
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ವಲಸಿಗರ ಗಡಿಪಾರು ವಿಚಾರದಲ್ಲಿ ಉಂಟಾಗಿರುವ ಗಡಿ ಉದ್ವಿಗ್ನತೆಯಿಂದಾಗಿ ಆರ್ಥಿಕ ಅವಕಾಶಗಳು ಹಾಗೂ ಬಾಂಗ್ಲಾ ಜೊತೆಗಿನ ಸಂಬಂಧ ಸುಧಾರಿಸುವ ಪ್ರಯತ್ನಗಳನ್ನು ಹಳಿ ತಪ್ಪಿಸುವ ಅಪಾಯ ತಂದೊಡ್ಡಿದೆ.
ಬಾಂಗ್ಲಾದೇಶಕ್ಕೆ ನೇಮಕವಾಗಿರುವ ಭಾರತದ ನೂತನ ಹೈಕಮಿಷನರ್ ದಿನೇಶ್ ತ್ರಿವೇದಿ ಅವರು ಢಾಕಾದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಎರಡು ನೆರೆಹೊರೆಯ ರಾಷ್ಟ್ರಗಳು ಒಟ್ಟಾಗಿ ಬೆಳೆದರೆ ಅದ್ಭುತ ಪ್ರಜಾಪ್ರಭುತ್ವಗಳಾಗುತ್ತವೆ. ಹಾಗೆ ಆಗಬೇಕು ಕೂಡ ಎಂದು ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಹೇಳಿದ್ದಾರೆ. ಆ ಮೂಲಕ ಅವರು ಸರಿಯಾದ ಸಂದೇಶವನ್ನೇ ರವಾನಿಸಿದ್ದಾರೆ. ಭಾರತಕ್ಕೆ ಬಾಂಗ್ಲಾದೇಶದ ಅಗತ್ಯ ಎಷ್ಟಿದೆಯೋ ಬಾಂಗ್ಲಾದೇಶಕ್ಕೂ ಭಾರತದ ಅಗತ್ಯ ಅಷ್ಟೇ ಇದೆ ಎಂಬ ಪರಸ್ಪರ ಪೂರಕವಾಗಿರುವ ಈ ಅಂಶಕ್ಕೆ ನೀಡಿರುವ ಒತ್ತು ಅತ್ಯಂತ ಸಮಯೋಚಿತವಾಗಿದೆ.
ಬಾಂಗ್ಲಾದೇಶವು ಪ್ರಬಲ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿರುವುದು ತುಲನಾತ್ಮಕವಾಗಿ ಅಭಿವೃದ್ಧಿ ಹೊಂದದ ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಯೂನಸ್ ನೇತೃತ್ವದ ಹಂಗಾಮಿ ಆಡಳಿತದ ಅವಧಿಯಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲಿನ ದಾಳಿಯ ನಂತರ ವಿಧಿಸಲಾದ ವೀಸಾ ನಿರ್ಬಂಧಗಳ ಫಲವಾಗಿ ಕೊಲ್ಕತ್ತಾದ ಚಿಲ್ಲರೆ ವ್ಯಾಪಾರ, ಹೋಟೆಲ್ ಮತ್ತು ಆರೋಗ್ಯ ವಲಯಗಳು ಬಾಂಗ್ಲಾದೇಶದ ಹೇಗೆ ಗ್ರಾಹಕರನ್ನು ಕಳೆದುಕೊಳ್ಳುವಂತಾಯಿತು ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.
ಇನ್ನೊಂದು ಕಡೆ ಬಾಂಗ್ಲಾದೇಶದ ಬೆಳೆಯುತ್ತಿರುವ ಕೈಗಾರಿಕೆಗಳಿಗೆ ಹೆಚ್ಚುತ್ತಿರುವ ರಫ್ತು ಪ್ರಮಾಣವನ್ನು ನಿರ್ವಹಿಸಲು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಬಂದರು ಮೂಲಸೌಕರ್ಯಗಳಿಗೆ ಪ್ರವೇಶದ ಅಗತ್ಯ ಹೆಚ್ಚಾಗಿದೆ. ಯೂನಸ್ ನೇತೃತ್ವದ ಆಡಳಿತ ತೋರಿದ ಅಸ್ಪಷ್ಟ ವೈರತ್ವಕ್ಕೆ ಭಾರತ ನೀಡಿದ ಪ್ರತಿಕ್ರಿಯೆಯಿಂದಾಗೀ ಬಾಂಗ್ಲಾ ಈ ಅವಕಾಶವನ್ನು ಕಳೆಕೊಂಡಿತ್ತು. ಆದರೆ ರಾಜಕೀಯ ಸಂಬಂಧಗಳು ಹಗೆತನದ ಅಂಚಿನಲ್ಲಿ ಬಂದು ನಿಂತಿತೆಂದಾದರೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಸುಗಮವಾಗಿ ಸಾಗಲು ಸಾಧ್ಯವಾಗುವುದಿಲ್ಲ.
