
ಕೊಲಂಬೊದಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿರಬಹುದು. ಆದರೆ ಲಂಕಾ ತಂಡದ ಅದ್ಭುತ ಹೋರಾಟ ಟೆಸ್ಟ್ ಕ್ರಿಕೆಟ್‌ಗೆ ಅತ್ಯಗತ್ಯವಾದ ಅನಿಶ್ಚಿತತೆ ಮತ್ತು ಹೋರಾಟದ ಛಾತಿಯನ್ನು ಎತ್ತಿ ತೋರಿಸಿದೆ…
ಇತ್ತೀಚೆಗಷ್ಟೇ ಮುಕ್ತಾಯ ಕಂಡಿರುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯನ್ನು ಹತ್ತಿರದಿಂದ ಗಮನಿಸದೇ ಇರುವವರಿಗೆ ಸ್ಕೋರ್‌ಬೋರ್ಡ್ ಅತ್ಯಂತ ಗೌರವಾನ್ವಿತವಾಗಿ ಕಾಣಿಸುತ್ತದೆ. ಭಾರತವು ತನ್ನ ದೇಶದಿಂದ ಹೊರಗೆ 1-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಸ್ಕೋರ್‌ಕಾರ್ಡ್ ಕೂಡ ಸಾಕಷ್ಟು ನಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸುತ್ತದೆ. ಮಾನವ್ ಸುತಾರ್ ಟೆಸ್ಟ್ ಕ್ರಿಕೆಟ್‌ನ ಗಂಭೀರ ಆಯ್ಕೆಯಾಗಿ ಹೊರಹೊಮ್ಮಿದರು. ಶುಭಮನ್ ಗಿಲ್ ತಮ್ಮ ನಾಯಕತ್ವದ ಮೊದಲ ವಿದೇಶಿ ಸರಣಿ ಜಯವನ್ನು ದಾಖಲಿಸಿದರು.
ಆದರೆ ಈ ಸರಣಿಯಲ್ಲಿ ಕಣ್ಣಿಗೆ ಕಟ್ಟುವ ಅತ್ಯಂತ ಸ್ಮರಣೀಯ ದೃಶ್ಯವೆಂದರೆ ಕೊಲಂಬೊದಲ್ಲಿ ಕ್ರೀಸ್‌ನಲ್ಲಿ ಜಿದ್ದಿಗೆ ಬಿದ್ದವರಂತೆ ನಿಂತು 133 ರನ್ ಗಳಿಸಿ ಅಜೇಯರಾಗಿ ಉಳಿದ ಸೋನಾಲ್ ದಿನುಷಾ ಎಂಬ ಲಂಕಾ ಆಟಗಾರ. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತಕ್ಕೆ ಬಹುತೇಕ ಖಚಿತವಾಗಿದ್ದ ಗೆಲುವಿಗೆ ಕಡಿವಾಣಹಾಕುವಲ್ಲಿ ಅವರು ಯಶಸ್ವಿಯಾದರು.
