D Ravi Kanth

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ದೇಶದ ಅನ್ನದಾತರ ಹಿತಾಸಕ್ತಿಗಳಿಗೆ ಎಳ್ಳುನೀರು?


ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ದೇಶದ ಅನ್ನದಾತರ ಹಿತಾಸಕ್ತಿಗಳಿಗೆ ಎಳ್ಳುನೀರು?
x
ನರೇಂದ್ರ ಮೋದಿ ಸರ್ಕಾರವು ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರದ ಜೊತೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ ಕೃಷಿ, ಸೇವೆಗಳು, ಔಷಧೀಯ ಉತ್ಪನ್ನಗಳು ಅಥವಾ ಡಿಜಿಟಲ್ ವ್ಯಾಪಾರದ ವಿಚಾರಗಳಲ್ಲಿ ತನ್ನ ಬದ್ಧತೆಗಳ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ

ಅಮೆರಿಕದ ಕೃಷಿ ಲಾಬಿಗಳು ಭಾರತದ ಕನಿಷ್ಠ ಬೆಂಬಲ ಬೆಲೆ ಮತ್ತು ಸಾರ್ವಜನಿಕ ದಾಸ್ತಾನು ವ್ಯವಸ್ಥೆಗಳನ್ನು ಹಾಳುಗೆಡಹಲು ನಿರಂತವಾಗಿ ಪ್ರಯತ್ನ ಮಾಡುತ್ತಲೇ ಇವೆ.

ಭಾರತ ಮತ್ತು ಅಮೆರಿಕ ತಮ್ಮ ಬಹುಚರ್ಚಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾದ ವ್ಯಾಪಾರ ಮಾತುಕತೆ ನಡೆಸುತ್ತಿವೆ. ಅಧಿಕೃತವಾಗಿ ಈ ಮಾತುಕತೆ ತಾಂತ್ರಿಕ ಮತ್ತು ಕಾನೂನಾತ್ಮಕ ಪರಿಶೀಲನೆಗೆ ಸಂಬಂಧಿಸಿದ್ದಾಗಿದೆ. ಆದರೆ ವಾಸ್ತವದಲ್ಲಿ ಭೌಗೋಳಿಕ ರಾಜಕೀಯದ ಅನುಕೂಲಕ್ಕಾಗಿ ಸುಮಾರು 80 ಕೋಟಿ ದುರ್ಬಲ ಭಾರತೀಯ ರೈತರ ಹಿತಾಸಕ್ತಿಗಳನ್ನು ಬಲಿಕೊಡುವ ಕೆಲಸ ನಡೆಯುತ್ತಿದೆಯೇ ಎಂಬುದನ್ನು ಈ ಮಾತುಕತೆ ನಿರ್ಧರಿಸಲಿದೆ.

ಒಂದು ಕಡೆ ಅಮೆರಿಕದ ಒತ್ತಡ ಹೆಚ್ಚುತ್ತಿದೆ ಮತ್ತು ಇನ್ನೊಂದು ಕಡೆ ಭಾರತದ ಸಬ್ಸಿಡಿ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕ ಟೀಕೆಗಳು ಕೂಡ ಹೆಚ್ಚುತ್ತಿವೆ. ಇವೆಲ್ಲದರ ನಡುವೆಯೇ ಒಂದು ಮೂಲಭೂತ ಪ್ರಶ್ನೆಗೆ ಉತ್ತರ ಬೇಡುತ್ತಿದೆ; ರಾಜಕೀಯ, ಕಾರ್ಯತಂತ್ರ ಮತ್ತು ಆರ್ಥಿಕ ಒತ್ತಡಗಳ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಈಗಾಗಲೇ ಯಾವ ಮಹತ್ವದ ಭರವಸೆಗಳನ್ನು ನೀಡಿದೆ?

