
ರಾಜಕೀಯದ ವಾಕ್ಚಾತುರ್ಯ ಬಂಡವಾಳದ ಹೊರಹರಿವಿನ ಮೇಲೆ ಗಮನ ಕೇಂದ್ರೀಕರಿಸಿದ್ದರೆ ಕಲ್ಲಾಡಿ ಸುರಂಗ ದುರಂತವು ರಾಜ್ಯದ ಆರ್ಥಿಕ ಬೆನ್ನೆಲುಬಿಗೆ ಸಂಬಂಧಿಸಿದ ಸುರಕ್ಷತೆ, ಹೊಣೆಗಾರಿಕೆ ಮತ್ತು ನಾಪತ್ತೆಯಾಗಿರುವ ದತ್ತಾಂಶಗಳಂತಹ ಗಂಭೀರ ಬಿಕ್ಕಟ್ಟನ್ನು ಬಯಲಿಗೆಳೆದಿದೆ.
ಇತ್ತೀಚಿನ ಭಾರತದ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳಲ್ಲಿ ʼರಿವರ್ಸ್ ರೆಮಿಟೆನ್ಸ್ʼ (ವಿಲೋಮ ಹಣ ರವಾನೆ) ಎಂಬ ಪದಗುಚ್ಛವು ತೀವ್ರತರದ ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಕಳುಹಿಸುವ ಬೃಹತ್ ಪ್ರಮಾಣದ ಬಂಡವಾಳದ ಹೊರಹರಿವಿನಿಂದಾಗಿ ಕೇರಳದ ಅರ್ಥ ವ್ಯವಸ್ಥೆಯ ಅಡಿಪಾಯವನ್ನೇ ಅಸ್ಥಿರಗೊಳಿಸುತ್ತಿದೆ ಎಂಬ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಆತಂಕ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಹಾಗಿದ್ದೂ ಈ ಆರ್ಥಿಕ ನಿಲುವು ಅತ್ಯಂತ ಗಹನವಾದ ಮತ್ತು ಹೆಚ್ಚು ಆತಂಕಕಾರಿಯಾದ ವಾಸ್ತವಾಂಶವನ್ನು ನಿರ್ಲಕ್ಷಿಸುತ್ತದೆ. ರಾಜಕೀಯವಾಗಿ ಹೇಳುವ ಮಾತುಗಳು ಬಂಡವಾಳದ ಹೊರಹರಿವಿನ ಮೇಲೆ ಕೇಂದ್ರೀಕರಿಸಿದ್ದರೆ ಈ ಪ್ರದೇಶದಲ್ಲಿ ಸಂಭವಿಸಿದ ಸರಣಿ ವಿನಾಶಕಾರಿ ವಿಪತ್ತುಗಳು ಒಂದು ಕಠೋರ ಸತ್ಯವನ್ನು ಬಹಿರಂಗಪಡಿಸುತ್ತವೆ; ಆಧುನಿಕ ಕೇರಳವನ್ನು ರೂಪಿಸುತ್ತಿರುವ ಪುರುಷರು ಮತ್ತು ಮಹಿಳೆಯರನ್ನು ವ್ಯವಸ್ಥಿತವಾಗಿ ದೂರವಿಡಲಾಗುತ್ತಿದೆ. ಅಪಾಯಕಾರಿಯಾದ ದುಡಿಯುವ ಸ್ಥಳಗಳಲ್ಲಿ ಅವರಿಗೆ ಯಾವುದೇ ರಕ್ಷಣೆ ಇಲ್ಲದಂತೆ ಮಾಡಲಾಗಿದೆ ಹಾಗೂ ದುರಂತ ಸಂಭವಿಸಿದಾಗ ಅವರ ಲೆಕ್ಕವೇ ಸಿಗದಂತೆ ಮಾಡಲಾಗುತ್ತಿದೆ.
ಇಂತಹ ಬಿಕ್ಕಟ್ಟಿನ ಪ್ರಸ್ತುತ ಸ್ಥಿತಿಯು ಇತ್ತೀಚೆಗೆ ವಯನಾಡಿನ ಗುಡ್ಡಗಾಡು ಪ್ರದೇಶವಾದ ಕಲ್ಲಾಡಿ ಸುರಂಗ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ಸಂಪೂರ್ಣ ಬಟಾಬಯಲಾಯಿತು. ಈ ದುರಂತವು ಭಾರೀ ಅವಶೇಷಗಳ ಅಡಿಯಲ್ಲಿ ಹಲವಾರು ಕಾರ್ಮಿಕರನ್ನು ಸಿಕ್ಕಿಹಾಕಿಕೊಳ್ಳುವಂತೆ ಮಾಡಿತು ಮತ್ತು ಅಧಿಕೃತವಾಗಿ ಏಳು ಜೀವಗಳನ್ನು ಬಲಿತೆಗೆದುಕೊಳ್ಳುವಂತೆ ಮಾಡಿತು.
ಈ ದುರಂತದಲ್ಲಿ ಮೃತಪಟ್ಟವರನ್ನು ಹಿಮಾಚಲ ಪ್ರದೇಶದ ಸೈಟ್ ಎಂಜಿನಿಯರ್ ರಾಹುಲ್ ಶರ್ಮಾ, ಅಗೆಯುವ ಯಂತ್ರದ ಚಾಲಕ ಮೊಹಮ್ಮದ್ ಇಮ್ರಾನ್, ಉತ್ತರ ಪ್ರದೇಶದ ಸರ್ವೇಯರ್ ಅಜರುದ್ದೀನ್ ಅನ್ಸಾರಿ, ಮಧ್ಯಪ್ರದೇಶದ ಚಂದ್ರಭಾನ್ ಪಾಲ್ ಮತ್ತು ಜಾರ್ಖಂಡ್ನ ಅನ್ಮೋಲ್ ದೊಡ್ರಾಯ್ ಎಂದು ಗುರುತಿಸಲಾಗಿದೆ.