ಸಂಬಂಧಗಳ ಪ್ರಕ್ಷುಬ್ಧ ಸ್ಥಿತಿ
2024ರ ಆಗಸ್ಟ್ನಲ್ಲಿ ಶೇಖ್ ಹಸೀನಾ ಅವರು ಪದಚ್ಯುತಗೊಂಡ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರಂತಹ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ದಾಳಿಗಳು ನಡೆದು ರಾಜಕೀಯ ವಾತಾವರಣ ಹದಗೆಟ್ಟು ಹೋಗಿತ್ತು. ಇದೀಗ ಬಾಂಗ್ಲಾದೇಶದಿಂದ ಗುರುತಿಸಲಾದ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಭಾರತದ ಪ್ರಯತ್ನಗಳಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಭೀತಿಯನ್ನು ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ಮತ್ತು ಬಾಂಗ್ಲಾದೇಶದ ಗಡಿ ಭದ್ರತಾ ಪಡೆಗಳು ಸ್ಪಷ್ಟವಾಗಿ ಭಿನ್ನ ನಿಲುವುಗಳನ್ನು ತಾಳುತ್ತಿರುವುದು ಆತಂಕ ಹುಟ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬಗಳು ನಿರ್ಜನ ಪ್ರದೇಶದಲ್ಲಿ ಸಿಲುಕಿರುವ ಮತ್ತು ಎರಡೂ ಕಡೆಯವರ ನಡುವೆ ನಲುಗುತ್ತಿರುವ ದೃಶ್ಯಗಳಿರುವ ವಿಡಿಯೋಗಳು ಹರಿದಾಡುತ್ತಿವೆ. ಆಕ್ರೋಶಗೊಂಡ ಸ್ಥಳೀಯರು ಗಡಿ ಭದ್ರತಾ ಪಡೆಗಳ ಬೆಂಬಲಕ್ಕೆ ನಿಂತಿರುವುದು ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಅಶಾಂತಿಯ ನೆರಳು ಭಾರತ ಮತ್ತು ಬಾಂಗ್ಲಾದೇಶದ ಗಡಿ ಭದ್ರತಾ ಪಡೆಗಳ ಇತ್ತೀಚಿನ ವಾರ್ಷಿಕ ಸಭೆಯ ಮೇಲೂ ಬಿದ್ದಿದೆ. ಸಾಮಾನ್ಯವಾಗಿ ಸಭೆಯ ಕೊನೆಯಲ್ಲಿ ಎರಡೂ ನಿಯೋಗಗಳು ನಡೆಸುವ ಸಾಂಪ್ರದಾಯಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಈ ಬಾರಿ ರದ್ದುಗೊಳಿಸಲಾಯಿತು; ಇದು ಚರ್ಚೆಯ ಸಮಯದಲ್ಲಿ ನಡೆದ ಮಾತುಕತೆಗಳಲ್ಲಿ ನುಸುಳಿರುವ ಅಸಮಾಧಾನವನ್ನು ಸೂಚಿಸುತ್ತದೆ. ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಈ ಲೇಖಕರಿಗೆ ತಿಳಿಸಿದಂತೆ, ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಅವರಿಗೆ ವಿರೋಧವಿಲ್ಲವಾದರೂ, ಮತ್ತೆ ಹೊರದಬ್ಬುವ ಕೆಲಸವು ನಿಗದಿತ ಕಾರ್ಯವಿಧಾನಗಳ ಪ್ರಕಾರವೇ ನಡೆಯಬೇಕು. ಅಂದರೆ, ವಿವರಗಳ ವಿನಿಮಯ ಮತ್ತು ಪರಿಶೀಲನೆಗೆ ಸಾಕಷ್ಟು ಸಮಯಾವಕಾಶ ಇರಬೇಕು. ಬಲವಂತವಾಗಿ ಗಡಿಯಾಚೆಗೆ ತಳ್ಳುವ ಕ್ರಮಗಳು ಸ್ವೀಕಾರಾರ್ಹವಲ್ಲ ಎಂಬುದು ಆ ಅಧಿಕಾರಿಯ ಮಾತಿನ ಅರ್ಥವಾಗಿದೆ.
