ಸವೆದಷ್ಟೂ ಬೆಳೆಯುತ್ತಿದೆ ಇರಾನ್ ಕದನ ಹಾದಿ : ಸದ್ಯಕ್ಕಿದು ಪರಿಹಾರ ಕಾಣದ ಸಂಗತಿ
x

ಇರಾನ್ ಇಚ್ಛಾಶಕ್ತಿಯನ್ನು ಬಗ್ಗುಬಡಿಯಬೇಕು ಎಂದು ಹೊರಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ಮುಖಭಂಗವಾಗಿರುವುದಂತೂ ನಿಜ. ಯುದ್ಧವನ್ನು ಅತಿ ಶೀಘ್ರ ಕೊನೆಗೊಳಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳುತ್ತ ಬಂದಿದ್ದಾರಾದರೂ ವಿಪರ್ಯಾಸ ಎಂಬಂತೆ ಅದರ ಬಿಕ್ಕಟ್ಟು ಮುಂದುವರಿಯುತ್ತಲೇ ಇದೆ. ಈ ಎಲ್ಲ ಬೆಳವಣಿಗೆಗಳಿಂದ ಅಮೆರಿಕದಲ್ಲಿ ಟ್ರಂಪ್ ಜನಪ್ರಿಯತೆಯ ರೇಟಿಂಗ್ ತಳಕಚ್ಚಿ ಹೋಗಿದೆ.

ಸವೆದಷ್ಟೂ ಬೆಳೆಯುತ್ತಿದೆ ಇರಾನ್ ಕದನ ಹಾದಿ : ಸದ್ಯಕ್ಕಿದು ಪರಿಹಾರ ಕಾಣದ ಸಂಗತಿ

ಇರಾನ್ ಯುದ್ಧ ಬಿಕ್ಕಟ್ಟು ಅನಿವಾರ್ಯ ಎಂಬಂತೆ ಸುದೀರ್ಘ ಸಂಘರ್ಷವಾಗಿ ಬದಲಾಗಿದೆ. ಇದನ್ನು ಅಂತ್ಯಗೊಳಿಸಬೇಕಾದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣ.


Click the Play button to hear this message in audio format

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಮುಗಿಬಿದ್ದು ಎರಡು ತಿಂಗಳುಗಳೇ ದಾಟಿದೆ. ಈಗ ಈ ಸುದೀರ್ಘ ಯುದ್ಧವು ಅನಿಶ್ಚಿತತೆಯತ್ತ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಭಯ ರಾಷ್ಟ್ರಗಳು ತಮ್ಮ ಪ್ರಮುಖ ಬೇಡಿಕೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲದ ಕಾರಣ ಮತ್ತು ಹೊಸ ವಿವಾದಾತ್ಮಕ ವಿಷಯಗಳು ಹುಟ್ಟಿಕೊಳ್ಳುತ್ತಿರುವುದರಿಂದ ಸಂಘರ್ಷವು ಪರಿಹಾರದಿಂದ ಮತ್ತಷ್ಟು ದೂರ ಸರಿಯುತ್ತಿದೆ.

ಅಷ್ಟಕ್ಕೂ ಮಾತುಕತೆ ಎಂದರೆ ಏನು ಎಂಬುದರ ಬಗ್ಗೆ ಎರಡೂ ಕಡೆಯವರು ತಮ್ಮದೇ ಆದ ವಿಭಿನ್ನ ತಿಳುವಳಿಕೆಯನ್ನು ಹೊಂದಿದ್ದಾರೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಸಾಮಾನ್ಯವಾಗಿ ರಾಜತಾಂತ್ರಿಕ ಭಾಷೆಯಲ್ಲಿ 'ಮಾತುಕತೆ' ಎಂದರೆ ಇಬ್ಬರು ಎದುರಾಳಿಗಳು ತಮ್ಮ ಕೆಲವು ಹಕ್ಕುಗಳನ್ನು ಬಿಟ್ಟುಕೊಟ್ಟು, ಮಧ್ಯಮ ಮಾರ್ಗದಲ್ಲಿ ಪರಸ್ಪರ ಒಪ್ಪಂದಕ್ಕೆ ಬರುವುದು; ಅಂದರೆ ಸಂಕ್ಷಿಪ್ತವಾಗಿ ಹೇಳುವುದಾದರೆ 'ರಾಜಿ' ಮಾಡಿಕೊಳ್ಳುವುದು.

