
ಹೊರ್ಮುಜ್ ತನಗೆಷ್ಟು ಮುಖ್ಯ ಎಂದು ಅರಿತುಕೊಂಡಿರುವ ಇರಾನ್ ಅದನ್ನು ಬಿಟ್ಟುಕೊಡಲು ಸುತಾರಾಮ್ ಒಪ್ಪುತ್ತಿಲ್ಲ. ಆದರೆ ಹೊರ್ಮುಜ್ ಇರಾನ್ ನಿಯಂತ್ರಣದಿಂದ ಮುಕ್ತವಾಗಿರಬೇಕು ಎಂಬುದು ಅಮೆರಿಕದ ಬೇಡಿಕೆ.
ಕಳೆದ ತಿಂಗಳು ಏರ್ಪಟ್ಟ ಒಡಂಬಡಿಕೆಯ ಹೊರತಾಗಿಯೂ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಹೊಗೆಯಾಡುತ್ತಿದ್ದ ಯುದ್ಧವು ಕೆಂಡದುಂಡೆಯಾಗಿ ಮಾರ್ಪಟ್ಟಿದೆ. ಹಾಗಂತ ಇದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಒಡಂಬಡಿಕೆಯು ಹೊರ್ಮುಜ್ ವಿಷಯದಲ್ಲಿ ಕೇವಲ ʼಬ್ಯಾಂಡ್-ಏಯ್ಡ್ʼ (ತಾತ್ಕಾಲಿಕ) ಚಿಕಿತ್ಸೆಯಾಗಿತ್ತೇ ಹೊರತು ಉಭಯ ಪಕ್ಷಗಳ ನಡುವಿನ ಅಪನಂಬಿಕೆ ಎಂಬ ಗಡ್ಡೆಯನ್ನು ಸಂಪೂರ್ಣವಾಗಿ ಕಿತ್ತುಹಾಕುವ ಸರ್ಜರಿಯಾಗಿರಲಿಲ್ಲ.
ಇರಾನ್ ಮೇಲೆ ಅಮೆರಿಕ ನಡೆಸಿದ ಇತ್ತೀಚಿನ ದಾಳಿಗಳು ಕೇಂದ್ರೀಕೃತವಾಗಿದ್ದು ಆ ರಾಷ್ಟ್ರದ ದಕ್ಷಿಣ ಕರಾವಳಿಯ ಮೇಲೆ. ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸಂಚಾರವನ್ನು ನಿಯಂತ್ರಿಸಲು ಟೆಹ್ರಾನ್ ಬಳಸುತ್ತಿದ್ದ ಮಿಲಿಟರಿ ಸೌಲಭ್ಯಗಳು ಈ ಕರಾವಳಿಯಲ್ಲಿದ್ದವು. ಇದು ಮೊದಲಿನಂತೆಯೇ ಮುಕ್ತವಾಗಿರಬೇಕು ಎಂಬುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಯಕೆ. ಇರಾನ್ ಮೇಲೆ ಒತ್ತಡ ಹೇರಲು ಅವರು ಈಗ ಅಮೆರಿಕವೇ ಹೊರ್ಮುಜ್ ಜಲಸಂಧಿಯ ರಕ್ಷಕ ಎಂದು ಘೋಷಿಸಿದ್ದಾರೆ. ಈ ಮಾರ್ಗದ ಮೂಲಕ ಸಾಗಣೆಯಾಗುವ ಸರಕುಗಳ ಮೇಲೆ ಶೇ.20ರಷ್ಟು ಶುಲ್ಕ ವಸೂಲು ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಒತ್ತಡಕ್ಕೆ ಮಣಿದಿದ್ದರು ಟ್ರಂಪ್
ಫೆಬ್ರವರಿ ಕೊನೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿಗಳನ್ನು ಶುರುಹಚ್ಚಿಕೊಂಡ ದಿನದಿಂದ, ಈ ದಾಳಿಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ತಡೆಯಲು ತಾನು ಬಳಸಬಹುದಾದ ಅತ್ಯಂತ ಪ್ರಬಲ ಅಸ್ತ್ರ ಎಂದರೆ ಹೋರ್ಮುಜ್ ಜಲಸಂಧಿ ಎಂಬುದನ್ನು ಇರಾನ್ ನಾಯಕತ್ವ ಅರಿತುಕೊಂಡಿತು. ಈ ಉದ್ದೇಶವನ್ನು ಬೆನ್ನಟ್ಟಿದ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತು. ಇದು ಜಾಗತಿಕ ಆರ್ಥಿಕತೆಯ ಮೇಲೆ ನೇರ ಹಾಗೂ ತತಕ್ಷಣದ ಪರಿಣಾಮ ಬೀರಿತು.
