
ಸರ್ಕಾರಿ ಶಾಲೆಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮುಚ್ಚಿ ಹೋಗಿವೆ, ಆರೋಗ್ಯ ನಿಧಿಗಳು ಕುಂಠಿತಗೊಂಡಿವೆ. ಇಂತಹ ಹೊತ್ತಿನಲ್ಲಿ ಕೇಂದ್ರ ಸರ್ಕಾರ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದು ಹೊರಟಿದೆ.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಪದೇ ಪದೇ ಸೋರಿಕೆಯಾಗುತ್ತಿರುವುದರ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದ ಬಳಿಕ ಈಗ ಭಾರತದ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಯ ಕಡೆಗೆ ಗಮನ ಹರಿದಿದೆ. ಇತ್ತೀಚಿನ ವರದಿಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಶಾಶ್ವತವಾಗಿ ಬಾಗಿಲು ಹಾಕಿರುವ ಸರ್ಕಾರ ಶಾಲೆಗಳ ಸಂಖ್ಯೆಯೇ 94 ಸಾವಿರ ಮೀರಿದೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಂತೂ ಶಿಕ್ಷಣದ ಸ್ಥಿತಿ ಶೋಚನೀಯವಾಗಿದೆ.
ಅಷ್ಟಕ್ಕೂ ಸರ್ಕಾರಿ ಶಾಲೆಗಳನ್ನು ಯಾಕೆ ಮುಚ್ಚಲಾಗುತ್ತಿದೆ ಎಂಬುದಕ್ಕೆ ಸೂಕ್ತ ವಿವರಣೆಯನ್ನು ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ದಾಖಲಾತಿಯಲ್ಲಿ ಗಣನೀಯ ಕುಸಿತ ಉಂಟಾಗಿದ್ದರೆ ಅದರಲ್ಲಿ ಅಚ್ಚರಿ ಪಡಬೇಕಾದ್ದಿಲ್ಲ. ಇದೇ ಹೊತ್ತಿನಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಲ್ಲಿ ವಿಶೇಷತೆಯೇನೂ ಇಲ್ಲ.
ಬಡ ಕುಟುಂಬಗಳಿಗೆ ಬರೆ
ತೀರಾ ಕಡಿಮೆ ಆದಾಯವನ್ನು ಹೊಂದಿರುವ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ನೀಡುವ ಹಂಬಲವನ್ನು ಹೊಂದಿವೆ. ಶಿಕ್ಷಣಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ ಎಂಬುದು ಈ ಕುಟುಂಬಗಳಿಗೆ ಅರಿವಿದೆ. ಆದರೆ ಸರ್ಕಾರಿ ಶಾಲೆಗಳು ನಿರಂತರ ಮುಚ್ಚುತ್ತಲೇ ಸಾಗಿರುವುದು ಆಘಾತಕ್ಕೆ ಕಾರಣವಾಗಿದೆ. ಹಳ್ಳಿಗಳಲ್ಲಿ ಮನೆಗಳಿಗೆ ಹತ್ತಿರದಲ್ಲೇ ಇರುವ ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದ ಈ ಕಡಿಮೆ ಆದಾಯದ ಕುಟುಂಬಗಳ ಮೇಲೆ ಈಗ ಇದ್ದಕ್ಕಿದ್ದಂತೆ ಹೆಚ್ಚಿನ ಹೊರೆ ಬಿದ್ದಿದೆ.
ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿದ್ದರಿಂದ ಮಕ್ಕಳಿಗೆ ಒಂದು ಹೊತ್ತಿನ ಪೌಷ್ಟಿಕ ಆಹಾರವಾದರೂ ಲಭ್ಯವಾಗುತ್ತಿತ್ತು. ಒಂದು ರೀತಿಯಲ್ಲಿ ಇದು ಸಾಕಷ್ಟು ಕುಟುಂಬಗಳಿಗೆ ಆಸರೆ ಕೂಡ ಆಗಿತ್ತು.