ಚುರುಕಾಯ್ತು ಗಡಿಪಾರು ಪ್ರಕ್ರಿಯೆ
ಮಾರ್ಚ್ನಿಂದ ಪಶ್ಚಿಮ ಬಂಗಾಳದ ನಾನಾ ಗಡಿ ಹೊರಠಾಣೆಗಳ ಮೂಲಕ ಕನಿಷ್ಠ 2,980 "ಅಕ್ರಮ" ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ.
ಬಿಎಸ್ಎಫ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಮೇ 19ರ ನಂತರ ಕನಿಷ್ಠ 1,930 "ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು" ವಾಪಸ್ ಕಳುಹಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮೊದಲು "ಪತ್ತೆ ಮಾಡಿ, ಅಳಿಸಿ ಮತ್ತು ಗಡೀಪಾರು ಮಾಡಿ" (detect, delete and deport) ನೀತಿಯನ್ನು ಘೋಷಿಸಿದ್ದು ಮೇ 19ರಂದು. ಪ್ರಮುಖ ಭಾರತೀಯ ಸುದ್ದಿ ವೆಬ್ತಾಣದಲ್ಲಿನ ವರದಿಯ ಪ್ರಕಾರ, "ಮೇ 19 ಮತ್ತು ಜೂನ್ 10ರ ನಡುವೆ, ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಕನಿಷ್ಠ 1,930 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳದ ಹೊರಠಾಣೆಗಳಿಂದ ವಾಪಸ್ ಕಳುಹಿಸಲಾಗಿದೆ" ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆದರೆ, ಜೂನ್ 7ರಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಕಳೆದ ಒಂದು ತಿಂಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ವ್ಯಾಪ್ತಿಗೆ ಬಾರದ 4,800 "ಅಕ್ರಮ ಒಳನುಸುಳುಕೋರರನ್ನು" ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗಡಿ ಜಿಲ್ಲೆಗಳಲ್ಲಿ ನಿರ್ಮಿಸಲಾದ ಅನೇಕ "ಹೋಲ್ಡಿಂಗ್ ಸೆಂಟರ್ಗಳಲ್ಲಿ" (ಕಾಪಿಡುವ ಕೇಂದ್ರಗಳು) ನೂರಾರು ಮಂದಿಯನ್ನು ಇರಿಸಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರವು ಅಕ್ರಮ ವಲಸಿಗರನ್ನು ಈ ಕೇಂದ್ರಗಳಲ್ಲಿ ಇರಿಸಿಕೊಳ್ಳುವ ಯಾವುದೇ ಇರಾದೆ ಹೊಂದಿಲ್ಲದ ಕಾರಣ, ಈ ಗಡಿಪಾರು ಪ್ರಕ್ರಿಯೆಗಳು ಇನ್ನು ಮುಂದೆ ನಿರಂತರವಾಗಲಿವೆ ಎಂಬುದನ್ನು ಇದು ಸೂಚಿಸುತ್ತದೆ. ಹಿರಿಯ ಸಚಿವ ದಿಲೀಪ್ ಘೋಷ್ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ, ಅಕ್ರಮ ವಲಸಿಗರನ್ನು ಆದಷ್ಟು ಬೇಗ "ಹೋಲ್ಡಿಂಗ್ ಸೆಂಟರ್ಗಳಿಂದ" ಬಿಎಸ್ಎಫ್ಗೆ ಹಸ್ತಾಂತರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಘೋಷ್ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ಗಡಿ ರಾಜಕೀಯ ತೀವ್ರತೆ
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳಲ್ಲಿ ಒಂದಾದ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುವ ಬದ್ಧತೆಯು ಬಿಜೆಪಿಯ ಮುಖ್ಯ ಪ್ರಚಾರದ ಅಸ್ತ್ರವಾಗಿತ್ತು. ಈ ನಿಲುವು ಬಿಜೆಪಿಗೆ ಭಾರಿ ಚುನಾವಣಾ ಲಾಭ ತಂದುಕೊಟ್ಟಿದೆ, ವಿಶೇಷವಾಗಿ ಬಾಂಗ್ಲಾದೇಶದ ಗಡಿಯಲ್ಲಿ ಅಥವಾ ಗಡಿಗೆ ಹೊಂದಿಕೊಂಡಿರುವ ಸುಮಾರು 120 ಕ್ಷೇತ್ರಗಳಲ್ಲಿ ಇದು ದೊಡ್ಡ ಪರಿಣಾಮ ಬೀರಿದೆ. ನಿರಂತರವಾಗಿ ನಡೆಯುತ್ತಿರುವ ಜನಸಂಖ್ಯಾ ಬದಲಾವಣೆ ಕುರಿತಾದ ಬಿಜೆಪಿಯ ವಾದವು ಮತದಾರರಲ್ಲಿ ಹೆಚ್ಚಿನ ಪ್ರಭಾವ ಬೀರಿದೆ.
ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮೊದಲ ನಿರ್ಧಾರಗಳಲ್ಲಿ ಪ್ರಮುಖವಾದುದು ಗಡಿ ಬೇಲಿ ನಿರ್ಮಾಣ ಪೂರ್ಣಗೊಳಿಸಲು ಮತ್ತು ಬಿಎಸ್ಎಫ್ ಅಗತ್ಯವೆಂದು ಭಾವಿಸಿದ ಪ್ರದೇಶಗಳಲ್ಲಿ ಹೊಸ ಗಡಿ ಹೊರಠಾಣೆ ಸ್ಥಾಪಿಸಲು ಭೂಮಿಯನ್ನು ಹಸ್ತಾಂತರಿಸುವುದು. ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ಟಿಎಂಸಿ ಸರ್ಕಾರದ "ಗಡಿ ನಿರ್ವಹಣೆಯ ಬಗೆಗಿನ ಅಸಡ್ಡೆ"ಯಿಂದಾಗಿ ಈ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂಬುದು ಬಿಜೆಪಿ ಆರೋಪವಾಗಿತ್ತು.
ಈ ಪ್ರಕ್ರಿಯೆಯಲ್ಲಿನ ಅವಸರದಿಂದಾಗಿ ಭೂಮಿಯನ್ನು ಗುರುತಿಸುವಿಕೆಯಲ್ಲಿ ಗಂಭೀರ ತಪ್ಪುಗಳಿಗೆ ಕಾರಣವಾಗಬಹುದು. ಕಳೆದ ವರ್ಷದ ಡಿಸೆಂಬರ್ನಲ್ಲಿ, ಸೋನಾಲಿ ಖಾತುನ್ ಎಂಬ ಗೃಹಿಣಿ ಮತ್ತು ಆಕೆಯ ಮಗುವನ್ನು ಬಾಂಗ್ಲಾದೇಶದ ಜೈಲಿನಲ್ಲಿ ಮೂರು ತಿಂಗಳು ಕಳೆದ ನಂತರ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಭಾರತೀಯ ಅಧಿಕಾರಿಗಳು ವಾಪಸ್ ಕರೆತರುವಂತಾಯಿತು. ಮರಳಿದ ಒಂದು ತಿಂಗಳಲ್ಲೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದಳು. ಆದರೆ ಸೋನಾಲಿಯ ಪತಿ ಇನ್ನೂ ಬಾಂಗ್ಲಾದೇಶದ ಜೈಲಿನಲ್ಲಿದ್ದು, ಅವರನ್ನು ಎಷ್ಟು ಬೇಗ ವಾಪಸ್ ಕರೆತರಬಹುದು ಎಂಬುದು ಇನ್ನೂ ಒಗಟಾಗಿ ಉಳಿದಿದೆ.