ತೈಲ ಬೆಲೆ ಏರಿಕೆಯಿಂದಾಗಿ ಅಮೆರಿಕದ ಒಳಗಿನಿಂದ ಮತ್ತು ಪ್ರಪಂಚದಾದ್ಯಂತದ ಮಿತ್ರ ರಾಷ್ಟ್ರಗಳಿಂದ ತೀವ್ರ ಒತ್ತಡಕ್ಕೆ ಒಳಗಾದ ಟ್ರಂಪ್, ದಾಳಿಗಳನ್ನು ನಿಲ್ಲಿಸಲು ಒತ್ತಡಕ್ಕೆ ಒಳಗಾದರು. ಇರಾನ್ನಲ್ಲಿ ಆಡಳಿತ ಬದಲಾವಣೆ ಮತ್ತು ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ತನ್ನ ಘೋಷಿತ ಗುರಿಗಳನ್ನು ಪೂರೈಸಲು ಸಾಧ್ಯವಾಗದೆಯೇ, ಅವರು ಇಷ್ಟವಿಲ್ಲದಿದ್ದರೂ ಮಾತುಕತೆಗೆ ಒಪ್ಪಿಕೊಂಡರು.
ಜೂನ್ 17 ರಂದು ಅಮೆರಿಕ ಮತ್ತು ಇರಾನ್ ನಡುವೆ ಒಡಂಬಡಿಕೆಗೆ ಸಹಿ ಹಾಕಿದಾಗಿನಿಂದ ನಡೆಯುತ್ತಿರುವ ಮಾತುಕತೆಗಳ ಅವಧಿಯಲ್ಲಿ, ಇರಾನ್ ಹೊರ್ಮುಜ್ನ ಪ್ರಾಮುಖ್ಯತೆಯನ್ನು ಅರಿತುಕೊಂಡು ಅದನ್ನು ಒಂದು ಮುಖ್ಯ ಹಿಡಿತವಾಗಿ ಉಳಿಸಿಕೊಂಡಿದೆ. ಮಾತುಕತೆಗಳು ಪ್ರಾರಂಭವಾದ ತಕ್ಷಣ ಹೊರ್ಮುಜ್ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತದೆ ಎಂಬುದು ಟ್ರಂಪ್ ಟೀಮ್ ನಂಬಿಕೆಯಾಗಿತ್ತು. ಆದರೆ ಹಾಗೆ ಆಗಲಿಲ್ಲ.
ಮಾತುಕತೆಗಳಿಂದ ಹೊರಬರುತ್ತಿರುವ ವರದಿಗಳ ಪ್ರಕಾರ, ಅಮೆರಿಕದ ನಿಯೋಗವು ಇರಾನಿನ ಸಹವರ್ತಿಗಳನ್ನು ತನ್ನ ದೃಷ್ಟಿಕೋನಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಪ್ರಯತ್ನ ನಡೆಸಿದೆ. ಅದೆಂದರೆ, ಇರಾನ್ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿರುವ ಪುಷ್ಟೀಕರಿಸಿದ ಯುರೇನಿಯಂನ್ನು ಒಪ್ಪಿಸುವುದರ ಜೊತೆಗೆ, ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡುವುದಾಗಿದೆ. ಆದರೆ, ಒಪ್ಪಂದಕ್ಕಾಗಿ ತನ್ನ ಕೈ ತಿರುಚಿ ಒತ್ತಡ ಹೇರಲು ತಾನು ಎಂದಿಗೂ ಬಿಡುವುದಿಲ್ಲ ಎಂದು ಇರಾನ್ ನಾಯಕತ್ವವು ಪದೇ ಪದೇ ಪ್ರತಿಪಾದಿಸಿದೆ.