ಗೆಲುವು ಮೀರಿದ ರೋಚಕತೆ
ಈ ಟೆಸ್ಟ್ ಕ್ರಿಕೆಟ್ ಹೆಚ್ಚು ಮೌಲ್ಯಯುತವಾದುದನ್ನು ಗಳಿಸಿದೆ ಎಂಬುದನ್ನು ಒಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯಾಗಿ ಇದನ್ನು ಕೊಂಡಾಡಬೇಕು. ಕೊಲಂಬೊ ಪಂದ್ಯದಲ್ಲಿ ಐದು ದಿನಗಳ ಕಾಲವೂ ಲಂಕಾ ತಂಡ ತಾನೊಂದು ದುರ್ಬಲ ತಂಡ ಅಲ್ಲ ಎಂಬುದನ್ನು ಸಾಬೀತುಪಡಿಸಲು ಹೋರಾಟ ನಡೆಸಿತು. ಬಲಿಷ್ಠ ತಂಡವೊಂದು ಬಯಸುವ ರೀತಿಯಲ್ಲಿಯೇ ಭಾರತವು ಲಂಕಾವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಒಂಭತ್ತು ವಿಕೆಟ್‌ಗಳಿಗೆ 503 ರನ್ ಕಲೆಹಾಕಿದ ಬಳಿಕ ಭಾರತವು ಲಂಕಾ ತಂಡವನ್ನು 290ಕ್ಕೆ ಆಲೌಟ್ ಮಾಡಿ ಫಾಲೋ-ಆನ್ ಹೇರಿತು. ಇಲ್ಲಿನ ಸಮೀಕರಣವು ಅತ್ಯಂತ ಸರಳವಾಗಿತ್ತು. ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಭಾರತಕ್ಕೆ ಕೇವಲ ಹತ್ತು ವಿಕೆಟ್‌ಗಳು.
ಬದಲಿಗೆ, ಶ್ರೀಲಂಕಾವೇ ದಿಟ್ಟವಾಗಿ ಬ್ಯಾಟಿಂಗ್ ಮಾಡುವ ಮೂಲಕ ಸಂಕಷ್ಟದಿಂದ ಹೊರಬಂತು. ದಿನುಷಾ ತಮ್ಮ ಮೊದಲ ಇನ್ನಿಂಗ್ಸ್ ಶತಕದ ನಂತರ ಮತ್ತೊಂದು ಶತಕವನ್ನು ಸಿಡಿಸಿದರು; ಇದು ಈ ಸರಣಿಯಲ್ಲಿ ಅವರ ಮೂರನೇ ಸೆಂಚುರಿ. ಕೇಶರ ನುವಂತ ಮತ್ತು ಕೆಳಕ್ರಮದ ಬ್ಯಾಟ್ಸ್‌ಮನ್‌ಗಳು ಅವರೊಂದಿಗೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು. ಭಾರತದ ದೃಷ್ಟಿಕೋನದಿಂದ ಹೇಳುವುದಾದರೆ ನಿಧಾನವಾಗಿ ಮತ್ತು ಕಷ್ಟಪಟ್ಟು, ಲಂಕಾ ತಂಡವು ತನ್ನ ಪಾಲಿಗೆ ಖಚಿತವಾಗಿದ್ದ ಸೋಲನ್ನು ರೋಚಕ ಡ್ರಾ ಆಗಿ ಪರಿವರ್ತಿಸಿತು.
ಬಲಿಷ್ಠ ತಂಡಗಳ ಮಹಾಕದನ
ವಿಶ್ವ ಟೆಸ್ಟ್ ಚಾಂಪಿಯನ್‌ನಶಿಪ್ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನಕ್ಕೆ ಕುಸಿದಿದ್ದು, ತಪ್ಪಿಹೋದ ಈ ಗೆಲುವಿನಿಂದಾಗಿ ಫೈನಲ್ ತಲುಪುವ ಮಾರ್ಗವು ಮತ್ತಷ್ಟು ಕಠಿಣವಾಯಿತು. ಆದರೆ ಕೊಲಂಬೊ ಪಂದ್ಯವನ್ನು ಬೇರೆಯೇ ಕೋನದಿಂದ ನೋಡುವ ಅವಕಾಶವಿತ್ತು. ಟೆಸ್ಟ್ ಕ್ರಿಕೆಟ್‌ನ ಸಾಂಪ್ರದಾಯಿಕ ಬಲಾಢ್ಯ ರಚನೆಯ ಹೊರಗಿರುವ ತಂಡವೊಂದು, ದೈತ್ಯ ತಂಡಗಳಲ್ಲಿ ಒಂದರ ವಿರುದ್ಧ ಗಟ್ಟಿಯಾಗಿ ನಿಂತು ಸುಲಭವಾಗಿ ಶರಣಾಗಲು ನಿರಾಕರಿಸಿತು.