ಕಾರ್ಮಿಕರ ಹಾಜರಿ ಪಟ್ಟಿಯೇ ಇಲ್ಲ
ಈ ಘಟನೆಯಲ್ಲಿನ ಇನ್ನೊಂದು ಪ್ರಮುಖ ಅಂಶ ಏನೆಂದರೆ ನಿರ್ಮಾಣ ಸಂಸ್ಥೆಯ ಬಳಿ ಯಾವುದೇ ಅಪ್ಡೇಟ್ ಆದ ದೈನಂದಿನ ಬಯೋಮೆಟ್ರಿಕ್ ಹಾಜರಾತಿ ಪಟ್ಟಿ ಇಲ್ಲದೇ ಹೋದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆ ಉಂಟಾಯಿತು. ಪರಿಣಾಮವಾಗಿ ಪತ್ತೆಯಾದ ಶವಗಳನ್ನು ಗುರುತಿಸಲು ಅಥವಾ ಅವರ ಕುಟುಂಬಗಳಿಗೆ ಮಾಹಿತಿ ನೀಡಲು ಬಹಳ ದಿನಗಳ ಕಾಲ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಉನ್ನತ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ಸದೃಢವಾದ ಸಾಮಾಜಿಕ ಕಲ್ಯಾಣ ಮಾದರಿಗಳಿಗಾಗಿ ಜಾಗತಿಕವಾಗಿ ಪ್ರಶಂಸೆಗೆ ಒಳಗಾದ ಕೇರಳದಂತಹ ರಾಜ್ಯದಲ್ಲಿ ಅದರ ಆರ್ಥಿಕ ಎಂಜಿನ್ನ್ನು ಮುನ್ನಡೆಸುವ ಕಾರ್ಮಿಕರು ಆರ್ಥಿಕ ಬೆಳವಣಿಗೆಯ ಯಂತ್ರದೊಳಗಿನ ಅನಾಮಧೇಯ ಘಟಕಗಳಾಗಿ ಉಳಿದು ಹೋದರು.
ಈ ಅಸಂಘಟಿತ ವಲಯದಲ್ಲಿನ ಅನಾಮಧೇಯತೆ ಮತ್ತು ಉತ್ತರದಾಯಿತ್ವದ ಕೊರತೆಯ ಬಿಕ್ಕಟ್ಟು ಕೇವಲ ವಯನಾಡ್ಗೆ ಮಾತ್ರ ಸೀಮಿತವಾಗಿಲ್ಲ. ಇದು ಭಾರತದಾದ್ಯಂತ ಇರುವ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನಾ ಸ್ಥಳಗಳಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ಅಪಾಯಕಾರಿ ಮಾದರಿಯ ಪ್ರತಿಬಿಂಬ ಎಂದರೆ ಅತಿಶಯೋಕ್ತಿಯಾಗದು.
ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆ ಎಂದರೆ ತಮಿಳುನಾಡಿನ ನೈವೇಲಿಯಲ್ಲಿ ಸಂಭವಿಸಿದ ಘಟನೆ. ಸುಮಾರು ಹನ್ನೆರಡು ಮೀಟರ್ ಎತ್ತರದ ಬೃಹತ್ ಕೈಗಾರಿಕಾ ರಚನೆಯೊಂದು ಕುಸಿದು ಬಿದ್ದಾಗ ನಿರ್ಮಾಣದ ಸಂದರ್ಭದಲ್ಲಿ ವಹಿಸುತ್ತಿದ್ದ ನಿರ್ಲಕ್ಷ್ಯದ ಬಹುದೊಡ್ಡ ಅಪಾಯಗಳು ಸಂಪೂರ್ಣ ಬಯಲಾದವು. ಉಪಗುತ್ತಿಗೆದಾರರು ಆ ಸಮಯದಲ್ಲಿನ ಕಾರ್ಮಿಕರ ದಾಖಲೆಗಳನ್ನು ನಿರ್ವಹಿಸಲು ವಿಫಲವಾದ ಕಾರಣ ಅವಶೇಷಗಳ ಅಡಿಯಲ್ಲಿ ವಾಸ್ತವವಾಗಿ ಎಷ್ಟು ಜೀವಗಳು ಸಿಲುಕಿಕೊಂಡಿವೆ ಎಂಬ ಮಾಹಿತಿಗಳು ಇಲ್ಲದೇ ರಕ್ಷಣಾ ತಂಡಗಳು ಜೀವ ಉಳಿಸಿಕೊಳ್ಳಬಹುದಾದ ನಿರ್ಣಾಯಕ ಸಮಯವನ್ನು ಹುಡುಕಾಟದಲ್ಲಿಯೇ ಪೋಲು ಮಾಡಬೇಕಾಯಿತು.
ತುರ್ತು ಸಂಪರ್ಕ ದಾಖಲೆಗಳ ಸಂಪೂರ್ಣ ಕೊರತೆಯಿಂದಾಗಿ, ದೂರದ ರಾಜ್ಯಗಳಲ್ಲಿ ನೆಲೆಸಿರುವ ಅವರ ಕುಟುಂಬಗಳಿಗೆ ಮಾಹಿತಿ ನೀಡಲು ದಿನಗಳೇ ಬೇಕಾದವು.
ಅದೇ ರೀತಿಯಲ್ಲಿ, ಕೇರಳದ ವಾಣಿಜ್ಯ ಕೇಂದ್ರವಾದ ಎರ್ನಾಕುಲಂನ ಪೆರುಂಬವೂರ್ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಕೈಗಾರಿಕಾ ಅಗ್ನಿ ದುರಂತದಲ್ಲಿ ಹಲವಾರು ವಲಸೆ ಕಾರ್ಮಿಕರು ತೀವ್ರವಾಗಿ ಗಾಯಗೊಂಡರು. ಕಾರ್ಖಾನೆಯ ಆಡಳಿತ ಮಂಡಳಿಯು ಸ್ಥಳದಲ್ಲಿ ಯಾವುದೇ ಅಧಿಕೃತ ನೋಂದಣಿ ಅಥವಾ ಗುರುತಿನ ಪುರಾವೆಗಳನ್ನು ಹೊಂದಿರಲಿಲ್ಲ. ಹಾಗಾಗಿ ಸಂತ್ರಸ್ತರನ್ನು ಗುರುತಿಸಲು ಅಥವಾ ಅವರ ಕುಟುಂಬದವರನ್ನು ಸಂಪರ್ಕಿಸಲು ಆಸ್ಪತ್ರೆ ಮತ್ತು ಸ್ಥಳೀಯ ಅಧಿಕಾರಿಗಳು ಅನೇಕ ದಿನಗಳ ಕಾಲ ಪರದಾಡಬೇಕಾಯಿತು.