ಹೊರ್ಮುಜ್ ಒಂದೇ ಅಡ್ಡಿಯಲ್ಲ
ಇವೆಲ್ಲ ಗೊಂದಲದ ನಡುವೆಯೇ ಈ ಸಂಘರ್ಷದ ಇನ್ನೊಂದು ಪ್ರಮುಖ ಪಕ್ಷವಾಗಿರುವ ಹಾಗೂ ಮುಖ್ಯ ಪ್ರಚೋದಕ ಎಂದು ಪರಿಗಣಿಸಿರುವ ಇಸ್ರೇಲ್ ಆರಂಭದಲ್ಲಿ ಲೆಬನಾನ್ ಮೇಲಿನ ಬಾಂಬ್ ದಾಳಿಗೆ ಕಡಿವಾಣ ಹಾಕಲು ನಿರಾಕರಿಸಿತ್ತು. ಟ್ರಂಪ್ ಅವರ ಮೇಲೆ ಬಿದ್ದ ಭಾರೀ ಒತ್ತಡ ಹಾಗೂ ಅದಕ್ಕೆ ಪ್ರತಿಯಾಗಿ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಬೀರಿದ ಒತ್ತಡದ ಫಲವಾಗಿ ಇಸ್ರೇಲ್ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸಿತ್ತು. ಆದರೆ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸುವ ವಿಚಾರದಲ್ಲಿ ಟ್ರಂಪ್ ಅವರ ಮಾತಿಗೆ ಮಣಿಯಲು ಇಸ್ರೇಲ್ ನಿರಾಕರಿಸಿತು,
ಇರಾನ್ ಪಾಲಿಗೆ ಹೊರ್ಮುಜ್ ಜಲಸಂಧಿ ಮೇಲಿನ ಹಿಡಿತವೇ ಪ್ರಮುಖ ಅಸ್ತ್ರ. ಇದನ್ನು ಬಳಸಿಯೇ ಇರಾನ್ ಯಶಸ್ವಿಯಾಗಿ ಟ್ರಂಪ್ ಅವರನ್ನು ತನ್ನ ಅಣತಿಗೆ ತಕ್ಕಂತೆ ನಡೆಯಬೇಕು ಎಂದು ಒತ್ತಾಯಿಸಿದೆ. ಇದನ್ನು ಅರಿತ ಅಮೆರಿಕ ಇರಾನ್ ಇನ್ನು ಮುಂದೆ ಹೊರ್ಮುಜ್ನಲ್ಲಿ ತನ್ನ ಆದೇಶ ಹೇರುವ ಸಾಮರ್ಥವನ್ನು ಹೊಂದಿರದಂತೆ ನೋಡಿಕೊಳ್ಳುವ ಮೂಲಕ ಮಿಲಿಟರಿ ಶಕ್ತಿಯಿಂದಲೇ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಿದೆ.
ಅಪನಂಬಿಕೆಯ ಒಪ್ಪಂದ
ವಿಪರ್ಯಾಸದ ಸಂಗತಿ ಎಂದರೆ, ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದಕ್ಕೆ ಹೊರ್ಮುಜ್ ಈಗ ಅಡಚಣೆಯಾಗಿದ್ದರೂ, ಅದೊಂದೇ ಏಕೈಕ ಅಡ್ಡಿಯಲ್ಲ ಎಂಬುದು ಸ್ಪಷ್ಟ. ಮೂಲಭೂತವಾಗಿ, ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವಿನ ಪರಸ್ಪರ ಅಪನಂಬಿಕೆ ಮತ್ತು ದ್ವೇಷವು ಮಾತುಕತೆಗಳಲ್ಲಿ ಚರ್ಚೆಯಾಗುತ್ತಿಲ್ಲ ಅಥವಾ ಒಪ್ಪಂದದ ಚೌಕಟ್ಟಿನ ಭಾಗವಾಗಿಲ್ಲ.
ವಾಸ್ತವವಾಗಿ, ಈ 'ಮೆಮೊರಾಂಡಂ ಆಫ್ ಅಂಡರ್ಸ್ಟ್ಯಾಂಡಿಂಗ್' (ಒಪ್ಪಂದ) ಅನ್ನು ಲೇವಡಿ ಮಾಡುತ್ತಾ, ಇದನ್ನು "ಮೆಮೊರಾಂಡಂ ಆಫ್ ಮಿಸ್ಅಂಡರ್ಸ್ಟ್ಯಾಂಡಿಂಗ್" (ಅಪನಂಬಿಕೆಯ ಒಪ್ಪಂದ) ಎಂದು ಕರೆಯಲಾಗುತ್ತಿದೆ.
