
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಈ ಎಲ್ಲಾ ಗೊಂದಲಗಳ ಕೇಂದ್ರಬಿಂದುವಾಗಿರುವುದು ಟೂರ್ನಿಯಿಂದ ಬಾಂಗ್ಲಾದೇಶ ತಂಡದ ನಾಟಕೀಯ ಉಚ್ಚಾಟನೆ ಮತ್ತು ಕೊನೆಯ ಕ್ಷಣದಲ್ಲಿ ಅವರ ಬದಲಿಗೆ ಸ್ಕಾಟ್ಲೆಂಡ್ ತಂಡದ ಸೇರ್ಪಡೆ.
ಐಸಿಸಿ ಪುರುಷರ ಟಿಟ್ವೆಂಟಿ ವಿಶ್ವಕಪ್-2026 ಸಮೀಪಿಸುತ್ತಿದೆ. ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್-ವುಡ್ ಫಿಟ್ನೆಸ್ ಆತಂಕ ಕಾಡುತ್ತಿದ್ದರೂ ಆಸ್ಟ್ರೇಲಿಯಾ ತಂಡ ತನ್ನ ವೇಗದ ಬೌಲರ್-ಗಳ ಕೆಲಸದ ಹೊರೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ರಿಕವರಿ ಮೇಲೆ ಕಣ್ಣಿಟ್ಟಿದೆ. ಆದರೂ ಅವರ ಕೆಲವು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ವೇಳೆ ಲಂಕಾ ಪ್ರವಾಸದಲ್ಲಿರುವ ಇಂಗ್ಲಂಡ್ ತಂಡ ಉಪಖಂಡದ ಪರಿಸ್ಥಿತಿಯ ಪೂರ್ಣ ಲಾಭ ಪಡೆದುಕೊಳ್ಳುವ ಸನ್ನಾಹದಲ್ಲಿದೆ. ಟೂರ್ನಿ ಇನ್ನೇನು ಶುರುವಾಗುವುದಕ್ಕೂ ಕೆಲವೇ ದಿನಗಳಿಗೂ ಮುನ್ನ ತನ್ನ ತಂಡದ ಸಂಯೋಜನೆ ಮತ್ತು ಆಟಗಾರರ ಪಾತ್ರಗಳ ಏನೇನು ಎಂಬುದರ ಬಗ್ಗೆ ಚಿಂತನೆ ನಡೆಸಿದೆ.
ಆದರೆ ವಿಶ್ವಕಪ್ ನಲ್ಲಿ ಭಾಗವಹಿಸುವ ಈ ಎಲ್ಲ ತಂಡಗಳ ಕಸರತ್ತುಗಳನ್ನು ನೀವೆಲ್ಲ ಗಮನಿಸದೇ ಇದ್ದರೆ ಅದೇನು ಅಚ್ಚರಿಯ ಸಂಗತಿ ಅಲ್ಲ ಬಿಡಿ.
ಯಾಕೆಂದರೆ ಟಿಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಂಬಂಧಪಟ್ಟಂತೆ ಕೇಳಿ ಬರುತ್ತಿರುವ ಸದ್ದು-ಸುದ್ದಿಗಳು ಕ್ರಿಕೆಟ್ಟಿಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಬದಲಾಗಿ ಕ್ರೀಡಾ ಪ್ರಪಂಚದ ಅತಿದೊಡ್ಡ ಜಾಗತಿಕ ಈವೆಂಟ್-ಗಳಲ್ಲಿ ಒಂದಾದ ಈ ಟೂರ್ನಿಯ ಸಿದ್ಧತೆಗಳ ಮೇಲೆ ಪ್ರಭಾವ ಬೀರಿರುವುದು ಇತರ ಸಂಗತಿಗಳು. ಅವುಗಳಲ್ಲಿ ಬಾಂಗ್ಲಾದೇಶ ತಂಡ ಅಲಭ್ಯತೆ, ಪಾಕಿಸ್ತಾನ ಪಾಲ್ಗೊಳ್ಳುವ ಬಗ್ಗೆ ಇರುವ ಅನುಮಾನ, ಸ್ಕಾಟ್ಲೆಂಡ್ ತಂಡದ ಹಠಾತ್ ಸೇರ್ಪಡೆ ಸೇರಿವೆ.