ಗುತ್ತಿಗೆದಾರರು ವ್ಯವಸ್ಥಿತವಾಗಿ ಅಧಿಕೃತ ದಾಖಲೆಗಳನ್ನು ನಿರ್ವಹಿಸಲು ವಿಫಲವಾದಾಗ, ತುರ್ತು ಸಂದರ್ಭಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ಗುರುತಿನ ಮೂಲಭೂತ ಗೌರವವೂ ಸಿಗದಂತಾಗುತ್ತದೆ ಎಂಬುದನ್ನು ಈ ರಚನಾತ್ಮಕ ವೈಫಲ್ಯಗಳು ತೋರಿಸಿಕೊಡುತ್ತವೆ. ಇದು ಸಾವಿರಾರು ಮೈಲಿಗಳ ದೂರದಲ್ಲಿರುವ ಅವರ ಕುಟುಂಬಗಳನ್ನು ದೀರ್ಘಾವಧಿಯ, ಅತ್ಯಂತ ಆತಂಕಕಾರಿ ಅನಿಶ್ಚಿತ ಸ್ಥಿತಿಯಲ್ಲಿ ಮುಳುಗುವಂತೆ ಮಾಡುತ್ತದೆ.
ಬಯಲಾಯ್ತೇ ದೇಶೀಯ ಬೂಟಾಟಿಕೆ?
ಈಗ ಇರುವ ಈ ಸಂಘರ್ಷವನ್ನು ಅರ್ಥಮಾಡಿಕೊಳ್ಳಬೇಕಾದರೆ, ವಲಸೆಯೊಂದಿಗೆ ಕೇರಳ ಹೊಂದಿರುವ ಸಂಬಂಧವನ್ನು ವ್ಯಾಖ್ಯಾನಿಸುವ ಗಹನವಾದ ಐತಿಹಾಸಿಕ ವಿರೋಧಾಭಾಸವನ್ನು ಗಮನಿಸಬೇಕು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ, ಕೇರಳದ ಅಭಿವೃದ್ಧಿ ಮಾದರಿಯು ಬಹುತೇಕ ಸಂಪೂರ್ಣವಾಗಿ ಬಾಹ್ಯ ವಲಸೆಯನ್ನು ನಂಬಿಕೊಂಡು ಮುನ್ನಡೆಯುತ್ತಿದೆ.
1970 ರ ದಶಕದ ತೈಲ ಉಲ್ಬಣದ ನಂತರ, ಲಕ್ಷಾಂತರ ಮಲಯಾಳಿಗಳು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಿಗೆ ವಲಸೆ ಹೋದರು. ಅವರು ಮರಳಿ ಕಳುಹಿಸಿದ ಹಣವು ಕೇರಳವನ್ನು ರಚನಾತ್ಮಕವಾಗಿ ಬಡ ಕೃಷಿ ಪ್ರಧಾನ ರಾಜ್ಯದಿಂದ, ಗ್ರಾಹಕ-ಆಧಾರಿತ ಮತ್ತು ಹೆಚ್ಚಿನ ಆದಾಯದ ಅರ್ಥ ವ್ಯವಸ್ಥೆಯನ್ನಾಗಿ ಪರಿವರ್ತಿಸಿತು. ಇದು ಭಾರತದಲ್ಲೇ ಅತ್ಯುತ್ತಮ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟವನ್ನು ಹೊಂದಲು ಕಾರಣವಾಯಿತು.
ಐತಿಹಾಸಿಕವಾಗಿ, ಕೇರಳವು ಸಮೃದ್ಧ ಆತಿಥ್ಯ ಮತ್ತು ಸಾಂಸ್ಕೃತಿಕ ಸಮನ್ವಯದ ನಾಡಾಗಿದೆ. ಅದು ನೆರೆಯ ತಮಿಳುನಾಡು ಮತ್ತು ಕರ್ನಾಟಕದ ಕಾರ್ಮಿಕರನ್ನು ತನ್ನ ಆರಂಭಿಕ ನಿರ್ಮಾಣ ವಲಯಗಳಲ್ಲಿ ಸೇರಿಸಿಕೊಂಡಿತ್ತು. ಆದಾಗ್ಯೂ, ಸ್ಥಳೀಯ ಜನಸಂಖ್ಯೆಯು ಉನ್ನತ ಸಾಕ್ಷರತಾ ಮಟ್ಟ ಮತ್ತು ಸಾಮಾಜಿಕವಾಗಿ ಮೇಲ್ಮುಖ ಚಲನೆಯನ್ನು ಸಾಧಿಸುತ್ತಿದ್ದಂತೆ, ಸುಶಿಕ್ಷಿತ ಮಲಯಾಳಿಗಳು ದೈಹಿಕ ಶ್ರಮದ ಮತ್ತು ಕಠಿಣ ದುಡಿಮೆಗಳಿಂದ ಸಹಜವಾಗಿಯೇ ದೂರ ಸರಿದರು. ಇದು ರಾಜ್ಯವು ಭಾರತದ ಪೂರ್ವ ಮತ್ತು ಉತ್ತರದ ರಾಜ್ಯಗಳಾದ—ಮುಖ್ಯವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ ಮತ್ತು ಒಡಿಶಾದ ಕಡೆಗೆ ನೋಡುವಂತೆ ಮಾಡಿತು.
