನ್‌ನ ಬ್ಯಾಂಕ್ ಖಾತೆಗಳನ್ನು ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಇದನ್ನು ಸರಿದೂಗಿಸುವ ಕೆಲಸ ಮಾಡುತ್ತದೆ. ಇರಾನ್‌ಗೆ ನೀಡಲಾದ ಮತ್ತೊಂದು ಆಮಿಷವೆಂದರೆ, ಅಮೆರಿಕ ಖಾತರಿಪಡಿಸುವ ದೇಶದ ಅಭಿವೃದ್ಧಿ ಮತ್ತು ಪುನರ್ನಿರ್ಮಾಣದ ಯೋಜನೆ.

ಇಲ್ಲಿಯ ವರೆಗೂ ಅತಿದೊಡ್ಡ ಅಡಚಣೆ ಎಂದು ಪರಿಗಣಿಸಲಾಗಿದ್ದ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಬಲವಂತವಾಗಿ ಮುಂದಿನ ಹಂತಕ್ಕೆ ತಳ್ಳಲಾಗಿದೆ. ಜಿನೀವಾದಲ್ಲಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ, ಇದು 60 ದಿನಗಳ ಕಾಲ ನಡೆಯಲಿರುವ ಹೆಚ್ಚು ತೀವ್ರವಾದ ಮಾತುಕತೆಗಳಿಗೆ ದಾರಿ ಮಾಡಿಕೊಡುತ್ತದೆ. ಆ ಸಮಯದಲ್ಲಿ ಇರಾನ್‌ನಲ್ಲಿ ಸಂಗ್ರಹವಾಗಿರುವ ಸಮೃದ್ಧ ಯುರೇನಿಯಂ ಮತ್ತು ಒಟ್ಟಾರೆ ಪರಮಾಣು ಯೋಜನೆಯ ಬಗ್ಗೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಮಾತುಕತೆಗಳ ಪ್ರಗತಿಯನ್ನು ಅವಲಂಬಿಸಿ, ದಶಕಗಳಿಂದ ಇರಾನ್ ಮೇಲೆ ವಿಧಿಸಲಾದ ನಾನಾ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆದುಹಾಕಲಾಗುತ್ತದೆ.

ಗಮನಿಸಬೇಕಾದ ಪ್ರಮುಖ ಸಂಗತಿ

ಪ್ರಸ್ತುತ ಶಾಂತಿ ಒಪ್ಪಂದವು ಅತ್ಯಂತ ಸಂಕೀರ್ಣವಾಗಿರುವ ಸಮಸ್ಯೆಗಳ ಸಾಗರದಲ್ಲಿ ಕೇವಲ ಮೇಲ್ನೋಟದ ಕ್ರಮ ಎಂದು ಹೇಳಬಹುದಷ್ಟೇ. ಇದು ಯಶಸ್ವಿಯಾಗಬೇಕಾದರೆ ಗಂಭೀರವಾದ ಮಾತುಕತೆಗಳ ಅಗತ್ಯವಿದೆ. 2015ರಲ್ಲಿ ಬರಾಕ್ ಒಬಾಮಾ ನೇತೃತ್ವದ ರಾಷ್ಟ್ರಗಳ ಒಕ್ಕೂಟದೊಂದಿಗೆ ಇರಾನ್ ಸಹಿ ಹಾಕಿದ ಪರಮಾಣು ಒಪ್ಪಂದವು ಕಾರ್ಯರೂಪಕ್ಕೆ ಬರಲು ಮೂರು ವರ್ಷಗಳ ನಿರಂತರ (24/7) ಮಾತುಕತೆಗಳ ಅಗತ್ಯವಿತ್ತು. ಆದರೆ ಟ್ರಂಪ್ ಅವರು 2018ರಲ್ಲಿ ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಆ ಒಪ್ಪಂದವನ್ನು ರದ್ದುಗೊಳಿಸಿದ್ದು ಈಗ ಇತಿಹಾಸ.