ಕ್ರಿಕೆಟ್ ಆಟವನ್ನು ಇನ್ನಿಲ್ಲದಂತೆ ಆರಾಧಿಸುವ ಈ ಪ್ರದೇಶದಲ್ಲಿ ಟೂರ್ನಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿರುವಾಗ ರಾಜಕೀಯ, ಆಡಳಿತಾತ್ಮಕ ಗೊಂದಲಗಳು ಮತ್ತು ಪ್ರಾದೇಶಿಕವಾಗಿ ಕಂಡುಬಂದಿರುವ ಉದ್ವಿಗ್ನ ಪರಿಸ್ಥಿತಿಗಳೇ ಮುಂಚೂಣಿ ಸುದ್ದಿಗಳಾಗಿ ಹೊರಹೊಮ್ಮಿವೆ.
ಈ ಹೊತ್ತಿಗೆಲ್ಲ ಭಾಗವಹಿಸುವ ತಂಡಗಳು ಯಾವುವು, ಅವುಗಳಲ್ಲಿ ಆಟಗಾರರು ಯಾರ್ಯಾರಿದ್ದಾರೆ, ಅವುಗಳ ಕಾರ್ಯತಂತ್ರವಾದರೂ ಏನು, ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರಿಯರ ನಿರೀಕ್ಷೆಗಳಾದರೂ ಏನು ಎನ್ನುವ ಸುದ್ದಿಗಳೇ ಚಾಲ್ತಿಗೆ ಬರಬೇಕಾಗಿತ್ತು. ಆಟಗಾರರ ಫಾರ್ಮ್ ಯಾವ ರೀತಿ ಇದೆ, ತಂಡಗಳ ಮುಖಾಮುಖಿ ಮತ್ತು ಗೆಲುವಿನ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ ಅವ್ಯಾವೂ ಸುದ್ದಿಗಳಾಗುತ್ತಿಲ್ಲ. ಬದಲಾಗಿ ಕ್ರಿಕೆಟ್-ನ ಈ ಅತಿದೊಡ್ಡ ಟಿಟ್ವೆಂಟಿ ಸಂಭ್ರಮವು ಅನಿಶ್ಚಿತತೆಯ ಮೋಡದಡಿ ಅಡಗಿಕೊಂಡಿದೆ.
ಸಾಮಾನ್ಯವಾಗಿ ವಿಶ್ವಕಪ್ ಟೂರ್ನಿ ದಿನಗಳು ಹತ್ತಿರವಾಗುತ್ತಿವೆ ಎಂದರೆ ಆಡಳಿತಾತ್ಮಕ ವಿಷಯಗಳು ತೆರೆಮರೆಗೆ ಸರಿದು, ಕ್ರೀಡೆಯೇ ಕೇಂದ್ರಬಿಂದುವಾಗಬೇಕು. ಆದರೆ ಈ ಬಾರಿ, ಆ ವ್ಯತ್ಯಾಸವು ಉಳಿದುಕೊಂಡಿಲ್ಲ.
ಬಾಂಗ್ಲಾದೇಶದ ಉಚ್ಚಾಟನೆ
ಈ ಎಲ್ಲಾ ಗೊಂದಲಗಳ ಕೇಂದ್ರಬಿಂದುವಾಗಿರುವುದು ಟೂರ್ನಿಯಿಂದ ಬಾಂಗ್ಲಾದೇಶ ತಂಡದ ನಾಟಕೀಯ ಉಚ್ಚಾಟನೆ ಮತ್ತು ಕೊನೆಯ ಕ್ಷಣದಲ್ಲಿ ಅವರ ಬದಲಿಗೆ ಸ್ಕಾಟ್ಲೆಂಡ್ ತಂಡದ ಸೇರ್ಪಡೆ.