ವಿದೇಶದಲ್ಲಿರುವ ಮಲಯಾಳಿ ವಲಸಿಗರನ್ನು ನಿಯಂತ್ರಿಸುವ ಕಟ್ಟುನಿಟ್ಟಾದ ಸಾಂಸ್ಥಿಕ ಚೌಕಟ್ಟುಗಳಿಗೆ ಹೋಲಿಸಿದಾಗ, ಇಲ್ಲಿನ ದೇಶೀಯ ರಾಜಕೀಯ ನಿರೂಪಣೆಯಲ್ಲಿನ ಬೂಟಾಟಿಕೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಜಿಸಿಸಿ ದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ಕಾರ್ಮಿಕರು ಜಂಟಿ ಕಾರ್ಯಕಾರಿ ಗುಂಪುಗಳಿಂದ ನಿರ್ವಹಿಸಲ್ಪಡುವ ದ್ವಿಪಕ್ಷೀಯ ಕಾರ್ಮಿಕ ಒಪ್ಪಂದಗಳ ಮೂಲಕ ಸಾಂಸ್ಥಿಕ ಸುರಕ್ಷತೆಗಳನ್ನು ಪಡೆಯುತ್ತಾರೆ.
ಉದ್ಯೋಗ ನೀಡುವ ದೇಶಗಳು ಕಟ್ಟುನಿಟ್ಟಾದ ವೇತನ ಸಂರಕ್ಷಣಾ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ. ಇವು ವೇತನ ಕಳ್ಳತನವನ್ನು ತಡೆಯಲು ಸಮಯೋಚಿತ, ಡಿಜಿಟಲ್ ವೇತನ ವರ್ಗಾವಣೆಯನ್ನು ಕಡ್ಡಾಯಗೊಳಿಸುತ್ತವೆ. ಅದೇ ಸಮಯದಲ್ಲಿ, 'ಇ-ಮೈಗ್ರೇಟ್' ಮತ್ತು 'ಮದದ್' ಪೋರ್ಟಲ್ಗಳಂತಹ ವೇದಿಕೆಗಳು ಕಾರ್ಮಿಕರಿಗೆ ಭಾರತೀಯ ರಾಯಭಾರ ಕಚೇರಿಗಳಲ್ಲಿ ನೇರವಾಗಿ ಅಧಿಕೃತ ಕುಂದುಕೊರತೆಗಳನ್ನು ದಾಖಲಿಸಲು ಅವಕಾಶ ಮಾಡಿಕೊಡುತ್ತವೆ.
ಇದಲ್ಲದೆ, ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಆರ್ಥಿಕ, ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಭಾರತೀಯ ಸಮುದಾಯ ಕಲ್ಯಾಣ ನಿಧಿ ಸದಾ ಸಿದ್ಧವಾಗಿರುತ್ತದೆ.
ಅತ್ತ ಸಂಭ್ರಮ-ಇತ್ತ ಸೋರಿಕೆ
ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಒಳಗಿನ ಅಂತಾರಾಜ್ಯ ವಲಸಿಗರಿಗೆ ಇಂತಹ ಯಾವುದೇ ಕೇಂದ್ರೀಕೃತ ಗುತ್ತಿಗೆ ಜಾರಿ ಅಥವಾ ವೇತನ ಸಂರಕ್ಷಣಾ ಜಾಲಗಳಿಲ್ಲ. ಕೇರಳವನ್ನು ನಿರ್ಮಿಸಿದ ಅರ್ಥ ವ್ಯವಸ್ಥೆಯೇ—ಅಂದರೆ ವಲಸೆ ಹೋಗುವ, ದುಡಿಯುವ ಮತ್ತು ಬಡ ಕುಟುಂಬಗಳನ್ನು ಬೆಂಬಲಿಸಲು ಮನೆಗೆ ಹಣ ಕಳುಹಿಸುವ ಸ್ವಾತಂತ್ರ್ಯ—ದುಬೈನಲ್ಲಿರುವ ಮಲಯಾಳಿ ವ್ಯಕ್ತಿ ಮಾಡಿದಾಗ ಅದನ್ನು ಸಂಭ್ರಮಿಸಲಾಗುತ್ತದೆ, ಆದರೆ ಅದೇ ಕೆಲಸವನ್ನು ಕೊಚ್ಚಿಯಲ್ಲಿರುವ ದೇಶೀಯ ಕಾರ್ಮಿಕನು ಮಾಡಿದಾಗ ಅದನ್ನು 'ಆರ್ಥಿಕ ಸೋರಿಕೆ' ಎಂದು ಕರೆಯಲಾಗುತ್ತದೆ.
ಅರ್ಥ ವ್ಯವಸ್ಥೆಯನ್ನು ಕುಗ್ಗಿಸುವ ಬದಲು, ರಾಜ್ಯ ಸರ್ಕಾರದಿಂದ ಅಧಿಕೃತವಾಗಿ "ಅತಿಥಿ ಕಾರ್ಮಿಕರು" (ಅತಿಥಿ ತಮಿಳಾಳಿಕಲ್) ಎಂದು ಕರೆಯಲ್ಪಡುವ ಅಂತರರಾಜ್ಯ ವಲಸೆ ಕಾರ್ಮಿಕರು ಕೇರಳದ ಪ್ರಸ್ತುತ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್ಡಿಪಿ) ಬೆನ್ನೆಲುಬಾಗಿದ್ದಾರೆ.