ಪ್ರಾಥಮಿಕ ಶಾಲೆಗಳ ವಿಷಯದಲ್ಲಿ ಮತ್ತೊಂದು ಅಂಶವೂ ಇದೆ. ಖಾಸಗಿ ಶಾಲೆಗಳು ನೆರೆಹೊರೆಯಿಂದ ದೂರವಿದ್ದು, ನಡೆದುಕೊಂಡು ಹೋಗುವ ದೂರ ಹೆಚ್ಚಾಗಿದೆ. ಇದು ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ಹೆಣ್ಣುಮಕ್ಕಳಲ್ಲಿ—ಶಾಲೆ ತೊರೆಯುವವರ ಸಂಖ್ಯೆ ಹೆಚ್ಚಿಸುವಂತೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಸಾಲು ಸಾಲು ಸವಾಲುಗಳಿದ್ದು, ಅಪಾರ ಸಂಖ್ಯೆಯ ಮಕ್ಕಳು ಮತ್ತು ಯುವಕರು ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ನಮ್ಮಂತಹ ದೇಶಕ್ಕೆ ಎಚ್ಚರಿಕೆಯ ಗಂಟೆ ಬಾರಿಸುತ್ತಿರುವ ಅಧಿಕೃತ ಅಂಕಿ-ಅಂಶಗಳೊಂದಿಗೆ ಈ ದುರದೃಷ್ಟಕರ ಬೆಳವಣಿಗೆಯೂ ಸೇರಿಕೊಂಡಿದೆ.
ಬಜೆಟ್ ಆದ್ಯತೆ
ಸರ್ಕಾರದ ನೀತಿಯಲ್ಲಿ ಒಂದು ಕ್ಷೇತ್ರವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆಯೇ ಅಥವಾ ಕಳೆದುಕೊಂಡಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ಒಂದು ನಂಬಿಕಾರ್ಹ ಅಳತೆಗೋಲಿದೆ. ಆ ಅಳತೆಗೋಲೆಂದರೆ ಅದಕ್ಕೆ ಹಂಚಿಕೆ ಮಾಡಲಾದ ಬಜೆಟ್.
ಕಳೆದ 12 ವರ್ಷಗಳಲ್ಲಿ ಕೇಂದ್ರ ಬಜೆಟ್ನಲ್ಲಿ ಶಿಕ್ಷಣದ ಪಾಲು ಗಮನಾರ್ಹವಾಗಿ ಕುಸಿದಿದೆ. ಇದು ಸರ್ಕಾರದ ಆದ್ಯತೆಗಳು ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿರುವ ಸಾಪೇಕ್ಷ ಪ್ರಾಮುಖ್ಯತೆಯ ಕುರಿತು ಪ್ರಶ್ನೆಗಳನ್ನು ಎತ್ತುತ್ತದೆ.
ಕೇಂದ್ರ ಬಜೆಟ್ನಲ್ಲಿ ಶಿಕ್ಷಣ ಸಚಿವಾಲಯದ ಪಾಲು 2013-14ರಲ್ಲಿ ಶೇ. 4.6 ರಷ್ಟಿದ್ದುದ್ದು, 2025-26 ರಲ್ಲಿ ಕೇವಲ ಶೇ. 2.5 ಕ್ಕೆ ಕುಸಿದಿದೆ. ಇದರರ್ಥ 12 ವರ್ಷಗಳ ಹಿಂದೆ ಶಿಕ್ಷಣಕ್ಕೆ ಸಿಗುತ್ತಿದ್ದ ಹಣಕ್ಕೆ ಹೋಲಿಸಿದರೆ ಇಂದು ಸುಮಾರು ಅರ್ಧದಷ್ಟು ಮಾತ್ರ ಸಿಗುತ್ತಿದೆ.
ಬಜೆಟ್ ಕಡಿತವು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶಿಕ್ಷಣವು ಮೂಲಭೂತ ಅವಶ್ಯಕತೆ̤ ಹಾಗಿದ್ದರೂ ಸಹ, ಸರ್ಕಾರದ ವೆಚ್ಚದಲ್ಲಿ ಅದಕ್ಕೆ ನೀಡುತ್ತಿರುವ ಆದ್ಯತೆ ಕುಸಿದಿದೆ ಎಂಬುದಕ್ಕೆ ಅದು ಸೂಚನೆಯಾಗಿದೆ.