ಭಾರತದ ನೀತಿಗಳ ಮೇಲೆ ಸವಾರಿ

ಕಳೆದ ವಾರ ಅಮೆರಿಕ ಭಾರತದ ಕೃಷಿ ನೀತಿಗಳ ವಿರುದ್ಧದ ಸಮನ್ವಯದ ಅಭಿಯಾನದಂತೆ ಕಾಣುವ ಒತ್ತಡವನ್ನು ತೀವ್ರಗೊಳಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯ ಕೃಷಿ ಸಮಿತಿಯಲ್ಲಿ ಅಮೆರಿಕ ಮತ್ತು ಪಾಕಿಸ್ತಾನವೂ ಸೇರಿದಂತೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ʼಕೇರ್ನ್ಸ್ ಗ್ರೂಪ್ʼ ಭಾರತದ ಕೃಷಿ ಬೆಂಬಲ ಕಾರ್ಯಕ್ರಮಗಳ ಮೇಲೆ ಹರಿಹಾಯ್ದಿದೆ.

ಇನ್ನೂ ಗಮನಾರ್ಹವಾದ ಸಂಗತಿ ಎಂದರೆ ಭಾರತದ ಪರವಾಗಿ ಯಾವ ದೇಶವೂ ಧ್ವನಿ ಎತ್ತಲಿಲ್ಲ. ಇದರಿಂದ ಭಾರತ ಏಕಾಂಗಿಯಾಗಿ ತನ್ನ ನೀತಿಗಳು ಸರಿಯಿವೆ ಎಂದು ಸಮರ್ಥಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.

ಆದರೆ ಅತ್ತ ಜಿನೀವಾದಲ್ಲಿ ಭಾರತವು ಟೀಕೆಗಳನ್ನು ಎದುರಿಸುತ್ತಿದ್ದರೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಮಾತ್ರ ಅಮೆರಿಕದೊಂದಿಗೆ ನಮ್ಮ ದೇಶದ ವ್ಯಾಪಾರ ಮಾತುಕತೆಗಳು ಪ್ರಗತಿಯ ದಿಕ್ಕಿನಲ್ಲಿ ಸಾಗಿವೆ ಎಂದು ಹೇಳಿ ಸಾರ್ವಜನಿಕವಾಗಿ ಸಂಭ್ರಮಪಡುತ್ತಿದ್ದರು. ವರದಿಗಳ ಪ್ರಕಾರ ಅಮೆರಿಕದ ನಿಯೋಗವೊಂದು ಅಂತಿಮ ಹಂತದ ಚರ್ಚೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳೆಲ್ಲವೂ ಬಗೆಹರಿದಿವೆ ಮತ್ತು ಕೇವಲ ತಾಂತ್ರಿಕ ಹಾಗೂ ಕಾನೂನಾತ್ಮಕ ಸಂಗತಿಗಳು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿಕೊಂಡಿದೆ.

ಅಸಲಿಗೆ ಇದು ಸಂಭ್ರದ ವಿಚಾರವಾಗಿರಲಿಲ್ಲ. ಈ ಹೇಳಿಕೆಯು ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು ಚಿಂತೆಗೆ ಈಡುಮಾಡಬೇಕಾದ ಸಂಗತಿಯಾಗಿತ್ತು.

ಪಾರದರ್ಶಕತೆ ಮಾಯ

ಕೃಷಿ, ಸೇವೆಗಳು, ಔಷಧೀಯ ಉತ್ಪನ್ನಗಳು ಅಥವಾ ಡಿಜಿಟಲ್ ವ್ಯಾಪಾರದ ವಿಚಾರಗಳಲ್ಲಿ ಮೋದಿ ಸರ್ಕಾರ ತಾನು ಮಾಡಿರುವ ಬದ್ಧತೆಗಳ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಅಲ್ಲಲ್ಲಿ ಸಾಂದರ್ಭಿಕ ಸೋರಿಕೆಗಳು ಮತ್ತು ಆಯ್ದ ಮಾಹಿತಿಗಳ ಹೊರತಾಗಿ ಮಾತುಕತೆಗಳೇನಿದ್ದರೂ ಸಂಪೂರ್ಣವಾಗಿ ಗೌಪ್ಯವಾಗಿ ನಡೆದಿವೆ. ಜೀವನೋಪಾಯ, ಆಹಾರ ಭದ್ರತೆ, ಉದ್ಯೋಗ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ರಿಯಾಯ್ತಿಗಳ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ರೀತಿಯ ಸ್ಪಷ್ಟ ತಿಳುವಳಿಕೆಯನ್ನು ನೀಡಲಾಗಿಲ್ಲ.