ಆದರೆ ಈ ಪ್ರಸ್ತುತ ಯುದ್ಧದಲ್ಲಿ, ಟ್ರಂಪ್ ಅವರ ದೃಷ್ಟಿಕೋನದ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕದ ದೀರ್ಘಕಾಲದ ಬೇಡಿಕೆಗೆ ಇರಾನ್ ಬದ್ಧವಾಗಿರಬೇಕು—ಅದೇನೆಂದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡಬೇಕು. ಇಸ್ಲಾಮಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ, ಇರಾನ್ ಇದಕ್ಕೆ ಒಪ್ಪದಿದ್ದಾಗ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಯುಎಸ್ ತಂಡವು ನಿಜವಾದ ಮಾತುಕತೆಗೆ ಅಥವಾ ರಾಜಿ ಮಾಡಿಕೊಳ್ಳಲು ಯಾವುದೇ ಅವಕಾಶ ನೀಡದೆ ಸಭೆಯಿಂದ ಹೊರನಡೆದಿದೆ.

ಪಟ್ಟು ಬಿಡದ ಇರಾನ್

ಇರಾನ್ಗೆ ವಿಚಾರದಲ್ಲಿ ಹೇಳುವುದಾದರೆ ಆರಂಭದಲ್ಲಿ ಲೆಬನಾನ್ ಮೇಲಿನ ಇಸ್ರೇಲಿ ದಾಳಿಗಳನ್ನು ನಿಲ್ಲಿಸುವುದು ಒಂದು ಪ್ರಮುಖ ಬೇಡಿಕೆಯಾಗಿತ್ತು. ಟ್ರಂಪ್ ಅವರ ಆದೇಶದ ಮೇರೆಗೆ ಇಸ್ರೇಲ್ ಇದಕ್ಕೆ ಒಪ್ಪಿಕೊಂಡಿತು. ಇದಕ್ಕೆ ಪ್ರತಿಯಾಗಿ ಇರಾನ್ 'ಹೊರ್ಮುಜ್ ಜಲಸಂಧಿ'ಯನ್ನು ಮುಕ್ತಗೊಳಿಸಿತು. ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗಿನಿಂದ ಈ ಬೆಳವಣಿಗೆಗಳು ಶಾಂತಿಯ ಹತ್ತಿರಕ್ಕೆ ಕರೆದೊಯ್ದವು ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಮೊದಲ ಸುತ್ತಿನ ಮಾತುಕತೆಗೆ ಹಾದಿ ಮಾಡಿಕೊಟ್ಟವು.

ಆದರೆ, ನಂತರ ಟ್ರಂಪ್ ಮತ್ತೊಂದು ಅಡ್ಡಿಯನ್ನು ತಂದಿಟ್ಟರು. ಇರಾನ್ ತನ್ನ ಪರಮಾಣು ಯೋಜನೆಯನ್ನು ನಿಲ್ಲಿಸುವ ಅಮೆರಿಕದ ಬೇಡಿಕೆಗೆ ಒಪ್ಪುವವರೆಗೆ, ಇರಾನ್ ಬಂದರುಗಳಿಗೆ ಬರುವ ಮತ್ತು ಹೋಗುವ ಹಡಗುಗಳಿಗೆ ಹೊರ್ಮುಜ್ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅವರು ಘೋಷಿಸಿದರು.