ನಡೆದ ಘಟನೆಗಳ ಸರಣಿ ಈಗ ಎಲ್ಲರಿಗೂ ತಿಳಿದಿದೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮತ್ತು ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವಂತೆ ಒತ್ತಾಯಿಸಿ, ಭಾರತದಲ್ಲಿ ನಿಗದಿಯಾಗಿದ್ದ ಪಂದ್ಯಗಳಿಗಾಗಿ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿತು. ದೀರ್ಘಕಾಲದ ಚರ್ಚೆಗಳು ಮತ್ತು ತನ್ನದೇ ಆದ ಮೌಲ್ಯಮಾಪನಗಳ ನಂತರ, ಐಸಿಸಿ ಈ ವಿನಂತಿಯನ್ನು ತಿರಸ್ಕರಿಸಿತು. ಮೂಲ ವೇಳಾಪಟ್ಟಿಯನ್ನೇ ಅಂತಿಮಗೊಳಿಸಿದ ಐಸಿಸಿ, ಬಾಂಗ್ಲಾದೇಶದಿಂದ ಸ್ಪಷ್ಟನೆ ಬಾರದಿದ್ದಾಗ ಅಂತಿಮವಾಗಿ ತನ್ನ ಅಧಿಕಾರವನ್ನು ಬಳಸಿ ಅವರನ್ನು ಟೂರ್ನಿಯಿಂದ ಹೊರಗಿಟ್ಟಿತು.
ಕ್ರೀಡಾ ದೃಷ್ಟಿಕೋನದಿಂದ ಬೆಳವಣಿಗೆಗಳು ಅತ್ಯಂತ ಕಳವಳಕಾರಿ. ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್ಗೆ ಕೆಲವೇ ವಾರಗಳು ಬಾಕಿ ಇರುವಾಗ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವೊಂದನ್ನು ಕೈಬಿಟ್ಟಿರುವುದು ಈ ವರೆಗೆ ಕೇಳರಿಯದ ಸಂಗತಿ. ಇಂತಹ ನಿರ್ಧಾರವು ಮಾಜಿ ಆಟಗಾರರು ಮತ್ತು ಆಡಳಿತಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದು ಐಸಿಸಿಯ ಪೂರ್ವನಿದರ್ಶನ ಮತ್ತು ಕಾರ್ಯವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಸ್ವತಃ ಬಾಂಗ್ಲಾದೇಶದ ಒಳಗೂ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಬಾಂಗ್ಲಾ ಕ್ರಿಕೆಟ್ ಮಂಡಳಿಯು ಪರಿಸ್ಥಿತಿಯನ್ನು ಸಮರ್ಪಕವಾಗಿ ಅಂದಾಜು ಮಾಡುವಲ್ಲಿ ಎಡವಿತೇ ಮತ್ತು ಹಾಗೆ ಮಾಡುವ ಮೂಲಕ ತನ್ನದೇ ಆಟಗಾರರಿಗೆ ಹಾನಿ ಉಂಟುಮಾಡಿತೇ ಎಂಬ ಬಗ್ಗೆ ವಾದಗಳು ನಡೆಯುತ್ತಿವೆ.