ಟೆಸ್ಟ್ ಕ್ರಿಕೆಟ್‌ಗೆ ಇಂತಹ ಕ್ಷಣಗಳನ್ನು ವಿಭಿನ್ನವಾಗಿ ನೋಡುವ ಅಗತ್ಯ ಈಗ ಹೆಚ್ಚಿದೆ. ಅದರ ಭವಿಷ್ಯವು ಕೇವಲ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ದೊಡ್ಡ ಪಂದ್ಯಗಳನ್ನು ಆಡುವುದರ ಮೇಲೆ ಮಾತ್ರ ನಿಂತಿದ್ದರೆ, ಈ ಸ್ವರೂಪವು ಉಳಿಯಲು ಸಾಧ್ಯವಿಲ್ಲ; ಕನಿಷ್ಠ ನಮಗೆ ತಿಳಿದಿರುವ ರೂಪದಲ್ಲಿ ಖಂಡಿತ ಉಳಿಯುವುದಿಲ್ಲ. ಆ ಪಂದ್ಯಗಳಿಗೆ ಇತಿಹಾಸವಿದೆ, ದೊಡ್ಡ ಪ್ರೇಕ್ಷಕರ ಬೆಂಬಲವಿದೆ ಮತ್ತು ಮುಖ್ಯವಾಗಿ ಹಣವಿದೆ ಎಂಬುದು ಗಮನಿಸಬೇಕಾದ ಸಂಗತಿಗಳು.
ಸಮತೋಲನ ಇಲ್ಲದ ಟೆಸ್ಟ್ ಕ್ರಿಕೆಟ್
ಈ ಮೂರು ತಂಡಗಳನ್ನು ಹೊರತುಪಡಿಸಿದ ಕ್ರಿಕೆಟ್ ಜಗತ್ತಿನಲ್ಲಿ ಉಳಿದಿರುವುದು ಬಹಳ ಕಡಿಮೆ ಸಂಗತಿಗಳು. ಮತ್ತು ಆ ಅಂತರವನ್ನು ಕಡೆಗಣಿಸುವುದು ಈಗ ಕಷ್ಟವಾಗುತ್ತಿದೆ. ಭಾರತವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮಾರುಕಟ್ಟೆ ಮಾತ್ರವಲ್ಲ, ಆಧುನಿಕ ಆಟವನ್ನು ಸುತ್ತುವರಿಯುವ ಹಣಕಾಸಿನ ಕೇಂದ್ರಬಿಂದುವೂ ಆಗಿದೆ. 2024-25ನೇ ಸಾಲಿನ ಬಿಸಿಸಿಐನ ಪರಿಶೋಧಿತ ಖಾತೆಗಳ ಪ್ರಕಾರ, 2024ರ ಐಪಿಎಲ್ ಒಟ್ಟು 11,703.69 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಭಾರತೀಯ ಕ್ರಿಕೆಟ್‌ನ ಆರ್ಥಿಕ ಶಕ್ತಿಯು ಈಗ ಸಾಂಪ್ರದಾಯಿಕ ದ್ವಿಪಕ್ಷೀಯ ಕ್ಯಾಲೆಂಡರ್‌ಗಿಂತ ಹೆಚ್ಚಾಗಿ ಫ್ರಾಂಚೈಸಿ ವ್ಯವಸ್ಥೆಯ ಸುತ್ತ ಕೇಂದ್ರೀಕೃತವಾಗಿದೆ.