ವಿಪರ್ಯಾಸದ ಸಂಗತಿ ಏನೆಂದರೆ, ಯುದ್ಧದ ಸಂದರ್ಭದಲ್ಲಿ ಹೋರಾಟವನ್ನು ಕೊನೆಗೊಳಿಸಲು ಬಯಸುತ್ತಿದ್ದೇನೆ ಎಂದು ಟ್ರಂಪ್ ಹಲವಾರು ಬಾರಿ ಹೇಳಿದ್ದಾರೆ. ಆದರೆ, ʼತಾವೇನೂ ಯುದ್ಧ ಆರಂಭಿಸಿಲ್ಲ, ಹಾಗೆಯೇ ಸಂಪೂರ್ಣವಾಗಿ ಟ್ರಂಪ್ ಅವರ ನಿಯಮಗಳಿಗೆ ಅನುಗುಣವಾಗಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ಮಾತುʼ ಎಂದು ಇರಾನ್ ನಿಲುವು. ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸೇರಿದಂತೆ ಹಿರಿಯ ಇರಾನ್ ಅಧಿಕಾರಿಗಳು, ಇರಾನ್ ಅಮೆರಿಕಕ್ಕೆ " ಎಂದಿಗೂ ಶರಣಾಗುವುದಿಲ್ಲ" ಎಂದು ಹೇಳಿದ್ದಾರೆ, ಆದರೆ ವಾಸ್ತವವಾಗಿ ಟ್ರಂಪ್ ಬಯಸುತ್ತಿರುವುದು ಇರಾನ್ ಶರಣಾಗತಿ.

ಇಸ್ರೇಲ್ಗೆ ಬೇಡದ ಕದನವಿರಾಮ

ಸಾಧ್ಯವಾದಷ್ಟು ಕಾಲ ಇರಾನ್ ಮೇಲೆ ಬಾಂಬ್ ದಾಳಿ ಮುಂದುವರಿಸಬೇಕು ಎಂಬುದು ಇಸ್ರೇಲ್ ಬಯಕೆ, ಆದರೆ ಅಮೆರಿಕದ ಆದೇಶದ ಮೇರೆಗೆ ಅದನ್ನು ತಡೆಯಬಹುದು. ಯುದ್ಧದ ಸಮಯದಲ್ಲಿ ಇಂತಹ ಕಸರತ್ತುಗಳು ಒಂದೆರಡು ಬಾರಿ ಸಂಭವಿಸಿದ್ದೂ ಇವೆ. ಮೊದಲನೆಯದಾಗಿ, ಇರಾನ್ನ 'ಸೌತ್ ಪಾರ್ಸ್' ಅನಿಲ ಕ್ಷೇತ್ರಗಳ ಮೇಲೆ ದಾಳಿ ಮಾಡದಂತೆ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸೂಚಿಸಿದಾಗ ಮತ್ತು ನಂತರ ಲೆಬನಾನ್ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸಲು ಹೇಳಿದಾಗ.

ಒಟ್ಟಾರೆಯಾಗಿ, ಸುಮಾರು ಆರವತ್ತು ದಿನಗಳ ಅಂತ್ಯದ ಲೆಕ್ಕಾಚಾರವು ಯುದ್ಧದ ಆರಂಭಿಕರಾದ ಇಸ್ರೇಲ್ ಮತ್ತು ಅಮೆರಿಕಕ್ಕೆ ಇರಾನ್ ಅನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಗ್ಗಿಸಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟ. ಇಸ್ಲಾಮಿಕ್ ಸರ್ಕಾರವು ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಪ್ರತಿರೋಧಿಸುವ ಕೆಲಸವನ್ನು ಮುಂದುವರಿಸಿದೆ. ಟೆಹ್ರಾನ್ನ ಪರಮಾಣು ಯೋಜನೆ ಹಳಿಗೆ ಮರಳಿದೆ ಮತ್ತು ಸುಮಾರು 400 ಕೆಜಿ ಸಂವರ್ಧಿತ ಯುರೇನಿಯಂನ್ನು ದೇಶದೊಳಗೆ ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ. ಅಷ್ಟೇ ಅಲ್ಲದೆ, ಇರಾನ್ ತನ್ನ ಬೃಹತ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಗ್ರಹವನ್ನು ಶತ್ರುಗಳಿಗೆ ಪತ್ತೆಹಚ್ಚಲು ಸಾಧ್ಯವಾಗದ ಸ್ಥಳಗಳಲ್ಲಿ ಬಚ್ಚಿಟ್ಟಿದೆ.