ಭಾರತದ 140 ಕೋಟಿ ಜನಸಂಖ್ಯೆ, ಅದರಲ್ಲಿಯೂ ಕೃಷಿ ಬೆಂಬಲ ವ್ಯವಸ್ಥೆಯನ್ನು ಅವಲಂಬಿಸಿರುವ ಸುಮಾರು 80 ಕೋಟಿ ಜನರು, ತಮ್ಮ ಸರ್ಕಾರವು ಯಾವುದಕ್ಕೆಲ್ಲಾ ಒಪ್ಪಿಗೆ ನೀಡಿದೆ ಎಂಬ ವಿಷಯದ ಬಗ್ಗೆ ಅರಿವಿಲ್ಲದೇ ಇರುವ ಸ್ಥಿತಿಯಲ್ಲಿದ್ದಾರೆ. ಈ ರಹಸ್ಯವು, ವ್ಯಾಪಾರವನ್ನೂ ಮೀರಿದ ವಿಶಾಲವಾದ ಕಾರ್ಯತಂತ್ರ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳು ಈ ಮಾತುಕತೆಗಳನ್ನು ರೂಪಿಸುತ್ತಿರಬಹುದೆಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಈ ಕಳವಳಗಳು ಕೇವಲ ಕಾಲ್ಪನಿಕ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.

ಕೃಷಿ ಕ್ಷೇತ್ರದ ಬಗೆಗಿನ ಕಳವಳಗಳು

ಕಳೆದ ಅನೇಕ ವರ್ಷಗಳಿಂದ, ಅಮೆರಿಕದ ಕೃಷಿ ಲಾಬಿಗಳು ಮತ್ತು ಜನಪ್ರತಿನಿಧಿಗಳು ಭಾರತದ ಸಾರ್ವಜನಿಕ ದಾಸ್ತಾನು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾರ್ಯಕ್ರಮಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದಾರೆ. ಮಾರುಕಟ್ಟೆಯ ಏರಿಳಿತಗಳಿಂದ ಭಾರತೀಯ ರೈತರನ್ನು ರಕ್ಷಿಸುವ ಮತ್ತು ದೇಶೀಯ ಆಹಾರ ಭದ್ರತೆಯನ್ನು ಬೆಂಬಲಿಸುವ ನೀತಿಗಳನ್ನು ಕಿತ್ತೊಗೆಯುವುದೇ ಅವರ ಸ್ಪಷ್ಟ ಉದ್ದೇಶವಾಗಿದೆ.

ಭಾರತದ ಮೇಲಿರುವ ಮುಖ್ಯ ಆರೋಪವೆಂದರೆ, ಅದು ಸುಮಾರು 65 ಬಿಲಿಯನ್ ಡಾಲರ್ಗಳನ್ನು ಕೃಷಿ ಬೆಂಬಲಕ್ಕಾಗಿ ಖರ್ಚು ಮಾಡುತ್ತಿದೆ. ಇದರಲ್ಲಿ ಸುಮಾರು 25 ಬಿಲಿಯನ್ ಡಾಲರ್ಗಳು 'ವ್ಯಾಪಾರವನ್ನು ದಿಕ್ಕುತಪ್ಪಿಸುವ ಸಬ್ಸಿಡಿಗಳು' ಎಂದು ವರ್ಗೀಕರಿಸಲ್ಪಟ್ಟಿದ್ದರೆ, ಉಳಿದವು ಅಭಿವೃದ್ಧಿ ಸಂಬಂಧಿತ ಬೆಂಬಲ ಕ್ರಮಗಳ ಅಡಿಯಲ್ಲಿ ಬರುತ್ತವೆ.