ಗಡಿ ಉದ್ವಿಗ್ನತೆಯ ಅಪಾಯಗಳು
ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನೇತೃತ್ವದ ಹೊಸ ಸರ್ಕಾರವು ಇಲ್ಲಿಯವರೆಗೆ ಭಾರತದೊಂದಿಗೆ ಸಂಬಂಧವನ್ನು ಸಹಜಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಆದರೆ ಬಿಎನ್ಪಿ ಸಂಸತ್ತಿನಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದ್ದರೂ, ವಿರೋಧ ಪಕ್ಷದಲ್ಲಿರುವ ಜಮಾತ್-ಎ-ಇಸ್ಲಾಮಿ ಬಲವೇ ಜೋರಾಗಿದೆ. ಫೆಬ್ರವರಿ ಚುನಾವಣೆಯಲ್ಲಿ ಈ ಪಕ್ಷವು 68 ಸ್ಥಾನಗಳನ್ನು ಗೆದ್ದುಕೊಂಡಿದೆ. ಹಿಂದಿನ ಗರಿಷ್ಠ 18 ಸ್ಥಾನಗಳಿಗೆ ಹೋಲಿಸಿದರೆ ಇದು ಭಾರಿ ಏರಿಕೆ. ಹಾಗಾಗಿ ಪ್ರಧಾನಿ ತಾರಿಕ್ ರೆಹಮಾನ್ ಅವರ ಬಿಎನ್ಪಿ ಸರ್ಕಾರವು ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಮುಹಮ್ಮದ್ ಯೂನಸ್ ಅವರ ಹಂಗಾಮಿ ಸರ್ಕಾರವು ಅಧಿಕಾರದಲ್ಲಿದ್ದ ಸುಮಾರು ಎರಡು ವರ್ಷಗಳಲ್ಲಿ, ಜಮಾತ್-ಎ-ಇಸ್ಲಾಮಿ ಮತ್ತು ಇತರ ಇಸ್ಲಾಮಿಸ್ಟ್ ಉಗ್ರಗಾಮಿ ಶಕ್ತಿಗಳನ್ನು ಓಲೈಸಿತು. ಜಮಾತ್-ಎ-ಇಸ್ಲಾಮಿ ಗೆದ್ದ 68 ಸ್ಥಾನಗಳಲ್ಲಿ 51 ಸ್ಥಾನಗಳು ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಕ್ಷೇತ್ರಗಳಾಗಿವೆ. ಆದ್ದರಿಂದ, ಭಾರತವು ತನ್ನ 'ಪುಶ್-ಬ್ಯಾಕ್' (ಹೊರದಬ್ಬುವ) ಕ್ರಮಗಳನ್ನು ಮುಂದುವರಿಸಿದರೆ, ತಾರಿಕ್ ರೆಹಮಾನ್ ಅವರ ಸರ್ಕಾರವು ಅದನ್ನು ವಿರೋಧಿಸಲು ತೀವ್ರ ಆಂತರಿಕ ಒತ್ತಡಕ್ಕೆ ಸಿಲುಕುತ್ತದೆ ಎಂಬುದು ಸ್ಪಷ್ಟ. ಇದು ಗಡಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿ, ದ್ವಿಪಕ್ಷೀಯ ಸಂಬಂಧಗಳನ್ನು ಹಳಿತಪ್ಪಿಸಬಹುದು.
ಆದ್ದರಿಂದ, ಸಂಬಂಧಗಳು ಅತ್ಯಂತ ಹದಗೆಟ್ಟಿರುವ ಈ ಸಮಯದಲ್ಲಿ, ಢಾಕಾದಲ್ಲಿ ಭಾರತದ ರಾಯಭಾರಿಯಾಗಿರುವ ಚತುರ ಉದ್ಯಮಿ ಮತ್ತು ರಾಜಕಾರಣಿ ದಿನೇಶ್ ತ್ರಿವೇದಿಯವರ ಕೆಲಸ ಸುಲಭದ ಬಾಬತ್ತಲ್ಲ. ಅದು ಅತ್ಯಂತ ಸವಾಲಿನಿಂದ ಕೂಡಿದೆ. ಅವರ ಸೌಮ್ಯ ವ್ಯಕ್ತಿತ್ವ ಮತ್ತು ಬಂಗಾಳಿ ಭಾಷೆಯ ಮೇಲಿನ ಹಿಡಿತವು ಅವರ ರಾಜತಾಂತ್ರಿಕ ಅನುಭವದ ಕೊರತೆಯನ್ನು ಸರಿದೂಗಿಸಲು ಸಾಕಾದೀತು. ಆದರೆ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯು ಅವರ ಕಾರ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸದಿರಲಿ ಎಂದು ಅವರು ಆಶಿಸಬೇಕಷ್ಟೇ.