ಅದೇ ವೇಳೆ, ಅಮೆರಿಕ-ಇಸ್ರೇಲ್ ಬಾಂಬ್ ದಾಳಿಯಿಂದಾಗಿ ಇರಾನ್ಗೆ ಆಗಿರುವ ನಷ್ಟ ದೊಡ್ಡದು. ಅದರ ನಾಗರಿಕ ಮೂಲಸೌಕರ್ಯಗಳಿಗೆ ಭಾರಿ ಹಾನಿ ಸಂಭವಿಸಿದೆ, ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಖಾಸಗಿ ಮನೆಗಳ ನಾಶ ಹಾಗೂ ಕೆಲವು ಸಾವಿರ ಜನರ ಸಾವು ನೋವುಗಳಿಗೆ ಕಾರಣವಾಗಿದೆ. ಅದರ ಪರಮಾಣು ಮೂಲಸೌಕರ್ಯವು ಎಷ್ಟರ ಮಟ್ಟಿಗೆ ನಾಶವಾಗಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಕ್ಷಿಪಣಿ ದಾಳಿಗಳು ಅದಕ್ಕೆ ಹಾನಿ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ.

ಅನಿರ್ದಿಷ್ಟಾವಧಿ ಕದನ ವಿರಾಮ

ಇನ್ನು ಇರಾನ್ನ ಇಚ್ಛಾಶಕ್ತಿಯನ್ನು ಕುಗ್ಗಿಸುವಲ್ಲಿ ಟ್ರಂಪ್ ಸಂಪೂರ್ಣ ವಿಫಲರಾಗಿರುವುದರ ಜೊತೆಗೆ, ಯುದ್ಧ ಪ್ರಾರಂಭವಾದಾಗಿನಿಂದ ಅವರ ಜನಪ್ರಿಯತೆಯ ರೇಟಿಂಗ್ ಕೂಡ ತಳಕಚ್ಚಿದೆ. ಅವರದೇ ಬೆಂಬಲಿಗರು ಮತ್ತು ಅಮೆರಿಕದ ಜನಸಂಖ್ಯೆಯ ದೊಡ್ಡ ಭಾಗ ಅವರ ಬೆಂಬಲಕ್ಕೆ ನಿಲ್ಲಲು ನಿರಾಕರಿಸುತ್ತಿರುವುದರಿಂದ, ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ. ವಿಶೇಷವಾಗಿ ಅಮೆರಿಕ ಮಧ್ಯಂತರ ಚುನಾವಣೆಗಳಿಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವುದು ಈ ಒತ್ತಡಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಸೋಲಾದರೆ ಅವರು ಅಸಹಾಯಕ ಅಧ್ಯಕ್ಷರಾಗಲಿದ್ದಾರೆ, ಏಕೆಂದರೆ ರಿಪಬ್ಲಿಕನ್ನರು ಯುಎಸ್ ಕಾಂಗ್ರೆಸ್ನಲ್ಲಿ ತಮ್ಮ ಬಹುಮತವನ್ನು ಕಳೆದುಕೊಳ್ಳುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.

ಯುದ್ಧದ ಪ್ರಸ್ತುತ ಹಂತದಲ್ಲಿ, ಟ್ರಂಪ್ ಘೋಷಿಸಿರುವ ಅನಿರ್ದಿಷ್ಟಾವಧಿ ಕದನ ವಿರಾಮವು ಮಹತ್ವದ್ದಾಗಿದೆ. ಏಕೆಂದರೆ ಯುದ್ಧಕ್ಕೆ ಅಧಿಕೃತವಾಗಿ ಅಂತ್ಯ ಹಾಡದೆಯೇ, ಹೋರಾಟವು ನಿಂತುಹೋಗುವ ಉತ್ತಮ ಸಾಧ್ಯತೆಗಳು ಇಲ್ಲಿ ಗೋಚರಿಸುತ್ತಿವೆ.