ಭಾರತವು ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಆದರೂ, ವಿಶ್ವ ವ್ಯಾಪಾರ ಸಂಸ್ಥೆಯ (WTO) ಸಭೆಯಲ್ಲಿ ಇಂಡೋನೇಷ್ಯಾ ಮತ್ತು ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ 'ಜಿ-33' ಮೈತ್ರಿಕೂಟದ ಸದಸ್ಯರೂ ಕೂಡ ತುಟಿ ಬಿಚ್ಚಲಿಲ್ಲ. ಭಾರತದ ಈ ರಾಜತಾಂತ್ರಿಕ ಏಕಾಂಗಿತನವನ್ನು ಕಡೆಗಣಿಸುವುದು ಅಸಾಧ್ಯವಾಗಿತ್ತು.

ಅಮೆರಿಕದ ಸಮನ್ವಯಿತ ನೀತಿಯ ಒತ್ತಡ

ಭಾರತದ ವಿರುದ್ಧದ ಈ ಅಭಿಯಾನವು ಇನ್ನು ಮುಂದೆ ಕೇವಲ ಸರ್ಕಾರದ ಮಟ್ಟಕ್ಕೆ ಸೀಮಿತವಾಗಿರುವುದಿಲ್ಲ. ಇದು ಅಮೆರಿಕದ ಅಧಿಕೃತ ನೀತಿ, ಕಾಂಗ್ರೆಸ್ನ ಒತ್ತಡ ಮತ್ತು ಖಾಸಗಿ ವಲಯದ ಲಾಬಿಯನ್ನು ಬೆಸೆಯುವ ಒಂದು ಸಮನ್ವಯಿತ ಪ್ರಯತ್ನದಂತೆ ಕಂಡುಬರುತ್ತಿದೆ.

ಅಮೆರಿಕದ ಸೆನೆಟ್ನ ಕೃಷಿ, ಪೌಷ್ಟಿಕಾಂಶ ಮತ್ತು ಅರಣ್ಯ ಸಮಿತಿಯ ಅಧ್ಯಕ್ಷರಾದ ಸೆನೆಟರ್ ಜಾನ್ ಬೂಜ್ಮನ್ ಅವರ ಮಾತುಗಳಲ್ಲಿ ಎಚ್ಚರಿಕೆಯ ಸಂಕೇತಗಳು ಸ್ಪಷ್ಟವಾಗಿದ್ದವು: "ಅಮೆರಿಕದ ಭತ್ತ ಮತ್ತು ಗೋಧಿ ಬೆಳೆಗಾರರು ಭಾರತದ ಅತಿಯಾದ ಸಬ್ಸಿಡಿ ನೀಡುವ ನೀತಿಯಿಂದಾಗಿ ನಿರಂತರ ದಾಳಿಗೆ ಗುರಿಯಾಗುತ್ತಿದ್ದಾರೆ, ಇದಕ್ಕೆ ಇನ್ನೂ ಅನೇಕ ನಿದರ್ಶನಗಳಿವೆ. ಈ ಶಾಸನವು ನಮ್ಮ ವ್ಯಾಪಾರ ಪಾಲುದಾರರ ಅನ್ಯಾಯದ ಪದ್ಧತಿಗಳು ಮತ್ತು ಮಾರುಕಟ್ಟೆ ಕುಶಲತೆಯನ್ನು ಎದುರಿಸಲು ನಮಗೆ ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ."

ಅಂತಹ ಹೇಳಿಕೆಗಳು ಕೇವಲ ಭಾಷಣಗಳಲ್ಲ. ಇವು ವ್ಯಾಪಾರ ಸಾಧನಗಳು, ಶಾಸನಗಳು ಮತ್ತು ಸಂಭಾವ್ಯ ವಿವಾದಗಳ ಮೂಲಕ ಭಾರತದ ಕೃಷಿ ನೀತಿಗಳನ್ನು ಸವಾಲು ಮಾಡಲು ಅಮೆರಿಕದಲ್ಲಿ ಬೆಳೆಯುತ್ತಿರುವ ಉಭಯ ಪಕ್ಷಗಳ ದೃಢ ನಿರ್ಧಾರವನ್ನು ಸೂಚಿಸುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿ ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ತಾನೇ ಸ್ವತಃ ವಿಶ್ವ ವ್ಯಾಪಾರ ಸಂಸ್ಥೆಯ ಪ್ರಮುಖ ವಿವಾದವೊಂದರಲ್ಲಿ ಸೋಲು ಅನುಭವಿಸಿದ್ದ ದೇಶದಿಂದಲೇ ಈ ಮಾತುಗಳು ಬಂದಿರುವುದು ವಿಪರ್ಯಾಸ.