ಸ್ವತಃ ಆಟಗಾರರಿಗೆ ಈ ನಷ್ಟವು ಅತ್ಯಂತ ವೈಯಕ್ತಿಕವಾದುದು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಿರುವ ಬಾಂಗ್ಲಾದೇಶದ ಯುವ ಕ್ರಿಕೆಟಿಗರಿಗೆ, ವಿಶ್ವಕಪ್ ಎನ್ನುವುದು ಬದುಕಿನ ಹಾದಿಯನ್ನೇ ನಿರ್ಧರಿಸುವ ವೇದಿಕೆ. ಇದು ಅವರಿಗೆ ಮರಳಿ ಸಿಗದ ಪ್ರಚಾರ ನೀಡಬಲ್ಲ ಅವಕಾಶವಾಗಿತ್ತು. ಆದರೆ, ವರ್ಷಗಳ ಸಿದ್ಧತೆ, ಆಯ್ಕೆ ಪ್ರಕ್ರಿಯೆಯ ಹೋರಾಟ ಮತ್ತು ಯೋಜನೆಗಳೆಲ್ಲವೂ ಅವರ ನಿಯಂತ್ರಣದಲ್ಲಿಲ್ಲ. ಅವೆಲ್ಲವೂ ಮೈದಾನದ ಹೊರಗಿನ (ಆಡಳಿತಾತ್ಮಕ) ಸಂಘರ್ಷದಿಂದಾಗಿ ಅಳಿಸಿಹೋಗಿವೆ.
ಅಭಿಮಾನಿಗಳಿಗೆ ಆಘಾತ
ಈ ನಡುವೆ ಸ್ಕಾಟ್ಲೆಂಡ್ನ ಸೇರ್ಪಡೆಯು ಸಹವರ್ತಿ ರಾಷ್ಟ್ರಗಳ ದೃಷ್ಟಿಯಿಂದ ಅರ್ಹ ಮತ್ತು ಸ್ಪೂರ್ತಿದಾಯಕ. ಆದರೂ, ಅದರ ಹಿಂದೆ ಅನಿವಾರ್ಯವಾದ ಒಂದು ಕಹಿ ಸತ್ಯವೂ ಇದೆ. ಸ್ಕಾಟ್ಲೆಂಡ್ ಆಟಗಾರರು ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಾರೆ ನಿಜ, ಆದರೆ ಅವರ ಉಪಸ್ಥಿತಿಯು ಈ ಬಾರಿಯ ವಿಶ್ವಕಪ್ ಕ್ರೀಡಾ ಅರ್ಹತೆಗಿಂತ ಹೆಚ್ಚಾಗಿ ಮೈದಾನದ ಹೊರಗಿನ ಗೊಂದಲಗಳಿಂದ ರೂಪುಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಟೂರ್ನಿಯಲ್ಲಿ ಮೊದಲ ಚೆಂಡು ಎಸೆಯುವ ಮೊದಲೇ, ಕ್ರಿಕೆಟ್ ಪ್ರದರ್ಶನಕ್ಕಿಂತ ಹೆಚ್ಚಾಗಿ ಸಂದರ್ಭಗಳಿಂದ ಹುಟ್ಟಿಕೊಂಡ ಒಂದು ಉಪಕಥೆಯಾಗಿ ಟೂರ್ನಿಯ ಸ್ವರೂಪವನ್ನೇ ಬದಲಿಸಿದೆ.
ಆದರೆ ಅನಿಶ್ಚಿತತೆ ಎನ್ನುವುದು ಇಲ್ಲಿಗೆ ನಿಂತಿಲ್ಲ. ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸುವ ಬಗ್ಗೆ ಮರುಪರಿಶೀಲನೆ ಮಾಡುವ ಸುಳಿವು ನೀಡಿದೆ. ಇದರಿಂದಾಗಿ ಈ ಚರ್ಚೆಯನ್ನು ಕ್ರಿಕೆಟ್-ನಿಂದ ಆಚೆಗಿರುವ ರಾಜತಾಂತ್ರಿಕ ಸಂಘರ್ಷದತ್ತ ದೃಷ್ಟಿ ನೆಡುವಂತೆ ಮಾಡಿದೆ. ಪಂದ್ಯಾವಳಿಯಿಂದ ಹಿಂದೆ ಸರಿಯುವ ನಿರ್ಧಾರವನ್ನೇನಾದರೂ ಕೈಗೊಂಡರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಚ್ಚರಿಕೆ ನೀಡಿದೆ.