'ಗುಲಾಟಿ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಸ್ ಅಂಡ್ ಟ್ಯಾಕ್ಸೇಶನ್'ನಂತಹ ಸಂಸ್ಥೆಗಳ ಸ್ವತಂತ್ರ ಸಂಶೋಧನೆಯ ಪ್ರಕಾರ ಕೇರಳದಲ್ಲಿ ವಲಸಿಗರ ಸಂಖ್ಯೆ 25 ರಿಂದ 35 ಲಕ್ಷದಷ್ಟಿದೆ ಎಂದು ಅಂದಾಜು ಮಾಡಲಾಗಿದೆ, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 10ರಷ್ಟಾಗುತ್ತದೆದೆ. ಕೇರಳದ ಬೃಹತ್ ವಸತಿ ಮತ್ತು ಮೂಲಸೌಕರ್ಯ ವಲಯದಲ್ಲಿನ ಶೇ.80ಕ್ಕಿಂತ ಹೆಚ್ಚು ದೈಹಿಕ ಶ್ರಮದ ಉದ್ಯೋಗಿಗಳಲ್ಲಿ ಅಂತಾರಾಜ್ಯ ವಲಸಿಗರೇ ಹೆಚ್ಚಾಗಿದ್ದಾರೆ. ಹಾಗೆಯೇ ಪ್ಲೈವುಡ್ ಕಾರ್ಖಾನೆಗಳಂತಹ ಉತ್ಪಾದನಾ ಘಟಕಗಳು ಮತ್ತು ಸೇವಾ ಆರ್ಥಿಕತೆಯು ಕಾರ್ಯನಿರ್ವಹಿಸಲು ಸಂಪೂರ್ಣವಾಗಿ ಇವರನ್ನೇ ಅವಲಂಬಿಸಿದೆ.
ಕೆರೆಯ ನೀರು ಕೆರೆಗೆ ಚೆಲ್ಲಿ
ಹಿಂತಿರುಗಿಸಿ ಕಳುಹಿಸುವ ಹಣವು ರಾಜ್ಯವನ್ನು ಅಸ್ಥಿರಗೊಳಿಸುತ್ತದೆ ಎಂಬ ವಾದವು ಆರ್ಥಿಕವಾಗಿ ಯಾವುದೇ ಸಾರವಿಲ್ಲದ್ದು. ಈ ಕಾರ್ಮಿಕರು ತಮ್ಮ ವೇತನವನ್ನು ಮೀರಿಸುವಂತಹ ಅಪಾರ ಭೌತಿಕ ಬಂಡವಾಳವನ್ನು ಸೃಷ್ಟಿಸುತ್ತಾರೆ ಮತ್ತು ಅವರ ಆದಾಯದ ಗಣನೀಯ ಭಾಗವನ್ನು ಬಾಡಿಗೆ, ಆಹಾರ ಮತ್ತು ಗ್ರಾಹಕ ವಸ್ತುಗಳಿಗಾಗಿ ಕೇರಳದ ಸ್ಥಳೀಯ ಅರ್ಥ ವ್ಯವಸ್ಥೆಯಲ್ಲಿಯೇ ಮರಳಿ ಖರ್ಚು ಮಾಡುತ್ತಾರೆ. ಇವರೇ ಇಲ್ಲದಿದ್ದರೆ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.
ಅವರ ಅನಿವಾರ್ಯತೆಯ ಹೊರತಾಗಿಯೂ, ಬಹುಪಾಲು ಕಾರ್ಮಿಕರು ಅಸಂಘಟಿತ ವಲಯದ ಅಸುರಕ್ಷಿತ ಮಿತಿಗಳಲ್ಲೇ ಕೆಲಸ ಮಾಡುತ್ತಾರೆ. ಇಲ್ಲಿನ ಬಹು-ಹಂತದ ಉಪ-ಗುತ್ತಿಗೆ ಪದ್ಧತಿಯು ಮುಖ್ಯ ಉದ್ಯೋಗದಾತರನ್ನು ನೇರ ಕಾನೂನು ಹೊಣೆಗಾರಿಕೆಯಿಂದ ದೂರವಿಡುವಂತೆ ಮಾಡುತ್ತದೆ. ಇದು ಸಾಂಸ್ಥಿಕ ನಿರ್ಲಕ್ಷ್ಯಕ್ಕೆ, ಅದರಲ್ಲೂ ವಿಶೇಷವಾಗಿ ಔದ್ಯೋಗಿಕ ಆರೋಗ್ಯ ಮಾನದಂಡಗಳ ನಿರ್ಲಕ್ಷ್ಯಕ್ಕೆ ಫಲವತ್ತಾದ ನೆಲವನ್ನು ಸೃಷ್ಟಿಸುತ್ತದೆ.
ಗುತ್ತಿಗೆದಾರರು ಮೇಲ್ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ, ಸುರಕ್ಷತಾ ಪಟ್ಟಿಗಳು, ಶಿರಸ್ತ್ರಾಣಗಳು ಅಥವಾ ಬೂಟುಗಳಂತಹ ಮೂಲಭೂತ ವೈಯಕ್ತಿಕ ರಕ್ಷಣಾ ಸಾಧನಗಳೂ ಇಲ್ಲದೆ ವಲಸಿಗರನ್ನು ನಿಯಮಿತವಾಗಿ ಆಳವಾದ ಗಣಿಗಾರಿಕೆ, ಬಹುಮಹಡಿ ಕಟ್ಟಡ ನಿರ್ಮಾಣ ಮತ್ತು ಸೂಕ್ಷ್ಮ ಭೂಪ್ರದೇಶಗಳಂತಹ ಹೆಚ್ಚಿನ ಅಪಾಯದ ಪರಿಸರಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ತೀವ್ರವಾದ ಭಾಷಾ ಅಡೆತಡೆಗಳಿಂದ ಪ್ರತ್ಯೇಕಿಸಲ್ಪಟ್ಟಿರುವ ಮತ್ತು ಸ್ಥಳೀಯ ರಾಜಕೀಯ ಪ್ರಭಾವವಿಲ್ಲದ ಇವರಿಗೆ, ಸಂಘಟಿತರಾಗುವ ಅಥವಾ ನ್ಯಾಯಯುತ ವೇತನ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಒತ್ತಾಯಿಸುವ ಸಾಮರ್ಥ್ಯ ಪ್ರಾಯೋಗಿಕವಾಗಿ ಶೂನ್ಯವಾಗಿರುತ್ತದೆ.