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಕದನ

ಭಾರತದ ಸಬ್ಸಿಡಿಗಳ ವಿರೋಧವನ್ನು ದ್ವಿಪಕ್ಷೀಯ ಅಸಮಾಧಾನ ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ಜಾಗತಿಕ ಕಾಳಜಿ ಎಂಬಂತೆ ಬಿಂಬಿಸಲು ಅಮೆರಿಕ ಪ್ರಯತ್ನಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ, ಅಮೆರಿಕದ ಅಕ್ಕಿ ಸಂಘದ ಪ್ರತಿನಿಧಿಗಳನ್ನು ಮತ್ತು ಗಮನಾರ್ಹವಾಗಿ ಪಾಕಿಸ್ತಾನವನ್ನು ಕರೆತಂದು, ಭಾರತದ ಬೆಂಬಲ ಕಾರ್ಯಕ್ರಮಗಳು ಪರಾಗ್ವೆಯಂತಹ ಕೃಷಿ ರಫ್ತುದಾರ ರಾಷ್ಟ್ರಗಳು ಸೇರಿದಂತೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ಸ್ಪರ್ಧಿಗಳಿಗೆ ಹಾನಿ ಮಾಡುತ್ತಿವೆ ಎಂದು ವಾದಿಸಿದೆ.

ಅಮೆರಿಕದ ಅಕ್ಕಿ ಲಾಬಿಯು ಆಯೋಜಿಸಿದ್ದ ಒಂದು ಪಾರ್ಶ್ವ ಕಾರ್ಯಕ್ರಮವು ಈ ದಾಳಿಯ ಕೇಂದ್ರಬಿಂದುವಾಗಿತ್ತು. ಅಮೆರಿಕದ ವ್ಯಾಪಾರ ರಾಯಭಾರಿ ಜೋಸೆಫ್ ಬಾರ್ಲೂನ್ ಅವರ ಪಾಲ್ಗೊಳ್ಳುವಿಕೆಯೊಂದಿಗೆ, ಪಾಕಿಸ್ತಾನ ಮತ್ತು ಅಮೆರಿಕದ ಅಕ್ಕಿ ಸಂಘದ ಭಾಷಣಕಾರರು ಭಾರತದ ವಿರುದ್ಧ ವಾದ ಪ್ರಾರಂಭಿಸಿದರು. ಇದನ್ನು "ಅತ್ಯಂತ ಸ್ಥಳೀಯ ಮಟ್ಟದ ದಾಳಿ" ಎಂದು ವೀಕ್ಷಕರು ಕರೆದಿದ್ದಾರೆ. ಅವರ ವಾದ ತೀರಾ ಸರಳವಾಗಿತ್ತು: ಅವರು ಯಾರೊಂದಿಗಾದರೂ ಸ್ಪರ್ಧಿಸಬಲ್ಲರು, ಆದರೆ ಭಾರತ ಸರ್ಕಾರದೊಂದಿಗಲ್ಲ.

ಕೃಷಿಯು ಕೇವಲ ಒಂದು ರಂಗವಷ್ಟೇ.

ಸೇವೆಗಳು ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿಸ್ತರಣೆ

ಸೇವಾ ವಲಯದ ವ್ಯಾಪಾರದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಭಾರತವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಟ್ರಂಪ್ ಆಡಳಿತವು ಎಚ್-1ಬಿ ವೀಸಾಗಳ ಮೇಲೆ ಪದೇ ಪದೇ ನಡೆಸಿದ ದಾಳಿಗಳು, ಅಮೆರಿಕದ ಆರ್ಥಿಕತೆ ಮತ್ತು ಸಾಮಾಜಿಕ ಕಲ್ಯಾಣ ವ್ಯವಸ್ಥೆಗೆ ಭಾರತೀಯ ವೃತ್ತಿಪರರು ನೀಡುತ್ತಿರುವ ಗಣನೀಯ ಕೊಡುಗೆಗಳ ಹೊರತಾಗಿಯೂ, ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದೇಶಿ ಭಾಗವಹಿಸುವಿಕೆ ಕಡಿಮೆ ಮಾಡುವ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿವೆ.