2023-27ರ ಅವಧಿಯ ಐಪಿಎಲ್‌ನ ಐದು ವರ್ಷಗಳ ಮಾಧ್ಯಮ ಹಕ್ಕುಗಳ ಒಪ್ಪಂದವು 48,390 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಐಸಿಸಿಯ ಪ್ರಸ್ತುತ ಆದಾಯ ಹಂಚಿಕೆ ಮಾದರಿಯ ಅಡಿಯಲ್ಲಿ, 2024 ಮತ್ತು 2027ರ ನಡುವೆ ಬಿಸಿಸಿಐ ವಾರ್ಷಿಕ ಐಸಿಸಿ ಆದಾಯ ಪೂಲ್‌ನ ಸುಮಾರು 38.5 ಪ್ರತಿಶತದಷ್ಟು ಭಾಗವನ್ನು, ಅಂದರೆ ವರ್ಷಕ್ಕೆ ಸರಿಸುಮಾರು 230 ಮಿಲಿಯನ್ ಡಾಲರ್‌ಗಳನ್ನು ಸ್ವೀಕರಿಸಲು ಸಜ್ಜಾಗಿದೆ.
ವಿಸ್ತಾರಗೊಳ್ಳುತ್ತಿರುವ ಅಂತರ
ಆದರೆ ಇದು ದೊಡ್ಡ ಪ್ರಶ್ನೆಯೊಂದನ್ನು ಹುಟ್ಟಿಗೆ ಕಾರಣವಾಗುತ್ತದೆ. ಆಟದ ಶ್ರೀಮಂತ ಭಾಗವೇ ಇಷ್ಟು ಬಲಗೊಂಡರೆ, ಉಳಿದವರು ಅವರ ವೇಗವನ್ನು ಸರಿಗಟ್ಟಲು ಹೆಣಗಾಡುವಂತಾಗುತ್ತದೆ; ಆಗ ಏನಾಗುತ್ತದೆ? ಸಣ್ಣ ಕ್ರಿಕೆಟ್ ಮಂಡಳಿಗಳಿಗೆ, ಟೆಸ್ಟ್ ಕ್ರಿಕೆಟ್ ಎನ್ನುವುದು ಸಾಮಾನ್ಯವಾಗಿ ಆರ್ಥಿಕ ವಿಚಾರದಲ್ಲಿ ಸವಾಲಾಗಿರುತ್ತದೆ. ಪ್ರಸ್ತುತ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ನಶಿಪ್ ಆವರ್ತನದಲ್ಲಿ ಶ್ರೀಲಂಕಾ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ; ಇಲ್ಲಿ ಎಲ್ಲಾ ಒಂಬತ್ತು ತಂಡಗಳು ಆರು ಎದುರಾಳಿಗಳ ವಿರುದ್ಧ ಆಡುತ್ತವೆ, ಆದರೆ ಸರಣಿಯು ದೀರ್ಘವಾಗಿರುವುದರಿಂದ ಟೆಸ್ಟ್‌ಗಳ ಸಂಖ್ಯೆಯಲ್ಲಿ ತೀವ್ರ ವ್ಯತ್ಯಾಸವಿದೆ. ಆಸ್ಟ್ರೇಲಿಯಾವು 22 ಟೆಸ್ಟ್‌ಗಳನ್ನು, ಇಂಗ್ಲೆಂಡ್ 21 ಮತ್ತು ಭಾರತ 18 ಟೆಸ್ಟ್‌ಗಳನ್ನು ಆಡಲು ವೇಳಾಪಟ್ಟಿ ನಿಗದಿಯಾಗಿದೆ. ಆದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಕೇವಲ 12 ಪಂದ್ಯಗಳು ಮಾತ್ರ ಇವೆ.
ದೊಡ್ಡ ತಂಡಗಳು ಬಲವಾದ ದೇಶೀಯ ವ್ಯವಸ್ಥೆ, ದೊಡ್ಡ ಪ್ರಸಾರ ಮಾರುಕಟ್ಟೆ ಮತ್ತು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿವೆ. ಉಳಿದ ತಂಡಗಳು ಕಡಿಮೆ ಪಂದ್ಯಗಳನ್ನು ಆಡುತ್ತಲೇ ಸುಧಾರಿಸಿಕೊಳ್ಳಬೇಕಾಗುತ್ತದೆ. ಬಲಿಷ್ಠ ತಂಡಗಳು ತಾವು ಗಟ್ಟಿಮುಟ್ಟಾಗಿರಲು ಬೇಕಾದ ಮೂಲಸೌಕರ್ಯವನ್ನು ಹೊಂದಿರುವುದರಿಂದ ಅವು ಹಾಗೆಯೇ ಉಳಿಯುತ್ತವೆ, ಆದರೆ ದುರ್ಬಲ ತಂಡಗಳು ಅವಕಾಶಗಳೇ ಇಲ್ಲದೆ ಪರದಾಡುತ್ತವೆ.
