Subir Bhaumik

ಬಾಡಿಗೆ ಸೈನಿಕ ವಾನ್‌ಡೈಕ್‌ ಕೇಸ್‌ ಖತಂ: ʼದಾದಾ ಅಮೆರಿಕʼದ ಮುಂದೆ ಭಾರತ ಸರಂಡರ್‌


ಬಾಡಿಗೆ ಸೈನಿಕ ವಾನ್‌ಡೈಕ್‌ ಕೇಸ್‌ ಖತಂ: ʼದಾದಾ ಅಮೆರಿಕʼದ ಮುಂದೆ ಭಾರತ ಸರಂಡರ್‌
x
ಪಶ್ಚಿಮ ಏಷ್ಯಾದ ರಹಸ್ಯ ಯುದ್ಧಗಳ ಸೂತ್ರಧಾರ ವ್ಯಾನ್‌ಡೈಕ್‌ ಅವರನ್ನು ಮಿಲಿಟರಿ ತರಬೇತಿ ಪಡೆದ ಆರು ಮಂದಿ ಉಕ್ರೇನಿಯನ್‌ ಸಹಚರರ ಜೊತೆಗೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಬಂಧಿಸಲಾಗಿತ್ತು. ಈತನ ಗುಂಪು ಅಮೆರಿಕ ಮೂಲದ ಬೃಹತ್ ಜಾಲಕ್ಕೆ ಸೇರಿದ್ದು ಭಾರತೀಯ ಭೂಪ್ರದೇಶದ ಮೂಲಕ ಮ್ಯಾನ್ಮಾರ್‌ಗೆ ಯುದ್ಧ ಡ್ರೋನ್‌ಗಳು ಹಾಗೂ ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಆರೋಪಕ್ಕೆ ಒಳಗಾಗಿತ್ತು.
Click the Play button to hear this message in audio format

ಅಮೆರಿಕದ ಕೂಲಿ ಸೈನಿಕ ವ್ಯಾನ್‌ಡೈಕ್‌ ಗೆ ನೀಡಿದ ವಿನಾಯ್ತಿ, ಒತ್ತಡಕ್ಕೆ ಮಣಿದು ಕ್ರಿಮಿನಲ್‌ ನಡಾವಳಿಗಳನ್ನು ಕಡಿತಗೊಳಿಸಿದ ಭೋಪಾಲ್‌ ದುರಂತ ಮತ್ತು ಪುರುಲಿಯಾ ಪ್ರಕರಣಗಳನ್ನು ನೆನಪಿಸುತ್ತದೆ.

ಭಾರತ ಮತ್ತೊಮ್ಮೆ ಅಮೆರಿಕದ ಒತ್ತಡಕ್ಕೆ ಮಣಿದು ಮಂಡಿಯೂರಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಭಾರತದ ಭೂಪ್ರದೇಶವನ್ನು ಬಳಸಿಕೊಂಡು ಮ್ಯಾನ್ಮಾರ್‌ ಪ್ರವೇಶಿಸಿ ಅಲ್ಲಿನ ಮಿಲಿಟರಿ ಆಡಳಿತ (ಜುಂತಾ)ದ ವಿರುದ್ಧ ಹೋರಾಟ ನಡೆಸುತ್ತಿರುವ ಬಂಡುಕೋರ ಗುಂಪುಗಳಿಗೆ ಬೆಂಬಲ ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕದ ಬಾಡಿಗೆ ಬಂಟ ಮ್ಯಾಥ್ಯೂ ಆರನ್‌ ವ್ಯಾನ್‌ಡೈಕ್‌ ಮತ್ತು ಆತನ ಆರು ಮಂದಿ ಉಕ್ರೇನಿ ಸಹಚರರ ವಿಚಾರದಲ್ಲಿ ಭಾರತ ಮೃಧು ಧೋರಣೆ ತಳೆದಿದೆ.