ಡಿಜಿಟಲ್ ವ್ಯಾಪಾರದ ವಿಷಯದಲ್ಲಿ, ಎಲೆಕ್ಟ್ರಾನಿಕ್ ರವಾನೆಗಳ ಮೇಲಿನ ಕಸ್ಟಮ್ಸ್ ಸುಂಕಗಳ ಕುರಿತು ನೀತಿ ನಮ್ಯತೆಯನ್ನು ಬೆಂಬಲಿಸುತ್ತಿದ್ದ ತನ್ನ ದೀರ್ಘಕಾಲದ ನಿಲುವಿನಿಂದ ಭಾರತ ಈಗಾಗಲೇ ದೂರ ಸರಿದಿದೆ. ನಿರಂತರ ಒತ್ತಡಕ್ಕೆ ಮಣಿದು ಭಾರತವು ಅಂತಿಮವಾಗಿ ಶಾಶ್ವತ ನಿಷೇಧಕ್ಕೆ ಸಹಿ ಹಾಕಬಹುದು, ಇದು ಭವಿಷ್ಯದಲ್ಲಿ ದೇಶಕ್ಕೆ ಬರಬೇಕಿದ್ದ ಹತ್ತಾರು ಬಿಲಿಯನ್ ಡಾಲರ್‌ಗಳ ಕಸ್ಟಮ್ಸ್ ಆದಾಯವನ್ನು ಕಿತ್ತುಕೊಂಡರೆ ಅಚ್ಚರಿಯಿಲ್ಲ.

ಕೃತಕ ಬುದ್ಧಿಮತ್ತೆ ಚಾಲಿತ ಡೇಟಾ ಸೆಂಟರ್ಗಳಿಗೆ ತೆರಿಗೆ ಪ್ರೋತ್ಸಾಹಕಗಳನ್ನು ನೀಡುವ ಸರ್ಕಾರದ ಆಕ್ರಮಣಕಾರಿ ಉತ್ತೇಜನವು ಕಠಿಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದನ್ನು ಆಧುನೀಕರಣದ ತಂತ್ರವೆಂದು ಪ್ರಸ್ತುತಪಡಿಸಲಾಗುತ್ತಿದೆ. ಆದರೂ, ಕೃತಕ ಬುದ್ಧಿಮತ್ತೆಯು ದಿನನಿತ್ಯದ ಕೆಲಸಗಳನ್ನು ಸ್ವಯಂಚಾಲನೆ ನೀಡುವುದರಿಂದ, ಇಂತಹ ನೀತಿಗಳು ತೆರಿಗೆ ಆದಾಯವನ್ನು ಕಡಿಮೆ ಮಾಡುವುದರ ಜೊತೆಗೆ ಭಾರತದ ಸಾಫ್ಟ್ವೇರ್ ಸೇವಾ ವಲಯದಲ್ಲಿ ಉದ್ಯೋಗದಲ್ಲಿರುವ ಲಕ್ಷಾಂತರ ಜನರ ಉದ್ಯೋಗಗಳಿಗೆ ಕತ್ತರಿ ಹಾಕಬಹುದು.

ಔಷಧ ವಲಯದ ಮೇಲೆ ಹೆಚ್ಚುತ್ತಿದೆ ಒತ್ತಡ

ಔಷಧೀಯ ವಲಯವು ಮತ್ತೊಂದು ದುರ್ಬಲ ಕ್ಷೇತ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಆಗಾಗ್ಗೆ "ವಿಶ್ವದ ಔಷಧಾಲಯ" ಎಂದು ಬಣ್ಣಿಸುತ್ತಾರೆ. ಆದರೆ, ವ್ಯಾಪಾರ ಮಾತುಕತೆಗಳು ಬೌದ್ಧಿಕ ಆಸ್ತಿ ಹಕ್ಕುಗಳ ಮೇಲೆ, ವಿಶೇಷವಾಗಿ ಪೇಟೆಂಟ್ಗಳು ಮತ್ತು ಔಷಧೀಯ ಆವಿಷ್ಕಾರಗಳ ಮೇಲೆ ಹೆಚ್ಚು ಕಠಿಣವಾದ ನಿಬಂಧನೆಗಳನ್ನು ಹೇರಿದರೆ, ಭಾರತದ ಈ ಸ್ಥಾನಮಾನಕ್ಕೆ ಇದರಿಂದ ಧಕ್ಕೆಯಾಗಬಹುದು.