ಇದು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಟೆಸ್ಟ್ ಕ್ರಿಕೆಟ್‌ನ್ನು ಉಳಿಸಲು ಪ್ರಯತ್ನಿಸುತ್ತಿರುವ ಇತರ ರಾಷ್ಟ್ರಗಳಿಗೆ ಶುಭ ಸೂಚನೆಗಳಲ್ಲ. ಆದರೆ ಆಟದ ಅತಿ ದೊಡ್ಡ ಆರ್ಥಿಕ ಶಕ್ತಿಯೇ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಗಂಭೀರವಾಗಿ ಯೋಚಿಸಬೇಕಾದ ಅಂಶವಾಗಿದೆ. ಇದು ಭಾರತಕ್ಕೂ ಕೂಡ ಒಮ್ಮೊಮ್ಮೆ ಒಳ್ಳೆಯದಲ್ಲ. ಕ್ರೀಡೆಯ ಸೌಂದರ್ಯ ಅಡಗಿರುವುದೇ ಅನಿಶ್ಚಿತತೆಯಲ್ಲಿ. ಫೇವರಿಟ್ ತಂಡವೊಂದು ನಾಲ್ಕು ದಿನಗಳವರೆಗೆ ಪ್ರಾಬಲ್ಯ ಮೆರೆದರೂ ಅಂತಿಮವಾಗಿ ಗೆಲ್ಲಲು ವಿಫಲವಾಗಬಹುದು. ದೇಶದ ಹೊರಗೆ ಯಾರಿಗೂ ತಿಳಿಯದ ಯುವ ಬ್ಯಾಟ್ಸ್‌ಮನ್ ಒಬ್ಬರು ಇದ್ದಕ್ಕಿದ್ದಂತೆ ದೈತ್ಯ ತಂಡವೊಂದು ನಿರಾಶೆಯಿಂದ ಮನೆಗೆ ತೆರಳಲು ಕಾರಣರಾಗಬಹುದು.
ಅಪರೂಪದ ಗೆಲುವಿನ ಮೌಲ್ಯ
ಕೊಲಂಬೊದಲ್ಲಿ ದಿನುಷಾ ಮಾಡಿದ್ದೂ ಅದೇ. ಬಾಂಗ್ಲಾದೇಶವು ಆಸ್ಟ್ರೇಲಿಯಾದಲ್ಲಿ ಅದಕ್ಕಿಂತಲೂ ರೋಚಕವಾದ ಸಾಧನೆ ಮಾಡಿತು. ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ಡಾರ್ವಿನ್‌ಗೆ ಬಂದ ಆ ತಂಡವು ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು; ಇದು ಬಾಂಗ್ಲಾದೇಶದ ಟೆಸ್ಟ್ ಇತಿಹಾಸದ ಅತ್ಯಂತ ಗಮನಾರ್ಹ ಫಲಿತಾಂಶಗಳಲ್ಲಿ ಒಂದು. ಆಸ್ಟ್ರೇಲಿಯಾವು ಎರಡನೇ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 51 ರನ್‌ಗಳಿಂದ ಭರ್ಜರಿ ಕಮ್‌ಬ್ಯಾಕ್ ಮಾಡಿತಾದರೂ, ಸರಣಿಯು 1-1 ಸಮಬಲದಲ್ಲಿ ಮುಕ್ತಾಯಗೊಂಡಿತು. ಬಾಂಗ್ಲಾದೇಶವು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿ, ವಿಶ್ವದ ಅತ್ಯಂತ ಯಶಸ್ವಿ ಟೆಸ್ಟ್ ತಂಡಗಳಲ್ಲಿ ಒಂದಕ್ಕೆ ಸರಣಿ ಗೆಲುವನ್ನು ತಪ್ಪಿಸಿತ್ತು ಎಂಬುದು ಸುಲಭದ ಮಾತೇನೂ ಅಲ್ಲ.