ಭಾರತ ತೊರೆಯಲು ಅವಕಾಶ

ಸಿಖ್‌ ಪ್ರತ್ಯೇಕವಾದಿ ನಾಯಕ ಗುರ್ಪತ್‌ವಂತ್‌ ಸಿಂಗ್‌ ಪನ್ನೂನ್‌ ಕೊಲೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ಪ್ರಕರಣವನ್ನು ಎದುರಿಸುತ್ತಿರುವ ʼರಾʼ ಅಧಿಕಾರಿಗಳು ಮತ್ತು ಅವರ ಸಂಪರ್ಕಿತರ ಮೇಲಿನ ಕ್ರಮವನ್ನು ಸಡಿಲಗೊಳಿಸುವ ಮೂಲಕ ಯಾವುದಾದರೂ ʼಕೊಡು-ಕೊಳ್ಳುವʼ ಒಪ್ಪಂದ ಕುದುರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಹುದೇನೂ ಸಂಭವಿಸಲಿಲ್ಲ. ಹಾಗಾಗಿ ಇದು ಸ್ಪಷ್ಟವಾಗಿ ʼದೊಡ್ಡಣ್ಣʼನ ಮುಂದೆ ಶರಣಾದಂತಾಗಿದೆ.

ಸುಮಾರು ಆರು ತಿಂಗಳ ಸೆರೆವಾಸದ ಬಳಿಕ ಅಮೆರಿಕದ ಪ್ರಜೆ ಹಾಗೂ ಬಾಡಿಗೆ ಸೈನಿಕ ವ್ಯಾನ್‌ ಡೈಕ್‌ ಮತ್ತು ಆತನ ಸಹ-ಆರೋಪಿಗಳಾದ ಆರು ಮಂದಿ ಉಕ್ರೇನಿಯನ್ನರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯವು ಭಾರತವನ್ನು ತೊರೆದು ಸ್ವದೇಶಕ್ಕೆ ಮರಳಲು ಈಗ ಅನುಮತಿ ನೀಡಿದೆ. ಆದರೆ ಇದು ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಹಾಗೂ ಇದು ಕಟ್ಟುನಿಟ್ಟಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಪಶ್ಚಿಮ ಏಷ್ಯಾದ ರಹಸ್ಯ ಯುದ್ಧಗಳನ್ನು ಕರಗತ ಮಾಡಿಕೊಂಡಿರುವ ಅಪಾರ ಅನುಭವಿ ವ್ಯಾನ್‌ಡೈಕ್‌ ಅವರನ್ನು ಮಿಲಿಟರಿ ತರಬೇತಿ ಪಡೆದ ಆರು ಮಂದಿ ಉಕ್ರೇನಿಯನ್‌ ಸಹಚರರ ಜೊತೆಗೆ ಈ ವರ್ಷದ ಮಾರ್ಚ್‌ 13ರಂದು ಬಂಧಿಸಲಾಗಿತ್ತು. ಈ ಗುಂಪು ಅಮೆರಿಕ ಮೂಲದ ಬಹಳ ದೊಡ್ಡ ಜಾಲಕ್ಕೆ ಸೇರಿದ್ದು ಭಾರತೀಯ ಭೂಪ್ರದೇಶದ ಮೂಲಕ ಮ್ಯಾನ್ಮಾರ್‌ಗೆ ಯುದ್ಧ ಡ್ರೋನ್‌ಗಳು ಹಾಗೂ ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿತ್ತು.

ಯಾವ ಆರೋಪ-ಯಾವ ತನಿಖೆ?

ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ಆದೇಶವು ಎನ್‌ಐಎಯ ತುಸು ಮೃಧು ಆರೋಪಪಟ್ಟಿಯ ಅನಿವಾರ್ಯ ಮುಂದುವರಿಕೆಯಾಗಿದೆ. ಈ ಆರೋಪಪಟ್ಟಿಯಲ್ಲಿ ವ್ಯಾನ್‌ಡೈಕ್‌ ಮತ್ತು ಆರು ಮಂದಿ ಉಕ್ರೇನಿ ಸಹಚರರ ಮೇಲೆ 2005ರ ವಲಸೆ ಮತ್ತು ವಿದೇಶಿಗರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆಯೇ ಹೊರತು ಭಾರತದ ಪ್ರಮುಖ ಭಯೋತ್ಪಾದನಾ ನಿಗ್ರಹದ ಕಾನೂನಾದ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವ) ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಅಪರಾಧಗಳ ಆರೋಪ ಹೊರಿಸಲಾಗಿಲ್ಲ. ಆರೋಪಿತರ ವಿರುದ್ಧ ಯುಎಪಿಎ ಅಪರಾಧಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