ಇದರ ಸಮಯವು ಗಮನಾರ್ಹವಾಗಿದೆ. ಮೇ 31 ರಂದು 'ವಾಲ್ ಸ್ಟ್ರೀಟ್ ಜರ್ನಲ್' ಪ್ರಕಟಿಸಿದ "ಟ್ರಂಪ್ ಖನಿಜಗಳು, ಆರೋಗ್ಯ ದತ್ತಾಂಶಕ್ಕಾಗಿ ನೆರವು ಬಯಸುತ್ತಿದ್ದಾರೆ; ಆಫ್ರಿಕನ್ ರಾಷ್ಟ್ರಗಳು ವಿರೋಧಿಸುತ್ತಿವೆ" ಎಂಬ ಶೀರ್ಷಿಕೆಯ ವರದಿಯು, ಆರೋಗ್ಯ ನೆರವಿಗೆ ಸಂಬಂಧಿಸಿದ ಅಮೆರಿಕದ ಬೇಡಿಕೆಗಳನ್ನು ಆಫ್ರಿಕಾದ ಹಲವು ಸರ್ಕಾರಗಳು ಹೇಗೆ ವಿರೋಧಿಸಿವೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದೆ.

ವರದಿಯ ಪ್ರಕಾರ, ಜಿಂಬಾಬ್ವೆ, ಘಾನಾ ಮತ್ತು ಜಾಂಬಿಯಾ ದೇಶಗಳು, ಟ್ರಂಪ್ ಆಡಳಿತದ 'ಅಮೆರಿಕಾ ಫಸ್ಟ್' ವಿದೇಶಿ ನೆರವು ನೀತಿಗಳಿಗೆ 'ಇಲ್ಲ' ಎಂದು ಹೇಳಿವೆ ಅಥವಾ ಮಾತುಕತೆಗಳನ್ನು ಮುಂದೂಡಿವೆ. ಈ ನೀತಿಯು ಆರೋಗ್ಯ ನೆರವನ್ನು ಅಮೆರಿಕದ ರಾಜತಾಂತ್ರಿಕ ಮತ್ತು ಭದ್ರತಾ ಗುರಿಗಳಿಗೆ ನೇರವಾಗಿ ಜೋಡಿಸುವ ಗುರಿಯನ್ನು ಹೊಂದಿದೆ.

ಖಾಸಗಿ ವೈದ್ಯಕೀಯ ದತ್ತಾಂಶಗಳಿಗೆ ಪ್ರವೇಶ ಮತ್ತು ಕೆಲವು ಸಂದರ್ಭಗಳಲ್ಲಿ ಖನಿಜ ಸಂಪನ್ಮೂಲಗಳಿಗೆ ಸಂಬಂಧಿಸಿದ ಅಮೆರಿಕದ ಬೇಡಿಕೆಗಳನ್ನು ಆ ಸರ್ಕಾರಗಳು ವಿರೋಧಿಸುತ್ತಿವೆ ಎಂದು ವರದಿಯು ಮತ್ತಷ್ಟು ಗಮನಸೆಳೆದಿದೆ.

ಕೃಷಿ, ಡಿಜಿಟಲ್ ವ್ಯಾಪಾರ, ಔಷಧೀಯ ಅಥವಾ ಅಭಿವೃದ್ಧಿ ನೆರವು - ಯಾವುದೇ ಕ್ಷೇತ್ರವಿರಲಿ, ಒಂದು ಸಾಮಾನ್ಯ ಮಾದರಿಯು ಹೊರಹೊಮ್ಮುತ್ತಿದೆ: ಅದೆಂದರೆ ಅಪಾರ ಆರ್ಥಿಕ ಬಲದ ಬೆಂಬಲದೊಂದಿಗೆ ನಡೆಯುವ ಗರಿಷ್ಠ ಮಟ್ಟದ ಚೌಕಾಶಿ.