ನೀತಿ ಮತ್ತು ಅನುಷ್ಠಾನದ ನಡುವಿನ ಅಂತರ
ವಿಶ್ಲೇಷಣೆಯನ್ನು ವಸ್ತುನಿಷ್ಠವಾಗಿಡಲು, ವಲಸಿಗ ಕುಟುಂಬಗಳಿಗಾಗಿ ಕೇರಳವು ಹಲವಾರು ಪ್ರಗತಿಪರ ಸಾಮಾಜಿಕ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಇದು ಭಾರತದ ಇತರ ನಿರ್ಲಕ್ಷಿತ ವಲಯಗಳಿಗೆ ಹೋಲಿಸಿದರೆ ಕೇರಳವನ್ನು ಭಿನ್ನವಾಗಿ ನಿಲ್ಲಿಸುತ್ತದೆ.
ಕೇರಳವು 'ಒಂದು ದೇಶ, ಒಂದು ಪಡಿತರ ಚೀಟಿ' ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದೆ. ಇದನ್ನು ಇನ್ನಷ್ಟು ಸರಳಗೊಳಿಸಲು, ರಾಜ್ಯ ಸರ್ಕಾರವು ವಲಸೆ ಕಾರ್ಮಿಕರಿಗಾಗಿ ಪ್ರತ್ಯೇಕ "ರೇಷನ್ ರೈಟ್ ಕಾರ್ಡ್ಗಳನ್ನು” ಪರಿಚಯಿಸಿದೆ. ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದ ತಂತ್ರಜ್ಞಾನವನ್ನು ಬಳಸಿಕೊಂಡು, ವಲಸೆ ಕಾರ್ಮಿಕರು ಕೇರಳದಲ್ಲಿ ತಮಗೆ ಸಿಗಬೇಕಾದ ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು (ಅಕ್ಕಿ ಮತ್ತು ಗೋಧಿ) ಸುಲಭವಾಗಿ ಪಡೆಯಬಹುದು. ಅದೇ ಸಮಯದಲ್ಲಿ, ಅವರ ತಾಯ್ನಾಡಿನಲ್ಲಿರುವ ಅವರ ಕುಟುಂಬದವರು ಅದೇ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಪಾಲಿನ ಉಳಿದ ಪಡಿತರವನ್ನು ಪಡೆಯಬಹುದು.
ಮಕ್ಕಳ ಕಲ್ಯಾಣ ಮತ್ತು ಶಿಶುಪಾಲನಾ ಕೇಂದ್ರಗಳು: ಇತ್ತೀಚಿನ ದಿನಗಳಲ್ಲಿ ವಲಸಿಗರು ಕುಟುಂಬ ಸಮೇತರಾಗಿ ಬರುತ್ತಿರುವುದನ್ನು ಮನಗಂಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತ್ಯೇಕ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಿದೆ. ಕೊಚ್ಚಿಯ ಕೇರಳ ಹೈಕೋರ್ಟ್ ಬಳಿ ಇರುವ ಮಾದರಿ ಕೇಂದ್ರವು ಇದಕ್ಕೆ ಅತ್ಯುತ್ತಮ ಉದಾಹರಣೆ. ಮುಂಜಾನೆಯಿಂದ ಸಂಜೆಯವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರಗಳು ಉಚಿತ ಪೂರ್ವ-ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ, ಸುರಕ್ಷಿತ ಮಲಗುವ ವ್ಯವಸ್ಥೆ ಮತ್ತು ಆರೋಗ್ಯ ತಪಾಸಣೆಯನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಕರೆತರಲು ಮತ್ತು ಮರಳಿ ಬಿಡಲು ವಾಹನಗಳ ವ್ಯವಸ್ಥೆಯನ್ನೂ ಮಾಡುತ್ತವೆ.
ಶೈಕ್ಷಣಿಕ ಏಕೀಕರಣ: ಎರ್ನಾಕುಲಂನಲ್ಲಿ ಜಾರಿಯಲ್ಲಿರುವ 'ಪ್ರಾಜೆಕ್ಟ್ ರೋಶ್ನಿ'ಯಂತಹ ಉಪಕ್ರಮಗಳು ವಲಸಿಗರ ಮಕ್ಕಳಿಗೆ ಮಲಯಾಳಂ ಕಲಿಸುವ ಮೂಲಕ ಭಾಷಾ ಅಡಚಣೆಯನ್ನು ನಿವಾರಿಸುತ್ತಿವೆ. ಇದು ಅವರನ್ನು ಯಶಸ್ವಿಯಾಗಿ ಸರ್ಕಾರಿ ಶಾಲಾ ವ್ಯವಸ್ಥೆಗೆ ಒಳಪಡಿಸಲು ಮತ್ತು ಶಾಲೆಯಿಂದ ಹೊರಗುಳಿಯದೇ ಇರುವಂತೆ ಮಾಡಲು ಸಹಕಾರಿಯಾಗಿದೆ. ಇದರೊಂದಿಗೆ, 'ಪ್ರಾಜೆಕ್ಟ್ ಜ್ಯೋತಿ' ಯೋಜನೆಯು ರಾಜ್ಯಾದ್ಯಂತ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಶಿಕ್ಷಣದ ಹಕ್ಕು ಕಾಯ್ದೆಯಡಿ ಅವರನ್ನು ಸ್ಥಳೀಯ ಅಂಗನವಾಡಿಗಳು ಮತ್ತು ಸರ್ಕಾರಿ ಶಾಲೆಗಳಿಗೆ ಸೇರಿಸುವ ಕೆಲಸ ಮಾಡುತ್ತಿದೆ.
ವಸತಿ ಮತ್ತು ಆರೋಗ್ಯ ರಕ್ಷಣೆ: ಸುರಕ್ಷಿತ ಮತ್ತು ನೈರ್ಮಲ್ಯಯುತ ಬಾಡಿಗೆ ವಸತಿ ಸಂಕೀರ್ಣಗಳನ್ನು ಒದಗಿಸಲು ರಾಜ್ಯವು 'ಅಪ್ನಾ ಘರ್' ಯೋಜನೆಯನ್ನು ಜಾರಿಗೆ ತಂದಿದೆ. ಇದರ ಜೊತೆಗೆ, ಉಚಿತ ವೈದ್ಯಕೀಯ ಆರೈಕೆ ಮತ್ತು ಅಪಘಾತ ವಿಮೆಯನ್ನು ಒದಗಿಸುವ 'ಆವಾಜ್' ಆರೋಗ್ಯ ವಿಮಾ ಯೋಜನೆಯನ್ನೂ ಜಾರಿಗೆ ತಂದಿದೆ.