ಉದಾಹರಣೆಗೆ, ಅಮೆರಿಕ ಮತ್ತು ಇರಾನ್ ನಡುವೆ 1979 ರಿಂದಲೂ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲ. ಇರಾನ್ ಅನ್ನು ಈ ಪ್ರದೇಶದ ತನ್ನ ಪ್ರಮುಖ ಬೆದರಿಕೆ ಎಂದು ಪರಿಗಣಿಸುವ ಇಸ್ರೇಲ್, ಇರಾನ್ನ ಇಸ್ಲಾಮಿಕ್ ಧಾರ್ಮಿಕ ಆಡಳಿತವು ಹೆಚ್ಚು ಉದಾರ ಮತ್ತು ಮಿತವಾದ ಆಡಳಿತವಾಗಿ ಬದಲಾಗಬೇಕೆಂದು ಬಯಸುತ್ತದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಬಾರದು ಮತ್ತು ಒಂದು ವೇಳೆ ಮುಂದುವರಿಸಿದರೂ, ತನ್ನೆಲ್ಲಾ ಪುಷ್ಟೀಕರಿಸಿದ ಯುರೇನಿಯಂ ಅನ್ನು ಒಪ್ಪಿಸಿದ ಬಳಿಕವೇ ಕಟ್ಟುನಿಟ್ಟಾದ ಅಂತರರಾಷ್ಟ್ರೀಯ ಮೇಲ್ವಿಚಾರಣೆ ನಡೆಸಬೇಕು ಎಂಬುದು ಉಭಯ ದೇಶಗಳ ಬಯಕೆ.
ಮತ್ತೆ ಯಾವಾಗ ಮಾತುಕತೆ?
ಈ ಒಪ್ಪಂದವು ಯುದ್ಧನಿರತ ಪಕ್ಷಗಳಿಗೆ ಆಗಸ್ಟ್ 17 ರವರೆಗೆ ಅಂದರೆ 60 ದಿನಗಳ ಕಾಲಾವಕಾಶವನ್ನು ನೀಡಿತ್ತು. ಇರಾನ್ನ ಹತ್ಯೆಗೀಡಾದ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಗಾಗಿ ಮಾತುಕತೆ ನಡೆಸುವವರಿಗೆ ವಿರಾಮ ನೀಡಲಾಗಿದ್ದ ಸಮಯದಲ್ಲೇ ಈ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಈಗ ಮತ್ತೆ ಯುದ್ಧ ಆರಂಭವಾಗಿರುವ ಕಾರಣ ಮಧ್ಯಸ್ಥಿಕೆ ಯಾವಾಗ ಪುನರಾರಂಭವಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ. ಇದು ಕೇವಲ ಭಾಷಣದ ಮಾತಾಗಿರಬಹುದು, ಆದರೆ ಇರಾನ್ನ ಕೆಲವು ವರ್ಗಗಳು ಖಮೇನಿ ಹತ್ಯೆಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿವೆ. ಇದು ಸಾಧ್ಯವೇ ಅಥವಾ ಇಲ್ಲವೇ ಎಂಬುದಕ್ಕಿಂತ ಹೆಚ್ಚಾಗಿ, ಇದು ಇರಾನಿಯರಲ್ಲಿ ನೆಲೆಗೊಂಡಿರುವ ಕರಾಳ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಈ ಹತಾಶ ಪರಿಸ್ಥಿತಿಗೆ ಇರುವ ಏಕೈಕ ಪರಿಹಾರವೆಂದರೆ, ಯುದ್ಧದ ಆರಂಭದಿಂದಲೂ ಅಡ್ಡಗಾಲಾಗಿರುವ ಗಲ್ಫ್ ಪ್ರದೇಶದ ಇರಾನ್ನ ನೆರೆಯ ದೇಶಗಳ ಒತ್ತಡ. ಇರಾನ್ ಹೊರ್ಮುಜ್ ಹೊರತುಪಡಿಸಿದರೆ ಗಲ್ಫ್ನಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳನ್ನು ಇನ್ನೊಂದು ಪ್ರಮುಖ ಅಸ್ತ್ರವೆಂದು ಪರಿಗಣಿಸುತ್ತದೆ. ಇದೇ ಕಾರಣಕ್ಕೆ ಅದು ಯುಎಇ, ಕತಾರ್, ಓಮನ್, ಕುವೈತ್, ಬಹ್ರೇನ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಅಥವಾ ಅಮೆರಿಕದೊಂದಿಗೆ ಸಂಬಂಧ ಹೊಂದಿರುವ ಇತರ ಗುರಿಗಳ ಮೇಲೆ ಮತ್ತೆ ದಾಳಿ ನಡೆಸುತ್ತಿದೆ.