ಭಾರತ ಮತ್ತು ಮ್ಯಾನ್ಮಾರ್‌ ಗಡಿಯಲ್ಲಿ ಸಶಸ್ತ್ರ ಬಂಡುಕೋರರಿಗೆ ವ್ಯಾನ್‌ಡೈಕ್‌ ಮತ್ತು ಆತನ ತಂಡ ತರಬೇತಿ ನೀಡುತ್ತಿರುವುದಕ್ಕೆ ಸಂಬಂಧಿಸಿ ಸಾಕಷ್ಟು ದೃಶ್ಯಾವಳಿಯ ಸಾಕ್ಷ್ಯಗಳು ಅವರ ಮೊಬೈಲ್‌ ಫೋನ್‌ ಮತ್ತು ಲ್ಯಾಪ್‌ಟ್ಯಾಪ್‌ಗಳಲ್ಲಿ ಲಭ್ಯವಿದ್ದರೂ ಅವರ ಮೇಲೆ ಭಯೋತ್ಪಾದನಾ ಆರೋಪಗಳು ಹೊರಿಸದೇ ಇರುವುದು ಅಚ್ಚರಿದಾಯಕವಾಗಿದೆ. ಎನ್‌ಐಎಗೆ ಹತ್ತಿರವಿರುವ ಮೂಲಗಳ ಪ್ರಕಾರ ಇದು ಎನ್‌ಐಎಯ ಕಾನೂನು ಪ್ರಕ್ರಿಯೆಗಿಂತ ಹೆಚ್ಚಾಗಿ ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ.

ಎನ್‌ಐಎ ಆರಂಭದಲ್ಲಿ ಪ್ರಾಸಂಗಿಕವಾಗಿಯೇ ಭಯೋತ್ಪಾದನಾ ಚಟುವಟಿಕೆಯ ಆರೋಪಗಳನ್ನು ಹೊರಿಸಿತ್ತು. ಆದರೆ ಈ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ವ್ಯಾನ್‌ಡೈಕ್‌ ಬಂಧನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಭಾರತದ ಜೊತೆ ನೇರವಾಗಿ ಪ್ರಸ್ತಾಪ ಮಾಡಿದ್ದರಿಂದ ಆ ಕಾನೂನಿನಡಿ ಆರೋಪಗಳನ್ನು ಹೊರಿಸುವುದರಿಂದ ವಿನಾಯ್ತಿಯನ್ನು ತೋರಿಸಲಾಗಿತ್ತು.

ವ್ಯಾನ್‌ಡೈಕ್ ಮತ್ತು ಉಕ್ರೇನಿ ಸಹಚರರಿಗೆ ಜಾಮೀನು ಪಡೆಯಲು ಮತ್ತು ವಿದೇಶಕ್ಕೆ ಪ್ರಯಾಣ ಬೆಳೆಸಲು ಅನುಮತಿ ಪಡೆಯುವಲ್ಲಿ ಎನ್‌ಐಎ ನ್ಯಾಯಾಲಯದ ಆದೇಶವು ಅತ್ಯಂತ ನಿರ್ಣಾಯಕವಾಗಿದೆ.

ಬರೀ ಬಡಾಯಿ ಮಾತು

ಅಮೆರಿಕದ ಡೀಪ್ ಸ್ಟೇಟ್ ಸ್ವತ್ತಾಗಿರುವ ವ್ಯಾನ್‌ಡೈಕ್ ಮತ್ತು ಆರು ಉಕ್ರೇನಿಯನ್ನರಿಗೆ ಭಾರತವನ್ನು ಶಾಂತಿಯುತವಾಗಿ ತೊರೆಯಲು ಅನುಮತಿ ನೀಡುವ ನಿರ್ಧಾರವು "ಕೇವಲ ಪ್ರತ್ಯೇಕ ಕಾನೂನು ಹಿನ್ನಡೆಯಲ್ಲ. ಬದಲಾಗಿ ಭಾರತವನ್ನು "ಶಾಶ್ವತ ಮೃದು ರಾಷ್ಟ್ರ" ಎಂದು ಹಣೆಪಟ್ಟಿ ಹಚ್ಚುವುದಕ್ಕೆ ತಕ್ಕುನಾದುದಾಗಿದೆ ಎಂದು ವ್ಯೂಹಾತ್ಮಕ ಅಧ್ಯಯನ ತಜ್ಞ ಬ್ರಹ್ಮ ಚೆಲ್ಲಾನಿ ಅವರು ಹೇಳಿದ್ದಾಋೆ.