ಇದು ಒಟ್ಟಾರೆಯಾಗಿ ಜಗತ್ತಿಗೆ ಮತ್ತು ಯುದ್ಧದಿಂದ ಜರ್ಜರಿತವಾಗಿರುವ ಮಧ್ಯಪ್ರಾಚ್ಯಕ್ಕೆ (ಅಥವಾ ಪಶ್ಚಿಮ ಏಷ್ಯಾಕ್ಕೆ) ಉತ್ತಮ ಬೆಳವಣಿಗೆಯಾದರೂ ಕೂಡ, ಕದನಕ್ಕೊಂದು ಶೀಘ್ರ ಪರಿಹಾರ ಕಂಡುಕೊಳ್ಳದೇ ಇದ್ದರೆ ಅದು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸುವುದು ಖಚಿತ. ಏಕೆಂದರೆ ಮಾತುಕತೆ ಅಥವಾ ಸಂಧಾನದ ಮೂಲಕ ಯುದ್ಧಕ್ಕೆ ಯಾವುದೇ ಅಧಿಕೃತ ಅಂತ್ಯ ಸಿಕ್ಕಿಲ್ಲ. ಅಂದರೆ, ಈ ಶಾಂತಿಯು ತಾತ್ಕಾಲಿಕವಾಗಿದ್ದು, ಎರಡೂ ಕಡೆಯಿಂದ ಆಗುವ ಸಣ್ಣ ಪ್ರಚೋದನೆಯೂ ಮತ್ತೆ ಹೊಸ ಸುತ್ತಿನ ಹೋರಾಟಕ್ಕೆ ನಾಂದಿ ಹಾಡಬಹುದು.

ತಾರ್ಕಿಕ ಫಲಿತಾಂಶ

ಆದರೆ, ಪ್ರಸ್ತುತ ಸಂದರ್ಭದಲ್ಲಿ ಈ ಅನಿಶ್ಚಿತತೆಯೇ ಒಂದು ತಾರ್ಕಿಕ ಫಲಿತಾಂಶದಂತೆ ಕಾಣುತ್ತಿದೆ. ಏಕೆಂದರೆ ಯುದ್ಧದಲ್ಲಿ ಯಾರು ಗೆದ್ದರು ಅಥವಾ ಸೋತರು ಎಂಬ ಕಥನದ ಮೇಲೆ ದೊಡ್ಡ ಪ್ರತಿಷ್ಠೆ ಅಡಗಿದೆ. ಉದಾಹರಣೆಗೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಬಿಟ್ಟುಕೊಡಬೇಕೆಂದು ಟ್ರಂಪ್ ಪಟ್ಟು ಹಿಡಿಯದಿದ್ದರೆ, ಅವರು ಮುಖಭಂಗ ಅನುಭವಿಸಬೇಕಾಗುತ್ತದೆ ಮತ್ತು ಇದು ಅಮೆರಿಕದ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳಿಗೆ ಬಿದ್ದ ಇತ್ತೀಚಿನ ಹಿನ್ನಡೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲನೆಯದಾಗಿ ಟ್ರಂಪ್ ಇರಾನ್ ವಿರುದ್ಧ ಯುದ್ಧಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಜಗತ್ತು ಮತ್ತು ವಿಶೇಷವಾಗಿ ಅಮೆರಿಕದ ಮತದಾರರು ಪ್ರಶ್ನಿಸುತ್ತಾರೆ. ಹೀಗಾದಲ್ಲಿ, ಇದು ತಕ್ಷಣದ ಚುನಾವಣಾ ಪರಿಣಾಮಗಳನ್ನು ಬೀರುತ್ತದೆ.

ಟ್ರಂಪ್ ಕೇವಲ ಪರಮಾಣು ಸಮಸ್ಯೆಯನ್ನು ನಿಭಾಯಿಸುವುದು ಮಾತ್ರವಲ್ಲದೆ, ಅದು ತಮ್ಮ ಪೂರ್ವಾಧಿಕಾರಿ ಬರಾಕ್ ಒಬಾಮಾ ಇರಾನ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಹೋಲದಂತೆ ನೋಡಿಕೊಳ್ಳುವ ಅನಿರ್ವಾಯತೆ ಹೊಂದಿದ್ದಾರೆ. ಏಕೆಂದರೆ, 2018 ರಲ್ಲಿ ಒಬಾಮಾ ಅವರ ಪರಮಾಣು ಒಪ್ಪಂದದಿಂದ ದಿಢೀರನೆ ಹೊರಬಂದವರು ಇದೇ ಟ್ರಂಪ್. ಹಾಗಾಗಿ ಈಗ ಅವರು ತಮ್ಮ ಆ ಕ್ರಮವನ್ನು ಮತ್ತು ನಂತರ ನಡೆದ ಜೂನ್ 2025ರ ಸಂಘರ್ಷ ಹಾಗೂ ಈಗ ನಡೆಯುತ್ತಿರುವ ಯುದ್ಧವನ್ನೂ ಸಮರ್ಥಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ.