ಕೌಶಲ್ಯ ಅಭಿವೃದ್ಧಿ: ಅನುದಾನವೇ ಅತ್ಯಲ್ಪ
ಶಿಕ್ಷಣಕ್ಕೆ ನಿಕಟವಾಗಿ ಸಂಬಂಧಿಸಿದ್ದು ಸರ್ಕಾರದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ. ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಉನ್ನತೀಕರಿಸುವ ತರಬೇತಿಯು ಸುಮಾರು 2008ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (ಎನ್ಎಸ್ಡಿಸಿ) ರೂಪದಲ್ಲಿ ಪ್ರಾರಂಭವಾಯಿತು. ನಂತರ 2015ರಲ್ಲಿ ಕೌಶಲ್ಯ ಭಾರತ ಮಿಷನ್ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ರೂಪದಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು.
ಕೌಶಲ್ಯ ಅಭಿವೃದ್ಧಿಯ ಪ್ರಾಮುಖ್ಯತೆ ಮತ್ತು ಸರ್ಕಾರದ 'ಕೌಶಲ್ಯ ಭಾರತ'ದ ಮೇಲಿನ ಒತ್ತು ನೀಡಿದರೂ ಸಹ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಕ್ಕೆ ನೀಡಲಾದ ನೇರ ಅನುದಾನ ಅಚ್ಚರಿಪಡುವಷ್ಟು ಅತ್ಯಲ್ಪವಾಗಿದೆ. ಇದು 2015 ರಲ್ಲಿ ವಾರ್ಷಿಕ ಬಜೆಟ್ನ ಕೇವಲ ಶೇ.0.06 ರಷ್ಟಿತ್ತು ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇನ್ನೂ ದುಸ್ಥಿತಿ ಏನೆಂದರೆ 2025-2026 ರ ವೇಳೆಗೆ ಇದು ಮತ್ತಷ್ಟು ಕುಸಿದು ಶೇ.0.05ಕ್ಕೆ ತಲುಪಿತು.
ಬಹಳಷ್ಟು ಪ್ರಚಾರ ಪಡೆದಿರುವ 'ಕೌಶಲ್ಯ ಭಾರತ ಮಿಷನ್' ವಾರ್ಷಿಕ ಬಜೆಟ್ನ ಅತ್ಯಲ್ಪ ಶೇಕಡಾ 0.05 ರಷ್ಟು ಅನುದಾನದೊಂದಿಗೆ ನರಳುತ್ತಿದೆ. ನಮ್ಮ ಯುವಕರು, ವಿಶೇಷವಾಗಿ ಗ್ರಾಮೀಣ ಯುವಕರು ಯೋಗ್ಯ ಉದ್ಯೋಗಗಳನ್ನು ಪಡೆಯಲು, ಉದ್ಯಮಿಗಳಾಗಲು ಅಥವಾ ಆದಾಯ ಸೃಷ್ಟಿಕರ್ತರಾಗಲು ಅಗತ್ಯವಾದ ಕೌಶಲ್ಯಗಳನ್ನು ಹೇಗಾದರೂ ಪಡೆದುಕೊಳ್ಳಲು ಸಾಧ್ಯವಿದೆ?
ಆರೋಗ್ಯ ರಕ್ಷಣೆಯ ಪರಿಸ್ಥಿತಿಯೂ ಕೂಡ ಆಶಾದಾಯಕವಾಗಿಲ್ಲ. ದೆಹಲಿ, ಲಕ್ನೋ, ಪಾಟ್ನಾ ಅಥವಾ ಯಾವುದೇ ನಗರವಾಗಿರಲಿ, ಅಲ್ಲಿನ ಆಸ್ಪತ್ರೆಗಳ ಕಾರಿಡಾರ್ಗಳಲ್ಲಿ ಕಿಕ್ಕಿರಿದು ತುಂಬಿರುವ ಗ್ರಾಮೀಣ ಭಾರತದ ರೋಗಿಗಳ ದಂಡನ್ನು ಮತ್ತು ಮೈಲಿಗಳಷ್ಟು ಉದ್ದದ ಸರತಿ ಸಾಲುಗಳನ್ನು ಒಮ್ಮೆ ಗಮನಿಸಿದರೆ ಇದು ಅರ್ಥವಾಗುತ್ತದೆ.