ಈ ಎಲ್ಲ ಬೆಳವಣಿಗೆಗಳು ಪಂದ್ಯದ ಅಂತಿಮ ಹಂತದ ಸಿದ್ಧತೆಗಳ ಮೇಲೆ ಆಡಳಿತಾತ್ಮಕ ಹಸ್ತಕ್ಷೇಪ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ಪುಷ್ಟೀಕರಿಸುತ್ತದೆ.
ಅಸ್ಥಿರತೆಯಲ್ಲಿ ಮಂಕಾದ ಕ್ರಿಕೆಟ್
ಇಂತಹ ಬೆಳವಣಿಗೆಗಳ ಕಾರಣದಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿಯ ಪೂರ್ವಸಿದ್ಧತೆ ಶೂನ್ಯವೆನಿಸಿರುವುದು ವಿಚಿತ್ರ. ಸಾಮಾನ್ಯವಾಗಿ ವಿಶ್ವಕಪ್ ಪಂದ್ಯಗಳಿಗೆ ತೆರೆ ಸರಿಯುವ ಸಾಕಷ್ಟು ಮೊದಲೇ ಉತ್ಸಾಹವನ್ನು ಗರಿಗೆದರಿಸುವ ಸಿದ್ಧತೆಗಳು ನಡೆದಿರುತ್ತವೆ. ಪ್ರಯಾಣದ ಯೋಜನೆಗಳು, ವಸತಿ ಕಾಯ್ದಿರಿಸುವ ಪ್ರಕ್ರಿಯೆ, ಪಂದ್ಯಗಳ ವೇಳಾಪಟ್ಟಿಯನ್ನು ಗುರುತು ಹಾಕುವುದು ಮತ್ತು ಕ್ರೀಡಾಂಗಣ ಹಾಗೂ ಕಥಾವಸ್ತುಗಳನ್ನು ಸಿದ್ಧಪಡಿಸುವ ಮಾಧ್ಯಮದ ತಂಡಗಳು ಇವೆಲ್ಲವೂ ಇದರಲ್ಲಿ ಒಳಗೊಂಡಿರುತ್ತವೆ.
ದಕ್ಷಿಣ ಏಷ್ಯಾದಲ್ಲಿ, ಇಂತಹ ಕ್ರಿಕೆಟ್ ಕುತೂಹಲವು ಮನೆಯಲ್ಲಿ ಅರಳಿಕೊಳ್ಳಬೇಕಾಗಿತ್ತು. ನಮ್ಮ ಆಫೀಸುಗಳಲ್ಲಿ, ಚಹಾ ಅಂಗಡಿಗಳಲ್ಲಿ ಮತ್ತು ತಡರಾತ್ರಿಯ ಸಂಭಾಷಣೆಗಳಲ್ಲಿ ಅದರ ಚರ್ಚೆ ನಡೆಯಬೇಕಾಗಿತ್ತು. ಆದರೆ ಈ ಬಾರಿ ಆ ಸಂಭ್ರಮವೆಲ್ಲವೂ ಮಂಕಾಗಿದೆ. ಈಗಾಗಲೇ ಭೌಗೋಳಿಕ ರಾಜಕೀಯ ಬಿಕ್ಕಟ್ಟು, ಸಂಘರ್ಷ ಮತ್ತು ಅಸ್ಥಿರತೆಯಲ್ಲಿ ಜಗತ್ತು ಮುಳುಗಿ ಹೋಗಿದೆ. ಪ್ರಾದೇಶಿಕ ರಾಜಕೀಯವು ಈಗ ಕ್ರಿಕೆಟ್ಗೂ ವ್ಯಾಪಿಸಿದೆ. ಇದರಿಂದಾಗಿ ಕ್ರೀಡೆಯನ್ನು ಕೇವಲ ಕ್ರೀಡೆಯಾಗಿ ಆನಂದಿಸಲು ಹೆಚ್ಚಿನ ಅವಕಾಶವೇ ಇಲ್ಲದಂತಾಗಿದೆ.