ಇಕ್ಕಟ್ಟಿನಲ್ಲಿ ಇತರ ದೇಶಗಳು
ಈ ಬಾರಿಯೂ ಹಿಂದಿನಂತೆಯೇ ಪ್ರಾದೇಶಿಕ ದೇಶಗಳು ಅಮೆರಿಕದ ಮೇಲೆ ದಾಳಿ ನಿಲ್ಲಿಸುವಂತೆ ಒತ್ತಡ ಹೇರುತ್ತವೆ ಎಂದು ಇರಾನ್ ಭಾವಿಸಿದೆ. ಆದರೆ ಈ ದೇಶಗಳು ಇಕ್ಕಟ್ಟಿಗೆ ಸಿಲುಕಿವೆ; ಏಕೆಂದರೆ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗು ಸಂಚಾರದ ನಿಯಂತ್ರಣ ಇರಾನ್ ಕೈಯಲ್ಲಿ ಇರುವುದನ್ನು ಅವು ಬಯಸುವುದಿಲ್ಲ. ಅದೇ ವೇಳೆ, ಸಂಘರ್ಷ ಮುಂದುವರಿಯಲು ಬಿಟ್ಟರೆ ಅದು ಗಲ್ಫ್ ರಾಷ್ಟ್ರಗಳಿಗೆ ಮತ್ತಷ್ಟು ಹಾನಿ ಮಾಡುವುದು ಖಚಿತ. ಈಗಾಗಲೇ ಈ ರಾಷ್ಟ್ರಗಳು ತಮ್ಮ ತೈಲ ಮತ್ತು ಅನಿಲ ಘಟಕಗಳ ಮೇಲಾದ ದಾಳಿಗಳು ಹಾಗೂ ತಮ್ಮ ವಿಮಾನ ನಿಲ್ದಾಣಗಳು ಮತ್ತು ನಗರಗಳ ಮೇಲೆ ನಡೆದ ದಿಢೀರ್ ದಾಳಿಗಳಿಂದಾಗಿ ಭಾರಿ ಬೆಲೆ ತೆರುವಂತಾಗಿದೆ.
ಆದ್ದರಿಂದ, ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಇತ್ತೀಚಿನ ಸಂಘರ್ಷವು ಈ ಒಪ್ಪಂದದ ಮಿತಿಗಳನ್ನು ಎತ್ತಿ ತೋರಿಸುತ್ತದೆ. ಪರಸ್ಪರ ನಂಬಿಕೆಯ ಮರುಸ್ಥಾಪನೆ ಮತ್ತು ರಾಜತಾಂತ್ರಿಕತೆಯ ಮೇಲಿನ ವಿಶ್ವಾಸದಂತಹ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವಂತಹ ಅಂಶಗಳನ್ನು ಈ ಒಪ್ಪಂದ ಒಳಗೊಳ್ಳದೇ ಹೋದರೆ, ಯುದ್ಧವನ್ನು ತಡೆಯಲು ಈ ಕೇವಲ ಒಪ್ಪಂದವೊಂದೇ ಸಾಲದು. ಅಂತಹ ಕಟ್ಟುನಿಟ್ಟಿನ ತೀರ್ಮಾನಕ್ಕೆ ಬರದೆ ಬೇರೆ ದಾರಿಯಿಲ್ಲ. ಹೊರ್ಮುಜ್ ಜಲಸಂಧಿಯ ಗೋಜಲನ್ನು ಬಗೆಹರಿಸುವಲ್ಲಿನ ವೈಫಲ್ಯ ಅಸಲಿ ಸಮಸ್ಯೆಯ ಆಳ ಎಷ್ಟಿದೆ ಎಂಬುದರ ಒಂದು ಸಣ್ಣ ಸುಳಿವು ಮಾತ್ರವಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