ಆದಾಗ್ಯೂ, ಈ ಯೋಜನೆಗಳ ಅನುಷ್ಠಾನ ಮತ್ತು ಕಟ್ಟುನಿಟ್ಟಾದ ಜಾರಿಯಲ್ಲಿ ಗಂಭೀರವಾದ ನ್ಯೂನತೆಯಿದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಅವರ ಅನೌಪಚಾರಿಕ ಉದ್ಯೋಗದಾತರಿಂದ ಇಂದಿಗೂ ನೋಂದಾಯಿತರಾಗಿಲ್ಲ. ಹಾಗಾಗಿ ಗುತ್ತಿಗೆದಾರರ ನಿಯಮ ಪಾಲನೆಯು ಅತ್ಯಂತ ಕಳಪೆಯಾಗಿದೆ. ಇದರ ಪರಿಣಾಮವಾಗಿ, ಸರ್ಕಾರ ಪ್ರಾಯೋಜಿತ ಈ ಸೌಲಭ್ಯಗಳು ದೂರದ ಮತ್ತು ಪ್ರತ್ಯೇಕ ಯೋಜನಾ ಸ್ಥಳಗಳಲ್ಲಿ ದುಡಿಯುವ ಅತ್ಯಂತ ದುರ್ಬಲ ಕಾರ್ಮಿಕರನ್ನು ತಲುಪುತ್ತಿಲ್ಲ.
ರಚನಾತ್ಮಕ ಸುಧಾರಣೆಯ ನೀಲನಕ್ಷೆ
ಕೇರಳವು ತನ್ನ ನೈತಿಕ ಮೌಲ್ಯಗಳಿಗೆ ಧಕ್ಕೆ ತರದೇ ತನ್ನ ಅಭಿವೃದ್ಧಿ ಮಾದರಿಯನ್ನು ಮುಂದುವರಿಸಬೇಕಾದರೆ, ಸತೀಶನ್ ನೇತೃತ್ವದ ಆಡಳಿತವು ವಲಸಿಗರನ್ನು ಹೊರಗಿಡುವ ವಾಗ್ದಾಳಿಗಳಿಂದ ದೂರ ಸರಿದು, ಕಟ್ಟುನಿಟ್ಟಾದ ಮತ್ತು ಮಾನವೀಯ ದೃಷ್ಟಿಕೋನಗಳಿಂದ ಕೂಡಿದ ಆಡಳಿತದತ್ತ ಸಾಗಬೇಕಾಗಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಜಾರಿಗೊಳಿಸಬಹುದಾದ ರಚನಾತ್ಮಕ ಸುಧಾರಣೆಗಳ ಮೂಲಕ ಕಾರ್ಮಿಕ ಕಾನೂನು ಅನುಷ್ಠಾನ ವ್ಯವಸ್ಥೆಯನ್ನು ತಕ್ಷಣವೇ ಸುಧಾರಿಸಬೇಕಾದ ಅಗತ್ಯವಿದೆ.
ಕಡ್ಡಾಯ ಡಿಜಿಟಲ್ ಹಾಜರಾತಿ ಪುಸ್ತಕಗಳು: ಪ್ರತಿಯೊಂದು ವಾಣಿಜ್ಯ, ವಸತಿ ಮತ್ತು ಮೂಲಸೌಕರ್ಯ ಯೋಜನಾ ಸ್ಥಳಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ, ತುರ್ತು ಸಂಪರ್ಕ ವಿವರಗಳು ಮತ್ತು ಕಾಯಂ ವಿಳಾಸಗಳನ್ನು ಒಳಗೊಂಡಿರುವ ನೈಜ-ಸಮಯದ, ಡಿಜಿಟಲೀಕೃತ ಹಾಜರಾತಿ ಪುಸ್ತಕ ಹೊಂದುವುದನ್ನು ರಾಜ್ಯ ಸರ್ಕಾರವು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಬೇಕು. ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಪತ್ತೆಹಚ್ಚಲು ಅನುಕೂಲವಾಗುವಂತೆ ಈ ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕಾರ್ಮಿಕ ಇಲಾಖೆಗೆ ಲಭ್ಯವಿರುವ ಕೇಂದ್ರೀಕೃತ ಪೋರ್ಟಲ್ಗೆ ನೇರವಾಗಿ ಲಿಂಕ್ ಮಾಡಬೇಕು.