ಕ್ರಿಕೆಟ್ ಇಂತಹ ಪರಿಸ್ಥಿತಿಯನ್ನು ಈ ಹಿಂದೆಯೂ ಎದುರಿಸಿದೆ ಮತ್ತು ಅದರ ಫಲಿತಾಂಶಗಳು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. 1996ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶ್ರೀಲಂಕಾ ಪ್ರವಾಸ ಮಾಡಲು ನಿರಾಕರಿಸಿದಾಗ ಪಂದ್ಯಾವಳಿಗಳನ್ನು ನಡೆಸುವುದೇ ಕಷ್ಟವಾಯಿತು. ಇದರಿಂದಾಗಿ ಪಂದ್ಯಗಳನ್ನು ಬಿಟ್ಟುಕೊಡಬೇಕಾಯಿತು. ಸ್ಪರ್ಧೆಯ ವಿಶ್ವಾಸಾರ್ಹತೆ ಮತ್ತು ಪ್ರಸಾರ ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತು. ಇತ್ತೀಚೆಗೆ, ರಾಜಕೀಯ ಹೊಂದಾಣಿಕೆಗಳಿಂದ ರೂಪುಗೊಂಡ 2025ರ ಏಷ್ಯಾ ಕಪ್ನ ಹೈಬ್ರಿಡ್ ಮಾದರಿಯು ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ ಅಭಿಮಾನಿಗಳ ಆಸಕ್ತಿಯನ್ನು ಕುಗ್ಗಿಸಿತ್ತು.
ಪ್ರತಿ ಬಾರಿಯೂ ಎದುರಾದ ಅಡೆತಡೆಗಳು ಬೇಗನೆ ದೂರವಾಗುತ್ತವೆ ಎಂಬುದು ನಿಜವಾದರೂ ಕ್ರಿಕೆಟ್ ಮೇಲಿದ್ದ ನಂಬಿಕೆ ಕುಸಿದು ಆ ನೆನಪು ದೀರ್ಘಕಾಲದವರೆಗೆ ಉಳಿಯುತ್ತದೆ.
27 ದಶಲಕ್ಷ ಡಾಲರ್ ನಷ್ಟ
ಪ್ರಸ್ತುತ ವಿದ್ಯಮಾನವು ಗಣನೀಯವಾದ ಆರ್ಥಿಕ ವೆಚ್ಚವನ್ನೂ ಒಳಗೊಂಡಿದೆ ಎಂಬುದನ್ನು ಗಮನಿಸಬೇಕು. ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಹೊರಗಿಡುವುದರಿಂದ ಆ ದೇಶದ ಕ್ರಿಕೆಟ್ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವುದಂತೂ ನಿಶ್ಚಿತ.
ವಿಶ್ವಕಪ್ನಿಂದ ವಂಚಿತವಾಗುವುದರಿಂದ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಾನು ಪಂದ್ಯದಲ್ಲಿ ಭಾಗವಹಿಸುವ ಶುಲ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ, ಸಂಭಾವ್ಯ ದಂಡಕ್ಕೂ ಭಾಜನರಾಗಬೇಕಾಗುತ್ತದೆ ಮತ್ತು ಮುಖ್ಯವಾಗಿ, ಪಂದ್ಯಾವಳಿಗೆ ನೇರವಾಗಿ ಸಂಬಂಧಿಸಿದ ಆದಾಯವನ್ನು ಐಸಿಸಿ ಕಳೆದುಕೊಳ್ಳುತ್ತದೆ. ಸುಮಾರು 27 ದಶಲಕ್ಷ ಡಾಲರ್-ನಷ್ಟು ಹಣ ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.,
ಈ ನಿಧಿಯು ದೇಶೀಯ ಪಂದ್ಯಾವಳಿಗಳು, ತಳಮಟ್ಟದ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆಧಾರವಾಗಿದೆ. ಇದರ ಕೊರತೆಯಿಂದಾಗಿ ಪಂದ್ಯಾವಳಿ ಮುಗಿದ ನಂತರವೂ ದೀರ್ಘಕಾಲದವರೆಗೆ ಕ್ರಿಕೆಟ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ.