ಕಾರಣವೇನೆಂದರೆ, ಹಳ್ಳಿಗಳಲ್ಲಿ ಅತ್ಯಂತ ಕಳಪೆ ಮಟ್ಟದ ಆರೋಗ್ಯ ಸೇವೆ ಲಭ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳಿಲ್ಲ ಮತ್ತು ಸಿಬ್ಬಂದಿಯ ತೀವ್ರ ಕೊರತೆಯಿದೆ; ಜಿಲ್ಲಾ ಆಸ್ಪತ್ರೆಗಳು ತಕ್ಕಮಟ್ಟಿಗೆ ಉತ್ತಮವಾಗಿವೆ ಎಂಬುದು ನಿಜವಾದರೂ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಗಂಭೀರವಾಗಿ ಹಿಂದುಳಿದಿವೆ. ಇದರ ಪರಿಣಾಮವಾಗಿ ಎಲ್ಲರೂ ವೈದ್ಯಕೀಯ ಚಿಕಿತ್ಸೆ ಲಭ್ಯವಿರುವ ನಗರ ಪ್ರದೇಶಗಳತ್ತ ಮುಖ ಮಾಡುತ್ತಾರೆ.
ವಾಸ್ತವವೆಂದರೆ ಭಾರತದಲ್ಲಿ ಆರೋಗ್ಯ ಸೇವೆಯು ತೀವ್ರ ಅಸಮಾನತೆಯಿಂದ ಕೂಡಿದೆ. ವಿಶ್ವ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ತಜ್ಞರು ಮತ್ತು ಅತ್ಯಾಧುನಿಕ ಔಷಧಿಗಳಂತಹ ಎಲ್ಲಾ ಸೌಲಭ್ಯಗಳು ನಗರಗಳಲ್ಲೇ ಇವೆ. ಮತ್ತೊಂದೆಡೆ, ಗ್ರಾಮೀಣ ಪ್ರದೇಶಗಳು ವೈದ್ಯರ ಕೊರತೆ, ಅಸಮರ್ಪಕ ಸೌಲಭ್ಯಗಳು ಮತ್ತು ಅಗತ್ಯ ಚಿಕಿತ್ಸೆಗೆ ಮಿತ ಪ್ರವೇಶದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಗ್ರಾಮೀಣ ಬಡವರ ಮೇಲಿನ ಹೊರೆ
ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯು ಬಹುತೇಕ ನಗರ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿರುವ ಕಾರಣ, ಪ್ರಮುಖ ವೈದ್ಯಕೀಯ ಅವಶ್ಯಕತೆಗಳಿಗಾಗಿ ಗ್ರಾಮೀಣ ಜನರು ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ ಮತ್ತು ತಮ್ಮ ಜೇಬಿನಿಂದಲೇ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಈ ಸಂಪೂರ್ಣ ಅನ್ಯಾಯದ ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರಕ್ಕಾಗಿ ಸರ್ಕಾರದ ಬಜೆಟ್ ಹಂಚಿಕೆಯನ್ನು ಒಮ್ಮೆ ಪರಿಶೀಲಿಸೋಣ. ಆರೋಗ್ಯ ಬಜೆಟ್ ವರ್ಷಗಳಿಂದಲೂ ಬಹುತೇಕ ಸ್ಥಿರವಾಗಿಯೇ ಉಳಿದಿದ್ದು, ಜಿಡಿಪಿಯ ಶೇ.0.5 ರಿಂದ ಶೇ1.9 ರ ನಡುವೆ ಏರಿಳಿತಗೊಳ್ಳುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಇಂತಹ ದೊಡ್ಡ ಸವಾಲುಗಳನ್ನು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ರೋಗದ ಹೊರೆಯನ್ನು ಹೊಂದಿರುವ ದೇಶಕ್ಕೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಶಿಕ್ಷಣ ಮತ್ತು ಆರೋಗ್ಯದ ಮೇಲಿನ ಸರ್ಕಾರದ ವೆಚ್ಚದಲ್ಲಿನ ಕುಸಿತ ಅಥವಾ ನಿಶ್ಚಲತೆ ಭಾರತದ ಯುವಕರ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ. ದೇಶದ ಬೆಳವಣಿಗೆಗೆ ಎಂಜಿನ್ ಆಗಬೇಕಿದ್ದ ನಮ್ಮ ಜನಸಂಖ್ಯಾ ಲಾಭಾಂಶವು ಸೂಕ್ತ ಬೆಂಬಲವಿಲ್ಲದೆ ಕುಂಠಿತಗೊಂಡು, ಈಗ ಜನಸಂಖ್ಯಾ ಹೊರೆಯಾಗಿ ಪರಿಣಮಿಸಿದೆ.