"ಇದು ಭಾರತವು ತನ್ನ ಕಠಿಣ ಅಪರಾಧ ಕಾನೂನುಗಳನ್ನು ಜಾರಿಗೆ ತಂದು, ಭೌಗೋಳಿಕ ರಾಜಕೀಯ ಒತ್ತಡ ಹೆಚ್ಚಾದಾಗ ಹಿಂದೆ ಸರಿಯುವ ದೀರ್ಘ ಮತ್ತು ಅಹಿತಕರ ಸಂಪ್ರದಾಯಕ್ಕೆ ಸೇರಿದ್ದಾಗಿದೆ," ಎಂದು ಚೆಲ್ಲಾನಿ ಹೇಳುತ್ತಾರೆ.

ಅವರು ಹೇಳುವುದರಲ್ಲಿ ಅರ್ಥವಿದೆ. ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಸರ್ಕಾರಗಳಿಂದ ಹಿಡಿದು ಪ್ರಸ್ತುತ ಕಠಿಣ ನಿಲುವು ಹೊಂದಿರುವ ನರೇಂದ್ರ ಮೋದಿ ಸರ್ಕಾರದವರೆಗೆ, ಆರಂಭಿಕ ಬಡಾಯಿ ಹಾಗೂ ವಿಜಯೋತ್ಸವದ ನಂತರ ಒತ್ತಡಕ್ಕೆ ಮಣಿದು ಹಿಂದೆ ಸರಿಯುವುದೇ ಭಾರತದ ಚಾಳಿ ಅಪವಾದಕ್ಕಿಂತ ಹೆಚ್ಚಾಗಿ ಒಂದು ಮಾದರಿಯೇ ಆಗಿದೆ.

ರಾಜತಾಂತ್ರಿಕ ಒತ್ತಡಕ್ಕೆ ಮಣಿವ ಪರಿ

ಈ ವಿದ್ಯಮಾನವು ಒಂದು ಪರಿಚಿತ ಮಾದರಿಯನ್ನು ನಮಗೆ ನೆನಪಿಸುತ್ತದೆ. ಭೋಪಾಲ್ ಅನಿಲ ದುರಂತ ಮತ್ತು ಪುರುಲಿಯಾ ಶಸ್ತ್ರಾಸ್ತ್ರ ಕಡಿತ ಪ್ರಕರಣದಿಂದ ಹಿಡಿದು, ಇಟಾಲಿಯನ್ ಮೆರೈನ್ಸ್‌ಗೆ ಸಂಬಂಧಿಸಿದ ಎನ್ರಿಕಾ ಲೆಕ್ಸಿ ಪ್ರಕರಣ ಮತ್ತು ಬೊಫೋರ್ಸ್ ಹಗರಣದಲ್ಲಿ ಒಟಾವಿಯೊ ಕ್ವೊಟ್ರೊಚ್ಚಿಯ ಪರಾರಿಯವರೆಗೆ, ಭಾರತವು ರಾಜತಾಂತ್ರಿಕ ಅಥವಾ ಕಾರ್ಯತಂತ್ರದ ಒತ್ತಡಕ್ಕೆ ಮಣಿದು ವಿದೇಶಿ ಪ್ರಜೆಗಳು ಅಥವಾ ಘಟಕಗಳ ವಿರುದ್ಧದ ಉನ್ನತ ಮಟ್ಟದ ಅಪರಾಧ ಪ್ರಕ್ರಿಯೆಗಳನ್ನು ಪದೇ ಪದೇ ಸಡಿಲಗೊಳಿಸಿರುವುದು, ಕೈಬಿಟ್ಟಿರುವುದು ಅಥವಾ ನಿಷ್ಫಲಗೊಳಿಸಿರುವುದಕ್ಕೆ ಸಾಕ್ಷಿಯಾಗಿದೆ.