2015ರ ಪರಮಾಣು ಒಪ್ಪಂದವನ್ನು ತೀವ್ರವಾಗಿ ಟೀಕಿಸಿದ್ದ ಟ್ರಂಪ್, ಈಗ ತಮ್ಮ ಪೂರ್ವವರ್ತಿಯ ಒಪ್ಪಂದಕ್ಕಿಂತ ಭಿನ್ನವಾಗಿ ಕಾಣುವಂತಹ ಹೊಸ ಒಪ್ಪಂದವನ್ನು ಹೇಗಾದರೂ ಮಾಡಿಕೊಳ್ಳುವಷ್ಟು ಹತಾಶರಾಗಿದ್ದಾರೆ. ಈ ನಿಬಂಧನೆಯು ಮಾತುಕತೆಗಾರರಿಗೆ ಸವಾಲನ್ನು ಹಲವು ಪಟ್ಟು ಹೆಚ್ಚಿಸುತ್ತದೆ, ಏಕೆಂದರೆ ಇರಾನ್ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಅಥವಾ ತನ್ನನ್ನು ದುರ್ಬಲವಾಗಿ ತೋರಿಸುವ ಯಾವುದೇ ಷರತ್ತಿಗೆ ಒಪ್ಪುವುದಿಲ್ಲ. ಯಾವುದೇ ಕಾರಣಕ್ಕೂ ಬಲವಂತವಾಗಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಲು ಇರಾನ್‌ ಬಿಡುವುದಿಲ್ಲ ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಪದೇ ಪದೇ ಹೇಳಿದ್ದಾರೆ.

ಇಲ್ಲಿನ ಪ್ರಮುಖ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ವಿಷಯವೆಂದರೆ ನಿಶ್ಚಿತವಾಗಿ ಇಸ್ರೇಲ್. ಟ್ರಂಪ್ ಅವರು ಇಲ್ಲಿಯವರೆಗಿನ ಎಲ್ಲಾ ಮಾತುಕತೆಗಳಿಂದ ಇಸ್ರೇಲ್‌ನ್ನು ಸಂಪೂರ್ಣವಾಗಿ ಹೊರಗಿಟ್ಟಿದ್ದಾರೆ.

ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವುದೇ ತನ್ನ ಜೀವಮಾನದ ಆಶಯ ಎಂದು ಭಾವಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ಧವನ್ನು ಮುಂದುವರಿಸುವುದೇ ಸೂಕ್ತ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಯುದ್ಧದ ರೂವಾರಿ ಬೆಂಜಮಿನ್

ವಾಸ್ತವವಾಗಿ, ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವ ಕೆಲವು ವಾರಗಳ ಮೊದಲು, ಟ್ರಂಪ್ ಮತ್ತು ಅವರ ಆಪ್ತ ಸಲಹೆಗಾರರ ತಂಡಕ್ಕೆ ಪವರ್‌ಪಾಯಿಂಟ್ ಪ್ರಸ್ತುತಿಯನ್ನು ನೀಡಿದ್ದು ನೆತನ್ಯಾಹು ಅವರೇ. ಇರಾನ್‌ ಮೇಲೆ ಯುದ್ಧ ಸಾರಿದರೆ, ಇರಾನ್‌ನ ದೇವಪ್ರಭುತ್ವದ ನಾಯಕತ್ವವನ್ನು ಕಿತ್ತೊಗೆಯಲು ಕೆಲವೇ ಕೆಲವು ದಿನಗಳು ಸಾಕು ಎಂದು ಅವರು ಪ್ರತಿಪಾದಿಸಿದ್ದರು. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇರಾನ್‌ನಲ್ಲಿ ವ್ಯಾಪಕ ಸಾರ್ವಜನಿಕ ಪ್ರತಿಭಟನೆಗಳು ನಡೆಯುತ್ತಿದ್ದು, ದಾಳಿ ಮಾಡಲು ಇದು ಸಕಾಲ ಎಂದು ಇಸ್ರೇಲ್‌ನ ಗುಪ್ತಚರ ಸಂಸ್ಥೆ 'ಮೊಸ್ಸಾದ್' ತನಗೆ ಮಾಹಿತಿ ನೀಡಿದೆ ಎಂದು ನೆತನ್ಯಾಹು ಹೇಳಿದ್ದರು.

ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ತನ್ನ ಸಹಾಯಕರು ವ್ಯಕ್ತಪಡಿಸಿದ ಕಳವಳಗಳ ಹೊರತಾಗಿಯೂ, ಟ್ರಂಪ್ ಅವರು ನೆತನ್ಯಾಹು ಅವರ ಮಾತನ್ನು ನಂಬಿದರು. ಆದರೆ, ಜಗತ್ತು ಕಂಡಂತೆ, ಯುದ್ಧವು ಅಂದುಕೊಂಡಂತೆ ನಡೆಯಲಿಲ್ಲ. ಇರಾನ್ ತಾವು ಅನಿರೀಕ್ಷಿತ ರೀತಿಯಲ್ಲಿ ವೀರಾವೇಶದಿಂದ ಹೋರಾಡಿತು. ಇದರ ಪರಿಣಾಮವಾಗಿ, ಇರಾನ್‌ನ ನಾಯಕತ್ವವನ್ನು ಉರುಳಿಸುವ ಮತ್ತು ಅದರ ಪರಮಾಣು ಕಾರ್ಯಕ್ರಮವನ್ನು ತಟಸ್ಥಗೊಳಿಸುವ ತಮ್ಮ ಆರಂಭಿಕ ಗುರಿಗಳನ್ನು ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಹತಾಶರಾಗಿರುವ ನೆತನ್ಯಾಹು, ಅಮೆರಿಕ ಅಧ್ಯಕ್ಷರೊಂದಿಗೆ ನಡೆದ ಕೆಲವು ಬಿಸಿಬಿಸಿ ದೂರವಾಣಿ ಸಂಭಾಷಣೆಗಳ ನಂತರವೂ ಟ್ರಂಪ್ ಅವರನ್ನು ಬಹುತೇಕ ಧಿಕ್ಕರಿಸಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಯುದ್ಧವನ್ನು ಕೊನೆಗೊಳಿಸದೇ ಇರುವುದು ಮಾತ್ರವಲ್ಲದೆ, ದಕ್ಷಿಣ ಲೆಬನಾನ್‌ನ ವಿಶಾಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಯುದ್ಧವನ್ನು ವಿಸ್ತರಿಸುತ್ತಿರುವ ಇಸ್ರೇಲ್‌ನ ಈ ಹಠಮಾರಿ ಧೋರಣೆ, ಅದರ ಬೆಂಬಲಿಗರ ನಡುವೆಯೇ ಭಾರೀ ಅಪ್ರಿಯತೆಗೆ ಪಾತ್ರವಾಗಿದೆ.

ಏಪ್ರಿಲ್‌ನಲ್ಲಿ ಪ್ರಕಟವಾದ 'ಪ್ಯೂ ರಿಸರ್ಚ್' (Pew Research) ವರದಿಯ ಪ್ರಕಾರ, ಅಮೆರಿಕದ ಶೇ. 60 ರಷ್ಟು ವಯಸ್ಕರು ಇಸ್ರೇಲ್ ಕುರಿತು ಪ್ರತಿಕೂಲ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಹಿಂದಿನ ವರ್ಷದ ಶೇ. 53 ಕ್ಕಿಂತ ಹೆಚ್ಚಾಗಿದೆ. ಇದೇ ರೀತಿ, ನೆತನ್ಯಾಹು ಮತ್ತು ಅವರ ವಿದೇಶಾಂಗ ನೀತಿಯ ಮೇಲೆ ನಂಬಿಕೆ ಇಲ್ಲದೇ ಇರುವವರ ಪ್ರಮಾಣವು ಹಿಂದಿನ ವರ್ಷದ ಶೇ. 52ರ ಪ್ರಮಾಣವನ್ನು ಮೀರಿದೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಹುಪಾಲು ಜನರು ನೆತನ್ಯಾಹು ಅವರನ್ನು ಇಷ್ಟಪಡುವುದಿಲ್ಲ. ಇಂತಹ ಸಮೀಕ್ಷೆಗಳು ಸಾಕಷ್ಟು ಒಳನೋಟಗಳನ್ನು ಹೊಂದಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದು ಭವಿಷ್ಯದಲ್ಲಿ ಅಮೆರಿಕ-ಇಸ್ರೇಲ್ ಸಂಬಂಧಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು.

ನೆತನ್ಯಾಹುಗೆ ಯಾವುದೇ ಲಾಭಗಳಿಲ್ಲ

ನೆತನ್ಯಾಹು ಅವರು ಶಾಂತಿ ಒಪ್ಪಂದದ ಯಶಸ್ಸಿಗೆ ಬಹುಶಃ ಅತಿದೊಡ್ಡ ಅಪಾಯ. ಯಾಕೆಂದರೆ, ಇತರ ವಿಷಯಗಳ ಜೊತೆಗೆ, ಈ ಒಪ್ಪಂದವು ಈ ವರ್ಷದ ನಂತರ ನಡೆಯಲಿರುವ ಅವರ ರಾಜಕೀಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅವರ ಬಲಪಂಥೀಯ ಬೆಂಬಲಿಗರಲ್ಲಿ ಬಹುಪಾಲು ಮಂದಿ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸುವುದನ್ನು ಬಯಸುವುದಿಲ್ಲ. ವಾಸ್ತವವಾಗಿ, ಲಿಟಾನಿ ನದಿಯ ದಕ್ಷಿಣಕ್ಕೆ ಈಗಾಗಲೇ ವಶಪಡಿಸಿಕೊಂಡಿರುವ ಭೂಮಿಯನ್ನು ಇಸ್ರೇಲ್ ಶಾಶ್ವತವಾಗಿ ಆಕ್ರಮಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ.

ವಿಷಯಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುವಂತೆ, ಇಸ್ರೇಲ್ ಬೇರೂತ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದ್ದು, ಇದರಿಂದಾಗಿ ಲೆಬನಾನ್‌ನ ರಾಜಧಾನಿಯಲ್ಲಿ ಅಪಾರ ಸಾವುನೋವುಗಳು ಸಂಭವಿಸಿವೆ, ಜನರು ಸಾಮೂಹಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು ವ್ಯಾಪಕ ಹಾನಿ ಸಂಭವಿಸಿದೆ.

ನಿರ್ದಿಷ್ಟವಾಗಿ ನೆತನ್ಯಾಹು, ಈ ಶಾಂತಿ ಒಪ್ಪಂದದಿಂದ ಇಸ್ರೇಲ್ ಅಥವಾ ತಮಗೆ ಯಾವುದೇ ಲಾಭವನ್ನು ಕಾಣುತ್ತಿಲ್ಲ ಎಂಬುದು ಸ್ಪಷ್ಟ. ಅವರು ಟ್ರಂಪ್ ಅವರನ್ನು ಧಿಕ್ಕರಿಸಬಹುದು, ಆದರೆ ಅದು ಇಸ್ರೇಲ್-ಅಮೆರಿಕ ಸಂಬಂಧಗಳನ್ನು ಅನಿಶ್ಚಿತತೆಯ ಹಾದಿಯ ಕಡೆಗೆ ಕೊಂಡೊಯ್ಯುತ್ತದೆ. ಅಮೆರಿಕದಲ್ಲಿ ಪ್ರಬಲವಾದ ಇಸ್ರೇಲ್ ಪರ ಲಾಬಿ ಇದ್ದರೂ, ನೆತನ್ಯಾಹು ಅವರ ಬಹಿರಂಗ ಧಿಕ್ಕಾರವು ಹಾನಿ ನಿಯಂತ್ರಣ ಮಾಡುವ ಈ ಲಾಬಿಯ ಸಾಮರ್ಥ್ಯವನ್ನೂ ಮೀರಿಸಬಹುದು.

ಇಸ್ರೇಲ್ ಗಾಜಾದ ಮೇಲೆ ಜನಾಂಗೀಯ ಹತ್ಯೆಯ ಮಟ್ಟಕ್ಕೆ ದಾಳಿ ನಡೆಸಲು ಮತ್ತು ಪಶ್ಚಿಮ ದಂಡೆಯ ಇತರ ಪ್ಯಾಲೆಸ್ತೀನ್ ಪ್ರದೇಶಗಳ ಭಾಗಗಳನ್ನು ತನ್ನದಾಗಿಸಿಕೊಳ್ಳುವ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಅಮೆರಿಕದ ಬೆಂಬಲವೇ ಕಾರಣ. ಅಮೆರಿಕವು ಈ ವಿಷಯಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗದಂತೆ ಸತತವಾಗಿ ತನ್ನ ವೀಟೋ ಅಧಿಕಾರವನ್ನು ಬಳಸುತ್ತ ಬಂದಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ಒಟ್ಟಾರೆ ಅಮೆರಿಕ-ಇಸ್ರೇಲ್ ಸಂಬಂಧವನ್ನು ಬಲಿಕೊಟ್ಟು ಇತ್ತೀಚಿನ ಶಾಂತಿ ಒಪ್ಪಂದವನ್ನು ಹಾಳುಮಾಡಲು ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ, ಅವರು ಹಾಗೆ ಮಾಡಿದರೆ, ಇದು ಭವಿಷ್ಯದಲ್ಲಿ ಇರಾನ್ ಸಂಘರ್ಷದ ಪರಿಹಾರವನ್ನು ತಡೆಯುತ್ತದೆ ಮತ್ತು ಜಗತ್ತಿನ ಉಳಿದ ಭಾಗಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story