ಕಟ್ಟುನಿಟ್ಟಾದ ಔದ್ಯೋಗಿಕ ಸುರಕ್ಷತಾ ತಪಾಸಣೆ: ಕಾರ್ಮಿಕ ಇಲಾಖೆಯು ಎಲ್ಲಾ ಹೆಚ್ಚಿನ ಅಪಾಯದ ಕೆಲಸದ ಸ್ಥಳಗಳಲ್ಲಿ ಪೂರ್ವಸೂಚನೆ ಇಲ್ಲದೆಯೇ ಕಟ್ಟುನಿಟ್ಟಾದ ಸುರಕ್ಷತಾ ತಪಾಸಣೆಗಳನ್ನು ನಡೆಸಬೇಕು. ಗುಣಮಟ್ಟದ ಸುರಕ್ಷತಾ ಸಾಧನಗಳನ್ನು ಒದಗಿಸಲು ವಿಫಲವಾಗುವ ಅಥವಾ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ಉಪಗುತ್ತಿಗೆದಾರರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು, ಭಾರಿ ಆರ್ಥಿಕ ದಂಡ ವಿಧಿಸಬೇಕು ಮತ್ತು ನಿರ್ಲಕ್ಷ್ಯಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ನೋಂದಣಿಯಲ್ಲಿ ಉತ್ತರದಾಯಿತ್ವ: ಕಾರ್ಮಿಕರನ್ನು ರಾಜ್ಯ ಕಲ್ಯಾಣ ಕಾರ್ಯಕ್ರಮಗಳು, 'ಅತಿಥಿ ಆ್ಯಪ್' ಮತ್ತು 'ಆವಾಜ್' ವಿಮಾ ಯೋಜನೆಗೆ ನೋಂದಾಯಿಸುವ ಜವಾಬ್ದಾರಿಯನ್ನು ಕಾನೂನುಬದ್ಧವಾಗಿ ಸಂಪೂರ್ಣವಾಗಿ ಮುಖ್ಯ ಉದ್ಯೋಗದಾತರು ಮತ್ತು ಗುತ್ತಿಗೆದಾರರ ಮೇಲೆಯೇ ಹೊರಿಸಬೇಕು. ಕೆಲಸ ಪ್ರಾರಂಭಿಸಿದ 48 ಗಂಟೆಗಳ ಒಳಗೆ ಈ ನೋಂದಣಿ ಪ್ರಕ್ರಿಯೆ ಮುಗಿಸಲು ಕಟ್ಟುನಿಟ್ಟಾದ ಗಡುವು ನಿಗದಿಪಡಿಸಬೇಕು.
ಸಾರ್ವಜನಿಕ ಜಾಗೃತಿಯ ಸುಧಾರಣೆ: ವಲಸಿಗರನ್ನು ಆರ್ಥಿಕ ಹೊರೆ ಅಥವಾ ಭದ್ರತಾ ಬೆದರಿಕೆ ಎಂಬಂತೆ ಬಿಂಬಿಸುವ ಪ್ರಾದೇಶಿಕ ದ್ವೇಷದ ನಿರೂಪಣೆಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜಗಳು ಸಕ್ರಿಯವಾಗಿ ವಿರೋಧಿಸಬೇಕು. ಸಮುದಾಯ ಆರೋಗ್ಯವನ್ನು ತಲುಪಿಸುವ ಮತ್ತು ಯೋಗ್ಯವಾದ ವಸತಿ ಉಪಕ್ರಮಗಳ ಮೂಲಕ ಈ ಕಾರ್ಮಿಕರನ್ನು ಸಮಾಜದಲ್ಲಿ ಒಗ್ಗೂಡಿಸುವುದು ಸಾಮಾಜಿಕ ಕಂದಕವನ್ನು ಮುಚ್ಚಲು ಅತ್ಯಗತ್ಯವಾಗಿದೆ.
ಕೇರಳದಲ್ಲಿನ ಅಂತರರಾಜ್ಯ ವಲಸೆ ಕಾರ್ಮಿಕರ ಸುತ್ತಲಿನ ಚರ್ಚೆಗಳನ್ನು ಇನ್ನು ಮುಂದೆ ಕೇವಲ ತಣ್ಣನೆಯ, ಸಂರಕ್ಷಣಾತ್ಮಕ ಮತ್ತು ಆರ್ಥಿಕ ಲೆಕ್ಕಾಚಾರಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ವಯನಾಡ್ನ ದುರಂತ ಮತ್ತು ಅಸಂಘಟಿತ ವಲಯದಲ್ಲಿನ ವ್ಯವಸ್ಥಿತ ಶೋಷಣೆಯು ಒಂದು ತುರ್ತು ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಕಾರ್ಮಿಕರು ರಾಜ್ಯದಿಂದ ಹಣವನ್ನು ಲೂಟಿ ಮಾಡುವ ತಾತ್ಕಾಲಿಕ ಅತಿಥಿಗಳಲ್ಲ, ಬದಲಿಗೆ ಅವರು ಕೇರಳದ ಆಧುನಿಕ ವಾಸ್ತವತೆಯನ್ನು ನಿರ್ಮಿಸಿದ ಮೂಲಭೂತ ನಿರ್ಮಾತೃಗಳಾಗಿದ್ದಾರೆ.
ಐತಿಹಾಸಿಕವಾಗಿ ಜಾಗತಿಕ ವಲಸೆಯ ಫಲಗಳಿಂದಲೇ ಅಭಿವೃದ್ಧಿ ಹೊಂದಿದ ಸಮಾಜಕ್ಕೆ, ತನ್ನದೇ ದೇಶದ ಆಂತರಿಕ ವಲಸಿಗರನ್ನು ಉದಾಸೀನತೆಯಿಂದ ಕಾಣುವುದು ಒಂದು ಗಹನ ನೈತಿಕ ವೈಫಲ್ಯವಾಗಿದೆ.
ಕೇರಳದ ಪ್ರಸಿದ್ಧ ಸಾಮಾಜಿಕ ಮಾದರಿಯ ನಿಜವಾದ ಯಶಸ್ಸು ಯಾವುದರಲ್ಲಿದೆ ಎಂದರೆ—ವಿದೇಶದಲ್ಲಿರುವ ತನ್ನದೇ ನಾಗರಿಕರಿಗೆ ಅದು ಯಾವ ಹಕ್ಕುಗಳು, ಗೌರವ ಮತ್ತು ರಕ್ಷಣೆಯನ್ನು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆಯೋ, ಅದೇ ರೀತಿಯ ಹಕ್ಕುಗಳು ಮತ್ತು ಸುರಕ್ಷತೆಯನ್ನು ತನ್ನ ಗಡಿಯೊಳಗೆ ದುಡಿಯುವ ಕಾರ್ಮಿಕರಿಗೂ ವಿಸ್ತರಿಸುವ ಅದರ ಸಾಮರ್ಥ್ಯದಲ್ಲಿದೆ. ದುಡಿಯುವ ಸ್ಥಳದಲ್ಲಿ ಉತ್ತರದಾಯಿತ್ವವನ್ನು ಮರುಸ್ಥಾಪಿಸುವುದು ಒಂದು ತುರ್ತು ಮಾನವೀಯ ಅಗತ್ಯತೆಯಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