ವಿಭಿನ್ನ ಪ್ರಕರಣಗಳು, ವಿಭಿನ್ನ ಭಾರತೀಯ ಸರ್ಕಾರಗಳು, ಆದರೆ ನಮ್ಮ ಮುಂದೆ ಉಳಿದಿರುವುದು ಒಂದೇ ಪ್ರಶ್ನೆ: ಶಕ್ತಿಶಾಲಿ ವಿದೇಶಿ ಹಿತಾಸಕ್ತಿಗಳು ತಳಕು ಹಾಕಿಕೊಂಡಿರುವ ಸಂದರ್ಭದಲ್ಲಿ ಭಾರತವು ಜವಾಬ್ದಾರಿಯನ್ನು ಜಾರಿಗೆ ತರಲು ಏಕೆ ಪದೇ ಪದೇ ವಿಫಲಗೊಳ್ಳುತ್ತದೆ ಮತ್ತು ಅದನ್ನು ಇಷ್ಟು ಮೃದು ಧೋರಣೆಯ ರಾಷ್ಟ್ರವನ್ನಾಗಿ ಮಾಡುವುದಾದರೂ ಯಾವುದು? ಎಂದು ಚೆಲ್ಲಾನಿ ಪ್ರಶ್ನಿಸುತ್ತಾರೆ.

ನಿರಾಶೆ ಹುಟ್ಟಿಸಿದ ಪುರುಲಿಯಾ ಶಸ್ತ್ರಾಸ್ತ್ರ ಪ್ರಕರಣ

ವಿದೇಶಗಳಿಂದ ಬರುವ ಒತ್ತಡವನ್ನು ಎದುರಿಸುವಲ್ಲಿ ವಿಫಲವಾಗುವ ಈ ರಾಷ್ಟ್ರೀಯ ಪ್ರವೃತ್ತಿಗೆ ಈ ಲೇಖಕರು ವೈಯಕ್ತಿಕ ಸಾಕ್ಷಿಯಾಗಿದ್ದಾರೆ. 1995ರ ಪುರುಲಿಯಾ ಶಸ್ತ್ರಾಸ್ತ್ರ ಕಡಿತ ಪ್ರಕರಣವನ್ನು ಬಿಬಿಸಿ ವರದಿಗಾರನಾಗಿ ವರದಿ ಮಾಡಿರುವ ನನಗೆ, ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇಳಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬ್ರಿಟಿಷ್ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ಪೀಟರ್ ಬ್ಲೀಚ್ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ರಾಷ್ಟ್ರಪತಿಗಳ ಕ್ಷಮಾಧಾನದೊಂದಿಗೆ ಅನಾಮತ್ತು ಬಿಡುಗಡೆ ಮಾಡಿದ ನಂತರ ಸಿಬಿಐ ಕೋಲ್ಕತ್ತಾ ಕಚೇರಿಯಲ್ಲಿ ಉಂಟಾದ ನಿರಾಶೆ ಮತ್ತು ಸ್ವಯಂ-ಸೃಷ್ಟಿತ ಸೋಲಿನ ವಾತಾವರಣವು ಈಗಲೂ ಸ್ಮೃತಿಯಲ್ಲಿ ಸ್ಥಾಯಿಯಾಗಿದೆ.

ಐದಾರು ದೇಶಗಳಿಂದ ಸಾಕ್ಷ್ಯಗಳನ್ನು ಕಲೆಹಾಕುವ ಮೂಲಕ ಕರಾರುವಕ್ಕಾಗಿ ಪ್ರಕರಣವನ್ನು ಮಂಡಿಸಲು ಸಿಬಿಐ ಅಧಿಕಾರಿಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ, ಆದರೆ ಅದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಯಿತು. ಪುರುಲಿಯಾ ಸಂಚಿನ ರೂವಾರಿ ಕಿಮ್ ಡೇವಿ (ನಿಜವಾದ ಹೆಸರು: ನೀಲ್ಸ್ ಹೊಲ್ಕ್) ತನ್ನ ಜೈಲು ಶಿಕ್ಷೆಯನ್ನು ಎದುರಿಸಲು ಭಾರತಕ್ಕೆ ಬರಲೇ ಇಲ್ಲ, ಏಕೆಂದರೆ ಅವರ ದೇಶವಾದ ಡೆನ್ಮಾರ್ಕ್ ಇದಕ್ಕೆ ಸಹಕರಿಸಲಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story