ಕೇವಲ ಬಾಂಗ್ಲಾದೇಶ ಮಾತ್ರ ಈ ನಷ್ಟವನ್ನು ಅನುಭವಿಸುತ್ತಿಲ್ಲ. ಪ್ರಸಾರಕರು ಕ್ರಿಕೆಟ್ನ ಅತ್ಯಂತ ಮೌಲ್ಯಯುತವಾದ ಟಿವಿ ಮಾರುಕಟ್ಟೆಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾಯೋಜಕರಿಗೂ ಇದರಿಂದ ನಷ್ಟವಾಗುತ್ತದೆ. ಆಟಗಾರರು ಕ್ರೀಡೆಯ ದೊಡ್ಡ ವೇದಿಕೆಯಲ್ಲಿ ಸಿಗಬೇಕಾದ ಪ್ರಚಾರ ಮತ್ತು ಜಾಹೀರಾತು ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಯಾವಾಗ ಒಂದು ವಿಶ್ವಕಪ್ ಮೈದಾನದ ಹೊರಗಿನ ಭಿನ್ನಾಭಿಪ್ರಾಯಗಳಿಂದ ಮಂಕಾಗುತ್ತದೆಯೋ, ಆಗ ಆ ಹಾನಿಯ ಪಾಲನ್ನು ಇಡೀ ಕ್ರಿಕೆಟ್ ವ್ಯವಸ್ಥೆಯೇ ಹಂಚಿಕೊಳ್ಳಬೇಕಾಗುತ್ತದೆ.
ಈ ಕ್ಷಣವು ವಿಶೇಷವಾಗಿ ಆತಂಕಕಾರಿಯಾಗಿ ಕಾಣಲು ಕಾರಣವೆಂದರೆ, ಇದೆಲ್ಲವೂ ತುಂಬಾ ಪರಿಚಿತವೆನಿಸುತ್ತಿದೆ. ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್ ತನ್ನ ಪ್ರಮುಖ ಪಂದ್ಯಾವಳಿಗಳನ್ನು ಕ್ರೀಡೇತರ ಒತ್ತಡಗಳಿಂದ ಮುಕ್ತವಾಗಿಡಲು ದೀರ್ಘಕಾಲದಿಂದ ಹೋರಾಡುತ್ತಿದೆ. ಇಲ್ಲಿ ಕ್ರಿಕೆಟ್ ಎಂಬುದು ಕೇವಲ ಒಂದು ಆಟವಲ್ಲ; ಅದು ರಾಜತಾಂತ್ರಿಕತೆ ಮತ್ತು ಅಧಿಕಾರದೊಂದಿಗೆ ಬೆಸೆದುಕೊಂಡಿದೆ. ಈ ವಾಸ್ತವವೇ ಆಡಳಿತಾತ್ಮಕ ಸ್ಪಷ್ಟತೆಯನ್ನು ಇನ್ನಷ್ಟು ನಿರ್ಣಾಯಕವಾಗಿ ಮಾಡುತ್ತದೆ.
ಕ್ರಿಕೆಟ್ ಎರಡನೇ ಆದ್ಯತೆಯಾದಾಗ
ಆದರೂ, ಹೆಚ್ಚಿನ ನಿರ್ಧಾರಗಳು ಕೇವಲ ಪ್ರತಿಕ್ರಿಯೆಗಷ್ಟೇ ಸೀಮಿತವಾದಾಗ ರಾಜಕೀಯ ವಿಚಾರಗಳು ಕ್ರೀಡೆಯ ಅತ್ಯಂತ ಪ್ರಮುಖ ಕ್ಷಣಗಳ ಮೇಲೆ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ.