ಉದ್ವಿಗ್ನ ಸ್ಥಿತಿಯ ನಡುವೆಯೂ ಆಶಾಕಿರಣ
ಆದರೆ ಪರಿಸ್ಥಿತಿ ಸಂಪೂರ್ಣವಾಗಿ ನಿರಾಶಾದಾಯಕವಾಗಿಲ್ಲ. ಬಾಂಗ್ಲಾದೇಶದಲ್ಲಿ ಜನಿಸಿದ ಆಸ್ಟ್ರೇಲಿಯಾದ ಬಿಲಿಯನೇರ್ ರಾಬಿನ್ ಖುದಾ ಅವರು 2030ರ ವೇಳೆಗೆ ಭಾರತದಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು (30 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡುವ ಯೋಜನೆಯನ್ನು ಘೋಷಿಸಿದ್ದಾರೆ. ಬ್ಲ್ಯಾಕ್ಸ್ಟೋನ್ ಬೆಂಬಲಿತ ಖುದಾ ಅವರ ಹೈಪರ್ಸ್ಕೇಲ್ ಡೇಟಾ ಸೆಂಟರ್ ಕಂಪನಿ 'ಏರ್ ಟ್ರಂಕ್', ಎಐ ಮತ್ತು ಕ್ಲೌಡ್ ಕಂಪ್ಯೂಟಿಂಗ್ನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶಾದ್ಯಂತ 5 ಗಿಗಾವ್ಯಾಟ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ.
ಸ್ವದೇಶದ ಹೂಡಿಕೆ ವಾತಾವರಣದ ವಿಷಯದಲ್ಲಿ ಅನಿಶ್ಚಿತತೆಯನ್ನು ಹೊಂದಿರುವ ಬಾಂಗ್ಲಾದೇಶ ಮೂಲದ ಅನೇಕ ವಲಸಿಗರು, ರಾಬಿನ್ ಖುದಾ ಅವರ ಹಾದಿಯನ್ನೇ ಅನುಸರಿಸಬಹುದು. ಪಶ್ಚಿಮ ಬಂಗಾಳದಲ್ಲಿರುವ ಹೊಸ ಬಿಜೆಪಿ ಸರ್ಕಾರವು ಚಾಣಾಕ್ಷತನದಿಂದ ವರ್ತಿಸಿದರೆ, ಖುದಾರಂತಹ ಹೂಡಿಕೆದಾರರನ್ನು ಆಕರ್ಷಿಸಿ, ಭಾರಿ ಬಂಡವಾಳ ಹೂಡಿಕೆಯ ತುರ್ತು ಅಗತ್ಯವಿರುವ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಪ್ರೇರೇಪಿಸಬಹುದು.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಕೈಗಾರಿಕಾ ಸಚಿವ ತಪಸ್ ರಾಯ್ ಅವರು ಸಿಂಗೂರು ಮತ್ತು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಕೈಗಾರಿಕಾ ವಿರೋಧಿ ಆಂದೋಲನದ ಸಮಯದಲ್ಲಿ ಅವರ ಆಪ್ತ ಸಹಚರರಾಗಿದ್ದರು. ಈಗಿನ ಕಾಲದ ಅಗತ್ಯವನ್ನು ಅವರು ಅರಿತುಕೊಳ್ಳುವುದು ಉತ್ತಮ. ತಪಸ್ ರಾಯ್ ಅವರು ಅಧಿಕಾರ ವಹಿಸಿಕೊಂಡ ನಂತರ ಮಾತನಾಡುತ್ತಾ, ರತನ್ ಟಾಟಾ ಅವರು ಇಂದು ಜೀವಂತವಾಗಿದ್ದರೆ ಅವರನ್ನು ಭೇಟಿಯಾಗಲು ತಾವೇ ಸ್ವತಃ ಓಡಿ ಹೋಗುತ್ತಿದ್ದೆ ಎಂದು ಹೇಳುವ ಮೂಲಕ, ತಮ್ಮ ಬದಲಾದ ನಿಲುವಿನ ಸುಳಿವನ್ನು ಸ್ಪಷ್ಟವಾಗಿ ನೀಡಿದ್ದಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