ಇಂತಹ ಕ್ಷಣಗಳೇ ಜನರನ್ನು ಟೆಸ್ಟ್ ಪಂದ್ಯ ವೀಕ್ಷಿಸುವಂತೆ ಪ್ರೇರೇಪಿಸುತ್ತವೆ. ಇವು ರೋಚಕ ಕಥೆಗಳಾಗಿ ಬದಲಾಗುತ್ತವೆ ಮತ್ತು ಸ್ಕೋರ್‌ಕಾರ್ಡ್‌ಗಳನ್ನು ಮೀರಿ ವಿಸ್ತರಿಸುವ ಈ ಕಥೆಗಳು ಆಟದ ಬಗ್ಗೆ ಆಸಕ್ತಿಯನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ಮರಳಿ ಕ್ರೀಡೆಯತ್ತ ಕರೆತರುತ್ತವೆ. ಮತ್ತು ಎಲ್ಲಿ ಪ್ರೇಕ್ಷಕರಿರುತ್ತಾರೋ, ಅಲ್ಲಿ ಅಂತಿಮವಾಗಿ ಮೌಲ್ಯವೂ ಇರುತ್ತದೆ.
ಬಲಿಷ್ಠ ಟೆಸ್ಟ್ ವ್ಯವಸ್ಥೆಯ ಅಗತ್ಯ
ನಿಜವಾದ ಸ್ಪರ್ಧಾತ್ಮಕ ತಂಡಗಳ ಗುಂಪು ಎಷ್ಟು ದೊಡ್ಡದಿರುತ್ತದೋ, ಪಂದ್ಯಗಳು ಕೂಡ ಅಷ್ಟೇ ಉತ್ತಮವಾಗಿರುತ್ತವೆ. ಐಪಿಎಲ್ ಕ್ರಿಕೆಟ್‌ನ ವಾಣಿಜ್ಯಲೋಕದ ಕೇಂದ್ರಬಿಂದುವಾಗಿ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಆಗಬೇಕಾದ ಕಾರಣವಿಲ್ಲ, ಹಾಗಾಗಬಾರದು ಕೂಡ. ಆದರೆ ಫ್ರಾಂಚೈಸಿ ಕ್ರಿಕೆಟ್‌ನ ಯಶಸ್ಸು, ದೊಡ್ಡ ಮಾರುಕಟ್ಟೆಗಳ ಹೊರಗಿನ ಟೆಸ್ಟ್ ಕ್ರಿಕೆಟ್‌ನ್ನು ನಿಧಾನವಾಗಿ ಕಡೆಗಣಿಸುವಂತಾಗಬಾರದು.