ನೀತಿ ಸಾರ್ವಭೌಮತ್ವದ ಪ್ರಶ್ನೆಗಳು

ಅಪಾಯಕಾರಿ ಸಾಧ್ಯತೆಯೆಂದರೆ, ಭಾರತವು ಇದೇ ರೀತಿಯ ಒತ್ತಡದ ಅಡಿಯಲ್ಲಿ ತನ್ನ ದೀರ್ಘಕಾಲದ ಹಲವು ನಿಲುವುಗಳನ್ನು ಈಗಾಗಲೇ ದುರ್ಬಲಗೊಳಿಸಿರುವ ಅಥವಾ ಕೈಬಿಟ್ಟಿರುವ ಸಾಧ್ಯತೆ ಇರುತ್ತದೆ.

ವ್ಯಾಪಾರ ಒಪ್ಪಂದಗಳನ್ನು ಸಾಮಾನ್ಯವಾಗಿ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಸಾಧನಗಳಾಗಿ ಬಿಂಬಿಸಲಾಗುತ್ತದೆ. ಆದರೆ, ಒಂದು ದೇಶವು ಅಗಾಧವಾದ ಶಕ್ತಿಯ ಸ್ಥಾನದಿಂದ ಮತ್ತು ಇನ್ನೊಂದು ರಾಜಕೀಯ ತುರ್ತುಸ್ಥಿತಿಯಿಂದ ಮಾತುಕತೆ ನಡೆಸಿದಾಗ, ಅವು ಸಮಾನವಲ್ಲದ ರಿಯಾಯಿತಿಗಳಿಗೆ ದಾರಿ ಮಾಡಿಕೊಡಬಹುದು.

ಇತಿಹಾಸವು ನಮಗೆ ಎಚ್ಚರಿಕೆಯ ಪಾಠವನ್ನು ನೀಡುತ್ತದೆ. ಸಿರಾಜ್-ಉದ್-ದೌಲನು ತನ್ನ ವಿರುದ್ಧ ಅಧಿಕಾರದ ಸಮತೋಲನವು ಬದಲಾಗುವವರೆಗೂ ಈಸ್ಟ್ ಇಂಡಿಯಾ ಕಂಪನಿಯ ಅತಿಕ್ರಮಣವನ್ನು ವಿರೋಧಿಸಿದ್ದ ಎಂಬುದನ್ನು ನೆನಪಿಸಿಕೊಳ್ಳಬೇಕು.

ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿರಬಹುದು, ಆದರೆ ಮೂಲಭೂತ ಪ್ರಶ್ನೆ ಮಾತ್ರ ಚಿರಪರಿಚಿತವಾಗಿಯೇ ಉಳಿದಿದೆ: ಬಾಹ್ಯ ಒತ್ತಡದ ಎದುರು ಭಾರತವು ತನ್ನ ನೀತಿ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬಲ್ಲದೇ, ಅಥವಾ ಪ್ರಪಂಚದ ಈ ಶೋಷಕ ಪ್ರಾಬಲ್ಯದ ಮುಂದೆ ನಿಧಾನವಾಗಿ ಮಣಿಯುತ್ತಿದೆಯೇ?

ಇದಕ್ಕೆ ಉತ್ತರವು ಇಂದಿನ ಸಾರ್ವಜನಿಕ ಘೋಷಣೆಗಳಲ್ಲಿ ಸಿಗದಿರಬಹುದು; ಬದಲಾಗಿ, ಒಪ್ಪಂದದ ಸಣ್ಣ ಅಕ್ಷರಗಳಲ್ಲಿ ಆಳವಾಗಿ ಅಡಗಿರುವ ಬದ್ಧತೆಗಳಲ್ಲಿ ಅಡಗಿದ್ದರೆ ಅಚ್ಚರಿಯೇನೂ ಇಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story