ಇನ್ನು, ಪರಮಾಣು ಯೋಜನೆಯನ್ನು ಕೈಬಿಡುವ ಅಮೆರಿಕದ ಬೇಡಿಕೆಗೆ ಇರಾನ್ ಏನಾದರೂ ಒಪ್ಪಿಕೊಂಡರೆ, ಅದನ್ನು ಸೋಲು ಎಂದೇ ಪರಿಗಣಿಸಲಾಗುತ್ತದೆ. ಇರಾನ್ ತನ್ನ ದೇಶದೊಳಗೆ ಪರಮಾಣು ವಿಷಯದ ಸುತ್ತ ಸೃಷ್ಟಿಸಿರುವ ಪ್ರಚಾರ ಮತ್ತು ಪ್ರತಿಷ್ಠೆಯನ್ನು ಗಮನಿಸಿದರೆ, ಈ ನಿರ್ಧಾರವು ಇಸ್ಲಾಮಿಕ್ ಸರ್ಕಾರವನ್ನು ಅಧಿಕಾರದಿಂದ ಹೊರಹಾಕುವ ಸಾಧ್ಯತೆಯೂ ಇರುತ್ತದೆ.

ಸುದೀರ್ಘ ಸಂಘರ್ಷ

ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯ ನಂತರ ಅವಕಾಶದ ಒಂದು ಸಣ್ಣ ಕಿಟಕಿ ತೆರೆದುಕೊಂಡಿತ್ತು. ಆಗ ಪರಮಾಣು ವಿಷಯದ ಮೇಲಿನ ತಡೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಕಾಲಮಿತಿಯನ್ನು ಪ್ರಸ್ತಾಪಿಸಲಾಗಿತ್ತು. ವರದಿಗಳ ಪ್ರಕಾರ, ಅಮೆರಿಕವು 20 ವರ್ಷಗಳ ಕಾಲಮಿತಿಯನ್ನು ಬಯಸಿತ್ತು, ಆ ಅವಧಿಯಲ್ಲಿ ಪರಮಾಣು ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಿತ್ತು. ಇರಾನ್ ಐದು ವರ್ಷಗಳ ಕಾಲಮಿತಿಗೆ ಸಿದ್ಧವಿತ್ತು ಎಂದು ತಿಳಿದುಬಂದಿದೆ.

ಹೀಗೆ ಹಿಂಬಾಗಿಲ ಮಾತುಕತೆಗಳು ನಡೆಯುತ್ತಿದ್ದಾಗಲೇ, ಅಮೆರಿಕದ ನೌಕಾಪಡೆಯು ಇರಾನ್ನ ಸರಕು ಹಡಗಿನ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿತು. ಇದರಿಂದ ಮಾತುಕತೆ ಹಳಿತಪ್ಪಿತು ಮತ್ತು ಎರಡನೇ ಸುತ್ತಿನ ಮಾತುಕತೆ ನಡೆಯದೆಯೇ ಕದನ ವಿರಾಮ ಅಂತ್ಯಗೊಂಡಿತು. ಈ ಮಧ್ಯೆ, ಅಮೆರಿಕದ ಕ್ರಮ ಮತ್ತು ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತು. ಇದನ್ನು ಇನ್ನೂ ಪರಿಣಾಮಕಾರಿಯಾಗಿ ವಿಶ್ಲೇಷಿಸಬೇಕೆಂದರೆ, ಯುದ್ಧವು ಈಗ ಅಕ್ಷರಶಃ ಸಮುದ್ರದ ಆಳಕ್ಕೆ ಸರಿದಂತೆ ಕಾಣುತ್ತಿದೆ.