ಬಲಿಷ್ಠ ಟೆಸ್ಟ್ ಪರಿಸರ ವ್ಯವಸ್ಥೆಗಾಗಿ ಇರುವ ವಾಣಿಜ್ಯ ತರ್ಕವು ವಾಸ್ತವವಾಗಿ ತುಂಬಾ ಸರಳವಾಗಿದೆ. ಹೆಚ್ಚಿನ ತಂಡಗಳು ದೈತ್ಯರನ್ನು ಎದುರಿಸಲು ಸಮರ್ಥರಾದರೆ, ಹೆಚ್ಚಿನ ಪಂದ್ಯಗಳು ನೈಜ ಅನಿಶ್ಚಿತತೆಯನ್ನು ಹೊಂದಿರುತ್ತವೆ. ಆ ದೇಶಗಳಿಂದ ಹೆಚ್ಚಿನ ಯುವ ಆಟಗಾರರು ಹೊರಹೊಮ್ಮಿದರೆ, ಸ್ಥಳೀಯ ಪ್ರೇಕ್ಷಕರಿಗೆ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಿರುತ್ತದೆ. ಮತ್ತು ಪ್ರೇಕ್ಷಕರಿಗೆ ಆಸಕ್ತಿ ಇದ್ದರೆ, ಪ್ರಸಾರಕರು ಮತ್ತು ಪ್ರಾಯೋಜಕರು ಹೂಡಿಕೆ ಮಾಡಲು ಕಾರಣವಿರುತ್ತದೆ.
ಕೇವಲ ಅಂಕಪಟ್ಟಿಯಲ್ಲ
ವಿಶ್ವ ಟೆಸ್ಟ್ ಚಾಂಪಿಯನ್‌ನಶಿಪ್ ದ್ವಿಪಕ್ಷೀಯ ಟೆಸ್ಟ್‌ಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕಿತ್ತು, ಮತ್ತು ಇದು ಖಂಡಿತವಾಗಿಯೂ ಡ್ರಾ ಹಾಗೂ ಸೋಲುಗಳಿಗೆ ಹೆಚ್ಚಿನ ಅರ್ಥವನ್ನು ತಂದುಕೊಟ್ಟಿದೆ. ಆದರೆ ಕೇವಲ ಅಂಕಪಟ್ಟಿಯು ಬಲಿಷ್ಠ ಟೆಸ್ಟ್ ತಂಡವನ್ನು ಸೃಷ್ಟಿಸಲು ಸಾಧ್ಯವಿಲ್ಲ. ತಂಡಗಳಿಗೆ ಅರ್ಥಪೂರ್ಣ ಸರಣಿಗಳು, ಉತ್ತಮ ದೇಶೀಯ ರೆಡ್-ಬಾಲ್ ರೂಪಗಳು, ಆಟಗಾರರನ್ನು ಅಭಿವೃದ್ಧಿಪಡಿಸಲು ಸಮಯ ಹಾಗೂ ಹಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಆಟಗಾರರು ಹಾಗೂ ಬೆಂಬಲಿಗರು ಈ ಹೋರಾಟವು ಯೋಗ್ಯವಾದುದು ಎಂದು ನಂಬುವಂತೆ ಮಾಡುವ ಅಪರೂಪದ ಗೆಲುವುಗಳ ಅಗತ್ಯವಿರುತ್ತದೆ.
ಭಾರತವು ತಾನು ಬಯಸಿದ್ದನ್ನು ಸಾಕಷ್ಟು ಪಡೆದುಕೊಂಡಿದೆ. ಅದು ಸರಣಿಯನ್ನು ಗೆದ್ದುಕೊಂಡಿತು ಮತ್ತು ಭವಿಷ್ಯಕ್ಕಾಗಿ ಕೆಲವು ಭರವಸೆಯ ಆಟಗಾರರನ್ನು ಕಂಡುಕೊಂಡಿತು.
ಶ್ರೀಲಂಕಾ ಕೂಡ ಈ ಟೆಸ್ಟ್‌ನಿಂದ ಹೊಸತನ್ನು ದಕ್ಕಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಬಹುಶಃ, ಟೆಸ್ಟ್ ಕ್ರಿಕೆಟ್‌ಗೂ ಕೂಡ ಸಿಕ್ಕಿದೆ. ಬಲಿಷ್ಠರನ್ನು ಬೆವರು ಹರಿಸುವಂತೆ ಮಾಡುವ ಸಾಮರ್ಥ್ಯವಿರುವ ತಂಡಗಳ ಉದಯವನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕು ಮತ್ತು ಆಚರಿಸಬೇಕು ಕೂಡ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