ಸರ್ಕಾರದ ವೆಚ್ಚದ ನಿರ್ದಯ ಸ್ವರೂಪವನ್ನು ಮುಂದಿನ ಅಂಶಗಳು ತೋರಿಸಿಕೊಡುತ್ತವೆ.
ರಸ್ತೆಗಳಿಗೆ ಸಿಗುತ್ತಿದೆ ಅಗ್ರ ಆದ್ಯತೆ
ಶಿಕ್ಷಣ, ಕೌಶಲ್ಯ ತರಬೇತಿ ಮತ್ತು ಆರೋಗ್ಯ ಕ್ಷೇತ್ರಗಳ ಕಡೆಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದರ ನಡುವೆಯೇ, ರಸ್ತೆ ಮತ್ತು ಹೆದ್ದಾರಿ ಕ್ಷೇತ್ರಕ್ಕೆ ಭಾರಿ ಪ್ರಮಾಣದ ಬೆಂಬಲ ಸಿಗುತ್ತಿದೆ. ಕೇಂದ್ರ ಬಜೆಟ್ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪಾಲಾಗುವ ಮೊತ್ತವು ಕಳೆದ 12 ವರ್ಷಗಳಲ್ಲಿ ಸುಮಾರು ಮೂರರಷ್ಟು ಹೆಚ್ಚಾಗಿದೆ. 2021-22 ರಲ್ಲಿ ಇದು ಒಟ್ಟು ಬಜೆಟ್ನ ಸುಮಾರು ಶೇ. 6ಕ್ಕೆ ಏರಿದೆ ಮತ್ತು ಆ ನಂತರವೂ ಅದರಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.
ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸಬಾರದು ಎಂದು ಯಾರೂ ವಾದಿಸುವುದಿಲ್ಲ. ಉತ್ತಮ ಸಂಪರ್ಕದ ವ್ಯವಸ್ಥೆ ಮಾಡುವುದು ಒಳ್ಳೆಯ ವಿಷಯ ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ. ಆದರೆ ಆರೋಗ್ಯ ಮತ್ತು ಶಿಕ್ಷಣದಂತಹ ಅತ್ಯಾವಶ್ಯಕ ಅವಶ್ಯಕತೆಗಳಿಗಿಂತ ಮುಂಚಿತವಾಗಿ ರಸ್ತೆಗಳಿಗೆ ಆದ್ಯತೆ ನೀಡುವುದು ಸರಿಯಲ್ಲ.
ಆರೋಗ್ಯ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡದಿರುವುದು ಬಡವರ ಮೇಲೆ ಅಸಮಾನವಾದ ಪರಿಣಾಮ ಬೀರುವ ದೊಡ್ಡ ಅನ್ಯಾಯವಾಗಿದೆ. ಇದು ಸಾರ್ವಜನಿಕರು ಪಾವತಿಸುವ ತೆರಿಗೆಯಿಂದ ಸಂಗ್ರಹವಾದ ಸರ್ಕಾರದ ಸಂಪನ್ಮೂಲಗಳನ್ನು ಸಮಾನವಾಗಿ ಪಡೆದುಕೊಳ್ಳುವ ಎಲ್ಲಾ ನಾಗರಿಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