ಆದ್ದರಿಂದ, ಐಸಿಸಿ ಮುಂದಿರುವ ಸವಾಲು ಕೇವಲ ನಿಯಮಗಳನ್ನು ಜಾರಿಗೆ ತರುವುದಲ್ಲ, ಬದಲಿಗೆ ಅವುಗಳನ್ನು ಪಾರದರ್ಶಕ ಮತ್ತು ಸ್ಥಿರವಾದ ಚೌಕಟ್ಟಿನ ಒಳಗೆ ತರುವುದಾಗಿರುತ್ತದೆ. ಒಂದೇ ರೀತಿಯ ಸಂದರ್ಭಗಳನ್ನು ಬೇರೆ ಬೇರೆ ತಂಡಗಳ ವಿಷಯದಲ್ಲಿ ವಿಭಿನ್ನವಾಗಿ ನಿಭಾಯಿಸಿದಾಗ, 'ತಾರತಮ್ಯ'ದ ಭಾವನೆ ಮೂಡುವುದು ಅನಿವಾರ್ಯ. ಉನ್ನತ ಮಟ್ಟದ ಕ್ರೀಡೆಯಲ್ಲಿ ಜನರ ದೃಷ್ಟಿಕೋನ ಬಹಳ ಮುಖ್ಯ; ಒಮ್ಮೆ ತಟಸ್ಥ ನೀತಿಯ ಮೇಲಿನ ನಂಬಿಕೆ ಕುಸಿದರೆ, ಅದರೊಂದಿಗೆ ಅಧಿಕಾರದ ಮೌಲ್ಯವೂ ತಳಕಚ್ಚುತ್ತದೆ.
2026ರ ಆವೃತ್ತಿಯಲ್ಲಿ 20 ತಂಡಗಳು ಭಾಗವಹಿಸುವ ಮೂಲಕ ಕ್ರಿಕೆಟ್ ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ಇಂತಹ ಸಮಯದಲ್ಲಿ, ವಿಶ್ವಕಪ್ ಆರಂಭದ ದಿನಗಳು ಉತ್ಸಾಹದ ಬದಲಾಗಿ ಗೊಂದಲಗಳಿಂದ ತುಂಬಿರುವುದು ನಿರಾಶಾದಾಯಕ ಸಂಗತಿ. ಆದರೂ, ಪಂದ್ಯಾವಳಿಯ ಮೊದಲ ಎಸೆತ ಆರಂಭವಾದ ಮೇಲೆ ಇದೆಲ್ಲವೂ ಗೌಣವಾಗಬಹುದು.
ಟಿ20 ಕ್ರಿಕೆಟ್ಗೆ ಜನರ ಗಮನವನ್ನು ಸೆಳೆಯುವ ಅದ್ಭುತ ಶಕ್ತಿಯಿದೆ. ಪಂದ್ಯಗಳು ರೋಮಾಂಚನ ನೀಡಲಿವೆ ಮತ್ತು ಹೊಸ ನಾಯಕರು ಉದಯಿಸಲಿದ್ದಾರೆ ಎಂಬ ಆಶಯವಿದೆ. ಪಂದ್ಯಾವಳಿಯು ತನ್ನ ಲಯವನ್ನು ಕಂಡುಕೊಳ್ಳಬಹುದು. ಆದರೆ, ಈ ವಿಶ್ವಕಪ್ ಕ್ರಿಕೆಟ್ನ ಸಾಧ್ಯತೆಗಳಿಗಿಂತ ಹೆಚ್ಚಾಗಿ ಅದರ ಸುತ್ತಲಿನ ವಿವಾದಗಳೇ ಹೆಚ್ಚು ಸದ್ದು ಮಾಡುವ ಹಂತಕ್ಕೆ ತಲುಪಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