ಇರಾನ್ ಯುದ್ಧದ ಮಗ್ಗುಲಲ್ಲೇ ಹುಟ್ಟಿಕೊಂಡ ಲೆಬನಾನಿನ ಇಸ್ರೇಲ್-ಹಿಬ್ಬುಲ್ಲ ಸಂಘರ್ಷಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ದಕ್ಷಿಣ ಲೆಬನಾನ್ನಲ್ಲಿ ಎಂಟು ಕಿಲೋಮೀಟರ್ಗಳವರೆಗೆ ವ್ಯಾಪಿಸಿರುವ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು, ಇದನ್ನು 'ಭದ್ರತಾ ತಡೆಗೋಡೆ' ಎಂದು ಕರೆದಿದೆ. ಈ ವಿಷಯವಾಗಿ ಲೆಬನಾನ್ನಲ್ಲಿ ಉದ್ವಿಗ್ನತೆ ಮುಂದುವರಿದಿದ್ದರೂ, ಸದ್ಯಕ್ಕೆ ಹಿಬ್ಬುಲ್ಲ ಮತ್ತು ಇಸ್ರೇಲ್ ಎರಡೂ ಕಾದಾಟವನ್ನು ನಿಲ್ಲಿಸಿವೆ.

ಅಮೆರಿಕವು ಪರ್ಷಿಯನ್ ಕೊಲ್ಲಿಯಲ್ಲಿ ಹೊಂಚು ಹಾಕುತ್ತಿದ್ದರೆ, ಇರಾನ್ ಹೊರ್ಮುಜ್ ಜಲಸಂಧಿಯ ಮೂಲಕ ಯಾವುದೇ ಹಡಗು ಹಾದುಹೋಗದಂತೆ ಎಚ್ಚರಿಕೆ ವಹಿಸಿದೆ. ಇವೆಲ್ಲವೂ ಸೇರಿ ಒಂದು ವಿಶಿಷ್ಟವಾದ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದೆ.

ಈ ಸಂಘರ್ಷವು ಅನಿವಾರ್ಯವಾಗಿ ಒಂದು 'ಸುದೀರ್ಘ ಸಂಘರ್ಷ'ವಾಗಿ ಬದಲಾಗಿದೆ, ಇದರಲ್ಲಿ ಶಾಮೀಲಾಗಿರುವ ಪಕ್ಷಗಳು ತಮ್ಮ ತಮ್ಮ ನಿಲುವುಗಳಿಗೆ ಬಿಗಿಯಾಗಿ ಅಂಟಿಕೊಂಡಿವೆ. ಒಂದು ವೇಳೆ ಹೊರ್ಮುಜ್ ಜಲಸಂಧಿಯು ಜಗತ್ತಿನ ಉಳಿದ ಭಾಗಕ್ಕೆ ಅಷ್ಟೊಂದು ನಿರ್ಣಾಯಕ ಆಗಿಲ್ಲದೆ ಹೋಗಿದ್ದರೆ, ಈ ಬಿಕ್ಕಟ್ಟು ಹೀಗೆಯೇ ಮುಂದುವರಿಯುತ್ತಿತ್ತು.

ಈಗ ಪ್ರಶ್ನೆಯು ಇರಾನ್ ಅಥವಾ ಅಮೆರಿಕ ಮತ್ತು ಇಸ್ರೇಲ್‌ಗೆ ದೀರ್ಘಕಾಲದ ಹೋರಾಟವನ್ನು ನಡೆಸುವ ಶಕ್ತಿ ಇದೆಯೇ ಎಂಬುದಲ್ಲ, ಬದಲಾಗಿ ಇಂತಹ ಅನಿಶ್ಚಿತತೆಯಿಂದ ಉಂಟಾಗುವ ದುರಂತಮಯ ಪರಿಣಾಮಗಳನ್ನು ಜಗತ್ತು ಸಹಿಸಿಕೊಳ್ಳಬಲ್ಲದೇ ಎಂಬುದಾಗಿದೆ.

Read More
Next Story